ಬೆಂಗಳೂರು; ಶೃಂಗೇರಿ ಮಠವು ಬೆಂಗಳೂರಿನಲ್ಲಿ ನಡೆಸುತ್ತಿರುವ ಜ್ಞಾನೋದಯ ಶಾಲೆ ಮತ್ತು ಪಿಯು ಕಾಲೇಜಿನ ಆಡಳಿತ ಮಂಡಳಿಯು ಬಿಬಿಎಂಪಿಯಿಂದ ಯಾವುದೇ ಮಂಜೂರಾತಿ ನಕ್ಷೆಯನ್ನು ಪಡೆಯದೇ ವಸತಿ ಕಟ್ಟಡ ನಿರ್ಮಾಣ ಮಾಡಿರುವುದು ಇದೀಗ ಬಹಿರಂಗವಾಗಿದೆ.
ಹೀಗಾಗಿ ಈ ಕಟ್ಟಡವನ್ನು ಇದೇ ನವೆಂಬರ್ 11ರಂದು ತೆರವುಗೊಳಿಸಲು ಬಿಬಿಎಂಪಿಯು ಮುಂದಾಗಿದೆ. ಈ ಸಂಬಂಧ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಬೇಕು ಎಂದು ಬಿಬಿಎಂಪಿಯು ಧರ್ಮರಾಯಸ್ವಾಮಿ ದೇವಸ್ಥಾನ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅವರು 2024ರ ನವೆಂಬರ್ 4ರಂದು ಪತ್ರ ಬರೆದಿದ್ದಾರೆ.
ಬಿಬಿಎಂಪಿ ಅನುಮೋದನೆ ಇಲ್ಲದೆಯೇ ಅನಧಿಕೃತವಾಗಿ ನಿರ್ಮಾಣವಾಗುತ್ತಿರುವ ಕಟ್ಟಡಗಳ ವಿರುದ್ಧ ಸೂಕ್ತ ಮತ್ತು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಅವರು ಸೂಚನೆ ನೀಡಿದ್ದರ ಬೆನ್ನಲ್ಲೇ ಶೃಂಗೇರಿ ಮಠದ ಜ್ಞಾನೋದಯ ಶಾಲೆ ಆಡಳಿತ ಮಂಡಳಿಯು ನಿರ್ಮಾಣ ಮಾಡುತ್ತಿರುವ ವಸತಿ ಕಟ್ಟಡದ ಪ್ರಕರಣವೂ ಮುನ್ನೆಲೆಗೆ ಬಂದಿದೆ.
ಬಿಬಿಎಂಪಿ ಪತ್ರದಲ್ಲೇನಿದೆ?
ವಾರ್ಡ್ ಸಂಖ್ಯೆ 162 ಸುಂಕೇನಹಳ್ಳಿ ವ್ಯಾಪ್ತಿಯಲ್ಲಿ ಬರುವ (ಸ್ವತ್ತಿನ ಸಂಖ್ಯೆ 160/24) ಬುಲ್ ಟೆಂಪಲ್ ರೋಡ್ ಶಂಕರಪುರಂ ಪಾರ್ಕ್ ಬಳಿಯ ಕಟ್ಟಡ ಮಾಲೀಕರಾದ ಶೃಂಗೇರಿ ಮಠದ ಆಡಳಿತಗಾರರು ಶ್ರೀ ಶೃಂಗೇರಿ ಮಠದ ಆಸ್ತಿಯ ಜ್ಞಾನೋದಯ ಶಾಲೆ ಮತ್ತು ಪಿ ಯು ಕಾಲೇಜಿನವರು ವಸತಿ ಕಟ್ಟಡವನ್ನು ನಿರ್ಮಿಸಲು ಬಿಬಿಎಂಪಿಯಿಂದ ಯಾವುದೇ ಮಂಜೂರಾತಿ ನಕ್ಷೆಯನ್ನು ಪಡೆಯದೇ ಅನಧಿಕೃತವಾಗಿ ಕಟ್ಟಡ ನಿರ್ಮಿಸಿದ್ದಾರೆ.
ಈ ಸಂಬಂಧ ಬಿಬಿಎಂಪಿ ಬಿಬಿಎಂಪಿ ಕಾಯ್ದೆ 2020ರ ಕಲಂ 248 (1), 248 (2) ಮತ್ತು 248(3) ತಾತ್ಕಾಲಿಕ ಅದೇಶ ಹಾಗೂ ಸ್ಥಿರೀಕರಣ ನೋಟೀಸ್‌ಗಳನ್ನು ಜಾರಿ ಮಾಡಿರುತ್ತದೆ. ಹಾಗೂ ಬಿಬಿಎಂಪಿ ಕಾಯ್ದೆ ಕಲಂ 356ರ ಪ್ರಕಾರ ಕಟ್ಟಡವನ್ನು ಒಡೆದು ಹಾಕುವ ಸಂಬಂಧ ಚಿಕ್ಕಪೇಟೆ ಕಾರ್ಯಪಾಲಕ ಅಭಿಯಂತರರು ಆದೇಶ ಹೊರಡಿಸಿರುವುದು ಪತ್ರದಿಂದ ತಿಳಿದು ಬಂದಿದೆ.
ಅನಧಿಕೃತವಾಗಿ ನಿರ್ಮಿಸುತ್ತಿರುವ, ನಿರ್ಮಿಸಿರುವ ಕಟ್ಟಡದ ಭಾಗಗಳನ್ನು 2024ರ ನವೆಂಬರ್ 11ರಂದು ತೆರವುಗೊಳಿಸಲು ನಿಗದಿಪಡಿಸಿದೆ. ಈ ಸಂದರ್ಭದಲ್ಲಿ ಯಾವುದೇ ಅಹಿತರಕ ಘಟನೆಗಳು ಸಂಭವಿಸದ ರೀತಿಯಲ್ಲಿ ಪೊಲೀಸ್ ಸಿಬ್ಬಂದಿ ಒದಗಿಸಬೇಕು. ಪಾಲಿಕೆ ಸಿಬ್ಬಂದಿ ವರ್ಗಕ್ಕೆ ಸೂಕ್ತ ರಕ್ಷಣೆ ಒದಗಿಸಲು ಪೊಲೀಸ್ ಬಂದೋಬಸ್ತ್ ಮಾಡಬೇಕು. ಅಲ್ಲದೆ ಈ ಕಾರ್ಯಾಚರಣೆ ಯಶಸ್ವಿಗೊಳಿಸಬೇಕು ಎಂದು ಶಂಕರಪುರಂ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್‍ಗೆ ಬರೆದ ಪತ್ರದಲ್ಲಿ ಕೋರಿರುವುದು ಗೊತ್ತಾಗಿದೆ.
ಈ ಸಂಬಂಧ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರು ಸಚಿವ ಡಿ ಕೆ ಶಿವಕುಮಾರ್ ಅವರೊಂದಿಗೆ ಸಮಾಲೋಚಿಸಿದ್ದಾರೆ ಎಂದು ತಿಳಿದು ಬಂದಿದೆ.
ಹೆಣ್ಣೂರು ಸಮೀಪದ ಬಾಬುಸಾಪಾಳ್ಯದಲ್ಲಿ 6 ಅಂತಸ್ತಿನ ಕಟ್ಟಡ ಕುಸಿದು ಬಿದ್ದ ದುರ್ಘಟನೆಯಿಂದ ಬಿಬಿಎಂಪಿ ಅಧಿಕಾರಿಗಳು ಇನ್ನೂ ಎಚ್ಚೆತ್ತುಕೊಂಡಿಲ್ಲ. ಈ ಮಧ್ಯೆ ಯಲಹಂಕ ವಲಯ ಆಯುಕ್ತ ಐಎಎಸ್ ಅಧಿಕಾರಿ ಕರಿಗೌಡ ಅವರ ವಿರುದ್ಧವೂ ದೂರು ಸಲ್ಲಿಕೆಯಾಗಿತ್ತು.
ಯಲಹಂಕದಲ್ಲಿರುವ ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್‌ನಲ್ಲಿ ನಿರ್ಮಾಣವಾಗಿದೆ ಎನ್ನಲಾಗಿರುವ ಅನಧಿಕೃತವಾಗಿ ಮಳಿಗೆಗಳನ್ನು ತೆರವುಗೊಳಿಸುವಲ್ಲಿ ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಈ ಸಂಬಂಧ ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ನ ಡಾ ಸುನೀಲಕುಮಾರ ಹೆಬ್ಬಿ ಅವರು ಬಿಬಿಎಂಪಿ ಮುಖ್ಯ ಆಯುಕ್ತರಿಗೆ ದೂರು ಸಲ್ಲಿಸಿದ್ದರು.
ಅನಧಿಕೃತ ಮಳಿಗೆ ತೆರವಿಗೆ ನಿರ್ಲಕ್ಷ್ಯ; ವಲಯ ಆಯುಕ್ತ ಕರೀಗೌಡರ ವಿರುದ್ಧ ಮುಖ್ಯ ಆಯುಕ್ತರಿಗೆ ದೂರು
ಅನಧಿಕೃತ ಮಳಿಗೆ, ಕಟ್ಟಡಗಳನ್ನು ತಕ್ಷಣವೇ ನೆಲಸಮಗೊಳಿಸಬೇಕು ಎಂದು ಬಿಬಿಎಂಪಿ ಆದೇಶ ಹೊರಡಿಸಿತ್ತು. ಆದರೆ ಯಲಹಂಕದ ಕೇಂದ್ರೀಯ ಅಪಾರ್ಟ್‌ಮೆಂಟ್‌ನಲ್ಲಿ ನಿರ್ಮಾಣವಾಗಿರುವ ಅನಧಿಕೃತ ಮಳಿಗೆಗಳನ್ನು ತೆರವುಗೊಳಿಸಿಲ್ಲ. ಮಳಿಗೆಗಳಿಗೆ ನೀಡಲಾಗಿದ್ದ ವಿದ್ಯುತ್ ಸಂಪರ್ಕವನ್ನು ಬೆಸ್ಕಾಂ ಕಡಿತಗೊಳಿಸಿದೆ. ಆದರೂ ಬಿಬಿಎಂಪಿ ವಲಯ ಆಯುಕ್ತರು ಅನಧಿಕೃತವಾಗಿ ನಿರ್ಮಾಣವಾಗಿರುವ ಮಳಿಗೆಗಳನ್ನು ತೆರವುಗೊಳಿಸುತ್ತಿಲ್ಲ ಎಂದು ಸುನೀಲ್ ಕುಮಾರ್ ಹೆಬ್ಬಿ ಅವರು ದೂರಿನಲ್ಲಿ ವಿವರಿಸಿದ್ದರು.
ಅಲ್ಲದೇ ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್‌ನ ನಿವೇಶನದಲ್ಲಿ ಅನಧಿಕೃತವಾಗಿ ಮಳಿಗೆಗಳನ್ನು ನಿರ್ಮಿಸಿರುವುದು ಕಂಡು ಬಂದಿದೆ ಎಂದು ಖುದ್ದು ಬಿಬಿಎಂಪಿಯ ಸಹಾಯಕ ಕಾರ್ಯಪಾಲಕ ಅಭಿಯಂತರರು ಸಹ 2024ರ ಆಗಸ್ಟ್ 29ರಂದೇ ಸ್ಥಿರೀಕರಣ ಆದೇಶವನ್ನೂ ಹೊರಡಿಸಿದ್ದರು.
‘ಬಿಬಿಎಂಪಿ ಕಾಯ್ದೆ 2020 ಚಾಲ್ತಿಯಲ್ಲಿರುವ ಕಟ್ಟಡ ಉಪ ವಿಧಿಗಳು ಹಾಗೂ ಬಿಬಿಎಂಪಿ ವಲಯ ನಿಯಮಾವಳಿಗಳು 2015ನ್ನು ಉಲ್ಲಂಘಿಸಿರುವುದು ನನಗೆ ಮನಃಪೂರ್ತಿಯಾಗಿ ದೃಢಪಟ್ಟಿದೆ. ಆದ ಕಾರಣ ಅನಧಿಕೃತವಾಗಿ ನಿರ್ಮಾಣವಾಗಿರುವ ಕಟ್ಟಡವನ್ನು ಕೆಡವಿ ಹಾಕಲು/ ತೆರವುಗೊಳಿಸಬೇಕು,’ ಎಂದು ಆದೇಶಿಸಿರುವುದು ಗೊತ್ತಾಗಿದೆ.
ಇದೇ ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್‌ನ ಮಾಲೀಕರು ಕಟ್ಟಡ ನಿಯಮಾವಳಿಗಳನ್ನು ಉಲ್ಲಂಘಿಸಿದ್ದಾರೆ ಎಂದು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆಯು ಸಹ ಬೆಸ್ಕಾಂಗೆ 2024ರಲ್ಲಿ ಪತ್ರ ಬರೆದಿತ್ತು.