ನಕ್ಸಲ್‌ ನಿಗ್ರಹ ಪಡೆ ವಿಸರ್ಜನೆ; ಸಿಎಂ, ಗೃಹ ಸಚಿವರ ಮಧ್ಯೆ ಇಲ್ಲದ ತಾಳಮೇಳ, ತದ್ವಿರುದ್ಧ ಘೋಷಣೆ

ಬೆಂಗಳೂರು; ನಕ್ಸಲ್‌ ನಿಗ್ರಹ ಪಡೆ ವಿಸರ್ಜನೆ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಗೃಹ ಸಚಿವ ಡಾ ಜಿ ಪರಮೇಶ್ವರ್ ಮಧ್ಯೆ ತಾಳಮೇಳವೇ ಇಲ್ಲ!

 

ನಕ್ಸಲ್‌ ನಿಗ್ರಹ  ಪಡೆಯು ಚಾಲ್ತಿಯಲ್ಲಿದೆ ಮತ್ತು ಅದನ್ನು ಸದ್ಯಕ್ಕೆ ಮೊಟಕುಗೊಳಿಸುವುದಿಲ್ಲ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್‍‌ ಅವರು ಸದನದಲ್ಲೇ ಲಿಖಿತ ಉತ್ತರ ನೀಡಿದ್ದರೇ, ಇತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025-26ನೇ ಸಾಲಿನ ಬಜೆಟ್‌ ಭಾಷಣದಲ್ಲಿ ನಕ್ಸಲ್ ನಿಗ್ರಹ ಪಡೆಯನ್ನು ವಿಸರ್ಜಿಸಲಾಗುವುದು ಎಂದು ಘೋಷಣೆ ಮಾಡಿದ್ದಾರೆ.

 

ವಿಧಾನ ಪರಿಷತ್‌ ಸದಸ್ಯರಾದ ಕುಶಾಲಪ್ಪ ಅವರು 2025ರ ಮಾರ್ಚ್‌ 6ರಂದು ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿರುವ ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು ನಕ್ಸಲ್‌ ನಿಗ್ರಹ ಪಡೆಯು ಚಾಲ್ತಿಯಲ್ಲಿರುತ್ತದೆ ಮತ್ತು ಮತ್ತು ಸದ್ಯಕ್ಕೆ ಎಎನ್‌ಎಫ್‌ ಪಡೆಯನ್ನು ಮೊಟಕುಗೊಳಿಸಿರುವುದಿಲ್ಲ ಎಂದು ಲಿಖಿತ ಉತ್ತರ ಒದಗಿಸಿದ್ದಾರೆ.

 

ಗೃಹ ಸಚಿವರ ಉತ್ತರದಲ್ಲೇನಿದೆ?

 

ನಕ್ಸಲ್‌ ಚಟುವಟಿಕೆಯನ್ನು ದಮನಗೊಳಿಸಲು ಕಾರ್ಯನಿರ್ವಹಿಸುತ್ತಿದ್ದ ಎಎನ್‌ಎ ಫ್‌ ಕಾರ್ಯಪಡೆ ಇನ್ನೂ ಚಾಲ್ತಿಯಲ್ಲಿದೆಯೇ? ಅಥವಾ ಸದರಿ ನಕ್ಸಲ್‌ ನಿಗ್ರಹ ಪಡೆಯನ್ನು ಮೊಟಕುಗೊಳಿಸುವ ಪ್ರಸ್ತಾವನೆ ಸರ್ಕಾರದ ಮುಂದಿದೆಯೇ ಎಂದು ವಿಧಾನ ಪರಿಷತ್‌ ಸದಸ್ಯ ಕುಶಾಲಪ್ಪ ಅವರು ಪ್ರಶ್ನೆ ಕೇಳಿದ್ದರು. ಇದಕ್ಕೆ ಗೃಹ ಸಚಿವ ಡಾ ಜಿ ಪರಮೇಶ್ವರ್ ಅವರು  ‘ನಕ್ಸಲ್‌ ನಿಗ್ರಹಪಡೆಯು ಚಾಲ್ತಿಯಲ್ಲಿರುತ್ತದೆ. ಸದ್ಯಕ್ಕೆ ಎಎನ್‌ಎಫ್‌ ಪಡೆಯತನ್ನು ಮೊಟಕುಗೊಳಿಸಿರುವುದಿಲ್ಲ. ಎಎನ್‌ಎಫ್‌ ಕಾರ್ಯಪಡೆಗೆ ಹೊಸ ಸಿಬ್ಬಂದಿಗಳನ್ನು ನೇಮಕಾತಿ ಮಾಡಿಕೊಳ್ಳುವ  ಪ್ರಸ್ತಾವನೆ ಇರುವುದಿಲ್ಲ,’ ಎಂದು ಉತ್ತರ ಒದಗಿಸಿದ್ದಾರೆ.

 

 

ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗೃಹ ಸಚಿವರ ಉತ್ತರಕ್ಕೆ ತದ್ವಿರುದ್ಧವಾಗಿ ಘೋಷಣೆ ಮಾಡಿದ್ದಾರೆ.

 

ಬಜೆಟ್‌ನಲ್ಲಿನ ಘೋಷಣೆಯೇನು?

 

ನಮ್ಮ ಸರ್ಕಾರದ ಅವಧಿಯಲ್ಲಿ ಆರು ಜನ ಭೂಗತ ನಕ್ಸಲರು ನಕ್ಸಲ್‌ ಶರಣಾಗತಿ ಮತ್ತು ಪುನರ್ವಸತಿ ಯೋಜನೆ ಸಮಿತಿಯ ಮುಂದೆ ಶರಣಾಗಿರುತ್ತಾರೆ. ಇದರೊಂದಿಗೆ ರಾಜ್ಯವು ನಕ್ಸಲ್‌ ಮುಕ್ತವಾಗಿರುವುದರಿಂದ ನಕ್ಸಲ್‌ ನಿಗ್ರಹ ಪಡೆಯನ್ನು ವಿಸರ್ಜಿಸಲಾಗುವುದು.

 

ಶರಣಾಗಿರುವ ನಕ್ಸಲರನ್ನು ಸಮಾಜದ ಮುಖ್ಯ ವಾಹಿನಿಗೆ ಸೇರ್ಪಡೆಗೊಳಿಸಲು ಹಾಗೂ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಮೂಲ ಸೌಕರ್ಯ ಒದಗಿಸಲು 10 ಕೋಟಿ ರು ವಿಶೇಷ ಪ್ಯಾಕೇಜ್‌ ರೂಪಿಸಲಾಗುವುದು ಎಂದು ಘೋಷಣೆ ಮಾಡಿದ್ದಾರೆ.

 

 

2024ನೇ ಸಾಲಿನ ಮಾರ್ಚ್‌ ಮತ್ತು ಏಪ್ರಿಲ್‌ ತಿಂಗಳಿನಲ್ಲಿ ಕರ್ನಾಟಕ ರಾಜ್ಯದ ವಿಕ್ರಂಗೌಡ, ಮುಂಡಗಾರು ಲತಾ, ಸುಂದರಿ, ಜಯಣ್ಣ, ವನಜಾಕ್ಷಿ, ಕೋಟೆಹೊಂಡ ರವೀಂದ್ರ, ಕೇರಳ ರಾಜ್ಯದ ಟಿ ಎನ್‌ ಜಿಶಧಾ ಮತ್ತು ತಮಿಳುನಾಡು ರಾಜ್ಯದ ಕೆ ವಸಂತ ಹಾಗೂ ಸಂತೋಷ್‌ ಎಂಬ ನಕ್ಸಲರ ಚಲನವಲನಗಳು ಕರ್ನಾಟಕ ರಾಜ್ಯದ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲಾ ವ್ಯಾಪ್ತಿಯಲ್ಲಿ ಕಂಡು ಬಂದಿವೆ.   ಈ ಸಂಬಂಧ ವಿವಿಧ ಪೊಲೀಸ್‌ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿರುತ್ತವೆ ಎಂದು ಗೃಹ ಸಚಿವರ ಉತ್ತರದಲ್ಲಿ ವಿವರಿಸಲಾಗಿದೆ.

 

2024ರ ನವೆಂಬರ್‍‌ 18ರಂದು ಉಡುಪಿ ಜಿಲ್ಲೆಯ ಹೆಬ್ರಿ ಪೊಲೀಸ್‌ ಠಾಣೆ ವ್ಯಾಪ್ತಿಯ ಪೀತಬೈಲು ಅರಣ್ಯ ಪ್ರದೇಶದಲ್ಲಿ ಎಎನ್ಎಫ್‌ ಪೊಲೀಸರು ಮತ್ತು ನಕ್ಸಲರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಕರ್ನಾಟಕ ರಾಜ್ಯದ ನಕ್ಸಲ್ ನಾಯಕ ವಿಕ್ರಂ ಗೌಡ ಎಂಬುವರು ಮೃತಪಟ್ಟಿರುತ್ತಾರೆ.

 

 

2025ರ ಜನವರಿ 8ರಂದು ಕರ್ನಾಟಕ ರಾಜ್ಯದ ಮುಂಡಗಾರುಲತಾ, ಸುಂದರಿ, ಜಯಣ್ಣ ಮತ್ತು ವನಜಾಕ್ಷಿ, ಕೇರಳ ರಾಜ್ಯದ ಟಿ ಎನ್ ಜಿಶಾ ಮತ್ತು ತಮಿಳುನಾಡು ರಾಜ್ಯದ ಕೆ ವಸಂತ ಸೇರಿದಂತೆ ಒಟ್ಟು 6 ಜನ ನಕ್ಸಲರು ನಕ್ಸಲ್‌ ಶರಣಾಗತಿ ಮತ್ತು ಪುನರ್ವಸತಿ ಯೋಜನೆಯ ರಾಜ್ಯ ಸಮಿತಿಯ ಮುಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಶರಣಾಗತರಾಗಿದ್ದಾರೆ ಎಂದು ಮಾಹಿತಿ ಒದಗಿಸಿದ್ದಾರೆ.

 

ಅದೇ ರೀತಿ 2025ರ ಫೆ.1ರಂದು ಮತ್ತೊಬ್ಬ ಭೂಗತ ನಕ್ಸಲ್ ಕೋಟೆಹೊಂಡ ರವೀಂದ್ರ ಸಹ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮುಂದೆ ಶರಣಾಗತರಾಗಿದ್ದಾರೆ. ತೊಂಬಟ್ಟು ಲಕ್ಷ್ಮಿ ಸಹ ಉಡುಪಿ ಜಿಲ್ಲಾಧಿಕಾರಿ ಮುಂದೆ   ಶರಣಾಗತರಾಗಿದ್ದಾರೆ. ಕರ್ನಾಟಕ, ಕೇರಳ, ತಮಿಳುನಾಡು ರಾಜ್ಯಗಳಲ್ಲಿ ಸಕ್ರೀಯವಾಗಿ ನಕ್ಸಲ್‌ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದವರಲ್ಲಿ ಕೆಲವು ಎನ್‌ಕೌಂಟರ್‍‌ನಲ್ಲಿ ಹತರಾಗಿದ್ದು ಉಳಿದವರು ದಸ್ತಗಿರಿ ಮತ್ತು ಶರಣಾಗತರಾಗಿದ್ದಾರೆ ಎಂದು ವಿವರಿಸಿದ್ದಾರೆ.

 

 

ಪ್ರಸ್ತುತ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕರ್ನಾಟಕ ರಾಜ್ಯದ ನಕ್ಸಲ್‌ರಾದ ರಮೇಶ್‌, ಕೋಟೆ ಶೀನ, ಪರಗಿರಾಜನ್‌, ಬೋಯ ಆಂಜನೇಯಲು, ಬೋಯ ಅಂಕೀರಾಯ, ಬೋಯ ಒಬಳೇಶ್‌, ಎಂ ನಾಗರಾಜು ಅವರು ವಿಚಾರಣಾಧೀನ ಬಂಧಿಗಳಾಗಿದ್ದಾರೆ. ಕೇರಳ ರಾಜ್ಯದ ತ್ರಿಶೂರ್ ಜಿಲ್ಲೆಯ ವಿಯ್ಯುರೂ ಸೆಂಟ್ರಲ್‌ ಕಾರಾಗೃಹದಲ್ಲಿ ಕರ್ನಾಟಕ ರಾಜ್ಯದ ನಕ್ಸಲರಾದ ಬಿ ಜಿ ಕೃಷ್ಣಮೂರ್ತಿ, ಸಾವಿತ್ರಿ, ಶ್ರೀಮತಿ, ಸುರೇಶ್ ಅವರು ವಿಚಾರಣಾಧೀನ ಬಂಧಿಗಳಾಗಿದ್ದಾರೆ. ಅದೇ ರೀತಿ ತಮಿಳುನಾಡು ಕೊಯಂಬತ್ತೂರು ಕೇಂದ್ರ ಕಾರಾಗೃಹದಲ್ಲಿ ರಾಜ್ಯದ ನಕ್ಸಲ್ ಮೇಲ್ಸಂಕ ಶೋಭ ಅವರೂ ಸಹ ವಿಚಾರಣಾಧೀನ ಬಂಧಿಯಾಗಿದ್ದಾರೆ ಎಂಬ ಮಾಹಿತಿ ಒದಗಿಸಿರುವುದು ಉತ್ತರದಿಂದ ಗೊತ್ತಾಗಿದೆ.

SUPPORT THE FILE

Latest News

Related Posts