ಬೆಂಗಳೂರು; ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ಮಳವಳ್ಳಿ ಶಾಸಕ ಪಿ ಎಂ ನರೇಂದ್ರಸ್ವಾಮಿ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿರುವ ಪ್ರಕ್ರಿಯೆಯನ್ನು ಸಮರ್ಥಿಸಿಕೊಂಡಿರುವ ರಾಜ್ಯ ಸರ್ಕಾರವು, ಸುಪ್ರೀಂ ಮತ್ತು ಹೈಕೋರ್ಟ್ ನೀಡಿರುವ ವಿವಿಧ ತೀರ್ಪುಗಳ ಪೈಕಿ ಯಾವ ನಿರ್ದಿಷ್ಟ ನಿಬಂಧನೆಯನ್ನು ಉಲ್ಲಂಘಿಸಲಾಗಿದೆ ಎಂಬುದನ್ನು ಅರ್ಜಿದಾರರು ಸಮರ್ಥಿಸಿಕೊಂಡಿಲ್ಲ ಎಂದು ಪ್ರತಿವಾದಿಸಲು ಮುಂದಾಗಿದೆ.
ರಾಜಕಾರಣಿಯಾದ ನರೇಂದ್ರ ಸ್ವಾಮಿ ಅವರು ಹಾಲಿ ವಿಧಾನ ಸಭಾ ಸದಸ್ಯರಾಗಿದ್ದಾರೆ. ಜಲ ಕಾಯಿದೆ ಸೆಕ್ಷನ್ 4(2) ಮತ್ತು ವಾಯು ಕಾಯಿದೆ ಸೆಕ್ಷನ್ 5(2)(a) ರಲ್ಲಿ ಹೇಳಿರುವಂತೆ ವಿಶೇಷ ಜ್ಞಾನ ಅಥವಾ ಪ್ರಾಯೋಗಿಕ ಜ್ಞಾನ ಹೊಂದಿಲ್ಲ ಎಂದು ಅರ್ಜಿದಾರ ಆಂಜನೇಯ ರೆಡ್ಡಿ ಅವರ ಆಕ್ಷೇಪಕ್ಕೆ ಉತ್ತರಿಸಲಿರುವ ಸರ್ಕಾರವು ಪ್ರಾಯೋಗಿಕ ಜ್ಞಾನವೂ ಸೇರಿದಂತೆ ನಾಲ್ಕು ವಿಭಾಗಗಳಲ್ಲಿ ನರೇಂದ್ರ ಸ್ವಾಮಿ ಅವರಿಗೆ 70 ಅಂಕಗಳನ್ನು ನೀಡಲಾಗಿದೆ ಎಂದು ವಿವರಿಸಲಿದೆ.
ಪಿ ಎಂ ನರೇಂದ್ರಸ್ವಾಮಿ ಅವರನ್ನು ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರನ್ನಾಗಿ ನೇಮಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ಪ್ರಶ್ನಿಸಿ ಆಂಜನೇಯ ರೆಡ್ಡಿ ಅವರು ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆಯು ಇದೇ ಮಾರ್ಚ್ 17ರಂದು ಹೈಕೋರ್ಟ್ ಮುಂದೆ ಬರಲಿದೆ. ನರೇಂದ್ರಸ್ವಾಮಿ ಅವರ ನೇಮಕವನ್ನು ಸಮರ್ಥಿಸಿಕೊಳ್ಳಲು ಬಳಸಿಕೊಂಡಿರುವ ಎಲ್ಲಾ ವಿವರಣೆಗಳನ್ನೂ ರಾಜ್ಯ ಸರ್ಕಾರವು ಸಿದ್ಧಪಡಿಸಿಕೊಂಡಿದೆ.
ಇದರ ಸಮಗ್ರ ವಿವರಣೆಯ ಪಟ್ಟಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷರ ನೇಮಕಾತಿಗೆ ಸಂಬಂಧಿಸಿದಂತೆ ನೇಮಕವಾಗಿದ್ದ ವಿವಿಧ ಸಮಿತಿಗಳು ನೀಡಿರುವ ಸಲಹೆ, ಶಿಫಾರಸ್ಸು ಮತ್ತು ಮಾರ್ಗಸೂಚಿಗಳನ್ನು ಅವಲೋಕಿಸಿರುವ ರಾಜ್ಯ ಕಾಂಗ್ರೆಸ್ ಸರ್ಕಾರವು, ನರೇಂದ್ರ ಸ್ವಾಮಿ ಅವರ ನೇಮಕವನ್ನು ಸಮರ್ಥಿಸಿಕೊಳ್ಳಲು ನ್ಯಾಯಾಲಯದ ತೀರ್ಪುಗಳನ್ನು ಪೂರಕವಾದ ಉಲ್ಲೇಖಿಸಿರುವುದು ವಿವರಣೆ ಪಟ್ಟಿಯಿಂದ ತಿಳಿದು ಬಂದಿದೆ.
ಕೆಎಸ್‌ಪಿಸಿಬಿ ಅಧ್ಯಕ್ಷರ ಆಯ್ಕೆ ಮತ್ತು ನೇಮಕಾತಿಗೆ ಮಾರ್ಗಸೂಚಿಗಳಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಕಾಲಕಾಲಕ್ಕೆ ಹೊರಡಿಸಿದ್ದ ಆದೇಶಗಳನ್ನು ಪ್ರಶ್ನಿಸಿದ್ದ ರಿಟ್ ಅರ್ಜಿಗಳು ಮತ್ತು ಈ ಸಂಬಂಧ ಆ ಎಲ್ಲಾ ಅರ್ಜಿಗಳು ಹೇಗೆಲ್ಲಾ ನಿಷ್ಪ್ರಯೋಜಕವಾದವು ಎಂದು ಸಾಬೀತುಪಡಿಸುವ ಅಂಶಗಳನ್ನೂ ವಿವರಣೆ ಪಟ್ಟಿಯಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.
ಕೆಎಸ್‌ಪಿಸಿಪಿಗೆ ಹೊಸ ಅಧ್ಯಕ್ಷರ ನೇಮಕಾತಿ ಮಾಡುವ ತುರ್ತು ಅಗತ್ಯವಿಲ್ಲ. ಏಕೆಂದರೆ ಅಧ್ಯಕ್ಷರ ಕಚೇರಿಯ ಕರ್ತವ್ಯಗಳು ಮತ್ತು ಕಾರ್ಯಗಳನ್ನು ಈಗಾಗಲೇ ಉಸ್ತುವಾರಿ ಅಧಿಕಾರಿಗಳು ನಿರ್ವಹಿಸುತ್ತಿದ್ದಾರೆ. ಹಿಂದಿನ ರಿಟ್ ಅರ್ಜಿಗಳಲ್ಲಿ (06.02.2021) ಈ ನ್ಯಾಯಾಲಯದ ಆದೇಶದ ಪ್ರಕಾರ ಅರ್ಹತಾ ಮಾನದಂಡಗಳನ್ನು ಮಾರ್ಪಡಿಸಿತ್ತು.
ರಾಜಕಾರಣಿಯಾದ ನರೇಂದ್ರ ಸ್ವಾಮಿ ಅವರು ಹಾಲಿ ವಿಧಾನ ಸಭಾ ಸದಸ್ಯರಾಗಿದ್ದಾರೆ. ಜಲ ಕಾಯಿದೆ ಸೆಕ್ಷನ್ 4(2) ಮತ್ತು ವಾಯು ಕಾಯಿದೆ ಸೆಕ್ಷನ್ 5(2)(a) ರಲ್ಲಿ ಹೇಳಿರುವಂತೆ ವಿಶೇಷ ಜ್ಞಾನ ಅಥವಾ ಪ್ರಾಯೋಗಿಕ ಜ್ಞಾನ ಹೊಂದಿಲ್ಲ. ಸಭೆಗೆ ಭಾರತ ಸರ್ಕಾರದ ಪರಿಸರ ಇಲಾಖೆಯ ಕಾರ್ಯದರ್ಶಿ ಗೈರಾಗಿದ್ದರು ಎಂದು ಎಂದು ಆಕ್ಷೇಪಿಸಿದ್ದರು. ಆಯ್ಕೆ ಸಮಿತಿಯ ಶಿಫಾರಸ್ಸು ಆಧರಿಸಿ ಫೆಬ್ರವರಿ 5ರಂದು ನರೇಂದ್ರ ಸ್ವಾಮಿ ಅವರನ್ನು ನೇಮಕ ಮಾಡಲಾಗಿದೆ. ಇದನ್ನು ರದ್ದುಪಡಿಸಬೇಕು ಎಂಬುದು ಅರ್ಜಿದಾರರ ಕೋರಿದ್ದರು.
ಆಯ್ಕೆ ಸಮಿತಿಯು ಶಿಫಾರಸು ಮಾಡಿದ 9 ನೇ ಪ್ರತಿವಾದಿಯು 2008, 2013, 2013-2018 ಮತ್ತು 2023-2028 ರಿಂದ ಸತತವಾಗಿ ಕರ್ನಾಟಕ ವಿಧಾನಸಭೆಯ ರಾಜಕಾರಣಿ-ಸದಸ್ಯರಾಗಿದ್ದಾರೆ. 1974 ರ ಜಲ ಕಾಯ್ದೆಯ ಸೆಕ್ಷನ್ 4(2) ಮತ್ತು ವಾಯು ಕಾಯ್ದೆಯ ಅನುಗುಣವಾದ ಸೆಕ್ಷನ್ 5(2)a ನಲ್ಲಿ ಸೂಚಿಸಲಾದ ವಿಶೇಷ ಜ್ಞಾನ ಅಥವಾ ಪ್ರಾಯೋಗಿಕ ಅನುಭವವನ್ನು ಹೊಂದಿಲ್ಲ ಎಂದು ತಕರಾರು ಎತ್ತಿದ್ದರು.
ಜಲ (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯ್ದೆ 1974 ರ ಸೆಕ್ಷನ್ 4(2)(ಎ) ಮತ್ತು ವಾಯು (ಮಾಲಿನ್ಯ ತಡೆಗಟ್ಟುವಿಕೆ ಮತ್ತು ನಿಯಂತ್ರಣ) ಕಾಯ್ದೆ 1981 ರ ಸೆಕ್ಷನ್ 5(2)ಎ) ರಲ್ಲಿ ಸೂಚಿಸಲಾದ ಅರ್ಹತೆಗಳನ್ನು ಪೂರೈಸದ ಒಬ್ಬ ರಾಜಕಾರಣಿಯಾಗಿದ್ದಾರೆ. ಇದನ್ನು ಸುಪ್ರೀಂ ಕೋರ್ಟ್ ವಿಜ್ಞಾನ-ವರ್ಸಸ್-ಯೂನಿಯನ್ ಆಫ್ ಇಂಡಿಯಾ 2005 (1) ಸೆಕ್ಷನ್ ಮತ್ತು ಟೆಕಿ ತಾರಾ ತ್ಯಾಗಿ-ವರ್ಸಸ್-ರಾಜೇಂದ್ರ ಸಿಂಗ್ ಭಂಡಾರಿ 2018 (11) ಸೆಕ್ಷನ್ 734 ರ ಪ್ರಕಾರ ಸಂಶೋಧನೆಯಲ್ಲಿ ಅನುಸರಿಸಲು ಆದೇಶಿಸಿತ್ತು.
ಈ ಹೈಕೋರ್ಟ್‌ನ ವಿಭಾಗೀಯ ಪೀಠವು ( wp 9526/2020 ಮತ್ತು 9500/2021 ) ರಲ್ಲಿ ಮತ್ತು ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಗೆ ಅಧ್ಯಕ್ಷರನ್ನು ನೇಮಿಸುವಲ್ಲಿ ಸಂಬಂಧಿಸಿದ ವಿಷಯಗಳಲ್ಲಿ ನಿರ್ದೇಶನಗಳನ್ನು ನೀಡಿತ್ತು. ಇದೆಲ್ಲವನ್ನೂ ಗಾಳಿಗೆ ತೂರಲಾಗಿದೆ ಎಂದು ವಿವರಿಸಿದ್ದರು.
2023-2028 ರ ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆಗೆ ತನ್ನ ಉಮೇದುವಾರಿಕೆಗಾಗಿ 9ನೇ ಪ್ರತಿವಾದಿಯು ಚುನಾವಣಾ ಆಯೋಗದ ಮುಂದೆ ಘೋಷಿಸಿಕೊಂಡಿದ್ದರು ಎಂದ ಅರ್ಜಿದಾರರು ಗಮನಸೆಳೆದಿದ್ದರು.
ಅರ್ಜಿದಾರರ ಈ ಎಲ್ಲಾ ವಾದಗಳನ್ನೂ ಸರ್ಕಾರವು ತಳ್ಳಿ ಹಾಕಲಿದೆ ಎಂದು ಗೊತ್ತಾಗಿದೆ.
ನಿಯಮ 3 ರ ಪ್ರಕಾರ, ಕೆಎಸ್‌ಪಿಸಿಬಿ ನಿಯಮಗಳು 2024 ಆಯ್ಕೆ ಸಮಿತಿಯು ಅರ್ಜಿಯನ್ನು ಆಹ್ವಾನಿಸಿದೆ ಮತ್ತು ಅಧ್ಯಕ್ಷರ ಹುದ್ದೆಗೆ ಆಯ್ಕೆಗಾಗಿ ಮೂರು ವ್ಯಕ್ತಿಗಳ ಸಮಿತಿಯನ್ನು ಶಿಫಾರಸು ಮಾಡಿತ್ತು. ಸಮಿತಿಯು ಎಲ್ಲಾ ಅರ್ಜಿಗಳನ್ನು ಪರಿಶೀಲಿಸಿದ ನಂತರ ಅಧ್ಯಕ್ಷ ಹುದ್ದೆಗೆ ಪ್ರತಿವಾದಿ ಸಂಖ್ಯೆ 4 ಸೇರಿದಂತೆ 3 ಹೆಸರುಗಳನ್ನು ನಿರ್ಧರಿಸಿತ್ತು. 4 ಮಾನದಂಡಗಳ ಮೇಲೆ ಆಯ್ಕೆ ಮಾಡಲಾಗಿದೆ ಎಂದು ಸರ್ಕಾರವು ವಿವರಿಸಲಿದೆ ಎಂದು ತಿಳಿದು ಬಂದಿದೆ.
ಶೈಕ್ಷಣಿಕ ಅರ್ಹತೆ, ವಿಶೇಷ ಜ್ಞಾನ, ಪ್ರಾಯೋಗಿಕ ಜ್ಞಾನ ಮತ್ತು ಸಂಸ್ಥೆಗಳನ್ನು ನಿರ್ವಹಿಸುವಲ್ಲಿ ನಾಯಕತ್ವವನ್ನು ಪರಿಗಣಿಸಿತ್ತು. ಈ ಎಲ್ಲಾ ವಿಭಾಗಗಳಲ್ಲಿ 9ನೇ ಪ್ರತಿವಾದಿಯಾಗಿರುವ ಪಿ ಎಂ ನರೇಂದ್ರಸ್ವಾಮಿ ಒಟ್ಟು 70 ಅಂಕಗಳನ್ನು ಪಡೆದಿದ್ದಾರೆ. ಆ ನಂತರವಷ್ಟೇ ಅವರನ್ನು ಅಧ್ಯಕ್ಷ ಹುದ್ದೆಗೆ ನೇಮಿಸಲಾಗಿದೆ. ಮೂರನೇ ಅಭ್ಯರ್ಥಿ 55 ಅಂಕಗಳನ್ನು ಪಡೆದಿದ್ದರು.
ಚುನಾವಣಾ ಅಫಿಡವಿಟ್‌ನಲ್ಲಿ ಬಹಿರಂಗಪಡಿಸಿದಂತೆ ಪ್ರತಿವಾದಿ ನರೇಂದ್ರಸ್ವಾಮಿ ಅವರು ಸಿವಿಲ್ ಪದವಿಯನ್ನು ಹೊಂದಿದ್ದಾರೆ.
ಪರಿಸರ ಕ್ಷೇತ್ರದಲ್ಲಿ ಅವರ ಅನುಭವದ ಬಗ್ಗೆ ಇತರ ವಿವರಗಳನ್ನು ಚುನಾವಣಾ ಅಫಿಡವಿಟ್‌ನಲ್ಲಿ ಕೇಳಲಾಗಿಲ್ಲ. ಆದ್ದರಿಂದ, ಅದನ್ನು ಉಲ್ಲೇಖಿಸಲಾಗಿಲ್ಲ. ಪರಿಸರ ಮಾಲಿನ್ಯಕ್ಕೆ ಸಂಬಂಧಿಸಿದ ವಿಷಯದಲ್ಲಿ ಪ್ರಾಯೋಗಿಕ ಅನುಭವ ಹೊಂದಿದ್ದಾರೆ. 2024 ರ ಕೆಎಸ್‌ಪಿಸಿಬಿ ನಿಯಮಗಳ ಅಡಿಯಲ್ಲಿ ಸೂಕ್ತ ಕಾರ್ಯವಿಧಾನವನ್ನು ಅನುಸರಿಸಿದ ನಂತರ ನರೇಂದ್ರ ಸ್ವಾಮಿ ಅವರನ್ನು ಕೆಎಸ್‌ಪಿಸಿಬಿಯ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದು ಸಮರ್ಥಿಸಿಕೊಳ್ಳಲಿದೆ ಎಂದು ಗೊತ್ತಾಗಿದೆ.
ಪ್ರತಿವಾದಿ ನರೇಂದ್ರ ಸ್ವಾಮಿ ಅವರ ನೇಮಕಾತಿಯು ಜಲ ಕಾಯ್ದೆಯ ಸೆಕ್ಷನ್ 4(2)(ಎ) ಆಧರಿಸಿಲ್ಲ ಎಂಬ ಆಕ್ಷೇಪಕ್ಕೆ ಉತ್ತರಿಸಲಿರುವ ಸರ್ಕಾರವು ಅವರು ಪರಿಸರ, ಪರಿಸರ ವಿಜ್ಞಾನ ಮತ್ತು ಜೈವಿಕ ವೈವಿಧ್ಯತೆಯ ನಿರ್ವಹಣೆಯನ್ನು ಸಮರ್ಥಿಸುತ್ತಿದ್ದಾರೆ ಎಂದು ವಿವರಿಸಲಿದೆ.
ಕೆಎಸ್‌ಪಿಸಿಬಿ 2024ರ ನಿಯಮ 3 ರ ಅಡಿಯಲ್ಲಿ ಪರಿಗಣಿಸಿದ್ದ ಕಾರ್ಯವಿಧಾನವನ್ನೇ ಅನುಸರಿಸಿದೆ. ಇದರ ಪ್ರಕಾರ ಪತ್ರಿಕಾ ಪ್ರಕಟಣೆ ಮೂಲಕ ಅರ್ಜಿಗಳನ್ನು 2024ರ ಡಿಸೆಂಬರ್ 24ರಂದು ಆಹ್ವಾನಿಸಲಾಗಿದೆ. ಅಲ್ಲದೆ ತಮ್ಮ ಪ್ರತಿನಿಧಿಯನ್ನು ಕಳಿಸಬೇಕು ಎಂದು ಕೇಂದ್ರ ಸರ್ಕಾರದ ಅರಣ್ಯ ಮಂತ್ರಾಲಯವನ್ನು 2024ರ ಜನವರಿ 28ರಂದು ಕೋರಲಾಗಿತ್ತು. ಆದರೆ ಯಾವುದೇ ಉತ್ತರ ಬಂದಿಲ್ಲ. ಈ ಸದಸ್ಯರ ಅನುಪಸ್ಥಿತಿಯು ನಿರ್ಧಾರದ ಮೇಲೆ ಪರಿಣಾಮ ಬೀರುವುದಿಲ್ಲ ಎಂದು ವಾದಿಸಲಿದೆ ಎಂದು ಗೊತ್ತಾಗಿದೆ.
ಅರ್ಜಿಯ ಕ್ರಮ ಸಂಖ್ಯೆಯ 1ರಿಮದ 24ರವೆಗಿನ ಪ್ಯಾರಾಗಳು ವಾಸ್ತವಿಕ ಸ್ವರೂಪದ್ದಾಗಿದೆ. ಇವಕ್ಕೆ ಸ್ಪಷ್ಟ ಉತ್ತರದ ಅಗತ್ಯವಿಲ್ಲ. ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ನಿಯಮಗಳು 2024 ರ ಹೊರಡಿಸುವ ಮೂಲಕ ಟೆಕಿ ತ್ಯಾಗಿ ಪ್ರಕರಣದಲ್ಲಿನ ತೀರ್ಪಿನ ಯಾವ ನಿರ್ದಿಷ್ಟ ನಿಬಂಧನೆಯನ್ನು ಉಲ್ಲಂಘಿಸಲಾಗಿದೆ ಎಂಬುದನ್ನು ಅರ್ಜಿದಾರರು ಸಮರ್ಥಿಸಿಲ್ಲ.
ಅಲ್ಲದೇ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗಳ ಅಧ್ಯಕ್ಷರು ಮತ್ತು ಸದಸ್ಯರ ನೇಮಕಾತಿಗೆ ರಾಜ್ಯಗಳು ಯಾವುದೇ ನಿಯಮಗಳು ಅಥವಾ ಮಾರ್ಗಸೂಚಿಗಳನ್ನು ಹೊಂದಿಲ್ಲ. ಎಸ್‌ಪಿಸಿಬಿಗಳ ಅಧ್ಯಕ್ಷರು ಮತ್ತು ಇತರ ಸದಸ್ಯರ ನೇಮಕಾತಿಗಾಗಿ ಸಮಗ್ರ ಮಾರ್ಗಸೂಚಿಗಳನ್ನು ರೂಪಿಸಲು ರಾಜ್ಯ ಸರ್ಕಾರಗಳಿಗೆ ನಿರ್ದೇಶನ ನೀಡುವುದು ಮತ್ತು ಅಂತಹ ಎಲ್ಲಾ ನೇಮಕಾತಿಗಳು ನಿಗದಿತ ಮಾನದಂಡಗಳಿಗೆ ಕಟ್ಟುನಿಟ್ಟಾಗಿ ಬದ್ಧವಾಗಿರುವುದನ್ನು ಖಚಿತಪಡಿಸಿಕೊಳ್ಳುವುದು ಟೆಕಿ ತ್ಯಾಗಿ ಪ್ರಕರಣದಲ್ಲಿನ ನಿರ್ಧಾರದ ಮೂಲ ಉದ್ದೇಶವಾಗಿತ್ತು ಎಂದು ವಿವರಿಸಲಿದೆ.
ಟೆಕಿ ತ್ಯಾಗಿ ತಾರಾ ಪ್ರಕರಣದ ತೀರ್ಪಿನಲ್ಲಿ ಸುಪ್ರೀಂ ಕೋರ್ಟ್ ಎಲ್ಲಿಯೂ ಶಾಸಕಾಂಗ ಸಭೆಯ (ಶಾಸಕ) ಸದಸ್ಯರನ್ನು ಎಸ್‌ಪಿಸಿಬಿಯ ಅಧ್ಯಕ್ಷರನ್ನಾಗಿ ನೇಮಿಸುವುದನ್ನು ಸ್ಪಷ್ಟವಾಗಿ ನಿರ್ಬಂಧಿಸಿಲ್ಲ. ಜಾರ್ಖಂಡ್ ಪಿಸಿಬಿ ಹುದ್ದೆಗೆ 10 ನೇ ತರಗತಿಯ ಪದವೀಧರ ಮತ್ತು ಚುನಾಯಿತ ಪ್ರತಿನಿಧಿಯಾಗಿದ್ದ ಒಬ್ಬ ವ್ಯಕ್ತಿಯನ್ನು ನಾಮನಿರ್ದೇಶನ ಮಾಡಿದ ಕಾರಣ ಇಂತಹ ಸಮಸ್ಯೆ ಉದ್ಭವಿಸಿದೆ ಎಂದು ಉಲ್ಲೇಖಿಸಿರುವುದು ಗೊತ್ತಾಗಿದೆ.
ಈ ವಿಷಯವನ್ನು ಚರ್ಚಿಸುವಾಗ, ಸುಪ್ರೀಂ ಕೋರ್ಟ್ 4 ಸಮಿತಿ ವರದಿಗಳನ್ನು ಚರ್ಚಿಸಿದೆ. ಭಟ್ಟಾಚಾರ್ಯ ಸಮಿತಿ (1984) ಎಸ್‌ಪಿಸಿಬಿಗಳ ರಚನಾತ್ಮಕ ಸಂಘಟನೆಯನ್ನು ಪ್ರಸ್ತಾಪಿಸಿತು. (ಪ್ಯಾರಾ 28, ಪುಟ 19) ಬೆಳ್ಳಿಯಪ್ಪ ಸಮಿತಿ (1990) ಮಂಡಳಿಯ ಮೇಲ್ವಿಚಾರಣೆ, ಸಂಘಟನಾ ವ್ಯವಸ್ಥೆಗಳನ್ನು ಶಿಫಾರಸು (ಪ್ಯಾರಾ 29, ಪುಟ 19) ಮಾಡಿದೆ.
ಆಡಳಿತ ಸಿಬ್ಬಂದಿ ಕಾಲೇಜು ಆಫ್ ಇಂಡಿಯಾ (1994) ಮಂಡಳಿಗೆ ಅಂತಹ ಕ್ರಿಯಾತ್ಮಕ ಬದಲಾವಣೆಗಳನ್ನು ಶಿಫಾರಸು ಮಾಡಿದೆ (ಪುಟ 30, 19) . ಮೆನನ್ ಸಮಿತಿ (2003) ಮಂಡಳಿಯ ಕಾರ್ಯನಿರ್ವಹಣೆ ಮತ್ತು ಮಂಡಳಿಯ ನೌಕರರು, ಅಧ್ಯಕ್ಷರು ಮತ್ತು ಇತರರ ನೇಮಕಾತಿಗಾಗಿ ಸಲಹೆಗಳನ್ನು ಶಿಫಾರಸು ಮಾಡಿದೆ (ಪ್ಯಾರಾ 31, ಪುಟ 20) ಎಂದು ವಿವರಣೆಯಲ್ಲಿ ಪ್ರಸ್ತಾವಿಸಿದೆ.
ಈ ಸಮಿತಿಗಳ ವರದಿಗಳನ್ನು ಚರ್ಚಿಸಿದ ನಂತರ, ಸುಪ್ರೀಂ ಕೋರ್ಟ್, ಕೆಎಸ್‌ಪಿಸಿಬಿ ಅಧ್ಯಕ್ಷರ ನಾಮನಿರ್ದೇಶನಕ್ಕೆ ಯಾವುದೇ ನಿಯಮಗಳನ್ನು ರೂಪಿಸಲಾಗಿಲ್ಲ ಎಂದು ತೀರ್ಮಾನಿಸಿತು. ಆದ್ದರಿಂದ ಎಲ್ಲಾ ರಾಜ್ಯಗಳು ಶಾಸನದ ಅವಶ್ಯಕತೆಗಳಿಗೆ ಅನುಗುಣವಾಗಿ ಮಾರ್ಗಸೂಚಿಗಳನ್ನು ರೂಪಿಸುವಂತೆ ನಿರ್ದೇಶಿಸಿತು. ಆದ್ದರಿಂದ, ಯಾವುದೇ ಸಮಯದಲ್ಲಿ ಶಾಸಕರನ್ನು ಎಸ್‌ಪಿಸಿಬಿ ಅಧ್ಯಕ್ಷರನ್ನಾಗಿ ನೇಮಿಸಲಾಗುವುದಿಲ್ಲ ಎಂಬ ಅನುಪಾತವನ್ನು ಸುಪ್ರೀಂ ಕೋರ್ಟ್ ನಿಗದಿಪಡಿಸಿಲ್ಲ ಎಂದು ನ್ಯಾಯಾಲಯದ ಗಮನಕ್ಕೆ ತರಲಿದೆ ಎಂದು ತಿಳಿದು ಬಂದಿದೆ.
ವಿಭಾಗೀಯ ಪೀಠವು ರಿಟ್ ಅರ್ಜಿ ಸಂಖ್ಯೆ 9526/2020 ಮತ್ತು 2021ರ ಫೆ.6ರಂದು ಹೊರಡಿಸಿದ ಎಲ್ಲಾ ಆದೇಶಗಳು ರಿಟ್ ಅರ್ಜಿ 19569/2023 ರಲ್ಲಿ ವಿಭಾಗೀಯ ಪೀಠದ ಅಂತಿಮ ತೀರ್ಪಿನಲ್ಲಿ ವಿಲೀನಗೊಂಡಿವೆ. ಕೆಎಸ್‌ಪಿಸಿಬಿ ಅಧ್ಯಕ್ಷರ ಆಯ್ಕೆ ಮತ್ತು ನೇಮಕಾತಿಗೆ ಮಾರ್ಗಸೂಚಿಗಳನ್ನು 2020ರ ಜೂನ್ 19ರಂದು ನಿಗದಿಪಡಿಸಿ ಸರ್ಕಾರಿ ಆದೇಶವನ್ನು ಹೊರಡಿಸಲಾಗಿತ್ತು. ಇದನ್ನು ಪ್ರಶ್ನಿಸಿದ್ದ ಅರ್ಜಿಗಳು ( ಡಬ್ಲ್ಯೂಪಿ ಸಂಖ್ಯೆ 9205/2020 ರಲ್ಲಿ (ಪುಟ 14, ಪ್ಯಾರಾ 111) ಸಮನ್ವಯ ಪೀಠದ ನಿರ್ಧಾರದ ನಂತರ ನಿಷ್ಪ್ರಯೋಜಕವಾದವು ಎಂದು ವಿವರಿಸಲಿದೆ.
ರಿಟ್ ಸಂಖ್ಯೆ 9526/2020 ಮತ್ತು 9923/2020 ರಲ್ಲಿ ವಿಭಾಗೀಯ ಪೀಠವು ಮಾರ್ಗಸೂಚಿಗಳ ಸಿಂಧುತ್ವದ ಸವಾಲನ್ನು ತಿರಸ್ಕರಿಸಿತ್ತು (ತೀರ್ಪಿನ ಪುಟ 16, ಪ್ಯಾರಾ v1) ರಿಟ್ ಸಂಖ್ಯೆ 9526/2020 ಮತ್ತು 9923/2020 ರಲ್ಲಿರುವ ಆದೇಶಗಳು ನಡೆಯುತ್ತಿರುವ ಆಯ್ಕೆ ಪ್ರಕ್ರಿಯೆಯನ್ನು ನಿಲ್ಲಿಸಲು ಪ್ರಯತ್ನಿಸಲಿಲ್ಲ.
ಕರ್ನಾಟಕ ಸರ್ಕಾರವು ಕೆಎಸ್‌ಪಿಸಿಬಿ ಅಧ್ಯಕ್ಷರ ಆಯ್ಕೆಗಾಗಿ ಸೆಕ್ಷನ್ 64 ರ ಅಡಿಯಲ್ಲಿ (ತಿದ್ದುಪಡಿಗಳನ್ನು ಅಳವಡಿಸಿಕೊಳ್ಳದೆ) ನಿಯಮಗಳನ್ನು ರೂಪಿಸಲು ಅಧಿಕಾರ ಹೊಂದಿದೆ. 2024ರ ಡಿಸೆಂಬರ್ 18ರಂದು ಅಧಿಸೂಚನೆಯನ್ನು ಹೊರಡಿಸಿ, ಆಯ್ಕೆ ಮಾನದಂಡಗಳನ್ನು ಸೂಚಿಸಿದೆ. ಜಲ ಕಾಯ್ದೆಯ ಸೆಕ್ಷನ್ 64(ಎ), 64 (ಇ) ಮತ್ತು 64 (ಪಿ) ಅಡಿಯಲ್ಲಿ, ಸೆಕ್ಷನ್ 5(8), 5(9), ಮತ್ತು 12(1) ರ ಪ್ರಕಾರ, ಆಕ್ಷೇಪಾರ್ಹ ನಿಯಮಗಳನ್ನು ಹೊರಡಿಸಲಾಗಿದೆ. ಇದು ನಿಯಮಗಳನ್ನು ವ್ಯಾಖ್ಯಾನಿಸುತ್ತದೆ ಎಂದು ವಿವರಿಸಲಿದೆ.
ಅಧ್ಯಕ್ಷರು, ಮಂಡಳಿಯ ಸದಸ್ಯರು ಮತ್ತು ಸದಸ್ಯ ಕಾರ್ಯದರ್ಶಿಗಳಿಗೆ ನಿಯಮಗಳು ಮತ್ತು ಷರತ್ತುಗಳನ್ನು ವ್ಯಾಖ್ಯಾನಿಸುವ ವಿಭಾಗ 5(8), 5(9), ಮತ್ತು 12(1) ರ ಪ್ರಕಾರ, ಜಲ ಕಾಯ್ದೆಯ ವಿಭಾಗ 64(ಎ), 64(ಇ) ಮತ್ತು 64(ಪಿ) ಅಡಿಯಲ್ಲಿ ಆಕ್ಷೇಪಾರ್ಹ ನಿಯಮಗಳನ್ನು ಹೊರಡಿಸಲಾಗಿದೆ.
ಕೇಂದ್ರ ತಿದ್ದುಪಡಿಯನ್ನು ಅಳವಡಿಸಿಕೊಳ್ಳುವುದು ಕಡ್ಡಾಯವಲ್ಲ. ಕರ್ನಾಟಕವು 2024 ರ ತಿದ್ದುಪಡಿಯನ್ನು ಅಳವಡಿಸಿಕೊಂಡಿಲ್ಲ. ಆದ್ದರಿಂದ, ಅದು ಜಲ ಕಾಯ್ದೆಯ ಸೆಕ್ಷನ್ 64 ರ ಅಡಿಯಲ್ಲಿ ತನ್ನ ಅಧಿಕಾರವನ್ನು ನ್ಯಾಯಸಮ್ಮತವಾಗಿ ಬಳಸಿಕೊಂಡು ನಿಯಮಗಳನ್ನು ರೂಪಿಸಿದೆ ಎಂದು ವಿವರಣೆಯಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.
ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪರ ವಕೀಲರು, ಸರಕಾರ ಸುಪ್ರೀಂಕೋರ್ಟ್‌ನ ಯಾವುದೇ ನಿಯಮಗಳನ್ನು ಉಲ್ಲಂಘಿಸಿಲ್ಲ. ಕೇಂದ್ರ ಸರಕಾರ ರೂಪಿಸಿರುವ ನಿಯಮಗಳನ್ನು ಸಂಪೂರ್ಣವಾಗಿ ರಾಜ್ಯ ಸರಕಾರ ಅಳವಡಿಸಿಕೊಂಡಿಲ್ಲ, ಆದರೆ ತನ್ನದೇ ಆದ ಸಮಗ್ರ ನಿಯಮಾವಳಿಗಳನ್ನು ರೂಪಿಸಿ ಅದನ್ನು ಆಧರಿಸಿ ಮಂಡಳಿ ಅಧ್ಯಕ್ಷರನ್ನು ನೇಮಿಸಲಾಗಿದೆ. ಆ ಬಗ್ಗೆ ವಿವಿಧ ರಾಜ್ಯಗಳಲ್ಲಿಏನೇನು ನಿಯಮಗಳಿವೆ ಎಂಬುದನ್ನು ಸಂಗ್ರಹಿಸಿ ಅವುಗಳನ್ನು ಸಲ್ಲಿಸಲು ಸ್ವಲ್ಪ ಕಾಲಾವಕಾಶ ನೀಡಬೇಕೆಂದು ಕೋರಿದ್ದನ್ನು ಸ್ಮರಿಸಬಹುದು.