ಬೆಂಗಳೂರು; ಮೈಸೂರಿನ ವಿವಿಧೆಡೆ ಇರುವ ವಕ್ಫ್ ಆಸ್ತಿಗಳನ್ನು ಕಾನೂನುಬಾಹಿರವಾಗಿ 99 ವರ್ಷಗಳವರೆಗೆ ಗುತ್ತಿಗೆ ನೀಡಿರುವುದು, ಗುತ್ತಿಗೆ ಅವಧಿ ಪೂರ್ಣಗೊಂಡರೂ ನವೀಕರಿಸದಿರುವುದು, ಗುತ್ತಿಗೆ ಅವಧಿ ಮುಗಿದ ನಂತರವೂ ಬಾಡಿಗೆ ಹಣ ಪಡೆಯುತ್ತಿರುವುದು, ಪಡೆದ ಬಾಡಿಗೆ ಹಣವನ್ನು ಕರ್ನಾಟಕ ರಾಜ್ಯ ವಕ್ಫ್ ಮಂಡಳಿಗೆ ಪಾವತಿಸದೇ ಇರುವುದೂ ಸೇರಿದಂತೆ ಹಲವು ಪ್ರಕರಣಗಳನ್ನು ಉಪ ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್ ಆನಂದ್ ಅವರ ತನಿಖೆಯಿಂದ ಬಹಿರಂಗಗೊಂಡಿದೆ.
ವಕ್ಫ್ ಆಸ್ತಿ ದುರ್ಬಳಕೆ, ಅತಿಕ್ರಮಣ ಮತ್ತು ದುರುಪಯೋಗ ಸೇರಿದಂತೆ ಇನ್ನಿತರೆ ಆರೋಪಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಸರ್ಕಾರದ ಸೂಚನೆಯಂತೆ ತನಿಖೆ ನಡೆಸಿದ್ದ ಉಪ ಲೋಕಾಯುಕ್ತ ಎನ್ ಆನಂದ್ ಅವರು, ವಕ್ಫ್ ಆಸ್ತಿಯ ದುರ್ಬಳಕೆಯ ವಿವಿಧ ಮುಖವಾಡಗಳನ್ನು ತಮ್ಮ ತನಿಖಾ ವರದಿಯಲ್ಲಿ ತೆರೆದಿಟ್ಟಿದ್ದಾರೆ.
ಎನ್ ಆನಂದ್ ಅವರು 2016ರಲ್ಲೇ ಈ ತನಿಖಾ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದ್ದರು. ಆದರೆ ಈ ವರದಿಯನ್ನು 2016ರಲ್ಲಿದ್ದ ಕಾಂಗ್ರೆಸ್ ಸರ್ಕಾರವು ಸರ್ಕಾರಿ ದಾಖಲೆಯನ್ನಾಗಿ ಮಾಡಿರಲಿಲ್ಲ. ಈ ವರದಿಯನ್ನೀಗ ‘ದಿ ಫೈಲ್’ ಲೋಕಾಯುಕ್ತದಿಂದ ಆರ್‌ಟಿಐ ಮೂಲಕ ಪಡೆದು ಬಹಿರಂಗಗೊಳಿಸಿದೆ.
ಸವಾರ್ ಲೈನ್ ಮಸೀದಿ, ಸುನ್ನಿಗೆ ಸಂಬಂಧಿಸಿದಂತೆ ಒಟ್ಟು 22 ಆಸ್ತಿಗಳನ್ನು ವಕ್ಫ್ ಎಂದು 1965ರಲ್ಲೇ ಅಧಿಸೂಚಿಸಲಾಗಿತ್ತು. ಅಧಿಸೂಚನೆ ಪ್ರಕಾರ ಈ ಸಮಿತಿಗೆ ಎ ಸತ್ತಾರ್ ಅಬ್ಬಾ ಸೇಠ್ ಅವರು ವ್ಯವಸ್ಥಾಪನ ಸಮಿತಿಯ ಕಾರ್ಯದರ್ಶಿಯಾಗಿದ್ದರು. ಉಪ ಲೋಕಾಯುಕ್ತರು ವರದಿ ನೀಡುವ ಹೊತ್ತಿಗೆ ಸಚಿವರಾಗಿದ್ದ ತನ್ವೀರ್ ಸೇಠ್ ಅವರು (ಹಾಲಿ ಶಾಸಕರೂ ಹೌದು) ಈ ಸಮಿತಿಗೆ ಅಧ್ಯಕ್ಷರಾಗಿದ್ದರು. ಈ ಸಮಿತಿಯು ವಕ್ಫ್ ಆಸ್ತಿಯಲ್ಲಿ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿತ್ತು.
ಬೇರೆ ಬೇರೆ ವ್ಯಕ್ತಿಗಳಿಗೆ ಒಟ್ಟಾರೆ 72 ಅಂಗಡಿಗಳನ್ನು 11 ತಿಂಗಳ ಅವಧಿಗೆ ಲೀಸ್ ಡೀಡ್ ಅಡಿಯಲ್ಲಿ ಗುತ್ತಿಗೆ ನೀಡಿತ್ತು. ಆದರೆ ಗುತ್ತಿಗೆ ಅವಧಿ ಮುಗಿದ ನಂತರವೂ ಆಡಳಿತ ಸಮಿತಿಯು ಬಾಡಿಗೆದಾರರಿಂದ ಬಾಡಿಗೆ ಹಣ ಪಡೆಯುತ್ತಿದೆ. ಆದರೆ ಈ ಬಾಡಿಗೆ ಹಣವನ್ನು ಕರ್ನಾಟಕ ರಾಜ್ಯ ವಕ್ಫ್ ಮಂಡಳಿಗೆ ಪಾವತಿಸಿರುವ ಬಗ್ಗೆಯೂ ಉಪ ಲೋಕಾಯುಕ್ತರ ತನಿಖಾ ತಂಡವು ಅನುಮಾನ ವ್ಯಕ್ತಪಡಿಸಿರುವುದು ಗೊತ್ತಾಗಿದೆ.
‘ಲಭ್ಯವಿರುವ ದಾಖಲೆಗಳ ಪ್ರಕಾರ, ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯು ಶಾಪಿಂಗ್ ಕಾಂಪ್ಲೆಕ್ಸ್ ಸ್ಥಾಪಿಸಲು ಮತ್ತು ವಕ್ಫ್ ನಿರ್ವಹಣೆಯಿಂದ ವಿವಿಧ ವ್ಯಕ್ತಿಗಳಿಗೆ ಆಸ್ತಿಗಳನ್ನು ಗುತ್ತಿಗೆ ನೀಡಲು ಅನುಮತಿ ನೀಡಿಲ್ಲ. ಈ ಮೇಲೆ ತಿಳಿಸಿದ ಶಾಪಿಂಗ್ ಕಾಂಪ್ಲೆಕ್ಸ್‌ನ ನಿವಾಸಿಗಳಿಂದ ಪಡೆದ ಬಾಡಿಗೆಯನ್ನು ಕರ್ನಾಟಕ ರಾಜ್ಯ ವಕ್ಫ್ ಮಂಡಳಿಗೆ ಜಮಾ ಮಾಡಲಾಗುತ್ತಿದೆಯೇ ಎಂಬುದು ತಿಳಿದಿಲ್ಲ,’ ಎಂದು ತನಿಖಾ ವರದಿಯಲ್ಲಿ ವಿವರಿಸಿರುವುದು ತಿಳಿದು ಬಂದಿದೆ.
ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಅನುಮತಿಯಿಲ್ಲದೆ ಕಟ್ಟಡಗಳನ್ನು ನಿರ್ಮಿಸಿದೆ. ಮತ್ತು ಅನುಮತಿಯಿಲ್ಲದೆ ಬೇರೆ ಬೇರೆ ವ್ಯಕ್ತಿಗಳಿಗೆ ಆಸ್ತಿಯನ್ನು ಬಿಟ್ಟುಕೊಟ್ಟಿದೆ. ಇಂತಹ ವ್ಯಕ್ತಿಗಳ ವಿರುದ್ಧ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯು ಸೂಕ್ತ ಕ್ರಮ ಕೈಗೊಳ್ಳಬೇಕು. ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯು ವಕ್ಫ್ ಕಾಯಿದೆಯ ನಿಬಂಧನೆಗಳಿಗೆ ಅನುಸಾರವಾಗಿ ವಕ್ಫ್ ಆಸ್ತಿಯನ್ನು ಪುನರಾರಂಭಿಸಲು / ಸ್ವಾಧೀನಪಡಿಸಿಕೊಳ್ಳಲು ಕ್ರಮ ತೆಗೆದುಕೊಳ್ಳಬೇಕು ಎಂದು ವರದಿಯಲ್ಲಿ ಶಿಫಾರಸ್ಸು ಮಾಡಿರುವುದು ಗೊತ್ತಾಗಿದೆ.
ಮೈಸೂರಿನ ಫೌಜಿಯಾ ಮಂಜಿಲ್ ಹೆಸರಿನಲ್ಲಿರುವ ವಕ್ಫ್ ಆಸ್ತಿಗಳು ಮತ್ತು ಅವುಗಳ ವಹಿವಾಟಿನ ಕುರಿತೂ ಉಪ ಲೋಕಾಯುಕ್ತರ ತನಿಖಾ ತಂಡವು ಹಲವು ಸಂಗತಿಗಳನ್ನು ಬಹಿರಂಗಗೊಳಿಸಿದೆ. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಅಜೀಜ್ ಸೇಠ್ ಅವರ ಹೆಸರನ್ನೂ ವರದಿಯಲ್ಲಿ ಉಲ್ಲೇಖಿಸಿರುವುದು ತಿಳಿದು ಬಂದಿದೆ.
ದಿವಂಗತ ಜನಾಬ್ ಅಜೀಜ್ ಸೇಟ್ ಅವರ ಸಲಹೆಯ ಮೇರೆಗೆ ಮುಸ್ಲಿಂ ಬಾಲಕರ ಅನಾಥಾಶ್ರಮದ ವ್ಯವಸ್ಥಾಪಕ ಸಮಿತಿಯು ಒಂದು ಅಭಿವೃದ್ಧಿ ಒಪ್ಪಂದವನ್ನು ಮಾಡಿಕೊಂಡಿತ್ತು. ಈ ಆಸ್ತಿಯ ಅಭಿವೃದ್ಧಿಗೆ ಎ ಎಸ್ ಅಸೋಸಿಯೇಟ್ಸ್ ಮತ್ತು ಮಜಲಿಸ್-ಎ-ರಿಫಾಹುಲ್ ಮುಸ್ಲಿಮೀನ್, ಮುಸ್ಲಿಂ ಬಾಲಕರ ಅನಾಥಾಶ್ರಮ ಸಮಿತಿಯೊಂದಿಗೆ ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಂಡಿತ್ತು. ಇದಕ್ಕೆ ಜಿಲ್ಲಾ ವಕ್ಫ್ ಸಲಹಾ ಸಮಿತಿಯು ಅನುಮೋದಿಸಿತ್ತು.
ಅಲ್ಲದೇ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯು ಕೆಲವು ಷರತ್ತುಗಳನ್ನು ವಿಧಿಸಿ ಅಭಿವೃದ್ಧಿ ಒಪ್ಪಂದವನ್ನು ಕಾನೂನುಬದ್ಧಗೊಳಿಸಿ ಅನುಮೋದಿಸಿತ್ತು. ಅಭಿವೃದ್ಧಿದಾರರು ವಕ್ಫ್‌ಗೆ ಪಾವತಿಸಬೇಕಾದ 8.00 ರಿಂದ 10.00 ಲಕ್ಷಗಳ ಮರು ಪಾವತಿಸಲಾಗದ ದೇಣಿಗೆ, ಅಭಿವೃದ್ಧಿದಾರರು ಆವರಣವನ್ನು ಸ್ವಾಧೀನಪಡಿಸಿಕೊಂಡ ದಿನಾಂಕದಿಂದ ತಿಂಗಳಿಗೆ 8,000 ರು.ನಂತೆ ಪರವಾನಗಿ ಶುಲ್ಕವನ್ನು ಪಾವತಿಸಬೇಕು.
ಈ ಕಟ್ಟಡವನ್ನು ಪೂರ್ಣಗೊಳಿಸಿದ ನಂತರ ತಿಂಗಳಿಗೆ 14,000 ರು. ಪಾವತಿಸಬೇಕು. 30 ವರ್ಷಗಳ ಪರವಾನಗಿ ಅವಧಿ ಪೂರ್ಣಗೊಳ್ಳುವವರೆಗೆ ಮೂರು ವರ್ಷಗಳಿಗೊಮ್ಮೆ 10 ಪ್ರತಿಶತದಷ್ಟು ಪರವಾನಗಿ ಶುಲ್ಕವನ್ನು ಹೆಚ್ಚಿಸಬೇಕು ಎಂಬ ಷರತ್ತನ್ನು ವಿಧಿಸಿತ್ತು. ಇದಕ್ಕೆ ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಅನುಮೋದನೆ ಪಡೆಯಬೇಕು ಎಂದೂ ಹೇಳಿತ್ತು. ಇದರ ಪ್ರಕಾರ ಎ ಎಸ್ ಅಸೋಸಿಯೇಟ್ಸ್ , ವಕ್ಫ್ ಆಸ್ತಿಯಲ್ಲಿ ವಾಣಿಜ್ಯ ಸಂಕೀರ್ಣಗಳನ್ನು ನಿರ್ಮಿಸಿತ್ತು.
ಎ ಎಸ್ ಅಸೋಸಿಯೇಟ್ಸ್ ಮಜಲಿಸ್-ಐ-ರಿಹಾಫುಲ್ ಮುಸ್ಲಿಮಿನ್‌ಗೆ ಮಾಸಿಕ ಬಾಡಿಗೆ 16,940 ರೂ ಗಳನ್ನು ಪಾವತಿಸುತ್ತಿದೆ ಎಂದು ವಕ್ಫ್ ಮಂಡಳಿಗೆ ತಿಳಿಸಿತ್ತು. ಆದರೆ ಈ ಆಸ್ತಿಯನ್ನು ಗುತ್ತಿಗೆ ನೀಡುವ ಸಂಬಂಧ ವಕ್ಫ್ ಆಡಳಿತ ಸಮಿತಿಯು ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಮಂಜೂರಾತಿ ಪಡೆದಿರಲಿಲ್ಲ. ಅಲ್ಲದೇ ಆಸ್ತಿಗೆ ಬಾಡಿಗೆಯನ್ನು ನಿಗದಿಪಡಿಸುವಾಗ ಅನುಸರಿಸಿದ ಮಾರ್ಗಸೂಚಿಗಳು ಸ್ಪಷ್ಟವಾಗಿಲ್ಲ ಎಂದು ವರದಿಯಲ್ಲಿ ವಿವರಿಸಿದೆ.
‘ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯು ಮೇಲೆ ತಿಳಿಸಿದ ಒಪ್ಪಂದಗಳನ್ನು ಮಾಡಿಕೊಂಡಿರುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಆ ಆಸ್ತಿಯನ್ನು ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯು ವಕ್ಫ್ ಆಸ್ತಿ ಎಂದು ನಮೂದಿಸಬೇಕು. ಮತ್ತು ಅದನ್ನು ಮೀಸಲಿಟ್ಟ ಉದ್ದೇಶಕ್ಕಾಗಿ ವಕ್ಫ್ ಆಸ್ತಿಯನ್ನು ಬಳಸಬೇಕು,’ ಎಂದು ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದೆ.
ಅದೇ ರೀತಿ ಮುಸ್ಲಿಂ ಬಾಲಕಿಯರ ಅನಾಥಾಶ್ರಮಕ್ಕೆ ಸಂಬಂಧಿಸಿದ ಅಂಗಡಿಗಳ ಗುತ್ತಿಗೆ, ಬಾಡಿಗೆ ಹಣದ ಬಗ್ಗೆಯೂ ತನಿಖಾ ಸಮಿತಿಯು ಹಲವು ಸಂಗತಿಗಳನ್ನು ವರದಿಯಲ್ಲಿ ದಾಖಲಿಸಿದೆ.
ಜಿಲ್ಲಾ ವಕ್ಫ್ ಅಧಿಕಾರಿಯು ತನಿಖಾ ತಂಡಕ್ಕೆ ನೀಡಿದ ಮಾಹಿತಿ ಪ್ರಕಾರ ಮುಸ್ಲಿಂ ಬಾಲಕಿಯರ ಅನಾಥಾಶ್ರಮದ ಸುತ್ತ ಹಂತ ಹಂತವಾಗಿ ಈವರೆಗೆ 52 ಮಳಿಗೆ-ಅಂಗಡಿಗಳನ್ನು ನಿರ್ಮಿಸಲಾಗಿದೆ. ಇದರ ಬಾಡಿಗೆಯನ್ನು ಮುಸ್ಲಿಂ ಬಾಲಕಿಯರ ಅನಾಥಾಶ್ರಮದ ಆಡಳಿತ ಮಂಡಳಿಯಿಂದ ಸಂಗ್ರಹಿಸುತ್ತಿದೆ. ಮುಸ್ಲಿಂ ಬಾಲಕಿಯರ ಅನಾಥಾಶ್ರಮದ ವ್ಯವಸ್ಥಾಪನಾ ಸಮಿತಿಯು 11 ತಿಂಗಳ ಅವಧಿಗೆ ಆಸ್ತಿಯನ್ನು ಆರಂಭಿಕವಾಗಿ ಬಿಡುಗಡೆ ಮಾಡಿದೆ. ಆದರೆ ಬಾಡಿಗೆದಾರರು 11 ತಿಂಗಳ ಅವಧಿ ಮುಗಿದ ನಂತರವೂ ಅಂಗಡಿಗಳನ್ನು ಆಕ್ರಮಿಸಿಕೊಂಡಿದ್ದಾರೆ ಎಂದು ವರದಿಯಲ್ಲಿ ವಿವರಿಸಿದೆ.
11 ತಿಂಗಳ ಅವಧಿ ಮುಗಿದ ನಂತರವೂ ಅಂಗಡಿಗಳನ್ನು ಹೊಂದಿರುವ ವ್ಯಕ್ತಿಗಳು ತಮ್ಮ ಸ್ವಾಧೀನವನ್ನು ಮುಂದುವರಿಸಲು ಆಡಳಿತ ಸಮಿತಿಯು ಅನುಮತಿ ನೀಡಿದೆ. ಆಡಳಿತವು ಬಾಡಿಗೆದಾರರಿಂದ ಬಾಡಿಗೆಯನ್ನು ಸಂಗ್ರಹಿಸುತ್ತಿದೆ. ಈ ವ್ಯವಹಾರಗಳನ್ನು ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಗಮನಕ್ಕೆ ತಂದಿಲ್ಲ. ವಕ್ಫ್ ಆಸ್ತಿಗಳನ್ನು ಗುತ್ತಿಗೆಗೆ ನೀಡಲು ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯ ಅನುಮತಿಯನ್ನು ಪಡೆದಿಲ್ಲ ಎಂದು ತನಿಖಾ ತಂಡವು ಪತ್ತೆ ಹಚ್ಚಿದೆ.
‘ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯು ಮೇಲೆ ತಿಳಿಸಿದ ಗುತ್ತಿಗೆ ರಚನೆಗೆ ಕಾರಣರಾದ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಮತ್ತು ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯು ವಕ್ಫ್ ಆಸ್ತಿಯನ್ನು ಹಿಂಪಡೆಯಲು ಕ್ರಮ ಕೈಗೊಳ್ಳಬೇಕು,’ ಎಂದು ಶಿಫಾರಸ್ಸು ಮಾಡಿದೆ.