ವಾಲ್ಮೀಕಿ ಅಭಿವೃದ್ದಿ ನಿಗಮದ ಅಕ್ರಮ; 6 ತಿಂಗಳ ನಂತರವೂ ನಿಯಮಬಾಹಿರವಾಗಿ ಕಾರ್ಯನಿರ್ವಹಿಸಿದ್ದ ಪದ್ಮನಾಭ್‌

ಬೆಂಗಳೂರು; ಕರ್ನಾಟಕ ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಡಿಜಿಎಂ ಆಗಿದ್ದ ಜೆ ಜೆ ಪದ್ಮನಾಭ ಅವರು 6 ತಿಂಗಳ ನಂತರವೂ ನಿಗಮದಲ್ಲಿ ನಿಯಮಬಾಹಿರವಾಗಿ ವ್ಯವಸ್ಥಾಪಕ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂಬ ಅಂಶ ಇದೀಗ ಬಯಲಾಗಿದೆ.

 

ಪ್ರಭಾರಿ ಕರ್ತವ್ಯ ಅವಧಿ ಪೂರ್ಣಗೊಂಡಿದ್ದರೂ ಸಹ ಅವರನ್ನು ಕರ್ತವ್ಯದಿಂದ ಬಿಡುಗಡೆಗೊಳಿಸಿರಲಿಲ್ಲ. ಬದಲಿಗೆ  ನಿಯಮಬಾಹಿರವಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿಯೇ ನಿಗಮದಲ್ಲಿ 88 ಕೋಟಿ ರು. ಅಕ್ರಮವಾಗಿ ವರ್ಗಾವಣೆ ಆಗಿತ್ತು ಎಂಬ ಸಂಗತಿಯೂ ಇದೀಗ ಮುನ್ನೆಲೆಗೆ ಬಂದಿದೆ.

 

ಜೆ ಜೆ ಪದ್ಮನಾಭ್‌ ಅವರು 6 ತಿಂಗಳ ನಂತರವೂ ನಿಯಮಬಾಹಿರವಾಗಿ ಪ್ರಭಾರಿ ಹುದ್ದೆಯಲ್ಲಿ ಕಾರ್ಯನಿರ್ವಹಿಸಿದ್ದರು ಎಂದು ಉನ್ನತ ಅಧಿಕಾರಿಯೊಬ್ಬರು ‘ದಿ ಫೈಲ್‌’ಗೆ ಖಚಿತಪಡಿಸಿದ್ದಾರೆ.

 

ವಾಲ್ಮೀಕಿ ಪರಿಶಿಷ್ಟ ಅಭಿವೃದ್ದಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳ ವಿರುದ್ಧ ದಾಖಲಾಗಿದ್ದ ಎಫ್‌ಐಆರ್‍‌ಗೆ ತಡೆಯಾಜ್ಞೆ ದೊರೆತಿರುವುದು ಮತ್ತು ಇಡಿ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಆದಿಯಾಗಿ ಇಡೀ ಕಾಂಗ್ರೆಸ್‌ ಸರ್ಕಾರವೇ ಪ್ರತಿಭಟನೆ ನಡೆಸಿದ್ದರ ಬೆನ್ನಲ್ಲೇ ಜೆ ಜೆ ಪದ್ಮನಾಭ ಅವರು 6 ತಿಂಗಳ ನಂತರವೂ ನಿಯಮಬಾಹಿರವಾಗಿ ಕಾರ್ಯನಿರ್ವಹಿಸಿದ್ದರು ಎಂಬ ಸಂಗತಿಯು ಚರ್ಚೆಗೆ ಒಳಗಾಗಿದೆ.

 

ಜೆ ಜೆ ಪದ್ಮನಾಭ ಅವರು 6 ತಿಂಗಳ ನಂತರವೂ ನಿಯಮಬಾಹಿರವಾಗಿ ಕಾರ್ಯನಿರ್ವಹಿಸಿದ್ದರು ಎಂಬುದಕ್ಕೆ ಸಮಾಜ ಕಲ್ಯಾಣ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ‘ದಿ ಫೈಲ್‌’ಗೆ ಖಚಿತಪಡಿಸಿದ್ದಾರೆ.

 

ವಿಶೇಷವೆಂದರೇ ಜೆ ಜೆ ಪದ್ಮನಾಭ್‌ ಅವರನ್ನು ನಿಗಮದಲ್ಲಿ ಪ್ರಭಾರಿಯಾಗಿ ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ನೇಮಿಸಬೇಕು ಎಂದು ಸ್ವತಃ ಸಚಿವ ಬಿ ನಾಗೇಂದ್ರ ಅವರೇ ಸಮಾಜ ಕಲ್ಯಾಣ ಇಲಾಖೆಯ ಉನ್ನತ ಅಧಿಕಾರಿಯೊಬ್ಬರಿಗೆ ಮೌಖಿವಾಗಿ ನಿರ್ದೇಶಿಸಿದ್ದರು. ಆದರೆ ಇದಕ್ಕೆ ಉನ್ನತ ಅಧಿಕಾರಿಯು ಇದಕ್ಕೆ ಅವಕಾಶವಿಲ್ಲ ಎಂದಿದ್ದರು. ನಂತರ ಈ ಸಂಬಂಧ ಟಿಪ್ಪಣಿ ಕಳಿಸಲು ಕೋರಿದ್ದರು. ಆದರೆ ಸಚಿವರು ಟಿಪ್ಪಣಿ ಕಳಿಸಿರಲಿಲ್ಲ, ಬದಲಿಗೆ ಸಚಿವರೇ ನೇರವಾಗಿ ಕಡತವನ್ನೇ ಕಳಿಸಿದ್ದರು ಎಂದು ತಿಳಿದು ಬಂದಿದೆ.

 

ನಂತರ ಈ ಕಡತವನ್ನು ಸಮಾಜ ಕಲ್ಯಾಣ ಇಲಾಖೆ ಸಚಿವ ಡಾ ಹೆಚ್‌ ಸಿ ಮಹದೇವಪ್ಪ ಅವರಿಗೆ ರವಾನಿಸಲಾಗಿತ್ತು. ಜೆ ಜೆ ಪದ್ಮನಾಭ್‌ ಅವರನ್ನು ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ನೇಮಿಸುವ ಸಂಬಂಧ ಸಚಿವ ಡಾ ಹೆಚ್‌ ಸಿ ಮಹದೇವಪ್ಪ ಅವರನ್ನು ನೇಮಿಸಲು ಅನುಮೋದಿಸಿದ್ದರು ಎಂದು ತಿಳಿದು ಬಂದಿದೆ.

 

ಕಾಂಗ್ರೆಸ್‌ ಸರ್ಕಾರವು ಅಧಿಕಾರಕ್ಕೆ ಬಂದ ಕೆಲವೇ ಕೆಲವು ತಿಂಗಳಲ್ಲಿ ಈ ಪ್ರಕ್ರಿಯೆ ಪೂರ್ಣಗೊಂಡಿತ್ತು. ನಿಯಮಗಳ ಪ್ರಕಾರ ನಿಗಮದಲ್ಲಿನ ವ್ಯವಸ್ಥಾಪಕ ನಿರ್ದೇಶಕ ಹುದ್ದೆಯಲ್ಲಿ ತಾತ್ಕಾಲಿಕವಾಗಿ ಗರಿಷ್ಠ 6 ತಿಂಗಳವರೆಗೆ ಕಾರ್ಯನಿರ್ವಹಿಸಲು ಅವಕಾಶವಿದೆ. 6 ತಿಂಗಳ ನಂತರ ಪ್ರಭಾರಿಯಾಗಿ ಮುಂದುವರೆಯಲು ಅವಕಾಶವಿಲ್ಲ.

 

ಈ ಹುದ್ದೆಯಲ್ಲಿಯೇ ಜೆ ಜೆ ಪದ್ಮನಾಭ್‌ ಅವರನ್ನು ವ್ಯವಸ್ಥಾಪಕ ನಿರ್ದೇಶಕರನ್ನಾಗಿ 6 ತಿಂಗಳ ನಂತರವೂ ಮುಂದುವರೆಸಬೇಕಿದ್ದರೇ ಆರ್ಥಿಕ ಇಲಾಖೆಯ ಅನುಮೋದನೆ ಪಡೆಯಬೇಕು. ಆದರೆ ಜೆ ಜೆ ಪದ್ಮನಾಭ್‌ ಅವರನ್ನು ನಿಗಮದಲ್ಲಿ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಯಲ್ಲಿಯೇ ಮುಂದುವರೆಸುವ ಸಂಬಂಧ ಆರ್ಥಿಕ ಇಲಾಖೆಗೆ ಕಡತವನ್ನು ಸಲ್ಲಿಸಿರಲಿಲ್ಲ ಎಂದು ಗೊತ್ತಾಗಿದೆ.

 

ಜೆ ಜೆ ಪದ್ಮನಾಭ್‌ ಅವರು ಬಂಧನಕ್ಕೊಳಗಾದ ನಂತರ ಈ ವ್ಯವಸ್ಥಾಪಕ ನಿರ್ದೇಶಕ ಹುದ್ದೆಗೆ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಡಾ. ಕೆ. ಆರ್. ರಾಜ್ ಕುಮಾರ್ ಅವರನ್ನು ವ್ಯವಸ್ಥಾಪಕ ನಿರ್ದೇಶಕರ ಸ್ಥಾನಕ್ಕೆ ಪ್ರಭಾರಿಯಾಗಿ ನೇಮಿಸಿ ಇತ್ತೀಚೆಗಷ್ಟೇ ಆದೇಶ ಹೊರಡಿಸಿರುವುದನ್ನು ಸ್ಮರಿಸಬಹುದು.

 

ಬಹುಕೋಟಿ ವಂಚನೆ ಪ್ರಕರಣದಲ್ಲಿ ಬಂಧಿತರಾಗಿರುವ ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಜೆ.ಜಿ.ಪದ್ಮನಾಭ್​, ತನ್ನ ಸ್ನೇಹಿತನ ಮನೆಯಲ್ಲಿಟ್ಟಿದ್ದ 3.62 ಕೋಟಿ ರೂಪಾಯಿಯನ್ನು ಎಸ್ಐಟಿ ಅಧಿಕಾರಿಗಳು ವಶಪಡಿಸಿಕೊಂಡಿದ್ದರು.

 

ನೆಲಮಂಗಲದ ಗೋವಿನಹಳ್ಳಿ ಸ್ನೇಹಿತನೊಬ್ಬರ ಮನೆಯಲ್ಲಿ ಇಟ್ಟಿದ್ದ 3.62 ಕೋಟಿ ಹಣವನ್ನ ಅಧಿಕಾರಿಗಳು ವಶಪಡಿಸಿಕೊಂಡಿದ್ದರು. ಪ್ರಕರಣದ ಆರೋಪಿಯಾಗಿರುವ ಹೈದರಾಬಾದ್​ನ ಫಸ್ಟ್ ಫೈನಾನ್ಸ್ ಕ್ರೆಡಿಟ್ ಕೋ ಆಪರೇಟಿವ್ ಬ್ಯಾಂಕ್​ನ ಎಂಡಿ ಸತ್ಯನಾರಾಯಣ ವರ್ಮಾ ಎಂಬುವರು ವಿವಿಧ ಕಂಪನಿಗಳ ಹೆಸರಿನಲ್ಲಿ ನಕಲಿ ದಾಖಲೆ ಸೃಷ್ಟಿಸಿದ್ದರು.

 

ನಕಲಿ ದಾಖಲೆ ಮೂಲಕ ಹಣವನ್ನು ವಿತ್ ಡ್ರಾ ಮಾಡಿಕೊಂಡಿದ್ದರು. ಇದೇ ಹಣವನ್ನು ಆರೋಪಿತರಿಗೆ ಆರ್​ಟಿಜಿಎಸ್, ನೆಟ್ ಬ್ಯಾಂಕಿಂಗ್ ಹಾಗೂ ಗೂಗಲ್ ಪೇ ಮೂಲಕ ಹಣ ಕಳುಹಿಸಿದ್ದರು. ಇದೇ ರೀತಿ ಪದ್ಮನಾಭ ಅವರಿಗೂ ಹಣವನ್ನ ವರ್ಮಾ ಕಳುಹಿಸಿದ್ದರು ಎಂದು ಎಸ್ಐಟಿ ಅಧಿಕಾರಿಗಳು ಕೋರ್ಟ್​ಗೆ ಸಲ್ಲಿಸಿದ್ದ ರಿಮ್ಯಾಂಡ್ ಅರ್ಜಿಯಲ್ಲಿ ನಮೂದಿಸಿರುವುದನ್ನು ಸ್ಮರಿಸಬಹುದು.

Your generous support will help us remain independent and work without fear.

Latest News

Related Posts