ಹೆಚ್‌ಡಿಕೆಯ ಸಹಿ, ಕೈ ಬರವಣಿಗೆ ಫೋರ್ಜರಿ ಆರೋಪ; ರಾಕೇಶ್‌ಸಿಂಗ್‌ ವಿರುದ್ಧ ರಾಜ್ಯಪಾಲ, ಲೋಕಾಕ್ಕೆ ದೂರು

ಬೆಂಗಳೂರು; ಸಾಯಿ ವೆಂಕಟೇಶ್ವರ ಮಿನರಲ್ಸ್‌ಗೆ ಅಕ್ರಮವಾಗಿ ಗಣಿ ಗುತ್ತಿಗೆ ನೀಡಿದ್ದಾರೆ ಎಂದು ಆರೋಪಕ್ಕೆ ಗುರಿಯಾಗಿರುವ ಹಾಲಿ ಕೇಂದ್ರ ಸಚಿವ ಹೆಚ್‌ ಡಿ ಕುಮಾರಸ್ವಾಮಿ ಅವರು ಕಡತದ ಪುಟಗಳಲ್ಲಿನ ಕೈ ಬರವಣಿಗೆ, ಸಹಿಯು ತಮ್ಮದಲ್ಲ, ಮತ್ತು ಅದನ್ನು ಪೋರ್ಜರಿ ಮಾಡಲಾಗಿದೆ ಎಂದು  ಹೇಳಿಕೆ ನೀಡಿದ್ದರ ಬೆನ್ನಲ್ಲೇ ಇದೀಗ ಅದೇ ಕಡತದ ಪುಟಗಳಲ್ಲಿನ ಕೈ ಬರವಣಿಗೆಯು ಹಿರಿಯ ನಿವೃತ್ತ ಐಎಎಸ್‌ ಅಧಿಕಾರಿ ಹಾಗೂ ರೇರಾದ ಹಾಲಿ ಅಧ್ಯಕ್ಷ ರಾಕೇಶ್‌ ಸಿಂಗ್‌ ಅವರದ್ದು ಎಂದು ರಾಜ್ಯಪಾಲರು ಮತ್ತು ಲೋಕಾಯುಕ್ತರಿಗೆ   ದೂರರ್ಜಿ ಸಲ್ಲಿಕೆಯಾಗಿದೆ.

 

ಸಾಮಾಜಿಕ ಕಾರ್ಯಕರ್ತ ಕಂಚನಹಳ್ಳಿ ರವಿಕುಮಾರ್‍‌ ಎಂಬುವರು  ರಾಜ್ಯಪಾಲರಿಗೆ ಮತ್ತು ಲೋಕಾಯುಕ್ತರಿಗೆ  ಸಲ್ಲಿಸಿರುವ ದೂರರ್ಜಿಯಲ್ಲಿ ಸಾಯಿ ವೆಂಕಟೇಶ್ವರ ಮಿನರಲ್ಸ್‌ ಗಣಿ ಗುತ್ತಿಗೆ ಮಂಜೂರಾತಿಗೆ ಸಂಬಂಧಿಸಿದ ಕಡತದ ಟಿಪ್ಪಣಿ ಹಾಳೆಯಲ್ಲಿನ ಕೈ ಬರವಣಿಗೆ ಮತ್ತು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ರಾಕೇಶ್‌ಸಿಂಗ್‌ ಅವರ ಕೈ ಬರವಣಿಗೆಯನ್ನು ಹೋಲಿಕೆ ಮಾಡಿ ವಿವರಿಸಿರುವುದು ಗೊತ್ತಾಗಿದೆ.

 

ಹೆಚ್‌ ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಕೇಶ್‌ ಸಿಂಗ್‌ ಅವರು ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದ್ದರು. ಈ ಅವಧಿಯಲ್ಲೇ ಸಾಯಿ ವೆಂಕಟೇಶ್ವರ ಮಿನರಲ್ಸ್‌ ಗಣಿ ಗುತ್ತಿಗೆ ಮಂಜೂರಾತಿಗೆ ಸಂಬಂಧಿಸಿದ ಕಡತದಲ್ಲಿ ಕುಮಾರಸ್ವಾಮಿ ಅವರ ಸಹಿ ಮತ್ತು ಕೈ ಬರವಣಿಗೆಯನ್ನು ತಿದ್ದಲಾಗಿದೆ ಎಂದು ದೂರರ್ಜಿಯಲ್ಲಿ ಆಪಾದಿಸಲಾಗಿದೆ.

 

ಸಾಯಿ ವೆಂಕಟೇಶ್ವರ ಮಿನರಲ್ಸ್‌ ಗಣಿ ಗುತ್ತಿಗೆ ಮಂಜೂರಾತಿಯ ಕಡತದಲ್ಲಿನ ಟಿಪ್ಪಣಿ ಹಾಳೆಗಳಲ್ಲಿನ ಕೈ ಬರವಣಿಗೆಯು, ನಗರಾಭಿವೃದ್ದಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿದ್ದ ರಾಕೇಶ್‌ ಸಿಂಗ್‌ ಅವರ ಕೈ ಬರವಣಿಗೆಯೊಂದಿಗೆ ಹೋಲುತ್ತದೆ ಮತ್ತು ಅದಕ್ಕೆ ಸಾಮಿಪ್ಯವಿದೆ ಎಂದು ಸಾಮಾಜಿಕ ಕಾರ್ಯಕರ್ತ ಪುರಾವೆಗಳನ್ನು ಒದಗಿಸಿರುವುದು ಗೊತ್ತಾಗಿದೆ.

 

ಸಾಮಾಜಿಕ ಕಾರ್ಯಕರ್ತ ರವಿಕುಮಾರ್‍‌ ಕಂಚನಹಳ್ಳಿ   ಸಲ್ಲಿಸಿರುವ ದೂರರ್ಜಿ ಮತ್ತು ಕೈ ಬರವಣಿಗೆಗೆ ಸಂಬಂಧಿಸಿದಂತೆ ರಾಜ್ಯಪಾಲ ಮತ್ತು ಲೋಕಾಯುಕ್ತರಿಗೆ  ಸಲ್ಲಿಸಿರುವ ಟಿಪ್ಪಣಿಯ ಹಾಳೆಗಳು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

 

 

ಗಂಗೇನಹಳ್ಳಿ ಬಡಾವಣೆಯಲ್ಲಿನ 1.11 ಎಕರೆ ವಿಸ್ತೀರ್ಣದ ಸರ್ಕಾರಿ ಜಮೀನನ್ನು ಡಿ ನೋಟಿಫಿಕೇಷನ್‌ ಮಾಡಲು ಕುಮಾರಸ್ವಾಮಿ ಅವರೇ ತಮಗೆ ಆದೇಶ ನೀಡಿದ್ದರು ಎಂದು ನ್ಯಾಯಾಲಯದಲ್ಲಿ ರಾಕೇಶ್‌ ಸಿಂಗ್‌ ಅವರು ಹೇಳಿಕೆ ನೀಡಿರುವ ಹೊತ್ತಿನಲ್ಲೇ ಸಾಯಿ ವೆಂಕಟೇಶ್ವರ ಮಿನರಲ್ಸ್‌ ಕಂಪನಿಗೆ ಗಣಿ ಗುತ್ತಿಗೆ ನೀಡಿರುವ ಕಡತದ ಟಿಪ್ಪಣಿ ಹಾಳೆಗಳಲ್ಲಿನ ಕೈ ಬರವಣಿಗೆಯೂ ರಾಕೇಶ್‌ ಸಿಂಗ್‌ ಅವರದ್ದೇ ಎಂದು ಸಾಮಾಜಿಕ ಕಾರ್ಯಕರ್ತ ರವಿಕುಮಾರ್‍‌  ಒದಗಿಸಿರುವ ಪುರಾವೆಗಳು ಮುನ್ನೆಲೆಗೆ ಬಂದಿವೆ.

 

ರಾಜ್ಯ ಕಾಂಗ್ರೆಸ್‌ ಸರ್ಕಾರ ನನ್ನ ವಿರುದ್ಧ ದ್ವೇಷದ ರಾಜಕೀಯ ಮಾಡುತ್ತಿದೆ. ನನ್ನ ಸಹಿ ಇಲ್ಲದ, ಫೋರ್ಜರಿ ಸಹಿಯ ಪ್ರಕರಣವನ್ನಿಟ್ಟುಕೊಂಡು ನನ್ನ ಮೇಲೆ ಪ್ರಯೋಗ ಮಾಡುತ್ತಿದೆ ಎಂದು ಕೇಂದ್ರದ ಬೃಹತ್‌ ಕೈಗಾರಿಕೆ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಇತ್ತೀಚೆಗಷ್ಟೇ  ವಾಗ್ದಾಳಿ ನಡೆಸಿದ್ದರು.

 

 

ಅಲ್ಲದೇ ‘ಸಾಯಿ ವೆಂಕಟೇಶ್ವರ ದಾಖಲೆಯಲ್ಲಿರುವುದು ನನ್ನ ಸಹಿಯೇ ಅಲ್ಲ ಮತ್ತು ಆ ಕಂಪನಿಗೆ ಭೂಮಿಯನ್ನೇ ಕೊಟ್ಟಿಲ್ಲ, ಯಾರೆಲ್ಲಾ ಮೋಸ ಮಾಡಿಕೊಂಡಿದ್ದಾರೆ ಎಂಬುದು ನನಗೆ ಗೊತ್ತಿಲ್ಲ. ತಿದ್ದಲಾಗಿರುವ ಆದೇಶ ಪತ್ರದ ದಾಖಲೆಯನ್ನು ಪರಿಶೀಲನೆ ಮಾಡಲು ಕೇವಲ ನನ್ನ ಸಹಿಯನ್ನಷ್ಟೇ ಅಲ್ಲ, ನನ್ನ ಕೈ ಬರಹವನ್ನು ತೆಗೆದುಕೊಂಡು ಹೋಗಿದ್ದಾರೆ. ಎಲ್ಲಿ ಬೇಕಾದರೂ ತನಿಖೆ ಮಾಡಲಿ ಮತ್ತು ಯಾವ ಪ್ರಯೋಗಾಲಯದಿಂದಲಾದರೂ ವರದಿ ಪಡೆಯಬಹುದು,’ ಎಂದು ಸವಾಲು ಹಾಕಿದ್ದರು.

 

ಆದರೆ ಇದುವರೆಗೂ ಈ ಸಂಬಂಧ ಹೆಚ್‌ ಡಿ ಕುಮಾರಸ್ವಾಮಿ ಅವರು ದೂರನ್ನೇ ದಾಖಲಿಸಿಲ್ಲ.

 

ಈ ಕುರಿತು ದೂರನ್ನೇಕೆ ದಾಖಲಿಸಿಲ್ಲ ಎಂದು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‍‌ ಸಹ ಹೆಚ್‌ ಡಿ ಕುಮಾರಸ್ವಾಮಿ ಅವರನ್ನು ಪ್ರಶ್ನಿಸಿದ್ದರು. ಈ ಬೆಳವಣಿಗೆಗಳ ನಡುವೆಯೇ ರಾಕೇಶ್‌ ಸಿಂಗ್‌ ಅವರದ್ದು ಎನ್ನಲಾಗಿರುವ 2021 ರಲ್ಲಿನ ನಗರಾಭಿವೃದ್ಧಿ ಇಲಾಖೆಯ ಕಡತದ  ಹಾಳೆಗಳಲ್ಲಿನ  ಕೈ ಬರವಣಿಗೆಯ ಮಾದರಿ ಪುಟಗಳು ರಾಜ್ಯಪಾಲರ ಕಚೇರಿ ಸೇರಿರುವುದು ಕುತೂಹಲ ಮೂಡಿಸಿವೆ.

 

 

ರಾಜ್ಯಪಾಲರಿಗೆ ಸಲ್ಲಿಸಿರುವ ದೂರಿನಲ್ಲೇನಿದೆ?

 

ಸಾಯಿ ವೆಂಕಟೇಶ್ವರ ಮಿನರಲ್ಸ್‌ಗೆ ಗಣಿ ಗುತ್ತಿಗೆ ಮಂಜೂರು ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿರುವ ಲೋಕಾಯುಕ್ತ ಎಸ್‌ಐಟಿಯು ಹಾಲಿ ಕೇಂದ್ರ ಸಚಿವ ಹೆಚ್‌ ಡಿ ಕುಮಾರಸ್ವಾಮಿ ಅವರ ವಿರುದ್ಧ ವಿಚಾರಣೆಗೆ ಅನುಮತಿ ನೀಡುವ ಪ್ರಸ್ತಾವನೆ ತಮ್ಮ ಮುಂದಿದೆ.

 

 

ಎಸ್‌ಐಟಿಯು ಸಲ್ಲಿಸಿರುವ ಪ್ರಸ್ತಾವನೆ ಮತ್ತು ಕಡತಗಳಲ್ಲಿನ ದಾಖಲೆಗಳ ಬಗ್ಗೆ ಹೆಚ್‌ ಡಿ ಕುಮಾರಸ್ವಾಮಿ ಅವರು ಅನುಮಾನ ವ್ಯಕ್ತಪಡಿಸಿದ್ದರು.  ಇಲಾಖೆ ಮತ್ತು ಎಸ್‌ಐಟಿಯು ತಮ್ಮ ಮುಂದಿರಿಸಿರುವ ಕಡತಗಳ ಪುಟಗಳಲ್ಲಿನ ಕೈ ಬರವಣಿಗೆ ಕುರಿತು ಹೆಚ್‌ ಡಿ ಕುಮಾರಸ್ವಾಮಿ ಅವರು ಶಂಕೆ ವ್ಯಕ್ತಪಡಿಸಿದ್ದರು. ಅದು ತಮ್ಮ ಸಹಿಯೇ ಅಲ್ಲ, ತಮ್ಮ ಸಹಿ ಮತ್ತು ಕೈ ಬರವಣಿಗೆಯೂ ಪೋರ್ಜರಿ ಆಗಿದೆ ಎಂದು ಸುದ್ದಿಗೋಷ್ಠಿಯಲ್ಲಿಯೇ ಹೇಳಿಕೆ ನೀಡಿದ್ದಾರೆ. ಆದರೆ ಇದುವರೆಗೂ ಕುಮಾರಸ್ವಾಮಿ ಅವರು ತಮ್ಮ ಸಹಿ ಮತ್ತು ಕೈ ಬರವಣಿಗೆಯು ಪೋರ್ಜರಿ ಆಗಿದೆ ಎಂದು ಎಲ್ಲಿಯೂ ದೂರು ದಾಖಲಿಸಿಲ್ಲ ಎಂದು ದೂರರ್ಜಿಯಲ್ಲಿ ವಿವರಿಸಲಾಗಿದೆ.

 

‘ಇದಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತನಾದ ನಾನು ಕೂಡ ಒಂದಷ್ಟು ದಾಖಲೆಗಳನ್ನು ಕಲೆ ಹಾಕಿದ್ದೇನೆ. ಕುಮಾರಸ್ವಾಮಿ ಅವರು ಹೇಳಿರುವ ಪ್ರಕಾರ ಕೈ ಬರವಣಿಗೆ ಮತ್ತು ಸಹಿ ಪೋರ್ಜರಿ ಆಗಿದೆ ಎಂಬುದಕ್ಕೆ ಪುರಾವೆಗಳನ್ನೂ  ಒದಗಿಸುತ್ತಿದ್ದೇನೆ,’ ಎಂದು ದೂರಿನಲ್ಲಿ ಹೇಳಿರುವುದು ಗೊತ್ತಾಗಿದೆ.

 

 

ಕುಮಾರಸ್ವಾಮಿ ಅವರು ಹೇಳುತ್ತಿರುವ ಕೈ ಬರವಣಿಗೆ ಮತ್ತು ಸಹಿ ತಿದ್ದಿರುವುದು ಅಂದು ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರ ಕಾರ್ಯದರ್ಶಿ ಆಗಿದ್ದ ರಾಕೇಶ್‌ ಸಿಂಗ್‌ ಅವರದ್ದು ಎಂಬುದಕ್ಕೆ ಪುರಾವೆಗಳನ್ನು ಇಲ್ಲಿ ನೀಡಿದ್ದೇನೆ.

 

‘ರಾಕೇಶ್‌ ಸಿಂಗ್‌ ಅವರು ನಗರಾಭಿವೃದ್ಧಿ ಇಲಾಖೆ ಸೇರಿದಂತೆ ಮೂರ್ನಾಲ್ಕು ಇಲಾಖೆಗಳಲ್ಲಿ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಆ ಅವಧಿಯಲ್ಲಿ ಕಡತಗಳಲ್ಲಿನ ಟಿಪ್ಪಣಿ ಹಾಳೆಗಳಲ್ಲಿ ರಾಕೇಶ್‌ ಸಿಂಗ್‌ ಅವರ ಕೈ ಬರವಣಿಗೆಯು, ಸಾಯಿ ವೆಂಕಟೇಶ್ವರ ಮಿನರಲ್ಸ್‌ ಗಣಿ ಗುತ್ತಿಗೆ ಸಂಬಂಧಿತ ಕಡತದ ಟಿಪ್ಪಣಿ ಹಾಳೆಯಲ್ಲಿನ ಬರವಣಿಗೆಗೆ ಸಾಮ್ಯತೆ ಕಂಡು ಬರುತ್ತಿದೆ. ಮೇಲ್ನೋಟಕ್ಕೆ ಈ ಕೈ ಬರವಣಿಗೆಯು ರಾಕೇಶ್‌ ಸಿಂಗ್‌ ಅವರದ್ದೇ ಎಂದು ಕಂಡು ಬರುತ್ತಿರುವ ಕಾರಣ ಅವರನ್ನು ವಿಚಾರಣೆಗೊಳಪಡಿಸಲು ಕ್ರಮ ಕೈಗೊಳ್ಳಬೇಕು,’ ಎಂದು ಕೋರಿರುವುದು ಗೊತ್ತಾಗಿದೆ.

 

 

ನಗರಾಭಿವೃದ್ಧಿ ಇಲಾಖೆಯಲ್ಲಿನ 2021ರಲ್ಲಿನ  ಕಡತಗಳಲ್ಲಿನ ಈ ಟಿಪ್ಪಣಿ ಹಾಳೆಗಳಲ್ಲಿನ ಕೈ ಬರವಣಿಗೆ ಮತ್ತು ಸಾಯಿ ವೆಂಕಟೇಶ್ವರ ಮಿನರಲ್ಸ್‌ ನ ಕೈ ಬರವಣಿಗೆ ಮತ್ತು ಸಹಿಯ ಟಿಪ್ಪಣಿ ಹಾಳೆಗಳನ್ನು ಅದರ ಕೆಲ ಮಾದರಿಗಳನ್ನು ರವಿಕುಮಾರ್‍‌ ಅವರು ಒದಗಿಸಿದ್ದಾರೆ. ಇವುಗಳನ್ನು   ಫೋರೆನ್ಸಿಕ್‌ ಅಥವಾ ಎಫ್‌ಎಸ್‌ಎಲ್‌ ಪರೀಕ್ಷೆಗೊಳಪಡಿಸಬೇಕು ಎಂದು  ಕೋರಿರುವುದು ತಿಳಿದು ಬಂದಿದೆ.

 

‘ನಮಗೆ ಸಿಕ್ಕಿರುವ ಪ್ರಾಥಮಿಕ ಸಾಕ್ಷ್ಯಗಳನ್ನಷ್ಟೇ ನಿಮಗೆ ನೀಡಿದ್ದೇವೆ. ಇದನ್ನು ಆಧಾರವಾಗಿರಿಸಿಕೊಂಡು ಮುಂದಿನ ತನಿಖೆ ನಡೆಸಿದರೆ ಇನ್ನಷ್ಟು ಸತ್ಯಾಂಶಗಳು ಹೊರಬರಲಿವೆ. ತಾವುಗಳು ದಯವಿಟ್ಟು ಈ ದೂರರ್ಜಿಯನ್ನು ಪರಿಗಣಿಸಿ ರೇರಾ ಅಧ್ಯಕ್ಷ ರಾಕೇಶ್‌ ಸಿಂಗ್‌ ಅವರನ್ನು ತನಿಖೆಗೊಳಪಡಿಸಬೇಕು ಮತ್ತು ಈ ಪ್ರಕರಣದಲ್ಲಿ ಕೇಂದ್ರ ಸಚಿವ ಹೆಚ್‌ ಡಿ ಕುಮಾರಸ್ವಾಮಿ ಅವರನ್ನು ಸಾಕ್ಷಿಯನ್ನಾಗಿ ಪರಿಗಣಿಸಿ ಅವರಿಂದಲೂ ಕಾನೂನುಬದ್ಧವಾಗಿ ಹೇಳಿಕೆ ಪಡೆಯಬೇಕು,’ ಎಂದು ಮನವಿ ಮಾಡಿರುವುದು ಗೊತ್ತಾಗಿದೆ.

the fil favicon

SUPPORT THE FILE

Latest News

Related Posts