ಬೆಂಗಳೂರು; ಬಹುಕೋಟಿ ಲಂಚ ಪ್ರಕರಣದಲ್ಲಿ ಸಿಲುಕಿದ್ದ ಚನ್ನಗಿರಿ ವಿಧಾನಸಭೆ ಕ್ಷೇತ್ರದ ಮಾಜಿ ಶಾಸಕ ಹಾಗೂ ಕೆಎಸ್‌ಡಿಎಲ್‌ನ ನಿಕಟಪೂರ್ವ ಅಧ್ಯಕ್ಷರಾಗಿದ್ದ ಮಾಡಾಳು ವಿರೂಪಾಕ್ಷಪ್ಪ ಅವರ ಪ್ರಕರಣದಲ್ಲಿನ ಆರೋಪ ಪಟ್ಟಿ ಸಲ್ಲಿಸುವುದು/ ಅಭಿಯೋಜನಾ ಮಂಜೂರಾತಿ ನೀಡುವ ಪ್ರಸ್ತಾವವನ್ನು ಕಾಂಗ್ರೆಸ್ ಸರ್ಕಾರವು ತಿರಸ್ಕರಿಸಿದೆ.
ಬಹುಕೋಟಿ ಲಂಚ ಪ್ರಕರಣದಲ್ಲಿ ಮಾಡಾಳು ವಿರೂಪಾಕ್ಷಪ್ಪ ಅವರ ವಿರುದ್ಧ ಆರೋಪ ಪಟ್ಟಿ ಸಲ್ಲಿಸುವ ಸಂಬಂಧ ಲೋಕಾಯುಕ್ತ ಪೊಲೀಸರು ಅನುಮತಿ ಕೋರಿ ಪ್ರಸ್ತಾವ ಸಲ್ಲಿಸಿದ್ದರು. ಆದರೀಗ ಸರ್ಕಾರವು ಈ ಪ್ರಸ್ತಾವವನ್ನು ತಿರಸ್ಕರಿಸಿದೆ.
ಬಿಜೆಪಿ ಸರ್ಕಾರದ ಕಡೇ ಅವಧಿಯಲ್ಲಿ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದರು. ಈ ಪ್ರಕರಣವನ್ನು ಪ್ರತಿಪಕ್ಷದಲ್ಲಿದ್ದ ಕಾಂಗ್ರೆಸ್, ಪ್ರಬಲ ರಾಜಕೀಯ ಅಸ್ತ್ರವನ್ನಾಗಿಸಿಕೊಂಡಿತ್ತು. ಅಲ್ಲದೇ ಸಿದ್ದರಾಮಯ್ಯ ಅವರೂ ಸಹ ಸರಣಿ ಟ್ವೀಟ್‌ಗಳನ್ನು ಮಾಡಿದ್ದರು. ಅಲ್ಲದೇ ಅವರ ಲೂಟಿಯಲ್ಲಿ ನಿಮಗೂ ಪಾಲಿದೆಯಾ ನರೇಂದ್ರ ಮೋದಿ ಅವರೇ ಎಂದು ಪ್ರಶ್ನಿಸಿದ್ದರು.
ಆದರೀಗ ಕಾಂಗ್ರೆಸ್ ಸರ್ಕಾರವು 11 ತಿಂಗಳ ಹಿಂದೆಯೇ ಮಾಡಾಳ್ ವಿರೂಪಾಕ್ಷಪ್ಪ ಅವರ ವಿರುದ್ಧದ ಪ್ರಕರಣದಲ್ಲಿ ಆರೋಪ ಪಟ್ಟಿ/ಅಭಿಯೋಜನಾ ಮಂಜೂರಾತಿಯ ಪ್ರಸ್ತಾವವನ್ನು ತಿರಸ್ಕರಿಸಿರುವುದು ಚರ್ಚೆಗೆ ಗ್ರಾಸವಾಗಿದೆ. ಈ ಸಂಬಂಧ 2024ರ ಜನವರಿ 8ರಂದೇ ಲೋಕಾಯುಕ್ತಕ್ಕೆ ಪತ್ರ ಬರೆದಿದೆ ಎಂದು ಗೊತ್ತಾಗಿದೆ.
ಪಿಎಸ್‌ಒ ಪ್ರಸ್ತಾವನೆಯನ್ನು ತಿರಸ್ಕರಿಸುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನಕ್ಕೆ ಉತ್ತರ ಒದಗಿಸಿದ್ದಾರೆ. ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯಡಿ ಆರೋಪ ಪಟ್ಟಿ ಸಲ್ಲಿಸಲು ಲೋಕಾಯುಕ್ತ ಪೊಲೀಸರು ಅನುಮತಿ ಕೋರಿರುವ ಮತ್ತು ತಿರಸ್ಕರಿಸಿರುವ ಪಟ್ಟಿಯನ್ನು ಒದಗಿಸಿದ್ದಾರೆ. ಯಲಹಂಕ ಶಾಸಕ ಎಸ್ ಆರ್ ವಿಶ್ವನಾಥ್ ಅವರು ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿರುವ ಸಿದ್ದರಾಮಯ್ಯ ಅವರು ನೀಡಿರುವ ಪಟ್ಟಿಯಲ್ಲಿ ಮಾಡಾಳ್ ವಿರೂಪಾಕ್ಷಪ್ಪ ಅವರ ಪ್ರಕರಣವೂ ಇದೆ.
ವಿರೂಪಾಕ್ಷಪ್ಪ ಅವರ ವಿರುದ್ಧ ಆರೋಪ ಪಟ್ಟಿ ಸಲ್ಲಿಸುವ ಸಂಬಂಧ ಲೋಕಾಯುಕ್ತ ಪೊಲೀಸರು 2023ರ ಜುಲೈ 27ರಂದು ಪ್ರಸ್ತಾವ ಸಲ್ಲಿಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒದಗಿಸಿರುವ ಪಟ್ಟಿಯ ಪ್ರಕಾರ ಈ ಪ್ರಸ್ತಾವವು ತಿರಸ್ಕೃತಗೊಂಡಿದೆ.
ಶಾಸಕರು ಅಥವಾ ಮಾಜಿ ಶಾಸಕರ ವಿರುದ್ಧ ನ್ಯಾಯಾಲಯದಲ್ಲಿ ವಿಚಾರಣೆ ಆರಂಭಿಸಲು ಅಭಿಯೋಜನಾ ಮಂಜೂರಾತಿ ನೀಡುವ ಅಧಿಕಾರ ವಿಧಾನಸಭೆ ಅಧ್ಯಕ್ಷರಿಗೆ ಇದೆಯೆ ಎಂಬ ಪ್ರಶ್ನೆಯೂ ಉದ್ಭವಿಸಿತ್ತು. ಹೀಗಾಗಿ ಲೋಕಯುಕ್ತ ಪೊಲೀಸರಿಗೆ ಆರೋಪಪಟ್ಟಿ ಸಲ್ಲಿಸಲು ಸಲ್ಲಿಸಿರಲಿಲ್ಲ.
ಕೆಎಸ್‌ಡಿಎಲ್‌ಗೆ ಕಚ್ಛಾ ವಸ್ತು ಪೂರೈಕೆಯ ಟೆಂಡರ್ ಪಡೆದಿದ್ದ ಶ್ರೇಯಸ್ ಕಶ್ಯಪ್ ಎಂಬ ಗುತ್ತಿಗೆದಾರನಿಂದ ವಿರೂಪಾಕ್ಷಪ್ಪ ಅವರ ಮಗ, ಬಿಡಬ್ಲ್ಯೂಎಸ್‌ಎಸ್‌ಬಿ ಹಿಂದಿನ ಮುಖ್ಯ ಲೆಕ್ಕಾಧಿಕಾರಿ ಪ್ರಶಾಂತ ಮಾಡಾಳ್, ಅಪ್ಪನ ಪರವಾಗಿ 40 ಲಕ್ಷ ರು ಲಮಚ ಪಡೆಯುತ್ತಿದ್ದಾಗ ಮಾರ್ಚ್ 2ರಂದು ಲೋಕಾಯುಕ್ತ ಪೊಲೀಸರು ಬಂಧಿಸಿದ್ದರು. ಪ್ರಶಾಂತ ಅವರ ಖಾಸಗಿ ಕಚೇರಿಯಲ್ಲಿ ಒಟ್ಟು 1.62 ಕೋಟಿ ನಗದು ಪತ್ತೆಯಾಗಿತ್ತು.
ಮರುದಿನವೇ ವಿರೂಪಾಕ್ಷಪ್ಪ ಅವರ ಮನೆಯಲ್ಲಿಯೂ ಶೋಧ ನಡೆದಿತ್ತು. ಆ ಸಂದರ್ಭದಲ್ಲಿ 7.26 ಕೋಟಿ ನಗದು ಪತ್ತೆಯಾಗಿತ್ತು. ಮಗನ ಬಂಧನ ಬಳಿಕ ತಲೆ ಮರೆಸಿಕೊಂಡಿದ್ದರು. ನಂತರ ಅವರು ಹೈಕೋರ್ಟ್‌ನಿಂದ ಮಧ್ಯಂತರ ನಿರೀಕ್ಷಣಾ ಜಾಮೀನು ಪಡೆದಿದ್ದರು. ಇದನ್ನು ಹೈಕೋಟ್ ಕೂಡ ತಿರಸ್ಕರಿಸಿತ್ತು. ಅದೇ ದಿನ ಅವರನ್ನು ಬಂಧಿಸಿತ್ತು.
ಪ್ರಕರಣಕ್ಕೆ ಸಂಬಂಧಿಸಿದ ದೂರು, ಎಫ್‌ಐಆರ್, ತನಿಖಾ ವರದಿ ಎಲ್ಲವನ್ನೂ ವಿಧಾನಸಭೆ ಅಧ್ಯಕ್ಷರಿಗೆ ಸಲ್ಲಿಸಿತ್ತು. ಆದರೆ ಅಭಿಯೋಜನಾ ಮಂಜೂರಾತಿ ನೀಡುವ ಯಾವುದೇ ನಿರ್ಧಾರ ಕೈಗೊಂಡಿರಲಿಲ್ಲ. ಹೀಗಾಗಿ ವಿರೂಪಾಕ್ಷಪ್ಪ ಅವರ ವಿರುದ್ಧ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಲು ವಿಳಂಬವಾಗಿತ್ತು.
ಅಲ್ಲದೇ ಇದೇ ಪ್ರಕರಣದಲ್ಲಿ ಮಾಜಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ವಿರುದ್ಧದ ಪ್ರಕರಣವನ್ನು ಹೈಕೋರ್ಟ್‌ನ ಏಕಸದಸ್ಯ ಪೀಠವು ರದ್ದುಗೊಳಿಸಿ ಆದೇಶಿಸಿತ್ತು. ಭ್ರಷ್ಟಾಚಾರ ತಡೆ ಕಾಯ್ದೆ ಸೆಕ್ಷನ್ 17 A ಪ್ರಕಾರ ಪ್ರಕ್ರಿಯೆ ಪಾಲಿಸಿಲ್ಲ ಎಂದು ಮಾಡಾಳ್ ಪರ ಹಿರಿಯ ವಕೀಲ ಪ್ರಭುಲಿಂಗ್ ನಾವದಗಿ ವಾದ ಮಂಡಿಸಿದ್ದರು. ವಕೀಲರ ವಾದ ಪುರಸ್ಕರಿಸಿದ್ದ ಹೈಕೋರ್ಟ್, ಪ್ರಕರಣ ರದ್ದು ಮಾಡಿ ಆದೇಶ ಹೊರಡಿಸಿತ್ತು. ಸ್ಪೀಕರ್ ಅನುಮತಿ ಪಡೆಯದೇ ಲೋಕಾಯುಕ್ತ ಪೊಲೀಸರಿಂದ ತನಿಖೆ ನಡೆಸಲಾಗಿದೆ ಎಂಬ ತಾಂತ್ರಿಕ ಕಾರಣವನ್ನು ವಾದಿಸಲಾಗಿತ್ತು.
ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮಕ್ಕೆ ರಾಸಾಯನಿಕ ಪೂರೈಕೆ ಟೆಂಡರ್ ನೀಡಲು ಬಿಜೆಪಿ ಮಾಜಿ ಶಾಸಕ ವಿರೂಪಾಕ್ಷಪ್ಪ ಮಾಡಾಳ್ ಅವರ ಪುತ್ರ ಎಂ ವಿ ಪ್ರಶಾಂತಕುಮಾರ್ ಲಂಚ ಪಡೆಯಲು ಮುಂದಾಗಿದ್ದು ಸಾಬೀತಾಗಿದೆ ಎಂದು ಲೋಕಾಯುಕ್ತ ಪೊಲೀಸರು ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಇದಕ್ಕೆ 2023ರ ಆಗಸ್ಟ್ 30ರಂದು ಸರ್ಕಾರವು ಅನುಮತಿ ನೀಡಿತ್ತು.
ಕೆಎಸ್‌ಡಿಎಲ್‌ಗೆ ಸಂಬಂಧಿಸಿದಂತೆ 2023ರಲ್ಲಿ 40 ಲಕ್ಷ ಲಂಚ ಪಡೆದ ಪ್ರಕರಣ ತನಿಖೆ ನಡೆಸುವಾಗ ಇನ್ನು 90 ಲಕ್ಷ ಲಂಚದ ಹಣ ಪತ್ತೆಯಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಳಿಸರು ಹೆಚ್ಚುವರಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಅದರಲ್ಲಿ ಪ್ರಶಾಂತ್ ಅವರನ್ನು ಮೊದಲ ಆರೋಪಿ, ಲಂಚ ನೀಡಿದ ಕಂಪನಿಯ ನೌಕರ ಆಲ್ಬರ್ಟ್ ನಿಕೋಲಸ್ ಅವರನ್ನು ಎರಡನೇ ಆರೋಪಿಯನ್ನಾಗಿಸಲಾಗಿತ್ತು.
ಕೆಎಸ್‌ಡಿಎಲ್ ನ ಟೆಂಡರ್ ಪ್ರಕ್ರಿಯೆಯಲ್ಲಿ ಕರ್ನಾಟಕ ಅರೋಮಾಸ್ ಕಂಪನಿಗೆ ಅನುಕೂಲ ಮಾಡಿಕೊಡಲು 90 ಲಕ್ಷಕ್ಕೆ ಪ್ರಶಾಂತ ಬೇಡಿಕೆ ಇಟ್ಟಿದ್ದರು. ಒಳಚರಂಡಿ ಮಂಡಳಿ ಲೆಕ್ಕಾಧಿಕಾರಿಆಗಿದ್ದ ಪ್ರಶಾಂತ್ ಅವರಿಗೂ ಕೆಎಸ್‌ಡಿಎಲ್ ಗೂ ಯಾವುದೇ ಸಂಬಂಧ ಇರಲಿಲ್ಲ. ಆದರೆ ಅವರ ತಂದೆ ಮತ್ತು ಶಾಸಕ ವಿರೂಪಾಕ್ಷಪ್ಪ ಮಾಡಾಳ್, ನಿಗಮದ ಅಧ್ಯಕ್ಷರನ್ಆಗಿದ್ದನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಉಲ್ಲೇಖಿಸಿದೆ.
ಅಲ್ಬರ್ಟ್ ನಿಕೋಲಸ್ ಅವರ ಕಂಪನಿಗೆ ಅನುಕೂಲ ಮಾಡಿಕೊಡಲೆಂದೇ ಲಂಚ ಪಡೆದುಕೊಂಡಿದ್ದಾರೆ ಎಂಬುದಕ್ಕೆ ಸಾಕ್ಷ್ಯಗಳು ಲಭ್ಯವಾಗಿವೆ. ವಾಟ್ಸಾಪ್ ನಲ್ಲಿ ಈ ಸಂಬಂಧ ಈ ಇಬ್ಬರೂ ಚಾಟ್ ನಡೆಸಿದ್ದು ಅದನ್ನು ಡಿಲೀಟ್ ಮಾಡಿದ್ದರು. ಆದರೆ ಅವನ್ನು ರಿಟ್ರೀವ್ ಮಾಡಿ ಸಾಕ್ಷ್ಯ ಸಂಗ್ರಹಿಸಲಾಗಿದೆ ಎಂದು ತನಿಖಾಧಿಕಾರಿಗಳು ಹೇಳಿದ್ದರು.
ಬೇರೆ ಕಂಪನಿಗಳು ಸಲ್ಲಿಸಿರುವ ಟೆಂಡರ್‍ಗಳನ್ನು ತಿರಸ್ಕರಿಸುವ ಬಗ್ಗೆ ಮತ್ತು ಲಂಚದ ಹಣದ ಬಗ್ಗೆಯೂ ಇಬ್ಬರ ನಡುವೆ ಚರ್ಚೆ ನಡೆದಿತ್ತು. 45 ಲಕ್ಷ ರು ಲಂಚವಿದ್ದ ಎರಡು ಬ್ಯಾಗ್‌ಗಳನ್ನು ಕಳಿಸುವ ಬಗ್ಗೆ ಮಾತುಕತೆ ನಡೆಸಿದ್ದರು. ಈ ಎಲ್ಲವು ದೊರತಿದ್ದು ಪ್ರಶಾಂತ್ ಕುಮಾರ್ ಲಂಚ ಪಡೆಯಲು ಮುಂದಾಗಿದ್ದರು ಎಂಬುದು ಸಾಬೀತಾಗಿದೆ ಎಂದು ಪೊಲೀಸರು ತಿಳಿಸಿದ್ದನ್ನು ಸ್ಮರಿಸಬಹುದು.
ವಿಶೇಷವೆಂದರೇ ಪ್ರಧಾನಿ ನರೇಂದ್ರ ನರೇಂದ್ರ ಮೋದಿ ರಾಜ್ಯಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಅಂದು ಪ್ರತಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ‘ಚನ್ನಗಿರಿ ಕ್ಷೇತ್ರದ ಭ್ರಷ್ಟ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಮತ್ತು ಅವರ ಮಗನ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಲೋಕಾಯುಕ್ತ ಪೊಲೀಸರು ಸಚಿತ್ರವಾಗಿ ಜಗತ್ತಿನ ಮುಂದೆ ಬಿಚ್ಚಿಟ್ಟರೂ ನೀವು ಮಾತ್ರ ಬಾಯಿ ಬಿಡುತ್ತಿಲ್ಲ ಯಾಕೆ? ಅವರ ಲೂಟಿಯಲ್ಲಿ ನಿಮಗೂ ಪಾಲಿದೆಯಾ ನರೇಂದ್ರ ಮೋದಿ ಅವರೇ? ಎಂದು ಪ್ರಶ್ನಿಸಿದ್ದರು,’
ಅದೇ ರೀತಿ 2022ರ ಅಗಸ್ಟ್ 10ರಿಂದ 2024ರ ನವೆಂಬರ್ 30ರವರೆಗೆ ಲೋಕಾಯುಕ್ತ ಪೊಲೀಸರು ಒಟ್ಟು 623 ಪ್ರಕರಣಗಳ ಕುರಿತಾದ ಪ್ರಸ್ತಾವನೆಗಳನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಿದ್ದಾರೆ. ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಈ ಪ್ರಸ್ತಾವನೆಗಳ ಪೈಕಿ 472 ಪ್ರಸ್ತಾವನೆಗಳಿಗೆ ಆರೋಪ ಪಟ್ಟಿ ಸಲ್ಲಿಸಲು ಸರ್ಕಾರವು ಅನುಮತಿ ನೀಡಿದೆ ಎಂದು ಸಿದ್ದರಾಮಯ್ಯ ಅವರು ಉತ್ತರ ಒದಗಿಸಿದ್ದಾರೆ.
ಲೋಕಾಯುಕ್ತರು ಸಲ್ಲಿಸಿರುವ ಪ್ರಸ್ತಾವನೆಗಳಿಗೆ ಅನುಮತಿ ನೀಡಲು ಇನ್ನೂ 146 ಪ್ರಕರಣಗಳು ಬಾಕಿ ಇವೆ. ಹಾಗೆಯೇ ಇತ್ತೀಚಿನ 53 ಪ್ರಕರಣಗಳು ವಿವಿಧ ಸಕ್ಷಮ ಪ್ರಾಧಿಕಾರಗಳಲ್ಲಿ ಪರಿಶೀಲನೆಯಲ್ಲಿವೆ. ಉಳಿದ 93 ಪ್ರಕರಣಗಳಲ್ಲಿ ಇಲಾಖಾ ಮುಖ್ಯಸ್ಥರ ಅಭಿಪ್ರಾಯ, ಕಾನೂನು ಇಲಾಖೆಯ ಅಭಿಪ್ರಾಯ ನೀಡಬೇಕಿದೆ. ಹಾಗೂ ಕೆಲವು ಪ್ರಕರಣಗಳಲ್ಲಿ ನ್ಯಾಯಾಲಯದ ತಡೆಯಾಜ್ಞೆ ಇರುವ ಕಾರಣ ಅನುಮತಿ ನೀಡಲು ವಿಳಂಬವಾಗಿದೆ ಎಂದು ಸಿದ್ದರಾಮಯ್ಯ ಅವರು ಉತ್ತರದಲ್ಲಿ ವಿವರಿಸಿರುವುದು ಗೊತ್ತಾಗಿದೆ.