ಅಬಕಾರಿ ಹಗರಣ; ಪರವಾನಿಗೆ ಇಲ್ಲದಿದ್ದರೂ ಮರೆಮಾಚಿ ಮುಂಬೈ ಕಂಪನಿಗೆ ಕಾಕಂಬಿ ರಫ್ತಿಗೆ ಅನುಮತಿ

ಬೆಂಗಳೂರು; ಹೊರ ರಾಜ್ಯದ ಕಾಕಂಬಿ ರಫ್ತುದಾರರು ಮತ್ತು ಕಂಪನಿಗಳು ರಾಜ್ಯದ ಕಾಕಂಬಿಯನ್ನು ಗೋವಾ ಮತ್ತು ತಮಿಳುನಾಡು ಸೇರಿದಂತೆ ಹೊರ ರಾಜ್ಯಗಳಿಗೆ ರಫ್ತು ಮಾಡಲು ಸಲ್ಲಿಸಿದ್ದ ಪ್ರಸ್ತಾವನೆಗಳನ್ನು ಹಿಂದಿನ ಸರ್ಕಾರಗಳು ತಿರಸ್ಕರಿಸಿದ್ದರೂ ಹಾಲಿ ರಾಜ್ಯ ಬಿಜೆಪಿ ಸರ್ಕಾರವು ಗುಜರಾತ್‌ ಮತ್ತು ಮಹಾರಾಷ್ಟ್ರ ಬಂದರು ಮೂಲಕ ರಫ್ತು ಮಾಡುವ ಮಹಾರಾಷ್ಟ್ರ ಮೂಲದ ಕೆ ಎನ್‌ ರಿಸೋರ್ಸ್‌ ಪ್ರೈ ಲಿಮಿಟೆಡ್‌ಗೆ 2 ಲಕ್ಷ ಮೆಟ್ರಿಕ್‌ ಟನ್‌ ಕಾಕಂಬಿಯನ್ನು ಎತ್ತುವಳಿ ಮಾಡಿ ರಫ್ತು ಮಾಡಲು ಅನುಮತಿ ನೀಡಿದೆ.

 

ಅಲ್ಲದೇ ಈ ಕಂಪನಿಗೆ ಎಂ-2 ಲೈಸೆನ್ಸ್‌ ಇಲ್ಲದಿರುವುದನ್ನೂ ಮರೆಮಾಚಿರುವ ಅಬಕಾರಿ ಇಲಾಖೆಯು ಕರ್ನಾಟಕ ರಾಜ್ಯದ ಬೊಕ್ಕಸಕ್ಕೆ ಸಂದಾಯವಾಗಬೇಕಿದ್ದ ಹಡಗು ನಿರ್ವಹಣೆ ಶುಲ್ಕ, ಬಂದರು ನಿರ್ವಹಣೆ ಇನ್ನಿತರೆ (wharfage) ಸೇರಿದಂತೆ ಇನ್ನಿತರೆ ಶುಲ್ಕದ ರೂಪದಲ್ಲಿ ಸಂದಾಯವಾಗಬೇಕಿದ್ದ ಕೋಟ್ಯಂತರ ರುಪಾಯಿ ಗೋವಾ ಮತ್ತು ಮಹಾರಾಷ್ಟ್ರ ಬೊಕ್ಕಸಕ್ಕೆ ಪಾವತಿ ಮಾಡಲು ನೇರವಾಗಿ ನೆರವಾಗಿದೆ.

 

ಮುಂಬೈ ಮೂಲದ ಕೆ ಎನ್‌ ರಿಸೋರ್ಸ್‌ ಪ್ರೈವೈಟ್‌ ಲಿಮಿಟೆಡ್‌ ಕಂಪನಿಯ ಪ್ರಸ್ತಾವನೆಯನ್ನು ರಾಜ್ಯ ಅಬಕಾರಿ ಇಲಾಖೆಯು ಪರಿಗಣಿಸಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ. ಈ ಸಂಬಂಧ ‘ದಿ ಫೈಲ್‌’ ಆರ್‌ಟಿಐ ಅಡಿಯಲ್ಲಿ ಹಲವು ದಾಖಲೆಗಳನ್ನು ಪಡೆದುಕೊಂಡಿದೆ.

 

ಹಾಗೆಯೇ ಕರ್ನಾಟಕದಲ್ಲಿ ನೋಂದಾಯಿಸಲ್ಪಟ್ಟ ರಫ್ತುದಾರರು ಈ ರೀತಿಯ ರಫ್ತು ಮಾಡಿದರೆ ಆದಾಯ ತೆರಿಗೆ ಮತ್ತು ಜಿಎಸ್‌ಟಿ ತೆರಿಗೆಗಳಲ್ಲಿನ ರಾಜ್ಯ ಸರ್ಕಾರದ ಪಾಲು ದೊರಕುತ್ತದೆ. ಆದರೆ ಕರ್ನಾಟಕದ ಸ್ಥಳೀಯ ಕಂಪನಿಯಲ್ಲಿ ಉತ್ಪಾದನೆಯಾದ ಕಾಕಂಬಿಯನ್ನು ಮಹಾರಾಷ್ಟ್ರದಲ್ಲಿ ನೋಂದಾಯಿಸಿರುವ ಕೆ ಎನ್‌ ರಿಸೋರ್ಸ್‌ ಪ್ರೈವೈಟ್‌ ಲಿಮಿಟೆಡ್‌ ಮೂಲಕ ಗೋವಾ ಬಂದರು ಮೂಲಕ ಅನುಮತಿ ನೀಡಿರುವುದರಿಂದ ಕೋಟ್ಯಂತರ ರುಪಾಯಿ ಕರ್ನಾಟಕದ ಬೊಕ್ಕಸಕ್ಕೆ ನಷ್ಟವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

2022-23ನೇ ನೇ ಅಬಕಾರಿ ಸಾಲಿಗೆ 2,00,000 ಮೆಟ್ರಿಕ್‌ ಟನ್‌ ಕಾಕಂಬಿಯನ್ನು ರಫ್ತು ಮಾಡಲು ಅನುಮತಿ ಕೋರಿ ಕೆ ಎನ್‌ ರಿಸೋರ್ಸ್‌ ಪ್ರೈವೈಟ್‌ ಲಿಮಿಟೆಡ್‌ 2022ರ ಆಗಸ್ಟ್‌ 28ರಂದು ಸಲ್ಲಿಸಿದ್ದ ಮನವಿಯಲ್ಲಿಯೇ ತಮ್ಮ ಕಂಪನಿಗೆ ಎಂ 2 ಲೈಸೆನ್ಸ್‌ ಇಲ್ಲವೆಂದು ಸ್ಪಷ್ಟವಾಗಿ ಹೇಳಿದ್ದರೂ ಅದೇ ಕಂಪನಿಗೇ ಅನುಮತಿ ನೀಡಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.

 

ಮನವಿಯಲ್ಲೇನಿದೆ?

 

ಗುಜರಾತ್‌, ಮಹಾರಾಷ್ಟ್ರದಲ್ಲಿ ಬಂದರು ಸೌಲಭ್ಯ ಹೊಂದಿದೆ. ಈ ಬಂದರುಗಳ ಮೂಲಕವೇ ಈಗಾಗಲೇ 4,00,000 ಮೆಟ್ರಿಕ್‌ ಟನ್‌ ಕಾಕಂಬಿಯನ್ನು ರಫ್ತು ಮಾಡಿದೆ. ಈ ವರ್ಷ ಕರ್ನಾಟಕದಿಂದ 2 ಲಕ್ಷ ಮೆಟ್ರಿಕ್‌ ಟನ್‌ ಕಾಕಂಬಿಯನ್ನು ಗೋವಾದ ಮುರ್ಮುಗೋವಾ ಬಂದರು ಮೂಲಕ ರಫ್ತು ಮಾಡುವ ಉದ್ದೇಶವಿದೆ.

 

 

 

ಅಲ್ಲಿಯೇ ಗಣೇಶ್‌ ಬೆನ್ಜೋಪ್ಲಾಸ್ಟ್‌ ಲಿಮಿಟೆಡ್‌ ಹೊಂದಿರುವ 184000 ಮೆಟ್ರಿಕ್‌ ಟನ್‌ ಸಾಮರ್ಥ್ಯದ ಶೇಖರಣೆ ಸೌಲಭ್ಯವನ್ನು ಬಳಸಿಕೊಳ್ಳಲು ಗೋವಾ ರಾಜ್ಯಕ್ಕೆ ಅರ್ಜಿ ಸಲ್ಲಿಸಲಾಗಿದೆ. ನಾವು ಕರ್ನಾಟಕದ ಸಕ್ಕರೆ ಕಾರ್ಖಾನೆಗಳು ಮತ್ತು ವಿದೇಶಗಳ ಕಂಪನಿಯೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದೇವೆ. ಆ ಕಂಪನಿಗಳು ಕಾಕಂಬಿಯನ್ನು ನೀಡಲು ಒಪ್ಪಿವೆ. ನಾವು ಬಂದರು ಮೂಲಕ ಸಾಗಾಣಿಕೆ ಸಂಬಂಧ ಬೃಹತ್‌ ಜಾಲ ಹೊಂದಿದ್ದೇವೆ. ಹೀಗಾಗಿ 2 ಲಕ್ಷ ಮೆಟ್ರಿಕ್‌ ಟನ್‌ ಕಾಕಂಬಿಯನ್ನು ರಫ್ತು ಮಾಡಲು ಅನುಮತಿ ನೀಡಬೇಕು ಎಂದು ಕೆ ಎನ್‌ ರಿಸೋರ್ಸ್‌ ಕಂಪನಿಯು 2022ರ ಆಗಸ್ಟ್‌ 28ರಂದು ಅಬಕಾರಿ ಇಲಾಖೆಯ ಆಯುಕ್ತರಿಗೆ ಸಲ್ಲಿಸಿತ್ತು. ಆದರೆ ಈ ಮನವಿಯಲ್ಲಿ ಎಲ್ಲಿಯೂ ತಮಗೆ ಎಂ 2 ಲೈಸೆನ್ಸ್‌ ಹೊಂದಿದೆ ಎಂಬುದನ್ನು ಉಲ್ಲೇಖಿಸಿಲ್ಲ.

 

ಅಲ್ಲದೆ ಈ ಸಂಬಂಧ ಅಬಕಾರಿ ಆಯುಕ್ತರ ಕಚೇರಿಯು ಸಲ್ಲಿಸಿದ್ದ ಪ್ರಸ್ತಾವನೆ ಮೇಲೆ ಆರ್ಥಿಕ ಇಲಾಖೆಯ ಸರ್ಕಾರದ ಹೆಚ್ಚುವರಿ ಪ್ರಧಾನ ಕಾರ್ಯದರ್ಶಿ ಐಎಸ್‌ಎನ್‌ ಪ್ರಸಾದ್‌ ಮತ್ತು ಕಾರ್ಯದರ್ಶಿ ಡಾ ಏಕ್‌ರೂಪ್‌ಕೌರ್‌ ಅವರೂ ಸೇರಿದಂತೆ ಇಲಾಖೆಯ ಯಾವೊಬ್ಬ ಅಧಿಕಾರಿಯೂ ಕಂಪನಿಯು ಎಂ 2 ಲೈಸೆನ್ಸ್‌ ಇಲ್ಲದಿರುವ ಅಂಶವನ್ನು ಪ್ರಸ್ತಾವನೆಯಲ್ಲಿನ ಕಡತದಲ್ಲಿ ಎಲ್ಲಿಯೂ ನಮೂದಿಸಿಲ್ಲ ಮತ್ತು ದಾಖಲಿಸಿಲ್ಲ. ಕರಡು ಪತ್ರವನ್ನು ತಯಾರಿಸಿರುವ ಆರ್ಥಿಕ ಇಲಾಖೆಯು ಎಂ 2 ಲೈಸೆನ್ಸ್‌ ಇಲ್ಲದಿರುವುದರ ಕುರಿತು ಇ-ಆಫೀಸ್‌ ಕಡತದಲ್ಲಿ ಎಲ್ಲಿಯೂ ಚರ್ಚೆ ನಡೆಸದಿರುವುದು ಸಂಶಯಗಳಿಗೆ ಕಾರಣವಾಗಿದೆ.

 

ಹೊರರಾಜ್ಯದ ಕಂಪನಿಯು ಹೊರರಾಜ್ಯದ ಬಂದರು ಮೂಲಕ ರಾಜ್ಯದ ಕಾಕಂಬಿಯನ್ನು ರಫ್ತು ಮಾಡಲು ಅನುಮತಿ ನೀಡುವುದರಿಂದ ಕರ್ನಾಟಕ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರುಪಾಯಿ ನಷ್ಟವಾಗಲಿದೆ ಎಂಬ ಅಂಶವನ್ನು ಯಾವೊಬ್ಬ ಅಧಿಕಾರಿಯೂ ಉಲ್ಲೇಖಿಸದೆಯೆ ಮರೆಮಾಚಿಸಿರುವುದು ಅಚ್ಚರಿ ಮೂಡಿಸಿದೆ.

 

‘ಅಬಕಾರಿ ಆಯುಕ್ತರು ಪ್ರಸ್ತಾಪಿಸಿರುವಂತೆ ಕೆ ಎನ್‌ ರಿಸೋರ್ಸ್‌ ಪ್ರೈ ಲಿ., ಮಹಾರಾಷ್ಟ್ರ ಇಂಡಿಯಾ ಇವರಿಗೆ 2022-23ನೇ ಸಾಲಿಗೆ 2,00,000 ಮೆಟ್ರಿಕ್‌ ಟನ್‌ ಕಾಕಂಬಿಯನ್ನು ರಾಜ್ಯದ ವಿವಿಧ ಸಕ್ಕರೆ ಕಾರ್ಖಾನೆಗಳಿಂದ ಎತ್ತುವಳಿ ಮಾಡಿ ರಫ್ತು ಮಾಡಲು ಅನುಮತಿ ನೀಡುವ ಕುರಿತು ಅಬಕಾರಿ ಸಚಿವರ ಅನುಮೋದನೆ ಪಡೆಯಬಹುದಾಗಿದೆ,’ ಎಂದು ಸರ್ಕಾರದ ಅಧೀನ ಕಾರ್ಯದರ್ಶಿ ಮಂಜುಳಾ ನಟರಾಜ್‌ ಅವರು ಟಿಪ್ಪಣಿಯಲ್ಲಿ ಉಲ್ಲೇಖಿಸಿದ್ದಾರೆ.

 

‘2022-23 ಮತ್ತು 2023-24ನೇ ಸಾಲಿಗೆ 2,00,00ಮೆಟ್ರಿಕ್‌ ಟನ್‌ ಕಾಕಂಬಿಯನ್ನು ಎತ್ತುವಳಿ ಮಾಡಿ ಹೊರದೇಶಗಳಿಗೆ ರಫ್ತು ಮಾಡಲು ಅನುಮೋದನೆ ನೀಡಿದೆ,’ ಎಂದು ಸಚಿವ ಗೋಪಾಲಯ್ಯ ಅವರೂ ಸಹಿ ಮಾಡಿರುವುದು ಇದೇ ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.

 

ಪ್ರಸ್ತುತ ಮೇ 2022ರ ಅಂತ್ಯಕ್ಕೆ ರಾಜ್ಯದ ವಿವಿಧ ಸಕ್ಕರೆ ಕಾರ್ಖಾನೆಗಳಲ್ಲಿ ಒಟ್ಟು 7,65,694 ಮೆಟ್ರಿಕ್‌ ಟನ್‌ ಕಾಕಂಬಿ ದಾಸ್ತಾನು ಇದೆ. ಈಗಾಗಲೇ ಮಯಸೂರು ಮರ್ಕಂಟೈಲ್‌ ಕಂಪನಿಗೆ 3 ಲಕ್ಷ ಮೆಟ್ರಿಕ್‌ ಟನ್‌, ಚೆನ್ನೈನ ಇಂಕೋಲಾ (ಎಕ್ಸ್‌ಪೋರ್ಟ್ಸ್‌ ಲಿ)ಗೆ 1 ಲಕ್ಷ ಮೆಟ್ರಿಕ್‌ ಟನ್‌ ಹೀಗೆ ಒಟ್ಟು 4 ಲಕ್ಷ ಮೆಟ್ರಿಕ್‌ ಟನ್‌ ಕಾಕಂಬಿಯನ್ನು ರಫ್ತು ಮಾಡಲು ಅನುಮತಿ ನೀಡಿದೆ. ಇನ್ನು 3,65,694 ಮೆಟ್ರಿಕ್‌ ಟನ್‌ ಕಾಕಂಬಿ ದಾಸ್ತಾನು ಬಾಕಿ ಇದೆ. ಇದರಲ್ಲಿ 2 ಲಕ್ಷ ಮೆಟ್ರಿಕ್‌ ಟನ್‌ ಕಾಕಂಬಿಯನ್ನು ಮುಂಬೈನ ಕೆ ಎನ್‌ ರಿಸೋರ್ಸ್‌ ಪ್ರೈ ಲಿಮಿಟೆಡ್‌ಗೆ ರಫ್ತು ಮಾಡಲು 2022ರ ನವಂಬರ್‌ 3ರಂದೇ ಅನುಮತಿ ನೀಡಿ ನಿರ್ದೇಶನ ನೀಡಿರುವುದು ಟಿಪ್ಪಣಿ ಹಾಳೆಯಿಂದ ಗೊತ್ತಾಗಿದೆ.

 

‘ಅಬಕಾರಿ ಇಲಾಖೆಗೆ ಸಂಬಂಧಪಟ್ಟ ಕಾನೂನುಗಳ ಪ್ರಕಾರ ಎಂ-2 ಲೈಸೆನ್ಸ್‌ ಹೊಂದಿರದ ಯಾವ ಕಂಪನಿ/ರಫ್ತುದಾರನಿಗೂ ರಫ್ತು ಮಾಡಲು ಅನುವಾಗುವಂತೆ ಕಾಕಂಬಿ ಹಂಚಿಕೆ ಅನುಮತಿ ಪತ್ರವನ್ನು ಅಬಕಾರಿ ಇಲಾಖೆ ನೀಡುವಂತಿಲ್ಲ. ಮದ್ಯ ಮಾರಾಟ ಅಂಗಡಿಗೆ ಸಿಎಲ್‌-7 ಲೈಸೆನ್ಸ್‌ ಇಲ್ಲದೇ ಮದ್ಯ ಸರಬರಾಜು ಮಾಡಲು ಹೇಗೆ ಅನುಮತಿ ನೀಡಲಾಗುವುದಿಲ್ಲವೋ ಅದೇ ರೀತಿ ಎಂ-2 ಲೈಸೆನ್ಸ್‌ ಇಲ್ಲದ ಕಂಪನಿಗೆ ರಫ್ತು ಮಾಡಲು ಕಾಕಂಬಿ ಹಂಚಿಕೆ ಪತ್ರವನ್ನು ನೀಡಲಾಗದು. ಆದರೂ ಈ ಕಂಪನಿಗೆ ಕಾಕಂಬಿ ಹಂಚಿಕೆ ಮಾಡಿ ರಫ್ತುಮಾಡಲು ಅನುಮತಿ ನೀಡಿರುವುದು ಕಾನೂನುಬಾಹಿರವಾಗಿದೆ,’ ಎನ್ನುತ್ತಾರೆ ಅಬಕಾರಿ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು.

 

ಇನ್ನು, ಅಬಕಾರಿ ಆಯುಕ್ತರು 2022ರ ಅಕ್ಟೋಬರ್‌ 1ರಂದು ಸಲ್ಲಿಸಿದ್ದ ಶಿಫಾರಸ್ಸಿನಲ್ಲಿ 2022ರ ಮೇ 31ರ ಅಂತ್ಯದಲ್ಲಿದ್ದ ಕಾಕಂಬಿ ಶೇಖರಣೆ ವರದಿಯನ್ನಿರಿಸಿದ್ದಾರೆ. ಪ್ರತಿ ವರ್ಷ ಏಪ್ರಿಲ್‌ ತಿಂಗಳಿನಿಂದ ಅಕ್ಟೋಬರ್‌ ತಿಂಗಳವರೆಗೂ ಕಬ್ಬು ಇಲ್ಲದ (NON-CRUSHING) ಅವಧಿಯಾಗಿದೆ. ಸೆಪ್ಟಂಬರ್‌ ತಿಂಗಳವರೆಗಿನ ಕಾಕಂಬಿ ಶೇಖರಣೆ ವರದಿಯನ್ನು ಕಡತದಲ್ಲಿ ಇರಿಸಿಲ್ಲ. ಬದಲಿಗೆ 6 ತಿಂಗಳ ಹಿಂದಿನ ಕಾಕಂಬಿ ಶೇಖರಣೆ ವರದಿಯನ್ನು ಅಬಕಾರಿ ಆಯುಕ್ತರು ಸಲ್ಲಿಸುವ ಮೂಲಕ ಸರ್ಕಾರವನ್ನೇ ದಾರಿತಪ್ಪಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

 

ಸಾಧಾರಣವಾಗಿ ಸೆಪ್ಟಂಬರ್ ತಿಂಗಳಿನಲ್ಲಿ ಕಾಕಂಬಿಯು ಅತಿ ಕಡಿಮೆ ದಾಸ್ತಾನಿತ್ತು. ಆದರೆ ಈ ಅಂಶವನ್ನು ಸರ್ಕಾರದ ಗಮನಕ್ಕೆ ತರದಿರುವ ಅಬಕಾರಿ ಆಯುಕ್ತರ ನಡೆಯು ಸಂಚಿನಿಂದ ಕೂಡಿದೆ ಎಂಬ ಆರೋಪವೂ ಕೇಳಿ ಬಂದಿದೆ. ಅಲ್ಲದೇ ‘ಗೋವಾದಲ್ಲಿ ಕಾಕಂಬಿ ಶೇಖರಣೆ ಉಗ್ರಾಣವನ್ನು ಇಟ್ಟುಕೊಂಡು ಕರ್ನಾಟಕದಿಂದ ರಫ್ತು ಮಾಡಲು ಅವಕಾಶ ಮಾಡಿಕೊಟ್ಟಿರುವುದೇ ಹಾಸ್ಯಾಸ್ಪದ. ಇದೊಂದು ಹೈದರಾಬಾದ್‌ನ ವೈನ್‌ ಅಂಗಡಿಯವರಿಗೆ ಬೆಂಗಳೂರಿನಲ್ಲಿ ಲೈಸೆನ್ಸ್‌ ಮತ್ತು ಅಂಗಡಿ ಇಲ್ಲದೇ ಮದ್ಯ ಖರೀದಿಸಿ ಬೆಂಗಳೂರು ರಸ್ತೆ ಬದಿಯಲ್ಲಿ ವ್ಯಾಪಾರ ಮಾಡಿಕೊಟ್ಟಂತಾಗಿದೆ,’ ಎಂದೂ ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.

the fil favicon

SUPPORT THE FILE

Latest News

Related Posts