ಬೆಂಗಳೂರು; ಅಪೌಷ್ಠಿಕತೆ, ರಕ್ತಹೀನತೆ ಮತ್ತು ಬಹುಪೋಷಕಾಂಶಗಳ ನ್ಯೂನತೆ ಹೊಂದಿರುವ ರಾಜ್ಯದ ಬೀದರ್, ಬಳ್ಳಾರಿ, ಕಲ್ಬುರ್ಗಿ, ಕೊಪ್ಪಳ, ರಾಯಚೂರು, ಯಾದಗಿರಿ , ವಿಜಯಪುರ ಮತ್ತು ವಿಜಯನಗರ ಜಿಲ್ಲೆಗಳಲ್ಲಿನ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿನ ಒಂದರಿಂದ ಎಂಟನೇ ತರಗತಿ ಮಕ್ಕಳಿಗೆ ಬೇಯಿಸಿದ ಮೊಟ್ಟೆ ವಿತರಣೆಗೆ ಆದೇಶ ಹೊರಡಿಸಿರುವ ಸಾರ್ವಜನಿಕ ಶಿಕ್ಷಣ ಇಲಾಖೆಯು ಮೊಟ್ಟೆ ಸೇವಿಸಲು ಬೆಂಬಲ ವ್ಯಕ್ತಪಡಿಸಿದ್ದ ಬಾಗಲಕೋಟೆ ಸೇರಿದಂತೆ ಇನ್ನೂ 4 ಜಿಲ್ಲೆಗಳ ಮಕ್ಕಳಿಗೆ ಮೊಟ್ಟೆ ಭಾಗ್ಯವನ್ನು ಕರುಣಿಸಿಲ್ಲ.
ಶಾಲೆ ಆರಂಭವಾಗಿ ಹಲವು ದಿನಗಳಾದರೂ ವಿದ್ಯಾರ್ಥಿಗಳಿಗೆ ಸಮವಸ್ತ್ರ ಸರಬರಾಜು ಮಾಡಿಲ್ಲ. ಪಠ್ಯಪುಸ್ತಕವನ್ನೂ ಒದಗಿಸಿಲ್ಲ. ಪಠ್ಯಪರಿಷ್ಕರಣೆಯಂತಹ ವಿವಾದವನ್ನು ಮೈಮೇಲೆ ಎಳೆದುಕೊಂಡಿರುವ ಸಚಿವ ಬಿ ಸಿ ನಾಗೇಶ್ ಅವರು 4 ಜಿಲ್ಲೆಗಳ ಮಕ್ಕಳಿಗೆ ಮೊಟ್ಟೆ ವಿತರಿಸಲು ಕೇಂದ್ರದಿಂದ ಅನುದಾನ ತರುವಲ್ಲಿಯೂ ವಿಫಲವಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಕೇಂದ್ರ ಸರ್ಕಾರದಿಂದ ನಿಗದಿಪಡಿಸಿರುವ ಅನುದಾನದಿಂದ ಸೀಮಿತ ದಿನ ಮತ್ತು ಸೀಮಿತ ಜಿಲ್ಲೆಗಳಲ್ಲಿ ಮಾತ್ರ ಮೊಟ್ಟೆ ವಿತರಣೆ ಯೋಜನೆಯು ಅನುಷ್ಠಾನ ಮಾಡಬಹುದೇ ವಿನಃ ಹೆಚ್ಚಿನ ಜಿಲ್ಲೆಗಳಿಗೆ ವಿಸ್ತರಿಸಲು ಸಾಧ್ಯವಾಗುವುದಿಲ್ಲ. ಇತ್ತೀಚಿನ ವಿದ್ಯಾರ್ಥಿಗಳ ದಾಖಲಾತಿಗೆ ಅನುಗುಣವಾಗಿ 4 ಜಿಲ್ಲೆಗಳಲ್ಲಿ 120 ದಿನಗಳ ಅವಧಿಗೆ ಯೋಜನೆಯನ್ನು ವಿಸ್ತರಿಸಲು 192.82 ಕೋಟಿ ರು. ಅನುದಾನ ಅಗತ್ಯವಿದೆ ಎಂದು ಶಿಕ್ಷಣ ಇಲಾಖೆ ಸಲ್ಲಿಸಿದ್ದ ಪ್ರಸ್ತಾವನೆ ತಿರಸ್ಕೃತವಾಗಿದೆ.
ಕೇವಲ 8 ಜಿಲ್ಲೆಗಳ 15. 29 ಲಕ್ಷ ಮಕ್ಕಗಳಿಗೆ ಬೇಯಿಸಿದ ಒಟ್ಟು 24 ವಾರಗಳಿಗೆ (ಜೂನ್ 2022ರಿಂದ ಫೆ.2023ರವರೆಗೆ) ಮೊಟ್ಟೆ ವಿತರಿಸಲು 4405.57 ಲಕ್ಷ ರು. ಮಾತ್ರ ಅನುದಾನ ನಿಗದಿಪಡಿಸಿದೆ.
ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆಯು 2022ರ ಮೇ 20ರಂದು ಸುತ್ತೋಲೆ ಹೊರಡಿಸಿದೆ. ಈ ಸುತ್ತೋಲೆಯ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ಗದಗ್, ಹಾವೇರಿ, ಬಾಗಲಕೋಟೆ ಮತ್ತು ಚಾಮರಾಜನಗರ ಜಿಲ್ಲೆಗಳ 9-10ನೇ ತರಗತಿಗಳ ಮಕ್ಕಳಿಗೆ ಬೇಯಿಸಿದ ಮೊಟ್ಟೆ ನೀಡಲು ಬಿಡಿಗಾಸಿನ ಅನುದಾನವನ್ನೂ ನೀಡಿಲ್ಲ. ಮೊಟ್ಟೆ ಸೇವಿಸಲು ಹೆಚ್ಚಿನ ಬೆಂಬಲ ವ್ಯಕ್ತವಾಗಿದ್ದ ಹಿನ್ನೆಲೆಯಲ್ಲಿ ಬಾಗಲಕೋಟೆ ಸೇರಿದಂತೆ ಇನ್ನೂ 4 ಜಿಲ್ಲೆಗಳಿಗೆ ಮೊಟ್ಟೆ ವಿತರಣೆ ಯೋಜನೆಯನ್ನು ವಿಸ್ತರಿಸಲು ಶಿಕ್ಷಣ ಇಲಾಖೆಯು ಪ್ರಸ್ತಾಪಿಸಿತ್ತು. ಆದರೆ ಕೇಂದ್ರ ಸರ್ಕಾರದಿಂದ ನಿಗದಿಪಡಿಸಿರುವ ಅನುದಾನದಿಂದ ಸೀಮಿತ ದಿನ ಮತ್ತು ಸೀಮಿತ ಜಿಲ್ಲೆಗಳಲ್ಲಿ ಮಾತ್ರ ಮೊಟ್ಟೆ ವಿತರಣೆ ಯೋಜನೆಯು ಅನುಷ್ಠಾನ ಮಾಡಬಹುದೇ ವಿನಃ ಹೆಚ್ಚಿನ ಜಿಲ್ಲೆಗಳಿಗೆ ವಿಸ್ತರಿಸಲು ಸಾಧ್ಯವಾಗುವುದಿಲ್ಲ ಎಂದು ಪ್ರಸ್ತಾವನೆಯಲ್ಲಿ ಹೇಳಿತ್ತು. ಈ ಕುರಿತು ‘ದಿ ಫೈಲ್’ 2022ರ ಫೆಬ್ರುವರಿ 12ರಂದು ವರದಿ ಪ್ರಕಟಿಸಿತ್ತು.
ಮಠಾಧೀಶರಿಗೆ ಮುಖಭಂಗ; ಇನ್ನೂ 4 ಜಿಲ್ಲೆಗಳ 7 ಲಕ್ಷ ಶಾಲಾ ಮಕ್ಕಳಿಗೆ ಮೊಟ್ಟೆ ವಿತರಣೆ ವಿಸ್ತರಣೆಗೆ ಪ್ರಸ್ತಾಪ
2022-23ನೇ ಸಾಲಿಗೆ ಕೇಂದ್ರ ಸರ್ಕಾರದಿಂದ 28.45 ಕೋಟಿ ಅನುದಾನದ ಎದುರು ನೋಡುತ್ತಿರುವ ಇಲಾಖೆಯು ರಾಜ್ಯ ಸರ್ಕಾರವೇ 164.37 ಕೋಟಿ ರು. ಅನುದಾನ ಭರಿಸಬೇಕಿದೆ ಎಂದೂ ಹೇಳಿತ್ತು.
ಗದಗ್, ಹಾವೇರಿ, ಬಾಗಲಕೋಟೆ ಮತ್ತು ಚಾಮರಾಜನಗರ ಜಿಲ್ಲೆಗಳಿಗೆ ಮತ್ತು 9-10ನೇ ತರಗತಿಗಳ ವಿದ್ಯಾರ್ಥಿಗಳಿಗೆ ಮೊಟ್ಟೆ ವಿತರಣೆ ಮಾಡಲು ಮುಂದಾಗಿದೆ. ಬಾಗಲಕೋಟೆ ಜಿಲ್ಲೆಯಲ್ಲಿ 1ರಿಂದ 8ನೇ ತರಗತಿಯಲ್ಲಿ 21,87,388 ಮತ್ತು 9ರಿಂದ 10ನೇ ತರಗತಿ 57,449 ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಈ ಜಿಲ್ಲೆಯ ಮಕ್ಕಳಿಗೆ 120 ದಿನಗಳಿಗೆ ಪ್ರತಿ ಮಗುವಿಗೆ 6 ರು.ನಂತೆ 1ರಿಂದ 8ನೇ ತರಗತಿ ಮಕ್ಕಳಿಗೆ 16.41 ಕೋಟಿ ರು., 9-10 ತರಗತಿ ಮಕ್ಕಳಿಗೆ 4.14 ಕೋಟಿ ಸೇರಿ ಒಟ್ಟು 20.55 ಕೋಟಿ ರು. ಅನುದಾನ ಅಗತ್ಯವಿದೆ ಎಂದು ಪ್ರಸ್ತಾಪಿಸಿದೆ. ಈ 4 ಜಿಲ್ಲೆಗಳಿಗೆ 120 ದಿನಗಳವರೆಗೆ ಮೊಟ್ಟೆ ವಿತರಿಸಲು 52.08 ಕೋಟಿ ರು. ಅನುದಾನ ಅಗತ್ಯವಿದೆ ಎಂಬುದು ಇಲಾಖೆಯ ಪ್ರಸ್ತಾವನೆಯಿಂದ ತಿಳಿದು ಬಂದಿತ್ತು.
4 ಜಿಲ್ಲೆಗಳೂ ಸೇರಿದಂತೆ ಒಟ್ಟಾರೆ 11 ಜಿಲ್ಲೆಗಳ ಶಾಲಾ ಮಕ್ಕಳಿಗೆ ಮೊಟ್ಟೆ ವಿತರಿಸಲು 120 ದಿನಗಳಿಗೆ 192.82 ಕೋಟಿ ರು. ಅನುದಾನ ಅಗತ್ಯವಿದೆ ಎಂದು ಹೇಳಿರುವ ಶಿಕ್ಷಣ ಇಲಾಖೆಯು ರಾಜ್ಯ ಸರ್ಕಾರ ಈ ಯೋಜನೆಗೆ 164.37 ಕೋಟಿ ರು. ಭರಿಸಬೇಕು ಎಂದು ತಿಳಿಸಿದೆ. ಇನ್ನುಳಿದ 28.45 ಕೋಟಿ ರು.ಗಳನ್ನು ಕೇಂದ್ರ ಸರ್ಕಾರವು 2022-23ನೇ ಸಾಲಿನಲ್ಲಿ ಫ್ಲೆಕ್ಸಿಬಿಲಿಟಿ ಫಾರ್ ನ್ಯೂ ಇಂಟ್ರವೆನ್ಷನ್ ಚಟುವಟಿಕೆಗಳಿಗೆ ಒದಗಿಸುವ ಯೋಜನೆಯಲ್ಲಿ ಭರಿಸಬೇಕಿದೆ ಎಂದು ವಿವರಿಸಿತ್ತು.
ಆದರೆ 2022-23ನೇ ಸಾಲಿನಲ್ಲಿ ರಾಜ್ಯದ ಪ್ರಧಾನಮಂತ್ರಿ ಪೋಷಣ್ ಶಕ್ತಿ ನಿರ್ಮಾಣ್ ಯೋಜನೆಯಡಿ ಕೇಂದ್ರಕ್ಕೆ ಸಲ್ಲಿಸಿದ ವಾರ್ಷಿಕ ಯೋಜನೆ ಮತ್ತು ಆಯವ್ಯಯದಲ್ಲಿ ಯೋಜಿಸಿದಂತೆ ಕೇವಲ 8 ಜಿಲ್ಲೆಗಳ 1ರಿಂದ 8ನೇ ತರಗತಿಯ ಒಟ್ಟು 15.29 ಲಕ್ಷ ಶಾಲಾ ಮಕ್ಕಳಿಗೆ ಮಾತ್ರ ಬೇಯಿಸಿದ ಮೊಟ್ಟೆ ವಿತರಿಸಲು ಪ್ರಸ್ತಾಪಿಸಿರುವುದು ಸುತ್ತೋಲೆಯಿಂದ ತಿಳಿದು ಬಂದಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ 60;40ರ ಅನುಪಾತದಲ್ಲಿ ಫ್ಲೆಕ್ಸಿ ಅನುದಾನದಡಿ ಅಗತ್ಯ ವೆಚ್ಚ ಭರಿಸಲು ಪಿಎಂ ಪೋಷಣ್ ವಿಭಾಗವು 4494.29 ಲಕ್ಷ ರು. ನಿಗದಿಪಡಿಸಿದೆ. ಪ್ರತಿ ಘಟಕ ವೆಚ್ಚ 6.00 ರು.ನಂತೆ ಯಾದಗಿರಿ ಜಿಲ್ಲೆಗೆ 449.48 ಲಕ್ಷ ರು., ಕಲ್ಬುರ್ಗಿಗೆ 751.17 ಲಕ್ಷ, ಬಳ್ಳಾರಿಗೆ 361.34 ಲಕ್ಷ, ವಿಜಯನಗರಕ್ಕೆ 428.95 ಲಕ್ಷ, ಕೊಪ್ಪಳಕ್ಕೆ 500.79 ಲಕ್ಷ, ರಾಯಚೂರು 672.05 ಲಕ್ಷ, ಬಿದರ್ 432.26 ಲಕ್ಷ, ವಿಜಯಪುರಕ್ಕೆ 809.53 ಲಕ್ಷ ರು.ಗಳನ್ನು ವಾರ್ಷಿಕ ಅನುದಾನವನ್ನಾಗಿ ನಿಗದಿಪಡಿಸಿದೆ.
ಬೀದರ್ ಸೇರಿದಂತೆ ಒಟ್ಟು 7 ಜಿಲ್ಲೆಗಳಲ್ಲಿ ಒಟ್ಟು 14.44 ಲಕ್ಷ ವಿದ್ಯಾರ್ಥಿಗಳಿಗೆ ಪೂರಕ ಪೌಷ್ಠಿಕಾಂಶದ ರೂಪದಲ್ಲಿ 2021ರ ಡಿಸೆಂಬರ್ 1ರಿಂದ ಮೊಟ್ಟೆ ವಿತರಣೆ ಆರಂಭವಾದ ನಂತರ ಶಾಲೆಗಳಲ್ಲಿ ಮಕ್ಕಳ ದಾಖಲಾತಿ ಹೆಚ್ಚಾಗಿದೆ. ಪ್ರಸ್ತುತ ಶೇ. 90ರಷ್ಟು ಮಕ್ಕಳು ಮೊಟ್ಟೆ ಸ್ವೀಕರಿಸುತ್ತಿದ್ದರೆ ಉಳಿದ ಶೇ. 10ರಷ್ಟು ಮಕ್ಕಳು ಮಾತ್ರ ಬಾಳೆಹಣ್ಣು ಪಡೆಯುತ್ತಿದ್ದಾರೆ ಎಂದು ಪ್ರಸ್ತಾವನೆಯಲ್ಲಿ ಪ್ರಗತಿ ಮಾಹಿತಿ ಒದಗಿಸಿತ್ತು.
ಕಲ್ಬುರ್ಗಿ ವಿಭಾಗ (6 ಜಿಲ್ಲೆಗಳು) ಮತ್ತು ವಿಜಯಪುರ ಜಿಲ್ಲೆ ಒಳಗೊಂಡಂತೆ ಒಟ್ಟಾರೆಯಾಗಿ 14.44 ಲಕ್ಷ ವಿದ್ಯಾರ್ಥಿಗಳಿಗೆ ಅನುಮೋದನೆ ನೀಡಲಾಗಿದೆ. ಸದ್ಯ ಈ ಜಿಲ್ಲೆಗಳಲ್ಲಿ ವಿದ್ಯಾರ್ಥಿಗಳ ದಾಖಲಾತಿ 16 ಲಕ್ಷವಿದೆ. ಅನುಮೋದಿತ 14.44 ಲಕ್ಷ ವಿದ್ಯಾರ್ಥಿಗಳ ಪೈಕಿ ಶೇ. 90 ರಷ್ಟು ವಿದ್ಯಾರ್ಥಿಗಳು ಮೊಟ್ಟೆಯನ್ನು ಸ್ವೀಕರಿಸುತ್ತಿದ್ದು ಉಳಿದ ವಿದ್ಯಾರ್ಥಿಗಳು ಬಾಳೆಹಣ್ಣು ಸ್ವೀಕರಿಸುತ್ತಿದ್ದಾರೆ,’ ಎಂದು ಮಧ್ಯಾಹ್ನ ಉಪಹಾರ ಯೋಜನೆಯ ಜಂಟಿ ನಿರ್ದೇಶಕರು ಸಭೇಯಲ್ಲಿ ಸಭೆಯ ಗಮನಕ್ಕೆ ತಂದಿರುವುದು ನಡವಳಿಯಿಂದ ತಿಳಿದು ಬಂದಿದೆ.
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಪ್ರಕಾರ ಯಾದಗಿರಿ, ರಾಯಚೂರು, ಬೀದರ್, ಬಳ್ಳಾರಿ, ಕಲಬುರಗಿ, ಕೊಪ್ಪಳ ಮತ್ತು ವಿಜಯಪುರ ಜಿಲ್ಲೆಗಳಲ್ಲಿ 1ರಿಂದ 8ನೇ ತರಗತಿ ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟದಲ್ಲಿ ಮೊಟ್ಟೆ ವಿತರಿಸುವ ಬಗ್ಗೆ ಪ್ರಾಯೋಗಿಕ ಅಧ್ಯಯನದ ಭಾಗವಾಗಿ 4 ಲಕ್ಷದ 44 ಸಾವಿರದ 322 ಮಕ್ಕಳಿಗೆ ಮಧ್ಯಾಹ್ನ ಬಿಸಿಯೂಟ ವಿತರಿಸುವ ಯೋಜನೆ ಜಾರಿಗೊಳಿಸಿತ್ತು.
ರಾಜ್ಯದ ಶೇ 32ರಷ್ಟು ಮಕ್ಕಳು ಕಡಿಮೆ ತೂಕ ಹಾಗೂ ಕುಂಠಿತ ಬೆಳವಣಿಗೆ ಹೊಂದಿದ್ದು, ಶೇ 45.2ರಷ್ಟು ಮಕ್ಕಳು ಮತ್ತು ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಎಂದು 2020–21ರ ‘ನೀತಿ ಆಯೋಗ’ದ ವರದಿಯಲ್ಲಿ ವಿವರಿಸಿತ್ತು. ಹೀಗಾಗಿ ಅಪೌಷ್ಠಿಕತೆಯಿಂದ ಬಳಲುತ್ತಿದ್ದ ಮಕ್ಕಳಿಗೆ ಮೊಟ್ಟೆ ನೀಡುವ ಕಾರ್ಯಕ್ರಮ ಜಾರಿಗೊಂಡಿದ್ದನ್ನು ಸ್ಮರಿಸಬಹುದು.