ದೇವನೂರಿನಲ್ಲಿ ಬದಲಿ ನಿವೇಶನ; ಮಾಜಿ ಶಾಸಕ ನಾಗೇಂದ್ರ ಹೆಸರು ತಳಕು, ಟಿಪ್ಪಣಿ ಹಾಳೆ ಬಯಲು

ಬೆಂಗಳೂರು;  ಮೈಸೂರು ತಾಲೂಕು ಕಸಬಾ ಹೋಬಳಿ ದೇವನೂರು  ಗ್ರಾಮದ ಸರ್ವೇ ನಂಬರ್‍‌ 81/1ರಲ್ಲಿದ್ದ 1.21 ಎಕರೆ ವಿಸ್ತೀರ್ಣದ  ಜಮೀನಿಗೆ ಪರ್ಯಾವಾಗಿ ಬದಲಿ ನಿವೇಶನ ಹಂಚಿಕೆ ಕೋರಿಕೆಯ ವಿಷಯವನ್ನು ಮೂಡಾ ಸಭೆಯ ವಿಷಯ ಸೂಚಿಯಲ್ಲಿ ಸೇರ್ಪಡೆಗೊಳಿಸಬೇಕು ಎಂದು ಅಂದು ಬಿಜೆಪಿ ಶಾಸಕರಾಗಿದ್ದ ಎಲ್‌ ನಾಗೇಂದ್ರ ಅವರು ಕೋರಿದ್ದರು ಎಂಬ ಸಂಗತಿ ಬಯಲಾಗಿದೆ.

 

ಮೈಸೂರು ತಾಲೂಕು ಕಸಬಾ ಹೋಬಳಿ ದೇವನೂರು ಗ್ರಾಮದ ಸರ್ವೆ ನಂರ್‍‌ 81ರ ಜಮೀನಿಗೆ ಪರ್ಯಾಯ ಜಮೀನನ್ನು ಭೂ ಮಾಲೀಕರಿಗೆ ಮಂಜೂರು ಮಾಡಿರಲಿಲ್ಲ ಎಂದು ದೂರು ಸಲ್ಲಿಕೆಯಾಗಿತ್ತು. ಇದೇ ಪ್ರಕರಣದಲ್ಲಿ  ಮಧ್ಯವರ್ತಿಯೊಬ್ಬರಿಗೆ 30 ಕೋಟಿ ರು ಬೆಲೆಬಾಳುವ ಬದಲಿ ಜಾಗವನ್ನು ಮಂಜೂರು ಮಾಡಲಾಗಿದೆ ಎಂಬ ಅಂಶವು  ತಾಂತ್ರಿಕ ಸಮಿತಿ ನೀಡಿದ್ದ ವರದಿಯಲ್ಲಿ ಉಲ್ಲೇಖವಾಗಿತ್ತು.

 

ಇದರ  ಬೆನ್ನಲ್ಲೇ ಇದೇ ಪ್ರಕರಣದಲ್ಲಿ  ಬದಲಿ ನಿವೇಶನ ಹಂಚಿಕೆ ಮಾಡುವ ಕುರಿತಂತೆ ಪ್ರಾಧಿಕಾರದ ಸಭೆಯ ವಿಷಯ ಸೂಚಿಯಲ್ಲಿ ಸೇರ್ಪಡೆಗೊಳಿಸಬೇಕು ಎಂದು  ಬಿಜೆಪಿ ಮಾಜಿ ಶಾಸಕ ಎಲ್‌ ನಾಗೇಂದ್ರ ಅವರು ಕೋರಿದ್ದರು  ಎಂಬ ಟಿಪ್ಪಣಿ ಹಾಳೆಯು ಬಯಲಾಗಿದೆ.

 

ಟಿಪ್ಪಣಿ ಹಾಳೆಯಲ್ಲೇನಿದೆ?

 

ಮೈಸೂರು ತಾಲೂಕು ಕಸಬಾ ಹೋಬಳಿ ದೇವನೂರು ಗ್ರಾಮದ ಸರ್ವೆ ನಂಬರ್‍‌ 81/1ರ 1.21 ಎಕರೆ ಜಮೀನನ್ನು ಪ್ರಾಧಿಕಾರವು ಬಡಾವಣೆ ನಿರ್ಮಿಸಿ ನಿವೇಶನ ಹಂಚಿಕೆ ಮಾಡಿರುವುದರಿಂದ ಪರ್ಯಾಯವಾಗಿ ಶೇ. 50ರಷ್ಟು ಬದಲಿ ಜಾಗವನ್ನು ಪರಿಹಾರವಾಗಿ ಕೋರಿ ಪ್ರಾಧಿಕಾರದ ಸಭೆಯಲ್ಲಿ ಈ ಪ್ರಸ್ತಾವನೆಯನ್ನು ವಿಷಯ ಸೂಚಿಯಲ್ಲಿ ಸೇರ್ಪಡೆಗೊಳಿಸಬೇಕು ಎಂದು ಕೋರಿರುತ್ತಾರೆ.

 

ಈ ಸಂಬಂಧ ದೇವನೂರು ಗ್ರಾಮದ ಸರ್ವೆನಂಬರ್‍‌ 81/1ರ 1.21 ಎಕರೆ ಜಮೀನಿನ ವಾಸ್ತವ ಸ್ಥಿತಿಗತಿಗಳ ಬಗ್ಗೆ ಭೂ ಮಾಪಕರು ಮತ್ತು ತಾಂತ್ರಿಕ ಶಾಖೆಯಿಂದ ಜರೂರಾಗಿ ವರದಿ ನೀಡುವಂತೆ ಪತ್ರ ಕಳಿಸಬಹುದು ಎಂದು ಟಿಪ್ಪಣಿ ಹಾಳೆಯಲ್ಲಿ ಉಲ್ಲೇಖಿಸಿರುವುದು ಗೊತ್ತಾಗಿದೆ.

 

ಅದೇ ರೀತಿ ದೇವನೂರು ಗ್ರಾಮದ ಸರ್ವೆ ನಂಬರ್‍‌ 81/1ರಲ್ಲಿನ 1 ಎಕರೆ 22 ಗುಮಟೆ ಮತ್ತು 81/2ರಲ್ಲಿನ 2.22 ಗುಂಟೆ ಜಮೀನಿಗೆ ಸಂಬಂಧಿಸಿದಂತೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಲಾಗಿದೆ.  ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ಬದಲಿ ನಿವೇಶನ ಪಡೆಯುವ ಸಂಚು ರೂಪಿಸಲಾಗಿದೆ. ಈ ಬಗ್ಗೆ  ವಿಚಾರಣೆ ನಡೆಸಿ ದಾಖಲಾತಿಗಳನ್ನು ಪರಿಶೀಲನೆ ಮಾಡಬೇಕು.  ತಪ್ಪಿತಸ್ಥರ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು ಎಂಬ ದೂರು ಸಹ ಸಲ್ಲಿಕೆಯಾಗಿತ್ತು.

 

ಈ ದೂರಿನ ಪ್ರತಿಯೂ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ದೂರಿನಲ್ಲೇನಿದೆ?

 

ದೇವನೂರು ಗ್ರಾಮಕ್ಕೆ ಸೇರಿದ ಸರ್ವೆ ನಂಬರ್‍‌ 81/1ರಲ್ಲಿನ 1.22ಗುಂಟೆ ಮತ್ತು 81/2ರಲ್ಲಿನ 2.22 ಗುಂಟೆ ಜಮೀನು ಬಸವಯ್ಯ ಎಂಬುವರಿಗೆ ಸೇರಿದ ಜಮೀನಾಗಿದೆ. ಈ ಜಮೀನಿನಲ್ಲಿ ಈಗಾಗಲೇ ಹಲವರು ಮನೆ ನಿರ್ಮಾಣ ಮಾಡಿಕೊಂಡಿದ್ದಾರೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ ರಸ್ತೆ, ಉದ್ಯಾನಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ ಅಧಿಕೃತವಾಗಿ ಸದರಿ ಜಮೀನನ್ನು ವಶಪಡಿಸಿಕೊಂಡು ನಿರ್ಮಾಣ ಮಾಡದೇ ಅನಧಿಕೃತವಾಗಿ (ಕೆಸರೆ 3ನೇ ಹಂತ) ನಿರ್ಮಾಣ ಮಾಡಿರುವುದರಿಂದ ಆರ್‍‌ಟಿಸಿಯಲ್ಲಿ ಬಸವಯ್ಯ ಅವರ ಹೆಸರೇ ಉಲ್ಲೇಖವಿದೆ.

 

ಬಸವಯ್ಯನವರ ವಾರಸುದಾರರಾದ ಪ್ರನಸ್ನ, ಬಿ ಶಂಕರ್‍‌, ಎಸ್‌ ಪರಮೇಶ, ಶಿವಲಿಂಗಸ್ವಾಮಿ, ಪಿ ನಾಗೇಂದ್ರ, ಪಿ ಮಹಾದೇವರು ಅವರು ಸಂಚು ರೂಪಿಸಿ ಸದರಿ ಜಮೀನಿನಲ್ಲಿ ಭಾಗ ಬರಬೇಕು ಎಂದು ನ್ಯಾಯಾಲಯದಲ್ಲಿ ಅಸಲು ದಾವೆ (ಸಂಖ್ಯೆ 696/2011) ದಾಖಲಿಸಿದ್ದರು.

 

ಈ  ದಾವೆಯಲ್ಲಿ ನ್ಯಾಯಾಲಯ ಮಾಡಿರುವ ಆದೇಶದಂತೆ ಸದರಿ ಜಮೀನುಗಳ ಅಳತೆಯನ್ನು ಮಾಡಲು ಸ್ಥಳಕ್ಕೆ ಹೋದ ಭೂಮಾಪಕರು ಸದರಿ ಜಮೀನಿನಲ್ಲಿ ಈಗಾಗಲೇ ಮನೆಗಳನ್ನು, ರಸ್ತೆಗಳನ್ನು, ಪಾರ್ಕ್‌ಗಳನ್ನು ನಿರ್ಮಾಣ ಮಾಡಿರುವುದನ್ನು ಗಮನಿಸಿದ್ದರು.  ಬಾಕಿ 4.03 ಎಕರೆ ವಿಸ್ತೀರ್ಣದಲ್ಲಿ  ಈಗಾಗಲೇ ಸಿಐಟಿಬಿ (ಮುಡಾ)ಯು ನಿವೇಶನ, ಪಾರ್ಕ್‌, ಬಡಾವಣೆ ನಿರ್ಮಾಣವಾಗಿದ್ದು ಎಂಬಂತೆ ವರದಿ ನೀಡಿದ್ದರು.

ಇದನ್ನು ಅಧರಿಸಿ ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಈ ವಿಚಾರವನ್ನು 2019ರ ಅಕ್ಟೋಬರ್‍‌ 9ರಂದು (ನಮಾಯೋಕ/ಕೋ.ಕಮೀ/22/2019-20) ಪತ್ರದ ಮೂಲಕ ನ್ಯಾಯಾಲಯಕ್ಕೆ ತಿಳಿಸಿದ್ದಾರೆ ಎಂದು ನರಸಿಂಹರಾಜ ಪೊಲೀಸ್‌ ಠಾಣೆಯ ಪೊಲೀಸ್‌ ನಿರೀಕ್ಷಕರಿಗೆ ಮನವಿ ಸಲ್ಲಿಸಿದ್ದರು ಎಂಬುದು ದೂರಿನಿಂದ  ಗೊತ್ತಾಗಿದೆ.

 

ಪ್ರಕರಣದ ಹಿನ್ನೆಲೆ

 

ಮೈಸೂರು ತಾಲೂಕು ಕಸಬಾ ಹೋಬಳಿ ದೇವನೂರು ಗ್ರಾಮದ ಸರ್ವೆ ನಂರ್‍‌ 81ರ ಜಮೀನಿಗೆ ಪರ್ಯಾಯ ಜಮೀನನ್ನು ಭೂ ಮಾಲೀಕರಿಗೆ ಮಂಜೂರು ಮಾಡಿರಲಿಲ್ಲ. ಬದಲಿಗೆ ಮಧ್ಯವರ್ತಿ ಮಹೇಂದ್ರ ಎಂಬುವರು ಕೃಷಿ ಜಮೀನು ಎಂದು ಅಕ್ರಮವಾಗಿ ಸುಳ್ಳು ದಾಖಲೆ ಸೃಷ್ಟಿ ಮಾಡಿಕೊಂಡಿದ್ದರು. ಇವರಿಗೆ 30 ಕೋಟಿ ಬೆಲೆ ಬಾಳುವ ನಿವೇಶನ (ಬದಲಿ ಜಾಗ) ವನ್ನು 50;50ರ ಅನುಪಾತದಲ್ಲಿ ಮಂಜೂರು ಮಾಡಲಾಗಿದೆ ಎಂದು ಹಾಲನಹಳ್ಳಿಯ ಪುಟ್ಟಸ್ವಾಮಿ ಎಂಬುವರು ದೂರು ದಾಖಲಿಸಿದ್ದರು.

 

ಅಲ್ಲದೇ ಪ್ರಾಧಿಕಾರದ ಆಯುಕ್ತರು ನಿಯಮ 16(1)ರ ಅವಕಾಶಗಳ ಉಲ್ಲಂಘಿಸಿ ಬದಲಿ ನಿವೇಶನವನ್ನು ಮಂಜೂರು ಮಾಡುವ ಬಗ್ಗೆ ಕ್ರಮವಹಿಸಿದ್ದರು. ನಿಯಮ 16(1)ರಂತೆ ಒಮ್ಮೆ ಪ್ರಾಧಿಕಾರದಿಂದ ಹಂಚಿಕೆಯಾದ ನಿವೇಶನಗಳನ್ನು ಸ್ವಾಧೀನಕ್ಕೆ ಪಡೆಯಲು ಸಾಧ್ಯವಾಗದ ಸಂದರ್ಭಗಳಲ್ಲಿ ಮಾತ್ರ ಬದಲಿ ನಿವೇಶನ ಮಂಜೂರು ಮಾಡಲು ಅವಕಾಶವಿದೆ.

ಭೂಮಾಲೀಕರಿಗಿಲ್ಲ ಪರ್ಯಾಯ ಜಮೀನು; ಮಧ್ಯವರ್ತಿ ಪಾಲಾದ 30 ಕೋಟಿ ಬೆಲೆಬಾಳುವ ನಿವೇಶನ

ಆದರೆ ಈ ಪ್ರಕರಣದಲ್ಲಿ ಪ್ರಾಧಿಕಾರದ ಆಯುಕ್ತರು ಮತ್ತು ಅಧಿಕಾರಿ, ಸಿಬ್ಬಂದಿಗಳು ನಿಯಮಗಳನ್ನು ಉಲ್ಲಂಘಿಸಿ ಕ್ರಮವಹಿಸಿದ್ದಾರೆ ಎಂದು ದೂರಿನಲ್ಲಿ ವಿವರಿಸಿದ್ದರು.

ಬದಲಿ ನಿವೇಶನ ಹಂಚಿಕೆ ಹಿಂದಿನ ಕರಾಮತ್ತು ಬಯಲು; ನಕ್ಷೆಯಿಲ್ಲ, ಭೂ ಪರಿಹಾರದ ವಿವರಗಳೂ ಇಲ್ಲ

ತಾರ ಎಂಬುವರು ಇದೇ ಸರ್ವೆ ನಂಬರ್‍‌ 81ರ 1 ಎಕರೆ 21 ಗುಂಟೆ ಜಮೀನಿಗೆ ಬದಲಿ ಜಾಗವನ್ನು ನೀಡುವ ಬಗ್ಗೆ 2020ರ ನವೆಂಬರ್‍‌ 10ರಂದು ಅರ್ಜಿ ಸಲ್ಲಿಸಿದ್ದರು. ತದನಂತರ ವಿ ವೆಂಕಟೇಶ್‌ ಎಂಬುವರು ಇದೇ ಜಮೀನನ್ನು 2021ರ ಮಾರ್ಚ್‌ 1ರಂದು ಕ್ರಯದ ಮೂಲಕ ತಮ್ಮ ಹೆಸರಿಗೆ ನೋಂದಣಿ ಮಾಡಿಸಿಕೊಂಡು 2021ರ ಏಪ್ರಿಲ್‌ 4ರಂದು ಬದಲಿ ಜಾಗವನ್ನು ನೀಡಲು ಕೋರಿದ್ದರು.

ನಿಯಮ ಮೀರಿ 250 ಕೋಟಿ ನಿಶ್ಚಿತ ಠೇವಣಿ; ಮೂಡಾ ಅಕ್ರಮ ಪತ್ತೆ ಹಚ್ಚಿದ ತಾಂತ್ರಿಕ ಸಮಿತಿ

ಕಡತದ ಟಿಪ್ಪಣಿಯ ಕಂಡಿಕೆ (20)ರಿಂದ 22ರವರೆಗೆ ವೆಂಕಟೇಶ್‌ ಅವರ ಮನವಿಯಂತೆ ಈ ಜಮೀನನ್ನು ಭೂ ಸ್ವಾಧೀನಪಡಿಸಿಕೊಳ್ಳದೇ ಇರುವುದರಿಂದ ಈಗಾಗಲೇ ಬಡಾವಣೆ ನಿರ್ಮಿಸಿರುವುದರಿಂದ ಸರ್ಕಾರದ ಆದೇಶ (ಸಂಖ್ಯೆ UDD 08 55P 2014 2015ರ ಫೆ.11) ದಂತೆ ಬದಲಿ ಜಾಗ ನೀಡುವ ಬಗ್ಗೆ ಅಧಿಕಾರಿಗಳು ಪ್ರಾಧಿಕಾರದ ಸಭೆಗೆ ಮಂಡಿಸಲು ಟಿಪ್ಪಣಿ ಸಿದ್ಧಪಡಿಸಿದ್ದರು. ಈ ಸಂಬಂಧ ಪ್ರಾಧಿಕಾರದ ಆಯುಕ್ತರು ಕಂಡಿಕೆ 23ರಲ್ಲಿ ಆದೇಶ ಹೊರಡಿಸಿದ್ದರು.

 

‘ಬದಲಿ ಜಾಗ ನೀಡಲು ಪ್ರಾಧಿಕಾರವು ಉಪಯೋಗಿಸಿಕೊಳ್ಳಲಾಗಿರುವ ಜಾಗದ ಪರಿತ್ಯಜನವನ್ನು ಭೂ ಮಾಲೀಕರಿಂದ ಪಡೆದು 16607 ಚ ಅಡಿ ವಿಸ್ತೀರ್ಣದ ಬದಲಿ ಜಾಗ ನೀಡುವ ಬಗ್ಗೆ ಅಧಿಕೃತ ಜ್ಞಾಪನ ಪತ್ರದೊಂದಿಗೆ ಮಂಡಿಸಿ,’ ಎಂದು ಆಯುಕ್ತರು ಆದೇಶಿಸಿದ್ದರು.

848 ನಿವೇಶನ ಬಿಡುಗಡೆ; ಮೂಡಾದಿಂದ ಸಾಂವಿಧಾನಿಕ ಸಂಸ್ಥೆಗಳ ಅಧಿಕಾರ ವ್ಯಾಪ್ತಿ ಅತಿಕ್ರಮಣ

ಆಯುಕ್ತರ ಈ ಆದೇಶದಂತೆ 2021ರ ಜೂನ್‌ 17ರಂದು ಪರಿತ್ಯಜನ ಪತ್ರವನ್ನು ನೋಂದಣಿ ಮಾಡಿಸಲಾಗಿತ್ತು. ಪ್ರಶ್ನಿತ ಜಮೀನನ್ನು ಭೂ ಸ್ವಾಧೀನಪಡಿಸದೇ ಪ್ರಾಧಿಕಾರವು ಬಡಾವಣೆಗೆ ಉಪಯೋಗಿಸಿಕೊಂಡಿದ್ದು ಪ್ರಸ್ತುತ ಭೂ ಸ್ವಾಧೀನ ಕಾಯ್ದೆಯಂತೆ ಪ್ರೋತ್ಸಾಹಕ ನಿವೇಶನಗಳನ್ನು ನೀಡುವ ಬಗ್ಗೆ ಪ್ರಾಧಿಕಾರವು ನಿರ್ಣಯ ಕೈಗೊಂಡಿದೆ ಎಂದು ಆದೇಶದಲ್ಲಿ ವಿವರಿಸಲಾಗಿತ್ತು.

 

2020ರ ನವೆಂಬರ್‍‌ 6 ಮತ್ತು 2020ರ ನವೆಂಬರ್‍‌ 20ರಂತೆ ಪ್ರಸ್ತಾವಿತ ಜಮೀನುಗಳನ್ನು ಈಗಾಗಲೇ ಪರಿತ್ಯಜನ ಪತ್ರದ ಮೂಲಕ ಪ್ರಾಧಿಕಾರಕ್ಕೆ ನೋಂದಾವಣೆ ಮಾಡಿಕೊಂಡಿದೆ. ಇದಾದ ನಂತರ ಅಧಿಕೃತ ಜ್ಞಾಪನ (ಸಂಖ್ಯೆ; ಎಲ್‌ ಎ ಕ್ಯೂ (3) ಸಿಆರ್‍‌ 64/2020-21) 2021ರ ಜೂನ್‌ 17ರಂದು ಸರ್ಕಾರದ ಆದೇಶ ಸಂಖ್ಯೆ (UDD 08 55P 2014 2015ರ ಫೆ.11ರ ಅನ್ವಯ ಶೇ.50;50 ಅನುಪಾತದಲ್ಲಿ ಭೂ ಮಾಲೀಕರಿಗೆ 16607 ಚ ಅಡಿ ಅಳತೆ ನಿವೇಶನವನ್ನು ಪರಿಹಾರಾತ್ಮಕವಾಗಿ ಮಂಜೂರು ಮಾಡಿ 2021ರ ಜೂನ್‌ 18ರಂದು ಆದೇಶ ಹೊರಡಿಸಲಾಗಿತ್ತು ಎಂಬುದು ತಾಂತ್ರಿಕ ಸಮಿತಿ ವರದಿಯಿಂದ ತಿಳಿದು ಬಂದಿದೆ.

 

ತಾಂತ್ರಿಕ ಸಮಿತಿಯ ಅಭಿಪ್ರಾಯ

 

ಪ್ರಾಧಿಕಾರದ ಆಯುಕ್ತರು ಬದಲಿ ನಿವೇಶನವನ್ನು ಮಂಜೂರು ಮಾಡುವ ಬಗ್ಗೆ ಕ್ರಮವಹಿಸಿರುವುದು ನಿಯಮ 16(1)ರ ಅವಕಾಶಗಳ ಉಲ್ಲಂಘನೆಯಾಗಿದೆ. ಈ ನಿಯಮದಂತೆ ಒಮ್ಮೆ ಪ್ರಾಧಿಕಾರದಿಮದ ಹಂಚಿಕೆಯಾದ ನಿವೇಶನಗಳನ್ನು ಸ್ವಾಧೀನಕ್ಕೆ ಪಡೆಯಲು ಸಾಧ್ಯವಾಗದ ಸಂದರ್ಭಗಳಲ್ಲಿ ಮಾತ್ರ ಬದಲಿ ನಿವೇಶನ ಮಂಜೂರು ಮಾಡಲು ಅವಕಾಶವಿದೆ. ಆದರೆ ಈ ಪ್ರಕರಣದಲ್ಲಿ ಪ್ರಾಧಿಕಾರದ ಆಯುಕ್ತರು ಮತ್ತು ಅಧಿಕಾರಿ, ಸಿಬ್ಬಂದಿಗಳು ನಿಯಮಗಳನ್ನು ಉಲ್ಲಂಘಿಸಿ ಕ್ರಮವಹಿಸಿರುವುದು ಕಂಡು ಬಂದಿರುತ್ತದೆ ಎಂದು ಸಮಿತಿಯು ವರದಿಯಲ್ಲಿ ಅಭಿಪ್ರಾಯಿಸಿದೆ.

 

ಹಾಗೆಯೇ ಈ ಹಿಂದೆ ಇದ್ದ ಅನುಪಾತವನ್ನು ಬದಲಿಸಿ ನಿಯಮ (3)ರ (ಬಿ)ರಲ್ಲಿ ಶೇ. 40ರ ಬದಲಾಗಿ ಶೇ.50ನ್ನು ಅಳವಡಿಸಿ ತಿದ್ದುಪಡಿಯಾಗಿದ್ದು ಸದರಿ ಅಧಿಸೂಚನೆಯನ್ನು ಉಲ್ಲೇಖಿಸಿ ಪ್ರಾಧಿಕಾರವು ಶೇ 50;50 ಬದಲಿ ನಿವೇಶನ ಮಂಜೂರಾತಿ ಎಂದು ಟಿಪ್ಪಣಿ ಮತ್ತು ಆದೇಶಗಳಲ್ಲಿ ಉಲ್ಲೇಖಿಸಿ ಕ್ರಮವಹಿಸಿರುವುದು ಕಂಡು ಬಂದಿದೆ.

 

‘ಆದರೆ ಪ್ರಶ್ನಿತ ಪ್ರಕರಣವನ್ನು ಗಮನಿಸಲಾಗಿ ಈ ನಿಯಮಗಳು ಜಾರಿಗೆ ಬರುವ ಪೂರ್ವದಲ್ಲಿಯೇ ಜಮೀನುಗಳನ್ನು ಭೂ ಸ್ವಾಧೀನ ಕಾಯ್ದೆ 1894ರಡಿ ಭೂಸ್ವಾಧೀನಪಡಿಸಿಕೊಂಡು/ ಭೂ ಸ್ವಾಧೀನಪಡಿಸಿಕೊಳ್ಳದೇ ಅನುಷ್ಠಾನಗೊಳಿಸಿದ ವಸತಿ ಬಡಾವಣೆಗಳಿಗೆ ಅನ್ವಯಿಸಿ ಬದಲಿ ನಿವೇಶನಗಳನ್ನು ನಿಯಮಬಾಹಿರವಾಗಿ ಹಂಚಿಕೆ ಮಾಡಲು ಕ್ರಮ ಕೈಗೊಂಡಿರುವುದು ಕಂಡು ಬಂದಿರುತ್ತದೆ,’ ಎಂದು ವರದಿಯಲ್ಲಿ ಹೇಳಿತ್ತು.

 

ಪ್ರಶ್ನಿತ ಜಮೀನಿಗೆ ಸಂಬಂಧಿಸಿದಂತೆ 2020ರ ನವೆಂಬರ್‍‌ 6 ಮತ್ತು ನವೆಂಬರ್‍‌ 20ರಂದು ಸಭೆ ನಡೆದಿತ್ತು. ಈ ಸಭೆಯ ವಿಷಯ ಸಂಖ್ಯೆ 5ರಲ್ಲಿ ಕೈಗೊಳ್ಳಲಾದ ನಿರ್ಣಯದ ಅಂಶ 1 ಮತ್ತು 2ರ ವಿವರಗಳನ್ನು ಕೂಲಂಕುಷವಾಗಿ ಪರಿಶೀಲಿಸಿಲ್ಲ. ಪ್ರಾಧಿಕಾರದ ಸಭೆ ಗಮನಕ್ಕೆ ತರದೇ ಆಯುಕ್ತರು ತಮ್ಮ ಹಂತದಲ್ಲಿಯೇ ನೇರವಾಗಿ ತೀರ್ಮಾನ ಕೈಗೊಂಡು ನಿವೇಶನ ಹಂಚಿಕೆ ಮಾಡಿರುವುದು ನಿಯಮಬಾಹಿರವಾಗಿರುತ್ತದೆ ಎಂದೂ ತಾಂತ್ರಿಕ ಸಮಿತಿಯು ವರದಿಯಲ್ಲಿ ವಿವರಿಸಿರುವುದನನ್ನು ಸ್ಮರಿಸಬಹುದು.

the fil favicon

SUPPORT THE FILE

Latest News

Related Posts