ಬೆಂಗಳೂರು; ಕಾರ್ಮಿಕರ ವಿಮಾ ಆಸ್ಪತ್ರೆ (ಇಎಸ್‌ಐ) , ಔಷಧಾಲಯ ಮತ್ತು ಡಯೋಗ್ನೋಸ್ಟಿಕ್ ಕೇಂದ್ರಗಳಿಗೆ ಹೊರಗುತ್ತಿಗೆ ಅಡಿಯಲ್ಲಿ ಫಾರ್ಮಾಸಿಸ್ಟ್‌ಗಳ ಸೇವೆ ಒದಗಿಸುತ್ತಿರುವ ಫೀಚರ್ ಪ್ಲಾನೆಟ್ ಪ್ರೈವೈಟ್ ಲಿಮಿಟೆಡ್‌ನೊಂದಿಗೆ ಇಲಾಖಾಧಿಕಾರಿಗಳು ಶಾಮೀಲಾಗಿ ಸರ್ಕಾರಕ್ಕೆ ದೊಡ್ಡ ಪ್ರಮಾಣದಲ್ಲಿ ಆರ್ಥಿಕ ನಷ್ಟವುಂಟು ಮಾಡುತ್ತಿರುವುದು ಇದೀಗ ಬಹಿರಂಗವಾಗಿದೆ.
ಕಾರ್ಮಿಕ ಇಲಾಖೆ ಕಚೇರಿ ಅಧೀಕ್ಷಕ ಜಿ ಗಿರೀಶ್ ಮತ್ತು ಸಹಾಯಕ ಆಡಳಿತಾಧಿಕಾರಿ ಕೋಮಲ ಎಂಬುವರು ಫೀಚರ್ ಪ್ಲಾನೆಟ್ ಪ್ರೈವೈಟ್ ಲಿಮಿಟೆಡ್‌ನೊಂದಿಗೆ ಶಾಮೀಲಾಗಿದ್ದಾರೆ ಎಂದು ಸಚಿವ ಸಂತೋಷ್ ಲಾಡ್ ಅವರಿಗೆ ದೂರು ಸಲ್ಲಿಕೆಯಾಗಿದೆ. ದೂರು ಸಲ್ಲಿಕೆಯಾಗಿ 8 ತಿಂಗಳಾದರೂ ಸಹ ಇದುವರೆಗೂ ಯಾವುದೇ ಕ್ರಮ ವಹಿಸಿಲ್ಲ ಎಂದು ಗೊತ್ತಾಗಿದೆ.
ಬೆಂಗಳೂರಿನ ರಾಜು ವೆಂಕಟೇಶ್ ಪ್ರಸನ್ನ ಎಂಬುವರು ದೂರು ಸಲ್ಲಿಸಿದ್ದಾರೆ. ಈ ದೂರನ್ನಾಧರಿಸಿ ಸಚಿವರ ಆಪ್ತ ಕಾರ್ಯದರ್ಶಿ ಪಿ ಕುಮಾರ್ ಎಂಬುವರು ಕಾರ್ಮಿಕ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಟಿಪ್ಪಣಿಯನ್ನು ಹೊರಡಿಸಿದ್ದಾರೆ. ದೂರು ಮತ್ತು ಸಚಿವರ ಆಪ್ತ ಕಾರ್ಯದರ್ಶಿ ಹೊರಡಿಸಿರುವ ಟಿಪ್ಪಣಿ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಫೀಚರ್ ಪ್ಲಾನೆಟ್ ಪ್ರೈವೈಟ್ ಲಿಮಿಟೆಡ್ ಕಾರ್ಮಿಕರ ವಿಮಾ ಆಸ್ಪತ್ರೆ, ಔಷಧಾಲಯ ಮತ್ತು ಡಯೋಗ್ನೋಸ್ಟಿಕ್ ಕೇಂದ್ರಗಳಿಗೆ ಹೊರಗುತ್ತಿಗೆ ಅಡಿಯಲ್ಲಿ ಫಾರ್ಮಾಸಿಸ್ಟ್‌ಗಳ ಸೇವೆಯನ್ನು ಹೊರಗುತ್ತಿಗೆ ಅಡಿಯಲ್ಲಿ ಒದಗಿಸುತ್ತಿದೆ. 2002ರ ಡಿಸೆಂಬರ್‍ನಿಂದ ಈವರೆಗೂ ಸೇವೆ ಒದಗಿಸುತ್ತಿದೆಯಾದರೂ ಕಾರ್ಯಾದೇಶದಲ್ಲಿ ಸೂಚಿಸಿರುವ ಸಂಖ್ಯೆಯಷ್ಟು ಫಾರ್ಮಾಸಿಸ್ಟ್‌ಗಳು ಸೇವೆ ಸಲ್ಲಿಸುತ್ತಿಲ್ಲ ಎಂದು ರಾಜು ವೆಂಕಟೇಶ್ ಪ್ರಸನ್ನ ಎಂಬುವರು ದೂರಿನಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಫೀಚರ್ ಪ್ಲಾನೆಟ್ ಪ್ರೈವೈಟ್ ಲಿಮಿಟೆಡ್ ತಿಂಗಳಿಗೆ 35.00 ಲಕ್ಷದಿಂದ 50 ಲಕ್ಷ ದವರೆಗೂ ಬಿಲ್ ಸಲ್ಲಿಸುತ್ತಿದೆ. ಕಾರ್ಯಾದೇಶದಲ್ಲಿ ನಮೂದಿಸಿರುವ ಸಂಖ್ಯೆಗಳ ಪ್ರಕಾರ ಫಾರ್ಮಾಸಿಸ್ಟ್‌ಗಳ ಸೇವೆ ಒದಗಿಸದಿದ್ದರೂ ಸಹ ಲಕ್ಷಾಂತರ ರುಪಾಯಿ ಪಾವತಿಯಾಗುತ್ತಿದೆ. ಹಾಜರಾತಿ ಪ್ರಮಾಣ ಪತ್ರವನ್ನು ಪರಿಶೀಲನೆ ಮಾಡುತ್ತಿಲ್ಲ. ಇದರಲ್ಲಿ ಅಧಿಕಾರಿಗಳು ಸಹ ಶಾಮೀಲಾಗಿದ್ದಾರೆ ಎಂದು ರಾಜು ವೆಂಕಟೇಶ್ ಪ್ರಸನ್ನ ಅವರು ದೂರಿನಲ್ಲಿ ಆಪಾದಿಸಿರುವುದು ತಿಳಿದು ಬಂದಿದೆ.
ಮೈಸೂರು ರಸ್ತೆಯಲ್ಲಿರುವ ಇಎಸ್‌ಐ ಔಷಧಾಲಯದಲ್ಲಿ ಅನುರಾಧ ಹೆಸರಿನ ಫಾರ್ಮಾಸಿಸ್ಟ್ ಅವರಿಗೆ 2023ರ ಜುಲೈನಲ್ಲಿ 40,171.94 ರು. ವೇತನ ಪಾವತಿಯಾಗಿದೆ. ವಿಶ್ವನೀಡಂನಲ್ಲಿರುವ ಔಷಧಾಲಯದಲ್ಲಿನ ವಿಶ್ವಕರ್ಮ ಈಶ್ವರ್ ಚಾಂದ್ ಎಂಬುವರಿಗೂ 2023ರ ಜುಲೈನಲ್ಲಿ ವೇತನ ಪಾವತಿಯಾಗಿದೆ. ವಾಡಿಯಲ್ಲಿನ ಇಎಸ್‌ಐ ಔಷಧಾಲಯದಲ್ಲಿ ಸ್ನೇಹ ಲಚ್ಯಾನ್ ಎಂಬುವರಿಗೆ 26,522 ರು ವೇತನ ಪಾವತಿಯಾಗಿದೆ. ಆದರೆ ಕರ್ತವ್ಯದಿಂದ ಇವರು ಬಿಡುಗಡೆಗೊಂಡಿದ್ದರೂ ಸಹ ವೇತನ ಪಾವತಿಸಲಾಗುತ್ತಿತ್ತು ಎಂದು ದೂರಿನಲ್ಲಿ ವಿವರಿಸಿರುವುದು ಗೊತ್ತಾಗಿದೆ.
ಯಲಹಂಕದಲ್ಲಿರುವ ಇಎಸ್‌ಐ ಔಷಧಾಲಯದಲ್ಲಿ ಫಾರ್ಮಾಸಿಸ್ಟ್ ರಾಹುಲ್ ರಾಮಚಂದ್ರ ಅವರ ಸೇವೆಯನ್ನು 2023ರ ಅಕ್ಟೋಬರ್‍ನಲ್ಲಿ ಒದಗಿಸಿದೆ ಎಂದು ಹೊರಗುತ್ತಿಗೆ ಕಂಪನಿ ಹೇಳಿದೆ. ಆದರೆ ಈ ವ್ಯಕ್ತಿಗೆ ವೇತನ ಪಾವತಿಸುವ ಮುನ್ನ ಹಾಜರಾತಿ ಪ್ರಮಾಣ ಪತ್ರವನ್ನು ಪರಿಶೀಲಿಸಿಲ್ಲ. ಆದರೂ 21,388 ರು.ಗಳನ್ನು ಹೆಚ್ಚುವರಿಯಾಗಿ ಪಾವತಿಸಿದೆ ಎಂದು ದೂರಿನಲ್ಲಿ ಉಲ್ಲೇಖವಾಗಿದೆ.
‘ಈ ರೀತಿ ಅಧಿಕಾರಿಗಳು ಕಂಪನಿಯೊಂದಿಗೆ ಶಾಮೀಲಾಗಿ ಸರ್ಕಾರಕ್ಕೆ ವಂಚನೆ ಎಸಗುತ್ತಿದ್ದಾರೆ. ದಾಖಲೆಗಳನ್ನೇ ತಿದ್ದಿ ಸರ್ಕಾರದ ಹಣವನ್ನು ದೋಚುತ್ತಿರುವ ಇವರ ವಿರುದ್ಧ ತನಿಖೆ ನಡೆಸಬೇಕಲ್ಲದೇ ಬ್ಯಾಂಕ್ ಖಾತೆಗಳನ್ನು ಪರಿಶೀಲನೆ ನಡೆಸಬೇಕು. ವಾಸ್ತವ ವೇತನ ಮತ್ತು ಪಾವತಿಯಾಗಿರುವ ವೇತನದ ಮೊತ್ತವನ್ನೂ ಪತ್ತೆ ಹಚ್ಚಬೇಕು,’ ಎಂದು ದೂರುದಾರ ಆಗ್ರಹಿಸಿರುವುದು ತಿಳಿದು ಬಂದಿದೆ.
ಇಎಸ್‌ಐ ಆಸ್ಪತ್ರೆ, ಔಷಧಾಲಯಗಳಲ್ಲಿ ಕಲ್ಪಿತ ವ್ಯಕ್ತಿಗಳಿಗೆ ವೇತನ ಪಾವತಿಸುತ್ತಿರುವುದರ ಹಿಂದೆ ಬಹು ದೊಡ್ಡ ಮಾಫಿಯಾ ಕೆಲಸ ಮಾಡುತ್ತಿದೆ. ಇದನ್ನು ತನಿಖೆ ಮೂಲಕವೇ ಹೊರಗೆಳೆಯಬೇಕು ಎಂದು ದೂರಿನಲ್ಲಿ ವಿವರಿಸಿದ್ದಾರೆ.
ಈ ದೂರಿನ ಕುರಿತು ಕಾರ್ಮಿಕ ಇಲಾಖೆ ಸಚಿವ ಸಂತೋಷ್ ಲಾಡ್ ಅವರ ಆಪ್ತ ಕಾರ್ಯದರ್ಶಿಗಳು ಕಾರ್ಮಿಕ ಇಲಾಖೆಯ ಸರ್ಕಾರ ಪ್ರಧಾನ ಕಾರ್ಯದರ್ಶಿಗೆ 2024ರ ಜನವರಿ 20ರಂದೇ ಟಿಪ್ಪಣಿ ಹೊರಡಿಸಿದ್ದಾರೆ.
ಟಿಪ್ಪಣಿಯಲ್ಲೇನಿದೆ?
ಬೆಂಗಳೂರಿನ ರಾಜು ವೆಂಕಟೇಶ್ ಪ್ರಸನ್ನ ಅವರು ಕಾರ್ಮಿಕ ಸಚಿವರಿಗೆ 2024ರ ಜನವರಿ 20ರಂದು ದೂರು ಸಲ್ಲಿಸಿದ್ದಾರೆ. ಕಚೇರಿ ಅಧೀಕ್ಷಕ ಜಿ ಗಿರೀಶ್ ಮತ್ತು ಸಹಾಯಕ ಆಡಳಿತಾಧಿಕಾರಿ ಕೋಮಲ ಅವರು ಫೀಚರ್ ಪ್ಲಾನೆಟ್ ಏಜೆನ್ಸಿ ಪ್ರೈ ಲಿ ಅವರ ಜೊತೆ ಸೇರಿ ಸರ್ಕಾರಕ್ಕೆ ಆರ್ಥಿಕ ನಷ್ಟ ಮಾಡಿರುತ್ತಾರೆ. ಈ ಬಗ್ಗೆ ವಿವರವಾದ ತನಿಖೆ ನಡೆಸಿ ಶಿಸ್ತು ಕ್ರಮ ಕೈಗೊಳ್ಳಬೇಕು. ಸರ್ಕಾರದ ಹಣವನ್ನು ಮರು ವಸೂಲಿ ಮಾಡಬೇಕು ಎಂದು ಕೋರಿದ್ದಾರೆ.
ದೂರಿನಲ್ಲಿನ ಪ್ರತಿಯೊಂದು ಅಂಶಗಳನ್ನು ಕೂಲಂಕಷವಾಗಿ ಪರಿಶೀಲಿಸಿ ನಿಯಮಾನುಸಾರ ಕ್ರಮ ಕೈಗೊಳ್ಳಬೇಕು ಎಂದು ಟಿಪ್ಪಣಿಯಲ್ಲಿ ಕೋರಿರುವುದು ಗೊತ್ತಾಗಿದೆ.