ಬೆಂಗಳೂರು; ಅರಣ್ಯದ ಅಂಚಿನಲ್ಲಿ ವಾಸಿಸುವ ಜೇನು ಕುರುಬ, ಮಲೆಕುಡಿಯ ಸೇರಿದಂತೆ ಇನ್ನಿತರೆ 13 ಬುಡಕಟ್ಟು ಜನಾಂಗದವರಿಗೆ ವಿಶೇಷ ನೇಮಕಾತಿ ನಿಯಮಗಳನ್ನು ರಚಿಸಲು ಮುಂದಾಗಿರುವ ಸಂಸದೀಯ ವ್ಯವಹಾರಗಳು, ಶಾಸನ ರಚನೆ ಇಲಾಖೆಯು ಈ ಸಂಬಂಧ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಹಲವು ಸ್ಪಷ್ಟನೆ ಮತ್ತು ಮಾಹಿತಿಯನ್ನು ಕೋರಿದೆ.
13 ಬುಡಕಟ್ಟು ಜನಾಂಗದವರಿಗೆ ರಾಜ್ಯ ಸಿವಿಲ್ ಸೇವೆಗಳಲ್ಲಿ ವಿಶೇಷ ಪ್ರಾತಿನಿಧ್ಯ ನೀಡುವ ಸಂಬಂಧ ಒಂದು ಬಾರಿಗೆ ಅನ್ವಯಿಸುವಂತೆ ವಿಶೇಷ ನೇಮಕಾತಿ ನಿಯಮ ರಚಿಸಲು ಸಂಸದೀಯ ವ್ಯವಹಾರಗಳು, ಶಾಸನ ರಚನೆ ಇಲಾಖೆಯು ತಾತ್ವಿಕವಾಗಿ ಒಪ್ಪಿಗೆ ನೀಡಿದೆ. ಆದರೆ ಈ ಸಂಬಂಧ ಇನ್ನಷ್ಟು ಸ್ಪಷ್ಟನೆ, ಮಾಹಿತಿ ಕೋರಿರುವುದು ಗೊತ್ತಾಗಿದೆ.
ಈ ಸಂಬಂಧ ಸಂಸದೀಯ ವ್ಯವಹಾರಗಳು, ಶಾಸನ ರಚನೆ ಇಲಾಖೆಯು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ 2025ರ ಏಪ್ರಿಲ್ 25ರಂದು ಪತ್ರ (ಸಂಖ್ಯೆ; ಸಂವ್ಯಶಾಇ/97/ಅಶಾರ 2025) ಬರೆದಿದೆ. ಇದರ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಪರಿಶಿಷ್ಟ ಪಂಗಡಕ್ಕೆ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡ ಪಟ್ಟಿಗೆ ಸೇರಿಸಲು ಸಭೆ ನಡೆಸಲು ಮುಂದಾಗಿರುವ ಹೊತ್ತಿನಲ್ಲೇ ಜೇನು ಕುರುಬ, ಮಲೆಕುಡಿಯ ಸೇರಿದಂತೆ ಇನ್ನಿತರೆ 13 ಬುಡಕಟ್ಟು ಜನಾಂಗದವರಿಗೆ ವಿಶೇಷ ನೇಮಕಾತಿ ನಿಯಮಗಳನ್ನು ರಚಿಸಲು ಮುಂದಾಗಿರುವುದು ಮುನ್ನೆಲೆಗೆ ಬಂದಿದೆ.
ಈ ಸಂಬಂಧ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯ ನಿರ್ದೇಶನದಂತೆ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ 2025ರ ಸೆ.6ರಂದು ಅಧಿಕಾರಿಗಳ ಸಭೆ ನಡೆದಿದೆ. ಇದರ ಬೆನ್ನಲ್ಲೇ ಕಾನೂನು ಇಲಾಖೆಯು ನೀಡಿರುವ ಅಭಿಪ್ರಾಯವೂ ಮುನ್ನೆಲೆಗೆ ಬಂದಿದೆ.
ಅರಣ್ಯದ ಅಂಚಿನಲ್ಲಿ ವಾಸಿಸುವ ಜೇನು ಕುರುಬ, ಮಲೆಕುಡಿಯ ಸೇರಿದಂತೆ ಇನ್ನಿತರೆ 13 ಬುಡಕಟ್ಟು ಜನಾಂಗದವರಿಗೆ ವಿಶೇಷ ನೇಮಕಾತಿ ನಿಯಮಗಳನ್ನು ರಚಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025-26ನೇ ಸಾಲಿನ ಆಯವ್ಯಯದಲ್ಲಿ ಘೋಷಿಸಿದ್ದರು.
ಘೋಷಣೆಯಲ್ಲೇನಿದೆ?
ಇರುಳಿಗ, ಕೊರಗ, ಸೋಲಿಗ, ಯರವ, ಪಣಿಯನ್, ಹಲಸರು, ಗೌಡಲು, ಸಿದ್ಧಿ, ಬೆಟ್ಟ ಕುರುಬ, ಕಾಡು ಕುರುಬ, ಕುಡಿಯ ಮತ್ತು ಮಲೆ ಕುಡಿಯ ಈ ಜನಾಂಗಗಳಿಗೆ ರಾಜ್ಯ ಸಿವಿಲ್ ಸೇವೆಗಳಲ್ಲಿ ಪ್ರಾತಿನಿಧ್ಯ ನೀಡುವ ಸಲುವಾಗಿ ವಿಶೇಷ ನೇರ ನೇಮಕಾತಿ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025-26ನೇ ಸಾಲಿನ ಆಯವ್ಯಯದ (ಕಂಡಿಕೆ 199)ದಲ್ಲಿ ಘೋಷಣೆ ಮಾಡಿದ್ದರು.
ಆಯವ್ಯಯದಲ್ಲಿ ಮಾಡಿರುವ ಘೋಷಣೆಯನ್ನು ಅನುಷ್ಠಾನಗೊಳಿಸಲು ಸರ್ಕಾರವು ಮುಂದಾಗಿದೆ. ಆಡಳಿತ ಇಲಾಖೆಯಾದ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು ರಾಜ್ಯ ಸಿವಿಲ್ ಸೇವೆಗಳಲ್ಲಿ ಅರಣ್ಯ, ಅರಣ್ಯದಂಚಿನ ಹಾಡಿಗಳಲ್ಲಿ ವಾಸ ಮಾಡುತ್ತಿರುವ 13 ಬುಡಕಟ್ಟು ಜನಾಂಗಗಳಿಗೆ ಪ್ರಾತಿನಿಧ್ಯ ನೀಡಲು ಉದ್ದೇಶಿಸಿತ್ತು. ಈ ಸಂಬಂಧ ಸಂಸದೀಯ ವ್ಯವಹಾರಗಳು ಶಾಸನ ರಚನೆ ಇಲಾಖೆಗೆ ಅಭಿಪ್ರಾಯ (STW/SECB/STP/20/2025 -E OFFICE 150470) ಕೋರಿತ್ತು.
ಈ ಕುರಿತು ಸಲ್ಲಿಸಿರುವ ಕಡತವನ್ನು ಸಂಸದೀಯ ವ್ಯವಹಾರಗಳು ಶಾಸನ ರಚನೆ ಇಲಾಖೆಯು ಪರಿಶೀಲಿಸಿದೆ. ಮತ್ತು ಈ 13 ಬುಡಕಟ್ಟು ಜನಾಂಗಗಳು ಪ್ರಸ್ತುತ ಪರಿಶಿಷ್ಟ ಪಂಗಡದ ವ್ಯಾಪ್ತಿಗೆ ಬರುತ್ತವೆಯೇ ಎಂಬ ಬಗ್ಗೆ ಸಂಸದೀಯ ವ್ಯವಹಾರಗಳು, ಶಾಸನ ರಚನೆ ಇಲಾಖೆಯು ಜಿಜ್ಞಾಸೆಯಲ್ಲಿರುವುದು ತಿಳಿದು ಬಂದಿದೆ.
ಅಲ್ಲದೆ ಪರಿಶಿಷ್ಟ ಪಂಗಡದ ವ್ಯಾಪ್ತಿಗೆ ಬಂದಲ್ಲಿ ಈಗಾಗಲೇ ರಾಜ್ಯ ಸಿವಿಲ್ ಸೇವೆಗಳಲ್ಲಿ ಸರ್ಕಾರವು ಶೇ. 7ರಷ್ಟು ಮೀಸಲಾತಿ ನೀಡಿದೆ. ಅದರಂತೆ ಈ ಬುಡಕಟ್ಟು ಜನಾಂಗದವರೂ ಸಹ ಮೀಸಲಾತಿ ಸೌಲಭ್ಯಕ್ಕೆ ಅರ್ಹರಾಗಿರುತ್ತಾರೆ ಎಂದೂ ಸಂಸದೀಯ ವ್ಯವಹಾರಗಳು, ಶಾಸನ ರಚನೆ ಇಲಾಖೆಯು ಟಿಪ್ಪಣಿ ಹಾಳೆಯಲ್ಲಿ ಸ್ಪಷ್ಟಪಡಿಸಿರುವುದು ಗೊತ್ತಾಗಿದೆ.
ಈ ಸಂಬಂಧ ಸಂಸದೀಯ ವ್ಯವಹಾರಗಳ ಇಲಾಖೆಯು ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಸರ್ಕಾರದ ಕಾರ್ಯದರ್ಶಿಯಿಂದ ಹಲವು ಮಾಹಿತಿ, ಸ್ಪಷ್ಟನೆಯನ್ನು ಕೋರಿದೆ.
ಸಂಸದೀಯ ವ್ಯವಹಾರಗಳ ಇಲಾಖೆ ಕೋರಿರುವ ಮಾಹಿತಿಯಲ್ಲೇನಿದೆ?
13 ಬುಡಕಟ್ಟು ಜನಾಂಗದವರಿಗೆ ವಿಶೇಷ ಪ್ರಾತಿನಿಧ್ಯ ನೀಡುವ ಸಂಬಂಧ ಒಂದು ಬಾರಿಗೆ ಅನ್ವಯಿಸುವಂತೆ ವಿಶೇಷ ನೇಮಕಾತಿ ನಿಯಮಗಳನ್ನು ರಚಿಸಬಹುದು. ಆದರೆ ವಿಶೇಷ ನೇಮಕಾತಿ ನಿಯಮಗಳನ್ನು ರಚಿಸುವ ಪೂರ್ವದಲ್ಲಿ ಮಾನದಂಡಗಳ ಕುರಿತು ಆಡಳಿತ ಇಲಾಖೆಯೊಂದಿಗೆ ಚರ್ಚಿಸಲು ಮುಂದಾಗಿದೆ.
ವಿಶೇಷ ನೇಮಕಾತಿ ನಿಯಮಗಳನ್ನು ಯಾವ ವೃಂದದ ನೇಮಕಾತಿಗೆ ಸೀಮಿತಗೊಳಿಸಬೇಕು, ಯಾವ ಶೈಕ್ಷಣಿಕ ಅರ್ಹತೆಯನ್ನು ಮಾನದಂಡವನ್ನಾಗಿಸಬೇಕು, ಶೈಕ್ಷಣಿಕ ಅರ್ಹತೆಯಲ್ಲಿ ಗಳಿಸಿದ ಅಂಕಗಳನ್ನು ಪರಿಗಣಿಸಬೇಕೇ, ಅಥವಾ ಸ್ಪರ್ಧಾತ್ಮಕ ಪರೀಕ್ಷೆ ಮೂಲಕ ನೇಮಕಾತಿ ಮಾಡಬೇಕೆ ಎಂದು ಸ್ಪಷ್ಟನೆ ಮತ್ತು ಮಾಹಿತಿ ಕೋರಿರುವುದು ತಿಳಿದು ಬಂದಿದೆ.
ಅದೇ ರೀತಿ ಈಗಾಗಲೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗದವರಿಗೆ 1985ರಲ್ಲಿ ಒಂದು ಬಾರಿ ಕ್ರಮವಾಗಿ ಕರ್ನಾಟಕ ಆಡಳಿತ ಸೇವೆಗೆ (ಕೆಎಎಸ್) ನೇಮಕಾತಿ ಮಾಡಲಾಗಿದೆ. ಇದೇ ರೀತಿಯ ಕ್ರಮವನ್ನು ಅನುಸರಿಸಬೇಕೇ ಎಂದು ಕೇಳಿದೆ.
ಈ ಎಲ್ಲಾ ಮಾಹಿತಿ ನೀಡುವ ಮುನ್ನ ಆಡಳಿತ ಇಲಾಖೆಯು ಕಾನೂನು ಇಲಾಖೆಗೆ ಅಭಿಪ್ರಾಯ ಪಡೆಯಬೇಕು ಎಂದು ಸಂಸದೀಯ ವ್ಯವಹಾರಗಳು, ಶಾಸನ ರಚನೆ ಇಲಾಖೆಯು ಟಿಪ್ಪಣಿಯಲ್ಲಿ ಸೂಚಿಸಿರುವುದು ಗೊತ್ತಾಗಿದೆ.
ಹಳೇ ಮೈಸೂರು ಭಾಗದಲ್ಲಿ ಹಲಸರು, ಇರುಳರ್ ಸಮುದಾಯವು ದಕ್ಷಿಣ ಕನ್ನಡ, ಮೈಸೂರು, ಕೊಳ್ಳೆಗಾಳ ತಾಲೂಕಿನಲ್ಲಿದೆ. ಮಡಿಕೇರಿ, ಬೆಳಗಾಂ, ವಿಜಯಪುರ, ಕಲ್ಬುರ್ಗಿ, ರಾಯಚೂರು, ಬೀದರ್ ಮತ್ತು ಕೊಳ್ಳೇಗಾಲ, ಚಾಮರಾಜನಗರ ತಾಲೂಕಿನಲ್ಲಿ ಇರುಳಿಯರ್ ಸಮುದಾಯವಿದೆ. ಅದೇ ರೀತಿ ಕೂರ್ಗ್, ಬೆಳಗಾವಿ, ವಿಜಯಪುರ, ಧಾರವಾಡ, ಕಾರವಾರ, ದಕ್ಷಿಣ ಕನ್ನಡ, ಕಲ್ಬುರ್ಗಿ, ರಾಯಚೂರು, ಬೀದರ್ ಜಿಲ್ಲೆಯಲ್ಲಿ ಜೇನುಕುರುಬ ಸಮುದಾಯವಿದೆ ಎಂದು ತಿಳಿದು ಬಂದಿದೆ.





