ದಾವೋಸ್‌; 12 ವರ್ಷಗಳಾದರೂ ಉಕ್ಕು, ಸೋಲಾರ್‌ ಘಟಕ ಸ್ಥಾಪಿಸದ ಮಿತ್ತಲ್‌ ಜತೆಗೆ ಮತ್ತೊಂದು ಒಪ್ಪಂದ

photo credit;deccanhearald

ಬೆಂಗಳೂರು; ಕಳೆದ 12 ವರ್ಷಗಳ ಹಿಂದೆಯೇ ನಡೆದಿದ್ದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ 30 ಸಾವಿರ ಕೋಟಿ ರು. ಹೂಡಿಕೆ ಮಾಡಲು ಒಪ್ಪಂದ ಮಾಡಿಕೊಂಡು 2,659.75 ಎಕರೆ ಜಮೀನು ಹಂಚಿಕೆ ಮಾಡಿಸಿಕೊಂಡಿದ್ದ ಆರ್ಸೆಲರ್ ಮಿತ್ತಲ್ ಕಂಪನಿಯು ಇದುವರೆಗೂ ಒಂದೇ ಒಂದು ಘಟಕವನ್ನೂ ರಾಜ್ಯದಲ್ಲಿ ಸ್ಥಾಪಿಸಿಲ್ಲ.

 

ಆದರೀಗ ದಾವೋಸ್‌ನಲ್ಲಿ ನಡೆದ ಬಂಡವಾಳ ಆಕರ್ಷಿಸುವ ಸಮಾವೇಶದಲ್ಲಿ ಭಾಗವಹಿಸಿದ್ದ ಆರ್ಸೆಲರ್‌ ಮಿತ್ತಲ್‌ ಕಂಪನಿಯು ಸೌರ-ವಾಯು ಹೈಬ್ರಿಡ್‌ ಯೋಜನೆಗೆ ರಾಜ್ಯದ ವಿಜಯಪುರ ಜಿಲ್ಲೆಯಲ್ಲಿ 6,000 ಕೋಟಿ ರು. ಹೂಡಿಕ ಮಾಡಲಿದೆ ಎಂದು ಬಸವರಾಜ ಬೊಮ್ಮಾಯಿ ಮತ್ತು ಕೈಗಾರಿಕೆ ಸಚಿವ ಮುರುಗೇಶ್‌ ನಿರಾಣಿ ಅವರು ಭರ್ಜರಿ ಪ್ರಚಾರ ಗಿಟ್ಟಿಸಿಕೊಂಡಿದ್ದಾರೆ.

 

12 ವರ್ಷಗಳಾದರೂ ಕೈಗಾರಿಕೆ ಸ್ಥಾಪನೆ ಮಾಡದ ಮಿತ್ತೆಲ್‌ ಕಂಪನಿಗೆ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ನೋಟೀಸ್‌ ನೀಡಿತ್ತು. ಈ ಕಂಪನಿ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದ ಸರ್ಕಾರವು ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ಸೃಂಗ ಸಭೆಯಲ್ಲಿ 6,000 ಕೋಟಿ ರು ಬಂಡವಾಳ ಹೂಡಲು ಇದೇ ಮಿತ್ತಲ್‌ ಕಂಪನಿಯೊಂದಿಗೆ ಮತ್ತೊಂದು ಒಪ್ಪಂದ ಮಾಡಿಕೊಂಡಿರುವುದು ಅಚ್ಚರಿ ಮೂಡಿಸಿದೆ.

 

2010ರಲ್ಲಿ ನಡೆದಿದ್ದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ (ಜಿಮ್) ವೇಳೆ ಬಳ್ಳಾರಿಯಲ್ಲಿ 30 ಸಾವಿರ ಕೋಟಿ ರೂ. ಬಂಡವಾಳ ಹೂಡಲು ಆರ್ಸೆಲರ್ ಮಿತ್ತಲ್ ಇಂಡಿಯಾ ಲಿಮಿಟೆಡ್ ಕಂಪನಿ ಸಹಿ ಮಾಡಿತ್ತು. 6 ಮಿಲಿಯನ್ ಟನ್ ಕಬ್ಬಿಣ ಉತ್ಪಾದಿಸುವ ಕೈಗಾರಿಕೆ ಸ್ಥಾಪನೆಗೆ ಒಪ್ಪಂದ ಮಾಡಿಕೊಂಡಿತ್ತು.

 

ನಂತರ ಈ ಉದ್ದೇಶದಿಂದ ಹಿಂದೆ ಸರಿದಿದ್ದ ಈ ಕಂಪನಿಯು ಜಮೀನು ಹಂಚಿಕೆಯಾದ ನಂತರ ಕೆಲವು ಕಾರಣಗಳನ್ನು ಮುಂದಿಟ್ಟಿತ್ತು. ಸೋಲಾರ್ ಪ್ಲಾಂಟ್ ಸ್ಥಾಪನೆಗೆ ಅವಕಾಶ ನೀಡುವಂತೆ ರಾಜ್ಯ ಸರಕಾರಕ್ಕೆ ಕೋರಿತ್ತು. ಕಬ್ಬಿಣ ಉತ್ಪಾದಿಸುವ ಕೈಗಾರಿಕೆ ಸ್ಥಾಪನೆ ಉದ್ದೇಶದಿಂದ ಈ ಕಂಪನಿ ಇದ್ದಕ್ಕಿದ್ದಂತೆ ಹಿಂದಕ್ಕೆ ಸರಿದು ಸೋಲಾರ್‌ ಪವರ್‌ ಘಟಕಗಳನ್ನು ಉತ್ಪಾದಿಸಲು ಕೋರಿತ್ತಾದರೂ ಇದುವರೆಗೂ ಅನುಷ್ಠಾನಕ್ಕೆ ತಂದಿಲ್ಲ.

 

ಉಕ್ಕು ಉತ್ಪಾದನಾ ಘಟಕ ಆರಂಭಿಸಲು ಬಳ್ಳಾರಿಯ ಸಂಡೂರು ತಾಲೂಕಿನ ಕುಡಿತಿನಿ ಪಟ್ಟಣ ಪಂಚಾಯ್ತಿ ವ್ಯಾಪ್ತಿಯಲ್ಲಿ ಆರ್ಸೆಲರ್‌ ಮಿತ್ತಲ್‌ ಇಂಡಿಯಾ ಲಿಮಿಟೆಡ್‌ಗೆ 2,659.75 ಎಕರೆ ಹಂಚಿಕೆಯಾಗಿತ್ತು. ಹಂಚಿಕೆಯಾದ 8 ವರ್ಷದ ಬಳಿಕ ಆರ್ಸೆಲರ್‌ ಮಿತ್ತಲ್‌ ಕಂಪನಿಯು 2018ರಲ್ಲಿ ಗುತ್ತಿಗೆ ಕರಾರು ಪತ್ರ ಮಾಡಿಕೊಂಡಿತ್ತು. ಆದರೂ ಉದ್ಧೇಶಿತ ಯೋಜನೆ ಅನುಷ್ಠಾನಗೊಳಿಸಲು ಯಾವುದೇ ಕ್ರಮ ಕೈಗೊಂಡಿಲ್ಲ.

 

ಮಿತ್ತಲ್‌ ಕಂಪನಿಯ ಧೋರಣೆಯಿಂದ 10 ಸಾವಿರ ಜನರ ಉದ್ಯೋಗದ ಕನಸು ಕಮರಿ ಹೋಗಿತ್ತು. ಆರ್ಸೆಲರ್‌ ಮಿತ್ತಲ್‌ ಉಕ್ಕಿನ ಕಾರ್ಖಾನೆಗೆ ವಶಪಡಿಸಿಕೊಂಡ ಜಮೀನಿನಲ್ಲಿ ಉಕ್ಕಿನ ಕಾರ್ಖಾನೆ ಸ್ಥಾಪನೆಯಾಗದೇ, ಈ ಜಮೀನುಗಳಲ್ಲಿ ಸೌರವಿದ್ಯುತ್‌ ಘಟಕ ಸ್ಥಾಪನೆ ಮಾಡಲು ಮಿತ್ತಲ್‌ ಸಂಸ್ಥೆ ಸರ್ಕಾರದೊಡನೆ ನಡೆಸಿದ್ದ ಮಾತುಕತೆಗೆ ಭೂ ಸಂತ್ರಸ್ತರ ವಿರೋಧವಿತ್ತು.

 

50,000 ಕೋಟಿ ರೂ ಮೊತ್ತದೊಂದಿಗೆ ಎಸ್ಸಾರ್ ಕಂಪೆನಿಯನ್ನು ಸ್ವಾಧೀನಪಡಿಸಿಕೊಂಡಿದ್ದ ಜಾಗತಿಕ ದೈತ್ಯ ಉಕ್ಕಿನ ಕಂಪನಿ ಆರ್ಸೆಲರ್ ಮಿತ್ತಲ್, ಸುಪ್ರೀಂ ಕೋರ್ಟ್‌ನ ನಿರ್ದೇಶನದಂತೆ ಉಕ್ಕು ಯೋಜನೆಗಳನ್ನು ವಿಸ್ತರಿಸಲು ಯೋಜಿಸಿತ್ತು. ಆದರೆ ಕರ್ನಾಟಕದಲ್ಲಿ ಉದ್ಧೇಶಿತ ಕೈಗಾರಿಕೆಯನ್ನು ಈವರೆವಿಗೂ ಸ್ಥಾಪಿಸಲು ಯಾವುದೇ ಕ್ರಮಕೈಗೊಂಡಿಲ್ಲ ಎಂದು ಗೊತ್ತಾಗಿದೆ.

 

ಇದಲ್ಲದೇ ಉತ್ತಮ್‌ ಗಾಲ್ವಾ ಫೆರೋಸ್‌ ಲಿಮಿಟೆಡ್‌ಗೆ 4,877.81 ಎಕರೆ ಜಮೀನನ್ನು ಕೈಗಾರಿಕೆ ನಿರ್ಮಾಣ ಉದ್ಧೇಶಕ್ಕೆ ಜಮೀನು ಹಂಚಿಕೆ ಮಾಡಿತ್ತು. ಉತ್ತಮ್‌ ಗಾಲ್ವಾ ಫೆರೋಸ್‌ ಲಿಮಿಟೆಡ್‌ 2017ರಲ್ಲಿ ಗುತ್ತಿಗೆ ಕರಾರು ಪ್ರಕ್ರಿಯೆ ಪೂರ್ಣಗೊಳಿಸಿತ್ತು. ಈ ಪ್ರಕ್ರಿಯೆ ನಡೆದು 5 ವರ್ಷಗಳಾದರೂ ಯೋಜನೆಯನ್ನು ಅನುಷ್ಠಾನಗೊಳಿಸಲು ಯಾವುದೇ ಕ್ರಮ ಕೈಗೊಂಡಿಲ್ಲ.

 

ಸಾವಿರಾರು ಎಕರೆ ಜಮೀನಿನಲ್ಲಿ ಉದ್ದೇಶಿತ ಯೋಜನೆಯನ್ನು ಅನುಷ್ಠಾನಗೊಳಿಸಲು ಯಾವುದೇ ಕ್ರಮ ಕೈಗೊಳ್ಳದ ಕಾರಣ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯು ಈ ಎರಡೂ ಕಂಪನಿಗಳಿಗೆ 2020ರ ನವೆಂಬರ್‌ 27ರಂದು ತಿಳಿವಳಿಕೆ ನೋಟೀಸ್‌ ಜಾರಿಗೊಳಿಸಿತ್ತು.

 

2010ರ ಸಮಾವೇಶದಲ್ಲಿ 36 ಸಾವಿರ ಕೋಟಿ ರೂ. ಬಂಡವಾಳ ಹೂಡುವುದಾಗಿ ಘೋಷಿಸಿದ್ದ ರೆಡ್ಡಿ ಸೋದರರ ಒಡೆತನದ ಬ್ರಾಹ್ಮಿಣಿ ಇಂಡಸ್ಟ್ರೀಸ್ ಕರ್ನಾಟಕ ಲಿಮಿಟೆಡ್ ಕಂಪನಿಯು ಹಂಚಿಕೆ ಮಾಡಿಸಿಕೊಂಡಿದ್ದ ಜಮೀನನ್ನು ಉತ್ತಮ್‌ ಗಾಲ್ವಾ ಫೆರೋಸ್‌ ಲಿಮಿಟೆಡ್‌ಗೆ ಅಕ್ರಮವಾಗಿ ಮಾರಾಟ ಮಾಡಿ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಆದರೆ ಆ ಕಂಪನಿಯು ಕೂಡ ಕಾರ್ಖಾನೆ ಸ್ಥಾಪನೆ ಸಂಬಂಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂಬುದು ಶೆಟ್ಟರ್‌ ಅವರು ನೀಡಿರುವ ಉತ್ತರದಿಂದ ತಿಳಿದು ಬಂದಿದೆ.

 

6 ಮಿಲಿಯನ್ ಟನ್ ಕಬ್ಬಿಣ ಉತ್ಪಾದನೆ ಗುರಿ ಮತ್ತು 25 ಸಾವಿರ ಜನರಿಗೆ ಉದ್ಯೋಗ ನೀಡಲು ಒಪ್ಪಂದ ಮಾಡಿಕೊಂಡಿದ್ದ ಬ್ರಹ್ಮಿಣಿ ಇಂಡಸ್ಟ್ರೀಸ್‌ ಕೈಗಾರಿಕೆಯನ್ನೇ ಆರಂಭಿಸದೆಯೇ ಉತ್ತಮ್ ಗಾಲ್ವಾ ಕಂಪನಿಗೆ ಭೂಮಿಯನ್ನು ಮಾರಾಟ ಮಾಡಿತ್ತು.

 

ಭೂಸ್ವಾಧೀನ ಕಾಯ್ದೆ-2013ರ ಅನ್ವಯ ಒಂದು ಜಮೀನನ್ನು ವಶಪಡಿಸಿಕೊಂಡ ಐದು ವರ್ಷಗಳಲ್ಲಿ ಉದ್ದೇಶಿತ ಕಾರ್ಖಾನೆ ಸ್ಥಾಪಿಸದೇ ಹೋದಲ್ಲಿ ಅಂತಹ ಜಮೀನನ್ನು ಸಂತ್ರಸ್ತರಿಗೆ ಮರಳಿಸಬೇಕೆಂಬ ನಿಯಮವಿದೆ. ಈಗಾಗಲೇ ಬ್ರಹ್ಮಿಣಿ ಮೂಲಕ ಜಮೀನು ವರ್ಗಾವಣೆ ಮಾಡಿಸಿಕೊಂಡಿರುವ ಉತ್ತಮ್‌ ಗಾಲ್ವಾ ಹಾಗೂ ಆರ್ಸೆಲರ್‌ ಮಿತ್ತಲ್‌ ಕಂಪನಿಗಳಿಗೆ ಜಮೀನು ವಶಪಡಿಸಿಕೊಂಡು 10 ವರ್ಷಗಳಿಗೂ ಅಧಿಕ ಸಮಯ ಮುಗಿದಿದೆ. ಈವರೆವಿಗೂ ಜಮೀನುಗಳಲ್ಲಿ ಕಾರ್ಖಾನೆ ಸ್ಥಾಪನೆಯಾಗುವ ಲಕ್ಷಣ ಕಂಡುಬರುತ್ತಿಲ್ಲ.

 

ಜಮೀನು ವಶಪಡಿಸಿಕೊಂಡಿರುವ ಕೆಐಎಡಿಬಿಯು ಜಮೀನುಗಳನ್ನು ತನ್ನ ವಶದಲ್ಲಿಯೇ ಇರಿಸಿಕೊಳ್ಳಲು ಇಚ್ಛಿಸಿದರೆ ಅಂತಹ ಸಂತ್ರಸ್ತ ಕುಟುಂಬಗಳಿಗೆ ನ್ಯಾಯಾಲಯ ನಿಗದಿಪಡಿಸಿದ ಹೆಚ್ಚುವರಿ ಮೊತ್ತವನ್ನು ಸರ್ಕಾರ ನೀಡಬೇಕು. ಒಂದು ವೇಳೆ ವಶಪಡಿಸಿಕೊಂಡ ಜಮೀನುಗಳಲ್ಲಿ ಕಾರ್ಖಾನೆ ಸ್ಥಾಪಿಸಲು ಯಾವುದೇ ಸಂಸ್ಥೆ ಮುಂದಾದರೆ, ಅಲ್ಲಿ ಉದ್ಯಮ ಸ್ಥಾಪನೆಯಾಗಿ, ಸಂತ್ರಸ್ತರ ಕುಟುಂಬಗಳ ಸದಸ್ಯರಿಗೆ ಉದ್ಯೋಗ ದೊರೆಯುವವರೆಗೂ ಮಾಸಿಕ 20 ಸಾವಿರ ರೂ. ಗಳ ನಿರುದ್ಯೋಗ ಭತ್ಯೆ ನೀಡಬೇಕು. ಆದರೆ ಸರ್ಕಾರ ಈವರೆವಿಗೂ ಈ ಬಗ್ಗೆಯೂ ಕ್ರಮ ಕೈಗೊಂಡಿಲ್ಲ ಎಂದು ತಿಳಿದು ಬಂದಿದೆ.

 

ಉಕ್ಕು ಕೈಗಾರಿಕೆಗಳ ಸ್ಥಾಪನೆ ಹಾಗೂ ಭೂ ಸಂತ್ರಸ್ತರಿಗೆ ಮತ್ತು ಸ್ಥಳೀಯರಿಗೆ ಉದ್ಯೋಗ ಕಲ್ಪಿಸಲು ಮಿತ್ತಲ್‌, ಬ್ರಹ್ಮಿಣಿ ಕಂಪನಿಗಳಿಗೆ ಕುಡಿತಿನಿ, ಹರಗಿನಡೋಣಿ, ವೇಣಿವೀರಾಪುರ, ಕೊಳಗಲ್ಲು ಗ್ರಾಮಗಳ 10,500 ಎಕರೆ ಜಮೀನು ನೀಡಿದ ಭೂ ಮಾಲೀಕರಿಗೆ ನ್ಯಾಯಯುತವಾದ ಪರಿಹಾರ ನೀಡಿರಲಿಲ್ಲ. ಜನಪ್ರತಿನಿಧಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಕಂಪನಿಗಳೊಂದಿಗೆ ಶಾಮೀಲಾಗಿ ಭೂ ಬೆಲೆ ನಿಗದಿ ನಿಯಮಾವಳಿಗಳನ್ನು ಗಾಳಿಗೆ ತೂರಲಾಗಿತ್ತು ಎಂಬ ಬಲವಾದ ಆರೋಪಗಳಿವೆ.

 

ಬ್ರಹ್ಮಿಣಿ ಕಂಪನಿ ಸ್ಥಾಪಿಸಲು ಎಕರೆಗೆ 5ರಿಂದ 8 ಲಕ್ಷ ರು.ನಂತೆ ನಿಗದಿಪಡಿಸಿದ್ದರೆ ಮಿತ್ತಲ್‌ ಕಂಪನಿಗೆ ಎಕರೆಗೆ 8ರಿಂದ 12 ಲಕ್ಷ ರು.ವರೆಗೂ ನಿಗದಿಪಡಿಸಿ ಭೂಮಾಲೀಕರನ್ನು ವಂಚಿಸಲಾಗಿತ್ತು. ಒಂದೇ ಕೈಗಾರಿಕೆಗೆ ರಾಜ್ಯದಲ್ಲಿ ಮೊದಲ ಬಾರಿಗೆ 3 ರೀತಿಯ ದರ ನಿಗದಿಪಡಿಸಿ ಭೂಮಾಲೀಕರನ್ನು ವಂಚಿಸಲಾಗಿತ್ತು.

Your generous support will help us remain independent and work without fear.

Latest News

Related Posts