ಬೆಂಗಳೂರು; ಮೂಲ ದಾಖಲೆ ಮತ್ತು ಸೂಕ್ತ ಪರಿಶೀಲನೆ ನಡೆಸದೆಯೇ 79.29 ಕೋಟಿ ರು. ಪಾವತಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಒದಗಿಸದೇ ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ ಸಭೆಗೆ ಗೈರು ಹಾಜರಾಗಿ ಅಗೌರವ ತೋರಿದ್ದಾರೆ ಎಂಬ ಗುರುತರ ಆರೋಪಕ್ಕೆ ಮೈಸೂರಿನ ಜಿಲ್ಲಾಧಿಕಾರಿ ಡಾ ಬಗಾದಿ ಗೌತಮ್ ಅವರು ಗುರಿಯಾಗಿದ್ದಾರೆ.
ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿಯು ಶಾಸನಸಭೆಯಿಂದ ರಚನೆಯಾಗಿರುವ ಸಮಿತಿಯಾಗಿದ್ದರೂ ಸಮಿತಿ ಅಧ್ಯಕ್ಷರಿಂದ ಯಾವುದೇ ಪೂರ್ವಾನುಮತಿ, ವಿನಾಯಿತಿಯನ್ನೂ ಪಡೆಯದೇ ಸಭೆಗೆ ಗೈರಾಗಿರುವುದನ್ನು ಸಮಿತಿಯು ಗಂಭೀರವಾಗಿ ಪರಿಗಣಿಸಿದೆ. ಈ ಸಂಬಂಧ ಮೈಸೂರು ಜಿಲ್ಲಾಧಿಕಾರ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕು ಕರ್ನಾಟಕ ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ವಿಶಾಲಾಕ್ಷಿ ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ 2022ರ ಜೂನ್ 29ರಂದು ಪತ್ರ ಬರೆದಿದ್ದಾರೆ. ಈ ಪತ್ರದ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಪತ್ರದಲ್ಲೇನಿದೆ?
‘ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ ವರದಿಯ ಕಂಡಿಕೆ ಸಂಖ್ಯೆ 3/13/2014-15 ಅಂಗೀಕಾರಾರ್ಹವಲ್ಲದ 79.29 ಕೋಟಿ ರು. ಭೂ ಪರಿಹಾರ ಪಾವತಿ ಕುರಿತು ಚರ್ಚಿಸಲು ಇತ್ತೀಚಿನ ಮಾಹಿತಿಯೊಂದಿಗೆ ಹಾಜರಾಗಬೇಕು ಎಂದು ಮೈಸೂರು ಜಿಲ್ಲಾಧಿಕಾರಿ ಅವರನ್ನು ಕೋರಲಾಗಿತ್ತು. ಆದರೆ ಡಾ ಬಗಾದಿ ಗೌತಮ್ ಅವರು 2022ರ ಜೂನ್ 28ರಂದು ನಡೆದ ಸಭೆಗೆ ಗೈರುಹಾಜರಾಗಿರುತ್ತಾರೆ. ಈ ಸಮಿತಿಯು ಶಾಸನಸಭೆಯಿಂದ ರಚನೆಯಾಗಿದೆ. ಹೀಗಾಗಿ ಶಾಸನಸಭೆಯಷ್ಟೇ ಗೌರವ ಮತ್ತು ಜವಾಬ್ದಾರಿ ಹೊಂದಿದೆ. ಸಮಿತಿಯ ಅಧ್ಯಕ್ಷರಿಂದ ಪೂರ್ವಾನುಮತಿ/ವಿನಾಯಿತಿ ಪಡೆಯದೇ ಜಿಲ್ಲಾಧಿಕಾರಿ ಗೈರು ಹಾಜರಾಗಿರುವುದು ಸಮಿತಿಗೆ ತೋರಿದ ಅಗೌರವವಾಗಿದೆ ಎಂದು ಸಭೆಯಲ್ಲಿ ಸಮಿತಿಯ ಸದಸ್ಯರುಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಾವು ಬಗಾದಿ ಗೌತಮ್ ಅವರ ವಿರುದ್ಧ ಶಿಸ್ತಿನ ಕ್ರಮ ಜರುಗಿಸಬೇಕು ಮತ್ತು ಈ ಬಗ್ಗೆ ಕೈಗೊಂಡ ಕ್ರಮಗಳ ಕುರಿತು ಮಾಹಿತಿಯನ್ನು ಸಮಿತಿಗೆ ನೀಡಬೇಕು,’ ಎಂದು ವಿಧಾನಸಭೆ ಸಚಿವಾಲಯದ ಕಾರ್ಯದರ್ಶಿ ವಿಶಾಲಾಕ್ಷಿ ಅವರು ಮುಖ್ಯ ಕಾರ್ಯದರ್ಶಿಗೆ ಬರೆದಿರುವ ಪತ್ರದಲ್ಲಿ ನಿರ್ದೇಶಿಸಿದ್ದಾರೆ.
79.29 ಕೋಟಿ ಪರಿಹಾರ ನೀಡುವಲ್ಲಿ ಆಗಿರುವ ಉಲ್ಲಂಘನೆಗಳಿವು
ಮೈಸೂರು ಜಿಲ್ಲೆಯ ಇಮ್ಮಾವು ಗ್ರಾಮದ 377.24 ಎಕರೆ ಭೂ ಸ್ವಾಧೀನಕ್ಕಾಗಿ 79.29 ಕೋಟಿ ರು.ಗಳನ್ನು ಪಾವತಿಸುವ ಮುನ್ನ ಕರ್ನಾಟಕ ಕೈಗಾರಿಕೆ ಪ್ರದೇಶಾಭಿವೃದ್ಧಿ ಮಂಡಳಿಯು ಮೂಲ ದಾಖಲೆಗಳನ್ನು ಪಡೆದಿರಲಿಲ್ಲ ಮತ್ತು ಸೂಕ್ತ ಪರೀಕ್ಷೆಗಳನ್ನು ನಡೆಸಿರಲಿಲ್ಲ.
ಅಲ್ಲದೆ ಹಿಂದಿನ ವಿಶೇಷ ಭೂ ಸ್ವಾಧೀನಾಧಿಕಾರಿ ಹಿರಿಯ ಶ್ರೇಣಿ ಕೆಎಎಸ್ ಅಧಿಕಾರಿ ಎಚ್ ಕೆ ಕೃಷ್ಣಮೂರ್ತಿ ಅವರು ಭೂ ಪರಿಹಾರ ಕೋರಿದವರ ಕಡೆಯಿಂದ ಹಾಜರಪಡಿಸಿದ್ದ ಪಹಣಿ ಪತ್ರಿಕೆಗಳ ನೈಜತೆಯನ್ನು ಪರಿಶೀಲಿಸಿರಲಿಲ್ಲ, ಮರಣ ಪ್ರಮಾಣ ಪತ್ರ, ಮೃತ ಖಾತೆದಾರರಿಂದ ಉತ್ತರಾಧಿಕಾರತ್ವ ಪ್ರಮಾಣಪತ್ರ ಪಡೆಯದೇ ಪರಿಹಾರ ವಿತರಣೆ ಮಾಡಲಾಗಿತ್ತು.
ಪರಿಹಾರ ವಿತರಣೆ ಮಾಡುವ ಪೂರ್ವದಲ್ಲಿ ಪರಿಹಾರ ಪಡೆಯುವ ಅರ್ಹತೆ ಹೊಂದಿದ ಬಗ್ಗೆ ಸೂಕ್ತ ದಾಖಲಾತಿಗಳನ್ನು ಅರ್ಜಿದಾರರದಿಂದ ಪಡೆದು ಪರಿಶೀಲಿಸದೇ ಶಾಮೀಲಾಗಿದ್ದರು. ಅಲ್ಲದೆ ಪರಿಹಾರದ ಹಣವನ್ನು ವಿತರಣೆ ಮಾಡುವ ಮೂಲಕ ಸರ್ಕಾರಕ್ಕೆ ನಷ್ಟವನ್ನುಂಟು ಮಾಡಲಾಗಿದೆ ಎಂದು ಲೆಕ್ಕ ಪರಿಶೋಧನೆ ವರದಿಯಲ್ಲಿ ಹೇಳಲಾಗಿತ್ತು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಿರಿಯ ಶ್ರೇಣಿ ಕೆಎಎಸ್ ಅಧಿಕಾರಿ ಎಚ್ ಕೆ ಕೃಷ್ಣಮೂರ್ತಿ (ಸದ್ಯ ನಿವೃತ್ತ) ಇವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಮತ್ತು ರಿಕವರಿ ಸೂಟ್ ದಾಖಲಿಸಿ ಕ್ರಮ ಕೈಗೊಳ್ಳಬೇಕಿತ್ತು. ಅಲ್ಲದೆ ಕಂದಾಯ ಇಲಾಖೆಯಲ್ಲಿ ತಹಶೀಲ್ದಾರ್ ಆಗಿ ಸೇವೆ ಸಲ್ಲಿಸಿದ್ದ ನವೀನ್ ಜೋಸೆಫ್ (ಸದ್ಯ ಬಿಡಿಎ ಉಪ ಕಾರ್ಯದರ್ಶಿ), ಕೆಐಎಡಿಬಿಯ ತಪ್ಪಿತಸ್ಥ ಅಧಿಕಾರಿ ಕೃಷ್ಣಮೂರ್ತಿ ಇವರ ವಿರುದ್ಧ ಶಿಸ್ತು ಕ್ರಮ ಜರುಗಿಸಿ 2022ರ ಜನವರಿ 25ರಂದು ನಡೆದಿದ್ದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ಸಭೆಗೆ ಮಾಹಿತಿ ಒದಗಿಸಲು ಸೂಚಿಸಲಾಗಿತ್ತು.
ಅದೇ ರೀತಿ ಅಧಿಕಾರಿಗಳು ಗಂಭೀರ ಸ್ವರೂಪದ ಪ್ರಕರಣದಲ್ಲಿ ಭಾಗಿಯಾಗಿರುವುದರಿಂದ ಅವರನ್ನು ಇಲಾಖೆ ತನಿಖೆ ಮುಗಿಯುವವರೆಗೂ ನಾನ್ ಎಕ್ಸಿಕ್ಯೂಟಿವ್ ಹುದ್ದೆಗೆ ನಿಯೋಜಿಸಬೇಕು ಎಂದು ಸಮಿತಿಯು ಸೂಚಿಸಿತ್ತು. ಈ ಎಲ್ಲಾ ಮಾಹಿತಿಗಳೊಂದಿಗೆ ಮೈಸೂರು ಜಿಲ್ಲಾಧಿಕಾರಿ ಬಗಾದಿ ಗೌತಮ್ ಅವರು 2022ರ ಜೂನ್ 28ರಂದು ನಡೆದ ಸಭೆಗೆ ಹಾಜರಾಗಿ ವಿವರಿಸಬೇಕಿತ್ತು ಎಂದು ಗೊತ್ತಾಗಿದೆ.