ದಲಿತ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ಸೌಲಭ್ಯ; ಅಸ್ಪೃಶ್ಯತೆ ಆಚರಣೆಗೆ ಆಧಾರವಾಯಿತೇ ವಿವಿ ಕಾಯ್ದೆ?

photo credit;Deccan Hearald

ಬೆಂಗಳೂರು; ಎಂ ಎ ಕೋರ್ಸಿಗಿಂತ ಭಿನ್ನವಾದ ಸ್ನಾತಕೋತ್ತರ ಪದವಿ ಪಡೆದಿರುವ ಹೆಚ್ಚುವರಿ ವಿದ್ಯಾರ್ಥಿ ವಿಭಾಗದಲ್ಲಿ ದಾಖಲಾಗುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ, ವಿದ್ಯಾರ್ಥಿ ನಿಲಯದ ಸವಲತ್ತು, ಶುಲ್ಕ ವಿನಾಯಿತಿಯೂ ದೊರಕುವುದಿಲ್ಲ ಎಂದು ಬೆಂಗಳೂರು ವಿಶ್ವವಿದ್ಯಾಲಯವು ಈಗಾಗಲೇ ಕಾಯ್ದೆಯನ್ನು ಅನುಷ್ಟಾನಕ್ಕೆ ತಂದಿದೆ ಎಂಬ ಸಂಗತಿಯು ಬಹಿರಂಗವಾಗಿದೆ.

 

ಎರಡನೇ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯದಲ್ಲಿ ಅವಕಾಶ ನೀಡಬಾರದು ಎಂದು ವಿವಾದಕ್ಕೆ ದಾರಿಮಾಡಿಕೊಟ್ಟಿರುವ ಬೆಂಗಳೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್‌ ಮಹೇಶ್‌ಬಾಬು ಅವರು ಹೊರಡಿಸಿರುವ ಸುತ್ತೋಲೆಗೆ ವಿಶ್ವವಿದ್ಯಾಲಯವು ಈಗಾಗಲೇ ಜಾರಿಗೆ ತಂದಿರುವ ಕಾಯ್ದೆಯೇ ಇದಕ್ಕೆ ಆಧಾರ ಎಂಬುದು ತಿಳಿದು ಬಂದಿದೆ.

 

ಅಲ್ಲದೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮಾತ್ರ ಅನ್ವಯಿಸಿ ಆದೇಶಿಸಿರುವುದರಿಂದ ಇದು ಅಸ್ಪೃಶ್ಯತೆ ಆಚರಣೆಯಂತೆ ತೋರುತ್ತದೆ ಎಂಬ ವಾದವೂ ಕೇಳಿ ಬಂದಿದೆ.

 

 

 

ಕಾಯ್ದೆಯ ಅಧ್ಯಾಯ 3ರಲ್ಲೇನಿದೆ?

 

ವಿಶ್ವವಿದ್ಯಾಲಯದ ಅಥವಾ ಸಂಯೋಜಿತ ಕಾಲೇಜುಗಳಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸ್‌ಗಳಿಗೆ ಪ್ರವೇಶ ಪಡೆಯುವ ಅಭ್ಯರ್ಥಿಗಳಿಗೆ ಪ್ರವೇಶ ಕೊಡುವಾಗ ಸ್ನಾತಕ ಪದವಿ ಇಲ್ಲದವರು ಹಾಗೂ ಸ್ನಾತಕೋತ್ತರ ಪದವಿ ಇಲ್ಲದವರಿಗೆ ಮೊದಲ ಪ್ರಾಶಸ್ತ್ಯ ಕೊಡಬೇಕು. ಆದಾಗ್ಯೂ ವಿವಿಧ ವಿಭಾಗಗಳ ಕಾಯ್ದಿರಿಸಿದ ನಿಯಮಗಳ ಸಹಿತ ಅವಶ್ಯಕವಾದ ಕನಿಷ್ಠ ಅರ್ಹತೆಗಳನ್ನು ಪಡೆದ ಅಭ್ಯರ್ಥಿಗಳ ಪ್ರವೇಶದ ನಂತರವೂ ಸೀಟುಗಳು ಉಳಿದಲ್ಲಿ ಅವುಗಳನ್ನು ಹೆಚ್ಚುವರಿ ಅರ್ಹತೆ ಇರುವವರಿಗೆ ಕೊಡಬಹುದಾಗಿದೆ.

 

ಆದರೆ ಈ ಅಭ್ಯರ್ಥಿಗಳನ್ನು ಹೆಚ್ಚುವರಿ ವಿದ್ಯಾರ್ಥಿಗಳು ಎಂದು ಪರಿಗಣಿಸಲಾಗುವುದು. ಈ ವಿದ್ಯಾರ್ಥಿಗಳಿಗೆ ಪದವಿಗಾಗಿ ಅಧ್ಯಯನ ಮಾಡುತ್ತಿರುವ ಹೆಚ್ಚುವರಿ ಅರ್ಹತೆ ಇಲ್ಲದ ವಿದ್ಯಾರ್ಥಿಗಳಿಗೆ ಕೊಡಲಾಗುವ ಸೌಲಭ್ಯವು ಸಿಗುವುದಿಲ್ಲ. ಅದೇ ರೀತಿಯಲ್ಲಿ ತಾವು ಪ್ರವೇಶ ಪಡೆದ ಎಂ ಎ ಕೋರ್ಸ್‌ಗಿಂತ ಭಿನ್ನವಾದ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಹೆಚ್ಚುವರಿ ಅರ್ಹತೆಯ ಅಭ್ಯರ್ಥಿಗಳನ್ನು ಹೆಚ್ಚುವರಿ ವಿದ್ಯಾರ್ಥಿ ವಿಭಾಗದಲ್ಲಿ ಸೇರಿಸಲಾಗುತ್ತದೆ. ಇಂಥ ವಿದ್ಯಾರ್ಥಿಗಳನ್ನು ಪ್ರತ್ಯೇಕವಾಗಿ ನೋಂದಾಯಿಸಲಾಗುತ್ತದೆ.

 

ಅವರು ನಿಯಮಿತ ಕೋರ್ಸ್‌ಗಳನ್ನು ಮಾಡುವವರು ಎಂದು ಪರಿಗಣಿಸುವುದಿಲ್ಲ. ಅವರು ಅಪ್ಪಣೆ ಪಡೆದ ವಿಷಯಗಳಿಗಾಗಿ ತರಗತಿಗಳಿಗೆ ಹಾಜರಾಗಲು ಹಾಗೂ ಪರೀಕ್ಷೆಗೆ ಕೂಡಲು ಅರ್ಹರಾಗಿರುತ್ತಾರೆ. ಅಂತಹ ವಿದ್ಯಾರ್ಥಿಗಳು ಯಾವುದೇ ತರಹದ ಸವಲತ್ತುಗಳು, ವಿದ್ಯಾರ್ಥಿ ವೇತನ, ವಿದ್ಯಾರ್ಥಿ ನಿಲಯದ ಸವಲತ್ತು, ಶುಲ್ಕ ವಿನಾಯಿತಿ ಮತ್ತು ಮೊದಲನೆ ಸ್ನಾತಕೋತ್ತರ ಪದವಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಒದಗಿಸುವ ಇತರ ಸವಲತ್ತುಗಳು ದೊರಕುವುದಿಲ್ಲ.

 

ಯಾರಾದರೂ ವಿದ್ಯಾರ್ಥಿಗಳು ತಾನು ಹಿಂದೆ ಪದವಿ ಮಾಡಿದ ವಿಷಯವನ್ನು ತಿಳಿಸದೇ ಮುಚ್ಚಿಟ್ಟರೆ ಅಂತಹವರ ಹೆಸರನ್ನು ತನಿಖೆ ನಂತರ ನೋಂದಣಿಯ ದಾಖಲೆಯಿಂದ ತೆಗೆದುಹಾಕಲಾಗುತ್ತದೆ. ಪ್ರವೇಶದ ಆರ್ಡಿನನ್ಸ್‌ ಅನ್ವಯ ಸ್ನಾತಕೋತ್ತರ ಪದವಿಯನ್ನು ಹಿಂದೆ ಅಧ್ಯಯನ ಮಾಡದೇ ಇರುವ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ ಕೊಡಲಾಗುತ್ತದೆ. ಈ ಆಜ್ಞೆಯನ್ನು ಕಠಿಣವಾಗಿ ಪಾಲಿಸಲಾಗುತ್ತದೆ.

 

ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಉಪಯೋಜನೆಯಡಿಯಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಲ್ಯಾಪ್‌ಟಾಪ್‌ ಒದಗಿಸಲು ಅನುದಾನವಿಲ್ಲ ಎಂದು ಸರ್ಕಾರವು ಕೈ ಚೆಲ್ಲಿರುವ ಬೆನ್ನಲ್ಲೇ ಬೆಂಗಳೂರು ವಿಶ್ವವಿದ್ಯಾಲಯದ ರಿಜಿಸ್ಟ್ರಾರ್‌ 2022ರ ಡಿಸೆಂಬರ್ 2ರಂದು ಸುತ್ತೊಲೆ ಹೊರಡಿಸಿದ್ದ ಸುತ್ತೋಲೆಯು ಚರ್ಚೆಗೆ ಗ್ರಾಸವಾಗಿತ್ತು.

 

ಸುತ್ತೋಲೆಯಲ್ಲೇನಿದೆ?

 

2022-23ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ/ಪಂಗಡದ ವಿದ್ಯಾರ್ಥಿಗಳಿಗೆ ಪ್ರಥಮ ವರ್ಷದ ಹಾಸ್ಟೆಲ್‌ ಪ್ರವೇಶ ನೀಡುವ ಸಂದರ್ಭದಲ್ಲಿ ಎರಡನೇ ಸ್ನಾತಕೋತ್ತರ ಪದವಿಗೆ ಕಡ್ಡಾಯವಾಗಿ ಅವಕಾಶ ನೀಡಬಾರದೆಂದು ತಿಳಿಸಲಾಗಿದೆ. ಕಾರಣ ಸರ್ಕಾರದ ಆದೇಶದನ್ವಯ ಒಂದು ಬಾರಿ ಸರ್ಕಾರಿ ಅಥವಾ ವಿಶ್ವವಿದ್ಯಾಲಯದ ಸೌಲಭ್ಯಗಲನ್ನು ಪಡೆದಿರುವವರಿಗೆ ಮತ್ತೊಮ್ಮೆ ವಿದ್ಯಾರ್ಥಿ ನಿಲಯಗಳಲ್ಲಿ ಪ್ರವೇಶಕ್ಕೆ ಅವಕಾಶವಿಲ್ಲ. ಇದನ್ನು ಅತೀ ಸೂಕ್ಷ್ಮವಾಗಿ ಪರಿಗಣಿಸಿ ಪ್ರವೇಶ ನೀಡುವ ಸಂದರ್ಭದಲ್ಲಿ ಎಲ್ಲಾ ದಾಖಲಾತಿಗಳನ್ನು ಪರಿಶೀಲಿಸಿ ಪ್ರವೇಶ ನೀಡಬೇಕು ಎಂದು ಸೂಚಿಸಲಾಗಿತ್ತು.

ದಲಿತ ಸ್ನಾತಕೋತ್ತರ ವಿದ್ಯಾರ್ಥಿಗಳ 2ನೇ ಪದವಿಗೆ ಹಾಸ್ಟೆಲ್‌ಗೆ ಅವಕಾಶವಿಲ್ಲ; ಸುತ್ತೋಲೆ ಬಹಿರಂಗ

ಆದ್ದರಿಂದ ಎಲ್ಲಾ ಪ್ರಧಾನ ಕ್ಷೇಮ ಪಾಲಕರುಗಲೂ ವಿದ್ಯಾರ್ಥಿಗಳ ವಿವರಗಳನ್ನು ಪರಿಶೀಲಿಸಿ ಮುಚ್ಚಳಿಕೆಯನ್ನು ಪಡೆದು ಹಾಸ್ಟೆಲ್‌ ಪ್ರವೇಶ ನೀಡುವುದು. ವಿಭಾಗಗಳಿಗೆ ಪ್ರವೇಶ ನೀಡುವ ಸಂದಭ್ದಲ್ಲಿ ವಿದ್ಯಾರ್ಥಿಗಳ ಎಲ್ಲಾ ದಾಖಲಾತಿಗಳನ್ನು ಪರಿಶೀಲಿಸಬೇಕು. ಮತ್ತು ಮೊದಲ ಪಿ ಜಿ ಮತ್ತು ಎರಡನೇ ಪಿ ಜಿ ಎಂಬುದನ್ನು ಪರಿಶೀಲಿಸಿಕೊಂಡು ವಿಭಾಗಗಳ ಮುಖ್ಯಸ್ಥರು ವಿದ್ಯಾರ್ಥಿಗಳ ಹಾಸ್ಟೆಲ್‌ ಪ್ರವೇಶದ ಅರ್ಜಿಗಳನ್ನು ದೃಢೀಕರಿಸಬೇಕು ಎಂದು ನಿರ್ದೇಶನ ನೀಡಿದ್ದರು.

 

ರಿಜಿಸ್ಟ್ರಾರ್‌ ಹೊರಡಿಸಿರುವ ಸುತ್ತೋಲೆಗೆ ವಿಶ್ವವಿದ್ಯಾಲಯಗಳ ಅಧ್ಯಾಪಕರ ವಲಯದಲ್ಲೂ ವಿರೋಧ ವ್ಯಕ್ತವಾಗಿದೆ. ಈ ಕುರಿತು ಲೇಖಕ ಅರವಿಂದ ಮಾಲಗತ್ತಿ ಅವರು ಸಾಮಾಜಿಕ ಜಾಲತಾಣದಲ್ಲಿ ತಮ್ಮ ವಿರೋಧವನ್ನು ದಾಖಲಿಸಿದ್ದಾರೆ.

 

ಮೀಸಲಾತಿಯನ್ನು ಪಡೆಯುವ ಎಲ್ಲರಿಗೂ ಇದು ಏಕಕಾಲಕ್ಕೆ ಅನ್ವಯ ಮಾಡಲಾಗಿಲ್ಲ. ಏಕೆಂದರೆ ಇದರ ಉದ್ದೇಶ ಒಡೆದು ಆಳುವ ನೀತಿಯಂತೆ ಕಾಣುತ್ತದೆ. ಸರ್ಕಾರಿ ಸೌಲಭ್ಯ ಪಡೆಯುವ ಎಲ್ಲರಿಗೂ ಏಕಕಾಲಕ್ಕೆ ನಿಷೇಧ ಹೇರಿದರೆ , ವಿದ್ಯಾರ್ಥಿಗಳೆಲ್ಲರೂ ತಿರುಗಿ ಬೀಳಬಹುದೆಂದು ಈ ಕ್ರಮವನ್ನು ಅನುಸರಿಸಿರಬಹುದು. ಈ ಅಸ್ತ್ರ ನಾಳೆ ಇನ್ನುಳಿದ ಮೀಸಲಾತಿ ಅಭ್ಯರ್ಥಿಗಳಿಗೂ ಅನ್ವಯಿಸುವ ಇರಾದೆ ಇದೆ ಎಂದೆ ಅರ್ಥ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಮಾತ್ರ ಅನ್ವಯಿಸಿ ಆದೇಶಿಸಿರುವುದರಿಂದ ಇದು ಅಸ್ಪೃಶ್ಯತೆ ಆಚರಣೆಯಂತೆ ತೋರುತ್ತದೆ. ಇಂಥ ಆದೇಶ ಘನತೆಯನ್ನು ಹೆಚ್ಚಿಸಲಾರವು. ಇದರ ಬಗ್ಗೆ ಮರುಚಿಂತನೆ ಅಗತ್ಯ ಎಂದು ಅರವಿಂದ ಮಾಲಗತ್ತಿ ಅವರು ಪ್ರತಿಪಾದಿಸಿದ್ದಾರೆ.

 

‘ಬೆಂಗಳೂರು ವಿಶ್ವವಿದ್ಯಾಲಯವು ದಲಿತ ವಿರೋಧಿ ನೀತಿಯನ್ನು ಪದೇ ಪದೇ ಜಾಹೀರು ಮಾಡಿದೆ. ಬಿಜೆಪಿಯ ರಹಸ್ಯ ಕಾರ್ಯಸೂಚಿ ಬೆತ್ತಲಾಗಿದೆ. ದಲಿತ ವಿದ್ಯಾರ್ಥಿಗಳಿಗೆ ಎರಡನೇ ಸ್ನಾತಕೋತ್ತರ ಪದವಿಗೆ ಹಾಸ್ಟೆಲ್‌ಗೆ ಅವಕಾಶ ನೀಡದಂತೆ ಸುತ್ತೋಲೆ ನೀಡಿ ಅವರ ಹಕ್ಕು ಕಸಿಯಲು ಶಿಕ್ಷಣ ವಂಚಿತ ಮಾಡಲು ಹೊರಟಿದೆ,’ ಎಂದು ವಿಧಾನಪರಿಷತ್‌ನ ಮಾಜಿ ಸದಸ್ಯ ಕಾಂಗ್ರೆಸ್‌ನ ರಮೇಶ್‌ಬಾಬು ಅವರು ಟ್ವೀಟ್‌ ಮಾಡಿದ್ದರು.

the fil favicon

SUPPORT THE FILE

Latest News

Related Posts