ಫ್ಯಾಕ್ಟ್‌ ಚೆಕ್‌ ಘಟಕಗಳ ಅಸ್ತಿತ್ವಕ್ಕೆ ಕುತ್ತು; ಬಾಂಬೆ ಹೈಕೋರ್ಟ್‌ ತೀರ್ಪು, ರಾಜ್ಯದ ಮೇಲೂ ಪರಿಣಾಮ ಬೀರಲಿದೆಯೇ?

ಬೆಂಗಳೂರು;   ಸರ್ಕಾರದ ವಿರುದ್ಧ ಹರಡಲಾಗುವ ಸುಳ್ಳು ಅಥವಾ ನಕಲಿ ಸುದ್ದಿಗಳನ್ನು ಪತ್ತೆ ಹಚ್ಚುವುದಕ್ಕಾಗಿ ಫ್ಯಾಕ್ಟ್ ಚೆಕ್ (ಸತ್ಯ ಪರಿಶೀಲನಾ ಘಟಕ) ರಚಿಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರ ನೀಡುವುದಕ್ಕೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್‌ ನೀಡಿರುವ ತೀರ್ಪು, ಕರ್ನಾಟಕದಲ್ಲಿ  ಗೌರಿ ಮೀಡಿಯಾ ಟ್ರಸ್ಟ್‌ ಸೇರಿದಂತೆ  ಇನ್ನಿತರೆ  ಖಾಸಗಿ ಸಂಸ್ಥೆಗಳ ಸಹಯೋಗದೊಂದಿಗೆ ಈಗಾಗಲೇ  ರಚನೆಯಾಗಿರುವ ಫ್ಯಾಕ್ಟ್‌ ಚೆಕ್‌ ಘಟಕದ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳಿವೆ.

 

ಫ್ಯಾಕ್ಟ್‌ ಚೆಕ್‌ ಘಟಕಕ್ಕೆ ಸಂಬಂಧಿಸಿದ ಮಾಹಿತಿ ತಂತ್ರಜ್ಞಾನ (ಮಧ್ಯಸ್ಥ ವೇದಿಕೆಗಳಿಗೆ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ತಿದ್ದುಪಡಿ ನಿಯಮಾವಳಿ- 2023ರ ನಿಯಮಗಳ ಪೈಕಿ ವಿಶೇಷವಾಗಿ 3ನೇ ನಿಯಮವನ್ನು ಬಾಂಬೆ ಹೈಕೋರ್ಟ್‌ ರದ್ದುಗೊಳಿಸಿರುವುದು,  ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಕಾಂಗ್ರೆಸ್‌ ಸರ್ಕಾರವು ಸ್ಥಾಪಿಸಿರುವ ಫ್ಯಾಕ್ಟ್‌ ಚೆಕ್‌ ಘಟಕದ ಅಸ್ತಿತ್ವವನ್ನು  ಪ್ರಶ್ನಿಸಿದಂತಾಗಿದೆ. ಅಲ್ಲದೇ ಸರ್ಕಾರಕ್ಕೂ  ತೀವ್ರ ಹಿನ್ನಡೆಯಾಗುವ ಸಾಧ್ಯತೆಗಳೂ ಇವೆ.

 

ಈ ಕುರಿತು ರಾಜ್ಯದ  ಕೆಲ ಸಂಘಟನೆಗಳು  ಬಾಂಬೆ ಹೈಕೋರ್ಟ್‌ ನೀಡಿರುವ ತೀರ್ಪನ್ನು ಮುಂದಿರಿಸಿ ರಿಟ್‌ ಅರ್ಜಿ ದಾಖಲಿಸಲು ತಯಾರಿ ನಡೆಸಿವೆ ಎಂದು ಗೊತ್ತಾಗಿದೆ.

 

ಬಾಂಬೆ ಹೈಕೋರ್ಟ್‌ ನೀಡಿರುವ ತೀರ್ಪಿನಲ್ಲೇನಿದೆ?

 

ಸರ್ಕಾರದ ವಿರುದ್ಧ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುವ ಸುಳ್ಳು ಸುದ್ದಿಗಳ ಪತ್ತೆಗಾಗಿ ಫ್ಯಾಕ್ಟ್‌ ಚೆಕ್‌ ಘಟಕ ಸ್ಥಾಪನೆಗೆ ಅನುವು ಮಾಡಿಕೊಡುವ ಮಾಹಿತಿ ತಂತ್ರಜ್ಞಾನ (ಐಟಿ) ತಿದ್ದುಪಡಿ ನಿಯಮಗಳನ್ನು ಬಾಂಬೆ ಹೈಕೋರ್ಟ್‌  ರದ್ದು ಮಾಡಿದೆ.  ಈ ನಿಯಮಗಳು ಅಸಾಂವಿಧಾನಿಕ ಎಂದೂ  ಹೇಳಿದೆ.  ಇದು ಸಂವಿಧಾನದ 14 ಮತ್ತು 19 ನೇ ವಿಧಿಗಳನ್ನು ಉಲ್ಲಂಘಿಸುತ್ತದೆ ಎಂದು ನಾನು ಅಭಿಪ್ರಾಯಪಟ್ಟಿದ್ದೇನೆ” ಎಂಬುದಾಗಿ ಏಕಸದಸ್ಯ ಪೀಠವು ತನ್ನ ತೀರ್ಪಿನಲ್ಲಿ ಹೇಳಿದೆ.

 

ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿ ಸಂಹಿತೆ) ನಿಯಮಾವಳಿ- 2021ಕ್ಕೆ ಐಟಿ ತಿದ್ದುಪಡಿ ನಿಯಮಾವಳಿ- 2023 ತಿದ್ದುಪಡಿಗಳನ್ನು ಮಾಡಿತ್ತು. ಸುಳ್ಳು ಆನ್‌ಲೈನ್‌ ಸುದ್ದಿ ಪತ್ತೆಹಚ್ಚುವುದಕ್ಕಾಗಿ ಸತ್ಯ ಪರಿಶೀಲನಾ ಘಟಕ ರಚಿಸುವ ಅಧಿಕಾರವನ್ನು ಕೇಂದ್ರ ಸರ್ಕಾರಕ್ಕೆ ನೀಡುವ 3ನೇ ನಿಯಮ ಪ್ರಶ್ನಿಸಿ ಖ್ಯಾತ ಹಾಸ್ಯ ಕಲಾವಿದ ಕುನಾಲ್ ಕಮ್ರಾ ಅವರೂ ಸೇರಿದಂತೆ ವಿವಿಧ ಅರ್ಜಿದಾರರು ಮನವಿ ಸಲ್ಲಿಸಿದ್ದರು.

 

ತಿದ್ದುಪಡಿಗಳು ಮಾಹಿತಿ ತಂತ್ರಜ್ಞಾನ ಕಾಯಿದೆಯ ಸೆಕ್ಷನ್ 79 ಮತ್ತು ಸಂವಿಧಾನದ 14ನೇ ವಿಧಿ (ಸಮಾನತೆಯ ಹಕ್ಕು) ಮತ್ತು 19 (1) (ಎ) (ಜಿ) ವಿಧಿಯನ್ನು (ಯಾವುದೇ ಉದ್ಯೋಗ ಇಲ್ಲವೇ ವ್ಯಾಪಾರದಲ್ಲಿ ತೊಡಗುವ ಸ್ವಾತಂತ್ರ್ಯ ಒದಗಿಸುವ) ಉಲ್ಲಂಘಿಸುತ್ತವೆ ಎಂದು ದೂರಲಾಗಿತ್ತು.

 

ರಾಜ್ಯದಲ್ಲಿಯೂ ಆಕ್ಷೇಪ

 

ಗೃಹ ಇಲಾಖೆಯು  ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ  ಸಾಮಾಜಿಕ ಜಾಲತಾಣ ನಿಗಾ ಘಟಕಗಳನ್ನು  ಅತ್ಯಾಧುನಿಕ ಉಪಕರಣಗಳಿಂದ ಸಜ್ಜುಗೊಳಿಸಿತ್ತು.  ಇಲಾಖೆಯಲ್ಲಿಯೇ ನುರಿತ ಸಿಬ್ಬಂದಿ ಇದರ ಉಸ್ತುವಾರಿ ಹೊತ್ತಿದ್ದರು.  ಆದರೂ ಸಹ  ಪರ್ಯಾಯವಾಗಿ ಫ್ಯಾಕ್ಟ್‌ ಚೆಕ್‌ ಘಟಕ ಸ್ಥಾಪನೆ ಮಾಡಲು ವಾರ್ಷಿಕ 7.50 ಕೋಟಿ ರು. ವೆಚ್ಚ ಮಾಡಲು ಮುಂದಾಗಿರುವುದು ಇಲಾಖೆಯಲ್ಲಿಯೇ  ಆಕ್ಷೇಪ ವ್ಯಕ್ತವಾಗಿತ್ತು.

 

ಆದರೂ  ರಾಜ್ಯ ಕಾಂಗ್ರೆಸ್‌ ಸರ್ಕಾರವು  ಖಾಸಗಿ ಸಂಘ ಸಂಸ್ಥೆಗಳ ಮೂಲಕ ಪರ್ಯಾಯವಾಗಿ ಫ್ಯಾಕ್ಟ್‌ ಚೆಕ್‌ ಘಟಕವನ್ನು ಸ್ಥಾಪಿಸಿದೆ.  ಫ್ಯಾಕ್ಟ್‌ ಚೆಕ್‌  ಘಟಕಕ್ಕೆ ರಾಜ್ಯ ಸರ್ಕಾರವು  ವಾರ್ಷಿಕ  7.50 ಕೋಟಿ ರು. ವೆಚ್ಚ ಮಾಡುತ್ತಿದೆ. ರಾಜ್ಯದ ಗೌರಿ ಮೀಡಿಯಾ ಟ್ರಸ್ಟ್‌, ನ್ಯೂಸ್‌ ಪ್ಲಸ್‌ (ಏನ್‌ ಸುದ್ದಿ.ಕಾಮ್‌), ಲಾಜಿಕಲಿ ಇಂಡಿಯಾ, ಟ್ರೈಲಿಕಾ, ಡಾಟಾ ಲೀಡ್ಸ್‌ ಸಂಸ್ಥೆಗೆ, ಫ್ಯಾಕ್ಟ್‌ ಚೆಕ್‌ ಮಾಡಲು ಈಗಾಗಲೇ  ಗುತ್ತಿಗೆ ನೀಡಿದೆ.

 

ಸುಳ್ಳು ಸುದ್ದಿ ವಿಶ್ಲೇಷಣೆಗೆ 6 ಕೋಟಿ ಸೇರಿ ಫ್ಯಾಕ್ಟ್‌ ಚೆಕ್‌  ಘಟಕಕ್ಕೆ ವಾರ್ಷಿಕ 7.50 ಕೋಟಿ ರು. ವೆಚ್ಚದ ಪ್ರಸ್ತಾವ

 

ಫ್ಯಾಕ್ಟ್‌ ಚೆಕ್‌ ತಂಡಕ್ಕೆ ವಾರ್ಷಿಕ 50 ಲಕ್ಷ, ವಿಶ್ಲೇಷಣೆ ತಂಡಕ್ಕೆ 6 ಕೋಟಿ ಮತ್ತು ಮೂಲ ಸೌಕರ್ಯಕ್ಕೆ 1 ಕೋಟಿ ರು. ಎಂದು ವೆಚ್ಚದ ಪ್ರಸ್ತಾವನೆ ಸರ್ಕಾರದ ಮುಂದಿರಿಸಿತ್ತು. ಅದೇ ರೀತಿ ವಿಶ್ಲೇಷಣೆ ತಂಡಕ್ಕೆ ಮೂಲ ಸೌಕರ್ಯಗಳಿಗೆ 1 ಕೋಟಿ, ತಾಂತ್ರಿಕ ಪರವಾನಗಿಗೆ 2.5 ಕೋಟಿ ರು., ಮಾನವ ಸಂಪನ್ಮೂಲಕ್ಕೆ 1.5ಕೋಟಿ, ಕಾರ್ಯಕ್ರಮಗಳ ನಿರ್ವಹಣೆಗಾಗಿ 1.0 ಕೋಟಿ ರು. ಎಂದು ವೆಚ್ಚದ ಪ್ರಸ್ತಾವನೆಯಲ್ಲಿತ್ತು.

 

 

ಸೆಂಟರ್‍‌ ಅಫ್‌ ಎಕ್ಸ್‌ಲೆನ್ಸ್‌ ಸೈಬರ್‍‌ ಸೆಕ್ಯೂರಿಟಿಯ ಮುಖ್ಯಸ್ಥ ಕಾರ್ತಿಕ್‌ ಬಪ್ಪನಾಡು ಅವರು ಈ ಪ್ರಸ್ತಾವನೆಯನ್ನು ಪ್ರಾತ್ಯಕ್ಷಿಕೆಯೊಂದಿಗೆ ಸರ್ಕಾರಕ್ಕೆ ವಿವರಿಸಿದ್ದಾರೆ. ತಪ್ಪು ಮಾಹಿತಿ ಮತ್ತು ದುರ್ಮಾಹಿತಿಗಳ ನಡುವಿನ ವ್ಯತ್ಯಾಸದ ಕುರಿತು ಉದಾಹರಣೆಗಳನ್ನು ನೀಡಿತ್ತು.

 

 

ರಾಜ್ಯದ  ಎಲ್ಲಾ ಜಿಲ್ಲೆಗಳಲ್ಲಿಯೂ ಗೃಹ ಇಲಾಖೆಯು  ಸಾಮಾಜಿಕ ಜಾಲತಾಣ ನಿಗಾ ಘಟಕಗಳನ್ನು  ಅತ್ಯಾಧುನಿಕ ಉಪಕರಣಗಳಿಂದ ಸಜ್ಜುಗೊಳಿಸಿದ್ದರೂ  ಫ್ಯಾಕ್ಟ್‌ಚೆಕ್‌ ಹೆಸರಿನಲ್ಲಿ 5 ಸಂಸ್ಥೆಗಳಿಂದ ಪಡೆಯಲಿರುವ ಸೇವೆಗಾಗಿ 3.19 ಕೋಟಿ ರು. ವೆಚ್ಚ ಮಾಡಿದೆ.  3 ತಿಂಗಳ ಅವಧಿಗೆ ರಾಜ್ಯದಲ್ಲಿ  ಐಡಿಟಿಯು ಘಟಕ ಸ್ಥಾಪಿಸಲು  5 ಸಂಸ್ಥೆಗಳ ಸೇವೆ ಪಡೆಯಲು ಕೆಟಿಪಿಪಿ ಕಾಯ್ದೆಯ ಕಲಂ 4(ಜಿ) ವಿನಾಯಿತಿ ನೀಡಿರುವ ಆರ್ಥಿಕ ಇಲಾಖೆಯು  2024ರ ಮಾರ್ಚ್‌ 16ಂದು ಅಧಿಸೂಚನೆ ಹೊರಡಿಸಿತ್ತು.

 

ಲಾಜಿಕಲಿ ಇಂಡಿಯಾ ಕಂಪನಿಗೆ 1,15,50,000 ರು.,, ಟ್ರೈಲಿಕಾ 27,25,000 ರು., ಡಾಟಾ ಲೀಡ್ಸ್‌ ಗೆ 1,43,81,840 ರು., ಗೌರಿ ಮೀಡಿಯಾ ಟ್ರಸ್ಟ್‌ಗೆ 15.00 ಲಕ್ಷ ರು., ನ್ಯೂಸ್‌ಪ್ಲಸ್‌ (ಏನ್‌ ಸುದ್ದಿ.ಕಾಂ)ಗೆ 18,00,000 ರು. ಮೊತ್ತ ನಿಗದಿಪಡಿಸಿತ್ತು.

 

ವಿಶೇಷವೆಂದರೇ ರಾಜ್ಯ ಕಾಂಗ್ರೆಸ್‌ ಸರ್ಕಾರವು ಜಾರಿಗೊಳಿಸಿರುವ 5 ಗ್ಯಾರಂಟಿಗಳ ಸಮೀಕ್ಷೆ ಕೈಗೊಂಡಿರುವ ಎಂ2ಎಂ ಕಂಪನಿಯ ಪಾಲುದಾರರಲ್ಲಿ ಒಬ್ಬರಾದ  ಸುನೀಲ್‌ ಶಿರಸಂಗಿ ಅವರು ಸಹ-ಸಂಸ್ಥಾಪಕರಾಗಿರುವ ನ್ಯೂಸ್‌ ಪ್ಲಸ್‌ (ಏನ್‌ ಸುದ್ದಿ)ನಿಂದಲೂ  ಫ್ಯಾಕ್ಟ್‌ಚೆಕ್‌ ಮಾಡಿಸಿದೆ. ಇದಕ್ಕಾಗಿ 18.00 ಲಕ್ಷ ರು.ಗಳನ್ನು ವೆಚ್ಚ ಮಾಡುತ್ತಿದೆ.

 

ಗೌರಿ ಮೀಡಿಯಾ ಟ್ರಸ್ಟ್‌ಗೆ 15 ಲಕ್ಷ, ನ್ಯೂಸ್‌ ಪ್ಲಸ್‌ಗೆ 18 ಲಕ್ಷ; ಫ್ಯಾಕ್ಟ್‌ಚೆಕ್‌ಗೆ 4(ಜಿ) ಅಧಿಸೂಚನೆ ಬಹಿರಂಗ

‘ಆರಂಭದ ನಾಲ್ಕು ತಿಂಗಳವರೆಗೆ ಸದರಿ ಘಟಕವನ್ನು ಕಾರ್ಯಗತಗೊಳಿಸುವಲ್ಲಿ ಸಹಾಯವಾಗುವಲ್ಲಿ ಕೆ-ಟೆಕ್‌ ಸೆಂಟ್‌ ಆಫ್‌ ಎಕ್ಸಲೆನ್ಸ್‌ ಸೈಬರ್‍‌ ಸೆಕ್ಯೂರಿಟಿ , ಮಾಹಿತಿ ತಂತ್ರಜ್ಞಾನ ಇಲಾಖೆಯ ವತಿಯಿಂದ ಗೃಹ ಇಲಾಖೆಗೆ ತಾಂತ್ರಿಕ ಬೆಂಬಲ ನೀಡಲಾಗುವುದು. ಹಾಗೂ ಮುಂದಿನ ಹಂತವನ್ನು ಗೃಹ ಇಲಾಖೆಯೇ ಘಟಕದ ಕಾರ್ಯಾಚರಣೆ ಮುಂದುವರೆಸಲಿದೆ,’ ಎಂದು ಸಭೆಯಲ್ಲಿ ಮಾಹಿತಿ ಒದಗಿಸಿದ್ದರು.

 

 

ಫ್ಯಾಕ್ಟ್‌ ಚೆಕ್‌ ಘಟಕ ಸ್ಥಾಪನೆ ಸಂಬಂಧಿಸಿದಂತೆ ನುರಿತ ಸಂಸ್ಥೆಗಳಿಂದ ಈಗಾಗಲೇ ಆಸಕ್ತಿ ವ್ಯಕ್ತಪಡಿಸುವಿಕೆ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಆಯ್ಕೆ ಪ್ರಕ್ರಿಯೆಗಾಗಿ ತಜ್ಞರನ್ನೊಳಗೊಂಡ ಮೌಲ್ಯಮಾಪನ ಸಮಿತಿಯನ್ನೂ ರಚಿಸಿತ್ತು.

 

ಆದರೆ ರಾಜ್ಯದಲ್ಲಿ ಈಗಾಗಲೇ ಸಾಮಾಜಿಕ ಜಾಲತಾಣ ನಿಗಾ ಘಟಕಗಳು ಕಾರ್ಯನಿರ್ವಹಿಸುತ್ತಿವೆ ಎಂದು ಗೃಹ ಸಚಿವ ಡಾ ಜಿ ಪರಮೇಶ್ವರ್‍‌ ಅವರು ವಿಧಾನಸಭೆಗೆ ಉತ್ತರ ನೀಡಿದ್ದಾರೆ.  ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳ ಮೂಲಕ ಫೇಕ್‌ ನ್ಯೂಸ್‌ಗಳನ್ನು ಹರಡುವವರ ವಿರುದ್ಧ ರಾಜ್ಯ ಸರ್ಕಾರವು ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಶಾಸಕ ಹರೀಶ್‌ ಪೂಂಜಾ ಅವರು ನಿಯಮ 73 ಅಡಿಯಲ್ಲಿ ಗಮನ ಸೆಳೆಯುವ ಸೂಚನೆ ಮಂಡಿಸಿದ್ದರು.

 

ಉತ್ತರದಲ್ಲೇನಿದೆ?

 

ಬೆಂಗಳೂರು ನಗರ ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಸಾಮಾಜಿಕ ಜಾಲತಾಣ ನಿಗಾ ಘಟಕ ಸ್ಥಾಪಿಸಲಾಗಿದೆ. ಈ ಎಲ್ಲಾ ಸೋಷಿಯಲ್‌ ಮೀಡಿಯಾ ಮಾನಿಟರಿಂಗ್‌ ಸೆಲ್‌ಗಳನ್ನು ಅತ್ಯಾಧುನಿಕ ಉಪಕರಣಗಳಿಂದ ಸಜ್ಜುಗೊಳಿಸಲಾಗಿದೆ. ಇಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳಿಗೆ ವಿಶೇಷ ತರಬೇತಿ ನೀಡಲಾಗಿದೆ.

 

ಈ ಘಟಕಗಳು ದಿನದ 24 ಗಂಟೆಯೂ ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್‌, ವಾಟ್ಸಾಪ್‌, ಇನ್ಸ್ಟಾಗ್ರಾಂ, ಎಕ್ಸ್‌ (ಟ್ವಿಟ್ಟರ್‍‌) , ಯೂ ಟ್ಯೂಬ್‌ ಮತ್ತು ಇನ್ನಿತರೆ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ವಹಿಸುತ್ತಾರೆ.
ಯಾವುದಾದರೂ ಸುಳ್ಳು ಸುದ್ದಿ, ಪ್ರಚೋದನಾತ್ಮಕ ಸಂದೇಶ ಕಂಡುಬಂದಲ್ಲಿ ಕೂಡಲೇ ಆಯಾ ಘಟಕಗಳ ಮಟ್ಟದಲ್ಲಿಯೇ ಸೂಕ್ತ ಕಾನೂನು ಕ್ರಮ ಜರುಗಿಸಲಾಗುತ್ತಿದೆ. ಈವರೆಗೆ ಒಟ್ಟು 155 ಪ್ರಕರಣಗಳಲ್ಲಿ ಕಾನೂನು ಕ್ರಮ ಜರುಗಿಸಲಾಗಿದೆ.

 

ಬೆಂಗಳೂರು ನಗರದಲ್ಲಿ 60, ಮಂಗಳೂರು ನಗರದಲ್ಲಿ 25, ಬೆಳಗಾವಿ ನಗರದಲ್ಇ 8, ಕಲ್ಬುರ್ಗಿ ನಗರದಲ್ಲಿ 11, ಕೆಜಿಎಫ್‌ನಲ್ಲಿ 3, ಚಿಕ್ಕಬಳ್ಳಾಪುರದಲ್ಲಿ 1, ಉತ್ತರ ಕನ್ನಡದಲ್ಲಿ 28, ವಿಜಯನಗರದಲ್ಲಿ 8, ಹಾವೇರಿಯಲ್ಲಿ 1, ಬಳ್ಳಾರಿಯಲ್ಲಿ 2, ಬೀದರ್‍‌ನಲ್ಲಿ 8 ಪ್ರಕರಣಗಳು ದಾಖಲಾಗಿವೆ ಎಂದು ಮಾಹಿತಿ ಸದನಕ್ಕೆ ಮಾಹಿತಿ ಒದಗಿಸಿದ್ದರು.

 

ರಾಜ್ಯ ಸರ್ಕಾರದ ನಡೆ ಬಗ್ಗೆ ಯಾವುದೇ ಆತಂಕ‌ ಬೇಡ. ನಾವೇನೂ ರಾಜಕೀಯ ದ್ವೇಷ ಸಾಧಿಸಲು ಹೊರಟಿಲ್ಲ. ಮಾಧ್ಯಮಗಳನ್ನು ನಿಯಂತ್ರಣದಲ್ಲಿಡುವುದೂ ಇದರ ಉದ್ದೇಶವಲ್ಲ. ಈ ಬಗ್ಗೆ ಯಾರಲ್ಲೂ ಆತಂಕ‌ಬೇಡ. ಸುಳ್ಳು ಮಾಹಿತಿಯ ಸೃಷ್ಟಿಯ ಬಗ್ಗೆ ಹಾಗೂ ಇದರ ಪರಿಣಾಮದ ಬಗ್ಗೆ ಸಮಿತಿ ನಿಗಾ ಇಡಲಿದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಅವರು ಸ್ಪಷ್ಟಪಡಿಸಿದ್ದನ್ನು ಸ್ಮರಿಸಬಹುದು.

Your generous support will help us remain independent and work without fear.

Latest News

Related Posts