ಪರೀಕ್ಷೆ ನಿರ್ವಹಣೆ ವ್ಯವಸ್ಥೆ ಗುತ್ತಿಗೆ;ಸಚಿವರ ಕಚೇರಿ ಉನ್ನತ ಅಧಿಕಾರಿಯಿಂದಲೇ 20 ಪರ್ಸೆಂಟ್‌ ಕಮಿಷನ್‌ಗೆ ಬೇಡಿಕೆ?

photo credit-thebengalurulive

ಬೆಂಗಳೂರು; ವಿವಿಧ ಪರೀಕ್ಷೆಗಳ ಪರೀಕ್ಷಾ ನಿರ್ವಹಣೆ ವ್ಯವಸ್ಥೆಗೆ ಸಂಬಂಧಿಸಿದಂತೆ ವಿವಿಧ ಸಂಸ್ಥೆಗಳಿಂದ ಇ-ಪ್ರೊಕ್ಯೂರ್‌ಮೆಂಟ್‌ ಮೂಲಕ ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ಮತ್ತು ಬೆಳಗಾವಿಯ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು 2022ರ ಜನವರಿ 14 ಮತ್ತು 2022ರ ಫೆ.11 ರಂದು ಆಹ್ವಾನಿಸಿದ್ದ ಟೆಂಡರ್‌ ಪ್ರಕ್ರಿಯೆಯಲ್ಲಿ ಭಾಗವಹಿಸಲಿದ್ದ ಸೇವಾದಾರರು/ಹೊರಗುತ್ತಿಗೆ ಸಂಸ್ಥೆಗಳಿಗೆ ಉನ್ನತ ಶಿಕ್ಷಣ ಸಚಿವರ ಕಚೇರಿಯ ಉನ್ನತ ಅಧಿಕಾರಿಯೊಬ್ಬರು ಶೇ. 20ರಷ್ಟು ಕಮಿಷನ್‌ಗೆ ಬೇಡಿಕೆ ಇರಿಸಿದ್ದಾರೆ ಎಂಬ ಗುರುತರವಾದ ಆರೋಪ ಕೇಳಿ ಬಂದಿದೆ.

 

ಸೇವಾದಾರರು ಶೇ.20ರಷ್ಟು ಕಮಿಷನ್ ನೀಡಲಿಲ್ಲ ಎಂಬ ಕಾರಣಕ್ಕೆ ಟೆಂಡರ್‌ನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ಅಲ್ಲದೆ ತಡೆಹಿಡಿದಿರುವ ಟೆಂಡರ್‌ನ್ನು 2 ತಿಂಗಳಾದರೂ ಚಾಲನೆ ನೀಡಲು ಉನ್ನತ ಶಿಕ್ಷಣ ಇಲಾಖೆಯು ವಿಶ್ವವಿದ್ಯಾಲಯಗಳಿಗೆ ಸೂಚಿಸಿಲ್ಲ ಎಂದು ಗೊತ್ತಾಗಿದೆ.

 

ಬೆಳಗಾವಿಯ ಗುತ್ತಿಗೆದಾರ ಸಂತೋಷ್‌ ಪಾಟೀಲ್‌ ಆತ್ಮಹತ್ಯೆ ಪ್ರಕರಣದಲ್ಲಿ ಕೆ ಎಸ್‌ ಈಶ್ವರಪ್ಪ ಅವರ ರಾಜೀನಾಮೆ, ಮೇವು ಸರಬರಾಜುದಾರರಿಗೆ ಬಾಕಿ ಪಾವತಿಸಲು ಶೇ.40ರಷ್ಟು ಕಮಿಷನ್‌ಗೆ ಬೇಡಿಕೆ ಇರಿಸಿದ್ದ ಪ್ರಕರಣದ ಕುರಿತು ಬಿರುಸಿನ ಚರ್ಚೆ ನಡೆಯುತ್ತಿರುವಾಗಲೇ ವಿಶ್ವವಿದ್ಯಾಲಯಗಳಲ್ಲಿ ತಂತ್ರಾಂಶ ಸೇವೆ ಒದಗಿಸುತ್ತಿರುವ ಸೇವಾದಾರರಿಂದಲೂ ಶೇ.20ರಷ್ಟು ಕಮಿಷನ್‌ಗೆ ಬೇಡಿಕೆ ಇರಿಸಿದ್ದಾರೆ ಎಂಬ ಆರೋಪವು ಮುನ್ನೆಲೆಗೆ ಬಂದಿದೆ.

 

ಉನ್ನತ ಶಿಕ್ಷಣ ಸಚಿವ ಡಾ ಸಿ ಎನ್‌ ಅಶ್ವಥ್‌ನಾರಾಯಣ್‌ ಅವರ ಸೂಚನೆ ಮೇರೆಗೆ ಅವರ ಕಚೇರಿಯ ಉನ್ನತ ಅಧಿಕಾರಿಯೊಬ್ಬರು ಸೇವಾದಾರರ ಸಂಸ್ಥೆಗಳಿಗೆ ಕಮಿಷನ್‌ ಬೇಡಿಕೆ ಇರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಪರೀಕ್ಷೆ, ಮೌಲ್ಯಮಾಪನ ಮತ್ತು ಫಲಿತಾಂಶ ಪ್ರಕಟಿಸಲು ತಂತ್ರಾಂಶ ಸೇವೆ ಒದಗಿಸುವ ಸೇವಾದಾರರು/ ಹೊರಗುತ್ತಿಗೆ ಸಂಸ್ಥೆಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎಂದು ಹೇಳಲಾಗಿರುವ ಸಚಿವ ಅಶ್ವಥ್‌ನಾರಾಯಣ್‌ ಅವರ ಕಚೇರಿಯ ಉನ್ನತ ಅಧಿಕಾರಿಯೊಬ್ಬರು ಕಮಿಷನ್‌ ನೀಡದ ಹೊರತು ತಡೆಹಿಡಿದಿರುವ ಟೆಂಡರ್‌ ಪ್ರಕ್ರಿಯೆಗಳಿಗೆ ಚಾಲನೆ ನೀಡುವುದಿಲ್ಲ ಎಂದು ಬೆದರಿಕೆಯೊಡ್ಡಿದ್ದಾರೆ ಎಂದು ತಿಳಿದು ಬಂದಿದೆ.

 

ತಂತ್ರಾಂಶ ಸೇವೆ ಒದಗಿಸುವ ಸೇವಾದಾರ/ಹೊರಗುತ್ತಿಗೆ ಸೇವಾ ಸಂಸ್ಥೆಗಳಿಗೆ ಖುದ್ದು ಭೇಟಿ ನೀಡಿ ಶೇ. 20ರಷ್ಟು ಕಮಿಷನ್‌ಗೆ ಬೇಡಿಕೆ ಇರಿಸಿದ್ದಾರೆ ಎಂಬ ಆರೋಪಕ್ಕೆ ಗುರಿಯಾಗಿರುವ ಸಚಿವರ ಕಚೇರಿಯ ಉನ್ನತ ಅಧಿಕಾರಿಯೊಬ್ಬರು 2023ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಖರ್ಚನ್ನು ಸರಿದೂಗಿಸಲು ಕಡ್ಡಾಯವಾಗಿ ಕಮಿಷನ್‌ ನೀಡಬೇಕು ಎಂದು ಬೇಡಿಕೆ ಇರಿಸಿದ್ದಾರೆ. ಕಮಿಷನ್‌ ಮೊತ್ತದಲ್ಲಿ ಕಡಿಮೆ ಮಾಡುವುದಿಲ್ಲ ಮತ್ತು ಯಾವುದೇ ರಿಯಾಯಿತಿಯನ್ನೂ ತೋರಿಸುವುದಿಲ್ಲ ಎಂದು ಹೇಳಿದ್ದಾರೆ ಎಂದು ವಿಶ್ವವಿದ್ಯಾಲಯದ ಹಿರಿಯ ಅಧಿಕಾರಿಯೊಬ್ಬರು ‘ದಿ ಫೈಲ್‌’ಗೆ ತಿಳಿಸಿದ್ದಾರೆ.

 

4 ಕೋಟಿ ಕಮಿಷನ್‌?

 

ಈ ಎರಡೂ ವಿಶ್ವವಿದ್ಯಾಲಯಗಳಲ್ಲಿ ಪರೀಕ್ಷೆ ನಿರ್ವಹಣೆ ವ್ಯವಸ್ಥೆ ನಿರ್ವಹಿಸಲು ವಾರ್ಷಿಕವಾಗಿ ಸುಮಾರು 6ರಿಂದ 7 ಕೋಟಿ ರು. ಮೊತ್ತವನ್ನು ಹೊರಗುತ್ತಿಗೆ ಸಂಸ್ಥೆಗೆ ನೀಡುತ್ತಿದೆ. ಗುತ್ತಿಗೆಯು ಮೂರು ವರ್ಷದ್ದಾಗಿದೆ. ಮೂರು ವರ್ಷಕ್ಕೆ ಸುಮಾರು 20 ಕೋಟಿ ರು. ಆಗಲಿದೆ. ಈ ಮೊತ್ತದಲ್ಲಿ ಶೇ. 20ರಷ್ಟು ಕಮಿಷನ್‌ ಎಂದು ಲೆಕ್ಕಾಚಾರ ಮಾಡಿದರೆ 4.00 ಕೋಟಿ ರು. ಗಳಾಗಲಿದೆ ಎಂದು ತಿಳಿದು ಬಂದಿದೆ.

 

ಆರಂಭದಲ್ಲಿ ವಿಶ್ವವಿದ್ಯಾಲಯದ ಅಧಿಕಾರಿಗಳೊಂದಿಗೆ ಮಾತನಾಡಿರುವ ಈ ಉನ್ನತ ಅಧಿಕಾರಿಯು ಈ ತರಹದ ಸೇವೆ ನೀಡುವ ಹಲವು ಸಂಸ್ಥೆಗಳನ್ನು ನೇರವಾಗಿ ಸಂಪರ್ಕಿಸಿದ್ದಾರೆ ಎಂದು ಗೊತ್ತಾಗಿದೆ. ಆದರೆ ಇಷ್ಟೊಂದು ದೊಡ್ಡ ಮೊತ್ತದ ಕಮಿಷನ್‌ನ್ನು ನೀಡಲು ಸೇವಾದಾರರು/ಹೊರಗುತ್ತಿಗೆ ಸಂಸ್ಥೆಯವರು ನಿರಾಕರಿಸಿದ್ದಾರೆ. ಹೀಗಾಗಿ ಉನ್ನತ ಶಿಕ್ಷಣ ಸಚಿವರು ಟೆಂಡರ್‌ ಪ್ರಕ್ರಿಯೆಯನ್ನೇ ತಡೆಹಿಡಿಯಲು ಸೂಚನೆ ನೀಡಿದ್ದಾರೆ ಎಂಬ ಬಲವಾದ ಆರೋಪವು ಕೇಳಿ ಬಂದಿದೆ.

 

‘ಶೇ.20ರಷ್ಟು ಕಮಿಷನ್‌ ನೀಡಿದ್ದರೆ ಇಷ್ಟೊತ್ತಿಗಾಗಲೇ ಟೆಂಡರ್‌ ಪ್ರಕ್ರಿಯೆ ಪೂರ್ಣಗೊಳ್ಳಬೇಕಿತ್ತು. ಕಮಿಷನ್‌ ನೀಡದ ಕಾರಣ ತಡೆಹಿಡಿದಿರುವ ಟೆಂಡರ್‌ ಪ್ರಕ್ರಿಯೆ ಮುಂದುವರೆದಿಲ್ಲ. ಇದು ವಿಶ್ವವಿದ್ಯಾಲಯಗಳ ಪರೀಕ್ಷೆ ಚಟುವಟಿಕೆ ಮಾತ್ರವಲ್ಲ ವಿದ್ಯಾರ್ಥಿಗಳ ಶೈಕ್ಷಣಿಕ ಭವಿಷ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ,’ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ವಿ ವಿ ಅಧಿಕಾರಿಯೊಬ್ಬರು.

 

ಸಚಿವರ ಟಿಪ್ಪಣಿ ಹಿಂದಿದೆಯೇ ಕಮಿಷನ್‌ ಬೇಡಿಕೆ?

 

ರಾಣಿ ಚೆನ್ನಮ್ಮ ಮತ್ತು ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದಲ್ಲಿ ಪರೀಕ್ಷೆ ನಿರ್ವಹಣೆ ವ್ಯವಸ್ಥೆ (ಇಪಿಎಂಎಸ್‌) ತಂತ್ರಾಂಶ ಬಳಸುವುದಕ್ಕೆ ಸಂಬಂಧಿಸಿದಂತೆ ಟೆಂಡರ್‌ ಕರೆದಿದ್ದರ ಹಿನ್ನೆಲೆಯಲ್ಲಿ ಸಚಿವ ಡಾ ಸಿ ಎನ್‌ ಅಶ್ವಥ್‌ನಾರಾಯಣ್‌ ಅವರು 2022ರ ಫೆ.21ರಂದು ಟಿಪ್ಪಣಿ ಹೊರಡಿಸಿದ್ದರು. ಸೇವಾದಾರರು/ಹೊರಗುತ್ತಿಗೆ ಸಂಸ್ಥೆಗಳು ಶೇ.15-20ರಷ್ಟು ಕಮಿಷನ್‌ ನೀಡದೇ ಇದ್ದದ್ದಕ್ಕೆ ಇಡೀ ಟೆಂಡರ್‌ ಪ್ರಕ್ರಿಯೆಯನ್ನು ತಡೆಹಿಡಿಯಲು ಉನ್ನತ ಶಿಕ್ಷಣ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಟಿಪ್ಪಣಿಯಲ್ಲಿ ಸೂಚಿಸಿದ್ದರು ಎಂಬ ಆರೋಪ ಕೇಳಿ ಬಂದಿದೆ. ಈ ಟಿಪ್ಪಣಿಯ ಪ್ರತಿ ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ಟಿಪ್ಪಣಿಯಲ್ಲೇನಿದೆ?

 

ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿ, ಪರೀಕ್ಷೆ, ವಿದ್ಯಾರ್ಥಿಗಳ ಮಾಹಿತಿ ಹಾಗೂ ಇನ್ನಿತರೆ ವಿಷಯಗಳನ್ನು ಒಳಗೊಂಡ ಮಾಹಿತಿಯನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಇ-ಆಡಳಿತ) ವತಿಯಿಂದ ಅಭಿವೃದ್ಧಿಪಡಿಸಿ ಸರ್ಕಾರದಿಂದ ಚಾಲನೆ ನೀಡಿರುವ ಯುಯುಸಿಎಂಎಸ್‌ ತಂತ್ರಾಂಶವನ್ನು ಈಗಾಗಲೇ ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಬಳಸಲಾಗುತ್ತಿದೆ. ಅದರೆ ರಾಣಿ ಚೆನ್ನಮ್ಮ ಮತ್ತು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯಗಳಲ್ಲಿ ಇಪಿಎಂಎಸ್‌(Examamination Proceessing Management System) ಎಂಬ ತಂತ್ರಾಂಶವನ್ನು ಬಳಸಲು ಟೆಂಡರ್‌ ಕರೆದಿರುವುದು ಗಮನಕ್ಕೆ ಬಂದಿದ್ದು ಸದರಿ ಟೆಂಡರ್ ಪ್ರಕ್ರಿಯೆಯನ್ನು ರದ್ದುಗೊಳಿಸಿ ಉಚಿತವಾಗಿ ಲಭ್ಯವಿರುವ ಯುಯುಸಿಎಂಎಸ್‌ ತಂತ್ರಾಂಶವನ್ನು ರಾಜ್ಯದ ಎಲ್ಲಾ ವಿಶ್ವವಿದ್ಯಾಲಯಗಳಲ್ಲಿ ಅವಶ್ಯವಾಗಿ ಅಳವಡಿಸಿಕೊಳ್ಳುವಂತೆ ವಿಶ್ವವಿದ್ಯಾಲಯಗಳ ಕುಲಪತಿಗಳಿಗೆ ಅಗತ್ಯ ನಿರ್ದೇಶನ ನೀಡಲು ಅಂತೆಯೆ ಮಾರ್ಚ್‌ 2022ರೊಳಗಾಗಿ ಯುಯುಸಿಎಂಎಸ್‌ ಜತೆಗೆ ಇ ಆಫೀಸ್‌ ಮತ್ತು ನ್ಯಾಡ್‌ ಅನ್ನು ಕಡ್ಡಾಯವಾಗಿ ಸಂಪೂರ್ಣ ಅನುಷ್ಟಾನಗೊಳಿಸಲು ಎಲ್ಲಾ ವಿಶ್ವವಿದ್ಯಾಲಯಗಳಿಗೆ ಸ್ಪಷ್ಟ ನಿರ್ದೇಶನ ನೀಡಿ ಅನುಷ್ಠಾನಗೊಳಿಸಿ ಕೈಗೊಂಡ ಕ್ರಮದ ಬಗ್ಗೆ ಮಂಡಿಸಲು ಸೂಚಿಸಿದೆ ಎಂದು 2022ರ ಫೆ.21ರಂದು ಸಚಿವ ಅಶ್ವಥ್‌ನಾರಾಯಣ್‌ ಅವರು ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಟಿಪ್ಪಣಿ ಹೊರಡಿಸಿದ್ದರು.

 

ಉನ್ನತ ಶಿಕ್ಷಣ ಸಚಿವ ಅಶ್ವಥ್‌ನಾರಾಯಣ್‌ ಹೊರಡಿಸಿರುವ ಟಿಪ್ಪಣಿ ಪ್ರತಿ

 

ವಿ ವಿ ಪ್ರಕಟಣೆಯಲ್ಲೇನಿದೆ?

 

ಈ ಟಿಪ್ಪಣಿ ಹೊರಡಿಸಿದ ಮೂರೇ ದಿನದಲ್ಲಿ ಅಂದರೆ 2022ರ ಫೆ.24ರಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವರು ಪ್ರಕಟಣೆ ಹೊರಡಿಸಿದ್ದರು. ‘ ಪರೀಕ್ಷಾ ವಿಭಾಗಕ್ಕೆ ಸಂಬಂಧಿಸಿದಂತೆ 2021-22ನೇ ಸಾಲಿನಲ್ಲಿ ಹಾಗೂ ತದನಂತರದ ಸಾಲಿನಲ್ಲಿ ಜರುಗಲಿರುವ ವಿವಿಧ ಪದವಿ ಪರೀಕ್ಷೆಗಳ ಪರೀಕ್ಷಾ ನಿರ್ವಹಣೆ ವ್ಯವಸ್ಥೆಗೆ ಸಂಬಂಧಿಸಿದಂತೆ ವಿವಿಧ ಸಂಸ್ಥೆಗಳಿಂದ ಇ-ಪ್ರೊಕ್ಯೂರ್‌ಮೆಂಟ್‌ ಮೂಲಕ ಮರು ಟೆಂಡರ್‌ನ್ನು 2022ರ ಫೆ.11ರಂದು ಆಹ್ವಾನಿಸಲಾಗಿತ್ತು. ಸದರಿ ಟೆಂಡರ್‌ ಪ್ರಕ್ರಿಯೆಯನ್ನು ಉನ್ನತ ಶಿಕ್ಷಣ ಇಲಾಖೆಯ ಸೂಚನೆಯಂತೆ ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ಪ್ರಕಟಣೆ ಹೊರಡಿಸಿದ್ದಾರೆ. ಇದರ ಪ್ರತಿಯು ‘ದಿ ಫೈಲ್‌’ಗೆ ಲಭ್ಯವಾಗಿದೆ.

 

ರಾಣಿಚನ್ನಮ್ಮ ವಿವಿ ಕುಲಸಚಿವರು ಹೊರಡಿಸಿರುವ ಪ್ರಕಟಣೆ ಪ್ರತಿ

 

ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ಮತ್ತು ಬೆಳಗಾವಿಯ ರಾಣಿ ಚನ್ನಮ್ಮ ವಿ.ವಿ.ಯಲ್ಲಿ ಚಾಲ್ತಿಯಲ್ಲಿದ್ದ ಪರೀಕ್ಷಾ ನಿರ್ವಹಣೆ ವ್ಯವಸ್ಥೆಯ ಗುತ್ತಿಗೆ ಅವಧಿ ಈಗಾಗಲೇ ಪೂರ್ಣಗೊಂಡಿದೆ. ಹೀಗಾಗಿ ಹೊಸ ಗುತ್ತಿಗೆಯನ್ನು ನೀಡುವುದು ಅತ್ಯವಶ್ಯವಾಗಿದೆ. ಈ ಹಿನ್ನೆಲೆಯಲ್ಲಿ ಈ ಎರಡೂ ವಿಶ್ವವಿದ್ಯಾಲಯಗಳು ಟೆಂಡರ್‌ ಪ್ರಕ್ರಿಯೆ ಆರಂಭಿಸಿದ್ದವು. ಟೆಂಡರ್‌ ಪ್ರಕ್ರಿಯೆಯನ್ನು ತಡೆಹಿಡಿಯಲು ಉನ್ನತ ಶಿಕ್ಷಣ ಇಲಾಖೆ ಸಚಿವರು ನೀಡಿರುವ ಸೂಚನೆಯಿಂದಾಗಿ ಈ ಎರಡೂ ವಿಶ್ವವಿದ್ಯಾಲಯಗಳಲ್ಲಿ ಪರೀಕ್ಷೆ ಚಟುವಟಿಕೆಗಳು ಸ್ಥಗಿತಗೊಂಡಿದೆ.

 

‘ಸಚಿವರು ಹೊರಡಿಸಿರುವ ಟಿಪ್ಪಣಿಯಿಂದಾಗಿ ಟೆಂಡರ್‌ ಪ್ರಕ್ರಿಯೆ ರದ್ದುಗೊಂಡಿರುವುದರಿಂದ ವಿಶ್ವವಿದ್ಯಾಲಯದ ಪರೀಕ್ಷೆ ಕಾರ್ಯಗಳು ಸ್ಥಗಿತಗೊಂಡಿವೆ. ಅಂದಾಜು ಎರಡೂ ವಿಶ್ವವಿದ್ಯಾಲಯಗಳ ಪ್ರತಿ ಸೆಮಿಸ್ಟರ್‌ಗೆ 2.50 ಲಕ್ಷ ವಿದ್ಯಾರ್ಥಿಗಳಿಗೆ ಅನಾನುಕೂಲವಾಗಿದೆ. ಈಗಾಗಲೇ ಎರಡನೇ ಮತ್ತು ಮೂರನೇ ವರ್ಷದ ಪರೀಕ್ಷೆಗಳು ನಡೆದಿದೆ. ಸಚಿವರ ಸೂಚನೆ ಮೇರೆಗೆ ಟೆಂಡರ್‌ ಪ್ರಕ್ರಿಯೆಯೂ ರದ್ದುಗೊಂಡಿರುವ ಕಾರಣ ಮೌಲ್ಯಮಾಪನ ಪ್ರಕ್ರಿಯೆಯೂ ಸ್ಥಗಿತಗೊಂಡಿದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಮುಂದಿನ ಭವಿಷ್ಯವೇ ಅತಂತ್ರವಾಗಿದೆ,’ ಎನ್ನುತ್ತಾರೆ ವಿಶ್ವವಿದ್ಯಾಲಯವೊಂದರ ಕುಲಸಚಿವರು.

 

ಈಗಾಗಲೇ ಕಮಿಷನ್‌ ನೀಡಲು ನಿರಾಕರಿಸಿರುವ ಸಂಸ್ಥೆಗಳೊಂದಿಗೆ ಸಚಿವರ ಕಚೇರಿಯ ಉನ್ನತ ಅಧಿಕಾರಿಯೊಬ್ಬರು ಸೇವಾದಾರ ಮತ್ತು ಹೊರಗುತ್ತಿಗೆ ಸಂಸ್ಥೆಗಳೊಂದಿಗೆ ಕಮಿಷನ್‌ ದರ ಸಂಧಾನ ಮುಂದುವರೆಸಿದ್ದಾರೆ. ಒಂದೊಮ್ಮೆ ಕಮಿಷನ್‌ ದರ ಸಂಧಾನ ಯಶಸ್ವಿಯಾದರೆ ಶೀಘ್ರದಲ್ಲೇ ವಿಶ್ವವಿದ್ಯಾಲಯಗಳು ಟೆಂಡರ್ ಪ್ರಕ್ರಿಯೆ ಆರಂಭಿಸಲು ಉನ್ನತ ಶಿಕ್ಷಣ ಇಲಾಖೆಯು ಸೂಚನೆ ನೀಡುವ ಸಾಧ್ಯತೆಗಳು ಹೆಚ್ಚಿವೆ ಎನ್ನುತ್ತಾರೆ ಇಲಾಖೆಯ ಮತ್ತೊಬ್ಬ ಅಧಿಕಾರಿ.

 

ಈ ಕುರಿತು ಬೆಳಗಾವಿಯ ರಾಣಿಚನ್ನಮ್ಮ ವಿಶ್ವವಿದ್ಯಾಲಯದ ಕುಲಪತಿ ರಾಮಚಂದ್ರಗೌಡ ಅವರು ‘ಯುಯುಸಿಎಂಎಸ್‌ ತಂತ್ರಾಂಶವನ್ನು ದೇಶದಲ್ಲಿ ಪ್ರಪ್ರಥಮಬಾರಿಗೆ ಪರಿಚಯಿಸುತ್ತಿರುವುದರಿಂದ ಟೆಂಡರ್‌ ಪ್ರಕ್ರಿಯೆ ನಿಧಾನವಾಗಿದೆ,’ ಎಂದು ‘ದಿ ಫೈಲ್‌’ಗೆ ಪ್ರತಿಕ್ರಿಯಿಸಿದ್ದಾರೆ. ಆದರೆ ಬಳ್ಳಾರಿಯ ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಕುಲಪತಿ ಅಲಗೂರು ಅವರಿಂದಲೂ ಪ್ರತಿಕ್ರಿಯೆ ಪಡೆಯಲು ‘ದಿ ಫೈಲ್‌’ ವಾಟ್ಸಾಪ್‌ ಮೂಲಕ ಸಂಪರ್ಕಿಸಲಾಯಿತಾದರೂ ಇದುವರೆಗೂ ಅವರು ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.

SUPPORT THE FILE

Latest News

Related Posts