ವಕ್ಫ್‌ ಆಸ್ತಿ ಅಡಮಾನ; ನೋಂದಾಯಿತವಾಗದ ಡೀಡ್ ನೀಡಿ 10 ಕೋಟಿ ಸಾಲ ಎತ್ತಿದ ಟ್ರಸ್ಟ್, ಕಣ್ಮುಚ್ಚಿ ಕುಳಿತ ಮಂಡಳಿ

ಬೆಂಗಳೂರು; ಮೈಸೂರಿನ ಆನೆಗುಂದಿ ರಸ್ತೆಯಲ್ಲಿರುವ ಈದ್ಗಾ ಸುನ್ನಿಗೆ ಸೇರಿದ ವಕ್ಫ್ ಆಸ್ತಿಯನ್ನು ವಕ್ಫ್‌ ಮಂಡಳಿ ಅನುಮತಿಯಿಲ್ಲದೆಯೇ ಕೆನರಾ ಬ್ಯಾಂಕ್‌ನಲ್ಲಿ ಅಡಮಾನವಿರಿಸಿ 10 ಕೋಟಿ ಸಾಲ ಎತ್ತಿದ್ದ ಪ್ರಕರಣವನ್ನು ಉಪ ಲೋಕಾಯುಕ್ತರಾಗಿದ್ದ ಎನ್‌ ಆನಂದ್‌ ಅವರು ಪತ್ತೆ ಹಚ್ಚಿದ್ದರು.

 

ವಕ್ಫ್‌ ಆಸ್ತಿ ದುರ್ಬಳಕೆ, ಅತಿಕ್ರಮಣ ಮತ್ತು ದುರುಪಯೋಗ ಸೇರಿದಂತೆ ಇನ್ನಿತರೆ ಆರೋಪಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರದ ಸೂಚನೆಯಂತೆ ತನಿಖೆ ನಡೆಸಿದ್ದ ಉಪ ಲೋಕಾಯುಕ್ತ ಎನ್‌ ಆನಂದ್‌ ಅವರು, ವಕ್ಫ್‌ ಆಸ್ತಿಯ ದುರ್ಬಳಕೆಯ ವಿವಿಧ ಮುಖವಾಡಗಳನ್ನು ತಮ್ಮ ತನಿಖಾ ವರದಿಯಲ್ಲಿ ತೆರೆದಿಟ್ಟಿದ್ದಾರೆ.

 

ಎನ್‌ ಆನಂದ್‌ ಅವರು 2016ರಲ್ಲೇ ಈ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರು. ಆದರೆ ಈ ವರದಿಯನ್ನು 2016ರಲ್ಲಿದ್ದ ಕಾಂಗ್ರೆಸ್‌ ಸರ್ಕಾರವು ಸರ್ಕಾರಿ ದಾಖಲೆಯನ್ನಾಗಿ ಮಾಡಿರಲಿಲ್ಲ. ಈ ವರದಿಯನ್ನೀಗ ‘ದಿ ಫೈಲ್‌’, ಲೋಕಾಯುಕ್ತದಿಂದ ಆರ್‌ಟಿಐ ಮೂಲಕ ಪಡೆದು ಬಹಿರಂಗಗೊಳಿಸಿದೆ.

 

ಮೈಸೂರಿನ ಆನೆಗುಂದಿ ರಸ್ತೆಯಲ್ಲಿರುವ ಆಸ್ತಿ ಸರ್ವೆ ಸಂಖ್ಯೆ 126, 127, 128 ರಲ್ಲಿ 14 ಎಕರೆ 09 ಗುಂಟೆ ವಿಸ್ತೀರ್ಣ ಜಮೀನುಗಳನ್ನು ವಕ್ಫ್‌ನ ಆಸ್ತಿಗಳಾಗಿ ತೋರಿಸಲಾಗಿದೆ. 1965ರಲ್ಲಿ ಹೊರಡಿಸಿದ್ದ ಅಧಿಸೂಚನೆಯಲ್ಲಿ ಸತ್ತಾರ್ ಸೇಟ್ ಅವರನ್ನು ಮೈಸೂರು ನಗರದ ಈದ್ಗಾ ಸಮಿತಿಯ ಅಧ್ಯಕ್ಷರನ್ನಾಗಿ ತೋರಿಸಿತ್ತು. ಸದ್ಯ ಈ ಜಾಗವು ರಂಜಾನ್, ಬಕ್ರೀದ್, ಇತ್ಯಾದಿಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಬಳಕೆ ಆಗುತ್ತಿದೆ.

 

ಈದ್ಗಾದ ನಿರ್ವಹಣಾ ಸಮಿತಿಯು ತನ್ನ ಆಸ್ತಿಯ ಭಾಗವನ್ನು 1979ರಲ್ಲೇ ಬಿಡುಗಡೆ ಮಾಡಿತ್ತು. ಈದ್ಗಾ ಸಮಿತಿಯು ಮಜಲಿಸ್-ಎ-ರಿಫಾಹುಲ್ ಮುಸ್ಲಿಮೀನ್‌ಗೆ ಈದ್ಗಾ ಮೈದಾನದ ನೈಋತ್ಯ ಮೂಲೆಯಲ್ಲಿ ಸೈಟ್ ಸಂಖ್ಯೆ 127, 128ರಲ್ಲಿ 600/100 ಮತ್ತು 60/ 300 ಅಳತೆಯ 99 ವರ್ಷಗಳ ಅವಧಿಗೆ ವಾರ್ಷಿಕ ರೂ 100 ರು ಗೆ ಗುತ್ತಿಗೆ ನೀಡಿತ್ತು.

 

 

ಆದರೆ ಈ ಗುತ್ತಿಗೆಗೆ ಕಾನೂನಿನ ಯಾವುದೇ ಮಾನ್ಯತೆ ಇರಲಿಲ್ಲ. ಏಕೆಂದರೇ ವಕ್ಫ್ ಆಸ್ತಿಯನ್ನು ಗುತ್ತಿಗೆ ನೀಡಲು ಈದ್ಗಾದ ವ್ಯವಸ್ಥಾಪಕ ಸಮಿತಿಯು ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಅನುಮತಿಯನ್ನೇ ಪಡೆದಿರಲಿಲ್ಲ. ಹೀಗಾಗಿ ಮಜಲಿಸ್-ಎ-ರಿಫಾಹುಲ್ ಮುಸ್ಲಿಮೀನ್ ಪರವಾಗಿ ವ್ಯವಸ್ಥಾಪಕ ಸಮಿತಿಯಿಂದ ನೋಂದಾಯಿತ ಲೀಸ್ ಡೀಡ್ ಅಡಿಯಲ್ಲಿ 99 ವರ್ಷಗಳ ಅವಧಿಗೆ ಗುತ್ತಿಗೆಯೇ ಅಮಾನ್ಯವಾಗಿದೆ ಎಂದು ವರದಿಯಲ್ಲಿ ವಿವರಿಸಿದೆ.

 

ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಮಂಜೂರಾತಿ ಇಲ್ಲದೆ 99 ವರ್ಷಗಳವರೆಗೆ ಆಸ್ತಿಯನ್ನು ಗುತ್ತಿಗೆ ಮಾಡಲು ಈದ್ಗಾದ ವ್ಯವಸ್ಥಾಪಕ ಸಮಿತಿಗೆ ಸ್ವಯಂಚಾಲಿತವಾಗಿ ಅರ್ಹತೆ ಇರಲಿಲ್ಲ. ಅದೂ ಸಹ ನೋಂದಾಯಿಸದ ಗುತ್ತಿಗೆ ಪತ್ರದ ಅಡಿಯಲ್ಲಿಯೂ ಯಾವುದೇ ಅರ್ಹತೆಯೂ ಇರಲಿಲ್ಲ. ನೋಂದಾಯಿಸದ ಗುತ್ತಿಗೆ ಪತ್ರದ ಅಡಿಯಲ್ಲಿ 99 ವರ್ಷಗಳವರೆಗೆ ಮೇಲೆ ಹೇಳಿದ ಆಸ್ತಿಯ ಗುತ್ತಿಗೆಯಲ್ಲಿ ವಕ್ಫ್‌ನ ಹಿತಾಸಕ್ತಿ ಅಥವಾ ವಕ್ಫ್‌ನ ಪ್ರಯೋಜನಕ್ಕಾಗಿ ಇರಲಿಲ್ಲ ಎಂದು ವರದಿಯಲ್ಲಿ ವಿವರಿಸಿರುವುದು ಗೊತ್ತಾಗಿದೆ.

 

 

ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಅನುಮತಿಯಿಲ್ಲದೆ ರಿಫಾಹುಲ್ ಮುಸ್ಲಿಮೀನ್ ಎಜುಕೇಶನ್ ಸೊಸೈಟಿಯ ಪರವಾಗಿ ಗುತ್ತಿಗೆ ನೀಡಿತ್ತು. ತರುವಾಯ, ಕರ್ನಾಟಕ ರಾಜ್ಯ ವಕ್ಫ್ ಮಂಡಳಿ ಅಥವಾ ವಕ್ಫ್ ವ್ಯವಸ್ಥಾಪಕ ಸಮಿತಿಯ ಅನುಮತಿಯಿಲ್ಲದೆ (ದಿನಾಂಕ 1/9/1979 ರ) ಗುತ್ತಿಗೆ ಪತ್ರದ ಅಡಿಯಲ್ಲಿ ಗುತ್ತಿಗೆದಾರನು ರಿಫಾಹುಲ್ ಮುಸ್ಲಿಮೀನ್ ಶಿಕ್ಷಣ ಟ್ರಸ್ಟ್‌ನ ಹೆಸರು ಮತ್ತು ಸೊಸೈಟಿಯನ್ನು ಟ್ರಸ್ಟ್ ಆಗಿ ಪರಿವರ್ತಿಸಿತ್ತು. ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಅನುಮತಿಯಿಲ್ಲದೆ ರಿಫಾಹುಲ್ ಮುಸ್ಲಿಮೀನ್ ಎಜುಕೇಶನ್ ಸೊಸೈಟಿಯನ್ನು ಟ್ರಸ್ಟ್ ಆಗಿ ಪರಿವರ್ತಿಸಿದ್ದು ಕೂಡ ಕಾನೂನುಬಾಹಿರವಾಗಿತ್ತು.

 

ಅದರ ನಂತರ, ರಿಫಾಹುಲ್ ಮುಸ್ಲಿಮೀನ್ ಶಿಕ್ಷಣ ಟ್ರಸ್ಟ್ ಕೆಲವು ನಿರ್ಮಾಣಗಳನ್ನು ಮಾಡಿತ್ತು. ಈ ಉದ್ದೇಶಕ್ಕಾಗಿ ರಿಫಾಹುಲ್ ಮುಸ್ಲಿಮೀನ್ ಶಿಕ್ಷಣ ಟ್ರಸ್ಟ್‌, ನೋಂದಾಯಿಸದ ಗುತ್ತಿಗೆ ಹಕ್ಕುಗಳನ್ನೇ ಕೆನರಾ ಬ್ಯಾಂಕ್‌ನಲ್ಲಿ ಅಡಮಾನವಿರಿಸಿ 10 ಕೋಟಿ ರು ಸಾಲವನ್ನೂ ಎತ್ತಿತ್ತು.

 

‘ರಿಫಾಹುಲ್ ಮುಸ್ಲಿಮೀನ್ ಎಜುಕೇಶನ್ ಸೊಸೈಟಿಯ ಪರವಾಗಿ ಮಜಲಿಸ್-ಇ-ರಿಫಾಹುಲ್ ಮುಸ್ಲಿಮೀನ್ 99 ವರ್ಷಗಳ ಕಾಲ ನೋಂದಾಯಿಸದ ಗುತ್ತಿಗೆಯು ಅನೂರ್ಜಿತವಾಗಿದೆ. ರಿಫಾಹುಲ್ ಮುಸ್ಲಿಮೀನ್ ಎಜುಕೇಶನ್ ಸೊಸೈಟಿಯಿಂದ ಸಾಲವನ್ನು ಪಡೆದಿರುವುದು ಕಾನೂನುಬಾಹಿರವಾಗಿದೆ. ರಿಫಾಹುಲ್ ಮುಸ್ಲಿಮೀನ್ ಎಜುಕೇಶನ್ ಟ್ರಸ್ಟ್‌ನಿಂದ 10 ಕೋಟಿ ಸಾಲ ಎತ್ತಲು ಗುತ್ತಿಗೆ ಹಕ್ಕುಗಳನ್ನೇ ಅಡಮಾನವಿರಿಸಿದ್ದು ಅನೂರ್ಜಿತವಾಗಿದೆ,’ ಎಂದು ವರದಿಯಲ್ಲಿ ವಿವರಿಸಲಾಗಿದೆ.

 

ಈ ಅಕ್ರಮ ವಹಿವಾಟುಗಳನ್ನು ಕೈಬಿಡಲು ಮತ್ತು ಕೆನರಾ ಬ್ಯಾಂಕ್, ವಕ್ಫ್ ಆಸ್ತಿಯ ವಿರುದ್ಧ ಕ್ರಮ ಜರುಗಿಸದಂತೆ ತಡೆಯಲು ತಕ್ಷಣವೇ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯು ಮಧ್ಯಪ್ರವೇಶಿಸಬೇಕು. ಅಮಾನ್ಯವಾದ ಅಡಮಾನ ವ್ಯವಹಾರದ ಅಡಿಯಲ್ಲಿ ರಿಫಾಹುಲ್ ಮುಸ್ಲಿಮೀನ್ ಎಜುಕೇಶನ್ ಸೊಸೈಟಿಯಿಂದಲೇ ವಸೂಲಿ ಮಾಡಲು ಅವಕಾಶ ನೀಡಬೇಕು. ಗುತ್ತಿಗೆ ವಹಿವಾಟು ನಡೆಸಿರುವ ಮತ್ತು ಗುತ್ತಿಗೆ ಹಕ್ಕುಗಳನ್ನು ಪಡೆಯಲು ಜವಾಬ್ದಾರರಾಗಿರುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ವರದಿಯಲ್ಲಿ ಶಿಫಾರಸ್ಸು ಮಾಡಿದೆ.

SUPPORT THE FILE

Latest News

Related Posts