ಬೆಂಗಳೂರು; ಮೈಸೂರು ನಗರಾಭಿವೃದ್ದಿ ಪ್ರಾಧಿಕಾರವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಅವರಿಗೆ ನೀಡಿರುವ ಬದಲಿ ನಿವೇಶನ ನೀಡಿರುವ ಕುರಿತು ಖುದ್ದು ಸಿದ್ದರಾಮಯ್ಯ ಅವರೇ ಸರಣಿ ರೂಪದಲ್ಲಿ ಸ್ಪಷ್ಟನೆ ಮತ್ತು ದಾಖಲೆಗಳನ್ನು ಬಹಿರಂಗಪಡಿಸಿದ ನಂತರವೂ ಈ ಪ್ರಕರಣದಲ್ಲಿ ಅನೇಕ ಪ್ರಶ್ನೆಗಳು ಮತ್ತು ಹತ್ತಾರು ಅನುಮಾನಗಳು ವ್ಯಕ್ತವಾಗಿವೆ.
ಇಡೀ ಪ್ರಕರಣ ಕುರಿತು ಮೈಸೂರಿನ ಸ್ನೇಹಮಯಿ ಕೃಷ್ಣ ಅವರು 14 ಪುಟಗಳ ಪತ್ರಿಕಾ ಹೇಳಿಕೆಯನ್ನು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ್ದಾರೆ. ಇದರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹತ್ತಾರು ಪ್ರಶ್ನೆಗಳನ್ನು ಕೇಳಿದ್ದಾರೆ.
ಪ್ರತಿಪಕ್ಷಗಳು ಇದೇ ಪ್ರಕರಣವನ್ನು ಮುಂದಿಟ್ಟುಕೊಂಡು ಬೆಂಗಳೂರಿನಿಂದ ಮೈಸೂರಿಗೆ ಪಾದಯಾತ್ರೆ ನಡೆಸುತ್ತಿರುವ ಹೊತ್ತಿನಲ್ಲೇ ಸ್ನೇಹಮಯಿ ಕೃಷ್ಣ ಅವರು ಎತ್ತಿರುವ ಪ್ರಶ್ನೆಗಳು ಮತ್ತು ಅನುಮಾನಗಳು ಮುನ್ನೆಲೆಗೆ ಬಂದಿವೆ.
ಕೆಸರೆ ಗ್ರಾಮದ ಸರ್ವೆ ನಂಬರ್ 464ರಲ್ಲಿನ 3.16 ಎಕರೆ ಜಮೀನು, ಅದರ ಹರಾಜು, ದಾಖಲೆ, ನಿಂಗ ಬಿನ್ ಜವರ, ಮೂಲ ಹರಾಜಿನ ದಾಖಲೆಗಳು, ನಿಂಗ ಉರೂಫ್ ಜವರ ಅವರಿಗೆ ಮೂರು ಜನ ಮಕ್ಕಳು, ವಂಶ ವೃಕ್ಷ, ಜೆ ದೇವರಾಜು ಅವರಿಗೆ ಸಂಬಂಧಿಸಿದ ದಾಖಲೆಗಳು, ನೋಂದಾವಣೆ, ಹಕ್ಕು ಖುಲಾಸೆ ಪತ್ರಗಳು, ಕ್ರಯ ಪತ್ರಗಳ ದಾಖಲೆಗಳನ್ನೂ ಸಾರ್ವಜನಿಕರ ಮುಂದಿಟ್ಟಿದ್ದಾರೆ. ಅಲ್ಲದೇ ಹಲವು ಅನುಮಾನಗಳು ಮತ್ತು ಪ್ರಶ್ನೆಗಳನ್ನೂ ಎತ್ತಿದ್ದಾರೆ.
ಸ್ನೇಹಮಯಿ ಕೃಷ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದಿರುವ ಪತ್ರದಲ್ಲಿ ಎತ್ತಿರುವ ಪ್ರಶ್ನೆಗಳು, ಅನುಮಾನಗಳು ಮತ್ತು ಉಲ್ಲೇಖಿಸಿರುವ ಸಂಗತಿ ಮತ್ತು ಅಂಶಗಳನ್ನು ಯಥಾವತ್ತಾಗಿ ಇಲ್ಲಿ ಪ್ರಕಟಿಸಲಾಗಿದೆ.
ಸಿದ್ದರಾಮಯ್ಯ ಅವರು 1935ರಲ್ಲಿ ನಿಂಗ ಬಿನ್ ಜವರ ಅವರು ಅಂದರೆ ಜವರನ ಮಗ ನಿಂಗ ಅವರು ಕೆಸರೆ ಗ್ರಾಮದ ಸರ್ವೆ ನಂಬರ್ 464ರಲ್ಲಿನ 3.16 ಎಕರೆ ಜಮೀನನ್ನು ಹರಾಜಿನಲ್ಲಿ ಖರೀದಿ ಮಾಡಿದ್ದಾರೆ ಎಂದು ಹೇಳಿದ್ದಾರೆ. ಮತ್ತು ಇದಕ್ಕೆ ಸಂಬಂಧಿಸಿದ ಹರಾಜಿನ ದಾಖಲೆಗಳನ್ನೂ ಬಿಡುಗಡೆ ಮಾಡಿದ್ದಾರೆ. ಅದರೆ ನಿಂಗ ಬಿನ್ ಜವರ ಎಂಬುವರದು ಆನಂತರದ ದಾಖಲೆಗಳಲ್ಲಿ (ಆರ್‍ಟಿಸಿ) ನಿಂಗ ಉರೂಫ್ ಜವರ ಎಂದು ಹೇಗೆ ಬದಲಾಯಿತು ಎಂಬುದನ್ನು ಹೇಳಿರುವುದಿಲ್ಲ ಎಂದು ಪತ್ರದಲ್ಲಿ ಗಮನ ಸೆಳೆದಿದ್ದಾರೆ.
‘ಮೂಲ ಹರಾಜಿನ ದಾಖಲೆಗಳಲ್ಲಿ ನಿಂಗನ ತಂದೆಯ ಹೆಸರು ಜವರ ಎಂಬುದು ಗೊತ್ತಾಗುತ್ತದೆ. ಆದರೆ ಎಲ್ಲಿಯೂ ನಿಂಗ ಉರೂಫ್ ಜವರನ ತಂದೆ ಯಾರು ಎಂಬುದನ್ನು ತಿಳಿಸಿರುವುದಿಲ್ಲ. ಈ ಅಂಶಗಳನ್ನು ಗಮನಿಸಿದಾಗ ನಿಂಗ ಬಿನ್ ಜವರ ಎಂಬುದನ್ನು ನಿಂಗ ಉರೂಫ್ ಜವರ ಎಂಬಂತೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಲಾಗಿದೆ ಎಂದು ಎಂಬ ಅನುಮಾನ ಮೂಡುತ್ತದೆಯಲ್ಲವೇ,’ ಎಂದು ಪತ್ರದಲ್ಲಿ ಪ್ರಶ್ನಿಸಿರುವುದು ಗೊತ್ತಾಗಿದೆ.
ಹರಾಜಿನಲ್ಲಿ ಸರ್ವೆ ನಂಬರ್ 464 ರ 3.16 ಎಕರೆ ಜಮೀನನ್ನು ಖರೀದಿ ಮಾಡಿದ್ದಕ್ಕೆ ಸಂಬಂಧಿಸಿದ ಮೂರು ಪುಟಗಳ ನಕಲು ಪ್ರತಿ ಮತ್ತು 1981-82ರಿಂದ 2000-2001ರವರೆಗೆನ ಕೈ ಬರವಣಿಗೆಯ ಆರ್‍ಟಿಸಿಗಳ ನಕಲು ಪ್ರತಿಗಳನ್ನು ಲಗತ್ತಿಸಿರುವುದು ತಿಳಿದು ಬಂದಿದೆ.
ಸಿದ್ದರಾಮಯ್ಯ ಅವರು ಬಿಡುಗಡೆ ಮಾಡಿದ್ದ ದಾಖಲೆಗಳಲ್ಲಿ ನಿಂಗ ಉರೂಫ್ ಜವರ ಎಂದು ಇದೆಯೇ ಹೊರತು ಜವರ ಉರೂಫ್ ನಿಂಗ ಎಂಬುದಿಲ್ಲ. ಅಂದರೆ ನಿಂಗ ಎಂಬುವವರಿಗೆ ಜವರ ಎಂಬ ಮತ್ತೊಂದು ಹೆಸರು ಇತ್ತು. ಜವರ ಎಂಬುವವರಿಗೆ ನಿಂಗ ಎಂಬ ಮತ್ತೊಂದು ಹೆಸರು ಇರಲಿಲ್ಲ ಎಂಬುದು ತಿಳಿದು ಬರುತ್ತದೆ. ‘ಹೀಗಿರುವಾಗ ನಿಮ್ಮ ಭಾಮೈದ ಮಲ್ಲಿಕಾರ್ಜುನ ಸ್ವಾಮಿ ಅವರಿಗೆ ಜಮೀನು ಮಾರಾಟ ಮಾಡಿರುವ ದೇವರಾಜು ‘ಎನ್ ‘ ಎಂಬ ಇನಿಷಿಯಲ್ ಇರಬೇಕಿತ್ತು. ಆದರೆ ‘ಜೆ’ ಎಂಬುದು ಹೇಗೆ ಬಂತು ಎಂದು ತಿಳಿಸಿಕೊಡುವಿರಾ,’ ಎಂದು ಕೃಷ್ಣ ಅವರು ಪ್ರಶ್ನಿಸಿದ್ದಾರೆ.
ನಿಂಗ ಊರೂಫ್ ಜವರ ಅವರ ವಂಶ ವೃಕ್ಷ ದಾಖಲೆಯನ್ನು ಸಿದ್ದರಾಮಯ್ಯ ಅವರು ಬಿಡುಗಡೆ ಮಾಡಿದ್ದರು. ‘ನಿಂಗ ಉರೂಫ್ ಜವರ ಅವರಿಗೆ ಮೂರು ಜನ ಮಕ್ಕಳು ಎಂದು ಹೇಳಿದ್ದ ಸಿದ್ದರಾಮಯ್ಯ ಅವರು ನಿಂಗ ಎಂಬುವರಿಗೆ ಮೊದಲನೆಯವರು ಮಲ್ಲಯ್ಯ, ಎರಡನೆಯವರು ಮೈಲಾರಯ್ಯ, ಮೂರನೆಯವರು ಜೆ ದೇವರಾಜು ಎಂದು ವಿವರಿಸಿದ್ದರು. ಅಲ್ಲದೇ 1993ರ ಏಪ್ರಿಲ್ 10 ರಂದು ನೀಡಲಾಗಿದೆ ಎಂದು ಹೇಳುವ ಹೇಳಿಕೆಯನ್ನು ಬಿಡುಗಡೆ ಮಾಡಿದ್ದರು.
ಅಲ್ಲದೇ ಮಲ್ಲಯ್ಯ, ಮೈಲಾರಯ್ಯನ ಹೆಂಡತಿ ಪುಟ್ಟಗೌರಮ್ಮ, ಮೈಲಾರಯ್ಯನ ಮಗ ಮಂಜುನಾಥ ಸ್ವಾಮಿ ಅವರ ಸರ್ವೆ ನಂಬರ್ 462ರಲ್ಲಿನ 0.32 ಗುಂಟೆ ಮತ್ತು ಸರ್ವೆನಂಬರ್ 464ರಲ್ಲಿನ 3.16 ಎಕರೆ ಜಮೀನಿನ ಖಾತೆಯನ್ನು ಜೆ ದೇವರಾಜು ಅವರಿಗೆ ವರ್ಗಾವಣೆ ಮಾಡಿರುವುದಕ್ಕೆ ಯಾವುದೇ ತಕರಾರು ಇಲ್ಲ. ಖಾತೆ ವರ್ಗಾವಣೆಗೆ ಒಪ್ಪಿಗೆ ಸೂಚಿಸಿ ಸಹಿ ಮಾಡಿಕೊಟ್ಟಿರುವುದರಿಂದ ಈ ಸ್ವತ್ತು ಜೆ ದೇವರಾಜು ಅವರಿಗೆ ವರ್ಗಾವಣೆಯಾಗಿದೆ ಎಂದು ಸಿದ್ದರಾಮಯ್ಯ ಅವರು ಹೇಳಿಕೆಯಲ್ಲಿ ವಿವರಿಸಿದ್ದರು.
ಈ ಹೇಳಿಕೆಯನ್ನೂ ಸ್ನೇಹಮಯಿ ಕೃಷ್ಣ ಅವರು ಪ್ರಶ್ನಿಸಿದ್ದಾರೆ.
‘ಅದರೆ ಇದಕ್ಕೂ ಮೊದಲೇ ಮಲ್ಲಯ್ಯ ಮತ್ತು ದೇವರಾಜು ಅವರು 1968ರ ಅಕ್ಟೋಬರ್ 29ರಂದು ಮೈಲಾರಯ್ಯನವರಿಗೆ ಹಕ್ಕು ಖುಲಾಸೆ ಪತ್ರವನ್ನು ನೋಂದಣಿ ಮಾಡಿಕೊಟ್ಟಿರುವ ವಿಚಾರವನ್ನು ಮುಚ್ಚಿಟ್ಟಿದ್ದಾರೆ ಎಂದು ಆರೋಪಿಸಿದ್ದಾರೆ.
ಸಿದ್ದರಾಮಯ್ಯ ಅವರು ಬಿಡುಗಡೆ ಮಾಡಿರುವ ಹಕ್ಕು ಖುಲಾಸೆ ಪತ್ರದ ಕುರಿತೂ ಕೃಷ್ಣ ಅವರು ಹಲವು ಪ್ರಶ್ನೆಗಳನ್ನು ಎತ್ತಿದ್ದಾರೆ. ‘ಮೊದಲನೇ ಮಗ ಮಲ್ಲಯ್ಯ, ಮೂರನೇ ಮಗ ದೇವರಾಜು ಅವರು ಎರಡನೇ ಮಗ ಮೈಲಾರಯ್ಯನವರಿಗೆ ಎರಡು ಸರ್ವೆ ನಂಬರ್‍ಗಳು (462 ಮತ್ತು 464) ಜಮೀನುಗಳ ಸಂಬಂಧ ಹಕ್ಕು ಖುಲಾಸೆ ಪತ್ರ ಬರೆದು ಕೊಟ್ಟಿರುವುದು, ಅದಕ್ಕೆ ಪ್ರತಿಫಲ ಪಡೆದಿರುವುದು ತಿಳಿದು ಬರುತ್ತದೆಯಲ್ಲವೇ,’ ಎಂದು ಪ್ರಶ್ನಿಸಿರುವುದು ಗೊತ್ತಾಗಿದೆ.
ಈ ಹಕ್ಕು ಖುಲಾಸೆ ಪತ್ರದ ಪ್ರಕಾರ ಮೈಲಾರಯ್ಯ ಅವರು ಸರ್ವೆ ನಂಬರ್ 462 ರಲ್ಲಿನ 4.37 ಗುಂಟೆ ಮತ್ತು ಸರ್ವೆ ನಂಬರ್ 464ರಲ್ಲಿನ 3.16 ಎಕರೆ ಜಮೀನಿನ ಸಂಪೂರ್ಣ ಮಾಲೀಕರಾಗಿರಾಗಿರುತ್ತಾರಲ್ಲವೇ ಎಂದು ಪ್ರಶ್ನಿಸಿರುವ ಕೃಷ್ಣ ಅವರು ‘ ಮಲ್ಲಯ್ಯ, ದೇವರಾಜು ಅವರಿಗೆ ಯಾವುದೇ ಹಕ್ಕು ಇರುವುದಿಲ್ಲ ಅಲ್ಲವೇ, ಈ ರೀತಿ ಯಾವುದೇ ಹಕ್ಕು ಇಲ್ಲದ ದೇವರಾಜು ಅವರಿಂದ ಖರೀದಿ ಮಾಡಿರುವ ಜಮೀನನ್ನು ಕಾನೂನುಬದ್ಧವಾಗಿ ಖರೀದಿ ಮಾಡಿರುವ ನಿಮ್ಮ ಕುಟುಂಬದ ಸ್ವತ್ತು ಎಂಬಂತೆ ಹೇಳುತ್ತಿರುವುದು ಸುಳ್ಳು ಸಂಗತಿಯಲ್ಲವೇ,’ ಎಂದೂ ಕೇಳಿದ್ದಾರೆ.
ಈ ಹಕ್ಕು ಖುಲಾಸೆ ಪತ್ರದಲ್ಲಿ ದಿವಂಗತ ಜವರಯ್ಯನ ಮಕ್ಕಳು ಎಂದು ತಿಳಿಸಿರುವುದು ಕಂಡು ಬರುತ್ತದೆಯೇ ಹೊರತು ನಿಂಗ ಉರೂಫ್ ಜವರನ ಮಕ್ಕಳು ಎಂಬ ಉಲ್ಲೇಖ ಇರುವುದು ಕಂಡುಬರುವುದಿಲ್ಲ ಅಲ್ಲವೇ ಎಂದು ಕೃಷ್ಣ ಅವರು ಪ್ರಶ್ನಿಸಿರುವುದು ಗೊತ್ತಾಗಿದೆ.
ಇಲ್ಲಿ ಗಮನಿಸಬೇಕಾದ ಮತ್ತೊಂದು ಪ್ರಮುಖ ಅಂಶವೇನಂದರೇ ನೀವು ಬಿಡುಗಡೆ ಮಾಡಿರುವ ಸರ್ವೆ ನಂಬರ್ 464ರಲ್ಲಿ 3.16 ಎಕರೆ ಜಮೀನಿಗೆ ಸಂಬಂಧಿಸಿದ ಆರ್‍ಟಿಸಿಗಳಲ್ಲಿ ನಿಂಗ ಬಿನ್ ಜವರ, ಜೆ ದೇವರಾಜು, ಮಲ್ಲಿಕಾರ್ಜುನ ಸ್ವಾಮಿ, ಪಾರ್ವತಿ ಅವರ ಹೆಸರು ಇರುವುದು ತಿಳಿದು ಬರುತ್ತದೆ. ಆದರೆ ಎಲ್ಲಿಯೂ ಮೈಲಾರಯ್ಯನ ಹೆಸರು ಉಲ್ಲೆಖ ಇರುವುದು ಕಂಡುಬರುವುದಿಲ್ಲ ಎಂಬ ಅಂಶವನ್ನು ಕೃಷ್ಣ ಅವರು ಗಮನಸೆಳೆದಿದ್ದಾರೆ.
‘ನೋಂದಣಿಯಾಗದ ಕೇವಲ ಬಿಳಿ ಹಾಳೆಯಲ್ಲಿ 1993ರಲ್ಲಿ ಬರೆದ ಹೇಳಿಕೆಯನ್ನು ಆಧರಿಸಿ ಜೆ ದೇವರಾಜುಗೆ ಖಾತೆ ವರ್ಗಾವಣೆಯಾಗಿರುವಾಗ 1968ರಲ್ಲಿ ನೋಂದಣಿಯಾಗಿರುವ ಹಕ್ಕು ಖುಲಾಸೆ ಪತ್ರವನ್ನು ಆಧರಿಸಿ ಮೈಲಾರಯ್ಯನ ಹೆಸರನ್ನು ಆರ್‍ಟಿಸಿಗಳಲ್ಲಿ ಏಕೆ ಉಲ್ಲೇಖಿಸಿರುವುದಿಲ್ಲ ಎಂಬುದನ್ನು ದಯಮಾಡಿ ಹೇಳುವಿರಾ,’ ಎಂದು ಪ್ರಶ್ನಿಸಿದ್ದಾರೆ.
1968ರ ಹಕ್ಕು ಖುಲಾಸೆ ಪತ್ರದ ಮೂಲಕ ಸದರಿ ಮಲ್ಲಯ್ಯ ಮತ್ತು ಜೆ ದೇವರಾಜು, ಮೈಲಾರಯ್ಯ ನವರಿಗೆ ಸರ್ವೆ ನಂಬರ್ 462 ಮತ್ತು ಸರ್ವೆ ನಂಬರ್ 464ರಲ್ಲಿನ ಎರಡೂ ಜಮೀನುಗಳ ಹಕ್ಕನ್ನು ಬಿಟ್ಟುಕೊಟ್ಟಿದ್ದರು. ಮತ್ತು ಪ್ರತಿಫಲನವನ್ನು ಪಡೆದಿದ್ದರು.
25 ವರ್ಷಗಳ ನಂತರ ಅಂದರೆ 1993ರಲ್ಲಿ ಈ ಸ್ವತ್ತು ನಿಂಗ ಉರೂಫ್ ಜವರ ಅವರ ಕುಟುಂಬದವರ ಆಸ್ತಿಗಳು ಎಂದು ಮತ್ತು ಈ ಆಸ್ತಿಗಳಲ್ಲಿ ತನಗೆ ಭಾಗ ಬಂದಿಲ್ಲ ಎಂದು ಭಾಗವನ್ನು ಕೇಳಲು ಮತ್ತು ಯಾವುದೇ ಪ್ರತಿಫಲನವನ್ನು ನೀಡದೇ ಕೇವಲ ಹೇಳಿಕೆಯನ್ನು ಪಡೆದುಕೊಳ್ಳಲಾಗಿದೆ. ಜಮೀನಿನ ಮಾಲೀಕತ್ವ ಹೊಂದಲು ಮತ್ತು ಖಾತೆ ಮಾಡಿಸಿಕೊಳ್ಳಲು ಈ ಖಾತೆಯನ್ನು ಆಧರಿಸಿ ಭಾಮೈದ ಬಿ ಎಂ ಮಲ್ಲಿಕಾರ್ಜುನ ಸ್ವಾಮಿ ಅವರಿಗೆ ಮಾರಾಟ ಮಾಡಲು ಕಾನೂನಿನಲ್ಲಿ ಅವಕಾಶವಿದೆಯೇ ಎಂದು ಪ್ರಶ್ನಿಸಿದ್ದಾರೆ.
25 ವರ್ಷಗಳ ಹಿಂದೆ ಸ್ವತಃ ಹಕ್ಕು ಖುಲಾಸೆ ಪತ್ರವನ್ನು ನೋಂದಣಿ ಮಾಡಿಕೊಟ್ಟಿರುವ ಜೆ ದೇವರಾಜು ಅವರು ಅದೇ ರೀತಿ 1993ರಲ್ಲಿ ತಮ್ಮ ಹೆಸರಿಗೆ ಹಕ್ಕು ಖುಲಾಸೆ ಪತ್ರವನ್ನು ನೋಂದಣಿ ಮಾಡಿಸಿಕೊಳ್ಳದೇ ಕೇವಲ ಬಿಳಿ ಹಾಳೆಯಲ್ಲಿ ಹೇಳಿಕೆ ಪಡೆದುಕೊಂಡಿದ್ದು ಏಕೆ ಎಂಬುದನ್ನು ತಿಳಿಸಿಕೊಡುವಿರಾ ಎಂದೂ ಪತ್ರದಲ್ಲಿ ಪ್ರಶ್ನಿಸಿರುವುದು ಗೊತ್ತಾಗಿದೆ.
ಸಿದ್ದರಾಮಯ್ಯ ಅವರು ಬಿಡುಗಡೆ ಮಾಡಿರುವ ವಂಶವೃಕ್ಷವನ್ನೂ ಕೃಷ್ಣ ಅವರು ಪ್ರಶ್ನಿಸಿದ್ದಾರೆ. ನಿಂಗ ಉರೂಫ್ ಜವರ ನಿಧನರಾದ ಸುಮಾರು 25 ವರ್ಷಗಳ ನಂತರ ಅವರ ಹೆಂಡತಿ ನಿಂಗಮ್ಮ ಅವರು ನಿಧನರಾಗಿದ್ದರು. ಹೀಗಾಗಿ ನಿಂಗ ಉರೂಫ್ ಜವರ ಅವರು ನಿಧನರಾದ ನಂತರ ಅವರ ಹೆಂಡತಿ ನಿಂಗಮ್ಮ ಅವರ ಹೆಸರಿಗೆ ಖಾತೆ ವರ್ಗಾವಣೆಯಾಗಿ ಆರ್‍ಟಿಸಿಗಳಲ್ಲಿ ಅವರ ಹೆಸರು ಉಲ್ಲೇಖವಾಗಬೇಕಿತ್ತು. ‘ನಿಂಗಮ್ಮನವರ ಹೆಸರಿಗೆ ಖಾತೆಯಾಗಿರುವ ಆರ್‍ಟಿಸಿಗಳನ್ನು ನೀಡುವಿರಾ ಅಥವಾ ನಿಂಗಮ್ಮನವರ ಹೆಸರಿಗೆ ಖಾತೆಯಾಗದಿರಲು ಕಾರಣವೇನೆಂದು ತಿಳಿಸುವಿರಾ,’ ಎಂದು ಪ್ರಶ್ನಿಸಿದ್ದಾರೆ.
ದಾಖಲೆಗಳ ಪ್ರಕಾರ ಸರ್ವೆ ನಂಬರ್ 462ರಲ್ಲಿನ 4.37 ಎಕರೆ ಜಮೀನನ್ನು ಮೈಲಾರಯ್ಯ, ಪುಟ್ಟಮ್ಮ ಎಂಬುವರಿಗೆ ಮಾರಾಟ ಮಾಡಿದ್ದರೆ ಸರ್ವೆ ನಂಬರ್ 464 ರಲ್ಲಿನ 3.16 ಎಕರೆ ಜಮೀನನ್ನು ಜೆ ದೇವರಾಜು, ನಿಮ್ಮ ಭಾಮೈದ ಬಿ ಎಂ ಮಲ್ಲಿಕಾರ್ಜುನ ಅವರಿಗೆ ಮಾರಾಟ ಮಾಡಿದ್ದಾರೆ. ಆದರೆ ಮಲ್ಲಯ್ಯನವರಿಗೆ ಮತ್ತು ಅವರ ಕುಟುಂಬದವರಿಗೆ ಯಾವ ಜಮೀನನ್ನು ನೀಡಿದ್ದಾರೆ? ಎಂಬ ಮಾಹಿತಿ ಮತ್ತು ದಾಖಲೆಗಳನ್ನು ನೀಡುತ್ತೀರಾ ಎಂದು ಪ್ರಶ್ನಿಸಿದ್ದಾರೆ.
‘ಈ ಅಂಶವನ್ನು ಗಮನಿಸಿದಾಗ ಮಲ್ಲಯ್ಯನವರಿಗೆ ಅವರ ಕುಟುಂಬಕ್ಕೆ ಅನ್ಯಾಯ ಮಾಡಿರುವುದು ಸ್ಪಷ್ಟವಾಗಿ ಕಂಡು ಬರುತ್ತದೆ ಅಥವಾ ನಿಮ್ಮ ಪ್ರಕಾರ ಮಲ್ಲಯ್ಯನವರಿಗೆ ಮತ್ತು ಅವರ ಕುಟುಂಬದವರಿಗೆ ಈ ಎರಡು ಸರ್ವೆ ನಂಬರ್‍ಗಳ ಜಮೀನಿನಲ್ಲಿ ಯಾವುದೇ ಹಕ್ಕು ಇರುವುದಿಲ್ಲವೇ, ‘ ಎಂದು ಪ್ರಶ್ನಿಸಿರುವುದು ಗೊತ್ತಾಗಿದೆ.
1968ರ ಹಕ್ಕು ಖುಲಾಸೆ ಪತ್ರದ ಪ್ರಕಾರ ಮೈಲಾರಯ್ಯನವರೇ ಎರಡು ಸರ್ವೆ ನಂಬರ್‍ಗಳ ಮಾಲೀಕರಾಗಿದ್ದರು. ಆದ್ದರಿಂದ ಅವರು ಮೃತರಾದ ನಂತರ ಅವರ ಹೆಂಡತಿ ಮತ್ತು ಮಕ್ಕಳು ಸಂಪೂರ್ಣ ಹಕ್ಕುದಾರರಾಗುತ್ತಾರೆ. ಮೈಲಾರಯ್ಯನವರಿಗೆ ಜಮುನಾ ಎಂಬ ಹೆಣ್ಣು ಮಗಳಿದ್ದಳು. ಅವರ ಹೆಸರು ವಂಶವೃಕ್ಷದಲ್ಲಿ ಇಲ್ಲವಾದ್ದರಿಂದ ಜಮುನ ಅವರ ವಿಚಾರವನ್ನು ಮುಚ್ಚಿಟ್ಟಿರುವ ವಂಶವೃಕ್ಷ ಸುಳ್ಳು ದಾಖಲೆಯಾಗಿರುತ್ತದೆಯಲ್ಲವೇ ಎಂದು ಪತ್ರದಲ್ಲಿ ಕೇಳಿರುವುದು ತಿಳಿದು ಬಂದಿದೆ.
‘ಅದೇ ರೀತಿ ಜಮುನಾ ಅವರ ಹೆಸರು ಉಲ್ಲೇಖಿಸದ ಹೇಳಿಕೆಯೂ ಸುಳ್ಳು ದಾಖಲೆ ಆಗುತ್ತದೆಯಲ್ಲವೇ, ಜಮುನಾ ಅವರ ಒಪ್ಪಿಗೆಯ ಸಹಿ ಇಲ್ಲದ ಹೇಳಿಕೆಯು ಕಾನೂನು ಪ್ರಕಾರ ಊರ್ಜಿತವಾಗುವುದಿಲ್ಲ ಅಲ್ಲವೇ,’ ಎಂದು ಕೇಳಿರುವುದು ಗೊತ್ತಾಗಿದೆ.
ನೋಂದಣಿ ಕಾಯ್ದೆ ಪ್ರಕಾರ ನೂರು ರೂಪಾಯಿ ಮೌಲ್ಯಕ್ಕಿಂತ ಹೆಚ್ಚಿನ ಬೆಲೆ ಆಸ್ತಿಗೆ ಸಂಬಂಧಿಸಿದ ದಾಖಲೆಯನ್ನು ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕು. ಈ ಪ್ರಕಾರ ಲಕ್ಷಾಂತರ ರುಪಾಯಿ ಮೌಲ್ಯದ ಆಸ್ತಿಗೆ ಸಂಬಂಧಿಸಿದಂತೆ ಯಾವುದೇ ದಾಖಲೆಯನ್ನೂ ನೋಂದಣಿ ಮಾಡಿಕೊಳ್ಳದ ಅಂದರೆ ಮೂಲ ದಾಖಲೆ (ಮದರ್ ಡೀಡ್) ಹೊಂದಿಲ್ಲದ ಜೆ ದೇವರಾಜು ಕೇವಲ ಬಿಳಿ ಹಾಳೆಯ ಮೇಲಿನ ಹೇಳಿಕೆಯನ್ನಾಧರಿಸಿರುವ ಖಾತೆ ವರ್ಗಾವಣೆ ಮಾಡಿಸಿಕೊಂಡು ನಿಮ್ಮ ಭಾಮೈದ ಅವರಿಗೆ ಜಮೀನನ್ನು ಮಾರಾಟ ಮಾಡಿರುವುದು ಕಾನೂನು ಬದ್ಧವೇ ಎಂದು ಪ್ರಶ್ನಿಸಿದ್ದಾರೆ.
1993ರ ಏಪ್ರಿಲ್ 10ರಂದು ಮಲ್ಲಯ್ಯ, ದಿವಂಗತ ಮೈಲಾರಯಯ್ಯನವರ ಹೆಂಡತಿ ಪುಟ್ಟಗೌರಮ್ಮನ ಮಗ ಮಂಜುನಾಥ್ ಸ್ವಾಮಿ ಅವರು ನೀಡಿದ್ದರು ಎಂದು ಸಿದ್ದರಾಮಯ್ಯ ಅವರು ಹೇಳಿಕೆ ನೀಡಿದ್ದರು. ‘ ಆದರೆ ಜೆ ದೇವರಾಜು ಹೆಸರಿಗೆ ಖಾತೆ ವರ್ಗಾವಣೆ ಮಾಡಲು ತಕರಾರು ಇರುವುದಿಲ್ಲ ಎಂದು ಒಪ್ಪಿಗೆ ನೀಡಿರುವುದು ಕಂಡುಬರುತ್ತದೆಯೇ ಹೊರತು ಜಮೀನಿನ ಹಕ್ಕನ್ನು ಬಿಟ್ಟು ಕೊಟ್ಟಿರುವುದು, ಮಾರಾಟ ಮಾಡಲು ಒಪ್ಪಿಗೆ ನೀಡಿರುವುದು ಕಂಡುಬರುವುದಿಲ್ಲ ಅಲ್ಲವೇ,’ ಎಂದು ಪ್ರಶ್ನಿಸಿರುವುದು ತಿಳಿದು ಬಂದಿದೆ.
ಸರ್ವೇ ನಂಬರ್ 462ರಲ್ಲಿನ 4.37 ಎಕರೆಯನ್ನು ಪುಟ್ಟಮ್ಮ ಎಂಬುವರಿಗೆ 1974ರಲ್ಲಿ ಮಾರಾಟ ಮಾಡಿದ್ದರು ಎಂದು ದಾಖಲೆ ಬಿಡುಗಡೆ ಮಾಡಲಾಗಿತ್ತು. ಆದರೆ 1993ರಲ್ಲಿ 0.37 ಗುಂಟೆ ಜಮೀನು ತಮಗೆ ಸೇರಿದ್ದು ಎಂಬಂತೆ ಬರೆದಿರುವ ಹೇಳಿಕೆ ಸುಳ್ಳು ಹೇಳಿಕೆ ಆಗುವುದಿಲ್ಲವೇ ಎಂದು ಕೃಷ್ಣ ಅವರು ಕೇಳಿದ್ದಾರೆ.
ದಾಖಲೆ ಪ್ರಕಾರ ಸರ್ವೆ ನಂಬರ್ 462ರಲ್ಲಿನ 4.37 ಎಕೆರೆಯನ್ನು ಮೈಲಾರಯ್ಯ ಪತ್ನಿ ಪುಟ್ಟಮ್ಮ ಎಂಬುವರಿಗೆ ಮಾರಾಟ ಮಾಡಿದ್ದರು. ಹೀಗಾಗಿ ಮಲ್ಲಯ್ಯನೂ ಕೂಡ ಮಾರಾಟ ಮಾಡಿರುವ ಹಾಗೇ ಹೇಳಿಕೆ ಬರೆದಿರುವುದನ್ನು ಗಮನಿಸಿದಾಗ ಇದೊಂದು ಸುಳ್ಳು ಹೇಳಿಕೆ ಆಗುವುದಿಲ್ಲವೇ, ಖಾತೆಯ ಮಾಲೀಕತ್ವನ್ನು ಮತ್ತು ಹಕ್ಕು ಬಾಧ್ಯತೆಯನ್ನು ಸಾಬೀತುಪಡಿಸುವ ದಾಖಲೆಯಲ್ಲ. ಕಂದಾಯ ಪಾವತಿ ಮಾಡುವ ಪ್ರಕ್ರಿಯೆಗೆ ಸಂಬಂಧಪಟ್ಟ ದಾಖಲೆಯಾಗಿರುತ್ತದೆ.
‘1968ರಲ್ಲಿ ಪ್ರತಿಫಲ ಕೊಟ್ಟಿರುವ ಮೈಲಾರಯ್ಯನವರಿಗೆ ನೋಂದಾಯಿತ ಹಕ್ಕು ಖುಲಾಸೆ ಪತ್ರದ ಮೂಲಕ ಸಂಪೂರ್ಣ ಹಕ್ಕು ನೀಡಿರುವುದರಿಂದ ಸದರಿ ಆಸ್ತಿಯನ್ನು ಮೈಲಾರಯ್ಯನ ವಾರಸುದಾರರು (ಕುಟುಂಬದವರು) ಹಂಚಿಕೆ, ವಿಭಾಗ ಮಾಡಿಕೊಳ್ಳಬಹುದೇ ಹೊರತು, ಈಗಾಗಲೇ ಪ್ರತಿಫಲ ಪಡೆದು ಹಕ್ಕು ಖುಲಾಸೆ ಪತ್ರ ನೋಂದಾಯಿಸಿಕೊಟ್ಟು ಸಂಪೂರ್ಣ ಹಕ್ಕನ್ನು ಕಳೆದುಕೊಂಡಿರುವ ಜೆ ದೇವರಾಜುಗೆ ವಿಭಾಗ ಮಾಡಿಕೊಡಲು ಕಾನೂನಿನಲ್ಲಿ ಅವಕಾಶ ಇರುವುದಿಲ್ಲ ಅಲ್ಲವೇ,’ ಎಂದು ಪ್ರಶ್ನಿಸಿದ್ದಾರೆ.
1996ರ ಆಗಸ್ಟ್ 13ರಂದು ಜೆ ದೇವರಾಜು ಅವರು ನೀಡಿದ್ದಾರೆಂದು ಹೇಳುವ ಅರ್ಜಿಯನ್ನು ಸಿದ್ದರಾಮಯ್ಯ ಅವರು ಬಿಡುಗಡೆ ಮಾಡಿದ್ದರು. ಇದನ್ನು ಗಮನಿಸಿರುವ ಕೃಷ್ಣ ಅವರು ‘ತಂದೆಯ ಹೆಸರನ್ನು ಜವರಯ್ಯ ಎಂದು ನಮೂದಿಸಿರುವುದು ಕಂಡುಬರುತ್ತದೆಯೇ ಹೊರತು ನಿಂಗ ಬಿನ್ ಜವರಯ್ಯ ಎಂದು ನಮೂದಿಸಿರುವುದು ಕಂಡು ಬರುವುದಿಲ್ಲ. ಜೆ ದೇವರಾಜು ಅವರ ಹಲವಾರು ದಾಖಲೆಗಳಲ್ಲಿ ತಂದೆ ಹೆಸರು ಕೇವಲ ಜವರಯ್ಯ ಎಂದಿರುವುದನ್ನು ಗಮನಿಸಿದಾಗ ಅವರು ನಿಂಗ ಉರೂಫ್ ಜವರಯ್ಯನ ಮಗ ಅಲ್ಲ. ಜವರಯ್ಯನ ಮಗ ಎಂಬುದು ತಿಳಿದು ಬರುತ್ತದೆಯಲ್ಲವೇ,’ ಎಂದು ಪ್ರಶ್ನಿಸಿರುವುದು ಗೊತ್ತಾಗಿದೆ.
ಅದೇ ಅರ್ಜಿಯಲ್ಲಿರುವ ದೇವರಾಜು ಅವರ ವಿಳಾಸದ ಬಗ್ಗೆಯೂ ಕೃಷ್ಣ ಅವರು ಅನುಮಾನಗಳನ್ನು ವ್ಯಕ್ತಪಡಿಸಿದ್ದಾರೆ. ‘ಮನೆ ಸಂಖ್ಯೆ 3406, 4ನೇ ಮುಖ್ಯ ರಸ್ತೆ, ಲಷ್ಕರ್ ಮೊಹಲ್ಲಾ, ಮೈಸೂರು ಎಂದು ನಮೂದಿಸಿರುವುದು ಕಂಡು ಬರುತ್ತದೆ. ಈ ವಿಳಾಸದಲ್ಲಿ ದೇವರಾಜು ವಾಸ ಇದ್ದರು ಎಂಬುದಕ್ಕೆ ಪೂರಕವಾದ ಯಾವುದಾದರೂ ಸಾಕ್ಷ್ಯಾಧಾರಗಳನ್ನು ಒದಗಿಸುತ್ತೀರ,’ ಎಂದು ಕೇಳಿದ್ದಾರೆ.
ಸರ್ವೆ ನಂಬರ್ 462ರಲ್ಲಿನ 0.37 ಗುಂಟೆ ಜಮೀನು ತಮಗೆ ಸೇರಿದ್ದು ಎಂದು ತಿಳಿಸಿದ್ದಾರೆ. ಆದರೆ ಇದೇ ದೇವರಾಜು ಅವರು 1968ರಲ್ಲಿ ನೋಂದಾಯಿಸಿಕೊಟ್ಟಿರುವ ಹಕ್ಕು ಖುಲಾಸೆ ಪತ್ರವನ್ನು ಗಮನಿಸಿದಾಗ ಸರ್ವೆ ನಂಬರ್ 462ರಲ್ಲಿನ 4.37 ಎಕರೆ ಜಮೀನಿನ ಸಂಪೂರ್ಣ ಹಕ್ಕನ್ನು ಮೈಲಾರಯ್ಯ ಅವರಿಗೆ ವರ್ಗಾವಣೆ ಮಾಡಿರುತ್ತಾರೆ.
ಮೈಲಾರಯ್ಯ ಅವರು 1974ರಲ್ಲಿ ಸರ್ವೆ ನಂಬರ್ 462ರಲ್ಲಿನ 4.37 ಎಕರೆ ಜಮೀನನ್ನು ವೆಂಕಟಪ್ಪನವವರ ಹೆಂಡತಿ ಪುಟ್ಟಮ್ಮ ಎಂಬುವರಿಗೆ ಮಾರಾಟ ಮಾಡಿ ಕ್ರಯಪತ್ರವನ್ನು ನೋಂದಣಿ ಮಾಡಿಕೊಟ್ಟಿದ್ದರು. ಹೀಗಾಗಿ ಸರ್ವೆ ನಂಬರ್ 462ರಲ್ಲಿ ಜೆ ದೇವರಾಜು ಅವರಿಗೆ ಯಾವುದೇ ಹಕ್ಕು ಇರುವುದಿಲ್ಲ. ‘ಏಕೆಂದರೇ ಸದರಿ ಜಮೀನು 1974ರಲ್ಲೇ ಪುಟ್ಟಮ್ಮನವರ ಜಮೀನಾಗಿರುತ್ತದೆ. ಈ ಕಾರಣದಿಂದಲೇ ರಾಜ್ಯಪತ್ರದಲ್ಲಿ ಸರ್ವೆ ನಂಬರ್ 462ರಲ್ಲಿ ಜಮೀನಿನ ಸಂಬಂಧ ಪುಟ್ಟಮ್ಮನವರ ಹೆಸರು ಉಲ್ಲೇಖವಾಗಿರುತ್ತದೆಯೇ ಹೊರತು ಅರ್ಜಿ ನೀಡಿರುವ ದೇವರಾಜು ಅವರ ಹೆಸರು ಉಲ್ಲೇಖವಾಗಿರುವುದಿಲ್ಲ,’ ಎಂದು ಹೇಳಿದ್ದಾರೆ.
ಸರ್ವೆ ನಂಬರ್ 462ರಲ್ಲಿನ 4.37 ಎಕರೆ ಜಮೀನು ಪುಟ್ಟಮ್ಮನವರ ಹೆಸರಿನಲ್ಲಿರುವಾಗ ಅದರಲ್ಲಿನ 0.37 ಗುಂಟೆ ತನಗೆ ಸೇರಬೇಕು ಎಂದು ಹೇಳಿಕೆ ಪಡೆದಿರುವುದು ಖಾತೆ ಮಾಡಿರುವುದು ಸುಳ್ಳು ದಾಖಲೆಗಳಾಗುವುದಿಲ್ಲವೇ ಎಂದು ಪ್ರಶ್ನಿಸಿರುವ ಕೃಷ್ಣ ಅವರು ‘ಪುಟ್ಟಮ್ಮ ಅವರ ಹೆಸರಿನಲ್ಲಿ ಸರ್ವೇ ನಂಬರ್ 462ರಲ್ಲಿನ 4.37 ಎಕರೆ ಜಮೀನಿಗೆ ಸಂಬಂಧಿಸಿದ ಖಾತೆ (ಆರ್‍ಟಿಸಿ) ಇರುವಾಗ ಮತ್ತು ಅವರು ಯಾವುದೇ ದಾಖಲೆಯನ್ನು ಬರೆದುಕೊಟ್ಟಿಲ್ಲ. ಹೀಗಿರುವಾಗ ಈ ಜಮೀನು ತನಗೆ ಸೇರಿದ್ದು ಭೂ ಸ್ವಾಧೀನನದಿಂದ ಕೈಬಿಡಿ ಎಂಬಂತೆ ನೀಡಿದ ಅರ್ಜಿಯು ಕಾನೂನುಬದ್ಧವೇ ಅಥವಾ ಸುಳ್ಳು ದಾಖಲೆಯೇ,’ ಎಂದು ಪ್ರಶ್ನಿಸಿದ್ದಾರೆ.