ಸಿಎಂ ಪತ್ನಿಯಿಂದ ಜಮೀನು ಹಸ್ತಾಂತರಿಸಿಕೊಂಡಿದ್ದ ಮುಡಾ; ಸರ್ಕಾರಿ ಆದೇಶ ಉಲ್ಲಂಘನೆ ಆರೋಪ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಂದ ಪರಿತ್ಯಾಜನ ಪತ್ರದ ಮೂಲಕ 3.16 ಎಕರೆ ಜಮೀನನ್ನು ಹಸ್ತಾಂತರಿಸಿಕೊಂಡಿದ್ದ ಮೈಸೂರು ನಗರಾಭಿವೃದ್ದಿ ಪ್ರಾಧಿಕಾರವು ಸರ್ಕಾರದ ಸುತ್ತೋಲೆ, ನಿರ್ದೇಶನವನ್ನು ಉಲ್ಲಂಘಿಸಿದೆ ಎಂಬ ಗುರುತರವಾದ ಮತ್ತೊಂದು ಆರೋಪ ಕೇಳಿ ಬಂದಿದೆ.

 

ವ್ಯವಸಾಯ ಜಮೀನುಗಳಲ್ಲಿನ ಜಾಗವನ್ನು ರಸ್ತೆಯೆಂದು ಭೂ ಮಾಲೀಕರು ಪರಿತ್ಯಾಜನ ಪತ್ರದ ಮೂಲಕ ನೀಡಿದಲ್ಲಿ ಅಂತಹ ಜಾಗಗಳನ್ನು ಹಸ್ತಾಂತರಿಸಿಕೊಳ್ಳಬಾರದು ಎಂದು ನಗರಾಭಿವೃದ್ಧಿ ಇಲಾಖೆಯು 2020ರಲ್ಲೇ ಸುತ್ತೋಲೆ ಮೂಲಕ ನಿರ್ದೇಶನ ನೀಡಿತ್ತು. ಆದರೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು 2020ರಲ್ಲಿ ನೀಡಿದ್ದ ನಿರ್ದೇಶನವನ್ನು 2021ರಲ್ಲಿ ಉಲ್ಲಂಘನೆ ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ.

 

ಮೈಸೂರು ನಗರಾಭಿವೃದ್ದಿ ಪ್ರಾಧಿಕಾರವು ಪಾರ್ವತಿ ಅವರಿಗೆ ಸಂಬಂಧಿಸಿದ ಎಲ್ಲಾ ದಾಖಲೆಗಳನ್ನು ಪರಿಶೀಲಿಸಿದ ನಂತರವೇ ಪರಿತ್ಯಾಜನ ಪತ್ರ ಬರೆಸಿಕೊಂಡು 3.16 ಎಕರೆ ಜಮೀನನ್ನು ವರ್ಗಾಯಿಸಿಕೊಂಡಿತ್ತು ಎಂದು ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಖುದ್ದು ಸಮರ್ಥಿಸಿಕೊಂಡು ದಾಖಲೆ ಬಿಡುಗಡೆ ಮಾಡಿದ್ದರು. ಇದರ ಬೆನ್ನಲ್ಲೇ ಅವರ ಪತ್ನಿ ಪಾರ್ವತಿ ಅವರ ಪ್ರಕರಣದಲ್ಲೇ ನಗರಾಭಿವೃದ್ಧಿ ಇಲಾಖೆಯ ಸುತ್ತೋಲೆ ಉಲ್ಲಂಘನೆ ಆಗಿದೆ ಎಂಬ ಆರೋಪವು ಮತ್ತಷ್ಟು ಮುನ್ನೆಲೆಗೆ ಬಂದಿದೆ.

 

ಈ ದಾಖಲೆಯನ್ನು ಸ್ನೇಹಮಯಿ ಕೃಷ್ಣ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

 

ರಾಜ್ಯದ ಸ್ಥಳೀಯ ಸಂಸ್ಥೆಗಳು ಯಾವುದೇ ಕೃಷಿ ಜಮೀನನ್ನು ಭೂ ಮಾಲೀಕರಿಮದ ನೇರವಾಗಿ ಹಸ್ತಾಂತರಿಸಿಕೊಳ್ಳುವ ಸಂಬಂಧ 2020ರ ಸೆ.30ರಂದು ಸುತ್ತೋಲೆ ಹೊರಡಿಸಿತ್ತು. ಈ ಸುತ್ತೋಲೆಯನ್ನು ರಾಜ್ಯದ ಎಲ್ಲಾ ಸ್ಥಳೀಯ ಸಂಸ್ಥೆಗಳು, ನಗರಾಭಿವೃದ್ಧಿ ಪ್ರಾಧಿಕಾರಗಳು ತಮ್ಮ ವ್ಯಾಪ್ತಿಯಲ್ಲಿ ಬರುವ ಯಾವುದೇ ವಿಧವಾದ ಕೃಷಿ ಜಮೀನನ್ನು ಭೂ ಮಾಲೀಕರಿಂದ ನೇರವಾಗಿ ಹಸ್ತಾಂತರಿಸಿಕೊಳ್ಳಲು ನಿರ್ದೇಶನಗಳನ್ನು ನೀಡಿತ್ತು.

 

ಇದರ ಪ್ರಕಾರ ಕೃಷಿ ಜಮೀನನ್ನು ಭೂ ಪರಿವರ್ತಿಸಿ ವಿನ್ಯಾಸ ಅನುಮೋದನೆ ಪಡೆಯದೇ ನೇರವಾಗಿ ಸ್ಥಳೀಯ ಸಂಸ್ಥೆಗಳು ರಸ್ತೆಗಾಗಿ ಭೂ ಮಾಲೀಕರುಗಳಿಂದ ಹಸ್ತಾಂತರಿಸಿಕೊಲ್ಳುವುದು ಯೋಜನಾ ದೃಷ್ಟಿಯಿಂದ ಸೂಕ್ತವಾಗಿರಲಿಲ್ಲ. ಹೀಗಾಗಿ ಯಾವುದೇ ಕೃಷಿ ಜಮೀನನ್ನು ರಸ್ತೆಗಾಗಿ ಹಸ್ತಾಂತರಿಸಿಕೊಳ್ಳಬೇಕಾದ ಅನಿವಾರ್ಯ ಸಂದರ್ಭಗಳು ಒದಗಿಬಂದಲ್ಲಿ ಅಂತಹ ಸಂದರ್ಭಗಳಲ್ಲಿ ಸಂಬಂಧಿಸಿದ ನಗರಾಭಿವೃದ್ಧಿ, ಯೋಜನಾ ಪ್ರಾಧಿಕಾರಗಳು, ಸಹಾಯಕ ನಿರ್ದೇಶಕರುಗಳಿಂದ ಪರಿಶೀಲಿಸಿಕೊಂಡು ತಾಂತ್ರಿಕ ಅಭಿಪ್ರಾಯ ಪಡೆಯಬೇಕು.

 

ಅಲ್ಲದೇ ಸಂಬಂಧಿಸಿದ ಜಿಲ್ಲಾಧಿಕಾರಿಗಳು ಕಂದಾಯ ಕಾಯ್ದೆಯಡಿ ಅಧಿಸೂಚನೆ ಹೊರಡಿಸಿದ ನಂತರ ಸ್ಥಳೀಯ ಸಂಸ್ಥೆಗಳು ಹಸ್ತಾಂತರಿಸಿಕೊಳ್ಳಲು ಕ್ರಮ ಕೈಗೊಳ್ಳಬೇಕು. ಸ್ಥಳೀಯ ಸಂಸ್ಥೆಗಳು ವ್ಯವಸಾಯ ಜಮೀನುಗಳಲ್ಲಿನ ಜಾಗವನ್ನು ರಸ್ತೆಯೆಂದು ಭೂ ಮಾಲೀಕರು ಪರಿತ್ಯಾಜನ ಪತ್ರದ ಮೂಲಕ ನೀಡಿದಲ್ಲಿ ಅಂತಹ ಜಾಗಗಳನ್ನು ಹಸ್ತಾಂತರಿಸಿಕೊಳ್ಳಬಾರದು ಎಂದು ಸುತ್ತೋಲೆಯಲ್ಲಿ ಸ್ಪಷ್ಟವಾಗಿ ನಿರ್ದೇಶಿಸಿತ್ತು.

 

ಉಲ್ಲಂಘನೆ ಆಗಿದೆಯೇ?

 

ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಂದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವು 2021ರ ನವೆಂಬರ್‍‌ 25ರಂದು ಪರಿತ್ಯಾಜನ ಪತ್ರದ ಮೂಲಕ ಜಮೀನನ್ನು ಹಸ್ತಾಂತರಿಸಿಕೊಂಡಿತ್ತು.

 

ಮುಡಾ ಆಯುಕ್ತರನ್ನು ಪ್ರತಿನಿಧಿಸಿದ್ದ ಪ್ರಥಮ ದರ್ಜೆ ಸಹಾಯಕ ಕೆ ಸಿ ಉಮೇಶ್‌ ಎಂಬುವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ ಎಂ ಪಾರ್ವತಿ ಅವರಿಂದ ಪರಿತ್ಯಾಜನ ಪತ್ರದ ಮೂಲಕ ಜಮೀನನ್ನು ಹಸ್ತಾಂತರಿಸಿಕೊಂಡಿದ್ದರು ಎಂಬುದು ಪರಿತ್ಯಾಜನ ಪತ್ರದಿಂದ ತಿಳಿದು ಬಂದಿದೆ.

 

‘ಮೊದಲನೇ ಪಕ್ಷಕಾರರು ಮತ್ತು ಎರಡನೇ ಪಕ್ಷಕಾರರು ಸಂಬೋಧಿಸಲ್ಪಡುವಾಗ ಅರ್ಥ, ಸಂದರ್ಭಾನುಸಾರವಾಗಿ, ಅರ್ಥ ಅಭಾಸವಾಗದಿದ್ದ ಪಕ್ಷದಲ್ಲಿ ಈ ದಾಖಲೆಯ ಪಕ್ಷಕಾರರು, ಅವರ ವಾರಸುದಾರರು ಅವರು ನೇಮಕಾತಿಗೊಳಿಸಿದ ಆಡಳಿತಾಧಿಕಾರಿಗಳು, ಅವರು ಅನುಮೋದಿಸಿರುವ ಪಕ್ಷಕಾರರು ಅವರ ಹಕ್ಕುಗಳನ್ನು ಜಾರಿಗೊಳಿಸುವಂತಹವರು, ಅಥವಾ ಅವರವರ ಹಾದಿಯಲ್ಲಿ ಕಾನೂನಾತ್ಮಕ ಹಕ್ಕುಳ್ಳವಾಗಿರುವಂತಹರು ಸಹಾ ಸೇರ್ಪಡೆಯಾಗುವಂತಹರೆಂದು ದೃಢೀಕರಿಸಲಾಗಿದೆ,’ ಎಂದು ಪಾರ್ವತಿ ಮತ್ತು ಕೆ ಸಿ ಉಮೇಶ್‌ ಅವರು ದೃಢೀಕರಿಸಿ ಸಹಿ ಮಾಡಿರುವುದು ಪತ್ರದಿಂದ ಗೊತ್ತಾಗಿದೆ.

 

ಸಿದ್ದರಾಮಯ್ಯ ಅವರ ಸಮರ್ಥನೆಯಲ್ಲೇನಿತ್ತು?

 

‘ಇಷ್ಟೆಲ್ಲಾ ಆದ ಮೇಲೆ ನನ್ನ ಪತ್ನಿ ದಿನಾಂಕ; 23-10-2021 ರಲ್ಲಿ ಮತ್ತೆ ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲಿ, “ನನ್ನ ಜಮೀನನ್ನು ಪ್ರಾಧಿಕಾರವು ಉಪಯೋಗಿಸಿಕೊಂಡಿದ್ದು ಇದುವರೆಗೆ ಯಾವುದೇ ಪರಿಹಾರವನ್ನು ನೀಡಿರುವುದಿಲ್ಲ. ಆದ್ದರಿಂದ ನನಗೆ ಮೇಲಿನ ಜಮೀನಿಗೆ ಪರಿಹಾರವಾಗಿ ಪ್ರಸ್ತುತ ಶೇ. 50:50ರ ಅನುಪಾತದಲ್ಲಿ ಕೊಡಿ ಎಂದು ಕೇಳಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದರು.

 

‘ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದವರು ಇದನ್ನೆಲ್ಲ ಪರಿಶೀಲಿಸಿ ನನ್ನ ಪತ್ನಿಯಿಂದ ಪರಿತ್ಯಾಜನ ಪತ್ರ ಬರೆಸಿಕೊಂಡು 3-16 ಗುಂಟೆ ಜಮೀನುಗಳ ಹಕ್ಕುಗಳನ್ನು ಪ್ರಾಧಿಕಾರದ ಹೆಸರಿಗೆ ವರ್ಗಾಯಿಸಿಕೊಂಡು, ದಿನಾಂಕ 30-12-2021 ರಂದು ಕೆಸರೆ ಗ್ರಾಮದ ಸ.ನಂ. 464 ರ 3-16 ಎಕರೆ ಜಮೀನಿಗೆ ಬದಲಿ ಜಾಗ ನೀಡುವ ಬಗ್ಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಆಯುಕ್ತರು ಅಧಿಕೃತ ಜ್ಞಾಪನ ಆದೇಶ ಹೊರಡಿಸಿ 38,284 ಚದರ ಅಡಿ ಅಳತೆಗೆ ನಿವೇಶನಗಳನ್ನು ಪರಿಹಾರ ರೂಪದಲ್ಲಿ ಮಂಜೂರು ಮಾಡಿರುತ್ತಾರೆ,’ ಎಂದು ಸ್ವತಃ ಸಿದ್ದರಾಮಯ್ಯ ಅವರೇ ಪ್ರತಿಪಾದಿಸಿದ್ದರು.

 

ನಗರಾಭಿವೃದ್ಧಿ ಇಲಾಖೆಯು 2020ರಲ್ಲಿ ಹೊರಡಿಸಿದ್ದ ಸುತ್ತೋಲೆ, ನಿರ್ದೇಶನವು ಬಡವರು, ಮಧ್ಯಮ ವರ್ಗದವರಿಗೆ ಸೂರು ಕಲ್ಪಿಸುವ ರೆವಿನ್ಯೂ ಲೇಔಟ್‌ಗಳಿಗೆ ಸಂಕಷ್ಟ ಎದುರಾಗಲಿದೆ ಎಂದು ಹೇಳಲಾಗಿತ್ತು.

 

ಹೊಸ ಬಡಾವಣೆ ನಿರ್ಮಾಣದ ವೇಳೆ ರಸ್ತೆಯಿಲ್ಲದಿದ್ದಲ್ಲಿ ರಸ್ತೆಗೆ ಅಗತ್ಯವಿರುವ ಭೂಮಿಯನ್ನು ಭೂ ಮಾಲೀಕರಿಂದ ಸ್ಥಳೀಯ ಸಂಸ್ಥೆಗಳಿಗೆ ಪರಿತ್ಯಾಜನ ಪತ್ರನೋಂದಣಿ ಮಾಡಿಸುತ್ತಿದ್ದರು. ಅಲ್ಲಿಗೆ ಭೂಮಾಲೀಕ ರಸ್ತೆಗೆಂದು ಪರಿತ್ಯಾಜನ ಪತ್ರ ಮಾಡಿಸಿಕೊಟ್ಟ ವೇಳೆ ಅದನ್ನೇ ಆಧಾರವಾಗಿಟ್ಟುಕೊಂಡು ರಿಯಲ್ ಎಸ್ಟೇಟ್ ಉದ್ಯಮಿಗಳು ರಸ್ತೆ ಮಾಡಿಕೊಳ್ಳುತ್ತಿದ್ದರು.

 

ಆದರೆ, ಈಗ ಹೊಸ ಸುತ್ತೋಲೆ ಪ್ರಕಾರ ಪತ್ರ ಪಡೆಯುವ ಮೊದಲು ಮಾರ್ಗಸೂಚಿ ಪಾಲಿಸುವಂತೆ ನಗರಾಭಿವೃದ್ಧಿ ಇಲಾಖೆ ಸೂಚಿಸಿದ್ದು ವಿರೋಧಕ್ಕೆ ಕಾರಣವಾಗಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts