ಸಕ್ಕರೆ ಕಾರ್ಖಾನೆಯಲ್ಲಿ 14 ಕೋಟಿ ಅವ್ಯವಹಾರ; ಆರೋಪಿತ ಎಂ ಡಿ ವಿರುದ್ಧ ವಿಚಾರಣೆ ಕೈಬಿಡಲಿದೆಯೇ?

ಬೆಂಗಳೂರು; ಉಡುಪಿಯ ಬ್ರಹ್ಮಾವರದಲ್ಲಿರುವ ದಕ್ಷಿಣ ಕನ್ನಡ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿನ  ವಿವಿಧ ಸ್ವರೂಪದ ಅಕ್ರಮಗಳಲ್ಲಿ  ಭಾಗಿಯಾಗಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ರಮೇಶ್‌ ಹೆಚ್‌ ಎನ್‌ ಅವರ ವಿರುದ್ಧ ವಿಚಾರಣೆ ಆದೇಶವನ್ನು ಕೈಬಿಡಬೇಕು ಎಂಬ ಪ್ರಸ್ತಾವನೆ ಕುರಿತು ಸಹಕಾರ ಇಲಾಖೆಯು ಒಳಾಡಳಿತ ಇಲಾಖೆಯಿಂದ ಮಾಹಿತಿ ಕೋರಿದೆ.

 

ಇದೇ ವಿಷಯಕ್ಕೆ ಸಂಬಂಧಿಸಿದಂತೆ 2025ರ ಜುಲೈ 1ರಂದು ಸಹಕಾರ ಇಲಾಖೆಯು ಒಳಾಡಳಿತ ಇಲಾಖೆಗೆ ಪತ್ರ ಬರೆದಿತ್ತು. 5 ತಿಂಗಳಾಗಿದ್ದರೂ ಸಹ ಒಳಾಡಳಿತ ಇಲಾಖೆಯು ಯಾವುದೇ ಮಾಹಿತಿ ನೀಡಿರಲಿಲ್ಲ. ಹೀಗಾಗಿ 2026ರ ಜನವರಿ 2ರಂದು ಸಹಕಾರ ಇಲಾಖೆಯು ಎರಡನೇ ನೆನಪೋಲೆಯನ್ನು ಬರೆದಿದೆ.

 

ಸಹಕಾರ ಇಲಾಖೆಯು ಬರೆದಿರುವ 2ನೇ ನೆನಪೋಲೆಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಬ್ರಹ್ಮಾವರದಲ್ಲಿನ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಸಕ್ಕರೆ ಕಾರ್ಖಾನೆಯಲ್ಲಿ ನಡೆದಿದೆ ಎನ್ನಲಾಗಿರುವ ವಿವಿಧ ಅಕ್ರಮಗಳ ಕುರಿತು ಬ್ರಹ್ಮಾವರ ಪೊಲೀಸ್‌ ಠಾಣೆಯಲ್ಲಿ ಮೊಕದ್ದಮೆ (ಸಂಖ್ಯೆ; 203/2023)  ದಾಖಲಾಗಿತ್ತು. ಈ ಪ್ರಕರಣದಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಸಕ್ಕರೆ ಕಾರ್ಖಾನೆಯ ಹಿಂದಿನ ವ್ಯವಸ್ಥಾಪಕ ನಿರ್ದೇಶಕ ಹೆಚ್‌ ಎನ್‌ ರಮೇಶ್‌ ಅವರ ಅವರನ್ನೂ 14ನೇ ಆರೋಪಿಯನ್ನಾಗಿಸಲಾಗಿತ್ತು. ಅಲ್ಲದೇ ನ್ಯಾಯಾಲಯದಲ್ಲಿ ಇವರನ್ನು ವಿಚಾರಣೆಗೊಳಪಡಿಸಲು ಸರ್ಕಾರವು ಪೂರ್ವಾನುಮತಿ ನೀಡಿ ಆದೇಶಿಸಿತ್ತು.

 

ಈ ಮಧ್ಯೆ ರಮೇಶ್‌ ಹೆಚ್‌ ಎನ್‌ ಅವರು 2025ರ ಏಪ್ರಿಲ್‌ 25ರಂದು ಸರ್ಕಾರಕ್ಕೆ ಪತ್ರ ಬರೆದಿದ್ದರು. ಈ ಪತ್ರದೊಂದಿಗೆ ಕೆಲವು ದಾಖಲಾತಿಗಳನ್ನೂ ಸಲ್ಲಿಸಿದ್ದರು. ಅಲ್ಲದೆ ಈ ಸಂಸ್ಥೆಯಲ್ಲಿ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ವರ್ಕ್‌ ಡನ್‌ ಸರ್ಟಿಫಿಕೇಟ್‌ ಮಾಡಿರುವ ಸಹಿಯು ಅಧಿಕಾರಿಯವರ ಸಹಿಯಾಗಿರುವುದಿಲ್ಲ. ಇದು ಫೋರ್ಜರಿ ಸಹಿಯಾಗಿದೆ. ಹೀಗಾಗಿ ಈ ಪ್ರಕರಣದಲ್ಲಿ ಅಧಿಕಾರಿಯನ್ನು ವಿಚಾರಣೆಗೊಳಪಡಿಸಿರುವ ಆದೇಶದಿಂದ ಕೈ ಬಿಡಬೇಕು ಎಂದು ಪತ್ರದಲ್ಲಿ ಕೋರಿದ್ದರು ಎಂಬುದು ನೆನಪೋಲೆಯಿಂದ ತಿಳಿದು ಬಂದಿದೆ.

 

 

 

ಈ ಬಗ್ಗೆ ಸಹಕಾರ ಇಲಾಖೆಯು 2025ರ ಜುಲೈ 1ರಂದೇ ಸ್ಪಷ್ಟ ಅಭಿಪ್ರಾಯ ಕೋರಿ ಒಳಾಡಳಿತ ಇಲಾಖೆಯನ್ನು ಕೋರಿತ್ತು. ಆದರೆ 5 ತಿಂಗಳಾದರೂ ಸಹ ಒಳಾಡಳಿತ ಇಲಾಖೆಯು ಯಾವುದೇ ಅಭಿಪ್ರಾಯವನ್ನು ಸಹಕಾರ ಇಲಾಖೆಗೆ ನೀಡಿರಲಿಲ್ಲ. ಹೀಗಾಗಿ 2026ರ ಜನವರಿ 2ರಂದು ಮತ್ತೊಂದು ನೆನಪೋಲೆಯನ್ನು ಬರೆದಿದೆ.

 

ಪ್ರಕರಣವನ್ನು ವಿಚಾರಣೆಗೊಳಪಡಿಸಲು ನಿವೃತ್ತ ಜಿಲ್ಲಾ ನ್ಯಾಯಾಧೀಶ ರಾಧಾಕೃಷ್ಣ ಹೊಳ್ಳ ಅವರನ್ನು ವಿಚಾರಣಾಧಿಕಾರಿಯನ್ನಾಗಿ 2024ರ ನವೆಂಬರ್‍‌ 20ರಂದು ಆದೇಶ ಹೊರಡಿಸಿತ್ತು.

 

‘ಕಾರ್ಖಾನೆಯ ಹಳೆಯ ಯಂತ್ರೋಪಕರಣಗಳ ಮಾರಾಟದಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಬಗ್ಗೆ ನಿವೃತ್ತ ನ್ಯಾಯಾಧೀಶರಿಂದ ತನಿಖೆ ನಡೆಸಲು ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶಕರು ಪ್ರಸ್ತಾವನೆ ಸಲ್ಲಿಸಿದ್ದರು. ಇದನ್ನು ಪರಿಶೀಲಿಸಿರುವ ಸರ್ಕಾರವು ಈ ಕುರಿತು ವಿಸ್ತೃತವಾದ ತನಿಖೆ ನಡೆಸಲು ವಿಶೇಷ ವಿಚಾರಣೆ ನಡೆಸಲು ತೀರ್ಮಾನಿಸಿ ಆದೇಶ ಹೊರಡಿಸಿದೆ,’ ಎಂದು ಆದೇಶದಲ್ಲಿ ವಿವರಿಸಿತ್ತು.

 

 

 

1965ರಿಂದ 2002-03ನೇ ಸಾಲಿನವರೆಗೆ 38 ವರ್ಷ ಕಬ್ಬು ಅರೆಯುವ ಕಾರ್ಯ ನಿರ್ವಹಿಸಿತ್ತು. 2003-04ರಿಂದ ಕಬ್ಬು ಅರೆಯುವಿಕೆಯನ್ನು ಸ್ಥಗಿತಗೊಳಿಸಿ 2006ರ ಏಪ್ರಿಲ್‌ 16ರಿಂದ ಮುಚ್ಚಿದೆ. ಕಾರ್ಖಾನೆಯು 18 ವರ್ಷಗಳಿಂದ ಕಾರ್ಯನಿರ್ವಹಿಸದೇ ಸ್ಥಗಿತಗೊಂಡಿದ್ದರಿಂದ ಕಾರ್ಖಾನೆಯ ಯಂತ್ರೋಪಕರಣಗಳ ಹರಾಜಿನಲ್ಲಿ ಅವ್ಯವಹಾರ ನಡೆದಿದೆ ಎಂದು ಸಹಕಾರ ಸಂಘಗಳ ಉಪ ನಿಬಂಧಕರು ದೂರು ಸಲ್ಲಿಕೆಯಾಗಿತ್ತು. ಈ ದೂರರ್ಜಿಯನ್ನು ಇಲಾಖೆಯು ಪರಿಶೀಲಿಸಿ ವರದಿ ಸಲ್ಲಿಸಿತ್ತು.

 

ಕಾರ್ಖಾನೆಯು ಹಳೆಯ ಯಂತ್ರೋಪಕರಣ ಸ್ಕ್ರಾಪ್‌ ಮಾರಾಟ ಮಾಡಿದಾಗ ನಿಯಮಾನುಸಾರ ಕಾರ್ಖಾನೆಯಿಂದ ಇ-ವೇ ಬಿಲ್‌ಗಳನ್ನು ಜನರೇಟ್‌ ಮಾಡಿಲ್ಲ. ಕಾರ್ಖಾನೆಯಿಂದ ಗೇಟ್‌ ಪಾಸ್‌ಗಳನ್ನೂ ಸಹ ವಿತರಣೆ ಮಾಡಿಲ್ಲ.
ಯಾವ ಯಾವ ಯಂತ್ರೋಪಕರಣ ಸ್ಕ್ರಾಪ್‌ ಮಾರಾಟ ಮಾಡಲಾಗಿದೆ ಎಂಬ ಬಗ್ಗೆ ದಾಸ್ತಾನು ವಹಿ ನಿರ್ವಹಿಸಿ ಅವುಗಳ ಪರಿಮಾಣ ತೂಕದ ವಿವರ ದಾಸ್ತಾನುಗಳ ಪಟ್ಟಿ ಲಭ್ಯವಿಲ್ಲ. ಪ್ರತಿ ಲೋಡ್‌ ತೆಗೆದುಕೊಂಡು ಹೋದ ಬಗ್ಗೆ ಖರೀದಿದಾರರೇ ಇ-ವೇ ಬಿಲ್‌ ಮಾಡಿರುವುದು ಕಂಡು ಬಂದಿದೆ ಎಂದು ಆದೇಶದಲ್ಲಿ ಉಲ್ಲೇಖಿಸಿತ್ತು.

 

 

ಕಾರ್ಖಾನೆಯಿಂದ ತೆಗೆದುಕೊಂಡು ಹೋದ ತೂಕದ ಪರಿಮಾಣದ ವಿವರ ವೇಯಿಂಗ್‌ ಸ್ಕ್ರಿಪ್‌ ಸಹ ಕಾರ್ಖಾನೆಯಲ್ಲಿ ಲಭ್ಯವಿರುವುದಿಲ್ಲ. ಟೆಂಡರ್‍‌ ಕರಾರಿನಂತೆ ಖರೀದಿದಾರರಿಂದ ಬ್ಯಾಂಕ್‌ ಗ್ಯಾರಂಟಿ ಪಡೆದಿಲ್ಲ. ಖರೀದಿದಾರರುಇಂದ ನಿಯಮಾನುಸಾರ ಜಿಎಸ್‌ಟಿ ಕಟಾಯಿಸಿಲ್ಲ. ಸಂಘದ 2021-22ನೇ ಸಾಲಿನ ಲೆಕ್ಕಪರಿಶೋಧನಾ ವರದಿಯನ್ನು ವಾರ್ಷಿಕ ಮಹಾಸಭೆಯಲ್ಲಿ ಮಂಡಿಸಿ ಅನುಮೋದನೆ ಪಡೆದಿಲ್ಲ.

 

ಸಂಘದ ಆಡಳಿತ ಮಂಡಳಿಯು 2022-23ನೇ ಸಾಲಿನ ಲೆಕ್ಕ ಪರಿಶೋಧನಾ ವರದಿ ಪೂರ್ಣಗೊಳಿಸದೇ 2021-22 ಮತ್ತು 2022-23ನೇ ಸಾಲಿನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಂಡಿಸಲು ವಿಫಲವಾಗಿದೆ. ಇದು ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ ಕಲಂ 29 ಸಿ ರೀತಿ ಆಡಳಿತ ಮಂಡಳಿಯ ಕರ್ತವ್ಯಲೋಪವಾಗಿದೆ ಎಂದು ಆದೇಶದಲ್ಲಿ ವಿವರಿಸಿತ್ತು.

 

2023ರ ಸೆ.25ರಂದು ಸಕ್ಕರೆ ಕಾರ್ಖಾನೆಯ ವಾ‍ರ್ಷಿಕ ಮಹಾಸಭೆ ನಡೆದಿದ್ದು ಈ ಸಭೆಯಲ್ಲಿ ಕಾರ್ಖಾನೆಯ ಯಂತ್ರೋಪಕರಣಳ ಹಾಗೂ ಕಟ್ಟಡ ಮಾರಾಟದಲ್ಲ ಅವ್ಯವಹಾರ ನಡೆದಿದ್ದು ಕಾರ್ಖಾನೆಯ ಹಳೆಯ ಯಂತ್ರೋಪಕರಣಗಳ ಮಾರಾಟದಲ್ಲಿ ಪಾರದರ್ಶಕ ಕಾಯ್ದೆ ಅನುಸರಿಸಿಲ್ಲ. ಹಾಗೂ ಹಳೆಯ ಯಂತ್ರೋಪಕರಣಗಳ ಮಾರಾಟದ ನಂತರ ಅಗತ್ಯಕ್ಕಿಂತ ಹೆಚ್ಚಾಗಿ ಇ-ವೇ ಬಿಲ್‌ ಗೇಟ್‌ ಪಾಸ್‌ ನೀಡಿ ಅಕ್ರಮ ನಡೆಸಲಾಗಿದೆ ಎಂದು ಹೇಳಲಾಗಿತ್ತು.

 

 

ಟೆಂಡರ್‍‌ದಾರರಿಂದ ನಿಯಮಾನುಸಾರ ಗ್ಯಾರಂಟಿ ಹಣ ಪಡೆದಿಲ್ಲ ಮತ್ತು ಮಾರಾಟ ಮಾಡಲಾದ ವಸ್ತುಗಳ ಬಾಬ್ತು ಜಿಎಸ್‌ಟಿ ಪಡೆದಿಲ್ಲ ಎಂದು ತೀವ್ರವಾಗಿ ಆಕ್ಷೇಪಿಸಿ ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳಲು ತೀರ್ಮಾನಿಸಿತ್ತು.

 

ಕಾರ್ಖಾನೆಯ ಸ್ಕ್ರಾಪ್‌ ಹಳೆಯ ಯಂತ್ರೋಪಕರಣಗಳ ಮಾರಾಟದಲ್ಲಿ ನಿಯಮಬಾಹಿರ ಆಗಿರುವುದು ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ ಕರ್ನಾಟಕ ಸಹಕಾರ ಸಂಘಗಳ ಕಾಯ್ದೆ 1959ರ ಕಲಂ 64ರ ಶಾಸನಬದ್ಧ ವಿಚಾರಣೆಗೆ ಕ್ರಮ ಕೈಗೊಳ್ಳಬೇಕು ಎಂದು ಸಹಕಾರ ಸಂಘಗಳ ಉಪ ನಿಬಂಧಕರು 2023ರ ನವಂಬರ್‍‌ 24ರಂದು ಕೋರಿದ್ದನ್ನು ಸ್ಮರಿಸಬಹುದು.

Your generous support will help us remain independent and work without fear.

Latest News

Related Posts