ಆದಿ ಯೋಗಿ ಶಿವ ದೇಗುಲಕ್ಕೆ ರಸ್ತೆ; ಆಶ್ರಯ ಜಮೀನು, ಗೋಮಾಳದ ಮೇಲೆ ಕಣ್ಣು ಹಾಕಿದ ಇಶಾ ಫೌಂಡೇಷನ್

ಬೆಂಗಳೂರು; ಆದಿ ಯೋಗಿ ಶಿವ ದೇವಾಲಯ ನೋಡಲು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿರುವ ಭಕ್ತಾದಿಗಳಿಗಾಗಿ ರಸ್ತೆ ನಿರ್ಮಾಣ ಮಾಡಲು  ಮುಂದಾಗಿರುವ  ಇಶಾ ಫೌಂಡೇಷನ್‌ ಟ್ರಸ್ಟ್‌, ಆಶ್ರಯ ಉದ್ದೇಶಕ್ಕಾಗಿ ಕಾಯ್ದಿರಿಸಿದ ಜಮೀನು ಮತ್ತು ಗೋಮಾಳದ ಮೇಲೆ ಕಣ್ಣು ಹಾಕಿರುವುದು ಇದೀಗ ಬಹಿರಂಗವಾಗಿದೆ.

 

ರಸ್ತೆ ನಿರ್ಮಾಣ ಮಾಡಲು ಮುಂದಾಗಿದ್ದ ಇಶಾ ಫೌಂಡೇಷನ್‌ ಈ ಕುರಿತು ಜಿಲ್ಲಾಡಳಿತಕ್ಕೆ ಕೋರಿಕೆಯನ್ನೂ ಸಲ್ಲಿಸಿತ್ತು. ಈ ಕೋರಿಕೆಯಲ್ಲಿ ಉಲ್ಲೇಖಿಸಿದ್ದ ಸರ್ವೆ ನಂಬರ್‍‌ಗಳಲ್ಲಿನ ಜಮೀನು ಗೋಮಾಳ ಮತ್ತು ಆಶ್ರಯ ಉದ್ದೇಶಕ್ಕೆ ಕಾಯ್ದಿರಿಸಿದ್ದ ಜಮೀನಾಗಿದೆ. ಈ ಸಂಬಂಧ ಚಿಕ್ಕಬಳ್ಳಾಪುರ ತಹಶೀಲ್ದಾರ್‍‌ ಮತ್ತು ಉಪ ವಿಭಾಗಾಧಿಕಾರಿಯವರು ಜಿಲ್ಲಾಧಿಕಾರಿಗೆ ವರದಿ ಸಲ್ಲಿಸಿದ್ದರು.

 

ಆಶ್ರಯ ಯೋಜನೆಗಾಗಿ ಕಾಯ್ದಿರಿಸಿರುವ ಸರ್ಕಾರಿ ಪ್ರದೇಶ ಮತ್ತು ಗೋಮಾಳವಿರುವ ಜಮೀನುಗಳಲ್ಲೇ ಹಾದು ಹೋಗಿರುವ ಸಾರ್ವಜನಿಕ ರಸ್ತೆಯನ್ನು ಕಂದಾಯ ಇಲಾಖೆ ಹೆಸರಿನಲ್ಲೇ ಉಳಿಸಿಕೊಂಡು ರಸ್ತೆ ನಿರ್ಮಾಣ ಮತ್ತು ಅಭಿವೃದ್ಧಿಪಡಿಸಲು ಮುಂದಾಗಿರುವ ಈಶಾ ಫೌಂಡೇಷನ್‌ ಟ್ರಸ್ಟ್‌ಗೆ ಜಮೀನು ನೀಡಬಹುದು ಎಂದು ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಅವರು ಪ್ರಾದೇಶಿಕ ಆಯುಕ್ತರಿಗೆ ವರದಿ ಸಲ್ಲಿಸಿದ್ದರು.

 

ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರಿಗೆ 2024ರ ಜೂನ್‌ 19ರಂದು ನೀಡಿದ್ದ ವರದಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

 

ಚಿಕ್ಕಬಳ್ಳಾಪುರ ಉಪ ವಿಭಾಗಾಧಿಕಾರಿ, ಅರಣ್ಯ ವ್ಯವಸ್ಥಾಪನಾಧಿಕಾರಿಗಳು ತಮ್ಮ ಹಂತದಲ್ಲಿ ನೀಡಿದ್ದ ವರದಿ ಮತ್ತು ದಾಖಲೆಗಳನ್ನಾಧರಿಸಿ ಜಿಲ್ಲಾಧಿಕಾರಿಯು ಪ್ರಾದೇಶಿಕ ಆಯುಕ್ತರಿಗೆ ವರದಿ ಸಲ್ಲಿಸಿದ್ದರು. ಅಲ್ಲದೇ ಈ ಸಂಬಂಧ ಕಂಡು ಬಂದಿದ್ದ ನ್ಯೂನತೆಗಳಿಗೆ ಇದೇ ವರದಿಯಲ್ಲಿ ಸ್ಪಷ್ಟೀಕರಣ ಮತ್ತು ಪರಿಶೀಲನಾ ಅಭಿಪ್ರಾಯ ಸಮೇತ ಮರು ಪ್ರಸ್ತಾವನೆ ಸಲ್ಲಿಸಿದ್ದರು ಎಂಬುದು ತಿಳಿದು ಬಂದಿದೆ.

 

ಇಶಾ ಫೌಂಡೇಷನ್‌ ಕೋರಿರುವ ಆವಲಗುರ್ಕಿ ಗ್ರಾಮದ ಸರ್ವೆ ನಂಬರ್‍‌ 174ರಲ್ಲಿನ 4-23 ಎಕರೆ, ಕರ್ವನಹಳ್ಳಿ ಗ್ರಾಮದ ಸರ್ವೆ ನಂಬರ್‍‌ 175ರಲ್ಲಿನ 1-18 ಎಕರೆ ಜಮೀನು, ಪಹಣಿ ಪ್ರಕಾರ ಗೋಮಾಳ ಮತ್ತು ಗೋ ಕಾಡು ಜಮೀನಾಗಿದೆ. ಈ ಎರಡೂ ಗ್ರಾಮಗಳಲ್ಲಿರುವ ಜಾನುವಾರುಗಳಿಗೆ ಸರ್ಕಾರಿ ನಿಯಮದಂತೆ ಗೋಮಾಳ ಜಮೀನು ಲಭ್ಯವಿರುವ ಬಗ್ಗೆ ಕರ್ನಾಟಕ ಭೂ ಕಂದಾಯ ಅಧಿನಿಯಮ 1966ರ ನಿಯಮ 97(1)(2) ಮತ್ತು (3)ರಂತೆ ಪರಿಶೀಲಿಸಿ ವರದಿ ಸಲ್ಲಿಸಿರಲಿಲ್ಲ ಎಂಬ ನ್ಯೂನತೆಯನ್ನು ಪ್ರಾದೇಶಿಕ ಆಯುಕ್ತರು ಪತ್ತೆ ಹಚ್ಚಿದ್ದರು.

 

 

ಇದಕ್ಕೆ ಚಿಕ್ಕಬಳ್ಳಾಪುರ ಉಪ ವಿಭಾಗಾಧಿಕಾರಿಯವರು ಸ್ಪಷ್ಟೀಕರಣ ನೀಡಿದ್ದರು. ಆವಲಗುರ್ಕಿ ಗ್ರಾಮದಲ್ಲಿ 338 ದೊಡ್ಡ ರಾಸುಗಳು, 466 ಚಿಕ್ಕ ರಾಸುಗಳು ಸೇರಿ ಒಟ್ಟಾರೆ 804 ರಾಸುಗಳಿವೆ. ಕರ್ವನಹಳ್ಳಿ ಗ್ರಾಮದಲ್ಲಿ 87 ದೊಡ್ಡ ರಾಸು, 05 ಚಿಕ್ಕ ರಾಸು ಸೇರಿ ಒಟ್ಟು 92 ರಾಸುಗಳಿವೆ. ಅಲ್ಲದೇ ಆವಲಗುರ್ಕಿ ಗ್ರಾಮದಲ್ಲಿ ಫಾರಂ ನಂ 2 ರ ಪ್ರಕಾರ 413 ಎಕರೆ 34 ಗುಂಟೆ ವಿಸ್ತೀರ್ಣದ ಗೋಮಾಳವಿದೆ. ಹಾಗೆಯೇ 458.05 ಎಕರೆ ವಿಸ್ತೀರ್ಣದ ಅರಣ್ಯ ಜಮೀನು ಇದೆ ಎಂದು ಲಿಖಿತ ವರದಿ ಸಲ್ಲಿಸಿದ್ದರು.

 

 

ಕರ್ವನಹಳ್ಳಿ ಗ್ರಾಮದಲ್ಲಿ ಒಟ್ಟು 12031 ಎಕರೆ ಸರ್ಕಾರಿ ಜಮೀನು ಇದೆ. ಸರ್ಕಾರದ ನಿಯಮಾವಳಿ ಪ್ರಕಾರ ಸುಮಾರು 268 ಎಕರೆ ಜಮೀನನನ್ನು ಜಾನುವಾರುಗಳಿಗೆ ಕಾಯ್ದಿರಿಸಿದರೂ ಉಳಿಕೆ 145 ಎಕರೆ 34 ಗುಂಟೆ ಗೋಮಾಳ ಮತ್ತು 458 ಎಕರೆ 5 ಗುಂಟೆ ಜಮೀನು ಲಭ್ಯವಿದೆ ಎಂದು ವರದಿಯಲ್ಲಿ ಮಾಹಿತಿ ನೀಡಿದ್ದರು.

 

 

ಅದೇ ರೀತಿ ಆವಲಗುರ್ಕಿ ಗ್ರಾಮದ ಸರ್ವೇ ನಂಬರ್‍‌ 174ರ ಪ್ರದೇಶವನ್ನು ಈ ಹಿಂದೆಯೇ ಸೆಕ್ಷನ್‌ (4) ರ ಅಡಿಯಲ್ಲಿ ಅರಣ್ಯ ಪ್ರದೇಶವೆಂದು ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಸರ್ವೆ ನಂಬರ್‍‌ 174ರಲ್ಲಿ ಸರ್ಕಾರದ ಆದೇಶದ ಪ್ರಕಾರ 125 ಎಕರೆ ಪರಿಭಾವಿತ ಅರಣ್ಯ ಪ್ರದೇಶವಿದೆ. ಮತ್ತು ಈ ಪರಿಭಾವಿತ ಅರಣ್ಯ ಪ್ರದೇಶದಲ್ಲಿ ಯಾವುದೇ ರಸ್ತೆಯಿಲ್ಲ. ಈ ಸರ್ವೆ ನಂಬರ್‍‌ 174ರ ಪರಿಭಾವಿತ ಅರಣ್ಯ ಪ್ರದೇಶ (ಡೀಮ್ಡ್‌) ವಿಸ್ತೀರ್ಣದ ಬಗ್ಗೆ ನಿಖರವಾದ ಮಾಹಿತಿಗಾಗಿ ಜಂಟಿ ಸರ್ವೇ ಮಾಡಿದ ನಕಾಶೆ ಅವಶ್ಯಕತೆ ಇದೆ ಎಂದು ಪ್ರಾದೇಶಿಕ ಆಯುಕ್ತರು ಸೂಚಿಸಿದ್ದರು.

 

 

ಈ ಅಂಶಕ್ಕೆ ಸ್ಪಷ್ಟನೆ ನೀಡಿದ್ದ ಚಿಕ್ಕಬಳ್ಳಾಪುರ ಉಪ ವಿಭಾಗಾಧಿಕಾರಿಯವರು ಆವಲಗುರ್ಕಿ ಗ್ರಾಮದ ಸರ್ವೆ ನಂಬರ್‍‌ 268, 208, 174ರಲ್ಲಿ ಒಟ್ಟು 306.49 ಹೆಕ್ಟೇರ್‍‌ ಪ್ರದೇಶವನ್ನು ಕರ್ನಾಟಕ ಅರಣ್ಯ ಅಧಿನಿಯಮದ ಪ್ರಕಾರ 1994ರ ಜೂನ್‌ 17ರಂದೇ ಸೆಕ್ಷನ್‌ 4 ಅರಣ್ಯ ಎಂದು ಅಧಿಸೂಚಿಸಿದೆ ಎಂದು ವಿವರಿಸಿದ್ದರು. ಆದರೆ ಅಧಿಕೃತ ಆದೇಶದ ಪ್ರತಿ ಸಲ್ಲಿಸಿರಲಿಲ್ಲ. ಹೀಗಾಗಿ 2024ರ ಜೂನ್‌ 7ರಂದು ತಾಲೂಕು ಭೂಮಾಪಕರು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿ ಸ್ಥಳ ತನಿಖೆ ನಡೆಸಿದ್ದರು.

 

ಇದರ ಪ್ರಕಾರ ಆವಲಗುರ್ಕಿ ಗ್ರಾಮದ ಸರ್ವೆ ನಂಬರ್‍‌ 268, 208 ಮತ್ತು 174ರಲ್ಲಿ 306.49 ಹೆಕ್ಟೇರ್‍‌ ಪ್ರದೇಶವನ್ನು ಸೆಕ್ಷನ್‌ 4 ರಡಿ ಅಧಿಸೂಚಿಸಿದ್ದ ವಿಸ್ತೀರ್ಣದಲ್ಲಿ 125 ಎಕರೆ ವಿಸ್ತೀರ್ಣವನ್ನು ಅರಣ್ಯ ಪ್ರದೇಶವೆಂದು ಗುರುತಿಸಲಾಗಿದೆ. ಇದು ಅತಿ ವ್ಯಾಪ್ತಿಯಾಗಿರುವ ಪ್ರದೇಶವಾಗಿದೆ. ತಾಲೂಕು ಭೂಮಾಪಕರ ಪ್ರಕಾರ ಸರ್ವೆ ನಂಬರ್‍‌ 174ರಲ್ಲಿ ಡೀಮ್ಡ್‌ ಅರಣ್ಯ ಮತ್ತು ರಸ್ತೆ ಬಗ್ಗೆ ತಯಾರಿಸಿರುವ ನಕ್ಷೆಯಲ್ಲಿಯೂ ಗುರುತಿಸಲಾಗಿದೆ ಎಂದು ವಿವರಿಸಿದ್ದರು.

 

ಹಾಗೆಯೇ ಈ ಪ್ರಸ್ತಾಪಿತ ಜಮೀನಿನಲ್ಲಿ ಸಾರ್ವಜನಿಕ ರಸ್ತೆಯನ್ನು ಬಳಕೆ ಮಾಡುತ್ತಿರುವ ಬಗ್ಗೆ 1985, 2009, 2012, 2024ರಲ್ಲಿ ಗೂಗಲ್‌ ಇಮೇಜ್‌ನ ಪ್ರತಿಗಳಲ್ಲಿಯೂ ಸಾರ್ವಜನಿಕ ರಸ್ತೆ ಇರುವುದು ಕಂಡು ಬಂದಿದೆ ಎಂದೂ ಮಾಹಿತಿ ಒದಗಿಸಿದ್ದರು.

 

ಕವರ್ನಹಳ್ಳಿ ಗ್ರಾಮದ ಸರ್ವೆ ನಂಬರ್‍‌ 123ರಲ್ಲಿ ರಸ್ತೆಗಾಗಿ ಕೋರಿದ್ದ 1-23 ಎಕರೆ ಜಮೀನು ಆಶ್ರಯ ಯೋಜನೆಗೆ ಕಾಯ್ದಿರಿಸಿದೆ ಎಂದು ಪ್ರಾದೇಶಿಕ ಆಯುಕ್ತರು ಹೇಳಿದ್ದರು. ಈ ಅಂಶವನ್ನು ಉಪ ವಿಭಾಗಾಧಿಕಾರಿ ಮತ್ತು ತಹಶೀಲ್ದಾರ್‍‌ ಅವರು ಒಪ್ಪಿಕೊಂಡಿದ್ದಾರೆ.

 

 

ಜಂಟಿ ನಕ್ಷೆ ಪ್ರಕಾರ ಈ ಜಮಿನು ಆಶ್ರಯ ಯೋಜನೆಗಾಗಿ ಕಾಯ್ದಿರಿಸಿದೆ. ನಿವೇಶನಗಳಿಗಾಗಿ ವಿಂಗಡಿಸಿ ಅಭಿವೃದ್ದಿಪಡಿಸಿರುವ ಸಾರ್ವಜನಿಕ ರಸ್ತೆಯಲ್ಲಿಯೇ ಈ ರಸ್ತೆಯೂ ಹಾದು ಹೋಗಿದೆ. ಹೀಗಾಗಿ ರಸ್ತೆಯನ್ನು ಮಂಜೂರು ಮಾಡುವ ಬದಲಾಗಿ ಆ ರಸ್ತೆಯನ್ನೇ ಅಭಿವೃದ್ಧಿಪಡಿಸಿ ಯಾವುದೇ ನಿವೇಶನ, ಕಟ್ಟಡಗಳಿಗೆ ಹಾನಿ ಉಂಟಾಗದಂತೆ ಕ್ರಮವಹಿಸಬೇಕು ಎಂದು ಟ್ರಸ್ಟ್‌ಗೆ ಷರತ್ತು ವಿಧಿಸಬಹುದು ಎಂದು ಎಂದು 2024ರ ಫೆ.26 ಮತ್ತು ಫೆ.29ರಂದು ವರದಿಯಲ್ಲಿ ವಿವರಿಸಿದ್ದರು.

 

‘ಸಾರ್ವಜನಿಕ ಉದ್ದೇಶಕ್ಕಾಗಿ ಹಾಗೂ ಸಾಕಷ್ಟು ಜನ ಮತ್ತು ಭಕ್ತಾದಿಗಳು ಪುರಾತನ ಕಾಲದ ನರಸಿಂಹಸ್ವಾಮಿ ದೇವಸ್ಥಾನಕ್ಕೆ ಮತ್ತು ಇಶಾ ಫೌಂಡೇಷನ್‌ನ ಆದಿಯೋಗಿ ಶಿವ ದೇವಾಲಯ ನೋಡಲು ಆಗಮಿಸುತ್ತಿರುವುದರಿಂದ ಸರ್ಕಾರಿ ಜಮೀನುಗಳಲ್ಲೇ ಹಾದು ಹೋಗಿರುವ ಸಾರ್ವಜನಿಕ ರಸ್ತೆಯನ್ನು ಸರ್ಕಾರದ ಕಂದಾಯ ಇಲಾಖೆಯಲ್ಲಿಯೇ ಉಳಿಸಿಕೊಂಡು ಈ ರಸ್ತೆಯನ್ನು ಇಶಾ ಫೌಂಡೇಷನ್‌ ಟ್ರಸ್ಟ್ ದಾನಿಗಳು ನಿರ್ಮಿಸಲು ಮುಂದೆ ಬಂದಿರುವುದರಿಂದ ಟ್ರಸ್ಟ್‌ಗೆ ಅಭಿವೃದ್ಧಿಪಡಿಸಲು ನೀಡಬಹುದು,’ ಎಂದು ತಹಶೀಲ್ದಾರ್‍‌ ಅವರು ವರದಿಯಲ್ಲಿ ಶಿಫಾರಸ್ಸು ಮಾಡಿದ್ದರು.

SUPPORT THE FILE

Latest News

Related Posts