ಕೃಷಿ ಉತ್ಪನ್ನಗಳ ಸಂಗ್ರಹಣೆ ಮೇಲಿನ ನಿರ್ಬಂಧ ತೆರವಿನ ಹಿಂದೆ ಅದಾನಿ ಸಮೂಹ ಲಾಬಿ

photo credit-scroll

ಹೊಸ ದಿಲ್ಲಿ: ನರೇಂದ್ರ ಮೋದಿ ಸರ್ಕಾರವು 2020ರಲ್ಲಿ ದೋಷಪೂರಿತ ಕೃಷಿ ಕಾನೂನುಗಳನ್ನು ಪರಿಚಯಿಸಿತ್ತು. ಅವು ಅಕ್ಕಿ, ಗೋಧಿ ಮತ್ತು ಬೇಳೆಕಾಳುಗಳಂಥ ಆಹಾರೋತ್ಪನ್ನಗಳನ್ನು ಸಂಗ್ರಹಣೆ ಮಾಡಲು ಕಾರ್ಪೊರೇಟ್ ಕಂಪನಿಗಳಿಗೆ ಅವಕಾಶ ನೀಡಿದ್ದವು. ಇದರೊಂದಿಗೆ ಕೃಷಿ ಉತ್ಪನ್ನಗಳನ್ನು ನಿಯಂತ್ರಿತ ಮಾರುಕಟ್ಟೆಗಳಿಂದ ಹೊರಗೆ ಮಾರಾಟ ಮಾಡುವ ಅವಕಾಶವನ್ನು ನೀಡಿದ್ದವು. ಇದರಿಂದ ಮೂಲಬೆಲೆಯ ಖಾತ್ರಿ ಇಲ್ಲವಾಗಿ, ಬೃಹತ್ ಮಟ್ಟದ ಕಾರ್ಪೊರೇಟ್ ಕೃಷಿಗೆ ನೆಲವನ್ನು ಹದಗೊಳಿಸಿದ್ದವು.

 

 

 

ಇದರ ವಿರುದ್ಧ ರೈತರ ಆಕ್ರೋಶ ಸ್ಫೋಟಗೊಂಡಿತು. ಸಹಸ್ರಾರು ರೈತರು ದಿಲ್ಲಿಯ ಹೊರವಲಯದಲ್ಲಿ ಸೇರುವ ಮೂಲಕ ಒಂದು ವರ್ಷ ಕಾಲ ಉಷ್ಣ ಮಾರುತಗಳು, ಶೀತ ಹಾಗೂ ಕೊರೊನಾ ವೈರಸ್ ಗೆ ಎದೆಗೊಟ್ಟರು. ಈ ಕಾನೂನುಗಳು ಆತ್ಮೀಯ ಗೆಳೆಯನಿಗೆ ಲಾಭ ಮಾಡಿಕೊಟ್ಟಿವೆ ಎಂದು ರೈತರು ಭಾವಿಸಿದ್ದರು. ನರೇಂದ್ರ ಮೋದಿಯ ಬೆಳವಣಿಗೆಯೊಂದಿಗೆ ಅದಾನಿ ಸಮೂಹ ತನ್ನ ಅದೃಷ್ಟವನ್ನು ಜೋಡಿಸಿಕೊಂಡಿತ್ತು. ಇದಲ್ಲದೆ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಸರ್ಕಾರದೊಂದಿಗೆ ನಿಕಟ ಸಂಬಂಧ ಹೊಂದಿದೆ ಎಂಬ ಆರೋಪಕ್ಕೂ ಗುರಿಯಾಗಿತ್ತು. ಕೃಷಿ ಕಾನೂನುಗಳಿಂದ ಈ ಸಮೂಹವೇ ಹೆಚ್ಚು ಲಾಭ ಪಡೆಯಲಿದೆ ಎಂಬ ಟೀಕೆಗೂ ಈಡಾಗಿತ್ತು.

 

 

 

ಈ ಹಿಂದೆ ಅಪ್ರಕಟವಾಗಿದ್ದ ದಾಖಲೆಗಳು ಇದೀಗ The Reporters’ Collectiveಗೆ ಲಭ್ಯವಾಗಿದ್ದು, ಏಪ್ರಿಲ್, 2018ರಲ್ಲಿ ಅದಾನಿ ಸಮೂಹವು ಪ್ರಜ್ಞಾಪೂರ್ವಕವಾಗಿ ಕೃಷಿ ಉತ್ಪನ್ನಗಳ ಸಂಗ್ರಹಣೆಯ ಮೇಲಿದ್ದ ನಿರ್ಬಂಧವನ್ನು ತೆಗೆದು ಹಾಕುವಂತೆ ಸರ್ಕಾರದೊಂದಿಗೆ ಲಾಬಿ ಮಾಡಿರುವುದು ಬಯಲಾಗಿದೆ. ಕೇಂದ್ರ ಸರ್ಕಾರದ ಮೂರು ಕೃಷಿ ಕಾನೂನುಗಳ ಪೈಕಿ ಎರಡು ವರ್ಷಗಳ ನಂತರ ಜಾರಿಗೆ ಬಂದಿದ್ದ ಒಂದು ಕಾನೂನು ಅದನ್ನೇ ಮಾಡಿತ್ತು.

 

 

 

ಸುಮಾರು ಎರಡೂವರೆ ವರ್ಷಗಳ ಹಿಂದೆ ಕೃಷಿ ಕಾನೂನು ಸುಗ್ರೀವಾಜ್ಞೆ ಜಾರಿಯಾಗುವುದಕ್ಕೂ ಮುನ್ನ ರೈತರ ಆದಾಯ ದ್ವಿಗುಣಗೊಳಿಸುವ ಗುರಿ ಹೊಂದಿದ್ದ ನೀತಿ ಆಯೋಗವು ರಚಿಸಿದ್ದ ಕಾರ್ಯಪಡೆಯ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ್ದ ಅದಾನಿ ಸಮೂಹದ ಪ್ರತಿನಿಧಿಯು ಹೀಗೆ ಹೇಳಿದ್ದರು: “ಅಗತ್ಯ ವಸ್ತುಗಳ ಕಾಯ್ದೆಯು ಉದ್ಯಮಗಳಿಗೆ/ಉದ್ಯಮಿಗಳಿಗೆ ತೊಡಕಾಗಿದೆ ಎಂಬುದು ನಿರೂಪಿತವಾಗುತ್ತಿದೆ” ಎಂದು ಹೇಳಿದ್ದರು.

 

 

 

ಕಾರ್ಪೊರೇಟ್ ಕಂಪನಿಗಳು ಕೃಷಿ ಉತ್ಪನ್ನಗಳನ್ನು ಸಂಗ್ರಹಿಸಲು ಮಿತಿ ಹೇರಿದ್ದ ಅಗತ್ಯ ವಸ್ತುಗಳ ಕಾಯ್ದೆಯನ್ನು ಹಿಂಪಡೆಯಬೇಕು ಎಂದು ಅದಾನಿ ಸಮೂಹವು ಅಧಿಕೃತವಾಗಿ ವಕೀಲಿಕೆ ನಡೆಸಿದ ಮೊದಲ ದಾಖಲಿತ ನಿದರ್ಶನ ಇದಾಗಿತ್ತು. ಇದಾದ ನಂತರ ಅಗತ್ಯ ವಸ್ತುಗಳ ಕಾಯ್ದೆಯನ್ನು ಹಿಂಪಡೆದ ನಂತರ, ಕೃಷಿ ಉದ್ಯಮದಲ್ಲಿರುವ ಅದಾನಿ ಸಮೂಹದಂಥ ಕಾರ್ಪೊರೇಟ್ ಕಂಪನಿಗಳಿಗೆ ಕೃಷಿ ಉತ್ಪನ್ನಗಳನ್ನು ರೈತರ ವೆಚ್ಚದಲ್ಲಿ ಅನಿರ್ಬಂಧಿತವಾಗಿ ಸಂಗ್ರಹಿಸುವ ಅವಕಾಶ ನೀಡುತ್ತದೆ ಎಂದು ಟೀಕಾಕಾರರು ವಾದಿಸಿದ್ದರು.

 

 

 

ನಮ್ಮ ತನಿಖಾ ವರದಿ ಸರಣಿಯ ಮೊದಲ ಭಾಗದಲ್ಲಿ ರೈತರ ಜೀವನವನ್ನು ಸುಧಾರಿಸಲು ಹೇಗೆ ಕಾರ್ಯಪಡೆಯು ತರಾತುರಿಯಲ್ಲಿ ಬಹುತೇಕ ಉದ್ಯಮಿಗಳೊಂದಿಗೇ ಸಮಾಲೋಚನೆ ನಡೆಸಿತ್ತು ಎಂಬುದನ್ನು ನಾವು ಬಯಲು ಮಾಡಿದ್ದೆವು. ಸರಣಿಯ ಈ ಅಂತಿಮ ಭಾಗದಲ್ಲಿ ನಾವು ಮುಚ್ಚಿದ ಬಾಗಿಲುಗಳ ಹಿಂದೆ ಏನೆಲ್ಲ ಗೋಪ್ಯ ಮಾತುಕತೆಗಳು ನಡೆದಿದ್ದವು ಹಾಗೂ ಕಾರ್ಪೊರೇಟ್ ಕಂಪನಿಗಳು ತಮ್ಮ ಪ್ರಭಾವವನ್ನು ಹೇಗೆ ಬಹಿರಂಗಪಡಿಸಿದ್ದವು ಮತ್ತು ಹೇಗೆ ತನ್ನ ಉದ್ದೇಶವನ್ನು ಸರ್ಕಾರ ತಿಳಿಸಿತು ಎಂಬ ಸಂಗತಿಯನ್ನು ಬಯಲಿಗೆಳೆಯುತ್ತಿದ್ದೇವೆ.

 

 

 

2018ರಲ್ಲಿ ಬಿಜೆಪಿಗೆ ನಿಕಟವಾಗಿರುವ ಅನಿವಾಸಿ ಭಾರತೀಯ ಸಾಫ್ಟ್ ವೇರ್ ಉದ್ಯಮಿಯೊಬ್ಬರ ಸಲಹೆಯನ್ನು ಆಧರಿಸಿ ರೈತರ ಆದಾಯವನ್ನು ದ್ವಿಗುಣಗೊಳಿಸಲು ಕಾರ್ಪೊರೇಟ್ ಸಂಸ್ಥೆಯ ಪ್ರತಿನಿಧಿಗಳನ್ನು ಹೊಂದಿದ್ದ ಕಾರ್ಯಪಡೆಯನ್ನು ನೀತಿ ಆಯೋಗ ರಚಿಸಿತ್ತು. (ಭಾಗ-1 ಅನ್ನು ಓದಿ)

 

ಕೃಷಿ ಕಾನೂನು, ರೈತರ ಆದಾಯ ದ್ವಿಗುಣ ನೀತಿ; ಬಿಜೆಪಿ ಸ್ನೇಹಿ ಎನ್‌ಆರ್‌ಐ ಉದ್ಯಮಿಯಿಂದ ಪ್ರಸ್ತಾವ ಬಹಿರಂಗ

 

 

 

ಈ ಕಾರ್ಯಪಡೆಯು 2016ರಿಂದ ಜಾರಿಯಲ್ಲಿರುವ ರೈತರ ಆದಾಯವನ್ನು ದ್ವಿಗುಣಗೊಳಿಸುವ ಗುರಿ ಹೊಂದಿರುವ ಅಂತರ ಸಚಿವಾಲಯ ಸಮಿತಿಯ ಕಡ್ಡಾಯ ಪರವಾನಗಿಯನ್ನು ರೈತರ ಆದಾಯವನ್ನು ದ್ವಿಗುಣಗೊಳಿಸುವ ತಮ್ಮ ಕನಸನ್ನು ಪ್ರಧಾನಿ ಮೋದಿ ಪ್ರಕಟಿಸಿದ ಎರಡು ತಿಂಗಳ ನಂತರ ಭಾಗಶಃ ಕಿತ್ತುಕೊಂಡಿತು.

 

 

 

ಅಂತರ ಸಚಿವಾಲಯ ಸಮಿತಿಯು ವಿಭಿನ್ನ ಹೋರಾಟಗಾರರ ಗುಂಪು, ಅರ್ಥಶಾಸ್ತ್ರಜ್ಞರು ಹಾಗೂ ಉದ್ಯಮ ನಾಯಕರೊಂದಿಗೆ ಸಮಾಲೋಚಿಸಿ, ಭಾರತದ ಕೃಷಿ ವಲಯವನ್ನು ಬಾಧಿಸುತ್ತಿರುವ ಸಮಸ್ಯೆಗಳನ್ನು ವಿಶ್ಲೇಷಿಸಿದ್ದ 14 ಸಂಪುಟಗಳ ವರದಿಯನ್ನು ಬಿಡುಗಡೆ ಮಾಡಿತ್ತು ಹಾಗೂ ರೈತರ ಆದಾಯವನ್ನು ವೃದ್ಧಿಸುವ ಮಾರ್ಗಗಳ ಕುರಿತು ಶಿಫಾರಸು ಮಾಡಿತ್ತು. ಆದರೆ, ಕಾರ್ಯಪಡೆಯು ಅದಾನಿ ಸಮೂಹ, ಪತಂಜಲಿ ಆಯುರ್ವೇದ, ಮಹೀಂದ್ರಾ ಸಮೂಹ ಹಾಗೂ ಬಿಗ್ ಬ್ಯಾಸ್ಕೆಟ್ ನಂತಹ ಬೆರಳೆಣಿಕೆಯ ಕಾರ್ಪೊರೇಟ್ ಕಂಪನಿಗಳೊಂದಿಗೆ ಮಾತ್ರ ಸಮಾಲೋಚನೆ ನಡೆಸಿತ್ತು. ಈ ಎರಡೂ ಸಮಿತಿಗಳ ನೇತೃತ್ವವನ್ನು ಸೋಜಿಗವೆಂಬಂತೆ ಅಶೋಕ್ ದಳವಾಯಿ ಎಂಬ ಓರ್ವ ವ್ಯಕ್ತಿಯೇ ವಹಿಸಿದ್ದರು. ಈ ಕುರಿತು The Collective ದಳವಾಯಿ ಅವರಿಗೆ ವಿವರವಾದ ಪ್ರಶ್ನೆಗಳನ್ನು ಕಳಿಸಿದರೂ, ಪುನರಾವರ್ತಿತ ನೆನಪೋಲೆಗಳ ಹೊರತಾಗಿಯೂ ಅವರು ಪ್ರತಿಕ್ರಿಯಿಸಲಿಲ್ಲ.

 

 

ಈ ಹಿಂದಿನ ಸಮಿತಿ ಸಲ್ಲಿಸಿದ್ದ ವರದಿಗಿಂತ ಭಿನ್ನವಾಗಿದ್ದ ಉತ್ತರಗಳನ್ನು ಪಡೆಯಲು ಉದ್ದೇಶಪೂರ್ವಕವಾಗಿಯೇ ಕಾರ್ಯಪಡೆಯನ್ನು ರಚಿಸಲಾಗಿತ್ತು ಎಂದು ಹೆಸರೇಳಲಿಚ್ಛಿಸದ ಕಾರ್ಯಪಡೆಯ ಸದಸ್ಯರೊಬ್ಬರು ಬಹಿರಂಗ ಪಡಿಸಿದ್ದಾರೆ.

 

 

“ರೈತರ ಆದಾಯವನ್ನು ದ್ವಿಗುಣಗೊಳಿಸುವ ಸಮಿತಿಯು ಸರ್ಕಾರಿ ಪರಿಹಾರದೊಂದಿಗೆ ಕಂತೆ ಕಂತೆ ವರದಿಗಳೊಂದಿಗೆ ಬಂದಿತ್ತು. ಆದರೆ, ನಾವು ಅದಕ್ಕಿಂತ ಭಿನ್ನವಾಗಿ ಮಾಡಲು ಬಯಸಿದ್ದೆವು. ನಾವು ಮಾರುಕಟ್ಟೆ ಚಾಲಿತ ಪರಿಹಾರದತ್ತ ಗಮನ ಹರಿಸಿದ್ದೆವು” ಎಂದು ಕಾರ್ಯಪಡೆಯ ಸದಸ್ಯರೊಬ್ಬರು The Collective ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

 

 

ಏಪ್ರಿಲ್ 3, 2018ರಲ್ಲಿ ಈ ಕಾರ್ಯಪಡೆಯು ಖಾಸಗಿ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಮಾಲೋಚನೆ ನಡೆಸಿತ್ತು. ಒಬ್ಬರಾದ ನಂತರ ಒಬ್ಬರು ತಮಗೆ ಅನುಕೂಲಕರವಾದ ಸಲಹೆಗಳನ್ನು ನೀಡಿದ್ದರು.

 

 

 

ಉದಾಹರಣೆಗೆ, ಕೃಷಿ ಸೇವೆ ಮಾದರಿ ಎಂದು ಕರೆಸಿಕೊಳ್ಳುವ ಟ್ರ್ಯಾಕ್ಟರ್ ಬಾಡಿಗೆ ಸೇವೆಯನ್ನು ಪ್ರತಿಪಾದಿಸಿದ್ದ ಮಹೀಂದ್ರಾ & ಮಹೀಂದ್ರಾ ಕಂಪನಿಯ ‘ಅಬ್‍ ಟ್ರ್ಯಾಕ್ಟರ್ ಕಾಲ್ ಕರೊ (ಈಗ ಟ್ಯಾಕ್ಟರ್ ಗೆ ಕರೆ ಮಾಡಿ) ಸೇವೆ ಕುರಿತು ಅದು ಮಾತಾಡಿತ್ತು. ತಮ್ಮ ಕಂಪನಿಯು ಅಧಿಕ ಇಳುವರಿಯ ಬೀಜಗಳನ್ನು ಮರಳಿ ಖರೀದಿಸುವ ಖಾತ್ರಿಯೊಂದಿಗೆ ರೈತರಿಗೆ ಒದಗಿಸಲಿದೆ ಎಂದು ಪತಂಜಲಿ ಆಯುರ್ವೇದ ಕಂಪನಿಯ ಪ್ರತಿನಿಧಿ ಹೇಳಿದ್ದರು.

 

 

“ರೈತರು ಹಾಗೂ ಗ್ರಾಹಕರ ನಡುವೆ ನೇರ ಸಂಪರ್ಕ ಸಾಧಿಸುವ” ರೈತರೊಂದಿಗೆ ಕರಾರು ಪತ್ರಕ್ಕೆ ಸಹಿ ಹಾಕುವ ಪ್ರಸ್ತಾವವನ್ನೂ ಅದು ಮಂಡಿಸಿತ್ತು. ತನ್ನ ಸುನೇಹ್ರಾ ಕಾಲ್ (ಸುವರ್ಣ ಕಾಲ) ಯೋಜನೆಯ ಮೂಲಕ ತಾನು ಹೇಗೆ ಗ್ರಾಮೀಣ ಜೀವನವನ್ನು ಬಲಿಷ್ಠಗೊಳಿಸುತ್ತಿದ್ದೇನೆ ಎಂದು ಐಟಿಸಿ ಕಂಪನಿಯು ವಿವರಿಸಿತ್ತು. ಆದರೆ, ತಮ್ಮ ಮಾದರಿಗಳಿಂದ ರೈತರ ಆದಾಯಗಳು ಹೇಗೆ ಗಮನಾರ್ಹವಾಗಿ ವೃದ್ಧಿಗೊಂಡಿವೆ ಎಂಬ ಕುರಿತು ಸಭೆಯಲ್ಲಿ ಭಾಗವಹಿಸಿದ್ದ ಯಾವ ಕಂಪನಿಯೂ ದತ್ತಾಂಶ ಹಂಚಿಕೊಳ್ಳಲಿಲ್ಲ.

 

 

 

ರೈತರಿಗೆ ಮಾಹಿತಿ ಪ್ರಸಾರ ಮಾಡುವ ಉತ್ಕೃಷ್ಟತಾ ಕೇಂದ್ರವನ್ನು ಗುಜರಾತ್ ನಲ್ಲಿ ಸ್ಥಾಪಿಸುವ ಕುರಿತು ಅದಾನಿ ಸಮೂಹ ಮಾತನಾಡಿತು. ಈ ಕೇಂದ್ರದ ಸ್ಥಾಪನೆಯ ವೆಚ್ಚದ ಶೇ. 60ರಷ್ಟು ಮೊತ್ತವು ಸರ್ಕಾರದ ಖಜಾನೆಯಿಂದ ಬರಬೇಕು ಎಂದು ಈ ಪ್ರಸ್ತಾವದಲ್ಲಿ ಪ್ರತಿಪಾದಿಸಲಾಗಿತ್ತು.

 

 

 

ಕಾರ್ಯಪಡೆ ಸಮಾಲೋಚನೆ ನಡೆಸಿದ್ದ ಹತ್ತು ಕಾರ್ಪೊರೇಟ್ ಕಂಪನಿಗಳ ಪೈಕಿ ಒಂಬತ್ತು ಕಾರ್ಪೊರೇಟ್ ಕಂಪನಿಗಳು ನೀತಿ ನಿರೂಪಣೆ ಮಾದರಿಗಳನ್ನು ಒದಗಿಸಲು ಕೋರಿದ್ದವು. ಈ ಒಂಬತ್ತು ಕಾರ್ಪೊರೇಟ್ ಕಂಪನಿಗಳ ಪೈಕಿ ನಾಲ್ಕು ಕಾರ್ಪೊರೇಟ್ ಕಂಪನಿಗಳು ಸರ್ಕಾರದಿಂದ ಆರ್ಥಿಕ ನೆರವನ್ನು ಕೋರಿದ್ದವು.

 

 

 

ಅದೇ ಸಭೆಯಲ್ಲಿ ಅದಾನಿ ಆಗ್ರೋ ಕಂಪನಿಯು, ತಾವು ಹೇಗೆ ಕೃಷಿ ಉದ್ಯಮದಲ್ಲಿ ತೊಡಕುಗಳನ್ನು ಎದುರಿಸುತ್ತಿದ್ದೇವೆ ಎಂಬುದರ ಕುರಿತು ಮಾತನಾಡಿತ್ತು.

 

 

 

“ಅಗತ್ಯ ವಸ್ತುಗಳ ಕಾಯ್ದೆಯು ಉದ್ಯಮಗಳಿಗೆ/ಉದ್ಯಮಿಗಳಿಗೆ ಆ ಮೂಲಕ ರೈತರಿಗೆ ತೊಡಕಾಗಿದೆ ಎಂಬುದು ನಿರೂಪಿತವಾಗಿದೆ” ಎಂದು ಅದಾನಿ ಕಂಪನಿಯ ಪ್ರತಿನಿಧಿ ಅತುಲ್ ಚತುರ್ವೇದಿ ಸಭೆಯಲ್ಲಿ ಪ್ರತಿಪಾದಿಸಿದ್ದರು.

 

 

 

ಕಂಪನಿಗೆ ಒಳಿತಾದರೆ ರೈತರಿಗೂ ಒಳಿತಾಗುತ್ತದೆ ಎಂಬುದು ಈ ಮಾತಿನಲ್ಲಿ ಅಂತರ್ಗತವಾಗಿದ್ದ ಸಂದೇಶವಾಗಿತ್ತು. ಆದರೆ, ಕಾರ್ಪೊರೇಟ್ ಕಂಪನಿಗಳ ಪರವಾಗಿ ಕೇಂದ್ರ ಸರ್ಕಾರವು ಅಗತ್ಯ ವಸ್ತುಗಳ ಕಾಯ್ದೆಯನ್ನು ತಿದ್ದುಪಡಿ ಮಾಡಿದ ನಂತರ ರೈತರು ಆ ನಡೆಯ ವಿರುದ್ಧ ಪ್ರತಿಭಟಿಸಿದ್ದರು.

 

 

 

ದಳವಾಯಿ ನೇತೃತ್ವದ ರೈತರ ಆದಾಯವನ್ನು ದ್ವಿಗುಣಗೊಳಿಸುವ ಸಮಿತಿ ಕೂಡಾ ಸಂಗ್ರಹಣಾ ಮಿತಿಯನ್ನು ಉದಾರೀಕರಣಗೊಳಿಸಬೇಕು ಎಂದು ಶಿಫಾರಸು ಮಾಡಿತ್ತಾದರೂ, ಅದು ರೈತರಿಗೆ ರಕ್ಷಣೆಯನ್ನೂ ಒದಗಿಸಿತ್ತು. “ರೈತರಿಂದ ನೇರವಾಗಿ ಕನಿಷ್ಠ ಬೆಂಬಲ ಬೆಲೆಗೆ ಆಹಾರೋತ್ಪನ್ನಗಳನ್ನು ಖರೀದಿಸುವ ಖಾಸಗಿ ಸಂಸ್ಥೆಗಳಿಗೆ ಷರತ್ತುಬದ್ಧ ಸಂಗ್ರಹಣಾ ಮಿತಿ ವಿನಾಯಿತಿಯನ್ನು ಒದಗಿಸಬೇಕು. ಇದರೊಂದಿಗೆ ವ್ಯತ್ಯಯ ಸಾಧ್ಯತೆ ಹೊಂದಿರುವ ರಫ್ತಿಗೆ ವಿನಾಯಿತಿ ನೀಡಬೇಕು ಎಂದು ಈ ವರದಿಯು ಶಿಫಾರಸು ಮಾಡುತ್ತದೆ” ಎಂದು ಆ ಸಮಿತಿಯು ತನ್ನ ಅಂತಿಮ ಸಂಪುಟದಲ್ಲಿ ಹೇಳಿತ್ತು. ಅಲ್ಲದೆ ನಿರ್ದಿಷ್ಟ ನೀತಿ ನಿರೂಪಣಾ ಶಿಫಾರಸುಗಳನ್ನು ಪಟ್ಟಿ ಮಾಡಿತ್ತು.

 

 

 

ಕೇಂದ್ರ ಸರ್ಕಾರವು ತನ್ನ ಒಂದು ಕೃಷಿ ಕಾಯ್ದೆಯ ಮೂಲಕ ಅಗತ್ಯ ವಸ್ತುಗಳ ಕಾಯ್ದೆಯನ್ನು ಹಿಂಪಡೆಯಿತಾದರೂ, ದಳವಾಯಿ ನೇತೃತ್ವದ ಸಮಿತಿಯು ಪ್ರತಿಪಾದಿಸಿದ್ದ ರಕ್ಷಣೆಯನ್ನು ಸೇರ್ಪಡೆ ಮಾಡಿರಲಿಲ್ಲ. ಬದಲಿಗೆ, 2020ರಲ್ಲಿ ಸಂಸತ್ತಿನ ಮುಂದೆ ಮಂಡನೆಯಾದ ತಿದ್ದುಪಡಿ ಮಸೂದೆಯು, “ಉದ್ಯಮಗಳನ್ನು ನಡೆಸುವುದನ್ನು ಸುಲಭವಾಗಿಸುವ ಆಧಾರದ ಪರಿಸರವನ್ನು ಸೃಷ್ಟಿಸುವ ಅಗತ್ಯವಿದೆ” ಎಂಬ ಪ್ರತಿಪಾದನೆಯೊಂದಿಗೆ ವ್ಯಾವಹಾರಿಕ ಹಿತಾಸಕ್ತಿಯನ್ನು ಆದ್ಯತೆಯಾಗಿಸಿತ್ತು.

 

 

 

1955ರಲ್ಲಿ ಜಾರಿಗೆ ಬಂದ ಅಗತ್ಯ ವಸ್ತುಗಳ ಕಾಯ್ದೆಯು ಮಾರುಕಟ್ಟೆಯಲ್ಲಿನ ಆಹಾರ ಪದಾರ್ಥಗಳ ಬೆಲೆ ಏರಿಳಿತವನ್ನು ನಿಯಂತ್ರಿಸುವ ಹಾಗೂ ಸಂಗ್ರಹಣಾ ಕ್ರಮಗಳಿಗೆ ಅಂಕುಶ ಹಾಕುವ ಸರ್ಕಾರದ ಬಳಿಯ ಒಂದು ಸಾಧನವಾಗಿತ್ತು. ವರ್ತಕರು ಪದೇ ಪದೇ ದೊಡ್ಡ ಪ್ರಮಾಣದ ಆಹಾರ ಧಾನ್ಯಗಳನ್ನು ಸಂಗ್ರಹಿಸಿಟ್ಟುಕೊಳ್ಳುತ್ತಾರೆ ಮತ್ತು ಆಹಾರ ಪದಾರ್ಥಗಳ ಕೊರತೆಯ ಸಂದರ್ಭದಲ್ಲಿ ಬೆಲೆಯೇರಿಕೆಯಾದಾಗ ಅವನ್ನು ಮಾರಾಟ ಮಾಡುತ್ತಾರೆ. ಇಂತಹ ಪ್ರವೃತ್ತಿಗೆ ಅಗತ್ಯ ವಸ್ತುಗಳ ಕಾಯ್ದೆಯು ತಡೆಯಾಗಿ ಪರಿಣಮಿಸಿತ್ತು.

 

 

 

ಈ ಕಾಯ್ದೆಗೆ ಸೆಪ್ಟೆಂಬರ್ 2020ರಲ್ಲಿ ಮೂರು ಕೃಷಿ ಕಾಯ್ದೆಗಳ ಪೈಕಿ ಒಂದು ಕಾಯ್ದೆಗೆ ತರಲಾದ ತಿದ್ದುಪಡಿಯು ರಾಜ್ಯಗಳಿಗಿದ್ದ ಈ ಅಧಿಕಾರವನ್ನು ತೆಗೆದು ಹಾಕಿತ್ತು. ಇದರಿಂದ ಆಹಾರ ಪದಾರ್ಥಗಳ ಚಿಲ್ಲರೆ ದರಗಳು ಬರಗಾಲ ಅಥವಾ ಈ ಹಿಂದಿನ ವರ್ಷಕ್ಕಿಂತ ಶೇ. 50ರಷ್ಟು ಏರಿಕೆಯಾದ ಅಸಾಧಾರಣ ಸಂದರ್ಭಗಳಲ್ಲಿ ಮಾತ್ರ ಕೇಂದ್ರ ಸರ್ಕಾರವು ಸಂಗ್ರಹಣಾ ಮಿತಿಯನ್ನು ಹೇರಬಹುದಾಗಿದೆ. ಆದರೆ, ಇಂತಹ ಮಿತಿಯಿಂದ ಆಹಾರೋತ್ಪನ್ನಗಳ ರಫ್ತುದಾರರು ಹಾಗೂ ಮೌಲ್ಯ ಸರಪಣಿಯ ಭಾಗಿದಾರರಿಗೆ (ಈ ನುಡಿಗಟ್ಟನ್ನು ಕಾಯ್ದೆಯು ವ್ಯಾಖ್ಯಾನಿಸಿಲ್ಲ) ಈ ಮಿತಿಯಿಂದ ವಿನಾಯಿತಿ ನೀಡಲಾಗಿದೆ.

 

 

 

ಈ ನಿರ್ದಿಷ್ಟ ಪರಿಚ್ಛೇದವು 2005ರಿಂದ ಭಾರತೀಯ ಆಹಾರ ನಿಗಮಕ್ಕೆ ಧಾನ್ಯ ಗೋದಾಮುಗಳನ್ನು ಅಭಿವೃದ್ಧಿಪಡಿಸಿ, ಅವನ್ನು ನಿರ್ವಹಿಸುತ್ತಿರುವ ಅದಾನಿ ಸಮೂಹದಂಥ ಕಾರ್ಪೊರೇಟ್ ಕಂಪನಿಗಳಿಗೆ ವರದಾನವಾಗಿದೆ. ಇದಲ್ಲದೆ ಅದಾನಿ ಸಮೂಹಕ್ಕೆ ಸಂಗ್ರಹಣೆ, ಸಾರಿಗೆ ವ್ಯವಸ್ಥೆಯಲ್ಲಿ ವ್ಯಾವಹಾರಿಕ ಹಿತಾಸಕ್ತಿಯೂ ಇದ್ದು, (ಆಹಾರ ಧಾನ್ಯಗಳನ್ನು ಸರಬರಾಜು ಮಾಡಲು ಅದಾನಿ ಸಮೂಹವು ತನ್ನದೇ ರೈಲ್ವೆ ಬೋಗಿಗಳನ್ನು ಬಳಸುತ್ತಿದೆ) ಆಹಾರ ಧಾನ್ಯಗಳು ಸರಬರಾಜಾಗುವ ಬಂದರುಗಳನ್ನೂ ಹೊಂದಿದೆ.

 

 

 

ಕಾರ್ಯಪಡೆಯು ಸಮಾಲೋಚನೆ ನಡೆಸಿದ್ದ ಸಂಸ್ಥೆಗಳು ನೂರಾರು ಕೋಟಿ ರೂಪಾಯಿ ಆದಾಯ ಹೊಂದಿರುವ ಕೃಷಿಯ ಬೆಂಬಲದಿಂದ ದೊಡ್ಡ ಪ್ರಮಾಣದ ಬೆಳವಣಿಗೆ ಸಾಧಿಸಿದ್ದವು.

 

 

 

2021-22ರ ಆರ್ಥಿಕ ವರ್ಷದಲ್ಲಿ ಅದಾನಿ ಸಮೂಹವು ಕೃಷಿ ಉದ್ಯಮದಲ್ಲಿ ತೆರಿಗೆ ಪಾವತಿಯ ನಂತರ ರೂ. 4,700 ಕೋಟಿ ಲಾಭ ಗಳಿಸಿತ್ತು. ಉದಾಹರಣೆಗೆ, ಐಟಿಸಿ ಕಂಪನಿಯು ಹಿಂದಿನ ಆರ್ಥಿಕ ವರ್ಷಕ್ಕೆ ಹೋಲಿಸಿದರೆ 2022-23ರ ಆರ್ಥಿಕ ವರ್ಷದಲ್ಲಿ ಬಡ್ಡಿ ಮತ್ತು ತೆರಿಗೆ ಪೂರ್ವದಲ್ಲಿ ಶೇ. 25.9ರಷ್ಟು ಬೆಳವಣಿಗೆ ದಾಖಲಿಸಿ, ರೂ. 300 ಕೋಟಿ ಲಾಭ ಗಳಿಸಿತ್ತು. 2022ರ ಆರ್ಥಿಕ ವರ್ಷಕ್ಕೆ ಹೋಲಿಸಿದರೆ, ಯುನೈಟೆಡ್ ಫಾಸ್ಪರಸ್ ಲಿಮಿಟೆಡ್‍ ಕಂಪನಿಯ ಆದಾಯವು 2023ರ ಆರ್ಥಿಕ ವರ್ಷದಲ್ಲಿ ಶೇ. 16ರಷ್ಟು ವೃದ್ಧಿಯಾಗಿ ರೂ. 53,576 ಕೋಟಿಗೆ ತಲುಪಿತ್ತು.

 

 

 

ಮತ್ತೊಂದೆಡೆ, ರೈತರು ತಮ್ಮ ಆದಾಯದಲ್ಲಿ ಕೇವಲ ಸಣ್ಣ ಪ್ರಮಾಣದ ಏರಿಕೆಯನ್ನು ಮಾತ್ರ ಕಂಡರು. ಸರ್ಕಾರದ 2018-19ರ ನೂತನ ದತ್ತಾಂಶದ ಪ್ರಕಾರ, 2015-16ರಲ್ಲಿದ್ದ ರೈತನ ಮಾಸಿಕ ಸರಾಸರಿ ಆದಾಯವು ರೂ. 8,059ರಿಂದ ರೂ. 10,218ಕ್ಕೆ ತಲುಪಿತ್ತು. 2022ರ ವೇಳೆಗೆ ರೈತರ ಆದಾಯವನ್ನು ದ್ವಿಗುಣಗೊಳಿಸಬೇಕು ಎಂಬ ಗುರಿಯಲ್ಲಿ ಇದು ಶೇ. 48ರಷ್ಟು ಬೆಳವಣಿಗೆ ಮಾತ್ರವಾಗಿದೆ.

 

 

 

ಈ ಕುರಿತು The Collectiveಗೆ ಪ್ರತಿಕ್ರಿಯಿಸಿರುವ ತಜ್ಞರು, ಕೃಷಿ ವಲಯಕ್ಕೆ ಕಾರ್ಪೊರೇಟ್ ಕಂಪನಿಗಳು ಪ್ರವೇಶಿಸುವುದೇ ಸಮಸ್ಯೆಯಲ್ಲ. ಆದರೆ, ಕಂಪನಿಗಳ ವ್ಯಾಪಾರಿ ಮಾದರಿಗಳು ಸ್ವಹಿತಾಸಕ್ತಿಯಿಂದ ಕೂಡಿರುತ್ತವೆ ಎಂದು ಎಚ್ಚರಿಸಿದ್ದಾರೆ. ಇಂತಹ ವ್ಯಾಪಾರಿ ಮಾದರಿಗಳು ರೈತರಿಗೆ ಕಡಿಮೆ ವೆಚ್ಚವನ್ನು ಪಾವತಿಸುವ ಕಂಪನಿಗಳ ಲಾಭವನ್ನು ಗರಿಷ್ಠ ಪ್ರಮಾಣಕ್ಕೆ ತೆಗೆದುಕೊಂಡು ಹೋಗುವ ಮೂಲಕ ರೈತರ ಆದಾಯವನ್ನು ದ್ವಿಗುಣಗೊಳಿಸುವ ಆಶಯವನ್ನು ಸೋಲಿಸುತ್ತವೆ ಎಂದು ಅವರು ಹೇಳುತ್ತಾರೆ. ಬದಲಿಗೆ ಈ ಮಾದರಿಗಳು ಉದ್ಯಮಗಳಿಗೆ ತಮ್ಮ ಲಾಭವನ್ನು ಹೆಚ್ಚಿಸಿಕೊಳ್ಳುವ ಪ್ರವೇಶ ದ್ವಾರಗಳಾಗಿ ಕೆಲಸ ನಿರ್ವಹಿಸುತ್ತವೆ ಎಂಬುದು ಅವರ ಅಭಿಪ್ರಾಯವಾಗಿದೆ.

 

 

 

“ಬಹುತೇಕ ಸಂಸ್ಕರಣಾ ತಂತ್ರಜ್ಞಾನವು ದೊಡ್ದ ಪ್ರಮಾಣದ್ದಾಗಿರುವುದರಿಂದ ಅದಕ್ಕಾಗಿ ಬೃಹತ್ ಹೂಡಿಕೆದಾರರ ಅಗತ್ಯವಿದೆ. ಆದರೆ, ಕಾರ್ಪೊರೇಟ್ ಕಂಪನಿಗಳು ಆಹಾರೋತ್ಪನ್ನಗಳ ಖರೀದಿಗಾಗಿ ವೆಚ್ಚ ಮಾಡುವ ಹಣವನ್ನು ಕಡಿತಗೊಳಿಸುವ ಮೂಲಕ ತಮ್ಮ ವೆಚ್ಚವನ್ನು ತಗ್ಗಿಸಲು ಪ್ರಯತ್ನಿಸುತ್ತವೆ. ಕೊನೆಯಲ್ಲಿ, ಅವರು ತಮ್ಮ ಲಾಭಾಂಶದ ಕುರಿತು ಮಾತ್ರ ಚಿಂತಿಸುತ್ತಾರೆ” ಎಂದು ಇಂದಿರಾ ಗಾಂಧಿ ಅಭಿವೃದ್ಧಿ ಸಂಶೋಧನಾ ಸಂಸ್ಥೆಯ ಸಹ ಪ್ರಾಧ್ಯಾಪಕಿ ಸುಧಾ ನಾರಾಯಣನ್ ಅಭಿಪ್ರಾಯ ಪಡುತ್ತಾರೆ. ವಾಸ್ತವವೆಂದರೆ, ರೈತರು ಆಥವಾ ರೈತ ಹೋರಾಟಗಾರನ್ನು ಚರ್ಚೆಯಿಂದ ಹೊರಗಿಟ್ಟಿದ್ದೇ ಅಪಾಯಕಾರಿ ಎಂದು ಅವರು ಹೇಳುತ್ತಾರೆ.

 

 

 

ರೈತರು ಹೆಚ್ಚು ಆದಾಯ ಗಳಿಸಲು ನೆರವು ನೀಡುತ್ತದೆ ಎಂದು ಬಿಂಬಿತವಾಗಿದ್ದ ಕೃಷಿಯನ್ನು ಕಾರ್ಪೊರೇಟೀಕರಣಗೊಳಿಸುವ ನಿರ್ಲಜ್ಜ ಪ್ರಯತ್ನಗಳು ರೈತರ ಕಳವಳಗಳನ್ನು ಮೋದಿ ಸರ್ಕಾರವು ನಿರ್ವಹಿಸಿದ ರೀತಿಗಿಂತ ವ್ಯತಿರಿಕ್ತವಾಗಿವೆ.

 

 

 

2014 ಮತ್ತು 2018ರ ನಡುವೆ ದೇಶವು ಸುಮಾರು 13,000 ರೈತ ಪ್ರತಿಭಟನೆಗಳಿಗೆ ಸಾಕ್ಷಿಯಾಗಿತ್ತು. ಅವರ ಬಹುದಿನಗಳ ಬೇಡಿಕೆಯಾದ ಮಾರುಕಟ್ಟೆ ಏರಿಳಿತಗಳಿಂದ ರಕ್ಷಣೆ ನೀಡಲು ಕಾನೂನಾತ್ಮಕ ಕನಿಷ್ಠ ಬೆಂಬಲ ಬೆಲೆ ನಿಗದಿ ಹಾಗೂ ನೈಸರ್ಗಿಕ ವಿಕೋಪಗಳಿಂದ ರಕ್ಷಣೆ ಪಡೆಯಲು ಬೆಳೆ ವಿಮೆಯಂತಹ ಬೇಡಿಕೆಗಳನ್ನು ಕಾರ್ಯಪಡೆಯ ಚರ್ಚೆಗಳಲ್ಲಿ ಸಂಪೂರ್ಣವಾಗಿ ನಿರ್ಲಕ್ಷಿಸಲಾಯಿತು. ನಂತರ ಜಾಗತಿಕ ಗಮನ ಸೆಳೆದಿದ್ದ, 700 ರೈತರ ಸಾವಿನಲ್ಲಿ ಅಂತ್ಯಗೊಂಡಿದ್ದ ಒಂದು ವರ್ಷದ ಅವಧಿಯ ರೈತರ ಸುದೀರ್ಘ ಪ್ರತಿಭಟನೆಯ ನಂತರ ಸರ್ಕಾರವು ಕಾನೂನಾತ್ಮಕ ಕನಿಷ್ಠ ಬೆಂಬಲ ಬೆಲೆ ಸಾಧ್ಯತೆಯನ್ನು ಪರಿಶೀಲಿಸಲು ಸಮಿತಿಯೊಂದನ್ನು ರಚಿಸಲಾಗುವುದು ಎಂದು ಭರವಸೆ ನೀಡಿತ್ತು. ಆದರೆ, ಅಂತಹ ಯಾವುದೇ ಸಮಿತಿಯನ್ನು ರಚಿಸಲಿಲ್ಲ. ಬದಲಿಗೆ, ಇದಕ್ಕೂ ಮುನ್ನ ಕಾರ್ಪೊರೇಟ್ ಕಂಪನಿಗಳಿಗೆ ಕೃಷಿ ವಲಯಕ್ಕೆ ಪ್ರವೇಶ ಒದಗಿಸುವ ಕಾರ್ಯಪಡೆಯನ್ನು ರಚಿಸಲು ಚುರುಕುತನ ಪ್ರದರ್ಶಿಸಿತು.

 

 

 

ಈ ಕುರಿತು ಅದಾನಿ ಸಮೂಹ, ನೀತಿ ಆಯೋಗ, ಕೃಷಿ ಮತ್ತು ರೈತ ಕಲ್ಯಾಣ ಇಲಾಖೆ ಹಾಗೂ ಕಾರ್ಯಪಡೆಯು ಸಮಾಲೋಚನೆ ನಡೆಸಿದ್ದ ಕಂಪನಿಗಳಿಗೆ The Collective ವಿವರವಾದ ಪ್ರಶ್ನೆಗಳನ್ನು ರವಾನಿಸಿತ್ತು. ಆದರೆ, ಯಾರೊಬ್ಬರೂ ಇವಕ್ಕೆ ನೆನಪೋಲೆಗಳ ಹೊರತಾಗಿಯೂ ಪ್ರತಿಕ್ರಿಯಿಸಲಿಲ್ಲ.

 

 

 

ಮಾಜಿ ಕೃಷಿ ಕಾರ್ಯದರ್ಶಿ ಸಿರಾಜ್ ಹುಸೈನ್ ಹಾಗೂ ಮಾಜಿ ಗ್ರಾಮೀಣಾಭಿವೃದ್ಧಿ ಕಾರ್ಯದರ್ಶಿ ಜುಗಲ್ ಮೊಹಾಪಾತ್ರ ಜಂಟಿಯಾಗಿ ಬರೆದಿದ್ದ ಅಂತರ್ಜಾಲ ಅಂಕಣವೊಂದರಲ್ಲಿ, ಈ ನಿರ್ದಿಷ್ಟ ತಿದ್ದುಪಡಿಗಳನ್ನು ‘ಭಾರಿ ಉದ್ಯಮ ಸ್ನೇಹಿ” ತಿದ್ದುಪಡಿಗಳು ಎಂದು ಗುರುತಿಸಿದ್ದರು. “ಅಮೂರ್ತ ಪ್ರಶ್ನೆಯೇನೆಂದರೆ, ಬೆಳೆಯನ್ನು ಕಟಾವು ಮಾಡಿದಾಗ ಮತ್ತು ಬೆಲೆಗಳು ತೀರಾ ಕಡಿಮೆಯಿದ್ದಾಗ ಕಾರ್ಪೊರೇಟ್ ಕಂಪನಿಗಳು ರೈತರಿಗೆ ನ್ಯಾಯಯುತ ಬೆಲೆ ನೀಡಲಿವೆಯೆ ಎಂಬುದು” ಎಂದು ಅವರು ಬರೆದಿದ್ದರು. “ಇದಕ್ಕೆ ಸುಲಭ ಉತ್ತರವಿಲ್ಲ” ಎಂದೂ ಅವರು ಹೇಳಿದ್ದರು.

 

 

 

ಕೃಷಿ ವಲಯವನ್ನು ಕಾರ್ಪೊರೇಟೀಕರಣಗೊಳಿಸುವುದರಿಂದ ರೈತರಿಗೆ ಲಾಭವಾಗಲಿದೆಯೆ ಎಂಬುದರ ಕುರಿತು ಖಚಿತತೆ ಹೊಂದಿರದಿದ್ದ ಈ ಮಾಜಿ ಕಾರ್ಯದರ್ಶಿಗಳು ತಮ್ಮ ಅಂಕಣವನ್ನು ಈ ಎಚ್ಚರಿಕೆಯೊಂದಿಗೆ ಅಂತ್ಯಗೊಳಿಸಿದ್ದರು: “ಕೃಷಿ ವ್ಯಾಪಾರದಲ್ಲಿ ಏಕಸ್ವಾಮ್ಯ ಸೃಷ್ಟಿಯಾದರೆ, ಅದರಿಂದ ಹೆಚ್ಚು ಆತಂಕ ಪಡಬೇಕಿರುವುದು ಗ್ರಾಹಕ ಮಾತ್ರ. ಸದ್ಯ, ಖಾಸಗಿಯಾಗಿ ಸಂಗ್ರಹಿಸಿಟ್ಟುಕೊಂಡಿರುವ ಆಹಾರೋತ್ಪನ್ನಗಳ ಪ್ರಮಾಣದ ಬಗ್ಗೆ ತಿಳಿಯಲು ಸರ್ಕಾರದ ಬಳಿ ಯಾವುದೇ ದಾರಿಯಿಲ್ಲ” ಎಂದು ಹೇಳಿದ್ದರು.

 

 

 

ಒಂದು ತಿಂಗಳ ಮುಂಚೆ ಸರ್ಕಾರವು ಜಾರಿಗೆ ತಂದಿದ್ದ ಕೃಷಿ ಸುಗ್ರೀವಾಜ್ಞೆಗಳನ್ನು ಸಂಭ್ರಮಿಸಿದ್ದ ಅಶೋಕ್ ದಳವಾಯಿಯವರ ಪತ್ರದೊಂದಿಗೆ ಜುಲೈ 6, 2020ರಂದು ಉದ್ಯಮ ಸ್ನೇಹಿ ಕಾರ್ಯಪಡೆ ಕುರಿತ ನೀತಿ ಆಯೋಗದ ಕಡತವು ಅಂತ್ಯಗೊಂಡಿತ್ತು.

 

 

 

ಎಂಟು ತಿಂಗಳ ನಂತರ, ರೈತರ ಪ್ರತಿಭಟನೆಯ ಸಂದರ್ಭದಲ್ಲಿ ಒಂದು ವೇಳೆ ಕಾಯ್ದೆಗಳನ್ನು ಹಿಂಪಡೆದರೆ ರೈತರ ಆದಾಯ ದ್ವಿಗುಣಗೊಳ್ಳುವುದು ಸಾಧ್ಯವಿಲ್ಲ ಎಂದು ನೀತಿ ಆಯೋಗದ ರಮೇಶ್ ಚಂದ್ ಎಚ್ಚರಿಸಿದ್ದರು. ಆದರೆ, ಡಿಸೆಂಬರ್, 2021ರಲ್ಲಿ ಕೃಷಿ ಕಾಯ್ದೆಗಳನ್ನು ಹಿಂಪಡೆಯಲಾಯಿತು.

 

                                                                                                                                                                                                                                                       ಅನುವಾದ ; ಸದಾನಂದ ಸಿ ಗಂಗನಬೀಡು

SUPPORT THE FILE

Latest News

Related Posts