ಬೆಂಗಳೂರು; ಬಿಬಿಎಂಪಿಯ ಹಿಂದಿನ ಆಯುಕ್ತರಾದಿಯಾಗಿ ಕಂದಾಯ ಅಧಿಕಾರಿಗಳು ಸ್ವಯಂ ಘೋಷಣೆ ಆಸ್ತಿ ತೆರಿಗೆ ಪದ್ಧತಿಯಡಿಯಲ್ಲಿ ವಲಯ ವರ್ಗೀಕರಣವನ್ನು ತಪ್ಪಾಗಿ ನಮೂದಿಸಿದ್ದರಿಂದಾಗಿ ಉಂಟಾಗಿರುವ ವ್ಯತ್ಯಾಸದ ಮೊತ್ತವನ್ನು 240 ಕೋಟಿ ರು.ಗಳನ್ನು ಆಸ್ತಿ ಮಾಲೀಕರಿಂದ ವಸೂಲು ಮಾಡಲು ರಾಜ್ಯ ಕಾಂಗ್ರೆಸ್ ಸರ್ಕಾರವು ಮುಂದಾಗಿದೆ.
ಬೃಹತ್ ಬೆಂಗಳೂರು ಮಹಾನಗರಪಾಲಿಕೆಯ ಹಿಂದಿನ ಆಯುಕ್ತರು ಮತ್ತು ಇತರೆ ಅಧಿಕಾರಿಗಳು ಎಸಗಿದ್ದ ಲೋಪದಿಂದಾಗಿ ಇದೀಗ ವ್ಯತ್ಯಾಸದ ಮೊತ್ತವಾದ 240 ಕೋಟಿ ರು.ಗಳನ್ನು ತೆರಿಗೆದಾರರೇ ಭರಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ವಿಶೇಷವೆಂದರೇ ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿನ ಸಚಿವ ಸಂಪುಟದಲ್ಲಿ ನಿರ್ಣಯ (ಪ್ರಕರಣ ಸಂಖ್ಯೆ ಸಿ/489/2021) ಕೈಗೊಂಡಿತ್ತು. ಆದರೆ ಈ ಸಂಬಂಧ ಯಾವುದೇ ಆದೇಶ ಹೊರಡಿಸಿರಲಿಲ್ಲ. ಅಲ್ಲದೇ ಕೆಎಂಸಿ ಕಾಯ್ದೆಯಂತೆ ಶೇ.5ರಷ್ಟು ಕಂದಾಯ ಪಾವತಿಗಳ ಪರಿಶೀಲನೆಯನ್ನೂ ಮಾಡಿರಲಿಲ್ಲ.
ಆದರೆ ಈಗಿನ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ನೂರು ದಿನಗಳಲ್ಲಿಯೇ ವ್ಯತ್ಯಾಸದ ಮೊತ್ತವನ್ನು ಸಂಗ್ರಹಿಸಲು ಆದೇಶ ಹೊರಡಿಸಿರುವುದು ತೆರಿಗೆದಾರರ ಆಕ್ರೋಶಕ್ಕೆ ತುತ್ತಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.
ಈ ಸಂಬಂಧ ನಗರಾಭಿವೃದ್ಧಿ ಇಲಾಖೆಯು 2023ರ ಸೆ.13ರಂದು ಆದೇಶ ಹೊರಡಿಸಿದೆ. ಈ ಆದೇಶದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ನಗರಪಾಲಿಕೆಯು 5 ವರ್ಷಗಳ ಕಾಲ ವಿಳಂಬ ಮಾಡಿ ಆಸ್ತಿ ತೆರಿಗೆಯನ್ನು ಪರಿಷ್ಕರಿಸಿದ್ದರಿಂದಾಗಿ ವ್ಯತ್ಯಾಸದ ಮೊತ್ತಕ್ಕೆ ದುಪ್ಪಟ್ಟು ದಂಡ ಮತ್ತು ಬಡ್ಡಿಯನ್ನು ಪಾವತಿಸಬೇಕು ಎಂದು ನೋಟೀಸ್ ಜಾರಿ ಮಾಡಿತ್ತು. ಆದರೆ ಇದು ಸಮಂಜಸವಾಗಿರಲಿಲ್ಲ ಎಂದು ನಗರಾಭಿವೃದ್ಧಿ ಇಲಾಖೆಯು ಹೇಳಿದೆಯಾದರೂ ಇದಕ್ಕೆ ಕಾರಣರಾದ ಹಿಂದಿನ ಆಯುಕ್ತರು, ಕಂದಾಯ ಅಧಿಕಾರಿಗಳಿಂದ ಈ ವ್ಯತ್ಯಾಸದ ಮೊತ್ತವನ್ನು ವಸೂಲು ಮಾಡದೆಯೇ ನೇರವಾಗಿ ತೆರಿಗೆದಾರರಿಂದಲೇ ವಸೂಲು ಮಾಡಲು ಮುಂದಾಗಿರುವುದು ತೆರಿಗೆದಾರರ ಕೆಂಗಣ್ಣಿಗೆ ಕಾಂಗ್ರೆಸ್ ಸರ್ಕಾರವು ಗುರಿಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ನಗರಾಭಿವೃದ್ಧಿ ಇಲಾಖೆಯು ಹೊರಡಿಸಿರುವ ಆದೇಶಕ್ಕೆ ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಹಾಗೂ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ಸಿಂಗ್ ಅವರು ಒಪ್ಪಿಗೆ ನೀಡಿದ್ದಾರೆ ಎಂದು ಗೊತ್ತಾಗಿದೆ.
ಆದೇಶದಲ್ಲಿ ಏನಿದೆ?
‘ವಲಯಗಳನ್ನು ತಪ್ಪಾಗಿ ಆಯ್ಕೆ ಮಾಡಿಕೊಂಡಿರುವುದಕ್ಕೆ ಮತ್ತು ಪಾವತಿ ಮಾಡಬೇಕಾದ ವ್ಯತ್ಯಾಸದ ಮೊಬಲಗಿನ ಬಗ್ಗೆ ಆಸ್ತಿಯ ಮಾಲೀಕರಿಗೆ ಸರಿಯಾದ ಸಮಯಕ್ಕೆ ತಿಳಿಸದೇ ಬಿಬಿಎಂಪಿ ವತಿಯಿಂದ ತಪ್ಪಾಗಿರುವ ಕಾರಣ ದುಪ್ಪಟ್ಟು ಹಣವನ್ನು ಮನ್ನಾ ಮಾಡಿ ವ್ಯತ್ಯಾಸದ ಮೊತ್ತ ಮತ್ತು ವ್ಯತ್ಯಾಸದ ಮೊತ್ತಕ್ಕೆ ಬಡ್ಡಿಯನ್ನು ಸಂಗ್ರಹಿಸಬೇಕು,’ ಎಂದು ಆದೇಶದಲ್ಲಿ ಕಟ್ಟುನಿಟ್ಟಾಗಿ ಸೂಚಿಸಿದೆ.
ಅದೇ ರೀತಿ ಆಸ್ತಿ ತೆರಿಗೆ ಪಾವತಿಯಲ್ಲಿ ಆಗಿರುವ ವ್ಯತ್ಯಾಸದ ಮೊತ್ತಕ್ಕೆ ಸಂಬಂಧಿಸಿದಂತೆ ಈ ವ್ಯತ್ಯಾಸದ ಮೊತ್ತಕ್ಕೆ ಚಾಲ್ತಿಯಲ್ಲಿರುವ ಬ್ಯಾಂಕ್ ಬಡ್ಡಿ ದರದಲ್ಲಿ ಬಡ್ಡಿ ವಿಧಿಸಬೇಕು. ಈಗಾಗಲೇ ನೋಟೀಸ್ ಜಾರಿ ಆಡಿ ನೋಟೀಸ್ ಪ್ರಕಾರ ಆಸ್ತಿ ತೆರಿಗೆ ಪಾವತಿಸಿರುವ ಪ್ರಕರಣಗಳಲ್ಲಿ ಹೆಚ್ಚುವರಿ ಮೊತ್ತವನ್ನು ಮುಂಬರುವ ಸಾಲುಗಳಿಗೆ ಹೊಂದಾಣಿಕೆ ಮಾಡಿಕೊಳ್ಳಬೇಕು.
ಒಂದು ವೇಳೆ ವಲಯ ವರ್ಗೀಕರಣದ ವಿವರಗಳನ್ನು ಆಸ್ತಿ ತೆರಿಗೆ ತಂತ್ರಾಂಶದಲ್ಲಿ ತಪ್ಪಾಗಿ ನಮೂದಿಸಿ ಗಣಕೀಕೃತಗೊಳಿಸಿದ್ದಲ್ಲಿ ಅಂತಹ ನೋಟೀಸ್‌ಗಳನ್ನು ರದ್ದುಪಡಿಸಬೇಕು. ‘ಪ್ರಸ್ತುತ ಪ್ರಕರಣದಲ್ಲಿ ವಲಯಗಳ ಆಯ್ಕೆಯನ್ನು ತಪ್ಪಾಗಿ ಆಯ್ಕೆ ಮಾಡಿಕೊಂಡಿರುವುದನ್ನು ಮುಂಚಿತವಾಗಿಯೇ ಕಂಡು ಹಿಡಿಯಬಹುದಾಗಿದ್ದು, ಅದನ್ನು ತುಂಬಾ ತಡವಾಗಿ ಗುರುತಿಸಲಾಗಿರುವುದರಿಂದ ಬಿಎಂಪಿಯ ಕಂದಾಯ ಅಧಿಕಾರಿಗಳಿಂದ ಸ್ವಯಂ ಘೋಷಿತ ಆಸ್ತಿ ತೆರಿಗೆ ಮೌಲ್ಯೀಕರಣ ಪರಿಶೀಲನೆಯನ್ನು ಉತ್ತಮ ಪಡಿಸಿಕೊಳ್ಳಬೇಕು,’ ಎಂದು ಬಿಬಿಎಂಪಿಗೆ ಕಟ್ಟುನಿಟ್ಟಾಗಿ ನಿರ್ದೇಶನ ನೀಡಿರುವುದು ಆದೇಶದಿಂದ ತಿಳಿದು ಬಂದಿದೆ.
ಅಲ್ಲದೇ ಈ ಪ್ರಸ್ತಾವನೆಯಿಂದ ಬಿಬಿಎಂಪಿಗೆ ನಷ್ಟ ಉಂಟಾಗಿದ್ದಲ್ಲಿ ಅದನ್ನು ಸರ್ಕಾರವು ಭರಿಸುವುದಿಲ್ಲವೆಂದೂ ಇದೇ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ತೆರಿಗೆದಾರರು ಸಲ್ಲಿಸಿದ್ದ ಘೋಷಣೆಗಳನ್ನು ಪರಿಶೀಲಿಸಲು ತಂತ್ರಾಂಶದಲ್ಲಿ ವಲಯ ವರ್ಗೀಕರಣದ ವಿವರಗಳನ್ನು ತಪ್ಪಾಗಿ ನಮೂದಿಸಲಾಗಿತ್ತು. ಸುಮಾರು 78,254 ಪ್ರಕರಣಗಳಲ್ಲಿ ವಲಯ ವರ್ಗೀಕರಣವು ತಪ್ಪಾಗಿ ನಮೂದಾಗಿತ್ತು. ಕಾಯ್ದೆ ಅನ್ವಯ ವಲಯ ವರ್ಗೀಕರಣವನ್ನು ತಪ್ಪಾಗಿ ನಮೂದಿಸಿ ಆಸ್ತಿ ತೆರಿಗೆ ಪರಿಷ್ಕರಿಸಿ ಕಾಯ್ದೆ ಅನ್ವಯ ವ್ಯತ್ಯಾಸದ ಮೊತ್ತವನ್ನು ದುಪ್ಪಟ್ಟು ದಂಡ ಮತ್ತು ಬಡ್ಡಿಯೊಂದಿಗೆ ಪಾವತಿಸಲು 78,254 ನೋಟೀಸ್‌ಗಳನ್ನು ಸಿದ್ಧಪಡಿಸಿತ್ತು. ಈ ಪೈಕಿ 11,725 ನೋಟೀಸ್‌ಗಳನ್ನು ಜಾರಿ ಮಾಡಿತ್ತು ಎಂಬುದು ಆದೇಶದಿಂದ ತಿಳಿದು ಬಂದಿದೆ.
ಈ ಪೈಕಿ ಈಗಾಗಲೇ 7,891 ನೋಟೀಸ್‌ಗಳಿಗೆ ತೆರಿಗೆದಾರರು 13,33,12,978 ರು.ಗಳನ್ನು ಆಸ್ತಿ ತೆರಿಗೆ ಪಾವತಿಸಿದ್ದಾರೆ. ಈ 78,524 ಪ್ರಕರಣಗಳಲ್ಲಿ 240.86 ಕೋಟಿ ರು. ವ್ಯತ್ಯಾಸದ ಮೊತ್ತ ಎಂದು ಲೆಕ್ಕ ಹಾಕಲಾಗಿತ್ತು. 7,891 ಪ್ರಕರಣಗಳಲ್ಲಿ ತೆರಿಗೆದಾರರು 7,08,95,205.76 ರು.ಗಳ ದಂಡ ಪಾವತಿಸಬೇಕಿತ್ತು.
‘ನಗರಪಾಲಿಕೆಯು 5 ವರ್ಷಗಳ ಕಾಲ ವಿಳಂಬ ಮಾಡಿ ಪ್ರಸ್ತುತ ತೆರಿಗೆ ಪರಿಷ್ಕರಿಸಿರುವುದಲ್ಲದೇ ವ್ಯತ್ಯಾಸದ ಮೊತ್ತಕ್ಕೆ ದುಪ್ಪಟ್ಟು ದಂಡ ಮತ್ತು ಬಡ್ಡಿಯನ್ನು ಪಾವತಿಸುವಂತೆ ತಿಳಿಸಿ ನೋಟೀಸ್ ಜಾರಿ ಮಾಡಿರುವುದು ಸಮಂಜಸವಾಗಿರುವುದಿಲ್ಲ. ಮತ್ತು ಪ್ರಸ್ತುತ ಪ್ರಕರಣದಲ್ಲಿ ನಗರ ಪಾಲಿಕೆಯಿಂದ ಕಾಲ ವಿಳಂಬವಾಗಿರುವುದರಿಂದ ದುಪ್ಪಟ್ಟು ದಂಡ ಮತ್ತು ಬಡ್ಡಿಯನ್ನು ಮನ್ನಾ ಮಾಡುವಂತೆ ಕೋರಿರುತ್ತಾರೆ,’ ಎಂದು ಆದೇಶದಲ್ಲಿ ವಿವರಿಸಲಾಗಿದೆ.