ಮರಗಳ ಅಕ್ರಮ ಕಡಿತಲೆ, ಹದ್ದಿನ ಕಣ್ಣಿನ ನಡುವೆಯೂ ಹೊರರಾಜ್ಯಗಳಿಗೆ ಸಾಗಣೆ; ಕೋಟ್ಯಂತರ ರು ನಷ್ಟ

ಬೆಂಗಳೂರು; ವಿರಾಜಪೇಟೆ ಸುತ್ತಮುತ್ತ ಕಳೆದ ಮೂರು ವರ್ಷಗಳಲ್ಲಿ ಅಕ್ರಮವಾಗಿ ಮರಕಡಿತಲೆ ಎಗ್ಗಿಲ್ಲದೇ ಸಾಗಿದೆ. ಮರಮುಟ್ಟು ಎಲ್ಲಿಗೆ ಸಾಗಿಸಲಾಗಿದೆ ಎಂಬುದರ ಬಗ್ಗೆ ಯಾವ ಮಾರ್ಗದಲ್ಲಿ ಸಾಗಿಸಲಾಗಿದೆ ಎಂಬ ಮಾಹಿತಿಯೂ ಕರ್ನಾಟಕ ಅರಣ್ಯ ಇಲಾಖೆಗಿಲ್ಲವಾಗಿದೆ.

 

ಅರಣ್ಯ ಇಲಾಖೆಯ ತನಿಖಾ ಠಾಣೆಗಳ ಹದ್ದಿನ ಕಣ್ಣಿನ ನಡುವೆಯೂ ಕೋಟ್ಯಂತರ ರುಪಾಯಿ ಬೆಲೆಬಾಳುವ ಮರಗಳನ್ನು ಕಡಿತಲೆ ಮಾಡಿ ಸಾಗಿಸಲಾಗಿದೆ. ಈ ಎಲ್ಲಾ ಮರಗಳು ಹೊರರಾಜ್ಯಕ್ಕೆ ಸಾಗಾಣಿಕೆಯಾಗಿವೆ. ವಿರಾಜಪೇಟೆ ವಿಭಾಗದಲ್ಲಿ ನಡೆದಿರುವ ಇಂತಹ ಹತ್ತಾರು ಪ್ರಕರಣಗಳಲ್ಲಿ ಕೇವಲ ಅರಣ್ಯ ಇಲಾಖೆ ಮಾತ್ರವಲ್ಲ, ಇತರೆ ಇಲಾಖೆಗಳ ಸಿಬ್ಬಂದಿಯೂ ಶಾಮೀಲಾಗಿರುವುದು ಇದೀಗ ಬಹಿರಂಗವಾಗಿದೆ.

 

ಈ ಕುರಿತು ಪ್ರಧಾನ ಅರಣ್ಯ ಸಂರಕ್ಷಣಾಧಿಕಾರಿಗಳು ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ 2024ರ ಮಾರ್ಚ್‌ 14ರಂದು 3 ಪುಟಗಳ ಪತ್ರವನ್ನು ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಮರಗಳ ಕಡಿತಲೆ, ಸಾಗಾಣಿಕೆ, ಪರವಾನಗಿಗೆ ಸಂಬಂಧಿಸಿದಂತೆ ಮೂಲ ಅರ್ಜಿದಾರರ ಅರ್ಜಿಗಳನ್ನೇ ತಿದ್ದಲಾಗಿದೆ. ಅರ್ಜಿಗಳಲ್ಲಿ ನಮೂದಿಸಿರುವ ಮರಗಳ ಸಂಖ್ಯೆಗಿಂತಲೂ ಅಧಿಕ ಪ್ರಮಾಣದಲ್ಲಿ ಮರಗಳ ಕಡಿತಲೆಗೆ ಅನುಮತಿ ದೊರೆತಿದೆ. ಮರಗಳ ಸಾಗಾಣಿಕೆಗಾಗಿ ಪರವಾನಗಿಗೂ ಅರ್ಜಿ ಸಲ್ಲಿಸದಿರುವುದು ಸೇರಿದಂತೆ ಹಲವು ನಿಯಮಬಾಹಿರ ಚಟುವಟಿಕೆಗಳೂ ಬೆಳಕಿಗೆ ಬಂದಿವೆ.

 

ಅಷ್ಟೇ ಅಲ್ಲ, ಮರಗಳ ಕಡಿತಲೆ ಮಂಜೂರಾತಿ ದಾಖಲೆಗಳು, ಶಿಫಾರಸ್ಸು ಪತ್ರಗಳು, ರಹದಾರಿ ಮಂಜೂರಾತಿ ಆದೇಶ ಸೇರಿದಂತೆ ಇನ್ನಿತರೆ ಅವಶ್ಯಕ ದಾಖಲೆಗಳೇ ಇಲಾಖೆಯಲ್ಲಿ ಲಭ್ಯವಿಲ್ಲ. ಅದೇ ರೀತಿ ಮರಗಳ ಪರಿವರ್ತಿತ ಪಟ್ಟಿ ಮತ್ತು ರಹದಾರಿ ಪಾಸ್‌ಗಳ ಮೂಲಕ ಸಾಗಾಣಿಕೆಯಾಗಿರುವ ಅರಣ್ಯೋತ್ಪನ್ನದ ಪರಿಮಾಣಕ್ಕೂ ತಾಳೆಯಿಲ್ಲ. ಹಲವು ಅರ್ಜಿಗಳಿಗೆ ಜಿಲ್ಲಾಧಿಕಾರಿಗಳ ವರದಿಯೇ ಇಲ್ಲ, ತಹಶೀಲ್ದಾರ್‍‌ಗಳೇ ಕಂದಾಯ ಇಲಾಖೆಯ ಅಭಿಪ್ರಾಯವನ್ನು ನೀಡಿರುವುದು ಗೊತ್ತಾಗಿದೆ.

 

‘ಈ ಪ್ರಕರಣದಲ್ಲಿ ಸರ್ಕಾರಕ್ಕೆ ನಷ್ಟವಾಗಿರುವ ಸಾಧ್ಯತೆಯು ಗಮನಾರ್ಹವಾಗಿ ಕಂಡುಬಂದಿದ್ದು ಆರ್ಥಿಕವಾಗಿ ಕೋಟ್ಯಂತರ ರುಪಾಯಿಗಳಲ್ಲಿ ನಷ್ಟವುಂಟಾಗಿರುವ ಸಂಭವವಿದೆ,’ ಎಂದು ಪತ್ರದಲ್ಲಿ ವಿವರಿಸಲಾಗಿದೆ.

 

ಪತ್ರದಲ್ಲೇನಿದೆ?

 

ವಿರಾಜಪೇಟೆ ವಿಭಾಗದಲ್ಲಿ ಕಳೆದ ಮೂರು ವರ್ಷಗಳಲ್ಲಿ ಮರ ಕಡಿತಲೆಗೆ ಅನುಮತಿ ನೀಡಿರುವ ಪ್ರಕರಣಗಳಲ್ಲಿ ನ್ಯೂನತೆ ಕಂಡು ಂದಿರುವ 71 ಕಡತಗಳಲ್ಲಿ ಉಪ ಕಡತಗಳು ಸೇರಿದಂತೆ ಒಟ್ಟು 88 ಕಡತಗಳಿವೆ.
ರೆಡ್ದಿಮ್‌ ಸಾಗು ಸಂಬಂಧಪಟ್ಟ 39 ಕಡತಗಳಲ್ಲಿ ಮರಗಳ ಮೇಲೆ ಮಾಲೀಕತ್ವ ಹಕ್ಕು ಇರುವುದರಿಂದ ಪ್ರಸ್ತುತ ಹಂತದ ಪರಿಶೀಲನೆಯಲ್ಲಿ ಸರ್ಕಾರಕ್ಕೆ ನಷ್ಟ ಉಂಟಾಗಿರುವುದು ಕಂಡುಬಂದಿರುವುದಿಲ್ಲ. ಆದರೆ ಕೆಲವೊಂದು ಕಡತಗಳಲ್ಲಿ ಅಧಿಕೃತ ಮರಕಡಿತಲೆ ಕಾರ್ಯವಿಧಾನಗಳ, ಕಡತಗಳ ನಿರ್ವಹಣೆಯಲ್ಲಿ ನ್ಯೂನತೆಗಳು ಉಂಟಾಗಿರುವುದು ಕಂಡುಬಂದಿರುತ್ತದೆ.

 

09 ಕಡತಗಳಲ್ಲಿ ಮರಕಡಿತಲೆ ಮಂಜೂರಾತಿಗೆ ಅವಶ್ಯವಿರುವ ಪ್ರಮುಖವಾದ ದಾಖಲೆಗಳಾದ ಮೂಲ ಅರ್ಜಿ, ಕಚೇರಿ ಟಿಪ್ಪಣಿ ಹಾಳೆಗಳು, ವಲಯ ಅರಣ್ಯಾಧಿಕಾರಿ, ಸಹಾಯಕ ಅರಣ್ಯಾಧಿಕಾರಿಯವರ ಮರಕಡಿತಲೆ ಶಿಫಾರಸ್ಸು ಪತ್ರಗಳು, ರಹದಾರಿ ಮಂಜೂರಾತಿ ಆದೇಶ ಹಾಗೂ ಇನ್ನಿತರೆ ಅವಶ್ಯವಿರುವ ದಾಖಲೆಗಳು ಲಭ್ಯವಿರುವುದಿಲ್ಲ.

 

ರೆಡ್ದಿಮ್ದ್‌ ಸಾಗು ಜಾಗವನ್ನು ಹೊರತುಪಡಿಸಿ ಇತರೆ ಹಿಡುವುಳಿ ವಿಧಗಳಾದ ಅನ್‌ ರೆಡ್ಡೀಮ್‌ ಸಾಗು, ಸಾಗು ಖುಷ್ಕಿ ಪರಾಧೀನ ಸಾಗು, ಅನ್‌ ಪ್ರಿವಿಲಜ್ಡ್‌ ಸಾಗು ಬಣೆ, ಸಾಗು ಹಿತ್ಲು ಸಾಗು ಜಾಗ, ಸಾಗು ಕೆರೆ, ಅರೆ ಸಾಗು ಪಟ್ಟ, ಜೋಡಿ ವಾಣೆ, ಸಾಗು ಬಾಣೆ, ಪರಾಧೀನ ಬಾಣೆ ಭೂಮಿಗೆ ಸಂಬಂಧಿಸಿದಂತೆ 40 ಕಡತಗಳಲ್ಲಿ ಸರ್ಕಾರಕ್ಕೆ ನಷ್ಟ ಉಂಟಾಗುವ ಸಾಧ್ಯತೆ ಇರುವ ಬಗ್ಗೆ ಮೇಲ್ನೋಟಕ್ಕೆ ಕಂಡು ಬಂದಿದೆ ಎಂದು ಪತ್ರದಲ್ಲಿ ಹೇಳಲಾಗಿದೆ.

 

ಮರಗಳ ಮೇಲಿನ ಹಕ್ಕಿನ ಬಗ್ಗೆ ಸಕ್ಷಮ ಪ್ರಾಧಿಕಾರವಾದ ಜಿಲ್ಲಾಧಿಕಾರಿಗಳ ಕಂದಾಯ ಅಭಿಪ್ರಾಯದ ವರದಿಯು ಕಡ್ಡಾಯವಾಗಿರುತ್ತದೆ. ಆದರೆ ಹಲವು ಕಡತಗಳಲ್ಲಿ ಜಿಲ್ಲಾಧಿಕಾರಿಗಳ ವರದಿಯು ಲಭ್ಯವಿರುವುದಿಲ್ಲ. ಇನ್ನು ಕೆಲವು ಕಡತಗಳಲ್ಲಿ ತಹಶೀಲ್ದಾರ್‍‌ಗಳು ಕಂದಾಯ ಅಭಿಪ್ರಾಯಗಳನ್ನು ನೀಡಿರುವುದು ಕಂಡುಬಂದಿರುತ್ತದೆ.

 

‘ಕಂದಾಯ ಇಲಾಖೆ ಅಭಿಪ್ರಾಯ ನೀಡಿರುವ ದಾಖಲಾತಿಗಳ ನೈಜತೆಯನ್ನು ಖಾತರಿಪಡಿಸಿಕೊಳ್ಳಬೇಕಾಗಿರುತ್ತದೆ. ಕೆಲವು ಕಡತಗಳ ಪರಿಶೀಲನೆಯಲ್ಲಿ ಕಂದಾಯ ಇಲಾಖೆ ಅಭಿಪ್ರಾಯ ಹಾಗೂ ಮರ ಕಡಿತಲೆಗಾಗಿ ಸಲ್ಲಿಸಿರುವ ಮೂಲ ಅರ್ಜಿಗಳ ಮೇಲೆ ತಿದ್ದಲ್ಪಟ್ಟಿರುವುದು ಕಂಡುಬಂದಿರುತ್ತದೆ,’ ಎಂದು ಪತ್ರದಲ್ಲಿ ವಿವರಿಸಲಾಗಿದೆ.

 

ಕೆಲವು ಕಡತಗಳಲ್ಲಿ ಅರ್ಜಿದಾರರು ಮರಗಳ ಕಡಿತಲೆಗಾಗಿ ಕೋರಿರುವ ಅರ್ಜಿಗಳಲ್ಲಿ ನಮೂದಿಸಿರುವ ಮರಗಳಿಗಿಂತ ಹೆಚ್ಚಿನ ಮರಗಳ ಕಡಿತಲೆಗಾಗಿ ಅನುಮತಿ ನೀಡಿರುವುದು ಕಂಡುಬಂದಿರುತ್ತದೆ. ಕೆಲವು ಕಡತಗಳಲ್ಲಿ ಮರಗಳ ಕಡಿತಲೆಗಾಗಿ ಅರ್ಜಿದಾರರು ಸಲ್ಲಿಸಿರುವ ಅರ್ಜಿಗಳು ಲಭ್ಯವಿಲ್ಲ.

 

ಕೆಲವು ಕಡತಗಳಲ್ಲಿ ಅರ್ಜಿದಾರರು ಮರ ಕಡಿತಲೆಯ ನಂತರ ಸಾಗಾಣಿಕೆ ರಹದಾರಿಗಾಗಿ ಅರ್ಜಿ ಸಲ್ಲಿಸಿರುವುದಿಲ್ಲ. ಕೆಲವು ಕಡತಗಳಲ್ಲಿ ಮರ ಕಡಿತಲೆಗೆ ಪ್ರಾದೇಶಿಕ ವಲಯದ ವಲಯ ಅರಣ್ಯಾಧಿಕಾರಿ, ಸರ್ವೇ ಘಟಕದ ವಲಯ ಅರಣ್ಯಾಧಿಕಾರಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯವರ ಶಿಫಾರಸ್ಸು ಪತ್ರಗಳು ಇರುವುದು ಕಂಡುಬಂದಿಲ್ಲ ಎಂದು ಪತ್ರದಲ್ಲಿ ತಿಳಿಸಲಾಗಿದೆ.

 

ಬೀಟೆ ಮರಗಳಿಗೆ ಸಂಬಂಧಿಸಿದಂತೆ ಮರಗಳ ಪರಿವರ್ತಿತ ಪಟ್ಟಿ ಮತ್ತು ರಹದಾರಿ ಪಾಸ್‌ಗಳ ಮೂಲಕ ಸಾಗಾಣಿಕೆಯಾಗಿರುವ ಅರಣ್ಯೋತ್ಪನ್ನದ ಪರಿಮಾಣಕ್ಕೂ ತಾಳೆ ಹೊಂದದೇ ಇರುವುದು ಕೆಲವು ಕಡತಗಳ ಪರಿಶೀಲನೆಯಲ್ಲಿ ಕಂಡು ಬಂದಿರುತ್ತದೆ. ಕಟಾವಣೆಯಾದ ಮರದ ನಾಟಗಳು ಅಕ್ರಮವಾಗಿ ಹೊರರಾಜ್ಯಗಳಿಗೆ ಸಾಗಾಣಿಕೆಯಾಗಿರುವ ಸಾಧ್ಯತೆ ಇರುತ್ತದೆ.

 

ವಿರಾಜಪೇಟೆ ಪ್ರಾದೇಶಿಕ ವಿಭಾಗದ ಮರ ಕಡಿತಲೆಗೆ ಸಂಬಂಧಿಸಿದಂತೆ ಮರಮುಟ್ಟು ಎಲ್ಲಿಗೆ ಸಾಗಿಸಲಾಗಿದೆ ಎಂಬುದರ ಬಗ್ಗೆ ಯಾವ ಮಾರ್ಗದಲ್ಲಿ ಸಾಗಿಸಲಾಗಿದೆ ಎಂಬುದನ್ನು ಅಂತರ್‍‌ರಾಜ್ಯ ಸಾಗಣಿಕೆಯು ಒಳಗೊಂಡೊಂತೆ ತಿಳಿಯುವ, ಪತ್ತೆ ಹಚ್ಚಲು ಹಾಗೂ ಕಡತಗಳಲ್ಲಿ ಸಹಿಗಳನ್ನು ಪರಿಶೀಲಿಸಬೇಕು. ಹಾಗೂ ದಾಖಲೆಗಳ ನೈಜತೆ ಬಗ್ಗೆ ದೃಢಪಡಿಸಿಕೊಳ್ಳುವ ನಿಟ್ಟಿನಲ್ಲಿ ಸಿಐಡಿ ತನಿಖೆ ನಡೆಸಬೇಕು ಎಂದು ಪ್ರಧಾನ ಅರಣ್ಯ ಮುಖ್ಯ ಸಂರಕ್ಷಣಾಧಿಕಾರಿ ಪತ್ರದಲ್ಲಿ ಕೋರಿದ್ದಾರೆ.

 

ಅರಣ್ಯ ಇಲಾಖೆಯ ಸಿಬ್ಬಂದಿಗಳೊಂದಿಗೆ ಇತರೆ ಇಲಾಖೆಯ ಸಿಬ್ಬಂದಿ ಪಾತ್ರವೂ ಪ್ರಮುಖವಾಗಿದೆ. ಈ ಪ್ರಕರಣದಲ್ಲಿ ಕ್ರಿಮಿನಲ್ ದೃಷ್ಟಿಕೋನದಲ್ಲಿಯೂ ಪ್ರಕರಣವನ್ನು ತನಿಖೆಗೆ ಒಳಪಡಿಸಬೇಕಾಗಿದೆ. ಹೀಗಾಗಿ ಸಿಐಡಿಗೆ ಹಸ್ತಾಂತರಿಸುವುದು ಸೂಕ್ತ ಎಂದು ಕೋರಿರುವುದು ಪತ್ರದಿಂದ ಗೊತ್ತಾಗಿದೆ.

SUPPORT THE FILE

Latest News

Related Posts