ಬೆಂಗಳೂರು; ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿರುವ ಕೊರೊನಾ ಸೋಂಕಿತರ ಸಂಖ್ಯೆ ಆತಂಕದ ಅಲೆಗಳನ್ನು ಎಬ್ಬಿಸಿವೆ. ರಾಜ್ಯದಲ್ಲಿ ಶನಿವಾರ ದಿನದಂದೇ ಹೊಸದಾಗಿ 16 ಪ್ರಕರಣಗಳು ವರದಿಯಾಗಿವೆ. ಹೀಗೆ ಪ್ರಕರಣಗಳ ಸಂಖ್ಯೆ ಹೆಚ್ಚಳವಾದಂತೆಲ್ಲಾ ಭೀತಿಯಲ್ಲೇ ದಿನದೂಡುತ್ತಿರುವ ಈ ಹೊತ್ತಿನಲ್ಲೂ ಸರ್ಕಾರ ನೇರ ಕಾರ್ಯಾಚರಣೆಗಿಳಿದಿಲ್ಲ.
ಕೋವಿಡ್ 19 ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಲು ದಿನವೊಂದರಲ್ಲಿ ಮೂರ್ನಾಲ್ಕು ಸಭೆಗಳನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ನಡೆಸಿದ್ದಾರೆ. ಇಷ್ಟೊಂದು ಸಭೆಗಳು ನಡೆದ ಮೇಲೂ ಪರಿಣಾಮಕಾರಿಯಾದ ಕೆಲಸಗಳು ಮತ್ತು ಫಲಿತಾಂಶಗಳು ಕಣ್ಣಿಗೆ ಗೋಚರವಾಗದಿರುವುದು ಸರ್ಕಾರದ ಕಾರ್ಯವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ.
ಇನ್ನು, ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ನಿಖರ, ಸಮರ್ಪಕ ಮತ್ತು ಪಾರದರ್ಶಕವಾದ ಮಾಹಿತಿ ಲಭ್ಯವಾಗುತ್ತಿಲ್ಲ ಎಂಬ ಮಾಹಿತಿಯೂ ಹೊರಬಿದ್ದಿದೆ. ಒಂದು ವೇಳೆ ನಿಖರವಾದ ಮಾಹಿತಿ ಲಭ್ಯವಾಗದಿದ್ದಲ್ಲಿ ಯಡಿಯೂರಪ್ಪ ಅವರು ಗಂಭೀರವಾದ ಸಮಸ್ಯೆಯನ್ನು ಎದುರಿಸುವ ಸಾಧ್ಯತೆಗಳಿವೆ.
ಇಷ್ಟೆಲ್ಲ ಬೆಳವಣಿಗೆ ನಡುವೆಯೂ ಸದ್ಯದ ನೈಜ ಪರಿಸ್ಥಿತಿಯನ್ನು ಮುಂದಿಡದ ಸರ್ಕಾರ, ರೋಗ ತಪಾಸಣೆಗೆ ಸಂಬಂಧಿಸಿದಂತೆ ಸಂಖ್ಯೆಗಳನ್ನು ದೇಶದ ಅಂಕಿಅಂಶಗಳಿಗೆ ಸರಾಸರಿಯಲ್ಲಿ ಹೋಲಿಸಿದರೆ ರಾಜ್ಯದಲ್ಲಿ ಇನ್ನಷ್ಟು ಆಘಾತಕಾರಿ ಅಂಶಗಳು ಬೆಳಕಿಗೆ ಬರುತ್ತವೆ.
ಈಗಾಗಲೇ ತಪಾಸಣೆಗೊಳಗಾಗಿರುವ ಶಂಕಿತರ ಸಂಖ್ಯೆ ಮತ್ತು ಸಕಾರಾತ್ಮಕ ಫಲಿತಾಂಶ ಬಂದ ಸಂಖ್ಯೆಗಳನ್ನು ಸರ್ಕಾರ ದಿನದಲ್ಲಿ 2 ಬಾರಿ ಬಿಡುಗಡೆ ಮಾಡುತ್ತಿದೆಯಾದರೂ ಇದು ಪಾರದರ್ಶಕವಾಗಿಲ್ಲ ಎಂಬ ಆರೋಪಗಳು ಕೇಳಿಬಂದಿವೆ. ಒಂದು ವೇಳೆ ಈ ಆರೋಪ ನಿಜವೇ ಆಗಿದ್ದಲ್ಲಿ ಆತಂಕ ಇನ್ನಷ್ಟು ಮಡುಗಟ್ಟಲು ಕಾರಣವಾಗಲಿದೆ.
ಮಾಜಿ ಸಚಿವ ಎಚ್ ಕೆ ಪಾಟೀಲ್ ಅವರು ಈ ಬಗ್ಗೆ ಸರ್ಕಾರಕ್ಕೆ ಹಲವು ಬಾರಿ ಪತ್ರ ಬರೆದು ಗಮನಸೆಳೆಯುತ್ತಲೇ ಬಂದಿದ್ದಾರೆ. ಏಪ್ರಿಲ್ 5ರಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬರೆದಿರುವ ಪತ್ರದಲ್ಲಿ ಹಲವು ಅಂಶಗಳನ್ನು ಹೊರಗೆಡವಿದ್ದಾರೆ. ಆದರೂ ಸರ್ಕಾರ ಮಾತ್ರ ನಿರ್ಲಕ್ಷ್ಯದ ಪರಮಾವಧಿಯಲ್ಲೇ ಇದೆ.
‘ಈ ಅಂಕಿ-ಸಂಖ್ಯೆಗಳು ಪಾರದರ್ಶಕವಾಗಿ ಜನರ ಗಮನಕ್ಕೆ ಆಗಾಗ ತರುತ್ತಿದ್ದರೆ ಜನರನ್ನು ಹೆಚ್ಚು ಜಾಗೃತಗೊಳಿಸಲು ಸಾಧ್ಯವಾಗುತ್ತದೆ. ಸರ್ಕಾರದ ಅಂಕಿಸಂಖ್ಯೆಗಳು ಪಾರದರ್ಶಕವಾಗಿದ್ದು ನೈಜತೆಯನ್ನಷ್ಟೆ ಬಿಂಬಿಸುವಂತಿದ್ದರೆ ಅದರಿಂದ ಜಾಗೃತಿ ಉಂಟಾಗುತ್ತದೆಯೇ ಹೊರತು ಅನಾವಶ್ಯಕ ಭಯ ಉಂಟಾಗುವುದಿಲ್ಲ. ಅಂಕಿಸಂಖ್ಯೆಗಳನ್ನು ಮುಚ್ಚಿಡುವುದರಿಂದ ಸುಳ್ಳು ಸುದ್ದಿಗಳು ಹರಿದಾಡಲು ಸಹಾಯಕವಾಗುತ್ತದೆ,’ ಎಂದು ಎಚ್ ಕೆ ಪಾಟೀಲ್ ಅವರು ಪತ್ರ ಮುಖೇನ ಕಳಕಳಿ ವ್ಯಕ್ತಪಡಿಸಿದ್ದಾರೆ.
ಕೊರೊನಾ ವೈರಸ್ ವಿರುದ್ಧ ರಾಜ್ಯ ಬಿಜೆಪಿ ಸರ್ಕಾರ ಹೋರಾಟ ನಡೆಸುತ್ತಿದೆಯಾದರೂ ನಿರ್ವಹಣೆ ಸಂಬಂಧ ಕೈಗೊಳ್ಳುತ್ತಿರುವ ಯಾವ ಕ್ರಮಗಳೂ ಸಮರ್ಪಕವಾಗಿಲ್ಲ. ಸರ್ಕಾರದ ನಿರ್ಲಕ್ಷ್ಯ ಹೀಗೆಯೇ ಮುಂದುವರೆದಲ್ಲಿ ಸೂಕ್ಷ್ಮ ಮತ್ತು ಗಂಭೀರ ದೂರಗಾಮಿ ಪರಿಣಾಮಗಳು ಉಂಟಾಗಲಿದೆಯೇ ಎಂಬ ಪ್ರಶ್ನೆಗಳು ಎದುರಾಗಿವೆ.
ಕೊರೊನಾ ರಾಜ್ಯಕ್ಕೆ ಕಾಲಿಟ್ಟ ದಿನದಿಂದಲೂ ನಡೆಯುತ್ತಿರುವ ರೋಗ ತಪಾಸಣೆಯು ಅತ್ಯಂತ ನಿರ್ಲಕ್ಷ್ಯದಿಂದ ಮತ್ತು ಅಸಮರ್ಪಕವಾಗಿ ನಡೆಯುತ್ತಿದೆ ಎಂಬ ಅರೋಪ ಈಗಲೂ ಕೇಳಿ ಬಂದಿವೆ. ರೋಗ ತಪಾಸಣೆ ಈ ಹಂತದಲ್ಲಿ ಬಹಳ ಪ್ರಮುಖವಾಗಿದ್ದರೂ ಸರ್ಕಾರ ನಿರ್ಲಕ್ಷ್ಯದ ಪರಮಾವಧಿಗೆ ತಲುಪಿದೆ.
‘ಭಾರತದಲ್ಲಿ ಈವರೆವಿಗೆ ಪ್ರತಿ ದಶಲಕ್ಷ ಜನಸಂಖ್ಯೆಗೆ ಕೇವಲ 51 ಜನರನ್ನು ಮಾತ್ರ ತಪಾಸಣೆಗೊಳಪಡಿಸಲಾಗಿದೆ. ಕರ್ನಾಟಕದ ಸರಾಸರಿ ಲೆಕ್ಕ ಹಾಕಿದರೆ ಆಘಾತಕಾರಿ ಅಂಶಗಳು ಬೆಳಕಿಗೆ ಬರುತ್ತವೆ. ನಮ್ಮ ರಾಜ್ಯದಲ್ಲಿ ಪ್ರತಿ ದಶಲಕ್ಷ ಜನಸಂಖ್ಯೆಗೆ 75 ಜನರನ್ನು ಮಾತ್ರ ತಪಾಸಣೆಗೊಳಪಡಿಸಲಾಗಿದೆ. ಇಂತಹ ಅಪಾಯದ ಅಂಚಿನಲ್ಲಿದ್ದಾಗಲೂ ತಪಾಸಣೆಗಳ್ನು ಕೈಗೊಳ್ಳಲು ಹಿಂದೇಟು ಹಾಕುವುದೇಕೆ, ತಪಾಸಣೆಗಳನ್ನು ಕೈಗೊಳ್ಳಲು ಏನು ತೊಂದರೆ,’ ಎಂದು ಪತ್ರದಲ್ಲಿ ಎಚ್ ಕೆ ಪಾಟೀಲ್ ಅವರು ಪ್ರಶ್ನಿಸಿದ್ದಾರೆ.
ಕೋವಿಡ್-19 ಹರಡುವಿಕೆಯನ್ನು ತಡೆಗಟ್ಟಲು 200 ಕೋಟಿ ರೂಪಾಯಿಗಳನ್ನು ತೆಗೆದಿರಿಸಿದೆ ಎಂದು ಸರ್ಕಾರದ ಪರವಾಗಿ ವಿಧಾನಸಭೆಯಲ್ಲಿ ಯಡಿಯೂರಪ್ಪ ಅವರು ಭರವಸೆ ನೀಡಿದ್ದರು. ಆದರೆ ಈ ಹಣದಲ್ಲಿ ಈವರೆವಿಗೂ ಎಷ್ಟು ಬಿಡುಗಡೆಯಾಗಿದೆ, ಯಾವ ಕೆಲಸಕ್ಕಾಗಿ ಯಾವ ಹಂತದ ಅಧಿಕಾರಿಗಳಿಗೆ ಬಿಡುಗಡೆಯಾಗಿದೆ ಎಂಬ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ಇಲ್ಲ ಎಂಬ ಸಂಗತಿ ಗೊತ್ತಾಗಿದೆ.
‘ವೈದ್ಯರಿಗೆ ಮತ್ತು ವೈದ್ಯಕೀಯ, ಆರೋಗ್ಯ ಕಾರ್ಯಕರ್ತರ ಸ್ವಯಂ ರಕ್ಷಣೆಗೆ ಕಿಟ್‍ಗಳನ್ನು ನೀಡಲು ಈ ಹಣ ಸಾಕಾಗುವುದಿಲ್ಲವೇ ಅಥವಾ ಈ ಹಣದಲ್ಲಿ ಆ ಕಿಟ್‍ಗಳನ್ನು ಖರೀದಿಸಲು ಕಾರ್ಯಾದೇಶಗಳನ್ನು ನೀಡಿಲ್ಲವೇ ಎಂಬ ಬಗ್ಗೆ ದಯವಿಟ್ಟು ನನಗೆ ಪತ್ರ ಮುಖೇನ ಮಾಹಿತಿ ನೀಡಿ. ರಕ್ಷಣಾತ್ಮಕ ಕವಚಗಳನ್ನು ಹೊಂದಿಲ್ಲದ ವೈದ್ಯಕೀಯ ಸಿಬ್ಬಂದಿಯ ಜೀವ ರಕ್ಷಣೆ ಯಾರ ಹೊಣೆ,’ ಎಂದು ಪತ್ರದಲ್ಲಿ ಎಚ್ ಕೆ ಪಾಟೀಲ್ ಅವರು ಪ್ರಶ್ನಿಸಿದ್ದಾರೆ.
ಸದ್ಯಕ್ಕೆ ಲಭ್ಯವಿರುವ ಮಾಹಿತಿ ಪ್ರಕಾರ ಯಾವುದೇ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿ ಸ್ವಯಂ ರಕ್ಷಣೆ ಉಪಕರಣ (PPE)ದ ಕಿಟ್‍ಗಳನ್ನು ಈವರೆವಿಗೂ ಒದಗಿಸಿಲ್ಲ. ಬೆಂಗಳೂರಿನ ಕೆಲವು ಆಸ್ಪತ್ರೆಗಳಲ್ಲಿ ಲಭ್ಯವಿದೆ ಎಂದು ಹೇಳಲಾಗಿರುವ ಈ ಕಿಟ್‍ಗಳು ಹೆಚ್.ಐ.ವಿ ಕಿಟ್‍ಗಳೆಂದು ಮತ್ತು ಈ ಕಿಟ್‍ಗಳು ಕೋವಿಡ್-19ರ ಚಿಕಿತ್ಸೆಗೆ ಸೂಕ್ತವಾಗಿಲ್ಲ ಎಂಬ ಮಾಹಿತಿಯೂ ಹೊರಬಿದ್ದಿದೆ.
‘ಸರ್ಕಾರ ಸದನದಲ್ಲಿ ಉತ್ತರ ಕೊಡುವಾಗ 3T(Test, Trace, Treat) ಗಳ ಆಧಾರದ ಮೇಲೆ ಕೆಲಸ ಮಾಡುತ್ತಿದೆ ಎಂದು ಘೋಷಣೆ ಮಾಡಲಾಯಿತು. ಈ ಮೂರು 3T ಗಳು ಇಲ್ಲಿಯವರೆಗೆ ಅಗತ್ಯವಿದ್ದಷ್ಟು, ಸಮರ್ಪಕವಾಗಿ ಅನುಷ್ಠಾನವೇ ಆಗಲಿಲ್ಲ. ಟೆಸ್ಟ್‍ಗಳಂತೂ ನಿರೀಕ್ಷಿತ ಪ್ರಮಾಣದಲ್ಲಿ ನಡೆಯುತ್ತಿಲ್ಲ. ಇದರಿಂದಾಗಿ ಸಮರ್ಪಕವಾಗಿ ಟ್ರೇಸ್ ಆಗುತ್ತಿಲ್ಲ. ಟೆಸ್ಟ್ ಮತ್ತು ಟ್ರೇಸ್ ಇಲ್ಲದೆ ಟ್ರೀಟ್‍ಮೆಂಟ್ ಪ್ರಶ್ನೆಯೇ ಇಲ್ಲ,’ ಎಂದು ಎಚ್ ಕೆ ಪಾಟೀಲ್ ಅವರು ಪತ್ರದಲ್ಲಿ ಸರ್ಕಾರವನ್ನು ತಿವಿದಿದ್ದಾರೆ.
ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆಯ ಅಧಿಕೃತ ವೆಬ್‌ಸೈಟ್ ಪ್ರಕಾರ 32,647 ಮಂದಿಯನ್ನು ಈವರೆವಿಗೆ ಅವಲೋಕನದಲ್ಲಿರಿಸಲಾಗಿದೆ. 5,016 ಸಂಖ್ಯೆಯಲ್ಲಿ ತಪಾಸಣೆಗೆ ಮಾದರಿ ಸಂಗ್ರಹಿಸಿದೆ. 4,566 ಋಣಾತ್ಮಕ ಎಂಬ ವರದಿ ಬಂದಿದ್ದರೆ 25,092 ಮಂದಿಯನ್ನು ಹೋಮ್ ಕ್ವಾರಂಟೈನ್‌ನಲ್ಲಿಡಲಾಗಿದೆ.