84.50 ಕೋಟಿ ರು ಮೊತ್ತದ ಉಪಕರಣ ಖರೀದಿ; ಮರು ಟೆಂಡರ್‌ ಇಲ್ಲ, ಸುತ್ತೋಲೆಯೂ ಪಾಲನೆಯಿಲ್ಲ

ಬೆಂಗಳೂರು; ರಾಜ್ಯದ 143 ಸಾರ್ವಜನಿಕ ಆಸ್ಪತ್ರೆಗಳಿಗೆ ಗಣಕ ಯಂತ್ರಗಳು ಸೇರಿದಂತೆ ಹಾರ್ಡ್‌ವೇರ್‍‌ ಉಪಕರಣಗಳನ್ನು 84.50 ಕೋಟಿ ರು .ಮೊತ್ತದಲ್ಲಿ ಪೂರೈಕೆಗಾಗಿ ಕರೆದಿದ್ದ ಟೆಂಡರ್‍‌ ಅವಧಿ ಪೂರ್ಣಗೊಂಡಿದ್ದರೂ ಸಹ ಮರು ಟೆಂಡರ್ ಕರೆಯದೇ ನಿಯಮ, ಸುತ್ತೋಲೆಯನ್ನೂ  ಉಲ್ಲಂಘಿಸಿರುವುದು ಇದೀಗ ಬಹಿರಂಗವಾಗಿದೆ.

 

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಗೆ ಹರ್ಷಗುಪ್ತ ಅವರು ಸರ್ಕಾರದ ಪ್ರಧಾನ ಕಾರ್ಯದರ್ಶಿಯಾಗಿ ಅಧಿಕಾರ ವಹಿಸಿಕೊಂಡ ನಂತರವೂ ಇಲಾಖೆಯಲ್ಲಿ ನಿಯಮ ಉಲ್ಲಂಘನೆಗಳು, ಅಕ್ರಮ ಚಟುವಟಿಕೆಗಳ  ಪ್ರಕರಣಗಳಿಗೆ ಕಡಿವಾಣ ಬಿದ್ದಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ. ಈ ಬೆನ್ನಲ್ಲೇ ಹಾರ್ಡ್‌ವೇರ್‌ ಉಪಕರಣಗಳ ಖರೀದಿಗೆ ಸಂಬಂಧಿಸಿದಂತೆ ಮರು ಟೆಂಡರ್‌ ಕರೆಯದೇ ಇರುವ ಪ್ರಕರಣವು ಮುನ್ನೆಲೆಗೆ ಬಂದಿದೆ.

 

ಈ ಟೆಂಡರ್ ಪ್ರಕ್ರಿಯೆ ಸಂಬಂಧ ಸಚಿವ ದಿನೇಶ್‌ ಗುಂಡೂರಾವ್‌ ಅವರ ಗಮನದಲ್ಲಿದ್ದರೂ ಜಾಣ ಕುರುಡರಂತೆ ವರ್ತಿಸಿರುವುದು ಸಹ ಹಲವು ಅನುಮಾನಗಳಿಗೆ ಕಾರಣವಾಗಿದೆ.

 

ಟೆಂಡರ್‍‌ ಆಹ್ವಾನಿಸಿದ ನಂತರ 168 ದಿನದೊಳಗೆ ಇಡೀ ಪ್ರಕ್ರಿಯೆ ಪೂರ್ಣಗೊಂಡು ಯಶಸ್ವಿ ಬಿಡ್‌ದಾರನಿಗೆ ಕಾರ್ಯಾದೇಶ ನೀಡಬೇಕು ಎಂಬ ನಿಯಮವಿದೆ. ಈ ನಿಯಮಗಳ ಪ್ರಕಾರ ಹಾರ್ಡ್‌ವೇರ್‍‌ ಉಪಕರಣಗಳ ಖರೀದಿ ಸಂಬಂಧ ಕರೆದಿದ್ದ ಟೆಂಡರ್‍‌ ಅವಧಿ 168 ದಿನಗಳು ಪೂರ್ಣಗೊಳ್ಳದೇ ಇದ್ದಲ್ಲಿ ಅದನ್ನು ರದ್ದುಗೊಳಿಸಬೇಕಿತ್ತು.

 

ಆದರೆ ಇಲಾಖೆಯಲ್ಲಿರುವ ಭ್ರಷ್ಟ ಅಧಿಕಾರಿಶಾಹಿಗಳ ಕೂಟವೊಂದು ಹಾಲಿ ಟೆಂಡರ್‍‌ ಪ್ರಕ್ರಿಯೆ ರದ್ದುಗೊಳಿಸಿ ಮರು ಟೆಂಡರ್‍‌ ಕರೆಯದೇ ಹಳೆಯ ಟೆಂಡರ್‍‌ನ್ನೇ ಮುಂದುವರೆಸಲು ಯತ್ನಿಸಿದೆ ಎಂದು ತಿಳಿದು ಬಂದಿದೆ.

 

ಈ ಸಂಬಂಧ ರಾಮ್‌ ಜಿ ಎಂಬುವರು ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹರ್ಷಗುಪ್ತ ಅವರಿಗೆ 2024ರ ಆಗಸ್ಟ್‌ 12ರಂದು ಇ-ಮೈಲ್‌ ಮಾಡಿದ್ದಾರೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ರಾಷ್ಟ್ರೀಯ ಆರೋಗ್ಯ ಅಭಿಯಾನ (ಎನ್‌ಹೆಚ್ಎಂ) ಯೋಜನೆಯ ಭಾಗವಾಗಿ ರಾಜ್ಯದ ಬಳ್ಳಾರಿ, ಬೆಂಗಳೂರಿನ ಕುಷ್ಠ ರೋಗ ಆಸ್ಪತ್ರೆ ಸೇರಿದಂತೆ 143 ಸಾರ್ವಜನಿಕ ಆಸ್ಪತ್ರೆಗಳಲ್ಲಿ ಡೆಸ್ಕ್‌ಟಾಪ್‌, ಪ್ರಿಂಟರ್‍‌ ಸೇರಿದಂತೆ ಇನ್ನಿತರೆ ಹಾರ್ಡ್‌ವೇರ್‍‌ ಉಪಕರಣಗಳ ಖರೀದಿಗೆ ಟೆಂಡರ್‍‌ ಕರೆದಿತ್ತು.

 

ಈ ಟೆಂಡರ್‍‌ನಲ್ಲಿ ಬೆಂಗಳೂರಿನ ವ್ಯಾಲ್ಯು ಪಾಯಿಂಟ್‌ ಸಿಸ್ಟಂ, ಆಕ್ಯುರಾ ಟೆಕ್ಯೂಪ್‌ಮೆಂಟ್‌, ಆರ್ಸಿಯಸ್‌ ಇನ್ಫೋಟೆಕ್‌ ಪ್ರೈವೈಟ್‌ ಲಿಮಿಟೆಡ್‌, ಫ್ಯೂಚರ್‍‌ ಬ್ಯುಸಿನೆಸ್‌ ಇಂಡಿಯಾ ಪ್ರೈವೈಟ್‌ ಲಿಮಿಟೆಡ್‌ ಕಂಪನಿಗೆ ಕ್ರಮವಾಗಿ 2024ರ ಮಾರ್ಚ್‌ 6 ಮತ್ತು 7ರಂದು ಹಾಜರಾಗಲು 2024ರ ಮಾರ್ಚ್‌ 5ರಂದು ಸೂಚಿಸಿತ್ತು.

 

ಆದರೆ 2024ರ ಆಗಸ್ಟ್‌ 7ರವರೆಗೆ ಅಂದರೆ 168 ದಿನಗಳಾದರೂ ಬಿಡ್‌ಗಳ ತಾಂತ್ರಿಕ ಮೌಲ್ಯಮಾಪನ ನಡೆದಿಲ್ಲ. ಅಲ್ಲದೇ ಕೆಪಿಪಿ ಪೋರ್ಟಲ್‌ನಲ್ಲಿಯೂ ಇದು ನವೀಕೃತಗೊಂಡಿಲ್ಲ. 2024ರ ಆಗಸ್ಟ್‌ 7ರ (ಸಂಜೆ 5.09;47 ಗಂಟೆ_ ತನಕವೂ ಟೆಂಡರ್‍‌ಗಳು ಇನ್ನೂ ಮೌಲ್ಯಮಾಪನ ಪರಿಶೀಲನೆಯಲ್ಲಿವೆ ಎಂದೇ ಕೆಪಿಪಿ ಪೋರ್ಟಲ್‌ನಲ್ಲಿ ಬಿಂಬಿಸಿತ್ತು ಎಂಬ ಅಂಶವನ್ನು ರಾಮ್‌ ಜಿ ಎಂಬುವರು ಈ-ಮೈಲ್‌ನಲ್ಲಿ ತಿಳಿಸಿರುವುದು ಗೊತ್ತಾಗಿದೆ.

 

ಟೆಂಡರ್‍‌ ಪ್ರಕ್ರಿಯೆಗೆ ಸಂಬಂಧಿಸಿದಂತೆ ಆರ್ಥಿಕ ಇಲಾಖೆಯು 2021ರ ನವೆಂಬರ್‍‌ 29ರಂದೇ ಸುತ್ತೋಲೆ ಹೊರಡಿಸಿದೆ.

 

ಇದರ ಪ್ರಕಾರ ಟೆಂಡರ್‍‌ ದಾಖಲಾತಿಗಳ ಪರಿಶೀಲನೆ ನಂತರ 48 ಗಂಟೆಯೊಳಗೆ ತಾಂತ್ರಿಕ ಬಿಡ್‌ನ್ನು ತೆರೆಯಬೇಕು. ಮತ್ತು 30 ದಿನ ಅಥವಾ ಈ ಗಡುವಿನೊಳಗೆ ತಾಂತ್ರಿಕ ಬಿಡ್‌ನ ಮೌಲ್ಯಮಾಪನ ನಡೆಯಬೇಕು. ಇದಾದ ನಂತರ 35ನೇ ದಿನದಂದು ಆರ್ಥಿಕ ಬಿಡ್‌ನ್ನು ತೆರೆಯಬೇಕು.

 

50ನೇ ದಿನಕ್ಕೆ ಆರ್ಥಿಕ ಬಿಡ್‌ನ ಮೌಲ್ಯಮಾಪನ ಪ್ರಕ್ರಿಯೆ ಪೂರ್ಣಗೊಳ್ಳಬೇಕು.70ನೇ ದಿನಕ್ಕೆ ಕಾಂಟ್ರಾಕ್ಟ್‌ ಅವಾರ್ಡ್‌ ಆಗಬೇಕು. 90ನೇ ದಿನಕ್ಕೆ ಖಾತರಿ ಪತ್ರ ಪಡೆದುಕೊಂಡು ಒಪ್ಪಂದ ಪ್ರಕ್ರಿಯೆ ಪೂರ್ಣಗೊಳ್ಳಬೇಕು. 91ನೇ ದಿನಕ್ಕೆ ಯಶಸ್ವಿ ಬಿಡ್‌ದಾರರನಿಗೆ ಕಾರ್ಯಾದೇಶ ನೀಡಬೇಕು ಎಂದು ಆರ್ಥಿಕ ಇಲಾಖೆಯು ಸುತ್ತೋಲೆಯಲ್ಲಿ ಸ್ಪಷ್ಟವಾಗಿ ಸೂಚಿಸಿತ್ತು.

 

ಆದರೆ ಇಲಾಖೆಯೊಳಗಿನ ಭ್ರಷ್ಟರ ಕೂಟವು ಈ ಸುತ್ತೋಲೆಯನ್ನು ಪಾಲಿಸಿಲ್ಲ ಎಂದು ಗೊತ್ತಾಗಿದೆ.

 

‘ಎರಡೂ ಟೆಂಡರ್‌ಗಳ ಟೆಂಡರ್ ದಾಖಲೆಗಳು ಮತ್ತು ಟೆಂಡರ್ ಷರತ್ತುಗಳ ಸಿಂಧುತ್ವದ ಪ್ರಕಾರ, ಟೆಂಡರ್‌ಗಳ ಸಿಂಧುತ್ವವು 90 ದಿನಗಳಾಗಿವೆ. ಆರ್ಥಿಕ ಇಲಾಖೆಯ ಸುತ್ತೋಲೆ ಪ್ರಕಾರ ಟೆಂಡರ್‌ಗಳನ್ನು ತೆರೆಯಲು ಮತ್ತು ಪ್ರಕ್ರಿಯೆ, ಹಾಗೂ ಕಾರ್ಯಾದೇಶಗಳನ್ನು 91 ದಿನಗೊಳಗೆ ನೀಡಲು ಕಾಲಾವಧಿ ನಿಗದಿಪಡಿಸಿದೆ. ಅಂದರೆ ಈ ದಿನದೊಳಗೇ ಟೆಂಡರ್‌ಗಳನ್ನು ಮೌಲ್ಯಮಾಪನ ಮಾಡಿರಬೇಕು. ಆದರೆ 2024 ರ ಮೇ 22 ರಂದು ಅಥವಾ ಅದಕ್ಕೂ ಮೊದಲು ಸಹಿ ಮಾಡಲಾದ ಒಪ್ಪಂದಗಳು ಮತ್ತು ಕೆಲಸದ ಆದೇಶಗಳನ್ನು ನೀಡಲಾಗಿದೆ,’ ಎಂದು ರಾಮ್‌ ಜಿ ಅವರು ಇ-ಮೇಲ್‌ನಲ್ಲಿ ತಿಳಿಸಿರುವುದು ತಿಳಿದು ಬಂದಿದೆ.

 

ಅಷ್ಟೇ ಅಲ್ಲದೇ ‘ಬಿಡ್ ಸಲ್ಲಿಕೆಯ ಕೊನೆಯ ದಿನದ 168 ದಿನಗಳ ನಂತರವೂ, ಟೆಂಡರ್ ಪರಿಶೀಲನಾ ಸಮಿತಿ ಮತ್ತು ಟೆಂಡರ್ ಸ್ವೀಕರಿಸುವ ಮೂಲಕ ಎರಡೂ ಟೆಂಡರ್‌ಗಳಿಗೆ ತಾಂತ್ರಿಕ ಬಿಡ್‌ಗಳನ್ನು ಸಹ ಮೌಲ್ಯಮಾಪನ ಮಾಡಲಾಗಿಲ್ಲ. ಆದ್ದರಿಂದ ಈ ಮೇಲೆ ಹೇಳಲಾದ ಎರಡೂ ಟೆಂಡರ್‌ಗಳು ಅಮಾನ್ಯಗೊಂಡಿವೆ. ಮತ್ತು ಎರಡೂ ಟೆಂಡರ್‌ಗಳನ್ನು ರದ್ದುಗೊಳಿಸಬೇಕು ಮತ್ತು ಹಿಂಪಡೆಯಬೇಕು,’ ಎಂದು ರಾಮ್‌ ಜಿ ಎಂಬುವರು ಇ-ಮೇಲ್‌ನಲ್ಲಿ ಕೋರಿರುವುದು ತಿಳಿದು ಬಂದಿದೆ.

the fil favicon

SUPPORT THE FILE

Latest News

Related Posts