ಎಪಿಪಿ ನೇಮಕಾತಿಯಲ್ಲಿ ಅಕ್ರಮ; ಸಿಎಂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ವಿರುದ್ಧದ ದೂರು ಬಹಿರಂಗ

ಬೆಂಗಳೂರು; ಎಪಿಪಿ ಮತ್ತು ಎಜಿಪಿ ನೇಮಕಾತಿಯಲ್ಲಿ ಆಗಿರುವ ಅಕ್ರಮಗಳು, ಅಭಿಯೋಜನಾ ಇಲಾಖೆಯಲ್ಲಿ ಎಸಗಿರುವ ಇತರೆ ಅಕ್ರಮಗಳಲ್ಲಿ ನೇಮಕಾತಿ ಸಮಿತಿ ಅಧ್ಯಕ್ಷ ಹಾಗೂ ಹಾಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯೂ ಆಗಿರುವ ರಜನೀಶ್‌ ಗೋಯಲ್‌ ಮತ್ತು ನೇಮಕಾತಿ ಸಮಿತಿ ಸದಸ್ಯ ಕಾರ್ಯದರ್ಶಿ ಹಾಗೂ ಕಾನೂನು ಇಲಾಖೆಯ ವಿಶೇ‍ಷ ಕಾರ್ಯದರ್ಶಿಯೂ ಆಗಿರುವ ಹೆಚ್‌ ಕೆ ಜಗದೀಶ್‌ ಅವರ ವಿರುದ್ಧ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ ಅಭಿಯೋಜನಾ ಇಲಾಖೆಯ ಅಧಿಕಾರಿ, ನೌಕರರೇ ಲಿಖಿತ ದೂರು ಸಲ್ಲಿಸಿರುವುದು ಇದೀಗ ಬಹಿರಂಗವಾಗಿದೆ.

 

ಕಾನೂನು ಇಲಾಖೆಯ ವಿಶೇಷ ಕಾರ್ಯದರ್ಶಿ ಹೆಚ್‌ ಕೆ ಜಗದೀಶ್‌ ಅವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ತವ್ಯದಿಂದ ಬಿಡುಗಡೆಗೊಳಿಸಿ ಟಿಪ್ಪಣಿ ಹೊರಡಿಸಿದ್ದಾರಾದರೂ ತಮಗೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿರುವ ರಜನೀಶ್‌ ಗೋಯಲ್‌ ಅವರನ್ನು ಈಗಲೂ ಮುಂದುವರೆಸಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಂತಾಗಿದೆ.

 

ಅಭಿಯೋಜನಾ ಇಲಾಖೆಯ ಅಧಿಕಾರಿ ಮತ್ತು ನೌಕರರು ಹೆಚ್‌ ಕೆ ಜಗದೀಶ್‌ ವಿರುದ್ಧ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರಿಗೆ 2022ರ ಡಿಸೆಂಬರ್‍‌ 22 ಮತ್ತು 2023ರ ಜೂನ್‌ 7ರಂದೇ ಲಿಖಿತ ದೂರು ಸಲ್ಲಿಸಿದ್ದರು. ಈ ದೂರನ್ನಾಧರಿಸಿ ಕಾನೂನು ಇಲಾಖೆಯು ( ಕಡತ ಸಂಖ್ಯೆ; LAW-LC3/19/2023-ADMIN-LAW SEC (COMPUTER NUMER 1006157) ವಿಚಾರಣೆ ನಡಸುತ್ತಿದೆ. ಇಲಾಖೆಯ ಅಧಿಕಾರಿ ನೌಕರರು ಸಲ್ಲಿಸಿರುವ ದೂರಿನ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಅಲ್ಲದೇ ಗುತ್ತಿಗೆ ಆಧಾರದ ಮೇಲೆ ನೇಮಕವಾಗಿರುವ ವಕೀಲರ ಪೈಕಿ 250 ಮಂದಿ ಆರ್‍‌ಎಸ್‌ಎಸ್‌ ಮತ್ತು ಬಿಜೆಪಿ ಹಿನ್ನೆಲೆಯವರು. ಇದರಲ್ಲಿಯೂ ರಜನೀಶ್‌ ಗೋಯಲ್‌ ಅವರು ಶಾಮೀಲಾಗಿದ್ದಾರೆ ಎಂದು 2023ರ ಜೂನ್‌ 7ರಂದು ಸಲ್ಲಿಸಿರುವ ದೂರಿನಲ್ಲಿ ವಿವರಿಸಿದ್ದರೂ ಇದುವರೆಗೂ ಗೋಯಲ್‌ ಅವರನ್ನು ಆ ಹುದ್ದೆಯಿಂದ ಬಿಡುಗಡೆಗೊಳಿಸದೆಯೇ ಕೇವಲ ಹೆಚ್‌ ಕೆ ಜಗದೀಶ್‌ ಅವರನ್ನಷ್ಟೇ ಬಿಡುಗಡೆಗೊಳಿಸಲಾಗಿದೆ. ಮತ್ತು ಈ ಪ್ರಕರಣದ ಕುರಿತು ತನಿಖೆ ನಡೆಸಬೇಕು ಎಂದು ಅಧಿಕಾರಿ ನೌಕರರು ಲಿಖಿತ ದೂರು ನೀಡಿದ್ದರೂ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಅವರು ಈ ಬಗ್ಗೆ ಯಾವುದೇ ಕ್ರಮಕೈಗೊಳ್ಳದಿರುವುದು ಹಲವು ಸಂಶಯಗಳಿಗೆ ಬಲ ನೀಡಿದಂತಾಗಿದೆ.

 

 

‘ಎಪಿಪಿ ಮತ್ತು ಎಜಿಪಿಗಳ ನೇಮಕಾತಿಗೆ ಸಂಬಂಧಪಟ್ಟಂತೆ ನೇಮಕಾತಿ ಸಮಿತಿ ಅಧ್ಯಕ್ಷ ರಜನೀಶ್‌ ಗೋಯಲ್‌ ಮತ್ತು ಸಮಿತಿಯ ಸದಸ್ಯ ಕಾರ್ಯದರ್ಶಿ ಹೆಚ್‌ ಕೆ ಜಗದೀಶ್‌ ಅವರನ್ನು ಪ್ರಸ್ತುತ ಇರುವ ಹುದ್ದೆಗಳಲ್ಲಿ ಮುಂದುವರೆಸಿದಲ್ಲಿ ನೇಮಕಾತಿ ಅಕ್ರಮಗಳಿಗೆ ಸಂಬಂಧಪಟ್ಟಂತೆ ಎಲ್ಲಾ ದಾಖಲಾತಿಗಳನ್ನು ಮತ್ತು ಸಾಕ್ಷ್ಯಾಧಾರಗಳನ್ನು ನಾಶ ಮಾಡುವ ಸಾಧ್ಯತೆ ಇದೆ. ಹೀಗಾಗಿ ನ್ಯಾಯದ ಹಿತದೃಷ್ಟಿಯಿಂದ ಇಬ್ಬರೂ ಅಧಿಕಾರಿಗಳನ್ನು ಸದರಿ ಹುದ್ದೆಗಳಿಂದ ತೆರವುಗೊಳಿಸಿ ನ್ಯಾಯಯುತ ತನಿಖೆ ನಡೆಸಬೇಕು,’ ಎಂದು ಅಭಿಯೋಜನಾ ಇಲಾಖೆಯ ಅಧಿಕಾರಿ, ನೌಕರರು ದೂರಿನಲ್ಲಿ ಕೋರಿರುವುದು ಗೊತ್ತಾಗಿದೆ.

 

ವರ್ಗಾವಣೆ ದಂಧೆ

 

ಅಭಿಯೋಜನಾ ಇಲಾಖೆಯಲ್ಲಿ ನಡೆಯುವ ಎಲ್ಲಾ ಅಧಿಕಾರಿ/ನೌಕರರ ವರ್ಗಾವಣೆಗಳನ್ನು ಇವರಿಬ್ಬರ ಶಿಫಾರಸ್ಸಿನಂತೆ ಇವರಿಗೆ ಹಣ ಕೊಟ್ಟವರನ್ನು ಮಾತ್ರ ಅಧಿಕಾರಿ, ನೌಕರರಿಗೆ ಬೇಕಾದ ಸ್ಥಳಗಳಿಗೆ ವರ್ಗಾವಣೆ ಮಾಡಲು ವರ್ಗಾವಣೆ ದಂಧೆಯನ್ನು ನಡೆಸುತ್ತಿದ್ದಾರೆ ಎಂದು ದೂರಿನಲ್ಲಿ ಆಪಾದಿಸಲಾಗಿದೆ. ಸರ್ಕಾರದ ಮಟ್ಟದಲ್ಲಿ ಗೃಹ ಇಲಾಖೆಯ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಹಾಗೂ ಹಿಂದಿನ ಸರ್ಕಾರದ ಗೃಹ ಸಚಿವರ ಕಚೇರಿಯಲ್ಲಿ ಇವರು ಹೇಳಿದ ರೀತಿಯಲ್ಲಿ ವರ್ಗಾವಣೆ ಮಾಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿದ್ದಾರೆ ಎಂದೂ ದೂರಿನಲ್ಲಿ ಆರೋಪಿಸಲಾಗಿದೆ.

 

ಅಲ್ಲದೇ ಕ್ರಿಮಿನಲ್‌ ಪ್ರಕರಣಗಳಲ್ಲಿ ವಿಶೇಷ ಸರ್ಕಾರಿ ಅಭಿಯೋಜಕರನ್ನು ನೇಮಕಾತಿ ಮಾಡುವಾಗ ಖಾಸಗಿ ವಕೀಲರಾದ ಪ್ರಸನ್ನಕುಮಾರ್‍‌ ಅವರನ್ನು ಅನೇಕ ಪ್ರಕರಣಗಳಲ್ಲಿ ವಿಶೇಷ ಸರ್ಕಾರಿ ಅಭಿಯೋಜಕರನ್ನಾಗಿ ನೇಮಿಸಲಾಗಿದೆ. ನ್ಯಾಯಾಲಯದಲ್ಲಿ ತಮಗೆ ಹಾಗೂ ಸರ್ಕಾರಕ್ಕೆ ಬೇಕಾದ ರೀತಿಯಲ್ಲಿ ಪ್ರಕರಣಗಳ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿರುತ್ತಾರೆ. ‘ತಾವು ಪರಿಶೀಲಿಸಬೇಕಾದಲ್ಲಿ ಸಬ್‌ ಇನ್ಸ್‌ಪೆಕ್ಟರ್ ಅಕ್ರಮ ನೇಮಕಾತಿ ಪ್ರಕರಣದಲ್ಲಿನ ಕಡತಗಳನ್ನು ಸಿಐಡಿ ಪೊಲೀಸರಿಂದ ಪಡೆದು ಪರಿಶೀಲಿಸಬಹುದಾಗಿದೆ,’ ಎಂದು ಅಧಿಕಾರಿ ನೌಕರರು ದೂರಿನಲ್ಲಿ ಗಮನಸೆಳೆದಿರುವುದು ತಿಳಿದು ಬಂದಿದೆ.

SUPPORT THE FILE

Latest News

Related Posts