ಬೆಂಗಳೂರು; ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕ ಶಂಕರ್ ಪಾಗೋಜಿ ಎಂಬುವರು ಡೆಕ್ಕನ್ ಹೆರಾಲ್ಡ್ ಮತ್ತು ಪ್ರಜಾವಾಣಿಯ ಪ್ರಧಾನ/ಮುಖ್ಯ ವರದಿಗಾರರಿಬ್ಬರಿಗೆ ದೀಪಾವಳಿ ಹಬ್ಬದ ಸೋಗಿನಲ್ಲಿ ಸ್ವೀಟ್ ಬಾಕ್ಸ್‌ನೊಂದಿಗೆ 1 ಲಕ್ಷ ರು. ನಗದು ನೀಡಿದ್ದಾರೆ ಎಂದು ಆರೋಪಿಸಿ ಜನಾಧಿಕಾರ ಸಂಘರ್ಷ ಪರಿಷತ್ ಸಾಕ್ಷ್ಯಗಳ ಸಹಿತ ನೀಡಿದ್ದ ದೂರರ್ಜಿ ಸಂಬಂಧ ಶೀಘ್ರಗತಿಯಲ್ಲಿ ಕಾನೂನು ಸಲಹೆ ನೀಡಬೇಕು ಎಂದು ಲೋಕಾಯುಕ್ತ ಬಿ ಎಸ್ ಪಾಟೀಲ್ ಅವರು ಸಂಬಂಧಿಸಿದ ಅಧಿಕಾರಿಗೆ ನಿರ್ದೇಶನ ನೀಡಿದ್ದಾರೆ ಎಂದು ಗೊತ್ತಾಗಿದೆ.
ಈ ಪ್ರಕರಣ ಕುರಿತು ಲೋಕಾಯುಕ್ತ ಪೊಲೀಸರು ತನಿಖೆ ಪ್ರಗತಿಯಲ್ಲಿ ವಿಳಂಬ ಧೋರಣೆ ಪ್ರದರ್ಶಿಸಿರುವ ಕಾರಣ ದೂರುದಾರ ಸಂಸ್ಥೆಯಾದ ಜನಾಧಿಕಾರ ಸಂಘರ್ಷ ಪರಿಷತ್‌ನ ಸಹ ಅಧ್ಯಕ್ಷ ಆದರ್ಶ ಐಯ್ಯರ್ ಮತ್ತು ನೈಜ ಹೋರಾಟಗಾರರ ವೇದಿಕೆಯ ಹೆಚ್ ಎಂ ವೆಂಕಟೇಶ್ ಮತ್ತಿತರರ ನಿಯೋಗವು ಲೋಕಾಯುಕ್ತ ಬಿ ಎಸ್ ಪಾಟೀಲ್ ಅವರನ್ನು 2022ರ ಡಿಸೆಂಬರ್ 29ರಂದು ಭೇಟಿ ಮಾಡಿತ್ತು.
ಪ್ರಕರಣ ಸಂಬಂಧ ಸಲ್ಲಿಕೆಯಾಗಿರುವ ದೂರರ್ಜಿ ಮೇಲೆ ತನಿಖೆ ಕೈಗೊಂಡಿರುವ ಲೋಕಾಯುಕ್ತ ಎಸ್ಪಿ (5) ವಿವೇಕಾನಂದ ತುಳಸಿಗೇರಿ ಅವರು ಕಾನೂನು ಸಲಹೆ ಕೋರಿ ಎಡಿಜಿಪಿ ಅವರಿಗೆ ಕಡತ ರವಾನಿಸಿದ್ದರು ಎಂದು ತಿಳಿದು ಬಂದಿದೆ. ಈ ಕುರಿತು ಶೀಘ್ರಗತಿಯಲ್ಲಿ ಕಾನೂನು ಸಲಹೆ ಒದಗಿಸಬೇಕು ಎಂದು ಕಾನೂನು ಸಲಹಾ ವಿಭಾಗಕ್ಕೆ ಲೋಕಾಯುಕ್ತರು ನಿರ್ದೇಶನ ನೀಡಿರುವುದು ಗೊತ್ತಾಗಿದೆ.
ಜನಾಧಿಕಾರ ಸಂಘರ್ಷ ಪರಿಷತ್ ಸಲ್ಲಿಸಿದ್ದ ಅರ್ಜಿಯನ್ನು ಸ್ವೀಕರಿಸಿದ್ದ ಲೋಕಾಯುಕ್ತ ಪೊಲೀಸ್ ವಿಭಾಗದ ಎಡಿಜಿಪಿ ಅವರು ಇದರ ತನಿಖೆ ಹೊಣೆಯನ್ನು ವಿವೇಕಾನಂದ ತುಳಸಿಗೇರಿ ಅವರಿಗೆ ವಹಿಸಿದ್ದರು.
ಪ್ರಜಾವಾಣಿ ಮುಖ್ಯ ವರದಿಗಾರ ವೈ ಗ ಜಗದೀಶ್, ಡೆಕ್ಕನ್ ಹೆರಾಲ್ಡ್‌ನ ಮುಖ್ಯ ವರದಿಗಾರ ಭರತ್ ಜೋಷಿ ಅವರು ವಾಟ್ಸಾಪ್ ಗ್ರೂಪ್‌ನಲ್ಲಿ ನೀಡಿದ್ದಾರೆ ಎನ್ನಲಾದ ಸ್ಪಷ್ಟೀಕರಣವನ್ನು ಜನಾಧಿಕಾರ ಸಂಘರ್ಷ ಪರಿಷತ್ ಪುರಾವೆಯನ್ನಾಗಿ ಸಲ್ಲಿಸಿತ್ತು.
ಹಾಗೆಯೇ ಕನ್ನಡ ಪ್ರಭ ಸಂಪಾದಕ ರವಿ ಹೆಗಡೆ ಅವರು ಹಣವನ್ನು ನಿರಾಕರಿಸಿದ್ದಾರೆ ಎಂದು ಪೀಪಲ್ ಮೀಡಿಯಾ ಸುದ್ದಿ ಜಾಲತಾಣ ಪ್ರಕಟಿಸಿರುವ ವರದಿಯನ್ನೂ ಲಗತ್ತಿಸಿತ್ತು. ಜನಾಧಿಕಾರ ಸಂಘರ್ಷ ಪರಿಷತ್ ಅಕ್ಟೋಬರ್ 28ರಂದು ನೀಡಿದ್ದ ದೂರಿನಲ್ಲಿ ವೈ ಗ ಜಗದೀಶ್ ಅವರು ವಾಟ್ಸಾಪ್‌ನಲ್ಲಿ ನೀಡಿದ್ದರು ಎನ್ನಲಾದ ಸ್ಪಷ್ಟೀಕರಣವನ್ನು ಪುರಾವೆಯನ್ನಾಗಿ ಒದಗಿಸಿರಲಿಲ್ಲ. ದೂರು ಸಲ್ಲಿಕೆಯಾಗಿ ಒಂದು ತಿಂಗಳ ನಂತರ ವಾಟ್ಸಾಪ್ ಸ್ಪಷ್ಟೀಕರಣವನ್ನು ಲೋಕಾಯುಕ್ತ ಎಸ್ಪಿಗೆ ಒದಗಿಸಿದ್ದರು.
‘ಈ ಸಾಕ್ಷ್ಯಗಳನ್ನಾಧರಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕ ಶಂಕರ್ ಪಾಗೋಜಿ ಅವರ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿ ವಿಚಾರಣೆ ನಡೆಸಬೇಕು,’ ಎಂದು ದೂರಿನಲ್ಲಿ ಒತ್ತಾಯಿಸಿತ್ತು. ಆದರೆ ಈ ಕುರಿತು ತನಿಖೆಯು ವಿಳಂಬಗತಿಯಲ್ಲಿತ್ತು. ಈ ಮಧ್ಯೆಯೇ ಭ್ರಷ್ಟಾಚಾರ ಪ್ರಕರಣ ಸಂಬಂಧ ಸಾಂದರ್ಭಿಕ ಸಾಕ್ಷ್ಯಗಳ ಪರಿಗಣನೆ ಕುರಿತು ಸುಪ್ರೀಂ ಕೋರ್ಟ್ ಇತ್ತೀಚೆಗೆ ನೀಡಿದ್ದ ತೀರ್ಪಿನ ಪ್ರತಿಯನ್ನು ಒದಗಿಸುವ ಮೂಲಕ ಪ್ರಕರಣವನ್ನು ತನಿಖೆ ನಡೆಸಬೇಕು ಎಂದು ಜನಾಧಿಕಾರ ಸಂಘರ್ಷ ಪರಿಷತ್ ಒತ್ತಾಯಿಸಿತ್ತು.
‘ಈ ಪ್ರಕರಣದಲ್ಲಿ ಖುದ್ದು ಮುಖ್ಯಮಂತ್ರಿ ಆರೋಪಿ ಸ್ಥಾನದಲ್ಲಿ ಇರುವುದರಿಂದ ಲೋಕಾಯುಕ್ತ ಪೊಲೀಸರು ಸಾಮಾನ್ಯರ ಮೇಲಿನ ಪ್ರಕರಣಕ್ಕೆ ಹೋಲಿಸಿದ್ದಲ್ಲಿ ಬಹಳ ವಿಳಂಬ ನೀತಿ ಅನುಸರಿಸಿದ್ದಾರೆ. ಎರಡು ತಿಂಗಳ ನಂತರ ಲೋಕಾಯುಕ್ತ ಪೊಲೀಸರು ಕಾನೂನು ಸಲಹೆ ಕೇಳುವುದು ವಿಳಂಬ ನೀತಿಗೆ ಸಾಕ್ಷಿ. ಕಾನೂನು ಸಲಹೆಯನ್ನು ಮೊದಲೇ ಏಕೆ ಕೇಳಲಿಲ್ಲ,’ ಎಂದು ಪ್ರಶ್ನಿಸುತ್ತಾರೆ ಜನಾಧಿಕಾರ ಸಂಘರ್ಷ ಪರಿಷತ್‌ನ ಸಹ ಅಧ್ಯಕ್ಷ ಆದರ್ಶ ಐಯ್ಯರ್.
ದೂರಿನಲ್ಲೇನಿತ್ತು?
ರಾಜ್ಯದ ಹಲವಾರು ಮಾಧ್ಯಮ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವರದಿಗಾರರಿಗೆ ಮುಖ್ಯಮಂತ್ರಿ ಕಚೇರಿಯು ಮುಖ್ಯಮಂತ್ರಿಗಳ ಮಾಧ್ಯಮ ಸಂಯೋಜಕ ಶಂಕರ ಪಾಗೋಜಿ ಅವರ ಮೂಲಕ ನಗದು ಹಣವನ್ನು ನೀಡಲಾಗಿದೆ. ವಿಶ್ವಸನೀಯ ಮೂಲಗಳ ಪ್ರಕಾರ ಡೆಕ್ಕನ್ ಹೆರಾಲ್ಡ್‌ನ ಮುಖ್ಯ ವರದಿಗಾರ ಭರತ್ ಜೋಷಿ ಅವರಿಗೆ ತಲುಪಿಸಿದ್ದ ಸ್ವೀಟ್ ಬಾಕ್ಸ್‌ನಲ್ಲಿಯೇ 1 ಲಕ್ಷ ರು. ನಗದನ್ನು ತಲುಪಿಸಲಾಗಿತ್ತು. ಇದು ಅವರ ಗಮನಕ್ಕೆ ಬಂದ ನಂತರ ಡೆಕ್ಕನ್ ಹೆರಾಲ್ಡ್‌ನ ಸಂಪಾದಕರು ಮತ್ತು ಸಿಇಒ ಅವರ ಗಮನಕ್ಕೆ ತಂದು ಅವರ ಸೂಚನೆಯಂತೆ ಹಣವನ್ನು ಹಿಂದಿರುಗಿಸಿದ್ದಾರೆ.
ಅಲ್ಲದೇ ಪ್ರಜಾವಾಣಿಯ ಮುಖ್ಯ ವರದಿಗಾರ ವೈ ಜಿ ಜಗದೀಶ್ ಎಂಬುವರಿಗೂ ಹಣ ತಲುಪಿಸಲಾಗಿತ್ತು. ಈ ಬಗ್ಗೆ ಖುದ್ದು ವೈ ಜಿ ಜಗದೀಶ್ ಅವರೇ ಹಣ ಪಡೆದಿದ್ದನ್ನು ಖಚಿತಪಡಿಸಿ ಒಪ್ಪಿಕೊಂಡಿದ್ದರು. ಇವರೂ ಸಹ ಸಂಸ್ಥೆಯ ಸಿಇಒ ಮತ್ತು ಸಂಪಾದಕರ ಗಮನಕ್ಕೆ ತಂದು ಹಣವನ್ನು ಹಿಂದಿರುಗಿಸಿದ್ದರು. ಅಲ್ಲದೇ ವೈ ಜಿ ಜಗದೀಶ್ ಅವರೇ ಒಪ್ಪಿಕೊಂಡಿರುವಂತೆ ಈ ಸಂಬಂಧ ಮುಖ್ಯಮಂತ್ರಿ ಅವರಿಗೆ ಸಂಸ್ಥೆಯಿಂದ ಖಂಡನಾ ಪತ್ರವನ್ನು ಬರೆಯಲಾಗಿದೆ. ಮತ್ತು ಇದಕ್ಕೆ ಮುಖ್ಯಮಂತ್ರಿ ಅವರು ಕ್ಷಮೆಯನ್ನೂ ಯಾಚಿಸಿದ್ದಾರೆ.
ಮುಖ್ಯಮಂತ್ರಿ ಕಚೇರಿಯಿಂದಲೇ ದೀಪಾವಳಿಯ ಗಿಫ್ಟ್ ಹೆಸರಿನಲ್ಲಿ ಮಾಧ್ಯಮಗಳಿಗೆ ಲಂಚ ಕೊಟ್ಟ ಪ್ರಕರಣದ ಪ್ರಥಮ ವರ್ತಮಾನ ವರದಿಯನ್ನು ದಾಖಲಿಸಲು ಲೋಕಾಯುಕ್ತ ಪೊಲೀಸರು ಎರಡು ತಿಂಗಳಿನಿಂದಲೂ ಮೀನಾ ಮೇಷ ಎಣಿಸುತ್ತಿದ್ದಾರೆ. ಪಿ ಸಿ ಕಾಯ್ದೆ ಅಡಿ ದಾಖಲಿಸಿರುವ ಎಲ್ಲಾ ಪ್ರಕರಣಗಳನ್ನು ಈ ಪ್ರಕರಣದಂತೆ ನೋಡುತ್ತಾರೆಯೇ ಎಂದು ಪ್ರಶ್ನಿಸಿರುವ ನೈಜ ಹೋರಾಟಗಾರರ ವೇದಿಕೆಯ ಹೆಚ್ ಎಂ ವೆಂಕಟೇಶ್, ತನಿಖೆಯಲ್ಲಿ ಕಂಡುಬಂದಿರುವ ವಿಳಂಬ ಗತಿಯನ್ನು ನೋಡಿದರೆ ಈ ಪ್ರಕರಣವನ್ನು ಮುಚ್ಚಿ ಹಾಕುವ ಲಕ್ಷಣಗಳಿವೆ ಎಂದೂ ಶಂಕಿಸುತ್ತಾರೆ.