ಬೆಂಗಳೂರು; ಕರ್ನಾಟಕ ಸರ್ಕಾರದ ಸಚಿವಾಲಯಕ್ಕೆ ನಿಯೋಜನೆ ಮೇಲೆ ಭರ್ತಿ ಮಾಡುವುದಕ್ಕೆ ಸಂಬಂಧಿಸಿದಂತೆ ನಿರ್ದಿಷ್ಟ ಸಂಖ್ಯೆಯನ್ನು ಮೀರಿ ಕೆಎಎಸ್ ಅಧಿಕಾರಿಯನ್ನು ನಿಯೋಜಿಸಿ ಟಿಪ್ಪಣಿ ಹಾಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೀಗ ವೃಂದ ಮತ್ತು ನೇಮಕಾತಿಗಳ ನಿಯಮಗಳನ್ನು ಉಲ್ಲಂಘಿಸಿರುವ ಆರೋಪಕ್ಕೆ ಗುರಿಯಾಗಿದ್ದಾರೆ.
ಕರ್ನಾಟಕ ಸಚಿವಾಲಯದಲ್ಲಿ ವೃಂದ ಮತ್ತು ನೇಮಕಾತಿ ನಿಯಮಗಳ ಅನ್ವಯ 06 ಕೆಎಎಸ್ ಅಧಿಕಾರಿಗಳ ಸೇವೆಯನ್ನು ನಿಯೋಜನೆ ಮೇಲೆ ಭರ್ತಿ ಮಾಡಲು ಅವಕಾಶವಿದೆ. ಆದರೆ ಈಗಾಗಲೇ ಹೆಚ್ಚುವರಿಯಾಗಿ ನಾಲ್ವರು ಸೇರಿ ಒಟ್ಟು 10 ಮಂದಿ ಕೆಎಎಸ್ ಅಧಿಕಾರಿಗಳು ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿದ್ದರೂ ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತೊಬ್ಬ ಕೆಎಎಸ್ ಅಧಿಕಾರಿ ಸಿದ್ದೇಶ್ವರ ಎನ್ ಅವರನ್ನು ಸಚಿವಾಲಯಕ್ಕೆ ವರ್ಗಾವಣೆ ಮಾಡಲು ಸೂಚಿಸಿರುವುದು ಸಚಿವಾಲಯದ ಅಧಿಕಾರಿಗಳ ಅಸಮಾಧಾನಕ್ಕೂ ಕಾರಣರಾಗಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ‘ದಿ ಫೈಲ್’ಗೆ ಟಿಪ್ಪಣಿ ಹಾಳೆಗಳು ಲಭ್ಯವಾಗಿವೆ.
ಸಚಿವಾಲಯದಲ್ಲಿ ಅಗತ್ಯಕ್ಕಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಕೆಎಎಸ್ ಅಧಿಕಾರಿಗಳ ನಿಯೋಜನೆ, ವರ್ಗಾವಣೆ ಮಾಡುತ್ತಿರುವ ಕ್ರಮಕ್ಕೆ ಸಂಬಂಧಿಸಿದಂತೆ ಸಚಿವಾಲಯ ಅಧಿಕಾರಿ, ನೌಕರರ ಸಂಘವು ತೀವ್ರ ವಿರೋಧ ವ್ಯಕ್ತಪಡಿಸಿ ಲಿಖಿತ ಮನವಿಯನ್ನೂ ಸಲ್ಲಿಸಿದ್ದರು. ಆದರೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸಿದ್ದೇಶ್ವರ್ ಎನ್ ಅವರನ್ನು ಇಂಧನ ಇಲಾಖೆಯ ಅಪರ ಕಾರ್ಯದರ್ಶಿ ಸ್ಥಾನಕ್ಕೆ ವರ್ಗಾವಣೆಗೊಳಿಸಲು ಸೂಚಿಸಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.
ಈಗಾಗಲೇ ವಿಜಯ್ ಬಿ ಪಿ, (ಕೆಎಎಸ್, ವೈದ್ಯಕೀಯ ಶಿಕ್ಷಣ ಇಲಾಖೆ, ಅಪರ ಕಾರ್ಯದರ್ಶಿ), ಅನಿತಾ ಸಿ (ಕೆಎಎಸ್ ಹಿರಿಯ ಶ್ರೇಣಿ, ವಾಣಿಜ್ಯ ಕೈಗಾರಿಕೆ ಇಲಾಖೆ ಜಂಟಿ ಕಾರ್ಯದರ್ಶಿ), ನರಸಿಂಹಪ್ಪ (ಉನ್ನತ ಶಿಕ್ಷಣ ಇಲಾಖೆ ಜಂಟಿ ಕಾರ್ಯದರ್ಶಿ), ಕವಿತಾ ರಾಣಿ ( ಕಂದಾಯ ಇಲಾಖೆ ಜಂಟಿ ಕಾರ್ಯದರ್ಶಿ), ಕೃಷ್ಣಮೂರ್ತಿ ಎನ್ (ನಗರಾಭಿವೃದ್ದಿ ಇಲಾಖೆ ಜಂಟಿ ಕಾರ್ಯದರ್ಶಿ), ಸಂಗಪ್ಪ (ನಗರಾಭಿವೃದ್ಧಿ ಇಲಾಖೆ ಸರ್ಕಾರದ ಉಪ ಕಾರ್ಯದರ್ಶಿ) ಸಚಿವಾಲಯದಲ್ಲಿ ನಿಯೋಜನೆಗೊಂಡು ಕಾರ್ಯನಿರ್ವಹಿಸುತ್ತಿದ್ದಾರೆ.
ಕರ್ನಾಟಕ ಸರ್ಕಾರದ ಸಚಿವಾಲಯದ ವೃಂದ ಮತ್ತು ನೇಮಕಾತಿ ನಿಯಮಗಳ ಅನ್ವಯ 06 ಕೆಎಎಸ್ ಅಧಿಕಾರಿಗಳ ಸೇವೆಯನ್ನು ನಿಯೋಜನೆ ಮಾಡಲು ಅವಕಾಶವಿದೆ. ಆದರೂ ಈ 6 ಅಧಿಕಾರಿಗಳ ಜತೆಯಲ್ಲಿಯೇ ಅರುಳ್‌ಕುಮಾರ್ (ಉಪ ಕಾರ್ಯದರ್ಶಿ, ಆರ್ಥಿಕ ಇಲಾಖೆ), ಪ್ರಶಾಂತ (ಜಂಟಿ ಕಾರ್ಯದರ್ಶಿ, ನಗರಾಭಿವೃದ್ಧಿ ), ವೀರಭದ್ರ ಹಂಚಿನಾಳ್ (ಶಿಷ್ಟಾಚಾರ, ಸರ್ಕಾರದ ಅಪರ ಕಾರ್ಯದರ್ಶಿ) ಕಾರ್ಯನಿರ್ವಹಿಸುತ್ತಿದ್ದರು.
ಈ ಪೈಕಿ ವೀರಭದ್ರ ಹಂಚಿನಾಳ್ ಅವರು ಸಚಿವ ಬೋಸರಾಜ್ ಅವರಿಗೆ ಆಪ್ತ ಕಾರ್ಯದರ್ಶಿಯಾಗಿ ನಿಯೋಜನೆಗೊಂಡಿದ್ದಾರೆ. ಇವರ ಬದಲಿಗೆ ಅಪರ ಕಾರ್ಯದರ್ಶಿಯಾಗಿ ವರ್ಗಾವಣೆಗೊಂಡಿರುವ ಶಾಂತ ಎಲ್ ಹುಲ್ಮನಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಗೆ ಅಪರ ಕಾರ್ಯದರ್ಶಿಯಾಗಿ ವರ್ಗಾವಣೆಗೊಂಡಿರುವ ಡಾ ರೂಪಶ್ರೀ ಅವರೂ ಸೇರಿದಂತೆ ಒಟ್ಟಾರೆ 10 ಮಂದಿ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವುದು ಗೊತ್ತಾಗಿದೆ.
ಹೀಗಿದ್ದರೂ ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಬಿಎಂಪಿಯ (ಮಾರುಕಟ್ಟೆ) ಜಂಟಿ ಆಯುಕ್ತರಾಗಿರುವ ಸಿದ್ದೇಶ್ವರ್ ಎನ್ ಅವರನ್ನು ಇಂಧನ ಇಲಾಖೆಯ ಅಪರ ಕಾರ್ಯದರ್ಶಿ ಸ್ಥಾನಕ್ಕೆ ವರ್ಗಾವಣೆ ಮಾಡಲು ಟಿಪ್ಪಣಿಯಲ್ಲಿ ಸೂಚಿಸಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.
ಸದ್ಯ ಇಂಧನ ಇಲಾಖೆಯಲ್ಲಿ ಅಪರ್ಣಾ ಪಾವಟೆ ಅವರು ಅಪರ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ನಿಯಮದಲ್ಲೇನಿದೆ?
ಕರ್ನಾಟಕ ಸರ್ಕಾರದ ಸಚಿವಾಲಯ ಸೇವೆಗಳು (ನೇಮಕಾತಿ)ನಿಯಮಗಳು 2019ರ ಅನ್ವಯ ವೃಂದ ಮತ್ತು ನೇಮಕಾತಿ ನಿಯಮಗಳ ಪ್ರಕಾರ ಉಪ ಕಾರ್ಯದರ್ಶಿ ಹುದ್ದೆಗಳ ಪೈಕಿ ಹನ್ನೆರಡು ಹುದ್ದೆಗಳನ್ನು ಐಎಎಸ್ ಅಥವಾ ಕೆಎಎಸ್ ಗ್ರೂಪ್ ಎ ಅಧಿಕಾರಿಗಳನ್ನು ಸ್ಥಳ ನಿಯುಕ್ತಿಗೊಳಿಸುವ ಮೂಲಕ ಭರ್ತಿ ಮಾಡಬೇಕು. ಆದರೂ ಕರ್ನಾಟಕ ಸರ್ಕಾರ ಸಚಿವಾಲಯದ ಸೇವೆಯ ಸಮಾನ ಸಂಖ್ಯೆಯ ಅಧಿಕಾರಿಗಳನ್ನು ಯಾವುದೇ ಇತರೆ ರಾಜ್ಯ ಸಿವಿಲ್ ಸೇವೆಗಳಿಗೆ ನಿಯೋಜನೆ ಮಾಡುವ ಷರತ್ತುಗಳಿಗೆ ಒಳಪಟ್ಟು ಸರ್ಕಾರ ಉಪ ಕಾರ್ಯದರ್ಶಿಗಳ ವೃಂದದಲ್ಲಿನ 06 ಹುದ್ದೆಗಳನ್ನು ಕರ್ನಾಟಕ ಆಡಳಿತ ಸೇವೆಗಳು ಅಧಿಕಾರಿಗಳಿಂದ ನಿಯೋಜಿಸುವ ಮೂಲಕ ಭರ್ತಿ ಮಾಡಬೇಕು ಎಂದಿದೆ.
ವರ್ಗಾವಣೆಗೆ ಇಲಾಖೆ ಅಸಮ್ಮತಿ
ಸಿದ್ದೇಶ್ವರ್ ಅವರನ್ನು ಅಪರ ಕಾರ್ಯದರ್ಶಿ ಸ್ಥಾನಕ್ಕೆ ವರ್ಗಾವಣೆ ಮಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊರಡಿಸಿದ್ದ ಟಿಪ್ಪಣಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-6) ಅಸಮ್ಮತಿ ವ್ಯಕ್ತಪಡಿಸಿ ಅಭಿಪ್ರಾಯ ನೀಡಿದೆ. ‘ಕರ್ನಾಟಕ ಸಚಿವಾಲಯದ ವೃಂದ ಮತ್ತು ನೇಮಕಾತಿಗಳ ನಿಯಮಗಳ ಅನ್ವಯ 06 ಕೆಎಎಸ್ ಅಧಿಕಾರಿಗಳ ಸೇವೆಯನ್ನು ನಿಯೋಜನೆ ಮೇಲೆ ಭರ್ತಿ ಮಾಡಲು ಅವಕಾಶವಿದೆ.
ಆದರೆ ಈಗಾಗಲೇ ಪ್ರಸ್ತುತ 8 ಕೆಎಎಸ್ ಅಧಿಕಾರಿಗಳು (ಹೆಚ್ಚುವರಿಯಾಗಿ 2 ಅಧಿಕಾರಿಗಳು) ನಿಯೋಜನೆ ಮೇರೆಗೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹಾಗೂ 01 ಕೆಎಎಸ್ ಅಧಿಕಾರಿಯು ಅಧಿಕ ಪ್ರಭಾರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಈ 08 ಕೆಎಎಸ್ ಅಧಿಕಾರಿಗಳೊಂದಿಗೆ ಮತ್ತೊಂದು ಕೆಎಎಸ್ ಅಧಿಕಾರಿಯನ್ನು ನಿಯೋಜಿಸಲು ನಿಯಮಗಳಲ್ಲಿ ಅವಕಾಶವಿರುವುದಿಲ್ಲ,’ ಎಂದು 2023ರ ಜೂನ್ 30ರಂದು ಅಭಿಪ್ರಾಯಿಸಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.
ಈ ಕಡತವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅನುಮೋದನೆಗೆ 2023ರ ಜುಲೈ 1ರಂದು ಇಲಾಖೆಯು ಮಂಡಿಸಿದೆ. ‘ ಸಿದ್ದೇಶ್ವರ್ ಎನ್ ಇವರನ್ನು ಅಪರ್ಣಾ ಪಾವಟೆ ಅವರ ಸ್ಥಳಕ್ಕೆ ವರ್ಗಾವಣೆ ಮಾಡುವ ಬಗ್ಗೆ ಸೂಕ್ತ ನಿರ್ಣಯ ಕೈಗೊಳ್ಳಲು ಸಕ್ಷಮ ಪ್ರಾಧಿಕಾರವಾದ ಮುಖ್ಯಮಂತ್ರಿ ಅವರ ಅನುಮೋದನೆ/ಆದೇಶಕ್ಕಾಗಿ ಕಡತವನ್ನು ಸಲ್ಲಿಸಿದೆ,’ ಎಂದು ಇಲಾಖೆಯ ಅಧಿಕಾರಿ ಸಲ್ಲಿಸಿರುವುದು ಗೊತ್ತಾಗಿದೆ.
ಸಚಿವಾಲಯಕ್ಕೆ ಕೆಎಎಸ್ ಅಧಿಕಾರಿಗಳ ನಿಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದ ಸಚಿವಾಲಯ ಅಧಿಕಾರಿಗಳ ನೌಕರರ ಸಂಘವು 2023ರ ಜೂನ್ 22ರಂದು ಮುಖ್ಕಯ ಕಾರ್ಯಧರ್ಶಿಗೆ ದೂರು ಸಲ್ಲಿಸಿತ್ತು.
ಕೆಎಎಸ್ ಅಧಿಕಾರಿಗಳ ನಿಯೋಜನೆ, ವರ್ಗಾವಣೆಯಲ್ಲಿ ನಿಯಮಗಳ ಉಲ್ಲಂಘನೆ ಆಗುತ್ತಿರುವುದನ್ನು ಸಂಘವು ಮುಖ್ಯ ಕಾರ್ಯದರ್ಶಿಗಳ ಗಮನಕ್ಕೆ ತಂದಿತ್ತು.
‘ಸಚಿವಾಲಯದ ಉಪ ಕಾರ್ಯದರ್ಶಿ ವೃಂದದ ಹುದ್ದೆಗಳಿಗೆ ಮುಂಬಡ್ತಿ ಹೊಂದುವ ಹಾಗೂ ಈ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಲು ಇಚ್ಛಿಸುವ ಸಚಿವಾಲಯದ ಅಧಿಕಾರಿಗಳಿಗೆ ತೀವ್ರ ಹಿನ್ನಡೆಯುಂಟು ಮಾಡಿದೆ.
ಹಾಗೂ ಸಚಿವಾಲಯದ ಅಧಿಕಾರಿಗಳ ಮಾನಸಿಕ ಸ್ಥೈರ್ಯವನ್ನು ಕುಗ್ಗಿಸುವ ಪ್ರಯತ್ನ ಆಗಿದೆ,’ ಎಂದು ಸಂಘವು ದೂರಿನಲ್ಲಿ ವಿವರಿಸಿತ್ತು.
ಇದೇ ದೂರಿನ ಜತೆಗೆ ಸಚಿವಾಲಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿಗಳ ಪಟ್ಟಿಯನ್ನೂ ಒದಗಿಸಿತ್ತು. ವಿಶೇಷವೆಂದರೆ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿಯಾಗಿರುವ ಡಾ ಎನ್ ವೆಂಕಟೇಶಯ್ಯ, ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ಬಿ ಶಿವಸ್ವಾಮಿ, ಮುಖ್ಯಮಂತ್ರಿಗಳ ಉಪ ಕಾರ್ಯದರ್ಶಿ ರಮೇಶ್ ಪಿ ಕೋನರೆಡ್ಡಿ ಅವರ ಹೆಸರೂ ಸಹ ಇದೇ ಪಟ್ಟಿಯಲ್ಲಿತ್ತು.