ಬೇನಾಮಿ ಸ್ವಸಹಾಯ ಸಂಘಗಳಿಗೂ ಲಕ್ಷಾಂತರ ರು ಬಿಡುಗಡೆ; ‘ಐರಾವತ’ದಲ್ಲೂ ‘ಸಮೃದ್ಧಿ’

ಬೆಂಗಳೂರು; ಬೇನಾಮಿ ಖಾತೆಗಳಿಗೆ ಅಕ್ರಮವಾಗಿ ಲಕ್ಷಾಂತರ ರುಪಾಯಿ ವರ್ಗಾವಣೆ, ಗಂಗಾ ಕಲ್ಯಾಣ ಯೋಜನೆಯಲ್ಲಿಯೂ ನಿಯಮಗಳ ಉಲ್ಲಂಘಿಸಿ ಫಲಾನುಭವಿಗಳ ಆಯ್ಕೆ ನಡೆದಿರುವ ಪ್ರಕರಣದ ಬೆನ್ನಲ್ಲೇ ಇದೀಗ ಮೈಕ್ರೋ ಕ್ರೆಡಿಟ್‌, ಸಮೃದ್ಧಿ, ಐರಾವತ ಯೋಜನೆಯಲ್ಲಿಯೂ ಅವ್ಯವಹಾರ, ಅಧಿಕಾರ ದುರುಪಯೋಗ ನಡೆದಿದೆ. ವಾಹನ ಚಾಲನೆ ಪರವಾನಿಗೆಯ ಬ್ಯಾಡ್ಜ್‌ ಹೊಂದಿರದೇ ಇದ್ದವರಿಗೂ ಲಕ್ಷಾಂತರ ರುಪಾಯಿಯ ಸಹಾಯಧನವನ್ನು ಐರಾವತ ಯೋಜನೆಯಡಿ ವಿತರಿಸಿರುವುದನ್ನು ಜಾಗೃತ ಕೋಶವು ಪತ್ತೆ ಹಚ್ಚಿದೆ.

 

ಈ ಸಂಬಂಧ ತನಿಖೆ ನಡೆಸಿರುವ ಜಾಗೃತ ಕೋಶದ ಅಧಿಕಾರಿಗಳು ಸರ್ಕಾರಕ್ಕೆ ವರದಿಯನ್ನು ಸಲ್ಲಿಸಿದ್ದಾರೆ. ವರದಿಯ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ನಿಯಮಗಳ ಉಲ್ಲಂಘನೆ ಮತ್ತು ಅಧಿಕಾರ ದುರುಪಯೋಗದಿಂದಾಗಿ ಬಿ ಆರ್‍‌ ಅಂಬೇಡ್ಕರ್ ಅಭಿವೃದ್ಧಿ ನಿಗಮಕ್ಕೆ ಆರ್ಥಿಕ ನಷ್ಟವುಂಟಾಗಿರುವುದು ವರದಿಯಿಂದ ಗೊತ್ತಾಗಿದೆ. ಜಾಗೃತ ಕೋಶದ ಅಧಿಕಾರಿಗಳು ಹಲವು ಪ್ರಕರಣಗಳನ್ನು ಬಯಲಿಗೆಳೆದಿದ್ದಾರೆ.

 

ಪ್ರಕರಣ 1

 

ಕೆ ಆರ್‍‌ ನಗರ ತಾಲೂಕು ಅಡಗನಹಳ್ಳಿಯ ಶ್ರೀ ಶಕ್ತಿ ಚೆಲುವರಾಯಸ್ವಾಮಿ ಸ್ವ ಸಹಾಯ ಸಂಘಕ್ಕೆ (ಚೆಕ್‌ ಸಂಖ್ಯೆ 473190)( ದಿನಾಂಕ 07.04.2021) 12,500 ರು.ಗಳನ್ನು ಅಧಿಕಾರ ದುರುಪಯೋಗಪಡಿಸಿಕೊಂಡು ಬಿಡುಗಡೆಗೊಳಿಸಲಾಗಿದೆ. ಇದು ನಿಗಮಕ್ಕೆ ಆರ್ಥಿಕವಾಗಿ ನಷ್ವವುಂಟಾಗಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.

 

ಪ್ರಕರಣ 2

 

ಹುಣಸೂರು ತಾಲೂಕಿನ ಬನ್ನಮ್ಮ ಸ್ತ್ರೀಶಕ್ತಿ ಸ್ವ ಸಹಾಯ ಸಂಘದ ಸದಸ್ಯರಾದ ಶಶಿ ಎಂಬುವರಿಗೆ 15,000 ರು ಬದಲಾಗಿ 3,00,000 ರು. ಬಿಡುಗಡೆ ಮಾಡಲಾಗಿದೆ. ವೈಯಕ್ತಿಕ ಖಾತೆಗೆ ನಿಗಮದ ಖಾತೆಯಿಂದ ಜಮಾ ಮಾಡಲಾಗಿದೆ. ಒಟ್ಟು ಹೆಚ್ಚುವರಿಯಾಗಿ 2,85,000 ರು.ಗಳನ್ನು ಬಿಡುಗಡೆಗೊಳಿಸಿ ನಿಗಮಕ್ಕೆ ಆರ್ಥಿಕ ನಷ್ಟವನ್ನುಂಟು ಮಾಡಲಾಗಿದೆ. ಈ ಪ್ರಕರಣದಲ್ಲಿ ಅಧಿಕಾರಿಗಳು ತಮ್ಮ ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಉಲ್ಲೇಖಿಸಿದೆ.

 

ಪ್ರಕರಣ 3

 

ಇಲವಾಲ ಹೋಬಳಿಯ ಸೊಮ್ಮೇನಹಳ್ಳಿ ಗ್ರಾಮದ ವರಮಹಾಲಕ್ಷ್ಮಿ ಸ್ವ ಸಹಾಯ ಸಂಘಕ್ಕೆ ನೋಂದಣಿ ಪ್ರಮಾಣ ಪತ್ರ ಇಲ್ಲ. ಆದರೂ ಸಹ ಬೇನಾಮಿ ಸಂಘದ ಖಾತೆಗೆ ಮೊದಲನೇ ಕಂತಿನ ಮೊತ್ತ 1,25,000 ರು( ಚೆಕ್‌ ಸಂಖ್ಯೆ 473197-14.07.2021) ಮತ್ತು ಮತ್ತು ಎರಡನೇ ಕಂತಿನಲ್ಲಿ 1,25,000 ರು.ಗಳನ್ನು (ಚೆಕ್‌ ಸಂಖ್ಯೆ 322902 ದಿನಾಂಖ 13.10.2021) ಹಣ ವರ್ಗಾವಣೆ ಮಾಡಿರುವುದನ್ನು ಜಾಗೃತ ಕೋಶದ ಅಧಿಕಾರಿಗಳು ಬಯಲಿಗೆಳೆದಿರುವುದು ವರದಿಯಿಂದ ಗೊತ್ತಾಗಿದೆ.

 

ಪ್ರಕರಣ 4

 

ಹುಣಸೂರು ತಾಲೂಕಿನ ಜುಹರಗನಹಳ್ಳಿ ಗ್ರಾಮದ ಪುರುಷೋತ್ತಮ ಎಂಬುವರಿಗೆ ಆದಿ ಜಾಂಬವ ಅಭಿವೃದ್ಧಿ ನಿಗಮದ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾಗಿದ್ದರು. ಆದರೆ ಇವರಿಗೆ ಅಂಬೇಡ್ಕರ್‍‌ ಅಭಿವೃದ್ಧಿ ನಿಗಮದಿಂದ ಹಣ ಬಿಡುಗಡೆಯಾಗಿದೆ. ಆದಿ ಜಾಂಬವ ಅಭಿವೃದ್ಧಿ ನಿಗಮದಡಿ ಸೌಲಭ್ಯಕ್ಕೆ ಅರ್ಹರಾಗಿದ್ದರೂ ಸಹ ಬಿ ಆರ್‍‌ ಅಂಬೇಡ್ಕರ್‍‌ ಅಭಿವೃದ್ಧಿ ನಿಗಮದಿಂದ ಸೌಲಭ್ಯ ಬಿಡುಗಡೆ ಮಾಡಿ ನಿಗಮಕ್ಕೆ ಆರ್ಥಿಕ ನಷ್ಟವುಂಟಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

 

ಪ್ರಕರಣ 5

 

ಸಮೃದ್ಧಿ ಯೋಜನೆಯಡಿ ಕೇಂದ್ರ ಕಚೇರಿಯ ಆದೇಶದಂತೆ 1.00 ಲಕ್ಷ ರ.ಗಳಿಗಿಂತ ಕಡಿಮೆ ಸೌಲಭ್ಯವನ್ನು ಹಿಂದಿನ 3 ವರ್ಷದಲ್ಲಿ ಪಡೆದಿದ್ದರೇ ಅವರು ಸಮೃದ್ಧಿ ಯೋಜನೆಯಡಿಯಲ್ಲಿ ಸೌಲಭ್ಯ ಪಡೆಯಲು ಅರ್ಹರು ಎಂದು ನಿಯಮವಿದೆ.

 

ಆದರೆ ಪುರುಷೋತ್ತಮ ಎಂಬುವರು 2013-14ನೇ ಸಾಲಿನಲ್ಲಿ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಘಟಕ ವೆಚ್ಚದ 1,50,000 ರು. ಗಳನ್ನು ಪಡೆದಿದ್ದರು. ಈ ಕಾರಣದಿಂದಾಗಿ ಸಮೃದ್ಧಿ ಯೋಜನೆಗೆ ಸೌಲಭ್ಯ ಪಡೆಯಲು ಅನರ್ಹರು. ಆದರೂ ಇವರನ್ನು ಸಮೃದ್ಧಿ ಯೋಜೆನಗೆ ಅಕ್ರಮವಾಗಿ ಆಯ್ಕೆ ಮಾಡಲಾಗಿದೆ.

 

ಪ್ರಮೋದ್‌ ಹೆಚ್‌ ಆರ್‍‌, ಗೀತಾ ಡಿ ಎಸ್‌, ಸಾಗರ್‍‌ ಬಿ ಎಸ್‌, ಕಿರಣ್‌ಕುಮಾರ್ ಜೆ, ಕಾರ್ತಿಕ ಬಿ ಎಸ್‌, ಜಯಣ್ಣ ಮತ್ತು ಪುರುಷೋತ್ತಮ್‌ ಎಂಬುವರು ಆದಿ ಜಾಂಬವ ಅಭಿವೃದ್ಧಿ ನಿಗಮದ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾಗಿದ್ದರೂ ಸಹ ಅಂಬೇಡ್ಕರ್‍‌ ಅಭಿವೃದ್ಧಿ ನಿಗಮದಡಿ ಹಣ ಬಿಡುಗಡೆ ಮಾಡಿರುವುದು ವರದಿಯಿಂದ ಗೊತ್ತಾಗಿದೆ.

 

ಅಲ್ಲದೇ ಸಮೃದ್ಧಿ ಯೋಜನೆ ಸಂಬಂಧಿಸಿದಂತೆ ಕಡತಗಳನ್ನು ಪರಿಶೀಲಿಸಿರುವ ಅಧಿಕಾರಿಗಳು, ಹಲವು ಲೋಪಗಳನ್ನೂ ಬಯಲಿಗೆಳೆದಿದ್ದಾರೆ. ಬಹುತೇಕ ಕಡತಗಳಲ್ಲಿ ತ್ರಿಪಕ್ಷೀಯ ಒಪ್ಪಂದ ಕರಾರು ಪತ್ರಗಳಿಗೆ ಜಿಲ್ಆ ವ್ಯವಸ್ಥಾಪಕರ ಹಾಗೂ ಫಲಾನುಭವಿಯ ಸಹಿಯೇ ಇಲ್ಲ. ವಾಹನ ಉದ್ದೇಶಕ್ಕೆ ಆಯ್ಕೆಯಾಗಿದ್ದ ಫಲಾನುಭವಿಗಳಿಗೆ ಚಾಲನ ಪರವಾನಿಗೆ ಬ್ಯಾಡ್ಜ್‌ಗಳೇ ಇರಲಿಲ್ಲ ಎಂಬುದನ್ನು ಪತ್ತೆ ಹಚ್ಚಿರುವುದು ವರದಿಯಿಂದ ಗೊತ್ತಾಗಿದೆ.

 

ಹುಣಸೂರು ತಾಲೂಕಿನ ಲೋಹಿತ್ ಕುಮಾರ್‍‌ ಟಿ (ವಾಹನ ಸಂಖ್ಯೆ; ಕೆಎ 09 ಡಿ 6157), ಹೆಚ್‌ ಡಿ ಕೋಟೆಯ ಅಂತರಸಂತೆಯ ಸುರೇಶ್‌ (ವಾಹನ ಸಂಖ್ಯೆ; ಕೆಎ 09 ಡಿ 6868), ಟಿ ನರಸೀಪುರ ತಾಲೂಕಿನ ಕೆಂಪನಗುಂಡಿ ಗ್ರಾಮದ ಕಸಬ ಹೋಬಳಿಯ ಪ್ರಶಾಂತ್‌ ಎಂ (ವಾಹನ ಸಂಖ್ಯೆ ಕೆಎ 09 ಡಿ 6868), ಪಿರಿಯಾಪಟ್ಟಣ ತಾಲೂಕಿನ ಚನ್ನಕಾಲ ಕಾವಲ್‌ ಗ್ರಾಮದ ನಾಗೇಂದ್ರ (ವಾಹನ ಸಂಖ್ಯೆ ಕೆಎ 09 ಡಿ 6813), ನಂಜನಗೂಡು ತಾಲೂಕಿನ ದೊಡ್ಡಕವಲಂದೆ ಹೋಬಳಿಯ ಜಯಕುಮಾರ್‍‌ ( ವಾಹನ ಸಂಖ್ಯೆ; ಕೆಎ 09 ಡಿ 5915), ನಂಜನಗೂಡು ತಾಲೂಕಿನ ಉಪ್ಪಿನಹಳ್ಳಿ ಗ್ರಾಮದ ಪಿ ಶಿವಕುಮಾರ್‍‌ (ವಾಹನ ಸಂಖ್ಯೆ; ಕೆಎ 09 ಡಿ 8011) ಗೆ  ವಾಹನ ಚಾಲನ ಪರವಾನಿಗೆಯ ಬ್ಯಾಡ್ಜ್‌ ಹೊಂದಿರಲಿಲ್ಲ.

 

ಟಿ ನರಸೀಪುರ ತಾಲೂಕಿನ ಸೋಸಲೆ ಹೋಬಳಿಯ ಹಾಲವಾರ ಗ್ರಾಮದ ಶಾಂತರಾಜು (ವಾಹನ ಸಂಖ್ಯೆ ; ಕೆಎ 09 ಡಿ 6069), ನಂಜನಗೂಡು ತಾಲೂಕಿನ ಮಲ್ಲೇಶ ಹೆಚ್‌ ಎಸ್‌ (ವಾಹನ ಸಂಖ್ಯೆ; ಕೆಎ 09 ಡಿ 5080), ಕುಬ್ಬರಕೊಪ್ಪಲಿನ ಮಂಜುನಾಥ್ ಎಂ (ವಾಹನ ಸಂಖ್ಯೆ; ಕೆಎ 09 ಡಿ 8703), ಮೇಟಗಳ್ಳಿಯ ಶಿವರಾಜು ಡಿ (ವಾಹನ ಸಂಖ್ಯೆ; ಕೆಎ 09 ಡಿ 4889) ಇವರಿಗೂ ವಾಹನ ಚಾಲನೆಯ ಬ್ಯಾಡ್ಜ್‌ ಇರಲಿಲ್ಲ. ಆದರೂ ಸಹಾಯಧನ ಬಿಡುಗಡೆ ಮಾಡಲಾಗಿತ್ತು  ಎಂದು ವರದಿಯಲ್ಲಿ ವಿವರಿಸಿದೆ.

 

ಟಿ ನರಸೀಪುರ ತಾಲೂಕಿನ ಡಣಾಯಕಪುರದ ರಾಜಶೇಖರ ಡಿ ಎಂ (ವಾಹನ ಸಂಖ್ಯೆ; ಕೆಎ 09 ಡಿ 5915)  ಎಂಬುವರು 2014-15ನೇ ಸಾಲಿನಲ್ಲಿಯೇ ಗಂಗಾ ಕಲ್ಯಾಣ ಯೋಜನೆಯಡಿ ಸಹಾಯಧನ ಸೌಲಭ್ಯ ಪಡೆದಿದ್ದರು. ಆದರೂ ಪುನಃ ಐರಾವತ ಯೋಜನೆಯಡಿಯಲ್ಲಿಯೂ ಸೌಲಭ್ಯ ಪಡೆದಿರುವುದನ್ನು ಜಾಗೃತ ಕೋಶದ ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

SUPPORT THE FILE

Latest News

Related Posts