ಬೆಂಗಳೂರು; ಅನಧಿಕೃತ ಮತ್ತು ಕಳಂಕಿತ ಹಣವನ್ನು ಕಳಂಕ ರಹಿತವಾಗಿ ಮಾಡುವ ಉದ್ದೇಶದಿಂದಲೇ ಆರೋಪಿ ಡಿ ಕೆ ಶಿವಕುಮಾರ್ ಅವರು ಹಲವು ವರ್ಷಗಳಿಂದ ಶಿಕ್ಷಣ, ಟ್ರಸ್ಟ್ ಮತ್ತು ರಿಯಲ್ ಎಸ್ಟೇಟ್ ವಹಿವಾಟಿನಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಆದಾಯ ತೆರಿಗೆ ಇಲಾಖೆಯು ನ್ಯಾಯಾಲಯಕ್ಕೆ ಸಮಗ್ರ ವಿವರಗಳನ್ನು ಸಲ್ಲಿಸಿತ್ತು.
ಡಿ.ಕೆ. ಶಿವಕುಮಾರ್ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) 120 ಬಿ ಅಡಿ ದಾಖಲಿಸಿದ್ದ ಪ್ರಕರಣವನ್ನು ಸುಪ್ರೀಂ ಕೋರ್ಟ್ ಮಂಗಳವಾರ ರದ್ದುಗೊಳಿಸಿರುವ ಬೆನ್ನಲ್ಲೇ ಆದಾಯ ತೆರಿಗೆ ಇಲಾಖೆಯ ಉಪ ನಿರ್ದೇಶಕರು ನ್ಯಾಯಾಲಯಕ್ಕೆ ಸಲ್ಲಿಸಿರುವ ಸಂಪೂರ್ಣ ವಿವರಗಳು ಮುನ್ನೆಲೆಗೆ ಬಂದಿವೆ.
ಈ ಸಂಬಂಧ ‘ದಿ ಫೈಲ್’ ಸಮಗ್ರ ಕಡತವನ್ನು ಆರ್‍ಟಿಐ ಅಡಿಯಲ್ಲಿ ಪಡೆದುಕೊಂಡಿದೆ.
‘ಆರೋಪಿ ಡಿ ಕೆ ಶಿವಕುಮಾರ್ ಹಲವು ವರ್ಷಗಳಿಂದ ಶಿಕ್ಷಣ, ಟ್ರಸ್ಟ್ ಮತ್ತು ರಿಯಲ್ ಎಸ್ಟೇಟ್ ವಹಿವಾಟಿನಲ್ಲಿ ತೊಡಗಿಸಿಕೊಂಡಿದ್ದಾರೆ. ಅವರು ಈ ಬಿಸಿನೆಸ್ ಚಟುವಟಿಕೆಗಳನ್ನು ಕೈಗೊಳ್ಳುವಾಗ ಅವರಿಂದ ನೇಮಕ ಮಾಡಲ್ಪಟ್ಟಿರುವುವರಿಂದ ಈ ಕಾರ್ಯಾಚರಣೆ ನಡೆದಿತ್ತು. ಒಬ್ಬೊಬ್ಬರನ್ನೂ ಬೇರೆ ಬೇರೆ ಬಿಸಿನೆಸ್‌ಗಳಲ್ಲಿ ತೊಡಗಿಸಿದ್ದರು. ಕಳಂಕಿತ ಹಣವನ್ನು ಕಳಂಕರಹಿತವಾಗಿ ಮಾಡುವುದಕ್ಕಾಗಿಯೇ ಹೀಗೆ ಮಾಡಿದ್ದಾರೆ. ಆದಾಯ ಮತ್ತು ತೆರಿಗೆ ವಂಚಿಸಲು ಕ್ರಿಮಿನಲ್ ಸಂಚು ರೂಪಿಸಿದ್ದಾರೆ,’ ಎಂದು ನ್ಯಾಯಾಲಯಕ್ಕೆ ಸಲ್ಲಿಸಿರುವ ವಿವರಣೆಯಲ್ಲಿ ಆರೋಪಿಸಿರುವುದು ಗೊತ್ತಾಗಿದೆ.
ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದೆಹಲಿಯಲ್ಲಿ ಡಿ ಕೆ ಶಿವಕುಮಾರ್ ಅವರಿಗೆ ಸೇರಿದೆ ಎನ್ನಲಾಗಿದ್ದ ಮನೆಗಳ ಮೇಲೆ ದಾಳಿ ಮಾಡಿದ್ದರು. ಈ ಸಂದರ್ಭದಲ್ಲಿ ಲೆಕ್ಕಕ್ಕೆ ಸಿಗದ 12,44,900 ರು., 1,37,36,500 ಕೋಟಿ ಮತ್ತು 41,03,600 ರು. ಸಿಕ್ಕಿತ್ತು. ಇದು ಅನಧಿಕೃತವಾದ ಹಣವಾಗಿತ್ತು ಎಂದು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ವಿವರಿಸಿದ್ದಾರೆ.
ಮೊದಲನೇ ಆರೋಪಿ ಡಿ ಕೆ ಶಿವಕುಮಾರ್ ಅವರ ಮನೆಯಲ್ಲಿ 6,61,26,000 ರು ಮತ್ತು ಮೂರನೇ ಆರೋಪಿಯ ಕೊಠಡಿಯಿಂದ 6,68,84,100 ರೂಪಾಯಿ ಸಿಕ್ಕಿತ್ತು. ಒಟ್ಟಾರೆ 8,59,69,100 ಕೋಟಿ ಲಭ್ಯವಾಗಿತ್ತು. ಅದೇ ರೀತಿ ನಾಲ್ಕನೇ ಆರೋಪಿಯ ಕೊಠಡಿಯಲ್ಲಿ 12,44,900 ರು. ಲಭ್ಯವಾಗಿತ್ತು. ಅದನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ. ಈ ಹಣವು ಮೊದಲನೇ ಆರೋಪಿ ಡಿ ಕೆ ಶಿವಕುಮಾರ್ ಅವರಿಗೆ ಸೇರಿದೆ ಎಂದು ನಾಲ್ಕನೇ ಆರೋಪಿ ಹೇಳಿದ್ದಾರೆ ಎಂದು ನ್ಯಾಯಾಲಯದ ಗಮನಕ್ಕೆ ತಂದಿರುವುದು ತಿಳಿದು ಬಂದಿದೆ.
ಅತಿಥಿಗಳ ಆತಿಥ್ಯಕ್ಕಿಟ್ಟಿದ್ದ ಹಣವದು
ನಾಲ್ಕನೇ ಆರೋಪಿ ಕೊಠಡಿಯಲ್ಲಿ ಲಭ್ಯವಾಗಿದ್ದ 12,44,900 ರುಪಾಯಿಗಳು ಅವರ ಅತಿಥಿಗಳ ಆತಿಥ್ಯಕ್ಕೆ ಇಟ್ಟಿದ್ದರು ಎಂದು ಹೇಳಿದ್ದರು. ವಾಸ್ತವದಲ್ಲಿ ಈ ಕೊಠಡಿಯಲ್ಲಿ ಇದ್ದದ್ದು 15,00,000 ಲಕ್ಷ ರು. ಇದರಲ್ಲಿ 3,00,000 ಲಕ್ಷ ರುಪಾಯಿಗಳನ್ನು ಮೊದಲನೇ ಆರೋಪಿ ಸಹೋದರ ಡಿ ಕೆ ಸುರೇಶ್ ಅವರ ಸೂಚನೆ ಮೇರೆಗೆ ವೆಚ್ಚ ಮಾಡಲಾಗಿತ್ತು ಎಂದು ನಾಲ್ಕನೇ ಆರೋಪಿ ವಿವರಿಸಿದ್ದರು.
ದೆಹಲಿಯಲ್ಲಿನ ಫ್ಲಾಟ್‌ಗಳನ್ನು ಶೋಧಿಸಿದ್ದ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಮತ್ತಷ್ಟು ಸಂಗತಿಗಳನ್ನು ಬಹಿರಂಗಗೊಳಿಸಿದ್ದರು. ಅದೇ ಸಂಕೀರ್ಣದಲ್ಲಿ ಫ್ಲಾಟ್‌ಗಳ ಬೀಗದ ಕೈಗಳನ್ನು ವಶಕ್ಕೆ ಪಡೆದಿದ್ದರು. ಈ ಫ್ಲಾಟ್‌ಗಳ ಮಾಲೀಕರು ಮೊದಲನೇ ಆರೋಪಿ ಡಿ ಕೆ ಶಿವಕುಮಾರ್ ಅವರದ್ದು ಎಂದು ನಾಲ್ಕನೇ ಆರೋಪಿ ಹೇಳಿಕೆ ನೀಡಿದ್ದರು. ಮೂರನೇ ಸಂಖ್ಯೆಯಲ್ಲಿರುವ ಫ್ಲಾಟ್, ಮೊದಲ ಆರೋಪಿ ಡಿ ಕೆ ಶಿವಕುಮಾರ್ ಅವರ ಸೋದರನದ್ದು ಎಂದು ಮಾಹಿತಿ ನೀಡಿದ್ದರು. ಎರಡನೇ ಸಂಖ್ಯೆಯ ಫ್ಲಾಟ್, ಎರಡನೇ ಆರೋಪಿಗೆ ಸೇರಿದೆ ಎಂದು ವಿವರ ಒದಗಿಸಿದ್ದರು.
ಮೊದಲನೇ ಆರೋಪಿ ಡಿ ಕೆ ಶಿವಕುಮಾರ್ ಅವರ ಸೂಚನೆ ಮೇರೆಗೆ ನಾಲ್ಕನೇ ಆರೋಪಿ ಬಳಿಯೇ ಫ್ಲಾಟ್‌ಗಳ ಬೀಗದ ಕೈಗಳು ಇದ್ದವು ಎಂದು ವಿವರಿಸಲಾಗಿದೆ.