ಪುಸ್ತಕ ಖರೀದಿ, ಪ್ರಾಧಿಕಾರದ ನಾಮನಿರ್ದೇಶನ ಪ್ರಸ್ತಾವಕ್ಕೂ 40 ಪರ್ಸೆಂಟ್‌ ಲಂಚಕ್ಕೆ ಬೇಡಿಕೆ; ಸಚಿವ, ಡಿ ಸಿ ಗೆ ದೂರರ್ಜಿ

ಬೆಂಗಳೂರು;  ರಾಜ್ಯದ ಗ್ರಂಥಾಲಯಗಳಿಗೆ ಪುಸ್ತಕ ಖರೀದಿಸಲು ಮತ್ತು ಜಿಲ್ಲಾ ಕೇಂದ್ರ ಗ್ರಂಥಾಲಯ ಪ್ರಾಧಿಕಾರಕ್ಕೆ ಸದಸ್ಯರ ನಾಮನಿರ್ದೇಶನ ಮಾಡಲೂ  ಕೆಲ  ಜಿಲ್ಲಾ ಮುಖ್ಯ ಗ್ರಂಥಾಲಯದ ಅಧಿಕಾರಿಗಳು  40 ಪರ್ಸೆಂಟ್‌ ಲಂಚದ ಹಣಕ್ಕೆ ಬೇಡಿಕೆ ಇರಿಸುತ್ತಿದ್ದಾರೆ ಎಂಬ ಗುರುತರವಾದ ಆರೋಪವು ಕೇಳಿ ಬಂದಿದೆ.

 

ಬಿಬಿಎಂಪಿಯಲ್ಲಿ ಮೇಲಾಧಿಕಾರಿಗಳಿಗೆ ಕಡತ ಮಂಡಿಸಲು 60 ಪರ್ಸೆಂಟ್‌ ಲಂಚಕ್ಕೆ ಬೇಡಿಕೆ ಇರಿಸಲಾಗಿತ್ತು ಎಂಬ ದೂರು ಸಲ್ಲಿಕೆಯಾಗಿತ್ತು. ಇದರ  ಬೆನ್ನಲ್ಲೇ ಗ್ರಂಥಾಲಯಗಳಲ್ಲಿ ಪುಸ್ತಕ ಖರೀದಿಗೂ 40 ಪರ್ಸೆಂಟ್‌ ಲಂಚಕ್ಕೆ ಬೇಡಿಕೆ ಇರಿಸಲಾಗುತ್ತಿದೆ ಎಂದು ಪುಸ್ತಕ ಪ್ರಕಾಶಕ ಮತ್ತು ಮಾರಾಟಗಾರರೊಬ್ಬರು ಜಿಲ್ಲಾ ಸಾರ್ವಜನಿಕ ಗ್ರಂಥಾಲಯ ಪ್ರಾಧಿಕಾರದ ಅಧ್ಯಕ್ಷರೂ ಆಗಿರುವ ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿದ್ದಾರೆ.

 

 

ದೂರು ನೀಡಿರುವುದನ್ನು ಪುಸ್ತಕ ಪ್ರಕಾಶಕ ‘ದಿ ಫೈಲ್‌’ಗೆ ಖಚಿತಪಡಿಸಿದ್ದಾರೆ.  ಮತ್ತು  ಈ ದೂರಿನ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಸರ್ಕಾರಿ ಶಾಲೆಗಳ ಅಭಿವೃದ್ದಿಗಾಗಿ ಕಾರ್ಪೋರೇಟ್‌ ಕಂಪನಿಗಳ  ಸಿಎಸ್‌ಆರ್‍‌ ನಿಧಿಯನ್ನು ಶಾಲೆಗೆ ಬಿಡುಗಡೆ ಮಾಡಿಸಲೂ ಶೇ.40ರಿಂದ 50ರಷ್ಟು ಲಂಚಕ್ಕೆ ಬೇಡಿಕೆ ಇಟ್ಟಿದ್ದರ ಬಗ್ಗೆಯೂ ಆರೋಪ ಕೇಳಿ ಬಂದಿತ್ತು. ಈ ಎಲ್ಲದರ ನಡುವೆಯೇ ಪುಸ್ತಕ ಖರೀದಿಗೆ ಲಂಚಕ್ಕೆ ಬೇಡಿಕೆ ಇಟ್ಟಿರುವ ದೂರು ಮುನ್ನೆಲೆಗೆ ಬಂದಿದೆ.

 

ಪುಸ್ತಕ ಖರೀದಿಸಲು 40 ಪರ್ಸೆಂಟ್ ಹಣ ನೀಡಬೇಕು ಎಂದು ಬೀದರ್‍‌ ಜಿಲ್ಲಾ ಕೇಂದ್ರ ಮುಖ್ಯ ಗ್ರಂಥಾಲಯದ ಅಧಿಕಾರಿ ಸಿದ್ದಾರ್ಥ ಬಾವಿಕಟ್ಟಿ ಎಂಬುವರು ಗುರಿಯಾಗಿದ್ದಾರೆ. ಈ ಸಂಬಂಧ ಲೇಖಕ, ಪ್ರಕಾಶಕ ಮತ್ತು ಮಾರಾಟಗಾರ ಕುಪೇಂದ್ರ ಎಸ್‌ ಹೊಸಮನಿ ಎಂಬುವರು 2024ರ ಅಕ್ಟೋಬರ್‍‌ 24ರಂದು ಜಿಲ್ಲಾ ಸಾರ್ವಜನಿಕ ಗ್ರಂಥಾಲಯ ಪ್ರಾಧಿಕಾರದ ಅಧ್ಯಕ್ಷರು ಹಾಗೂ ಜಿಲ್ಲಾಧಿಕಾರಿಗಳಿಗೆ  ದೂರು ಸಲ್ಲಿಸಿದ್ದಾರೆ. ಇದೇ ದೂರನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಅವರಿಗೂ ಸಲ್ಲಿಸಿದ್ದಾರೆ.

 

ದೂರಿನಲ್ಲೇನಿದೆ?

 

ಬೀದರ್ ಜಿಲ್ಲಾ ಕೇಂದ್ರ ಮುಖ್ಯ ಗ್ರಂಥಾಲಯದ ಪ್ರಭಾರಿ ಅಧಿಕಾರಿಯಾದ ಸಿದ್ಧಾರ್ಥ ಬಾವಿಕಟ್ಟಿ ಅವರು ಕಳೆದ 10 ವರ್ಷಗಳಿಂದ ಒಂದೇ ಸ್ಥಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರು ಏನೇ ಮಾಡಿದರೂ ನನಗೆ ಇಲ್ಲಿಂದ ಯಾರೂ ಕೂಡ ಅಲುಗಾಡಿಸಲು ಸಾಧ್ಯವಿಲ್ಲ ಎಂಬ ಮನೋಧೋರಣೆ ಹೊಂದಿದ್ದಾರೆ. ಅಧಿಕಾರ ದುರುಪಯೋಗಪಡಿಸಿಕೊಂಡು ಭ್ರಷ್ಟಾಚಾರ, ಲಂಚ ಪಡೆಯುವ ಪ್ರವೃತ್ತಿಯನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ. ಇದಕ್ಕೆ ನಾನೇ ಸಾಕ್ಷಿ ಎಂದು ದೂರಿನಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.

 

 

 

‘ನನ್ನ ಹತ್ತಿರ 2.00 ಲಕ್ಷ ರೂ.ಗಳನ್ನು ನೀಡಬೇಕು. ಬೀದರ್‍‌ ಜಿಲ್ಲಾ ಕೇಂದ್ರ ಗ್ರಂಥಾಲಯ ಪ್ರಾಧಿಕಾರ ಸದಸ್ಯರ ನಾಮನಿರ್ದೇಶನ ಪ್ರಸ್ತಾವನೆ ಕಳಿಸಲು ಮತ್ತು ಹೆಸರನ್ನು ಹಾಕಲು ಲಂಚವನ್ನು ಕೇಳಿರುತ್ತಾರೆ. ಅಲ್ಲದೇ ನನ್ನ ಪುಸ್ತಕವನ್ನು ಖರೀದಿಸಲು ಅವರು ನನಗೆ ಶೇ.40 ಹಣ ನೀಡಬೇಕು ಎಂದು ಬೇಡಿಕೆ ಒಡ್ಡಿರುತ್ತಾರೆ,’ ಎಂದು ದೂರಿನಲ್ಲಿ ಕುಪೇಂದ್ರ ಹೊಸಮನಿ ಅವರು ವಿವರಿಸಿರುವುದು ತಿಳಿದು ಬಂದಿದೆ.

 

ಕೇವಲ ಪುಸ್ತಕ ಆಯ್ಕೆಗೆ ಮಾತ್ರ ಲಂಚ ಕೇಳುತ್ತಿಲ್ಲ. ಬದಲಿಗೆ ಆಯ್ಕೆಯಿಂದ ಬಿಟ್ಟು ಹೋದ ಪುಸ್ತಕಗಳನ್ನು ಮರು ಆಯ್ಕೆ ಮಾಡುವಲ್ಲಿಯೂ ಅಧಿಕಾರಿಗಳು ಲಂಚ ಕೇಳುತ್ತಿದ್ದಾರೆ ಎಂಬ ಆಪಾದನೆಯೂ ಕೇಳಿ ಬಂದಿದೆ. ಪುಸ್ತಕ ಸರಬರಾಜು ಮಾಡುವಾಗ, ಪುಸ್ತಕಗಳನ್ನು ದಾಸ್ತಾನಿಗೆ ತೆಗೆದುಕೊಳ್ಳುವವರು, ಉಪ ನಿರ್ದೇಶಕರಿಗೂ ಲಂಚ ಕೊಡಲೇಬೇಕಿದೆ ಎನ್ನುತ್ತಾರೆ ಹೆಸರು  ಹೇಳಲಿಚ್ಛಿಸದ ಮತ್ತೊಬ್ಬ ಪ್ರಕಾಶಕರೊಬ್ಬರು.

 

ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ 40 ಪರ್ಸೆಂಟ್‌ ಲಂಚದ ಆರೋಪ ಕೇಳಿ ಬಂದಿತ್ತು. ಪ್ರತಿಪಕ್ಷದ ನಾಯಕರಾಗಿದ್ದ ಸಿದ್ದರಾಮಯ್ಯ ಅವರು ಇದನ್ನು ಬಲವಾಗಿ ಖಂಡಿಸಿ, ಪೇ ಸಿಎಂ ಅಭಿಯಾನ ನಡೆಸಿದ್ದನ್ನು ಸ್ಮರಿಸಬಹುದು.

 

ಸಿಎಸ್‌ಆರ್‍‌ ನಿಧಿ ಮಂಜೂರು ಮಾಡಿಸಲು ಸಚಿವ ಮಧು ಬಂಗಾರಪ್ಪ ಅವರ ಪಿಎ ಶೇ. 40ರಿಂದ 50ರಷ್ಟು ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ  ಎಂಬ ಆಪಾದನೆಯು ಕೇಳಿ ಬಂದಿತ್ತು.

 

‘ನನ್ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದ್ತಾ ಇದ್ದಾರೆ. ನಾನು ಆ ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ. ಶಾಲೆಗೆ ಸಿಎಸ್‌ಆರ್‍‌ ಫಂಡ್‌ನ್ನು ತರುವ ಏಜೆನ್ಸಿಗಳು ಹೇಳ್ತಾರೆ, ಮಧು ಬಂಗಾರಪ್ಪನವರ ಪಿಎ 40% ಇಂದ 50% ಕೇಳುತ್ತಾರೆ ಒಂದು ಸಿಎಸ್‌ಆರ್‍‌ ಫಂಡ್‌ಗೆ ಸೈನ್‌ ಹಾಕಿಸಿಕೊಳ್ಳುವುದಕ್ಕೆ. ಶಾಲೆಯ ದುರಸ್ತಿಗೆ ಅಂತ 35ರಿಂದ 40 ಲಕ್ಷ ರು ಕೋಟ್‌ ಮಾಡಿಸಿಕೊಂಡು ಹೋದರು. ಅದು ಶಾಲೆ ತನಕ ಬರುವ ಹೊತ್ತಿಗೆ ಕೇವಲ 10 ಲಕ್ಷ. ಶಾಲೆಯ ಅಭಿವೃದ್ಧಿ ಸಿಎಸ್‌ಆರ್‍‌ ಫಂಡ್‌ನ್ನು ಬಳಸಿ ಅನ್ನೊದು ಇನ್ನೊಂದು ದಂದೆ. ಈ ವಿಚಾರದಲ್ಲಿ ಶಾಲೆಯ ಮುಖ್ಯ ಶಿಕ್ಷಕರಿಂದ ಹಿಡಿದು ಸಿಆರ್‍‌ಪಿ, ಬಿಆರ್‍ಪಿ ಬಿಇಒ ತನಕ ಕೂಡ ಹಣ ಕೊಡಬೇಕಾಗಿದೆ,’ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ವೊಂದಕ್ಕೆ ಪ್ರತಿಕ್ರಿಯೆ ನೀಡಿದ್ದರು.

 

ಸಿಎಸ್‌ಆರ್‍‌ ಫಂಡ್‌ಗೂ ಶೇ.50ರಷ್ಟು ಲಂಚ!; ಶಿಕ್ಷಣ ಸಚಿವರ ಪಿಎ ವಿರುದ್ಧವೇ ಆರೋಪ

 

2,000 ಗ್ರಾಮ ಪಂಚಾಯ್ತಿಗಳಲ್ಲಿ ಸಿಎಸ್‌ಆರ್‍‌ ಫಂಡ್‌ ಅಡಿ ಮಾದರಿ ಶಾಲೆ ನಿರ್ಮಾಣ ಮಾಡಲು 03 ಪಂಚಾಯ್ತಿಗಳಿಗೆ ಒಂದು ಮಾದರಿ ಶಾಲೆಯಂತೆ 1,000 ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸ ನೀಡಲು ಸರ್ಕಾರವು ಉದ್ದೇಶಿಸಿದೆ. ಇದಕ್ಕೆ ಬೇಕಾಗಿರುವ ಅನುದಾನವನ್ನು ಕಾರ್ಪೋರೇಟ್‌ ಕಂಪನಿಗಳ ಮೂಲಕ ಒದಗಿಸಲು ಕಾರ್ಯ ಯೋಜನೆ ರೂಪಿಸಿರುವುದನ್ನು ಸ್ಮರಿಸಬಹುದು.

SUPPORT THE FILE

Latest News

Related Posts