ಬೆಂಗಳೂರು; ಗುತ್ತಿಗೆ ಕಾಮಗಾರಿಗಳಲ್ಲಿ ಅಲ್ಪಸಂಖ್ಯಾತರ ಪ್ರವರ್ಗ 2 ಬಿ ಗೆ ಶೇ. 4ರಷ್ಟು ಮೀಸಲಾತಿ ನೀಡಲು ಕೆಟಿಪಿಪಿ ಕಾಯ್ದೆಗೆ ತಿದ್ದುಪಡಿ ತರುವ ಪ್ರಸ್ತಾವದ ಕುರಿತು ಯಾವುದೇ ತೀರ್ಮಾನವನ್ನು ಸರ್ಕಾರ ಕೈಗೊಂಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೀಗ ಅಧಿಕೃತವಾಗಿ ಹೇಳಿಕೆ ನೀಡಿದ್ದಾರೆ. ಆದರೆ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಕಾಯ್ದೆಗೆ ತಿದ್ದುಪಡಿ ತರುವ ಸಂಬಂಧ ಯಾವುದೇ ಕಡತವೂ ಇಲ್ಲವೆಂದು ಹೇಳಿದ್ದಾರೆ.
ಸರ್ಕಾರದ ಮುಂದೆ ಇಂತಹ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಸಿದ್ದರಾಮಯ್ಯ ಅವರು ಸ್ಪಷ್ಟಪಡಿಸಿದ್ದಾರೆ ಎಂದು ಮುಖ್ಯಮಂತ್ರಿಗಳ ಸಚಿವಾಲಯವು ಹೇಳಿತ್ತು. ಇದನ್ನು ಸಿಎಂ ಮೀಡಿಯಾ ಗ್ರೂಪ್‌ನಲ್ಲಿ ಗಿರೀಶ್ ಕೋಟೆ ಸಿದ್ದರಾಮಯ್ಯ ಎಂಬುವರು ಹಂಚಿಕೆ ಮಾಡಿದ್ದರು.
ಆದರೆ ಮೈಸೂರಿನಲ್ಲಿ ಇಂದು ನೀಡಿರುವ ಹೇಳಿಕೆಯಲ್ಲಿ ಒಂದು ದಿನದ ಹಿಂದೆಯೇ ನೀಡಿರುವ ಸ್ಪಷ್ಟನೆಯನ್ನು ಪುನರುಚ್ಛರಿಸಿಲ್ಲ. ಹೀಗಾಗಿ ಮೊದಲು ನೀಡಿದ್ದ ಸ್ಪಷ್ಟನೆಯನ್ನು ಅವರೇ ತಳ್ಳಿ ಹಾಕಿದಂತಾಗಿದೆ. ಈ ಮೂಲಕ ಸರ್ಕಾರದ ಹಂತದಲ್ಲಿ ಪ್ರಸ್ತಾವನೆ ಇರುವುದು ಮತ್ತು ಇದಕ್ಕೆ ಸಂಬಂಧಿಸಿದ ಕಡತವು ಇಲಾಖೆಯಲ್ಲಿರುವುದನ್ನು ಒಪ್ಪಿಕೊಂಡಂತಿದೆ.
ಕಾಯ್ದೆ ತಿದ್ದುಪಡಿ ಮಾಡಲು ಸಿದ್ದರಾಮಯ್ಯ ಅವರು ಅನುಮೋದಿಸಿದ್ದಾರೆ ಎಂದು ಆರ್ಥಿಕ ಇಲಾಖೆಯ ಅಧಿಕಾರಿಯು ಟಿಪ್ಪಣಿ ಹಾಳೆಯಲ್ಲಿ ಉಲ್ಲೇಖಿಸಿದ್ದಾರೆ. ಆದರೂ ಸಹ ಅನುಮೋದನೆ ನೀಡಿರುವ ಬಗ್ಗೆ ಹೇಳಿಕೆಯಲ್ಲಿ ಎಲ್ಲಿಯೂ ಉಲ್ಲೇಖಿಸಿಲ್ಲ ಮತ್ತು ಸ್ಪಷ್ಟಪಡಿಸಿಲ್ಲ. ಇದು ಮತ್ತಷ್ಟು ಸಂಶಯಗಳಿಗೆ ದಾರಿ ಮಾಡಿಕೊಟ್ಟಂತಾಗಿದೆ.
ಈ ಬೆಳವಣಿಗೆ ಮಧ್ಯೆ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಸರ್ಕಾರದ ಕಾಮಗಾರಿ ಗುತ್ತಿಗೆಯಲ್ಲಿ ಮೀಸಲು ಎಂಬುದೇ ಕಟ್ಟು ಕತೆ, ಅಂತಹ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಮಾಧ್ಯಮಗಳಿಗೆ ಡಿ ಕೆ ಶಿವಕುಮಾರ್ ಅವರು ನೀಡಿರುವ ಹೇಳಿಕೆ ಯೂ ಚರ್ಚೆಗೆ ಗ್ರಾಸವಾಗಿದೆ.
ಸಿದ್ದರಾಮಯ್ಯ ಅವರ ಹೇಳಿಕೆಯಲ್ಲೇನಿದೆ?
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇ.ಡಿ ಸಂಸ್ಥೆ ಕಾನೂನು ಪ್ರಕಾರ ಮಾಡುವ ತನಿಖೆ ನಡೆಸಲಿ, ಅದಕ್ಕೆ ಯಾವುದೇ ರೀತಿಯ ಪ್ರತಿರೋಧವನ್ನು ನಾವು ಒಡ್ಡುವುದಿಲ್ಲ. ಇಡಿ ತನಿಖೆ ನಿಷ್ಪಪಕ್ಷಪಾತವಾಗಿ ನಡೆಯುತ್ತಿದೆಯೇ ಇಲ್ಲವೇ ಎಂಬುದರ ಬಗ್ಗೆ ಪ್ರತಿಕ್ರಿಯೆ ನೀಡುವುದಿಲ್ಲ. ಆದರೆ ಸುಳ್ಳು ಆರೋಪಗಳ ಮೇಲೆ ತನಿಖೆ ನಡೆಯುತ್ತಿದೆ ಎಂಬುದಷ್ಟೇ ಹೇಳಬಲ್ಲೇ.
ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದವರಿಗೆ ಗುತ್ತಿಗೆಗಳಲ್ಲಿ ಮೀಸಲಾತಿ ನೀಡಿರುವಂತೆ ಮುಸ್ಲಿಂಮರಿಗೂ ಮೀಸಲಾತಿ ನೀಡಿ ಎಂದು ಬೇಡಿಕೆಯಿಟ್ಟಿದ್ದಾರೆ. ಆದರೆ ಈ ಬಗ್ಗೆ ಯಾವುದೇ ತೀರ್ಮಾನ ಸರ್ಕಾರ ತೆಗೆದುಕೊಂಡಿಲ್ಲ. ಈಗಾಗಲೇ ಸುಳ್ಳು ಸುದ್ದಿ ಹರಡಿ ಸಮಾಜದ ಸೌಹಾರ್ದತೆ ಕೆಡಿಸಲು ಆರಂಭಿಸಿದೆ. ಅವರಿಗೆ ಕೋಮುಗಲಭೆ ಸೃಷ್ಟಿಸುವುದೇ ಕಾಯಕವಾಗಿದೆ ಎಂದು ಹೇಳಿದ್ದಾರೆ.
ಡಿ ಕೆ ಶಿವಕುಮಾರ್ ಹೇಳಿಕೆಯಲ್ಲೇನಿದೆ?
‘ಉಪ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಬಿಜೆಪಿಯವರು ಸುಳ್ಳು ಕಥಾನಕ ಸೃಷ್ಟಿಸಿದ್ದಾರೆ. ಸರ್ಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಮುಸ್ಲಿಮರಿಗೆ ಮೀಸಲು ಪ್ರಸ್ತಾವನೆಯೇ ಇಲ್ಲ. ಇದಕ್ಕಾಗಿ ಕೆಟಿಪಿಪಿ ಕಾಯ್ದೆಗೆ ತಿದ್ದುಪಡಿಯ ಕಡತವೂ ಇಲ್ಲವೆಂದು ನಾನೇ ಅಧಿಕೃತವಾಗಿ ಹೇಳುತ್ತಿದ್ದೇನಲ್ಲ,’ ಎಂದು ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.
ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಮೀಸಲಾತಿ ಕಲ್ಪಿಸುವ ಸಂಬಂಧ ಬೇಡಿಕೆ ಬಂದಿದೆ. ಆದರೆ ಈ ಬಗ್ಗೆ ಯಾವುದೇ ಅಂತಿಮ ತೀರ್ಮಾನವಾಗಿಲ್ಲ ಎಂದು ಅಧಿಕೃತವಾಗಿ ಹೇಳಿರುವಾಗ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಅಂತಹ ಯಾವುದೇ ಪ್ರಸ್ತಾವನೆಯಿಲ್ಲ ಮತ್ತು ಕಡತವೂ ಇಲ್ಲ ಎಂದು ನೀಡಿರುವ ಪ್ರತಿಕ್ರಿಯೆಯೂ ಸಹ ಚರ್ಚೆಗೆ ಗ್ರಾಸವಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ನೀಡಿರುವ ಪ್ರತಿಕ್ರಿಯೆ ಮತ್ತು ಹೇಳಿಕೆಗಳಿಗೂ ಒಂದೊಕ್ಕೊಂದು ತಾಳಮೇಳವೇ ಇಲ್ಲ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ.
ಗುತ್ತಿಗೆ ಕಾಮಗಾರಿಗಳಲ್ಲಿ ಅಲ್ಪಸಂಖ್ಯಾತರ ಪ್ರವರ್ಗ 2 ಬಿ ಗೆ ಶೇ. 4ರಷ್ಟು ಮೀಸಲಾತಿ ನೀಡುವ ಪ್ರಸ್ತಾವಕ್ಕೆ ಸಂಬಂಧಿಸಿದಂತೆ ಕೆಟಿಪಿಪಿ ಕಾಯ್ದೆಗೆ ತಿದ್ದುಪಡಿ ತರುವ ಸಂಬಂಧದ ಕಡತವು, 2024ರ ಅಕ್ಟೋಬರ್ 25 ರಿಂದಲೂ ಕಾನೂನು ಸಚಿವ ಹೆಚ್ ಕೆ ಪಾಟೀಲ್ ಅವರ ಬಳಿಯೇ ಇದೆ ಎಂದು ‘ದಿ ಫೈಲ್’ ದಾಖಲೆ ಸಹಿತ ವರದಿ ಪ್ರಕಟಿಸಿತ್ತು.
ಅಲ್ಪಸಂಖ್ಯಾತರಿಗೆ ಗುತ್ತಿಗೆಯಲ್ಲಿ ಮೀಸಲಾತಿ; ಸಚಿವ ಹೆಚ್ ಕೆ ಪಾಟೀಲ್ ಲಾಗಿನ್‌ನಲ್ಲೇ ಇದೆ ಕಡತ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮೋದನೆ ನೀಡಿರುವ ದಾಖಲೆ ಬಹಿರಂಗವಾಗಿದ್ದರೂ ಸಹ ಇದೊಂದು ಹೊಸ ಸುಳ್ಳು ಎಂದು ಮುಖ್ಯಮಂತ್ರಿ ಸಚಿವಾಲಯದ ಹೆಸರಿನಲ್ಲಿ ಸಿಎಂ ಮೀಡಿಯಾ ಗ್ರೂಪ್ 1 ನಲ್ಲಿ ನೀಡಿದ್ದ ಸ್ಪಷ್ಟನೆಯು ಚರ್ಚೆಗೆ ಗ್ರಾಸವಾಗಿತ್ತು.
ಗುತ್ತಿಗೆಯಲ್ಲಿ ಅಲ್ಪಸಂಖ್ಯಾತರಿಗೆ ಮೀಸಲಾತಿ ಪ್ರಸ್ತಾವ; ಸತ್ಯದ ತಲೆಯ ಮೇಲೆ ಹೊಡೆದ ಹಾಗೆ ಸುಳ್ಳು ಹೇಳಿದರೇ ಸಿಎಂ?
ಗುತ್ತಿಗೆ ಕಾಮಗಾರಿಗಳಲ್ಲಿ 2 ಕೋಟಿ ವರೆಗೆ ಎಸ್‌ಸಿ ಮತ್ತು ಎಸ್ ಟಿ ಜನಾಂಗಕ್ಕೆ ಮೀಸಲಾತಿ ನೀಡಬೇಕು ಎಂಬ ಬೇಡಿಕೆ ಹೆಚ್ಚುತ್ತಿರುವ ಬೆನ್ನಲ್ಲೇ ಇದೀಗ ಅಲ್ಪಸಂಖ್ಯಾತರ ಪ್ರವರ್ಗ ಬಿ ಗೆ ಶೇ.4ರಷ್ಟು ಮೀಸಲಾತಿ ನೀಡಲು ಅನುಮೋದನೆ ನೀಡಿದ್ದರು. ಈ ಕುರಿತು ‘ದಿ ಫೈಲ್’ ದಾಖಲೆ ಸಹಿತ ವರದಿ ಪ್ರಕಟಿಸಿತ್ತು.
ಗುತ್ತಿಗೆಯಲ್ಲಿ ಅಲ್ಪಸಂಖ್ಯಾತರಿಗೆ ಶೇ.4ರಷ್ಟು ಮೀಸಲಾತಿ; ಮುಖ್ಯಮಂತ್ರಿ ಅನುಮೋದನೆ, ಕಾಯ್ದೆ ತಿದ್ದುಪಡಿಗೆ ಚಾಲನೆ
‘ಆರ್ಥಿಕವಾಗಿ ಸಾಮಾಜಿಕವಾಗಿ ಹಿಂದುಳಿದಿರುವ ಅಲ್ಪಸಂಖ್ಯಾತರ ಸಮುದಾಯದ ಪ್ರವರ್ಗ 2 ಬಿ ಗೆ ಗುತ್ತಿಗೆ ಕಾಮಗಾರಿಗಳಲ್ಲಿ ಮೀಸಲಾತಿ ಕಲ್ಪಿಸಿಲ್ಲ. ಈ ಸೌಲಭ್ಯವನ್ನು ಅಲ್ಪಸಂಖ್ಯಾತರ ಪ್ರವರ್ಗ ಬಿ ಗೆ ಶೇ.4ರಷ್ಟು ಮೀಸಲಾತಿ ಸೌಲಭ್ಯವನ್ನು ವಿಸ್ತರಿಸಿ ಸೂಕ್ತ ಆದೇಶ ನೀಡಬೇಕು,’ ಎಂದು ಮನವಿಯಲ್ಲಿ ಕೋರಿದ್ದರು.
ಈ ಪತ್ರವನ್ನು ಪರಿಶೀಲಿಸಿ ಮಂಡಿಸಿ ಎಂದು ಅದೇ ದಿನದಂದು ಸಿದ್ದರಾಮಯ್ಯ ಅವರು ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಸೂಚನೆ ನೀಡಿದ್ದರು. ಈ ಪತ್ರದ ಕುರಿತು ಆರ್ಥಿಕ ಇಲಾಖೆಯು ಪರಿಶೀಲಿಸಿತ್ತು. ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶೇ.4ರಷ್ಟು ಮೀಸಲಾತಿ ನೀಡಲು ಅನುಮೋದನೆ ನೀಡಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.
ಕೆಟಿಪಿಪಿ ಕಾಯ್ದೆಗೆ ತಿದ್ದುಪಡಿ
ಈ ಸಂಬಂಧ ಕೆಟಿಪಿಪಿ ಕಾಯ್ದೆಯ 1999ರ 6ನೇಪ್ರಕರಣಕ್ಕೆ ತಿದ್ದುಪಡಿ ಮಾಡಲಿದೆ. ಇದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅನುಮೋದನೆ ನೀಡಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.
‘ಟೆಂಡರ್ ಆಹ್ವಾನಿಸುವ ಪ್ರಾಧಿಕಾರವು ಅಧಿಸೂಚಿತ ಇಲಾಖೆಗಳಿಂದ ನಿಯಮಿಸಿದ ಪ್ರಕ್ರಿಯೆಗಳನ್ನು ಅನುಸರಿಸುವ ಮೂಲಕ ಕೈಗೊಳ್ಳಬೇಕಾದ ಅಗತ್ಯ ನೋಟೀಸ್, ಪತ್ರ ವ್ಯವಹಾರಗಳು ಮತ್ತು ಪ್ರಕಟಣೆಗಳನ್ನು ಹೊರಡಿಸುವಾಗ ನಿರ್ಮಾಣ ಕಾಮಗಾರಿಗಳ ಮೌಲ್ಯ ಒಂದು ಕೋಟಿ ರು.ಗಳಿಗೆ ಮೀರದ ಅಂಥ ಕಾಮಗಾರಿಗಳ ಸಂಖ್ಯೆಯ ಶೇ.4ರಷ್ಟನ್ನು ಮೀರದಂತೆ ಅಲ್ಪಸಂಖ್ಯಾತರ ಪ್ರವರ್ಗ 2 ಬಿ ರಲ್ಲಿ ನಿರ್ದಿಷ್ಟಪಡಿಸಿದ ಅಲ್ಪಸಂಖ್ಯಾತರ ಜಾತಿಗಳಿಗೆ ಸೇರಿದ ಟೆಂಡರ್‍ದಾರರುಗಳಿಗೆ ನೀಡಬೇಕು. ಅಲ್ಲದೇ ಎರಡು ಬಾರಿಗಳಲ್ಲಿ ಆಹ್ವಾನಿಸಿರುವುದಕ್ಕೆ ಪ್ರತಿಕ್ರಿಯೆಯಾಗಿ ಅಲ್ಪಸಂಖ್ಯಾತರ ಪ್ರವರ್ಗ 2 ಬಿ ಗೆ ಸೇರಿದ ವ್ಯಕ್ತಿಗಳಿಂದ ಟೆಂಡರ್ ಸ್ವೀಕರಿಸದಿದ್ದಲ್ಲಿ ಅಂಥ ಕಾಮಗಾರಿಗಳನ್ನು ಇತರರಿಗೆ ಟೆಂಡರ್ ನೀಡಬಹುದು,’ ಎಂದು 6ನೇ ಪ್ರಕರಣದಲ್ಲಿ ತಿದ್ದುಪಡಿ ತರಲಿರುವುದು ಗೊತ್ತಾಗಿದೆ.