ಸರ್ಕಾರಿ ಬಸ್‌ ನಿಲ್ದಾಣದಲ್ಲಿ ಅಂಬೇಡ್ಕರ್‍‌ ಪುತ್ಥಳಿ ಸ್ಥಾಪನೆಗೆ ಕಾನೂನು ಇಲಾಖೆ ಅಸಮ್ಮತಿ

ಬೆಂಗಳೂರು; ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್‌ ನಿಲ್ದಾಣಗಳಲ್ಲಿ ಡಾ ಬಿ ಆರ್‍‌ ಅಂಬೇಡ್ಕರ್‍‌ ಅವರ ಪುತ್ಥಳಿ ನಿರ್ಮಾಣಕ್ಕೆ ಸ್ಥಳ ಒದಗಿಸಲು ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯು ಅಸಮ್ಮತಿ  ವ್ಯಕ್ತಪಡಿಸಿದೆ.

 

ಸಾರ್ವನಿಕ ಸ್ಥಳದಲ್ಲಿ ಯಾವುದೇ ಗಣ್ಯ ವ್ಯಕ್ತಿಗಳ ಪ್ರತಿಮೆಗಳನ್ನು ಸ್ಥಾಪಿಸಲು ನಿರ್ಬಂಧಿಸಿ ಸರ್ವೋಚ್ಚ ನ್ಯಾಯಾಲಯ ಮತ್ತು ರಾಜ್ಯ ಉನ್ನತ ನ್ಯಾಯಾಲಯವು ತೀರ್ಪು ನೀಡಿತ್ತು. ಈ ತೀರ್ಪನ್ನು ಮುಂದಿರಿಸಿರುವ ಕಾನೂನು ಇಲಾಖೆಯು ಶಹಾಪುರ ಗ್ರಾಮಾಂತರ ಹಳೇ ಬಸ್‌ ನಿಲ್ದಾಣದಲ್ಲಿ ಡಾ ಬಿ ಆರ್‍‌ ಅಂಬೇಡ್ಕರ್‍‌ ಪುತ್ಥಳಿ ನಿರ್ಮಾಣಕ್ಕಾಗಿ ಸ್ಥಳ ಒದಗಿಸಲು ಸೂಕ್ತವಲ್ಲ ಎಂದು ಅಭಿಪ್ರಾಯ ನೀಡಿದೆ.

 

ಈ ಸಂಬಂಧ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ಶೈಮಾ ಖಮ್ರೋಜ್‌ ಅವರು ನೀಡಿರುವ ಅಭಿಪ್ರಾಯದ ಪ್ರತಿಯು ‘ದಿ ಫೈಲ್’ಗೆ ( LAW-OPN/437/2024, TD/9/TCO/2024) ಲಭ್ಯವಾಗಿದೆ.

 

ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯಾಪ್ತಿಯಲ್ಲಿನ ಶಹಾಪುರ ಗ್ರಾಮಾಂತರ ಹಳೇ ಬಸ್‌ ನಿಲ್ದಾಣದಲ್ಲಿ ಡಾ ಬಿ ಆರ್‍‌ ಅಂಬೇಡ್ಕರ್‍‌ ಅವರ ಪುತ್ಥಳಿ ನಿರ್ಮಾಣ ಮತ್ತು ಇದಕ್ಕೆ ಸ್ಥಳ ಒದಗಿಸುವ ಸಂಬಂಧ ಸಾರಿಗೆ ಇಲಾಖೆಯು ಕಾನೂನು ಇಲಾಖೆಯ ಅಭಿಪ್ರಾಯ ಕೋರಿತ್ತು. ಇದನ್ನು ಪರಿಶೀಲಿಸಿರುವ ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯು ತನ್ನ ಅಭಿಪ್ರಾಯವನ್ನು ಸಾರಿಗೆ ಇಲಾಖೆಗೆ ತಿಳಿಸಿದೆ ಎಂದು ಗೊತ್ತಾಗಿದೆ.

 

ಅಭಿಪ್ರಾಯದಲ್ಲೇನಿದೆ?

 

ಸಾರ್ವಜನಿಕ ಜಾಗದಲ್ಲಿ ಯಾವುದೇ ಸಂತರ, ಶರಣರ, ಜನನಾಯಕರ, ಸ್ವಾತಂತ್ರ್ಯ ಹೋರಾಟಗಾರರ ಅಥವಾ ಗಣ್ಯ ವ್ಯಕ್ತಿಗಳ ಪ್ರತಿಮೆಗಳನ್ನು ಸ್ಥಾಪಿಸುವುದನ್ನು ನಿರ್ಬಂಧಿಸಿದೆ. ಈ ಸಂಬಂಧ ಕನ್ನಡ, ಸಂಸ್ಕೃತಿ ಮತ್ತು ವಾರ್ತಾ ಇಲಾಖೆಯು 2012ರ ಜೂನ್‌ 11ರಂದು ಸುತ್ತೋಲೆ ಹೊರಡಿಸಿದೆ. ಅಲ್ಲದೆ ಪ್ರತಿಮೆ ಸ್ಥಾಪಿಸುವುದಕ್ಕೆ ಸಂಘ ಸಂಸ್ಥೆಗಳು ಮುಂದೆ ಬಂದಲ್ಲಿ ಪ್ರಾಥಮಿಕವಾಗಿ ಅಂತಹ ಸಂಘ, ಸಂಸ್ಥೆಗಳು ತಮಗೆ ಸೇರಿದ ನಿವೇಶನದಲ್ಲಿ ಪ್ರತಿಮೆ ನಿರ್ಮಿಸುವ ಮತ್ತು ಅವುಗಳ ಭದ್ರತೆ, ಸಂರಕ್ಷಣೆಗೆ ಸಂಬಂಧಿಸಿದಂತೆ ಮುಚ್ಚಳಿಕೆ ನೀಡಬೇಕು ಎಂದಿದೆ.

 

ಮಂಜೂರಾತಿ ಪಡೆದು ಸ್ಥಾಪಿಸಲಾಗುವ ಪ್ರತಿಮೆಗಳ ನಿರ್ವಹಣೆಯನ್ನು ಆಯಾ ಸಂಘ ಸಂಸ್ಥೆಗಳೇ ನಿರ್ವಹಿಸಬೇಕು ಎಂದು ಸುತ್ತೋಲೆಯಲ್ಲಿ ವಿವರಿಸಿತ್ತು. ಅದೇ ರೀತಿ ಸಾರ್ವಜನಿಕ ಸ್ಥಳಗಳಲ್ಲಿ ಪುತ್ಥಳಿ ನಿರ್ಮಾಣ ಮಾಡುವುದರ ಬಗ್ಗೆ ಸರ್ವೋಚ್ಛ ನ್ಯಾಯಾಲಯವು 2023ರ ಜನರಿ 18ರಂದು ಎಲ್ಲಾ ರಾಜ್ಯ ಸರ್ಕಾರಗಳಿಗೆ ನಿರ್ದಶನಗಳನ್ನು ನೀಡಿದೆ.

 

‘ಇನ್ನು ಮುಂದೆ, ಸಾರ್ವಜನಿಕ ರಸ್ತೆಗಳು, ಪಾದಚಾರಿ ಮಾರ್ಗಗಳು, ಬದಿಯಲ್ಲಿ ಮತ್ತು ಇತರ ಸಾರ್ವಜನಿಕ ಬೀದಿ ದೀಪಗಳು ಅಥವಾ ವಿದ್ಯುದ್ದೀಕರಣ, ಟ್ರಾಫಿಕ್, ಟೋಲ್ ಅಥವಾ ಅಭಿವೃದ್ಧಿ ಮತ್ತು ಸುಂದರೀಕರಣಕ್ಕೆ ಸಂಬಂಧಿಸಿದ ನಿರ್ಮಾಣಗಳಲ್ಲಿ ಯಾವುದೇ ಕಟ್ಟಡವನ್ನು ಸ್ಥಾಪಿಸಲು ಅಥವಾ ಯಾವುದೇ ಕಟ್ಟಡವನ್ನು ನಿರ್ಮಿಸಲು ರಾಜ್ಯ ಸರ್ಕಾರವು ಯಾವುದೇ ಅನುಮತಿಯನ್ನು ನೀಡಬಾರದು,’ ಎಂದು ಸುಪ್ರೀಂ ಕೋರ್ಟ್‌ 2023ರ ಜನವರಿ 18ರಂದು ನೀಡಿದ್ದ ತೀರ್ಪಿನಲ್ಲಿ ಎಲ್ಎಲಾ ರಾಜ್ಯ ಸರ್ಕಾರಗಳಿಗೆ ನೀಡಿದ್ದ ನಿರ್ದೇಶನವನ್ನು ರಾಜ್ಯ ಕಾನೂನು ಇಲಾಖೆಯು ತನ್ನ ಟಿಪ್ಪಣಿಯಲ್ಲಿ ಉಲ್ಲೇಖಿಸಿದೆ.

 

ಅದೇ ರೀತಿ ಸಾರ್ವಜನಿಕ ರಸ್ತೆಗಳು, ಪಾದಚಾರಿ ಮಾರ್ಗಗಳು, ಬದಿಯಲ್ಲಿ ಮತ್ತು ಇತರ ಸಾರ್ವಜನಿಕ ಬೀದಿ ದೀಪಗಳು ಅಥವಾ ವಿದ್ಯುದ್ದೀಕರಣ, ಟ್ರಾಫಿಕ್, ಟೋಲ್ ಅಥವಾ ಅಭಿವೃದ್ಧಿ ಮತ್ತು ಸುಂದರೀಕರಣಕ್ಕೆ ಸಂಬಂಧಿಸಿದ ನಿರ್ಮಾಣಗಳಲ್ಲಿ ಯಾವುದೇ ಕಟ್ಟಡವನ್ನು ಸ್ಥಾಪಿಸಲು ಅಥವಾ ಯಾವುದೇ ಕಟ್ಟಡವನ್ನು ನಿರ್ಮಿಸಲು ಅನುಮತಿ ನೀಡಬಾರದು ಎಂದು ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಗಳಿಗೆ ನಿರ್ದಿಷ್ಟವಾಗಿ ನಿರ್ದೇಶಿಸಿರುವ ಅಂಶವನ್ನು ಹೈಕೋರ್ಟ್‌ ಕೂಡ ಮೈಸೂರು ಮಹಾನಗರ ಪಾಲಿಕೆ ಪ್ರಕರಣದಲ್ಲಿ ಉಲ್ಲೇಖಿಸಿತ್ತು.

 

ಸುಪ್ರೀಂ ಕೋರ್ಟ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಪ್ರತಿಮೆ ಸ್ಥಾಪಿಸಲು ರಾಜ್ಯ ಸರ್ಕಾರ ಮತ್ತು ಮೈಸೂರು ಮಹಾನಗರ ಪಾಲಿಕೆ ಅನುಮತಿ ನೀಡುವುದಿಲ್ಲ ಮತ್ತು ಈ ಅನುಮತಿ ಕೋರುವ ಪ್ರಶ್ನೆಯೂ ಉದ್ಭವಿಸವುದಿಲ್ಲ ಎಂದು ಹೈಕೋರ್ಟ್‌ ಆದೇಶ ನೀಡಿದ್ದನ್ನೂ ಟಿಪ್ಪಣಿಯಲ್ಲಿ ಪ್ರಸ್ತಾವಿಸಿದೆ.

 

‘ ಕನ್ನಡ ಸಂಸ್ಕೃತಿ ಮತ್ತು ವಾರ್ತಾ ಇಲಾಖೆಯು 2012ರ ಜೂನ್‌ 11ರಂದು ಹೊರಡಿಸಿರುವ ಸುತ್ತೋಲೆ, ಸರ್ವೋಚ್ಚ ನ್ಯಾಯಾಲಯ ಹಾಗೂ ಕರ್ನಾಟಕ ಉಚ್ಛ ನ್ಯಾಯಾಲಯ ನೀಡಿರುವ ತೀರ್ಪುಗಳ ಅನ್ವಯ ಸಾರ್ವಜನಿಕ ಸ್ಥಳದಲ್ಲಿ ಯಾವುದೇ ಗಣ್ಯ ವ್ಯಕ್ತಿಗಳ ಪ್ರತಿಮೆಗಳನ್ನು ಸ್ಥಾಪಿಸುವುದು ನಿರ್ಬಂಧಿಸಿರುವ ಹಿನ್ನೆಲೆಯಲ್ಲಿ ಶಹಾಪುರ ಗ್ರಾಮಾಂತರ ಹಳೇ ಬಸ್‌ ನಿಲ್ದಾಣ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಆಸ್ತಿಯಾಗಿದ್ದು ಈ ಸ್ಥಳದಲ್ಲಿ ಡಾ ಬಿ ಆರ್‍‌ ಅಂಬೇಡ್ಕರ್‍‌ ಅವರ ಪುತ್ಥಳಿ ನಿರ್ಮಾಣಕ್ಕಾಗಿ ಸ್ಥಳ ಒದಗಿಸುವುದು ಸೂಕ್ತವಲ್ಲ, ‘ ಎಂದು ಕಾನೂನು, ನ್ಯಾಯ ಮತ್ತು ಮಾನವ ಹಕ್ಕುಗಳ ಇಲಾಖೆಯ ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ಶೈಮಾ ಖಮ್ರೋಜ್‌ ಅವರು ಅಭಿಪ್ರಾಯಿಸಿರುವುದು ಗೊತ್ತಾಗಿದೆ.

 

ಪ್ರಕರಣದ ಹಿನ್ನೆಲೆ

 

ಶಹಾಪುರ ಹಳೇ ಬಸ್‌ ನಿಲ್ದಾಣದ ಮುಂಭಾಗದಲ್ಲಿನ ಖಾಲಿ ಜಾಗದಲ್ಲಿ ಹಾಗೂ ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ಉದ್ಯಾನಕ್ಕೆ ಮೀಸಲಿಟ್ಟ ಜಾಗದಲ್ಲಿ ಅನಧಿಕೃತವಾಗಿ ಡಾ ಬಿ ಆರ್‍‌ ಅಂಬೇಡ್ಕರ್‍‌ ಅವರ ಭಾವಚಿತ್ರ ಇರಿಸಲಾಗಿತ್ತು. ಇದೇ ಜಾಗದಲ್ಲಿ ಡಾ ಬಿ ಆರ್‍‌ ಅಂಬೇಡ್ಕರ್‍‌ ಅವರ ಪುತ್ಥಳಿ ನಿರ್ಮಾಣ ಮಾಡಲು ಪ್ರತಿಭಟನೆ, ಧರಣಿ ನಡೆದಿದ್ದವು. ಈ ಸಂಬಂಧ ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಘಟಕ ವ್ಯವಸ್ಥಾಪಕರು ಪೊಲೀಸ್‌ ಮತ್ತು ತಹಶೀಲ್ದಾರ್‍‌ ನೆರವು ಕೋರಿದ್ದರು.

 

ಬೋರ್ಡ್‌ನ್ನು ತೆರವುಗೊಳಿಸುವುದು ನಮ್ಮ ವ್ಯಾಪ್ತಿಗೆ ಬರುವುದಿಲ್ಲ ಹಾಗೂ ಇಲಾಖೆಯಿಂದಲೇ ತೆರವುಗೊಳಿಸಬೇಕು. ಆ ಸಂದರ್ಭದಲ್ಲಿ ಪೊಲೀಸ್‌ ರಕ್ಷಣೆ ನೀಡಲಾಗುತ್ತದೆ ಎಂದು ಶಹಾಪುರ ಪೊಲೀಸ್‌ ಠಾಣೆಯ ಠಾಣಾಧಿಕಾರಿಗಳು ಹಿಂಬರಹ ನೀಡಿದ್ದರು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಶಾಂತಿ ಸಮಿತಿ ಸಭೆಯೂ ನಡೆದಿತ್ತು. ನಿಗಮದ ಸ್ಥಳದಲ್ಲಿ ಅನಧಿಕೃತವಾಗಿ ಬೋರ್ಡ್‌ಗಳನ್ನು ಅಳವಡಿಸಲು ಅವಕಾಶವಿಲ್ಲ ಎಂದು ತಿಳಿಸಿದ್ದರು.

 

ಇದಕ್ಕೆ ಸಂಘಟನೆಯ ಪದಾಧಿಕಾರಿಗಳು ಆಕ್ಷೇಪಣೆ ವ್ಯಕ್ತಪಡಿಸಿದ್ದರು. ಹಳೆಯ ಬಸ್‌ ನಿಲ್ದಾಣದಲ್ಲಿ ಅಂಬೇಡ್ಕರ್‍‌ ಪುತ್ಥಳಿ ನಿರ್ಮಾಣ ಮಾಡಲು ಸ್ಥಳ ಮಂಜೂರು ಅಥವಾ ಅವಕಾಶ ಕಲ್ಪಿಸಿಕೊಟ್ಟಲ್ಲಿ ಮಾತ್ರ ಪೆಂಡಾಲ್‌ ಮತ್ತು ಬೋರ್ಡ್‌ ತೆರವುಗೊಳಿಸಲಾಗುವುದು ಎಂದು ಪ್ರತಿನಭಟನಾಕಾರರು ತಿಳಿಸಿದ್ದರು. ಈ ಸ್ಥಳದಲ್ಲಿ ಅನಧಿಕೃತವಾಗಿ ಕುಳಿತುಕೊಂಡಿದ್ದ 15/20 ಜನರ ಮೇಲೆ ಪೊಲೀಸ್‌ ಠಾಣೆಯಲ್ಲಿ (0254/2023) ಅನ್ವಯ ಪ್ರಕರಣವೂ ದಾಖಲಾಗಿತ್ತು.

 

ಈ ಪ್ರಕರಣದ ಕುರಿತು ಕಾನೂನು ಇಲಾಖೆಯು ನೀಡಿರುವ ಅಭಿಪ್ರಾಯದ ಕುರಿತು ಸಚಿವ ಹೆಚ್‌ ಕೆ ಪಾಟೀಲ್‌, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು ಚರ್ಚಿಸಿದ್ದಾರೆ ಎಂದು ತಿಳಿದು ಬಂದಿದೆ.

SUPPORT THE FILE

Latest News

Related Posts