ಬೆಂಗಳೂರು: ರಾಜ್ಯ ಸರ್ಕಾರವು ಹೊಸದಾಗಿ ರಚಿಸಿರುವ ಕರ್ನಾಟಕ ರಾಜ್ಯ ರಸ್ತೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹುದ್ದೆಗೆ ಡಾ ಕೆ ಎಸ್ ಕೃಷ್ಣಾರೆಡ್ಡಿ ಅವರನ್ನೇ ನೇಮಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದ್ದರು ಎಂಬುದು ಇದೀಗ ಬಹಿರಂಗವಾಗಿದೆ.
ಪ್ರಾಧಿಕಾರಕ್ಕೆ ಲೋಕೋಪಯೋಗಿ ಇಲಾಖೆಯ ನಿವೃತ್ತ ಕಾರ್ಯದರ್ಶಿ ಡಾ ಕೆ ಎಸ್ ಕೃಷ್ಣಾರೆಡ್ಡಿ ಅವರನ್ನು ನೇಮಕ ಮಾಡಿರುವುದಕ್ಕೆ ಆಕ್ಷೇಪಗಳು ವ್ಯಕ್ತವಾಗಿರುವ ಬೆನ್ನ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ನೇರವಾಗಿ ಈ ಸಂಬಂಧ ಮುಖ್ಯ ಕಾರ್ಯದರ್ಶಿಳೀಗೆ ಸೂಚಿಸಿರುವುದು ಮುನ್ನೆಲೆಗೆ ಬಂದಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2023ರ ಆಗಸ್ಟ್ 7ರಂದು ಮುಖ್ಯಕಾರ್ಯದರ್ಶಿಗಳಿಗೆ ಟಿಪ್ಪಣಿ ಹೊರಡಿಸಿದ್ದಾರೆ. ಇದರ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
‘ಲೋಕೋಪಯೋಗಿ ಇಲಾಖೆಯ ನಿವೃತ್ತ ಕಾರ್ಯದರ್ಶಿ/ಪ್ರಧಾನ ಇಂಜಿನಿಯರ್ ಕರ್ನಾಟಕ ಡಾ ಕೆ ಎಸ್ ಕೃಷ್ಣಾರೆಡ್ಡಿ ಅವರನ್ನು ರಾಜ್ಯ ರಸ್ತೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರಕ್ಕೆ (ಸರ್ಕಾರದ ಆದೇಶ ಸಂಖ್ಯೆ ಲೋಇ28ಇಎಪಿ 2023 ದಿನಾಂಕ 31.07.2023) ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಓ) ಹುದ್ದೆಗೆ ಕೂಡಲೇ ಜಾರಿಗೆ ಬರುವಂತೆ ನೇಮಿಸಲು ಆದೇಶಿಸಿದೆ. ಇವರಿಗೆ ಸರ್ಕಾರದ ಪ್ರಧಾನ ಕಾರ್ಯದರ್ಶಿಯವರ ಹುದ್ದೆಗೆ ಒದಗಿಸಲಾಗುವ ಸೌಲಭ್ಯಗಳನ್ನು ಒದಗಿಸಲು ಸೂಚಿಸಿದೆ,’ ಎಂದು ಮುಖ್ಯ ಕಾರ್ಯದರ್ಶಿಗಳಿಗೆ ಸೂಚಿಸಿರುವುದು ಟಿಪ್ಪಣಿಯಿಂದ ಗೊತ್ತಾಗಿದೆ.
ಕೃಷ್ಣಾರೆಡ್ಡಿ ಅವರನ್ನು ಸಿಇಒ ಆಗಿ ನೇಮಕ ಮಾಡಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ರಾಜ್ಯಪಾಲರಿಗೆ ಈಗಾಗಲೇ ಮರಿಲಿಂಗ ಗೌಡ ಮಾಲಿ ಪಾಟೀಲ್ ಎಂಬುವರು ದೂರು ಸಲ್ಲಿಸಿದ್ದಾರೆ.
ಕೃಷ್ಣಾರೆಡ್ಡಿಯವರು ಲೋಕೋಪಯೋಗಿ ಇಲಾಖೆಯಲ್ಲಿದ್ದಾಗ ಕೆಟಿಟಿಪಿ ಕಾಯ್ದೆ ಉಲ್ಲಂಘನೆ ಮಾಡಿ 4ಜಿ ನಿಯಮದಡಿ ಕಾರ್ಯಲೋಪ ಎಸಗಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿದ್ದಾರೆ. ಅಲ್ಲದೇ ಈಗಾಗಲೇ ರಾಜ್ಯ ರಸ್ತೆ ಅಭಿವೃದ್ಧಿ ನಿಗಮ ನಿಯಮಿತವು ಲೋಕೋಯೋಗಿ ಇಲಾಖೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ.
ಈ ನಿಗಮದಲ್ಲಿ ಇಬ್ಬರು ಐಎಎಸ್ ಅಧಿಕಾರಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಜತೆಗೆ ಮುಖ್ಯ ಇಂಜಿನಿಯರ್, ಸೂಪರಿಂಟೆಂಡೆಂಟ್ ಇಂಜಿನಿಯರ್, ಹಲವು ಕಾರ್ಯಪಾಲಕ ಇಂಜಿನಿಯರ್‌ಗಳಿದ್ದಾರೆ. ಇವರೆಲ್ಲರಿಗೂ ಸರ್ಕಾರದ ಸೌಲಭ್ಯ ನೀಡಲಾಗುತ್ತಿದೆ. ಇವರೆಲ್ಲರೂ ರಸ್ತೆಯ ಕುರಿತ ಕಾರ್ಯಭಾರ ಮಾಡುತ್ತಿರುವಾಗ ಮತ್ತೊಂದು ಪ್ರಾಧಿಕಾರ ರಚನೆ ಮತ್ತು ಸಿಇಒ ನೇಮಕದ ಔಚಿತ್ಯವೇನು ಎಂದು ಪತ್ರದಲ್ಲಿ ಪ್ರಶ್ನಿಸಿದ್ದರು.
ರಾಜ್ಯದಲ್ಲಿ ರಸ್ತೆ ಯೋಜನೆಗಳಿಗೆ ಹೆಚ್ಚಿನ ಖಾಸಗಿ ಹೂಡಿಕೆಗಳನ್ನು ಆದ್ಯತೆ ನೀಡಲು ಮತ್ತು ಆಕರ್ಷಿಸಲು ‘ಕರ್ನಾಟಕ ರಾಜ್ಯ ರಸ್ತೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ’ವನ್ನು ಸ್ಥಾಪಿಸಲು ಸಚಿವ ಸಂಪುಟವು ಅನುಮೋದಿಸಿರುವುದನ್ನು ಸ್ಮರಿಸಬಹುದು.
ಕರ್ನಾಟಕ ರಾಜ್ಯದಲ್ಲಿ ಸಂಭವಿಸುತ್ತಿರುವ ರಸ್ತೆ ಅಪಘಾತಗಳನ್ನು, ಸಾವು ನೋವುಗಳನ್ನು ನಿಯಂತ್ರಿಸಿ, ಅವುಗಳಿಂದುಂಟಾಗುವ ಸಾಮಾಜಿಕ ಮತ್ತು ಆರ್ಥಿಕ ಸುಭದ್ರತೆಯನ್ನು ಕಾಪಾಡುವ ನಿಟ್ಟಿನಲ್ಲಿ ಈಗಾಗಲೇ ಕರ್ನಾಟಕ ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರವು ಸ್ಥಾಪಿತವಾಗಿದೆ.
ಈ ಪ್ರಾಧಿಕಾರವು ರಸ್ತೆ ಸುರಕ್ಷತಾ ಕ್ರಮಗಳನ್ನು ನಿರಂತರವಾಗಿ ವಿವಿಧ ಆಯಾಮಗಳಲ್ಲಿ ಅಂದರೆ ವಾಹನ ಮತ್ತು ರಸ್ತೆ ಇಂಜಿನಿಯರಿಂಗ್, ಅಪರಾಧ ಉಲ್ಲಂಘನಾ ಪ್ರಕರಣಗಳ ವಿರುದ್ಧ ಪ್ರವರ್ತನ ಚಟುವಟಿಕೆಗಳು, ರಸ್ತೆ ಸುರಕ್ಷತೆಯ ಬಗ್ಗೆ ಜಾಗೃತಿ ಮತ್ತು ಶಿಕ್ಷಣ, ರಸ್ತೆ ಅಪಘಾತಗಳು ಸಂಭವಿಸಿದ ಸಂದರ್ಭಗಳಲ್ಲಿ ತುರ್ತು ಚಿಕಿತ್ಸೆಯ ಲಭ್ಯತೆ & ನಿರ್ವಹಣೆ ಇತ್ಯಾದಿ ಆಯಾಮಗಳಲ್ಲಿ ವೈಜ್ಞಾನಿಕ ತಳಹದಿಯಲ್ಲಿ ವ್ಯವಸ್ಥಿತ ರೂಪದಲ್ಲಿ ಅನುಷ್ಠಾನಗೊಳಿಸುತ್ತದೆ.
ಪೊಲೀಸ್, ಸಾರಿಗೆ, ಶಿಕ್ಷಣ, ಆರೋಗ್ಯ, ಲೋಕೋಪಯೋಗಿ, ಪಂಚಾಯತ್ ರಾಜ್, ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹಾಗೂ ಇತರೆ ಪಾಲುದಾರಿಕೆ ಇಲಾಖೆಗಳೊಂದಿಗೆ ನಿರಂತರವಾಗಿ ಸಮನ್ವಯವನ್ನು ಸಾಧಿಸಿ ರಸ್ತೆ ಸುರಕ್ಷತಾ ಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಮೂಲಕ ದೇಶದ ಹಾಗೂ ರಾಜ್ಯದ ಸಾಮಾಜಿಕ ಹಾಗೂ ಆರ್ಥಿಕ ಸುಭದ್ರತೆಯನ್ನು ಕಾಪಾಡುವ ಗುರುತರ ಜವಾಬ್ದಾರಿಯನ್ನು ಈ ಪ್ರಾಧಿಕಾರವು ಹೊಂದಿದೆ.