ಅರಣ್ಯ ಭಗ್ನ; ಗಣಿ ಕಂಪನಿಗಳಿಗೆ 1,421 ಹೆಕ್ಟೇರ್ ವಿಸ್ತೀರ್ಣ ಅರಣ್ಯ ಪ್ರದೇಶ ಮಂಜೂರು

ಬೆಂಗಳೂರು; ಗಣಿಗಾರಿಕೆ ಸೇರಿದಂತೆ ಅರಣ್ಯೇತರ ಇನ್ನಿತರೆ ಉದ್ದೇಶಗಳಿಗಾಗಿ ಅರಣ್ಯ ಜಮೀನನ್ನು ಹಂಚಿಕೆ ಮಾಡುತ್ತಿರುವ ಪ್ರಕರಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ. ಹಿಂದಿನ ಕಾಂಗ್ರೆಸ್ ಸರ್ಕಾರ ಮತ್ತು ಮೈತ್ರಿ ಸರ್ಕಾರದ ಅವಧಿಯಲ್ಲಿ ಅಂದರೆ 2016-17ರಿಂದ 2018-19ರವರೆಗೆ ರಾಜ್ಯದಲ್ಲಿ ಅರಣ್ಯೇತರ ಉದ್ದೇಶಗಳಿಗಾಗಿ ಒಟ್ಟು 1,421 ಹೆಕ್ಟೇರ್ ಅರಣ್ಯ ಭೂಮಿ ಹಂಚಿಕೆಯಾಗಿದೆ. 

ಅದರಲ್ಲೂ ತುಂಬಾ ಪ್ರಮುಖವಾಗಿ ಬಳ್ಳಾರಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ಎಂದರೆ 21 ಪ್ರಕರಣಗಳಲ್ಲಿ 701 ಹೆಕ್ಟೇರ್ ವಿಸ್ತೀರ್ಣದ ಅರಣ್ಯ ಪ್ರದೇಶವನ್ನು ಗಣಿ ಕಂಪನಿಗಳಿಗೆ ಬಿಡುಗಡೆ ಮಾಡಿರುವುದು ದಾಖಲೆಯಿಂದ ತಿಳಿದು ಬಂದಿದೆ.

ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ಇಎಸ್‍ಜೆಡ್ ವ್ಯಾಪ್ತಿಯನ್ನು ಕಡಿತಗೊಳಿಸಿದ್ದ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದಿದ್ದ ಸಿದ್ದರಾಮಯ್ಯ ಅವರು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನದ ರಕ್ಷಣೆಗಿಂತ ಗಣಿ ಮತ್ತು ರಿಯಲ್ ಎಸ್ಟೇಟ್ ಲಾಬಿಗಳ ಹಿತರಕ್ಷಣೆಯೇ ತಮಗೆ ಮುಖ್ಯವಾಯಿತೇ ಎಂದು ಯಡಿಯೂರಪ್ಪ ಅವರನ್ನು ತರಾಟೆಗೆ ತೆಗೆದುಕೊಂಡ 3 ದಿನಗಳ ಅಂತರದಲ್ಲೇ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲೆ ಅರಣ್ಯೇತರ ಉದ್ದೇಶಗಳಿಗಾಗಿ ಬಿಡುಗಡೆಯಾಗಿದ್ದ 1,421 ಹೆಕ್ಟೇರ್ ಅರಣ್ಯ ಪ್ರದೇಶದ ಪೈಕಿ 701 ಹೆಕ್ಟೇರ್ ಅರಣ್ಯ ಪ್ರದೇಶ ಗಣಿ ಕಂಪನಿಗಳ ಪರವಾಗಿ ಬಿಡುಗಡೆಂಯಾಗಿರುವುದು ಮುನ್ನೆಲೆಗೆ ಬಂದಿವೆ.

ಬಳ್ಳಾರಿ ಜಿಲ್ಲೆಯಲ್ಲಿ ಗಣಿ ಕಂಪನಿಗಳಿಗೆ ಅರಣ್ಯ ಭೂಮಿ ಬಿಡುಗಡೆಯಾಗಿರುವ ಪೈಕಿ ಕಾರಿಗನೂರು ಮಿನರಲ್ಸ್ ಪ್ರೈವೈಟ್ ಲಿಮಿಟೆಡ್‍ಗೆ 114.84 ಹೆಕ್ಟೇರ್, ಜೆಎಸ್‍ಡಬ್ಲ್ಯೂ ಗೆ 100.54 ಹೆಕ್ಟೇರ್‌ಗೆ ಮಂಜೂರಾಗಿದೆ. ಚಿತ್ರದುರ್ಗದಲ್ಲಿ ಮಿನರಲ್ಸ್ ಎಂಟರ್‌ಪ್ರೈಸೆಸ್‌  ಪರವಾಗಿ 103.73 ಹೆಕ್ಟೇರ್ ವಿಸ್ತೀರ್ಣದ ಅರಣ್ಯ ಪ್ರದೇಶ ಬಿಡುಗಡೆಯಾಗಿರುವುದು ದಾಖಲೆಯಿಂದ ಗೊತ್ತಾಗಿದೆ.

ಸಂಡೂರು ಬ್ಲಾಕ್‍ನಲ್ಲಿ ಶ್ರೀ ಕುಮಾರಸ್ವಾಮಿ ಮಿನರಲ್ಸ್ ಎಕ್ಸ್‌ಪೋರ್ಟ್‌ 60.56 ಹೆಕ್ಟೇರ್, ಗಣಿ ಗುತ್ತಿಗೆದಾರ ಹನುಮಂತರಾವ್ ಅವರಿಗೆ 23.07 ಹೆಕ್ಟೇರ್, ಅಶ್ವಥ್‍ನಾರಾಯಣ್‍ಸಿಂಗ್ ಅಂಡ್ ಕಂಪನಿಗೆ 56.5 ಹೆಕ್ಟೇರ್, ವೆಂಗಣ್ಣ ಸೆಟ್ಟಿ ಅಂಡ್ ಬ್ರದರ್ಸ್‍ಗೆ 49.31 ಹೆಕ್ಟೇರ್, ಜೀನತ್ ಟ್ರಾನ್ಸ್‌ಪೋರ್ಟ್‍ಗೆ 36.42 ಹೆಕ್ಟೇರ್, ಬಳ್ಳಾರಿಯ ಗವಿಸಿದ್ದೇಶ್ವರ ಎಂಟರ್‌ಪ್ರೈಸೆಸ್‌   5.66 ಹೆಕ್ಟೇರ್, ವಿಭೂತಿ ಗುಡ್ಡ ಮೈನ್ಸ್ ಗೆ 55 ಹೆಕ್ಟೇರ್, ಬಾಲಸುಬ್ಬಶೆಟ್ಟಿ ಅಂಡ್ ಸನ್ ಕಂಪನಿಗೆ 3.14 ಹೆಕ್ಟೇರ್, ಕುಮಾರಸ್ವಾಮಿ ಮಿನರಲ್ಸ್ ಎಕ್ಸ್‌ಪೋರ್ಟ್‌ 60.56 ಹೆಕ್ಟೇರ್, ಜೀನತ್ ಟ್ರಾನ್ಸ್‌ಪೋರ್ಟ್‌ಗೆ 5.4 ರಾಮಗಢ ಮಿನರಲ್ಸ್ ಅಂಡ್ ಮೈನಿಂಗ್ ಲಿಮಿಟೆಡ್‍ಗೆ 9.82 ಹೆಕ್ಟೇರ್, ಗೊಗ್ಗ ಗುರುಶಾಂತಯ್ಯ ಅಂಡ್ ಬ್ರದರ್ಸ್‍ಗೆ 42.9 ಹೆಕ್ಟೇರ್, ಹನುಮಂತರಾವ್ ಅಂಡ್ ಸನ್ಸ್‌ಗೆ  1.135, ಎಸ್ ವಿ ಶ್ರೀನಿವಾಸಲು ಅವರಿಗೆ 60 ಹೆಕ್ಟೇರ್, ಬಾಲಾಜಿ ಮೈನ್ಸ್ ಅಂಡ್ ಮಿನರಲ್ಸ್‌ಗೆ  22.66 ಹೆಕ್ಟೇರ್ ವಿಸ್ತೀರ್ಣದ ಅರಣ್ಯ ಪ್ರದೇಶ ಬಿಡುಗಡೆಯಾಗಿದೆ.

2016-17ರಲ್ಲಿ 29 ಪ್ರಕರಣಗಳಲ್ಲಿ 412.84 ಹೆಕ್ಟೇರ್, 2017-18ರಲ್ಲಿ 26 ಪ್ರಕರಣಗಳಲ್ಲಿ 739.49, 2018-19ರಲ್ಲಿ 10 ಪ್ರಕರಣಗಳಲ್ಲಿ 268.65 ಹೆಕ್ಟೇರ್ ಅರಣ್ಯ ಪ್ರದೇಶ ಅರಣ್ಯೇತರ ಉದ್ದೇಶಗಳಿಗೆ ಬಿಡುಗಡೆಯಾಗಿದೆ.

ಇನ್ನು, ಉತ್ತರ ಕನ್ನಡ ಜಿಲ್ಲೆಯ ಶಿರಸಿಯಲ್ಲಿ ಸಹ್ಯಾದ್ರಿ ಪೇಪರ್ಸ್‍ಗೆ 2 ಹೆಕ್ಟೇರ್, ಕಾರವಾರ ಅರಣ್ಯ ವಿಭಾಗದಲ್ಲಿ ಆದಿತ್ಯ ಬಿರ್ಲಾ ಕೆಮಿಕಲ್ಸ್‌ಗೆ  26.71 ಹೆಕ್ಟೇರ್, ಮುಂಬೈನ ಮಾಡ್ರನ್ ರೋಡ್ ಮೇಕರ್ಸ್ ಪ್ರೈವೈಟ್ ಲಿಮಿಟೆಡ್‍ಗೆ 0.28 ಹೆಕ್ಟೇರ್, ಹಳಿಯಾಳ ತಾಲೂಕಿನ ಕೇರವಾಡದಲ್ಲಿ ಶ್ರೇಯಸ್ ಮಿಲ್ಸ್ ಪರವಾಗಿ 0.08 ಹೆಕ್ಟೇರ್ ಅರಣ್ಯ ಪ್ರದೇಶ ಬಿಡುಗಡೆಯಾಗಿದೆ.

ದಾವಣಗೆರೆಯ ಹರಪನಹಳ್ಳಿ ಕಾಡತ್ತಿ ಗ್ರಾಮದಲ್ಲಿ ಹೊಸಪೇಟೆಯ ಯೆಮಿಹತ್ತ ಮೈನಿಂಗ್ ಕಂಪನಿ ಪರವಾಗಿ 14.8 ಹೆಕ್ಟೇರ್, ಚಿತ್ರದುರ್ಗದ ನೀರ್ಥಡಿ ಅರಣ್ಯ ಪ್ರದೇಶದಲ್ಲಿ ಗಣಿ ಗುತ್ತಿಗೆದಾರ ಆರ್ ಪ್ರವೀಣ್ ಚಂದ್ರ ಕಂಪನಿಗೆ 42.13 ಹೆಕ್ಟೇರ್, ದಕ್ಷಿಣ ಕನ್ನಡ ಬೆಳ್ತಂಗಡಿ ಅರಣ್ಯ ವಿಭಾಗದಲ್ಲಿ ಎಸ್‍ಎಲ್‍ವಿ ಪವರ್ ಪ್ರೈವೈಟ್ ಲಿಮಿಟೆಡ್‍ಗೆ 1,53 ಹೆಕ್ಟೇರ್ ಅರಣ್ಯ ಪ್ರದೇಶ ಮಂಜೂರಾಗಿರುವುದು ದಾಖಲೆಯಿಂದ ಗೊತ್ತಾಗಿದೆ.

ಅರಣ್ಯ ಸಂರಕ್ಷಣಾ ಕಾಯ್ದೆ 1980ರ ಅಡಿಯಲ್ಲಿ ಇಲ್ಲಿಯವರೆಗೆ 9,490 ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ಹಾಗೂ ಸಂಬಂಧಿತ ಉದ್ದೇಶಕ್ಕಾಗಿ ಅನುಮೋದನೆ ನೀಡಿರುವ ರಾಜ್ಯ ಸರ್ಕಾರ, ಈ ಪೈಕಿ 5,390 ಹೆಕ್ಟೇರ್ ವಿಸ್ತೀರ್ಣ ಅರಣ್ಯ ಪ್ರದೇಶವಿದೆ. ಬಳ್ಳಾರಿಯಲ್ಲಿ 4,812 ಹೆಕ್ಟೇರ್, ಬಾಗಲಕೋಟೆಯಲ್ಲಿ 69.53, ಚಿತ್ರದುರ್ಗದಲ್ಲಿ 40.12, ಶಿವಮೊಗ್ಗದಲ್ಲಿ 14.8, ದಾವಣಗೆರೆಯಲ್ಲಿ 14.38, ತುಮಕೂರಿನಲ್ಲಿ 19.38 ಹೆಕ್ಟೇರ್ ವಿಸ್ತೀರ್ಣ ಅರಣ್ಯ ಪ್ರದೇಶ ಗಣಿಗಾರಿಕೆಗೆ ನೀಡಲು ಸಿದ್ಧತೆ ನಡೆಸಿದೆ.

ಅದೇ ರೀತಿ ಅರಣ್ಯ ಸಂರಕ್ಷಣಾ ಕಾಯ್ದೆ 1980ರ ಅಡಿಯಲ್ಲಿ ಗಣಿಗಾರಿಕೆ ಹಾಗೂ ಸಂಬಂಧಿತ ಉದ್ದೇಶಕ್ಕಾಗಿ ಒಟ್ಟು 89 ಅರ್ಜಿಗಳು ಅನುಮೋದನೆಗಾಗಿ ಸರ್ಕಾರದ ಮುಂದಿದೆ. ಬಳ್ಳಾರಿಯೊಂದರಲ್ಲೇ 2587.88 ಹೆಕ್ಟೇರ್ ಅರಣ್ಯ ಪ್ರದೇಶವನ್ನು ಗಣಿಗಾರಿಕೆ ಉದ್ದೇಶಕ್ಕೆ ಬಳಸಿಕೊಳ್ಳಲು ಒಟ್ಟು 64 ಅರ್ಜಿಗಳು ಸಲ್ಲಿಕೆಯಾಗಿವೆ. 

the fil favicon

SUPPORT THE FILE

Latest News

Related Posts