2,000 ಕೋಟಿ ರು ಭ್ರಷ್ಟಾಚಾರ, ಆಂಧ್ರ ಗುತ್ತಿಗೆದಾರರಿಗೆ ಮನ್ನಣೆ ಆರೋಪ; ಡಿಕೆಶಿ, ತುಷಾರ್‍‌ ವಿರುದ್ಧ ಶಾಸಕ ಮುನಿರತ್ನ ದೂರು

ಬೆಂಗಳೂರು; ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 2,000 ಕೋಟಿ ರು. ಮೊತ್ತದ ಅನುದಾನ ಹಂಚಿಕೆ ಮತ್ತು ಕಾಮಗಾರಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ ಎಂದು ಬಿಜೆಪಿ ಶಾಸಕ ಹಾಗೂ ಮಾಜಿ ಸಚಿವ ಮುನಿರತ್ನ ಅವರು ನೇರವಾಗಿ ಡಿ ಕೆ ಶಿವಕುಮಾರ್‍‌ ವಿರುದ್ಧ ಆರೋಪಿಸಿದ್ದಾರೆ. ಅಲ್ಲದೇ ಲೋಕಾಯುಕ್ತ, ಜಾರಿ ನಿರ್ದೇಶನಾಲಯ ಮತ್ತು ಸಿಬಿಐಗೆ ಲಿಖಿತ ದೂರು ಸಲ್ಲಿಸಿದ್ದಾರೆ.

 

ಡಿ ಕೆ ಶಿವಕುಮಾರ್‍‌, ಡಿ ಕೆ ಸುರೇಶ್‌ ಮತ್ತು ಶಾಸಕ ಮುನಿರತ್ನ ನಡುವಿನ ರಾಜಕೀಯ ಆರೋಪ ಮತ್ತು ಪ್ರತ್ಯಾರೋಪಗಳು ಕೇಳಿ ಬರುತ್ತಿರುವ ನಡುವೆಯೇ ಇದೀಗ ಡಿ ಕೆ ಶಿವಕುಮಾರ್‍‌ ವಿರುದ್ಧ ನೇರವಾಗಿ 2,000 ಕೋಟಿ ರು ಭ್ರಷ್ಟಾಚಾರದ ಆರೋಪ ಹೊರಿಸಿದ್ದಾರೆ.

 

ಈ ಸಂಬಂಧ ಲೋಕಾಯುಕ್ತ, ಸಿಬಿಐ ಮತ್ತು ಜಾರಿ ನಿರ್ದೇಶನಾಲಯಕ್ಕೆ ಪ್ರತ್ಯೇಕವಾಗಿ ದೂರು ಸಲ್ಲಿಸಿದ್ದಾರೆ.

 

ಈ ದೂರಿನ ಪ್ರತಿಗಳು ‘ದಿ ಫೈಲ್‌’ಗೆ ಲಭ್ಯವಾಗಿವೆ.

 

 

2,000 ಕೋಟಿ ರು ಅನುದಾನ ಹಂಚಿಕೆ ಮತ್ತು ಕಾಮಗಾರಿ ಟೆಂಡರ್‍‌ ಪ್ರಕ್ರಿಯೆಗಳಲ್ಲಿ ರಾಜ್ಯದ ಗುತ್ತಿಗೆದಾರರನ್ನು ಹೊರಗಿಡಲಾಗುತ್ತಿದೆ ಮತ್ತು ಈ ಟೆಂಡರ್‍‌ ಪ್ರಕ್ರಿಯೆಯಲ್ಲಿ ಆಂಧ್ರ ಮತ್ತು ತೆಲಂಗಾಣದ ರಾಜ್ಯದ ಗುತ್ತಿಗೆದಾರರಿಗೆ ಮಣೆ ಹಾಕಲಾಗುತ್ತಿದೆ. ಈಗಾಗಲೇ ಶೇ.15ರಷ್ಟು ಕಮಿಷನ್‌ನ ಹಣವು ಮುಂಗಡವಾಗಿ ಸಂದಾಯವಾಗಿದೆ ಎಂದೂ ದೂರಿನಲ್ಲಿ ಆಪಾದಿಸಿರುವುದು ಗೊತ್ತಾಗಿದೆ.

 

ಆಂಧ್ರ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಮತ್ತು ತೆಲಂಗಾಣ ಮುಖ್ಯಮಂತ್ರಿ ರೇವಂತ್‌ ರೆಡ್ಡಿ ಅವರ ಬೆಂಬಲಿಗರಿಗೆ ಮತ್ತು ಆಪೇಷ್ಠರಿಗೆ ಈ ಟೆಂಡರ್‍‌ ದೊರಕಿಸಿಕೊಡಲು ಯತ್ನಿಸುತ್ತಿದ್ದಾರೆ ಎಂದು ದೂರಿರುವ ಮುನಿರತ್ನ ಅವರು, ಈ ಪ್ರಕ್ರಿಯೆಗಳಲ್ಲಿ ಬಿಬಿಎಂಪಿಯ ಮುಖ್ಯ ಆಯುಕ್ತ ತುಷಾರ್‍‌ ಗಿರಿನಾಥ್‌ ಅವರೂ ಭಾಗಿಯಾಗಿದ್ದಾರೆ ಎಂದು ಆರೋಪಿಸಿರುವುದು ತಿಳಿದು ಬಂದಿದೆ.

 

ಬೆಂಗಳೂರು ನಗರಾಭಿವೃದ್ದಿಗೆ 2,000 ಕೋಟಿ ರು ಅನುದಾನ ಹಂಚಿಕೆ ಮಾಡಲು ಉದ್ದೇಶಿಸಲಾಗಿದೆ. ಇದರಲ್ಲಿ ವಿಶ್ವ ಬ್ಯಾಂಕ್‌ನಿಂದ ಸಾಲದ ರೂಪದಲ್ಲಿ ಪಡೆದ 1,700 ಕೋಟಿ ರು ಸಾರ್ವಜನಿಕರ ತೆರಿಗೆ ಹಣವಾದ 300 ಕೊಟಿ ರು ಒಳಗೊಂಡಿದೆ.

 

 

ಮಹದೇವಪುರ ವಿಧಾನಸಭೆ ಕ್ಷೇತ್ರಕ್ಕೆ 540 ಕೋಟಿ ರು., ಯಶವಂತಪುರ ಕ್ಷೇತ್ರಕ್ಕೆ 232 ಕೋಟಿ, ರಾಜರಾಜೇಶ್ವರಿ ನಗರ ಕ್ಷೇತ್ರಕ್ಕೆ 226 ಕೋಟಿ ರು., ಈಸ್ಟ್‌ ವೆಸ್ಟ್‌ ಸೌತ್‌ ವಿಭಾಗಳಿಗೆ 215 ಕೋಟಿ, ದಾಸರಹಳ್ಳಿ ಕ್ಷೇತ್ರಕ್ಕೆ 208 ಕೋಟಿ, ಬೆಂಗಳೂರು ದಕ್ಷಿಣ ಕ್ಷೇತ್ರಕ್ಕೆ 205 ಕೋಟಿ, ಬ್ಯಾಟರಾಯನಪುರ ಕ್ಷೇತ್ರಕ್ಕೆ 112 ಕೋಟಿ, ಯಲಹಂಕ ಕ್ಷೇತ್ರಕ್ಕೆ 81 ಕೋಟಿ ರು. ಅನುದಾನ ಹಂಚಿಕೆಯಾಗಲಿದೆ.

 

ಬಿಜೆಪಿ ಶಾಸಕ ಎಸ್‌ ಟಿ ಸೋಮಶೇಖರ್‍ ಅವರು ಪ್ರತಿನಿಧಿಸಿರುವ ಯಶವಂತಪುರ ಕ್ಷೇತ್ರದಲ್ಲಿ ಕೇವಲ 5 ವಾರ್ಡ್‌ಗಳಿದ್ದರೂ ಸಹ ಸುಮಾರು 232 ಕೋಟಿ ರು. ಹಂಚಿಕೆ ಮಾಡಲಾಗಿದೆ. ಹೆಚ್‌ ಡಿ ಕುಮಾರಸ್ವಾಮಿ ಅವರ ಎದುರಾಳಿಯಾಗಿ ಮಂಡ್ಯ ಲೋಕಸಭೆ ಕ್ಷೇತ್ರದ ಪರಾಜಿತ ಅಭ್ಯರ್ಥಿ ಕಾಂಗ್ರೆಸ್‌ನ ಸ್ಟಾರ್‍‌ ಚಂದ್ರು ಮಾಲೀಕತ್ವದ ಸ್ಟಾರ್‍‌ ಬಿಲ್ಡರ್ಸ್‌ ಗೆ ಉದ್ದೇಶಿತ ಯಶವಂತಪುರ ವಿಧಾನಸಭೆ ಕ್ಷೇತ್ರದ 232 ಕೋಟಿ ರು. ಅನುದಾನ ಹಂಚಿಕೆ ಮಾಡಲು ಚರ್ಚೆ ನಡೆದಿದೆ ಎಂದು ದೂರಿನಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

‘ಬೆಂಗಳೂರು ನಗರಕ್ಕೆ ನೀಡುವ ಅನುದಾನಕ್ಕೆ ಸಂಬಂಧಪಟ್ಟಂತೆ ಹೊರ ರಾಜ್ಯದ ಆಂಧ್ರ ಪ್ರದೇಶದ ಕೆಲವು ಬಲಿಷ್ಠ ಗುತ್ತಿಗೆದಾರರು ನಮ್ಮ ರಾಜ್ಯದ ಗುತ್ತಿಗೆದಾರರ ಮೇಲೆ ಸವಾರಿ ಮಾಡಲು ಬಂದಿದ್ದಾರೆ. ಸುಮಾರು ಶೇ. 15ರಷ್ಟು ಕಮಿಷನ್‌ ಹಣದ ಮುಂಗಡವನ್ನು ಸಂದಾಯ ಮಾಡಿದ್ದಾರೆ,’ ಎಂದು ಆರೋಪಿಸಿರುವುದು ತಿಳಿದು ಬಂದಿದೆ.

 

ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ತೆಲಂಗಾಣ ಮುಖ್ಯಮಂತ್ರಿ ರೇವಂತ್‌ ರೆಡ್ಡಿ ಅವರ ಸಂಬಂಧಿಗಳಿಗೆ ನೀಡಲು ಈ ಟೆಂಡರ್‍‌ ನೀಡಲು ಉದ್ದೇಶಿಸಲಾಗಿದೆ. ‘ಒಂದು ಮಾಹಿತಿ ಪ್ರಕಾರ ಚಂದ್ರಬಾಬು ನಾಯ್ಡು ಇವರ ಸರ್ಕಾರದಲ್ಲಿ ಶಾಸಕರಾಗಿರುವ ಮತ್ತು ಸಂಬಂಧಿಯಾದ ಜೆಎಂಸಿ ಕನ್ಸ್‌ಟ್ರಕ್ಷನ್ಸ್‌ ಹೆಸರಿಗೆ ಮತ್ತು ಇವರ ಜೊತೆಯಲ್ಲಿರುವ ಆಂಧ್ರ ಪ್ರದೇಶದ ಗುತ್ತಿಗೆದಾರರಿಗೆ 1,768 ಕೋಟಿ ರು. ಪ್ಯಾಕೇಜ್‌ನ ಕಾರ್ಯಾದೇಶ ನೀಡಲು ಉದ್ದೇಶಿಸಿದೆ. ಅಲ್ಲದೇ ಆರ್‍‌ ಎನ್‌ ಶೆಟ್ಟಿ ಗುತ್ತಿಗೆದಾರರು ಇವರ ಜತೆಯಲ್ಲಿಯೂ ಈಗಾಗಲೇ ಮಾತುಕತೆ ನಡೆಯುತ್ತಿದೆ,’ ಎಂದು ಆಪಾದಿಸಿರುವುದು ಗೊತ್ತಾಗಿದೆ.

 

ಇದಕ್ಕೆ ಸಂಬಂಧದಪಟ್ಟ ಸುಮಾರು ಶೇ. 15 ಕಮಿಷನ್‌ ಹಣದ ಮುಂಗಡವನ್ನು ತಲುಪಿಸಲಾಗಿದೆ. ಈ ಹಿಂದಿನ ಸರ್ಕಾರಗಳು ನಮ್ಮ ರಾಜ್ಯದ ಗುತ್ತಿಗೆದಾರರಿಗೆ ಅನುಕೂಲವಾಗುವ ಹಿತದೃಷ್ಟಿಯಿಂದ 50 ಕೋಟಿ ರು. ಮೊತ್ತದ ಟೆಂಡರ್‍‌ ಕರೆಯುತ್ತಿದ್ದರು. ಎಲ್ಲಾ ಗುತ್ತಿಗೆದಾರರು ಟೆಂಡರ್‍‌ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳುತ್ತಿದ್ದರು. ಆದರೆ ಹೊರ ರಾಜ್ಯದ ಆಂಧ್ರ ಪ್ರದೇಶದ ಬಲಿಷ್ಟ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡಲು ಹೊರಟಿದೆ.

 

‘ಇದಕ್ಕೆ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‍‌, ತುಷಾರ್‍‌ ಗಿರಿನಾಥ್‌ ಕಾರಣರಾಗಿರುತ್ತಾರೆ. ತುಷಾರ್‍‌ ಗಿರಿನಾಥ್‌ ಅವರು ರಾಜ್ಯದ ಗುತ್ತಿಗೆದಾರರಿಗೆ ನೇರವಾಗಿ ಟೆಂಡರ್‍‌ ಪ್ರಕ್ರಿಯೆಯಲ್ಲಿ ಭಾಗವಹಿಸದಂತೆ ಬಾಹ್ಯ ಒತ್ತಡ ತಂದು ಮೌಖಿಕವಾಗಿ ಸೂಚಿಸುತ್ತಿದ್ದಾರೆ,’ ಎಂದು ದೂರಿನಲ್ಲಿ ವಿವರಿಸಿದ್ದಾರೆ.

 

ಒಂದು ವೇಳೆ ರಾಜ್ಯದ ಗುತ್ತಿಗೆದಾರರು ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿದರೆ ಇವರಿಗೆ ಲಂಚ ಕೇಳಲು ಆಗುವುದಿಲ್ಲ. ಆದ ಕಾರಣ ತಾಂತ್ರಿಕ ದೋಷವನ್ನು ಮುಂದೊಡ್ಡ ಟೆಂಡರ್‍‌ ಪ್ರಕ್ರಿಯೆಯಲ್ಲಿ ‌ ಅನರ್ಹವಾಗುವಂತೆ ನೋಡಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿರುವುದು ತಿಳಿದು ಬಂದಿದೆ.

 

 

ಬಿಬಿಎಂಪಿಯ ಕೆಲವು ಅಧಿಕಾರಿ ನೌಕರರ ವರ್ಗವನ್ನು ಬಳಸಿಕೊಳ್ಳಲಿರುವ ಅಧಿಕಾರಿ ವರ್ಗವು ತಾವೇ ಕೆಲವು ಡಮ್ಮಿ ಗುತ್ತಿಗೆದಾರರನ್ನು ಟಂಡರ್‍‌ನಲ್ಲಿ ಭಾಗವಹಿಸುವಂತೆ ಮಾಡಿದ್ದಾರೆ. ತಮಗೆ ಬೇಕಾದ ಹೊರ ರಾಜ್ಯದ ಗುತ್ತಿಗೆದಾರರಿಗೆ ಕಾರ್ಯಾದೇಶ ನೀಡಲು ಸಂಚು ಮಾಡಿದ್ದಾರೆ. ಈ ಎಲ್ಲಾ ಅವ್ಯವಹಾರಗಳು ಮುಖ್ಯಂತ್ರಿ ಗಮನಕ್ಕೆ ಬಾರದಂತೆ ನೋಡಿಕೊಂಡಿದ್ದಾರೆ ಎಂದು ವಿವರಿಸಿದ್ದಾರೆ.

 

‘ಡಿ ಕೆ ಶಿವಕುಮಾರ್‍‌ ನೇರವಾಗಿ ಇದನ್ನು ನಿರ್ವಹಣೆ ಮಾಡುತ್ತಿದ್ದಾರೆ. ಇವರೊಂದಿಗೆ ಕೂಡಲೇ ಎಲ್‌ಒಸಿ ಪಡೆಯಲು ಶೇ.15ರಷ್ಟು ಕಮಿಷನ್‌ ಸಂದಾಯ ಮಾಡಿಸಿಕೊಳ್ಳಲಾಗುತ್ತಿದೆ. ಸೀನಿಯಾರಿಟಿ ಮತ್ತು ಬಿಆರ್ ನಿಯಮಗಳನ್ನು ಪಾಲಿಸುತ್ತಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.

SUPPORT THE FILE

Latest News

Related Posts