ಬೆಂಗಳೂರು; ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸೂಪರ್ ಸ್ಪೆಷಾಲಿಟಿ ವೈದ್ಯರುಗಳ ವಯೋ ನಿವೃತ್ತಿಯನ್ನು 60ರಿಂದ 65ಕ್ಕೆ ಹೆಚ್ಚಿಸಲು ಆರ್ಥಿಕ ಇಲಾಖೆಯು ಸುತರಾಂ ಒಪ್ಪಿಲ್ಲ. ಅಲ್ಲದೇ ಇದು ಆರ್ಥಿಕ ಪರಿಣಾಮಗಳಿಗೆ ದಾರಿ ಮಾಡಿಕೊಡುತ್ತದೆ, ಇಂತಹ ಪ್ರಸ್ತಾವನೆಯನ್ನು ಮುಂದುವರೆಸಬಾರದು ಎಂದು ಕಟ್ಟುನಿಟ್ಟಾಗಿ ಅಭಿಪ್ರಾಯಿಸಿದ್ದರೂ ಸಹ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಸ್ತಾವನೆಯನ್ನು ಸಚಿವ ಸಂಪುಟವು ಅನುಮೋದಿಸಿದೆ.
ಅನುಭವಿ ವೃತ್ತಿಪರರನ್ನು ಉಳಿಸಿಕೊಳ್ಳಲು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ವೈದ್ಯರ ನಿವೃತ್ತಿ ವಯಸ್ಸನ್ನು 60ರಿಂದ 65ಕ್ಕೆ ಹೆಚ್ಚಿಸಲು ಚಿಂತನೆ ನಡೆಸಿದೆ ಎಂದು ಸಚಿವ ಡಾ ಶರಣ ಪ್ರಕಾಶ್ ಪಾಟೀಲ್ ಅವರು ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಇದೇ ಪ್ರಸ್ತಾವಕ್ಕೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆಯು ಬಲವಾಗಿ ಆಕ್ಷೇಪಿಸಿತ್ತು. ಆದರೂ ಸಚಿವ ಸಂಪುಟವು ಈ ಪ್ರಸ್ತಾವನೆಗೆ ಒಪ್ಪಿಗೆ ನೀಡಿರುವುದು, ಮುಂದಿನ ದಿನಗಳಲ್ಲಿ ಆರ್ಥಿಕ ಪರಿಣಾಮಗಳಿಗೆ ಕಾರಣವಾಗಲಿದೆ.
ವೈದ್ಯರ ನಿವೃತ್ತಿ ವಯಸ್ಸು ಹೆಚ್ಚಳಕ್ಕೆ ಸಂಬಂಧಿಸಿದಂತೆ ವೈದ್ಯಕೀಯ ಶಿಕ್ಷಣ ಇಲಾಖೆಯು ಸಚಿವ ಸಂಪುಟಕ್ಕೆ ಮಂಡಿಸಿರುವ ಗೌಪ್ಯ ಟಿಪ್ಪಣಿಯ (ಕಡತ ಸಂಖ್ಯೆ; ಎಂಇಡಿ 61 ಆರ್‍ಜಿಯು 2025) ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ವೈದ್ಯಕೀಯ ಶಿಕ್ಷಣ ಇಲಾಖೆಯ ಅಧೀನದಲ್ಲಿ ಒಟ್ಟು 22 ಸ್ವಾಯತ್ತ ವೈದ್ಯಕೀಯ ಕಾಲೇಜುಗಳಿವೆ. ಅಲ್ಲದೇ 10 ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳು ಕಾರ್ಯನಿರ್ವಹಿಸುತ್ತಿವೆ. ಈ ಸಂಸ್ಥೆಗಳಲ್ಲಿ ಒಟ್ಟಾರೆ 508 ಸೂಪರ್ ಸ್ಪೆಷಾಲಿಟಿ ಹುದ್ದೆಗಳು ಮಂಜೂರಾಗಿವೆ. ಮಂಜೂರಾದ ಹುದ್ದೆಗಳಲ್ಲಿ 232 ಖಾಯಂ ಸೂಪರ್ ಸ್ಪೆಷಾಲಿಟಿ ವೈದ್ಯರುಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಇನ್ನೂ 276 ಸೂಪರ್ ಸ್ಪೆಷಾಲಿಟಿ ವೈದ್ಯರ ಹುದ್ದೆಗಳು ಖಾಲಿ ಇರುವುದು ಗೌಪ್ಯ ಟಿಪ್ಪಣಿಯಿಂದ ತಿಳಿದು ಬಂದಿದೆ.
ರಾಜ್ಯ ಸರ್ಕಾರದ ನೀತಿಯಂತೆ ಸೂಪರ್ ಸ್ಪೆಷಾಲಿಟಿ ವೈದ್ಯರುಗಳ ನಿವೃತ್ತಿ ವಯಸ್ಸನ್ನು 60 ವರ್ಷಕ್ಕೆ ನಿಗದಿಪಡಿಸಿದೆ. ಆದರೆ ರಾಜ್ಯದಲ್ಲಿ ಸೂಪರ್ ಸ್ಪೆಷಾಲಿಟಿ ವೈದ್ಯರುಗಳ ಕೊರತೆ ಇರುವ ಕಾರಣ ವೈದ್ಯಕೀಯ ವಿದ್ಯಾರ್ಥಿಗಳ ಬೋಧನೆ ಹಾಗೂ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ತೊಂದರೆಯಾಗುತ್ತಿದೆ. ಹೀಗಾಗಿ ಸೂಪರ್ ಸ್ಪೆಷಾಲಿಟಿ ವೈದ್ಯರುಗಳ ವಯೋ ನಿವೃತ್ತಿ ವಯಸ್ಸನ್ನು 60ರಿಂದ 65ಕ್ಕೆ ಹೆಚ್ಚಿಸಲು ಪ್ರಸ್ತಾವಿಸಿರುವುದು ಗೊತ್ತಾಗಿದೆ.
ಆರ್ಥಿಕ ಪರಿಣಾಮಗಳೇನು?
ವೈದ್ಯಕೀಯ ಶಿಕ್ಷಣ ಇಲಾಖೆಯ ಅಧೀನದಲ್ಲಿನ ಸ್ವಾಯತ್ತ ಸಂಸ್ಥೆಗಳಲ್ಲಿ ಮಂಜೂರಾಗಿರುವ ಹುದ್ದೆಗಳ ಪೈಕಿ 232 ಖಾಯಂ ಸೂಪರ್ ಸ್ಪೆಷಾಲಿಟಿ ವೈದ್ಯರುಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಸಕ್ತ ಸಾಲಿನಲ್ಲಿ 34 ವೈದ್ಯರುಗಳು 60 ವರ್ಷ ವಯಸ್ಸನ್ನು ಪೂರ್ಣಗೊಳಿಸಲಿದ್ದಾರೆ. ಈ ವೈದ್ಯರುಗಳಿಗೆ ಪ್ರಸ್ತುತ ಎಐಸಿಟಿಯು ವೇತನ ನೀಡಲಾಗುತ್ತಿದೆ. ಒಂದೊಮ್ಮೆ ನಿವೃತ್ತಿ ವಯಸ್ಸನ್ನು ಮುಂದುವರೆಸಿದ್ದೇ ಆದಲ್ಲಿ ಇವರು ವಯೋ ನಿವೃತ್ತಿ ಹೊಂದುವವರೆಗೂ ಈ ವೇತನ ಶ್ರೇಣಿ ಮುಂದುವರೆಸಬೇಕಾಗುತ್ತದೆ ಎಂದು ಇಲಾಖೆಯು ವಿವರಿಸಿರುವುದು ತಿಳಿದು ಬಂದಿದೆ.
ವೈದ್ಯಕೀಯ ಶಿಕ್ಷಣ ಇಲಾಖೆಯ ಈ ಪ್ರಸ್ತಾವನೆಗೆ ಆರ್ಥಿಕ ಇಲಾಖೆಯು ಬಲವಾಗಿ ಆಕ್ಷೇಪಿಸಿದೆ. ಅಲ್ಲದೇ ಇಂತಹ ಪ್ರಸ್ತಾವನೆಯನ್ನು ಮುಂದುವರೆಸಬಾರದು, ಇದರಿಂದ ಅರ್ಥಿಕ ಪರಿಣಾಮಗಳು ಬೀರಲಿವೆ ಎಂದು ಎಚ್ಚರಿಸಿರುವುದು ಗೊತ್ತಾಗಿದೆ.
ಪ್ರಸ್ತಾವನೆ ಒಪ್ಪದ ಆರ್ಥಿಕ ಇಲಾಖೆಯ ಆಕ್ಷೇಪಗಳೇನು?
ಪ್ರಸ್ತಾವನೆಯನ್ನು ಪರಿಶೀಲಿಸಲಾಗಿದೆ. ಆಡಳಿತ ಇಲಾಖೆಯು ಪ್ರಸ್ತಾವಿತ ತಾರ್ಕಿಕತೆಯೊಂದಿಗೆ ಅದನ್ನು ಸಮರ್ಥಿಸಿಕೊಳ್ಳುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಮತ್ತು ಇದೇ ರೀತಿಯ ಸ್ಥಾನದಲ್ಲಿರುವ ಇತರ ಸಂಸ್ಥೆಗಳು ಮತ್ತು ಸರ್ಕಾರದ ಮೇಲೆ ಬೀರುವ ಪರಿಣಾಮಗಳನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದು ಹೇಳಿರುವುದು ತಿಳಿದು ಬಂದಿದೆ.
ಅಲ್ಲದೇ ಇಂತಹ ಪ್ರಮುಖ ನೀತಿ ಬದಲಾವಣೆಯು ಸರ್ಕಾರದಲ್ಲಿ ಪ್ರತಿಕೂಲಗಳಾಗಲಿವೆ. ಪ್ರಮುಖ ಆರ್ಥಿಕ ಪರಿಣಾಮಗಳಿಗೆ ಕಾರಣವಾಗುತ್ತದೆ. ಎರಡನೇ ಹಂತದ ಆಡಳಿತಾತ್ಮಕ, ಮಾನವ ಸಂಪನ್ಮೂಲ ನಿರ್ವಹಣೆ ಮತ್ತು ಕಾನೂನು ಸವಾಲುಗಳಿಗೆ ಕಾರಣವಾಗಲಿದೆ. ಮತ್ತು ಸಿಬ್ಬಂದಿ, ಆಡಳಿತ ಸುಧಾರಣೆ ಇಲಾಖೆಯ ಅಭಿಪ್ರಾಯವನ್ನೂ ತೆಗೆದುಕೊಳ್ಳಲಾಗಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿರುವುದು ಗೊತ್ತಾಗಿದೆ.
ಲಭ್ಯವಿರುವ ಫೀಡರ್ ಕೇಡರ್‌ಗಳ ಆಧಾರದ ಮೇಲೆ ಉದ್ಭವಿಸುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಆಡಳಿತ ವ್ಯವಸ್ಥೆಯಲ್ಲಿ ಸಾಕಷ್ಟು ಸಿಬ್ಬಂದಿ ಲಭ್ಯವಿದೆ. ಆದರೂ ಪ್ರಸ್ತಾವಿತ ನಿವೃತ್ತಿ ವಯಸ್ಸನ್ನು ಹೆಚ್ಚಿಸುವ ಅಗತ್ಯವನ್ನು ಇದು ವಾಸ್ತವಿಕವಾಗಿ ತೆಗೆದುಹಾಕಲಿದೆ ಎಂದೂ ಹೇಳಿದೆ.
ಕೆಳ ವೃಂದಗಳಲ್ಲಿ ಹೆಚ್ಚುವರಿ ಹುದ್ದೆಗಳ ಸೃಷ್ಟಿಯಾಗಲಿದೆ ಮತ್ತು ಪ್ರಮುಖ ಆರ್ಥಿಕ ಪರಿಣಾಮಗಳನ್ನು ಪರಿಗಣಿಸಬೇಕಾಗುತ್ತದೆ. ಮತ್ತೊಂದು ಅಂಶವೆಂದರೆ ಸೂಪರ್ ಸ್ಪೆಷಾಲಿಟಿ ಅಲ್ಲದ ಸಂಸ್ಥೆಗಳಲ್ಲಿ ಇದೇ ರೀತಿಯ ಬೇಡಿಕೆಗಳು ಪ್ರಾರಂಭವಾಗುತ್ತವೆ. ನಿಜವಾದ ಕೊರತೆ ಇದ್ದಲ್ಲಿ ಮತ್ತು ಬೇರೆ ಯಾವುದೇ ಮಾರ್ಗವಿಲ್ಲದಿದ್ದರೆ ಇದನ್ನು ಪರಿಗಣಿಸಬಹುದು ಎಂದು ವಿವರಿಸಿರುವುದು ಗೊತ್ತಾಗಿದೆ.
ಪ್ರಕರಣದಿಂದ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಮರ್ಥನೀಯವಾಗಿದ್ದರೆ ಮತ್ತು ಇಂತಹ ಹುದ್ದೆಗಳನ್ನು ಒಪ್ಪಂದದ ಮೇಲೆ ಭರ್ತಿ ಮಾಡಬಹುದು. ಇದು ಸಮರ್ಥನೀಯ ಸಂದರ್ಭಗಳಲ್ಲಿನ ನಿಬಂಧನೆಯಂತೆ ಆಡಳಿತ ಇಲಾಖೆಗಳ ಅವಶ್ಯಕತೆಗಳನ್ನು ಸಹ ಪರಿಹರಿಸುತ್ತದೆ. ಹೀಗಾಗಿ ಅರ್ಹವಲ್ಲದ ಪ್ರಸ್ತಾವನೆಯನ್ನು ಮುಂದುವರಿಸಬಾರದು ಎಂದು ಆಡಳಿತ ಇಲಾಖೆಗೆ ಹಣಕಾಸು ಇಲಾಖೆಯು ಬಲವಾಗಿ ಸಲಹೆ ನೀಡಿದೆ.
ಹಾಗೆಯೆ ಹಣಕಾಸು ಇಲಾಖೆಯು ಇದಕ್ಕೆ ಸ್ಪಷ್ಟವಾಗಿ ಸಮ್ಮತಿಸುವುದಿಲ್ಲ ಎಂದು ಕಟ್ಟುನಿಟ್ಟಾಗಿ ಹೇಳಿರುವುದು ಸಚಿವ ಸಂಪುಟದ ಗೌಪ್ಯ ಟಿಪ್ಪಣಿಯಿಂದ ತಿಳಿದು ಬಂದಿದೆ.