ಕೋಮು ದ್ವೇಷಕ್ಕೆ ಪ್ರಚೋದನೆ ಆರೋಪ; ಸಂಸದ ತೇಜಸ್ವಿ ಸೂರ್ಯ ವಿರುದ್ಧ ಎಸ್‌ಎಲ್‌ಪಿ ದಾಖಲಿಸಲು ನಿರ್ಧಾರ

ಬೆಂಗಳೂರು: ಜಮೀನಿನ ಪಹಣಿಯಲ್ಲಿ ವಕ್ಫ್‌ ಎಂದು ತೋರಿಸಿದ ಪರಿಣಾಮ ಹಾವೇರಿ ಜಿಲ್ಲೆಯ ಹಾನಗಲ್‌ನ ತಾಲೂಕಿನ ಹರನಗಿರಿ ರೈತ ಚನ್ನಪ್ಪ ಸಿ ಬಾಳಿಗಾಯಿ ಉರೂಫ್‌ ರುದ್ರಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಬಿತ್ತರಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಸಂಸದ ತೇಜಸ್ವಿ ಸೂರ್ಯ ಅವರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಲು ರಾಜ್ಯ ಕಾಂಗ್ರೆಸ್‌ ಸರ್ಕಾರವು ನಿರ್ಧರಿಸಿದೆ.

 

ರುದ್ರಪ್ಪ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ತೇಜಸ್ವಿ ಸೂರ್ಯ ಅವರ ವಿರುದ್ಧ ಹೂಡಿದ್ದ ಎಫ್ಐಆರ್‍‌ನ್ನು ಹೈಕೋರ್ಟ್‌ ಈಚೆಗಷ್ಟೇ ರದ್ದುಪಡಿಸಿತ್ತು. ಇದರ ಬೆನ್ನಲ್ಲೇ ಇದೀಗ ರಾಜ್ಯ ಕಾಂಗ್ರೆಸ್‌ ಸರ್ಕಾರವು ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಲು ಮುಂದಾಗಿರುವುದು ಮುನ್ನೆಲೆಗೆ ಬಂದಿದೆ.

 

ಸುಪ್ರೀಂ ಕೋರ್ಟ್‌ನಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸುವ ಸಂಬಂಧ ಒಳಾಡಳಿತ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಸ್‌ ಆರ್‍‌ ಉಮಾಶಂಕರ್‍‌, ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕರು (ಅಪರಾಧ), ಸರ್ಕಾರದ ಪ್ರಧಾನ ಕಾರ್ಯದರ್ಶಿ ಎಸ್‌ ರವಿ, ಅಭಿಯೋಗ ಮತ್ತು ಸರ್ಕಾರಿ ವ್ಯಾಜ್ಯಗಳ ಇಲಾಖೆ ನಿರ್ದೇಶಕರಾದ ಅಂಜಲಿದೇವಿ, ಲೋಕಾಯುಕ್ತ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ, ಸಿಐಡಿ ಪೊಲೀಸ್‌ ಮಹಾನಿರ್ದೇಶಕರು ಸೇರಿದಂತೆ ಇನ್ನಿತರೆ ಅಧಿಕಾರಿಗಳನ್ನೊಳಗೊಂಡ ಸಮಿತಿಯು ನಿರ್ಧರಿಸಿದೆ.

 

ಸಮಿತಿಯು ನಡೆಸಿದ್ದ ಸಭೆಯ ನಡವಳಿಗಳ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಪ್ರಕರಣಕ್ಕೆ ಸಂಬಂಧಿಸಿದಂತೆ ಹಾವೇರಿಯ ಸೆನ್‌ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ 2023ರ (ಬಿಎನ್‌ಎಸ್‌ ) ಕಲಂ 353 (2) (ವಿವಿಧ ಗುಂಪುಗಳ ನಡುವೆ ದ್ವೇಷ ಬಿತ್ತುವ ಮತ್ತು ದ್ವೇಷಕ್ಕೆ ಪ್ರಚೋದನೆ ನೀಡುವ ಸುಳ್ಳು ಸುದ್ದಿ ಹರಡಿದ ಆರೋಪ) ಅಡಿ ಎಫ್‌ಐಆರ್‍‌ ದಾಖಲಿಸಲಾಗಿತ್ತು. ಇದನ್ನು ಹೈಕೋರ್ಟ್‌ ರದ್ದುಪಡಿಸಿತ್ತು.

 

ಆದರೀಗ ವಿಶೇಷ ಮೇಲ್ಮನವಿ ಸಲ್ಲಿಸುವ ಸಂಬಂಧ ನಡೆದ ಸಮಿತಿ ಸಭೆಯು ಭಾರತೀಯ ನ್ಯಾಯ ಸಂಹಿತೆ 356(3)ಯನ್ನು ಮುಂದಿರಿಸಿದೆ.

 

ಬಿಎನ್‌ಎಸ್‌ನ ಸೆಕ್ಷನ್ 356 (3)ನಲ್ಲೇನಿದೆ?

 

ಧರ್ಮ, ಜನಾಂಗ, ಜನ್ಮಸ್ಥಳ, ನಿವಾಸ, ಭಾಷೆ, ಜಾತಿ ಅಥವಾ ಸಮುದಾಯ ಅಥವಾ ಯಾವುದೇ ಇತರ ಆಧಾರದ ಮೇಲೆ ವಿವಿಧ ಧಾರ್ಮಿಕ, ಜನಾಂಗೀಯ, ಭಾಷೆ ಅಥವಾ ಪ್ರಾದೇಶಿಕ ಗುಂಪುಗಳು ಅಥವಾ ಜಾತಿಗಳು ಅಥವಾ ಸಮುದಾಯಗಳ ನಡುವೆ ದ್ವೇಷ, ದ್ವೇಷ ಅಥವಾ ಕೆಟ್ಟ ಭಾವನೆಗಳನ್ನು ಉಂಟು ಮಾಡುವ ಉದ್ದೇಶದಿಂದ ಎಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ಸೇರಿದಂತೆ ಸುಳ್ಳು ಮಾಹಿತಿ, ವದಂತಿ ಅಥವಾ ಆತಂಕಕಾರಿ ಸುದ್ದಿಗಳನ್ನು ಒಳಗೊಂಡಿರುವ ಯಾವುದೇ ಹೇಳಿಕೆ ಅಥವಾ ವರದಿಯನ್ನು ಮಾಡುವ, ಪ್ರಕಟಿಸುವ ಅಥವಾ ಪ್ರಸಾರ ಮಾಡುವ ವ್ಯಕ್ತಿಯನ್ನು ಬಿಎನ್‌ಎಸ್‌ನ ಸೆಕ್ಷನ್ 356 (3) ಪ್ರಕಾರ ಶಿಕ್ಷಿಸಲು ಅವಕಾಶವಿದೆ.

 

ಆರೋಪಿಗಳು ಉನ್ನತ ಸ್ಥಾನದಲ್ಲಿರುವುದರಿಂದ, ಸಾರ್ವಜನಿಕ ವಲಯದಲ್ಲಿ ಹಂಚಿಕೊಳ್ಳುವ ಮೊದಲು ಮಾಹಿತಿಯನ್ನು ಪುರಾವೆಗಳೊಂದಿಗೆ ಪರಿಶೀಲಿಸುವ ಸಾಮಾಜಿಕ ಜವಾಬ್ದಾರಿ ಅವರ ಮೇಲಿದೆ. ವ್ಯಕ್ತಿಯ ಆತ್ಮಹತ್ಯೆ ಗಂಭೀರ ವಿಷಯ. ಇದು ಜಮೀನಿನ ಪಹಣಿಯಲ್ಲಿ ವಕ್ಫ್‌ ಎಂದು ತೋರಿಸಿದ ಪರಿಣಾಮ ಹಾವೇರಿ ಜಿಲ್ಲೆಯ ಹಾನಗಲ್‌ನ ತಾಲೂಕಿನ ಹರನಗಿರಿ ರೈತ ಚನ್ನಪ್ಪ ಸಿ ಬಾಳಿಗಾಯಿ ಉರೂಫ್‌ ರುದ್ರಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪಕ್ಕೆ ಸಂಬಂಧಿಸಿದೆ.

 

 

ಆದರೆ ಸಾಲ ತೀರಿಸಲು ಸಾಧ್ಯವಾಗದೇ ಇರುವ ಕಾರಣ ರುದ್ರಪ್ಪ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹಾವೇರಿ ಜಿಲ್ಲಾ ರಕ್ಷಣಾಧಿಕಾರಿ ಸ್ಪಷ್ಟನೆ ನೀಡಿದ ನಂತರ ಸಂಸದ ತೇಜಸ್ವಿ ಸೂರ್ಯ ಅವರು ಟ್ವೀಟ್‌ ಅಳಿಸಿ ಹಾಕಿದ್ದು ನಿಜವಾಗಿದೆ ಎಂದು ಸಮಿತಿಯ ಸಭೆಯಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.

 

ಸಂಸತ್ತಿನ ಸದಸ್ಯರು, ಸಾರ್ವಜನಿಕ ವಲಯದಲ್ಲಿ ಹಂಚಿಕೊಂಡ ಸುಳ್ಳು ಮಾಹಿತಿಯು ರಾಜ್ಯಾದ್ಯಂತ ಎರಡು ಸಮುದಾಯಗಳ ನಡುವೆ ದ್ವೇಷವನ್ನು ಉತ್ತೇಜಿಸಿತು. ಆದ್ದರಿಂದ, ಇದು ಸುಪ್ರೀಂ ಕೋರ್ಟ್‌ನಲ್ಲಿ ಎಸ್‌ಎಲ್‌ಪಿ ಸಲ್ಲಿಸಲು ಸೂಕ್ತವಾದ ಪ್ರಕರಣವಾಗಿದೆ ಎಂದು ಸಮಿತಿಯು ಅಭಿಪ್ರಾಯಿಸಿರುವುದು ಗೊತ್ತಾಗಿದೆ.

 

ತೇಜಸ್ವಿ ಸೂರ್ಯ ಸೇರಿ ಹಲವರ ವಿರುದ್ಧ ಕ್ರಿಮಿನಲ್‌ ಪ್ರಕರಣ; ಶಿಕ್ಷೆಯಿಂದ ಪಾರಾಗಿದ್ದವರಿಗೆ ಕಂಟಕ

 

ಎಸ್‌ಎಲ್‌ಪಿ ಪರಿಶೀಲನಾ ಸಭೆಯಲ್ಲಿ ಈ ಕುರಿತು ಚರ್ಚಿಸಲಾಗಿದೆ. ‘ಆರೋಪಿಯು ಸೂಕ್ಷ್ಮ ವಿಷಯದ ಬಗ್ಗೆ ಸಾರ್ವಜನಿಕವಾಗಿ ಸುಳ್ಳು ಮಾಹಿತಿಯನ್ನು ಟ್ವೀಟ್ ಮಾಡಿದ್ದಾರೆ ಎಂಬ ಪ್ರಕರಣದ ಬಗ್ಗೆ ಚರ್ಚಿಸಲಾಯಿತು. ಆದ್ದರಿಂದ ಸುಪ್ರೀಂ ಕೋರ್ಟ್ ಮುಂದೆ ವಿಶೇಷ ಮೇಲ್ಮನವಿ ಅರ್ಜಿಯನ್ನು ಸಲ್ಲಿಸಲು ಇದು ಸೂಕ್ತವಾದ ಪ್ರಕರಣ ಎಂದು ನಿರ್ಧರಿಸಲಾಗಿದೆ,’ ಎಂದು ಸಭೆಯ ನಡವಳಿಯಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.

 

ರುದ್ರಪ್ಪ ಎಂಬುವರು ಜಿಲ್ಲಾ ಬ್ಯಾಂಕ್‌ವೊಂದರಿಂದ 2,54,540 ರು. ಸಾಲವನ್ನು ಪಡೆದಿದ್ದರು. ಮತ್ತೊಂದು ಸಹಕಾರ ಬ್ಯಾಂಕ್‌ನಿಂದ 3.00 ಲಕ್ಷ ರು. ಮೊತ್ತದ ಬೆಳೆ ಸಾಲವನ್ನೂ ಪಡೆದಿದ್ದರು. ಹಾಗೂ ಐಸಿಐಸಿಐ ಬ್ಯಾಂಕ್‌ ಮತ್ತು ಕೈ ಸಾಲವನ್ನೂ ಪಡೆದಿದ್ದರು. ಆದರೆ ಸಾಲ ತೀರಿಸಲಾಗದೇ 2022ರಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಇವರ ಉತ್ತರಾಧಿಕಾರಿಗೆ 5ಲಕ್ಷ ರು ಪರಿಹಾರವನ್ನು ನೀಡಲು ಉಪ ವಿಭಾಗಾಧಿಕಾರಿಯು 2023ರ ಜುಲೈ 21ರಂದು ಅವಿರೋಧವಾಗಿ ತೀರ್ಮಾನಿಸಿದ್ದರು.

 

ಲಭ್ಯವಿರುವ ದಾಖಲೆಗಳಿಂದ ರುದ್ರಪ್ಪ ಅವರು ಸಾಲವನ್ನು ಪಾವತಿಸಲು ಸಾಧ್ಯವಾಗದ ಕಾರಣ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದು ಸ್ಪಷ್ಟವಾಗಿದೆ ಮತ್ತು ಇದು 2022 ರಿಂದ 2024 ರವರೆಗೆ ಈ ವಿಚಾರವು ನಿರ್ವಿವಾದದ ಸಂಗತಿಯಾಗಿತ್ತು.

 

 

ಹಾವೇರಿಯ ಜಿಲ್ಲಾ ಪೊಲೀಸ್ ಕಚೇರಿಯ ಸಾಮಾಜಿಕ ಮಾಧ್ಯಮ ಮೇಲ್ವಿಚಾರಣಾ ಕೋಶದ ಪೊಲೀಸ್ ಕಾನ್‌ಸ್ಟೆಬಲ್ ಸಲ್ಲಿಸಿದ ಸತ್ಯ ಪರಿಶೀಲನಾ ವರದಿಯು 2022 ರಲ್ಲಿ ನಡೆಸಿದ ಯುಡಿಆರ್ ಪ್ರಕ್ರಿಯೆಗಳಿಂದ ದೃಢೀಕರಿಸಲ್ಪಟ್ಟಿತ್ತು ಎಂದು ಸಮಿತಿ ಸಭೆಯಲ್ಲಿ ಉಲ್ಲೇಖಿಸಲಾಗಿದೆ.

 

ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕು ಅಲ್ಲಾಪುರ ಗ್ರಾಮದಲ್ಲಿ 4 ಎಕರೆ 36 ಗುಂಟೆ ವಿಸ್ತೀರ್ಣದ 31/1 ಎ ವಿಸ್ತೀರ್ಣದ ಭೂಮಿಯನ್ನು ವಕ್ಫ್ ಆಸ್ತಿ ಎಂದು ಆದೇಶಿಸಿತ್ತು. ಈ ಜಮೀನನ್ನು ಮುತವಲ್ಲಿಗೆ ಹಸ್ತಾಂತರಿಸುವಂತೆ ವಿಚಾರಣಾ ಅಧಿಕಾರಿ ಮತ್ತು ಹೆಚ್ಚುವರಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯು 2011ರ ಜೂನ್‌ 29ರಂದೇ ನಿರ್ದೇಶನ ನೀಡಿದ್ದರು.

 

ಇದನ್ನು ಪ್ರಶ್ನಿಸಿದ್ದ ಮೃತರ ತಂದೆ ಚನ್ನಪ್ಪ ತಾತ್ಕಾಲಿಕ ತಡೆಯಾಜ್ಞೆ ಅರ್ಜಿಯನ್ನು ಸಲ್ಲಿಸಿದ್ದರು. ಆದರೆ ಆ ಅರ್ಜಿಯು 2011 ರಲ್ಲಿ ವಜಾಗೊಂಡಿತ್ತು. ಇದನ್ನು ಮುತವಲ್ಲಿ ಹೆಸರಿನಲ್ಲೇ 2014ರಲ್ಲಿ ಮ್ಯುಟೇಷನ್‌ ಮಾಡಲಾಗಿತ್ತು. ಹಾಗಾಗಿ, 2011 ರಲ್ಲಿ ಸಕ್ಷಮ ಪ್ರಾಧಿಕಾರವು ಆಸ್ತಿಯ ಮೇಲೆ ತೆಗೆದುಕೊಂಡ ನಿರ್ಧಾರ ಮತ್ತು 2022 ರಲ್ಲಿ ನಡೆದ ಘಟನೆಯ ನಡುವೆ ಸಂಬಂಧವಿದೆ ಎಂದು ಹೇಳಲು ಸಾಧ್ಯವಿಲ್ಲ.

 

ಇದಲ್ಲದೆ, ಮೃತನ ತಂದೆ ಆರಂಭದಲ್ಲಿ ಮೊಕದ್ದಮೆಯನ್ನು ಮುನ್ನಡೆಸಿದ್ದರು. ಆ ನಂತರ ತಂದೆ ಅಥವಾ ಮಗ ಮುಂದೆ ಸಾಗಲಿಲ್ಲ. ಆದ್ದರಿಂದ, ಕಂದಾಯ ದಾಖಲೆಗಳು ವಕ್ಫ್ ಹೆಸರಿಗೆ ಬದಲಾದ ನಂತರ ಚನ್ನಪ್ಪನ ಮಗ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ತೀರ್ಮಾನಕ್ಕೆ ಬರಲು ಸಾಧ್ಯವಿಲ್ಲ. ಹೀಗಾಗಿ, ಮೃತನ ತಂದೆ ಆರ್ ಕನ್ನಡ ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ತಮ್ಮ ಮಗ ವಕ್ಫ್ ದೌರ್ಜನ್ಯಕ್ಕೆ ಬಲಿಯಾಗಿದ್ದಾನೆ ಎಂದು ನೀಡಿದ ಹೇಳಿಕೆಗೆ ಯಾವುದೇ ಅರ್ಥವಿಲ್ಲ ಎಂದೂ ಸಮಿತಿಯು ಸಭೆಯಲ್ಲಿ ಚರ್ಚಿಸಿರುವುದು ಗೊತ್ತಾಗಿದೆ.

 

ಪಹಣಿಯಲ್ಲಿ ವಕ್ಫ್ ಎಂದು ನಮೂದಾಗಿದ್ದಕ್ಕೆ ರೈತ ರುದ್ರಪ್ಪ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಮಾಧ್ಯಮ ವರದಿಗಳನ್ನು ಸಂಸದ ತೇಜಸ್ವಿ ಸೂರ್ಯ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿದ್ದರು. ಸುಳ್ಳು ಸುದ್ದಿ ಮಾಹಿತಿ ಹರಡಿದ ಆರೋಪದ ಮೇರೆಗೆ ತೇಜಸ್ವಿ ಸೂರ್ಯ ವಿರುದ್ಧ ಹಾವೇರಿ ಸೈಬರ್ ಕ್ರೈಂ ಠಾಣೆಯಲ್ಲಿ ಎಫ್​ಐಆರ್​ ದಾಖಲಿಸಲಾಗಿತ್ತು. ವರದಿ ಮಾಡಿದ್ದ ಎರಡು ಮಾಧ್ಯಮ ಸಂಸ್ಥೆಗಳ ಮೇಲೂ ದೂರು ದಾಖಲಾಗಿತ್ತು.

 

ತಮ್ಮ ಮೇಲೆ ಎಫ್ಐಆರ್ ದಾಖಲಾದ ವಿಚಾರಕ್ಕೆ ಹುಬ್ಬಳ್ಳಿ ನಗರದಲ್ಲಿ ಸಂಸದ ತೇಜಸ್ವಿ ಸೂರ್ಯ ಪ್ರತಿಕ್ರಿಯಿಸಿದ್ದರು. ‘ನಿನ್ನೆ ಜೆಪಿಸಿ ಬಂದಾಗ ಹಾವೇರಿಯ ರೈತನ ಅಹವಾಲು ಪಡೆದೆವು. ಅದರಲ್ಲಿ ರೈತನ ಜಮೀನು ವಕ್ಫ್​​ ಎಂದು ಬದಲಾಯಿಸಿದ ಕಾರಣ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮಾಧ್ಯಮಗಳಲ್ಲೂ ವರದಿ ಬಂದಿದೆ.‌ ರೈತನ ಕುಟುಂಬಸ್ಥರು ಕೂಡಾ ಮಾಧ್ಯಮದೆದುರು ಮಾತನಾಡಿದ್ದು ಪ್ರಸಾರವಾಗಿದೆ. ಒಂದು ವೆಬ್ ಕೂಡ ಈ ಸುದ್ದಿಯನ್ನು ಪ್ರಸಾರ ಮಾಡಿದೆ,’ ಎಂದು ಸಮರ್ಥಿಸಿಕೊಂಡಿದ್ದರು.

 

ಅದೇ ರೀತಿ ‘ಇದು ಮಾಧ್ಯಮದವರು ಕಾಲ್ಪನಿಕ, ಕಾದಂಬರಿ ಬರೆದಿರುವುದಲ್ಲ. ರೈತರ ಕುಟುಂಬದವರು ಬಂದು ಮನವಿ ಕೊಟ್ಟರು. ಬಳಿಕ ಮಾಧ್ಯಮದವರು ಈ ಬಗ್ಗೆ ಬರೆದಿದ್ದಾರೆ. ಅವರ ಸಂದರ್ಶನ ರೆಕಾರ್ಡ್​ ಆಗಿದೆ. ನಿನ್ನೆ ಸಂಜೆ ಕಾರ್ಯಕ್ರಮದಲ್ಲೂ ಪ್ರಸಾರವಾಗಿದೆ. ಇದಾಗಿಯೂ ಕೂಡ ಪೊಲೀಸ್​ ವ್ಯವಸ್ಥೆಯಿಂದ ಟ್ವೀಟ್​ ಬಂದ ಕಾರಣ ಗೌರವದಿಂದ ನನ್ನ ಟ್ವೀಟ್‌ ತೆಗೆದಿದ್ದೇನೆ. ಸರ್ಕಾರ ನನ್ನ ಧ್ವನಿ ಹತ್ತಿಕ್ಕಲು, ನನ್ನ ವಿರುದ್ಧವೇ ಎಫ್​ಐಆರ್ ಹಾಕಿದೆ. ಇದರ ಹಿಂದೆ ಪ್ರಕರಣವನ್ನು ಮುಚ್ಚಿ ಹಾಕುವ ಷಡ್ಯಂತ್ರ ಕಾಣುತ್ತಿದೆ,’ ಎಂದೂ ಎಂದು ಆರೋಪಿಸಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts