ಬೆಂಗಳೂರು; ಕೇಂದ್ರ ಸಚಿವರು, ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ನ್ಯಾಯಾಧೀಶರು, ವಿವಿಧ ಆಯೋಗಗಳ ಅಧ್ಯಕ್ಷರು ಮತ್ತು ಸದಸ್ಯರ ಆತಿಥ್ಯ ಉಪಚಾರಕ್ಕಾಗಿ ಕಳೆದ ನಾಲ್ಕು ವರ್ಷಗಳಲ್ಲಿ ಒಟ್ಟಾರೆ 92.20 ಕೋಟಿ ರು. ಖರ್ಚಾಗಿದೆ.
ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತಿತರ ಕೇಂದ್ರ ಸಚಿವರು ರಾಜ್ಯಕ್ಕೆ ಪದೇಪದೇ ಭೇಟಿ ನೀಡುತ್ತಿರುವ ಹೊತ್ತಿನಲ್ಲಿಯೇ ಕೇಂದ್ರ ಸಚಿವರಾದಿಯಾಗಿ ರಾಜ್ಯಕ್ಕೆ ಆಗಮಿಸಿದ ಮತ್ತಿತರರನ್ನು ರಾಜ್ಯ ಅತಿಥಿ ಎಂದು ಪರಿಗಣಿಸಿ ಉಪಚಾರಕ್ಕಾಗಿ ಮಾಡಿರುವ ವೆಚ್ಚದ ವಿವರಗಳನ್ನು ಲೆಕ್ಕಪರಿಶೋಧನಾಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಇದರ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಬಿ ಎಸ್ ಯಡಿಯೂರಪ್ಪ ಮತ್ತು ಬಸವರಾಜ ಬೊಮ್ಮಾಯಿ ಅವಧಿಯ ಮೂರು ವರ್ಷದ ( 2020, 2021, 2022) ಅವಧಿಯಲ್ಲಿಯೇ 72.82 ಕೋಟಿ ರು.ಗಳನ್ನು ಅತಿಥಿ ಉಪಚಾರಕ್ಕಾಗಿ ವೆಚ್ಚವಾಗಿರುವುದು ಲೆಕ್ಕಾಧಿಕಾರಿಗಳ ತಪಾಸಣೆ ವರದಿಯಿಂದ ಗೊತ್ತಾಗಿದೆ.
ಅತಿಥ್ಯ ಉಪಚಾರಕ್ಕಾಗಿ ಮಾಡಿರುವ ವೆಚ್ಚ ಮಾತ್ರವಲ್ಲದೇ ಇನ್ನಿತರೆ ವೆಚ್ಚದ ವಿವರಗಳನ್ನೂ ತಪಾಸಣೆ ವರದಿಯಲ್ಲಿ ದಾಖಲಿಸಲಾಗಿದೆ. ಕುಮಾರಕೃಪಾ ಅತಿಥಿ ಗೃಹದ ಕೊಠಡಿಗಳು ಮತ್ತು ವಸತಿಗೃಹಗಳ ನವೀಕರಣ, ಅಧುನೀಕರಣ, ಮೂಲಸೌಕರ್ಯ, ಮೇಲ್ವಿಚಾರಣೆಗೆ 2018-19ರಿಂದ 2021-22ರವರೆಗೆ ನೀಡಿದ್ದ 3.17ಕೋಟಿ ರು ಅನುದಾನದ ಪೈಕಿ ಬಳಕೆಯಾಗದ 20.33 ಲಕ್ಷ ರುಗ.ಳನ್ನು ಸರ್ಕಾರದ ಖಾತೆಗೆ ಹಿಂದಿರುಗಿಸಿಲ್ಲ. ಅಲ್ಲದೇ ಈ ಅನುದಾನ ಹಂಚಿಕೆಯನ್ನೂ ನಿಯಮಿತವಾಗಿ ನಿರ್ವಹಿಸಿಲ್ಲ. ಈ ಹಣ ಸದ್ಯ ಪಿಡಬ್ಲ್ಯೂಡಿ ಬಳಿಯೇ ಇದೆ ಎಂದು ವರದಿಯಿಂದ ತಿಳಿದು ಬಂದಿದೆ.
2018-19ರಲ್ಲಿ 18,38,04,365 ರು., 2019-20ರಲ್ಲಿ 30,03,49,177 ರು., 2020-21ರಲ್ಲಿ 23,32,06,343 ರು., 2021-22ರಲ್ಲಿ 20,46,75,753 ರು. ವೆಚ್ಚವಾಗಿರುವುದು ವರದಿಯಿಂದ ಗೊತ್ತಾಗಿದೆ.
ಕುಮಾರಕೃಪಕ್ಕೆ ಸಂಬಂಧಿಸಿದಂತೆ 2018ರಿಂದ 2022ರವರೆಗೆ ವಾರ್ಷಿಕ ಸ್ಟಾಕ್ ಬುಕ್‌ಗಳನ್ನು ಕರ್ನಾಟಕ ಅರ್ಥಿಕ ಸಂಹಿತೆ ಪ್ರಕಾರ ಭೌತಿಕವಾಗಿ ನಿರ್ವಹಿಸಿಲ್ಲ ಎಂದು ತಪಾಸಣೆ ವರದಿಯಲ್ಲಿ ವಿವರಿಸಲಾಗಿದೆ.
ಅದೇ ರೀತಿ ಕುಮಾರಕೃಪ ಅತಿಥಿ ಗೃಹಕ್ಕೆ ಸಂಬಂಧಿಸಿದಂತೆ ಮಾರ್ಚ್ 2021 ಮತ್ತು ಏಪ್ರಿಲ್ 2022ರಲ್ಲಿ ನಡೆದಿರುವ ಹಣಕಾಸಿನ ವಹಿವಾಟುಗಳಿಗೆ ಸಂಬಂಧಿಸಿದ ನಗದು ವಹಿಗಳಲ್ಲಿ ವ್ಯತ್ಯಾಸ ಕಂಡು ಬಂದಿದೆ. ಮಾರ್ಚ್ 2021ರಲ್ಲಿ 67 ಬಿಲ್, ಫೆಬ್ರುವರಿ 2022ರಲ್ಲಿ 81 ಬಿಲ್‌ಗಳಿಗೆ ಸಂಬಂಧಿಸಿದ ಒಟ್ಟು 7,53,42,714 ರು. ನಗದು ವಹಿಯಲ್ಲಿ ವ್ಯತ್ಯಾಸ ಕಂಡುಬಂದಿರುವುದು ತಪಾಸಣೆ ವರದಿಯಿಂದ ಗೊತ್ತಾಗಿದೆ.
ಹಾಗೆಯೇ ಮುಖ್ಯಮಂತ್ರಿ, ಸಚಿವರು, ರಾಜ್ಯ ಅತಿಥಿಗಳಿಗೆಂದು ಖರೀದಿಸಲಾಗಿರುವ ಇನ್ನೋವಾ, ವರ್ಣ, ಇನ್ನೋವ ಕ್ರಿಸ್ಟಾ, ಹೊಂಡಾ ಸಿಟಿ, ಡಿಝೈರ್, ಫೋರ್ಡ್ ಅಲ್ಟೀಸ್ ಫೋರ್ಡ್ ಸೇರಿದಂತೆ ಒಟ್ಟು ವಾಹನಗಳ ಪೈಕಿ 8 ವಾಹನಗಳನ್ನು 2020ರಿಂದ ಬಳಕೆ ಮಾಡದೇ ಹಾಗೇ ಇಡಲಾಗಿದೆ.
2006-07ರಲ್ಲಿದ್ದಂತೆ ವಿಧಾನಸಭೆ ಮತ್ತು ವಿಧಾನಪರಿಷತ್ ಸದಸ್ಯರಿಂದ ಒಟ್ಟಾರೆ 12.54 ಲಕ್ಷ ರು. ಹೊರಬಾಕಿ ಇದೆ. 2000-2022ರಲ್ಲಿ ಬೆಂಗಳೂರಿನಲ್ಲಿ ಕಾಂಗ್ರೆಸ್ ಅಂದಿನ ಮುಖ್ಯಮಂತ್ರಿ ಸಂಘಟಿಸಿದ್ದ ಕಾಂಗ್ರೆಸ್ ಸಮ್ಮೇಳನಕ್ಕಾಗಿ ನಿಯಮಬಾಹಿರವಾಗಿ 70.25 ಲಕ್ಷ ರು. ವೆಚ್ಚ ಮಾಡಿದ್ದರ ಬಗ್ಗೆ ರಾಜ್ಯ ಆತಿಥ್ಯ ಸಂಸ್ಥೆಯು ಇದುವರೆಗೂ ಯಾವುದೇ ವಿವರಣೆಯನ್ನು ನೀಡಿಲ್ಲ ಎಂದು ತಪಾಸಣೆ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಇತ್ತೀಚೆಗಷ್ಟೇ ಬಿಜೆಪಿಯ ಎನ್ ಆರ್ ರಮೇಶ್ ಅವರು ಸಿದ್ದರಾಮಯ್ಯ ಅವರ ಅವಧಿಯಲ್ಲಿ ಕಾಫಿ ತಿಂಡಿಗೆಂದು 200 ಕೋಟಿ ರು. ವೆಚ್ಚವಾಗಿದೆ ಎಂದು ದಾಖಲೆ ಬಿಡುಗಡೆ ಮಾಡಿದ್ದರು. ಇದಾದ ನಂತರ ಸಿದ್ದರಾಮಯ್ಯ ಅವರು ಇದನ್ನು ತಳ್ಳಿ ಹಾಕಿದ್ದರಲ್ಲದೇ ತಮ್ಮ ಅವಧಿಯಲ್ಲಿ ಕಾಫಿ ತಿಂಡಿಗೆಂದು ಕೇವಲ 3 ಕೋಟಿ ಮಾತ್ರ ವೆಚ್ಚವಾಗಿದೆ ಎಂದು ದಾಖಲೆಯನ್ನು ಬಿಡುಗಡೆಗೊಳಿಸಿದ್ದನ್ನು ಸ್ಮರಿಸಬಹುದು.