ಕೆರೆ ಒಡ್ಡು ಜಮೀನು; ಕಾನೂನು ಇಲಾಖೆ ಅಸಮ್ಮತಿಸಿದರೂ ಖಾಸಗಿ ಸಂಘಕ್ಕೆ ಗುತ್ತಿಗೆ ಮುಂದುವರಿಸಲು ಒತ್ತಡ?

ಬೆಂಗಳೂರು;  ಕೆರೆಯ ಒಡ್ಡು ಎಂದು ಕಂದಾಯ ದಾಖಲೆಯಲ್ಲಿ ವರ್ಗೀಕೃತವಾಗಿರುವ ಜಮೀನಿನ ಗುತ್ತಿಗೆ ಅವಧಿಯನ್ನು ಮುಂದುವರೆಸಲು ಅವಕಾಶವಿಲ್ಲ ಎಂದು ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆ ಮತ್ತು ಆರ್ಥಿಕ ಇಲಾಖೆಯು ನೀಡಿದ್ದ ಅಭಿಪ್ರಾಯವನ್ನು ಬದಿಗೊತ್ತಿ ಖಾಸಗಿ ಸಂಘಕ್ಕೆ  ಗುತ್ತಿಗೆ ಅವಧಿಯನ್ನು ಮುಂದುವರೆಸಲು ರಾಜ್ಯ ಕಾಂಗ್ರೆಸ್ ಸರ್ಕಾರವು ಮುಂದಾಗಿದೆ.

 

ಈ ಸಂಬಂಧ ಸಚಿವ ಸಂಪುಟಕ್ಕೆ ಕಂದಾಯ ಇಲಾಖೆಯು ಪ್ರಸ್ತಾವನೆ ಮಂಡಿಸಿದೆ. ಈ ಪ್ರಸ್ತಾವನೆ ಮಂಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ,  ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಅನುಮೋದಿಸಿದ್ದಾರೆ ಎಂದು ಗೊತ್ತಾಗಿದೆ. ಗುತ್ತಿಗೆ ಅವಧಿಯನ್ನು ಮುಂದುವರೆಸಲು  ಗೃಹ ಸಚಿವ ಡಾ ಜಿ ಪರಮೇಶ್ವರ ಅವರು ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆ ಎಂದು ತಿಳಿದು ಬಂದಿದೆ.

 

ಹರ್ತಿ ಪತ್ತಿನ ಸಹಕಾರ ಸಂಘಕ್ಕೆ ನೀಡಿರುವ ಜಮೀನಿನ ಗುತ್ತಿಗೆ ಅವಧಿಯನ್ನು ಮುಂದುವರೆಸಲು ಸಚಿವ ಸಂಪುಟಕ್ಕೆ ಕಂದಾಯ ಇಲಾಖೆಯು  ಕಡತವನ್ನು ಮಂಡಿಸಿದೆ. ಇಂದು ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದೆ ಎಂದು ಗೊತ್ತಾಗಿದೆ.

 

 

ಯಾವುದೇ ಇಲಾಖೆ, ಸಂಸ್ಥೆಗೆ ಉಚಿತವಾಗಿ ಸಿ ಎ ನಿವೇಶನವನ್ನು ಮಂಜೂರು ಮಾಡಲು ಅವಕಾಶವಿರದಿದ್ದರೂ ಕೋಲಾರ ಜಿಲ್ಲೆಯ ಕುರುಬರ ಸಂಘಕ್ಕೆ ಸಿ ಎ ನಿವೇಶನವನ್ನು ಉಚಿತವಾಗಿ ಮಂಜೂರು ಮಾಡಲು ಸರ್ಕಾರ ಮುಂದಾಗಿರುವ ಬೆನ್ನಲ್ಲೇ ತುಮಕೂರಿನ ಹರ್ತಿ ಪತ್ತಿನ ಸಹಕಾರ ಸಂಘದ ಪ್ರಕರಣವು ಮುನ್ನೆಲೆಗೆ ಬಂದಿದೆ.

 

ತುಮಕೂರು ಜಿಲ್ಲೆ ತುಮಕೂರು ತಾಲೂಕಿನ ಕಸಬಾ ಹೋಬಳಿಯ ತುಮಕೂರು ಗ್ರಾಮದ ಸರ್ವೆ ನಂಬರ್‍‌ 120ರಲ್ಲಿನ ಒಂಬತ್ತು ಗುಂಟೆ ಜಮೀನಿನ ಗುತ್ತಿಗೆ ಅವಧಿ ಮುಂದುವರೆಸಲು ಕಂದಾಯ ಇಲಾಖೆಯು ಸಚಿವ ಸಂಪುಟಕ್ಕೆ ಕಡತ (ಸಂಖ್ಯೆ; ಕಂಇ 53 ಎಲ್‌ಜಿಟಿ.2023)  ಮಂಡಿಸಿದೆ. ಈ ಸಂಘಕ್ಕೆ 9 ಗುಂಟೆ ಜಮೀನನ್ನು 20 ವರ್ಷದ ಅವಧಿಗೆ ಗುತ್ತಿಗೆ ಆಧಾರದ ಮೇಲೆ ಸರ್ಕಾರವು ಮಂಜೂರಾತಿ ನೀಡಿತ್ತು ಎಂದು ತಿಳಿದು ಬಂದಿದೆ.

 

ಈ ಸರ್ವೆ ನಂಬರ್‍‌ನಲ್ಲಿ ಒಟ್ಟು 13-03 ಎಕರೆ ವಿಸ್ತೀರ್ಣದ ಜಮೀನಿದೆ. ಇದೇ ಜಮೀನಿನಲ್ಲಿ   ಸಾರ್ವಜನಿಕ ರಸ್ತೆ, ಮಹಾತ್ಮಗಾಂಧಿ ಚಾರಿಟಬಲ್‌ ಟ್ರಸ್ಟ್, ಎಂ ಜಿ ಕಾಂಪ್ಲೆಕ್ಸ್, ಇಂದಿರಾ ನಗರದ ಹಳೆಯ ಗುಜರಿ ಅಂಗಡಿಗಳು, ಸಾರ್ವಜನಿಕ ಶೌಚಾಲಯ, ಡಾ ಗುಬ್ಬಿ ವೀರಣ್ಣ ರಂಗಮಂದಿರ,  ರಂಗಮಂದಿರ ಹಿಂಭಾಗದ ರಸ್ತೆ, ವೀರ ಸೌಧ, ಕನ್ನಡ ಸಂಸ್ಕೃತಿ ಇಲಾಖೆ, ಪತ್ರಿಕಾ ಭವನ, ಕೆಎಸ್‌ಆರ್‍‌ಟಿಸಿ ಡಿಪೋ ಮತ್ತು ಜಿಲ್ಲಾ ಸಾರ್ವಜನಿಕ ಆಸ್ಪತ್ರೆ, ಶ್ರೀ ಹರ್ತಿ ಪತ್ತಿನ ಸಹಕಾರ ಸಂಘಕ್ಕೆ ವಿವಿಧ ವಿಸ್ತೀರ್ಣದ  ಜಮೀನುಗಳನ್ನು ಮಂಜೂರು ಮಾಡಿತ್ತು ಎಂದು ಗೊತ್ತಾಗಿದೆ.

 

ಅಲ್ಲದೇ ಈ ಜಮೀನಿಗೆ ಸರ್ಕಾರಿ ಮಾರ್ಗಸೂಚಿ ದರದ ಪ್ರಕಾರ ಎಕರೆಗೆ 2,00,00,000 ರು.ಗಳಿವೆ. ಒಟ್ಟು 9 ಗುಂಟೆಗೆ 45,00,000 ಲಕ್ಷ ರು.ಗಳಾಗಲಿದೆ ಎಂದು  ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ವರದಿ ನೀಡಿದ್ದಾರೆ ಎಂದು  ತಿಳಿದು ಬಂದಿದೆ.

 

ಆದರೀಗ ಶ್ರೀ ಹರ್ತಿ ಪತ್ತಿನ ಸಹಕಾರ ಸಂಘಕ್ಕೆ ನೀಡಿದ್ದ ಜಮೀನಿನ ಗುತ್ತಿಗೆ ಅವಧಿಯನ್ನು ಮುಂದಿನ 30 ವರ್ಷಗಳ ಅವಧಿಗೆ  ಮುಂದುವರೆಸಲು ಕಾನೂನು ಇಲಾಖೆಯು ಒಂದು ವರ್ಷದ ಹಿಂದೆಯೇ  ಅಸಮ್ಮತಿ ವ್ಯಕ್ತಪಡಿಸಿದೆ.

 

‘ಪ್ರಸ್ತಾಪಿತ ಜಮೀನು ಕಂದಾಯ ದಾಖಲೆಯಲ್ಲಿ ಕೆರೆಯ ಒಡ್ಡು ಎಂದು ವರ್ಗೀಕೃತವಾಗಿದೆ. ಸರ್ಕಾರದ ಸುತ್ತೋಲೆ ಪ್ರಕಾರ (ಸಂಖ್ಯೆ; ಕಂಇ 46 ಎಲ್ ಜಿ ಪಿ 2017, ದಿನಾಂಕ 14.06.2018) ತುಮಕೂರು ಗ್ರಾಮದ ಶ್ರೀ ಹರ್ತಿ ಪತ್ತಿನ ಸಹಕಾರ ಸಂಘಕ್ಕೆ ಗುತ್ತಿಗೆ ಅವಧಿಯನ್ನು ಮುಂದುವರೆಸಲು ಅವಕಾಶವಿರುವುದಿಲ್ಲ,’ ಎಂದು ಕಾನೂನು ಇಲಾಖೆಯು ತನ್ನ ಅಭಿಪ್ರಾಯವನ್ನು ನೀಡಿರುವುದು ಗೊತ್ತಾಗಿದೆ.

 

ಆರ್ಥಿಕ ಇಲಾಖೆಯೂ ಕಾನೂನು ಇಲಾಖೆಯು ಅಭಿಪ್ರಾಯವನ್ನೇ ಎತ್ತಿ ಹಿಡಿದಿದೆ. ಈ ಸಂಬಂಧ ಕಂದಾಯ ಇಲಾಖೆಗೆ  2024ರ ಫೆ.21ರಂದೇ ತನ್ನ ಅಭಿಪ್ರಾಯವನ್ನು (FD 180 EXP-7/2024 DATED 21.02.2024)  ತಿಳಿಸಿದೆ.

 

‘ಆಡಳಿತ ಇಲಾಖೆಯ ಪ್ರಸ್ತಾವನೆಯನ್ನು ಪರಿಶೀಲಿಸಲಾಗಿದೆ. ಪ್ರಸ್ತಾಪಿತ ಜಮೀನು  ಕೆರೆಯ ಒಡ್ಡು ಎಂದು ವರ್ಗೀಕೃತವಾಗಿರುವ ಕಾರಣ ಗುತ್ತಿಗೆ ಅವಧಿಯನ್ನು ಮುಂದುವರೆಸಲು ಅವಕಾಶವಿಲ್ಲ ಎಂದು ಕಾನೂನು ಇಲಾಖೆಯು ಅಭಿಪ್ರಾಯ ನೀಡಿರುವ ಹಿನ್ನೆಲೆಯಲ್ಲಿ ಆರ್ಥಿಕ ಇಲಾಖೆಯ ಸಹಮತಿಯೂ ಇಲ್ಲವೆಂದು ಆಡಳಿತ ಇಲಾಖೆಗೆ ತಿಳಿಸಲಾಗಿದೆ,’ ಎಂದು ಸಚಿವ ಸಂಪುಟ ಟಿಪ್ಪಣಿ ಹಾಳೆಯಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.

 

ಕಾನೂನು ಮತ್ತು ಆರ್ಥಿಕ ಇಲಾಖೆಯು ನೀಡಿದ್ದ ಅಭಿಪ್ರಾಯಗಳೆರಡನ್ನೂ ಪರಿಶೀಲಿಸಿರುವ ಕಂದಾಯ ಇಲಾಖೆಯು ಪುರಸಭೆ,ನಗರಸಭೆ, ನಗರಪಾಲಿಕೆ ವ್ಯಾಪ್ತಿಯೊಳಗೆ ಯಾವುದೇ ಖಾಸಗಿ ಸಂಸ್ಥೆಗಳಿಗೆ ಜಮೀನು ಮಂಜೂರು ಮಾಡಲು ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ಪ್ರಕಾರ ಅವಕಾಶವಿಲ್ಲ. ಹೀಗಾಗಿ ಈ ಪ್ರಸ್ತಾವನೆಯನ್ನು ತಿರಸ್ಕರಿಸಬಹುದು ಎಂದು ಸರ್ಕಾರಕ್ಕೆ ಮೊದಲ ಆಯ್ಕೆ ನೀಡಿದೆ.

 

ಅದೇ ರೀತಿ ಪರಿಶಿಷ್ಟ ಪಂಗಡಗಳ ಸಮುದಾಯದ ಸಾಮಾಜಿಕ ಮತ್ತು ಆರ್ಥಿಕ ಅಭಿವೃದ್ದಿ ದೃಷ್ಟಿಯಿಂದ ಈ ಸಂಘಕ್ಕೆ ನೀಡಿದ್ದ ಜಮೀನಿನ ಗುತ್ತಿಗೆ ಅವಧಿಯನ್ನು 30 ವರ್ಷಗಳ ಅವಧಿಗೆ ಮುಂದುವರೆಸಲು ಅನುಮೋದನೆ ನೀಡಬಹುದು ಎಂದು ಕಂದಾಯ ಇಲಾಖೆಯು ಕೋರಿರುವುದು ಗೊತ್ತಾಗಿದೆ.

 

ಉಚಿತವಾಗಿ ಮಂಜೂರು ಮಾಡಲು ನಿಯಮಗಳಲ್ಲಿ ಅವಕಾಶವಿರದಿದ್ದರೂ ಸಹ ಕೋಲಾರ ಜಿಲ್ಲೆಯ ಕುರುಬರ ಸಂಘಕ್ಕೆ ಸಿ ಎ ನಿವೇಶನವನ್ನು ಮಂಜೂರು ಮಾಡಲು  ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಅವರು ಸಚಿವ ಸಂಪುಟಕ್ಕೆ ಪ್ರಸ್ತಾವನೆ ಮಂಡಿಸಿ ಎಂದು ಆದೇಶಿಸಿದ್ದರು.

 

ವಿಶೇಷವೆಂದರೇ ನಗರಾಭಿವೃದ್ಧಿ ಇಲಾಖೆಯ ಈ ಪ್ರಸ್ತಾವನೆಗೆ ಆರ್ಥಿಕ ಇಲಾಖೆಯು ವಿರೋಧ ವ್ಯಕ್ತಪಡಿಸಿದೆ. ಉಚಿತವಾಗಿ ನಿವೇಶನ ಮಂಜೂರು ಮಾಡಿದಲ್ಲಿ ಪ್ರಾಧಿಕಾರಕ್ಕೆ ಆರ್ಥಿಕವಾಗಿ ತುಂಬಾ ನಷ್ಟವುಂಟಾಗುತ್ತದೆ ಎಂದು ಸ್ಪಷ್ಟ ಅಭಿಪ್ರಾಯ ನೀಡಿದ್ದರೂ ಸಹ ನಗರಾಭಿವೃದ್ಧಿ ಇಲಾಖೆಯು ಸಚಿವ ಸಂಪುಟಕ್ಕೆ ಮಂಡಿಸಿತ್ತು.

 

ಕುರುಬರ ಸಂಘಕ್ಕೆ ಉಚಿತವಾಗಿ ಸಿಎ ನಿವೇಶನ; ಬೊಕ್ಕಸಕ್ಕೆ ನಷ್ಟವೆಂದಿದ್ದರೂ ಪ್ರಸ್ತಾವನೆ ಸಲ್ಲಿಕೆ

 

ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರ ವ್ಯಾಪ್ತಿಯಲ್ಲಿನ ನಾಗರಿಕ ಸೌಲಭ್ಯ ನವಿಏಶನವನ್ನು ಕೋಲಾರ ಕುರುಬರ ಸಂಘದ ಉದ್ದೇಶಿತ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕಾಗಿ ಉಚಿತವಾಗಿ ಮಂಜೂರು ಮಾಡಲು ಕುರುಬರ ಸಂಘವು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತ್ತು. ಈ ಬಗ್ಗೆ ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತರಿಗೆ ಜಿಲ್ಲಾಧಿಕಾರಿಯು ಸೂಕ್ತ ಕ್ರಮಕ್ಕಾಗಿ ಸೂಚಿಸಿದ್ದರು.

 

 

ಆದರೆ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ (ನಾಗರಿಕ ಸೌಲಭ್ಯ ನವಿಏಶನಗಳ ಹಂಚಿಕೆ) ನಿಯಮ 1991ರ ನಿಯಮ 7(1)(2) ಮತ್ತು (3)ರ ಅನ್ವಯ ಸಂಘ ಸಂಸ್ಥೆಗಳಿಗೆ ನಾಗರೀಕ ಸೌಲಭ್ಯ ನಿವೇಶನಗಳನ್ನು ಮಂಜೂರು ಮಾಡಲು ಕೆಲವು ಮಾನದಂಡಗಳಿವೆ. ಆದರೆ ಯಾವುದೇ ಇಲಾಖೆ, ಸಂಸ್ಥೆಗೆ ಉಚಿತವಾಗಿ ನಿವೇಶನ ಮಂಜೂರು ಮಾಡಲು ಅವಕಾಶ ಕಲ್ಪಿಸಿರುವುದಿಲ್ಲ.

 

 

ಕೋಲಾರ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಬರುವ ನಾಗರೀಕ ನಿವೇಶನವನ್ನು ಕುರುಬ ಸಮುದಾಯದ ವಿದ್ಯಾರ್ಥಿ ನಿಲಯ ನಿರ್ಮಾಣಕ್ಕಾಗಿ ಉಚಿತವಾಗಿ ಮಂಜೂರು ಮಾಡಿದಲ್ಲಿ ಪ್ರಾಧಿಕಾರಕ್ಕೆ ಆರ್ಥಿಕವಾಗಿ ತುಂಬಾ ನಷ್ಟವಾಗುತ್ತದೆ,’ ಎಂದು ಆರ್ಥಿಕ ಇಲಾಖೆಯು ತನ್ನ ಅಭಿಪ್ರಾಯ ನೀಡಿದೆ.

ರಾಷ್ಟ್ರೋತ್ಥಾನ ಪರಿಷತ್‌, ಬಿಜೆಪಿ ಕಚೇರಿಗೆ ಗೋಮಾಳ, ಜಮೀನು ಹಂಚಿಕೆ ಸುತ್ತ ‘ದಿ ಫೈಲ್‌’ನ 13 ವರದಿಗಳು

ಆದರೂ ಸಚಿವ ಬೈರತಿ ಸುರೇಶ್‌ ಅವರು ನಗರಾಭಿವೃದ್ಧಿ ಇಲಾಖೆಯು ಸಚಿವ ಸಂಪುಟದ ಮುಂದೆ ಪ್ರಸ್ತಾವನೆ ಮಂಡಿಸಲು ಅನುಮೋದಿಸಿರುವುದನ್ನು ಸ್ಮರಿಸಬಹುದು.

Your generous support will help us remain independent and work without fear.

Latest News

Related Posts