ಲಿಂಗಾಯತ ಟ್ರಸ್ಟ್‌ ಪ್ರಸ್ತಾವನೆ ತಿರಸ್ಕರಿಸಿ, ರಾಷ್ಟ್ರೋತ್ಥಾನಕ್ಕೆ ಮನ್ನಣೆ; ಜಮೀನು ಮಂಜೂರಿಯಲ್ಲೂ ತಾರತಮ್ಯ

ಬೆಂಗಳೂರು; ಸಂಘ ಪರಿವಾರದ ಅಂಗ ಸಂಸ್ಥೆ ರಾಷ್ಟ್ರೋತ್ಥಾನ ಪರಿಷತ್‌ಗೆ ಬೆಂಗಳೂರು, ಬಳ್ಳಾರಿ, ಕಲ್ಬುರ್ಗಿ ಸೇರಿ ರಾಜ್ಯಾದಾದ್ಯಂತ ಹತ್ತಾರು ಎಕರೆ ವಿಸ್ತೀರ್ಣದ ಗೋಮಾಳ ಜಮೀನುಗಳನ್ನು ಈಗಾಗಲೇ ಮಂಜೂರು ಮಾಡಿರುವ ರಾಜ್ಯ ಬಿಜೆಪಿ ಸರ್ಕಾರವು ಇದೀಗ ವೀರಶೈವ ಲಿಂಗಾಯತ ಸಮುದಾಯಕ್ಕೆ ಸೇರಿದ ಟ್ರಸ್ಟ್‌ವೊಂದಕ್ಕೆ ಜಮೀನು ನೀಡಲು ನಿರಾಕರಿಸಿದೆ.

 

ರಾಷ್ಟ್ರೋತ್ಥಾನ ಪರಿಷತ್‌ ಕೂಡ ಒಂದು ಖಾಸಗಿ ಸಂಸ್ಥೆಯಾಗಿರುವ ಕಾರಣ ಗೋಮಾಳ ಜಮೀನು ನೀಡಲು ಕರ್ನಾಟಕ ಭೂ ಮಂಜೂರಾತಿ ನಿಯಮಗಳಲ್ಲಿ ಅವಕಾಶವಿಲ್ಲ ಎಂದು ಕಾನೂನು ಮತ್ತು ಆರ್ಥಿಕ ಇಲಾಖೆಯು ನೀಡಿದ್ದ ಅಭಿಪ್ರಾಯವನ್ನು ಬದಿಗಿರಿಸಿ ಜಮೀನು ಮಂಜೂರು ಮಾಡಿದ್ದ ಸರ್ಕಾರವು ಲಿಂಗಾಯತ ಸಮುದಾಯಕ್ಕೆ ಸೇರಿದ ಟ್ರಸ್ಟ್‌ ಖಾಸಗಿ ಸಂಸ್ಥೆಯಾಗಿರುವ ಕಾರಣ ಮಂಜೂರು ಮಾಡಲು ನಿಯಮಗಳಲ್ಲಿ ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿಗೆ ನಿರ್ದೇಶಿಸಿರುವುದು ಚರ್ಚೆಗೆ ಗ್ರಾಸವಾಗಿದೆ.

 

ಜಗಜ್ಯೋತಿ ಬಸವೇಶ್ವರ ಪ್ರತಿಮೆಯನ್ನು ವಿಧಾನಸೌಧದ ಆವರಣದೊಳಗೆ ಸ್ಥಾಪಿಸಲು ವಿಳಂಬ ಮಾಡಿರುವ ಮಧ್ಯೆಯೇ ವೀರಶೈವ ಲಿಂಗಾಯತ ಸಮುದಾಯದ ಟ್ರಸ್ಟ್‌ವೊಂದಕ್ಕೆ ಜಮೀನು ನೀಡಲು ನಿರಾಕರಿಸಿರುವುದು ಲಿಂಗಾಯತ ವಿರೋಧ ನೀತಿ ಅನುಸರಿಸಿದೆ ಎಂಬ ಅಭಿಪ್ರಾಯ ಮೂಡಲು ದಾರಿಮಾಡಿಕೊಟ್ಟಂತಾಗಿದೆ.

 

ಈ ಸಂಬಂಧ ಕಂದಾಯ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ 2022ರ ನವೆಂಬರ್‌ 30ರಂದು ಶಿವಮೊಗ್ಗ ಜಿಲ್ಲಾಧಿಕಾರಿಗೆ ಪತ್ರ (ಪತ್ರ ಸಂಖ್ಯೆ; ಕಂಇ 34 ಎಲ್‌ಜಿಎಸ್‌ 2022) ಬರೆದಿದ್ದಾರೆ ಎಂದು ಗೊತ್ತಾಗಿದೆ.

 

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕು ಕಸಬಾ ಹೋಬಳಿ ಕಳೂರು ಗ್ರಾಮದ ಸರ್ವೆ ನಂಬರ್‌ 209ರಲ್ಲಿರುವ 2 ಎಕರೆ ಜಮೀನನ್ನು ವೀರಶೈವ ಲಿಂಗಾಯತ ಪರಿಷತ್‌ ಟ್ರಸ್ಟ್‌ಗೆ ಮಂಜೂರು ಮಾಡಲು ಪ್ರಸ್ತಾವನೆಯನ್ನು (ಪತ್ರ ಸಂಖ್ಯೆ; ಎಲ್‌ಎನ್‌ಡಿ (2)ಎಲ್‌ಜಿ2/215/20222 (ಇ-104763) ಜಿಲ್ಲಾಧಿಕಾರಿಗೆ ಸಲ್ಲಿಕೆಯಾಗಿತ್ತು. ಇದನ್ನು ಶಿವಮೊಗ್ಗ ಜಿಲ್ಲಾಧಿಕಾರಿ ಅವರು ಕಂದಾಯ ಇಲಾಖೆಯ ಸರ್ಕಾರದ ಕಾರ್ಯದರ್ಶಿಗೆ ಪ್ರಸ್ತಾವನೆ ಸಲ್ಲಿಸಿದ್ದರು. ಈ ಕುರಿತು ಚರ್ಚಿಸಿರುವ ಕಂದಾಯ ಇಲಾಖೆಯು ಜಮೀನು ನೀಡಲು ನಿರಾಕರಿಸಿದೆ.

 

ಡಿ ಸಿ ಗೆ ಬರೆದಿರುವ ಪತ್ರದಲ್ಲೇನಿದೆ?

 

ಖಾಸಗಿ ಸಂಘ-ಸಂಸ್ಥೆಗಳಿಗೆ ಜಮೀನು ಗುತ್ತಿಗೆ/ಮಂಜೂರಾತಿಗೆ ಸಂಬಂಧಿಸಿದ ಪ್ರಸ್ತಾವನೆಗಳನ್ನು ಸಂಬಂಧಿಸಿದ ಪ್ರಾದೇಶಿಕ ಆಯುಕ್ತರ ಮುಖಾಂತರ ಸಲ್ಲಿಸಬೇಕು ಎಂದು ಎಲ್ಲಾ ಜಿಲ್ಲಾಧಿಕಾರಿಗಳು/ಪ್ರಾದೇಶಿಕ ಆಯುಕ್ತರುಗಳೀಗೆ ಸೂಚಿಸಲಾಗಿರುತ್ತದೆ. ಆದರೆ ಈ ಪ್ರಸ್ತಾವನೆಯು ಜಿಲ್ಲಾಧಿಕಾರಿಗಳಿಂದ ನೇರವಾಗಿ ಸ್ವೀಕೃತವಾಗಿದೆ.

 

ಪ್ರಸ್ತಾಪಿತ ಜಮೀನು ಹೊಸನಗರ ಪಟ್ಟಣ ಸರಹದ್ದಿನಿಂದ 500 ಮೀಟರ್‌ ದೂರದಲ್ಲಿರುವುದರಿಂದ ಕರ್ನಾಟಕ ಭೂ ಮಂಜೂರಾತಿ ನಿಯಮಗಳು 1969ರ ನಿಯಮ 22(ಎ)2 ಅನ್ವಯ ನಗರ ಪೌರ ಸರಹದ್ದಿನೊಳಗೆ ಸರ್ಕಾರಿ ಜಮೀನನ್ನು ಮತ್ತು ಗೋಮಾಳ ಜಮೀನನ್ನು ಯಾವನೇ ವೈಯಕ್ತಿಕ ಅಥವಾ ಖಾಸಗಿ ಸಂಸ್ಥೆಗಳಿಗೆ ಮಂಜೂರು ಮಾಡಲು ಅವಕಾಶವಿಲ್ಲದೇ ಇರುವುದರಿಂದ ಪ್ರಸ್ತಾವನೆಗಳನ್ನು ಪರಿಗಣಿಸಲು ನಿಯಮಗಳಡಿ ಅವಕಾಶವಿರುವುದಿಲ್ಲ ಎಂದು ಕಂದಾಯ ಇಲಾಖೆಯ ಸರ್ಕಾರದ ಕಾರ್ಯದರ್ಶಿಯು ಶಿವಮೊಗ್ಗ ಜಿಲ್ಲಾಧಿಕಾರಿಗೆ ನಿರ್ದೇಶಿಸಿರುವುದು ತಿಳಿದು ಬಂದಿದೆ.

 

ನಿಯಮಗಳಲ್ಲಿ ಅವಕಾಶಗಳಿಲ್ಲದಿದ್ದರೂ ಕೋಟ್ಯಂತರ ರುಪಾಯಿ ಮೌಲ್ಯದ ಗೋಮಾಳ ಜಮೀನುಗಳನ್ನು ರಾಷ್ಟ್ರೋತ್ಥಾನ ಪರಿಷತ್‌ಗೆ ಮಂಜೂರು ಮಾಡಿದೆ. ಆರ್ಥಿಕ ಮತ್ತು ಕಾನೂನು ಇಲಾಖೆಯ ಅಸಮ್ಮತಿ ನಡುವೆಯೂ ಈಗಲೂ ಸಂಘ ಪರಿವಾರದ ಅಂಗಸಂಸ್ಥೆಗಳಿಗೆ  ಜಮೀನು ಮಂಜೂರು ಮಾಡುವ ಪ್ರಸ್ತಾವನೆಗಳನ್ನು ಸಚಿವ ಸಂಪುಟಕ್ಕೆ ಕಂದಾಯ ಇಲಾಖೆಯು ಮಂಡಿಸುತ್ತಲೇ ಇದೆ.

 

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಜಮೀನು ಮಂಜೂರು ಕೋರಿರುವ ರಾಷ್ಟ್ರೋತ್ಥಾನ ಪರಿಷತ್‌ ಪ್ರಸ್ತಾವನೆಗಳನ್ನುಸಲ್ಲಿಸಿದೆ. ಬಾಕಿ ಇರಿಸಿಕೊಂಡಿರುವ ಪ್ರಸ್ತಾವನೆಗಳನ್ನು ಸಚಿವ ಸಂಪುಟಕ್ಕೆ ಮಂಡಿಸಿ ಎಂದು  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಪ್ರಧಾನ ಕಾರ್ಯದರ್ಶಿ ಮಂಜುನಾಥ್‌ ಪ್ರಸಾದ್‌ ಅವರು ರಾಜ್ಯದ ಎಲ್ಲಾ ಜಿಲ್ಲಾಧಿಕಾರಿಗಳಿಗೆ ಟಿಪ್ಪಣಿ ಹಾಕಿದ್ದನ್ನು ಸ್ಮರಿಸಬಹುದು.

SUPPORT THE FILE

Latest News

Related Posts