ಬೆಂಗಳೂರು; ಕರ್ನಾಟಕ ಸರ್ಕಾರದ ಒಂದು ವಿಭಿನ್ನ ಆರೋಗ್ಯ ವಿಮೆ ಯೋಜನೆ ಎಂಬ ಹೆಗ್ಗಳಿಕೆ ಹೊಂದಿದ್ದ ‘ಯಶಸ್ವಿನಿ’ ಯೋಜನೆಯನ್ನು ಮರು ಚಾಲನೆಗೊಳಿಸಲು ರಾಜ್ಯ ಸರ್ಕಾರವು ಮುಂದಾಗಿದೆಯಾದರೂ ಈ ಯೋಜನೆಯನ್ನು ಆಯುಷ್ಮಾನ್ ಭಾರತ್ ಯೋಜನೆಯೊಂದಿಗೆ ಸಂಯೋಜಿಸಬೇಕು ಎಂದು ಆರೋಗ್ಯ, ಕುಟುಂಬ ಕಲ್ಯಾಣ ಮತ್ತು ಸಹಕಾರ ಇಲಾಖೆಯು ಅಭಿಪ್ರಾಯಿಸಿವೆ.
ಯಶಸ್ವಿನಿ ಯೋಜನೆಯನ್ನು ಮರು ಜಾರಿಗೊಳಿಸುವ ಕುರಿತು ಸಹಕಾರ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ 2022ರ ಜೂನ್ 22ರಂದು ನಡೆದಿದ್ದ ಸಭೆಯಲ್ಲಿ ಭಾಗವಹಿಸಿದ್ದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು ನೀಡಿದ ಅಭಿಪ್ರಾಯವನ್ನೇ ಸಹಕಾರ ಇಲಾಖೆಯ ಪ್ರಧಾನ ಕಾರ್ಯದರ್ಶಿಯು ಅನುಮೋದಿಸಿದ್ದಾರೆ.
2022ರ ಅಕ್ಟೋಬರ್ 2ರ ಗಾಂಧಿ ಜಯಂತಿಯಂದು ಯಶಸ್ವಿನಿ ಮರುಚಾಲಿತ ಯೋಜನೆಯನ್ನು ರಾಜ್ಯಾದ್ಯಂತ ಜಾರಿಗೊಳಿಸಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೂಚಿಸಿರುವ ಬೆನ್ನಲ್ಲೇ ಆರೋಗ್ಯ ಮತ್ತು ಸಹಕಾರ ಇಲಾಖೆಯು ನೀಡಿರುವ ಅಭಿಪ್ರಾಯವು ಮಹತ್ವ ಪಡೆದುಕೊಂಡಿದೆ. ಈ ಸಭೆಯ ನಡವಳಿ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
‘ಆಯುಷ್ಮಾನ್ ಭಾರತ್ ಯೋಜನೆಯು ಬಡತನ ರೇಖೆಗಿಂತ ಕೆಳಗಿರುವ ಎಲ್ಲಾ ನಾಗರೀಕರಿಗೆ ಉಚಿತವಾಗಿ ಸಿಗುವ ಆರೋಗ್ಯ ರಕ್ಷಣೆ ಯೋಜನೆಯಾಗಿದೆ. ಯಶಸ್ವಿನಿ ಯೋಜನೆಯ ಸದಸ್ಯರು ವಾರ್ಷಿಕ ಪ್ರೀಮಿಯಂ ಪಾವತಿಸುವ ಯೋಜನೆಯಾಗಿದೆ. ಆಯುಷ್ಮಾನ್ ಭಾರತ್ ಯೋಜನೆಯಲ್ಲಿ ಪ್ರತಿ ಕುಟುಂಬಕ್ಕೆ 5 ಲಕ್ಷ ರು. ಆರೋಗ್ಯ ಚಿಕಿತ್ಸಾ ವೆಚ್ಚ ಮಿತಿ ನಿಗದಿಪಡಿಸಿದ್ದರೆ ಯಶಸ್ವಿನಿ ಯೋಜನೆಯಲ್ಲಿ ಪ್ರತಿ ಸದಸ್ಯನಿಗೆ 2.50 ಲಕ್ಷ ರು. ವಾರ್ಷಿಕ ಚಿಕಿತ್ಸಾ ವೆಚ್ಚ ಮಿತಿ ನಿಗದಿಪಡಿಸಿದೆ. ಹಾಲಿ ದೇಶದಾದ್ಯಂತ ಆಯುಷ್ಮಾನ್ ಭಾರತ್ ಯೋಜನೆಯು ಉಚಿತವಾಗಿ ಜಾರಿಯಾಗುತ್ತಿದ್ದು, ಈ ಯೋಜನೆಯೊಂದಿಗೆ ಪರಿಷ್ಕೃತ ಯಶಸ್ವಿನಿ ಯೋಜನೆಯನ್ನು ಸಂಯೋಜಿಸುವ ಅಗತ್ಯವಿದೆ,’ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರು ಅಭಿಪ್ರಾಯಿಸಿರುವುದು ನಡವಳಿಯಿಂದ ತಿಳಿದು ಬಂದಿದೆ.
ಸಹಕಾರ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಯವರು ‘ಯಶಸ್ವಿನಿ ಮರುಚಾಲಿತ ಯೋಜನೆಯನ್ನು ಆಯುಷ್ಮಾನ್ ಭಾರತ್ ಯೋಜನೆಯೊಂದಿಗೆ ಸಂಯೋಜಿಸಿ ಕುಟುಂಬವನ್ನು ಘಟಕವೆಂದು ಪರಿಗಣಿಸಿ ರೆಫರಲ್ ಮತ್ತು ನಾನ್ ರೆಫರಲ್ ಚಿಕಿತ್ಸೆಗಳಿಗೆ ವಾರ್ಷಿಕ 10 ಲಕ್ಷ ರು.ಗಳ ಚಿಕಿತ್ಸಾ ಮಿತಿ ಹಾಗೂ ಪ್ರತಿ ಕುಟುಂಬದ ಇಬ್ಬರು ಸದಸ್ಯರಿಗೆ 500 ರು. ಮತ್ತು ಇಬ್ಬರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿರುವ ಸದಸ್ಯರ ಕುಟುಂಬಗಳಿಗೆ 1,000 ರು.ಗಳ ವಾರ್ಷಿಕ ವಂತಿಗೆ ಸಂಗ್ರಹಿಸಿ ಯೋಜನೆಯನ್ನು ಕಾರ್ಯರೂಪಕ್ಕೆ ತರುವುದು ಅವಶ್ಯಕ,’ ಎಂದು ಅಭಿಪ್ರಾಯ ವ್ಯಕ್ತಪಡಿಸಿರುವುದು ನಡವಳಿಯಿಂದ ಗೊತ್ತಾಗಿದೆ.
ಆಯುಷ್ಮಾನ್ ಆರೋಗ್ಯ ಭಾರತ್ ಯೋಜನೆಯಡಿ ಫಲಾನುಭವಿಗಳಿಗೆ ಉಚಿತ ಆರೋಗ್ಯ ಕಾರ್ಡ್ ನೀಡಲಾಗುತ್ತಿದೆ. ಈ ಯೋಜನೆಯು ಫಲಾನುಭವಿಗಳ ಕೋ-ಪೇಮೆಂಟ್‌ಗೆ ವಿರುದ್ಧವಾಗಿದ್ದು, ಅವರಿಗೆ ನಗದು ರಹಿತ ಚಿಕಿತ್ಸೆ ನೀಡಲಾಗುತ್ತಿದೆ. ಫಲಾನುಭವಿಗಳಿಗೆ ಯಾವುದೇ ಚಿಕಿತ್ಸೆ ನೀಡಬೇಕಾದಲ್ಲಿ ಸರ್ಕಾರಿ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ಪಡೆಯಬೇಕು ಎಂಬ ನಿರ್ಬಂಧವಿದೆ. ಆ ಕೇಂದ್ರದಲ್ಲಿ ಚಿಕಿತ್ಸೆ ಲಭ್ಯವಿಲ್ಲದಿದ್ದ ಸಂದರ್ಭದಲ್ಲಿ ರೆಫರಲ್ ವ್ಯವಸ್ಥೆಯಡಿ ಖಾಸಗಿ ಆಸ್ಪತ್ರೆಗಳಿಗೆ ಶಿಫಾರಸ್ಸು ಪತ್ರ ನೀಡಲಾಗುತ್ತದೆ.
160 ತುರ್ತು ಚಿಕಿತ್ಸೆಗಳಿಗೆ ರೆಫರಲ್ ವ್ಯವಸ್ಥೆಯಿಲ್ಲ. 40 ಸರಳ ದ್ವಿತೀಯ ಹಂ ಆರೋಗ್ಯ ಆರೈಕೆ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಸೀಮಿತವಾಗಿದೆ. ಫಲಾನುಭವಿಯ ಕುಟುಂಬವನ್ನು ಒಂದು ಘಟಕವನ್ನಾಗಿ ಪರಿಗಣಿಸಲಾಗುತ್ತಿದೆ. ಹಾಲಿ 1,650 ಚಿಕಿತ್ಸೆಗಳು ನೀಡಲಾಗುತ್ತಿದೆಯಲ್ಲದೆ ಈ ವರ್ಷದಲ್ಲೇ ಅದರ ಸಂಖ್ಯೆ 1,950ಕ್ಕೆ ಪರಿಷ್ಕೃತವಾಗುತ್ತಿದೆ.
ಅಯುಷ್ಮಾನ್ ಭಾರತ್ ಯೋಜನೆಯಡಿ ಚಿಕಿತ್ಸೆಗಳು ಪ್ರಾಥಮಿಕ, ದ್ವಿತೀಯ ಮತ್ತು ತೃತೀಯ ಹಂತದ ಆರೋಗ್ಯ ಆರೈಕೆ ಎಂದು ವರ್ಗೀಕರಿಸಲಾಗಿದೆ. ಯಶಸ್ವಿನಿ ಯೋಜನೆಯನ್ನೂ ಆಯುಷ್ಮಾನ್ ಭಾರತ್ ಯೋಜನೆಗೆ ಸಂಯೋಜಿಸಿದಲ್ಲಿ ಚಿಕಿತ್ಸೆಗಳನ್ನು ರೆಫರಲ್ ಮತ್ತು ರೆಫರಲ್ ರಹಿತ ಚಿಕಿತ್ಸೆಗಳೆಂದು ವರ್ಗೀಕರಿಸಲು ಆರೋಗ್ಯ ಇಲಾಖೆಯ ಆಯುಕ್ತರು ಸಹಮತಿ ವ್ಯಕ್ತಪಡಿಸಿರುವುದು ಸಭೆ ನಡವಳಿಯಿಂದ ಗೊತ್ತಾಗಿದೆ.
ಅಲ್ಲದೆ ಆಯುಷ್ಮಾನ್ ಭಾರತ್ ಯೋಜನೆಯಡಿ ಬಿಪಿಎಲ್ ಪ್ರತಿ ಕುಟುಂಬಕ್ಕೆ ವಾರ್ಷಿಕ 5 ಲಕ್ಷ ರು., ಎಪಿಎಲ್ ಕುಟುಂಬಕ್ಕೆ ವಾರ್ಷಿಕ 1.50 ಲಕ್ಷ ಮಿತಿ ನಿಗದಿಪಡಿಸಿದೆ. ಇದನ್ನು ಯಶಸ್ವಿನಿ ಯೋಜನೆ ಫಲಾನುಭವಿಗಳಿಗೆ ಬಿಪಿಎಲ್ ಕುಟುಂಬದವರಿಗೆ 10 ಲಕ್ಷ ಮತ್ತು ಎಪಿಎಲ್ ಕುಟುಂಬದವರಿಗೆ 10 ಲಕ್ಷಕ್ಕೆ ಉನ್ನತೀಕರಿಸಬೇಕು. ಈ ಮೂಲಕ ರಾಜ್ಯದಲ್ಲಿ ಯಶಸ್ವಿನಿ ಯೋಜನೆಯನ್ನು ಮರುಜಾರಿಗೊಳಿಸಿದರೆ ಸಹಕಾರ ಸಂಘಗಳ ಸದಸ್ಯರಿಗೆ ಹೆಚ್ಚಿನ ಅನುಕೂಲವಾಗಲಿದೆ. ಇದರಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಯಶಸ್ವಿನಿ ಯೋಜನೆ ಸದಸ್ಯರನ್ನು ನೋಂದಾಯಿಸಿಕೊಂಡು ಅನುಷ್ಠಾನಗೊಳಿಸಬಹುದು ಎಂಬ ಅಭಿಪ್ರಾಯವೂ ಸಭೆಯಲ್ಲಿ ವ್ಯಕ್ತವಾಗಿರುವುದು ತಿಳಿದು ಬಂದಿದೆ.
ಗ್ರಾಮೀಣ ಯಶಸ್ವಿನಿ ಯೋಜನೆಯಡಿ ಸದಸ್ಯತ್ವ ಪಡೆದವರು ವರ್ಷದಲ್ಲಿ ಒಂದು ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾದರೆ ಗರಿಷ್ಠ ಮಿತಿ 1.25 ಲಕ್ಷ ಹಾಗೂ ಅನೇಕ ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾದರೆ 2.00 ಲಕ್ಷ ಗರಿಷ್ಠ ಮಿತಿಯೊಳಗೆ ಶಸ್ತ್ರ ಚಿಕಿತ್ಸೆ ಪಡೆಯಲು ಅವಕಾಶವಿದೆ. ಅದೇ ರೀತಿ ನಗರ ಯಶಸ್ವಿನಿ ಯೋಜನೆಯಡಿ ಸದಸ್ಯತ್ವ ಪಡೆದವರು ವರ್ಷದಲ್ಲಿ ಒಂದು ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾದರೆ ಗರಿಷ್ಠ ಮಿತಿ 1.75 ಲಕ್ಷ ಹಾಗೂ ಅನೇಕ ಬಾರಿ ಶಸ್ತ್ರಚಿಕಿತ್ಸೆಗೆ ಒಳಗಾದರೆ 2.50 ಲಕ್ಷ ಗರಿಷ್ಠ ಮಿತಿಯೊಳಗೆ ಶಸ್ತ್ರಚಿಕಿತ್ಸೆ ಪಡೆಯಲು ಅವಕಾಶ ನೀಡಲಾಗಿತ್ತು.