ಬೆಂಗಳೂರು; ಕಾಂಗ್ರೆಸ್ ಮತ್ತು ಜೆಡಿಎಸ್ ಪಾಲುದಾರಿಕೆಯ ಸಮ್ಮಿಶ್ರ ಸರ್ಕಾರವನ್ನು ಕೆಡವಿ ಅಸ್ತಿತ್ವಕ್ಕೆ ಬಂದಿರುವ ಬಿಜೆಪಿ ಸರ್ಕಾರವು 2 ವರ್ಷ ಪೂರ್ಣಗೊಳಿಸಿ ಮೂರನೇ ವರ್ಷಕ್ಕೆ ಕಾಲಿಟ್ಟಿದ್ದರೂ ಆಡಳಿತದಲ್ಲಿ ಪಾರದರ್ಶಕತೆ, ಅಭಿವೃದ್ಧಿ ಮತ್ತು ಚುರುಕುತನ ತರಲಿಲ್ಲ. ಭ್ರಷ್ಟಾಚಾರ, ಕಮಿಷನ್, ಲಂಚಕ್ಕೆ ಬೇಡಿಕೆ, ವರ್ಗಾವಣೆಗೆ ಬೇಡಿಕೆ, ಅಧಿಕಾರಿಗಳಿಂದ ಹಣ ವಸೂಲಿ ಮಾಡಿರುವ ಗುರುತರವಾದ ಆರೋಪಗಳಿಗೆ ಗುರಿಯಾಗಿರುವ ಸಚಿವರುಗಳ ವಿರುದ್ಧ ಕ್ರಮ ಕೈಗೊಳ್ಳುವುದರಲ್ಲಿಯೂ ಪಕ್ಷಪಾತ ಮೆರೆದಿದೆ.
ಬೆಳಗಾವಿಯ ಗುತ್ತಿಗೆದಾರ ಸಂತೋಷ್ ಪಾಟೀಲ್ ಎಂಬಾತನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಈಶ್ವರಪ್ಪ ಅವರ ರಾಜೀನಾಮೆ ಪಡೆದಿರುವ ಬಿಜೆಪಿ ಹೈಕಮಾಂಡ್, ಸಚಿವ ಸಂಪುಟದ ಇನ್ನಿತರೆ ಸಚಿವರ ವಿರುದ್ಧ ಭ್ರಷ್ಟಾಚಾರದಂತಹ ಗುರುತರವಾದ ಆರೋಪಗಳಿದ್ದರೂ ಯಾವುದೇ ಕ್ರಮ ವಹಿಸುವುದರಲಿ ಕನಿಷ್ಠ ವಿವರಣೆಯನ್ನೂ ಪಡೆಯಲಿಲ್ಲ.
ಸಚಿವ ಈಶ್ವರಪ್ಪ ಸೇರಿದಂತೆ ಒಟ್ಟು ಐವರು ಸಚಿವರ ವಿರುದ್ಧ ಭ್ರಷ್ಟಾಚಾರದ ಸುಳಿಯಲ್ಲಿ ಸಿಲುಕಿದ್ದಾರೆ. ಈ ಪೈಕಿ ಬಿಜೆಪಿ ಹೈಕಮಾಂಡ್ 2020-21ರಲ್ಲಿ ಅಬಕಾರಿ ಸಚಿವರಾಗಿದ್ದ ಎಚ್ ನಾಗೇಶ್ (ಪರಿಶಿಷ್ಟ ಜಾತಿ) ಅವರ ರಾಜೀನಾಮೆ ಪಡೆದುಕೊಂಡಿತ್ತು. ಇದೀಗ ಶೇ. 40ರಷ್ಟು ಕಮಿಷನ್‌ಗೆ ಬೇಡಿಕೆ ಇರಿಸಿದ್ದ ಪ್ರಕರಣದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಕೆ ಎಸ್ ಈಶ್ವರಪ್ಪ (ಕುರುಬ) ಅವರಿಂದಲೂ ರಾಜೀನಾಮೆ ಪಡೆದಿದೆ. ಪ್ರಬಲ ಸಮುದಾಯಕ್ಕೆ ಸೇರಿದ ಇನ್ನೂ ಮೂವರ ಸಚಿವರ ವಿರುದ್ಧವೂ ಇಲಾಖೆಯ ನೌಕರರೇ ಆರೋಪ ಮಾಡಿದ್ದರೂ ಇವರಿಂದ ರಾಜೀನಾಮೆ ಪಡೆಯುವ ಧೈರ್ಯವನ್ನು ಹೈಕಮಾಂಡ್ ಪ್ರದರ್ಶಿಸಿಲ್ಲ.
ಅಧಿಕಾರಿಗಳಿಂದ ಹಣ ವಸೂಲಿ ಮಾಡಬೇಕು ಎಂದು ನಿರ್ದೇಶಿಸಿದ್ದಾರೆ ಎಂಬ ಆರೋಪಕ್ಕೆ ಇನ್ನೂ ಹಲವು ಸಚಿವರೂ ಗುರಿಯಾಗಿದ್ದಾರೆ. ಅಧಿಕಾರಿಗಳಿಂದ ಹಣ ವಸೂಲಿ ಮಾಡಲು ನಿರ್ದೇಶಿಸಿದ್ದಾರೆ ಎಂಬ ಆರೋಪಕ್ಕೆ ಕೃಷಿ ಸಚಿವ ಬಿ ಸಿ ಪಾಟೀಲ್ (ಲಿಂಗಾಯತ) ಕಂದಾಯ ಸಚಿವ ಆರ್ ಆಶೋಕ್ (ಒಕ್ಕಲಿಗ) ಮತ್ತು ಅಬಕಾರಿ ಸಚಿವ ಗೋಪಾಲಯ್ಯ (ಒಕ್ಕಲಿಗ) ಅವರ ವಿರುದ್ಧ ಸ್ವತಃ ಅಧಿಕಾರಿಗಳೇ ಮುಖ್ಯಮಂತ್ರಿ, ರಾಜ್ಯಪಾಲರು ಮತ್ತು ಪ್ರತಿಪಕ್ಷ ನಾಯಕರಿಗೆ ದೂರು ಸಲ್ಲಿಸಿದ್ದರು. ಇನ್ನು, ಅಂಗನವಾಡಿ ಕೇಂದ್ರಗಳಿಗೆ ಮೊಟ್ಟೆ ಖರೀದಿ ಸಂಬಂಧ ಕಮಿಷನ್ ಕೇಳಿದ್ದಾರೆ ಎಂಬ ಗುರುತರವಾದ ಆರೋಪಕ್ಕೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವರಾಗಿದ್ದ ಶಶಿಕಲಾ ಜೊಲ್ಲೆ ಅವರು ಗುರಿಯಾಗಿದ್ದರು. ಈ ಸಂಬಂಧ ಕುಟುಕು ಕಾರ್ಯಾಚರಣೆಯೊಂದು ಬಹಿರಂಗಪಡಿಸಿತ್ತು.
ಆದರೆ ಈ ಯಾವ ಪ್ರಕರಣಗಳ ಕುರಿತು ಇದುವರೆಗೂ ಯಾವುದೇ ತನಿಖೆಯೂ ನಡೆದಿಲ್ಲ. ಮೇಲಾಗಿ ಈ ಪ್ರಕರಣಗಳು ರಾಜಕೀಯಕರಣಗೊಳ್ಳಿಲ್ಲ. ಹೀಗಾಗಿ ಇವರಿಂದ ರಾಜೀನಾಮೆಯನ್ನೂ ಪಡೆಯಲಿಲ್ಲ. ಸದ್ಯ ಈ ದೂರುಗಳು ಕಸದ ಬುಟ್ಟಿಗೆ ಎಸೆಯಲ್ಪಟ್ಟಿವೆ.
ಎಚ್ ನಾಗೇಶ್ ಪ್ರಕರಣ ವಿವರ
ಹೈಪರ್ ಟೆನ್ಷನ್, ಸಕ್ಕರೆ , ಕಿಡ್ನಿ ಕಾಯಿಲೆಯಿಂದ ಬಳಲುತ್ತಿದ್ದ ಅಬಕಾರಿ ಇಲಾಖೆಯಲ್ಲಿ ಜಂಟಿ ಆಯುಕ್ತರಾಗಿ ಕಾರ್ಯನಿರ್ವಹಿಸುತ್ತಿದ್ದ ಅಧಿಕಾರಿಯೊಬ್ಬರ ವರ್ಗಾವಣೆಗೆ ಅಂದಿನ ಅಬಕಾರಿ ಸಚಿವ ಎಚ್ ನಾಗೇಶ್ ಅವರು 1 ಕೋಟಿ ಲಂಚಕ್ಕೆ ಬೇಡಿಕೆ ಇರಿಸಿದ್ದರು ಎಂದು ಸ್ವತಃ ಜಂಟಿ ಆಯುಕ್ತರ ಪುತ್ರಿ ಸ್ನೇಹಾ ಎಂಬುವರು ಪ್ರಧಾನಿ ಕಚೇರಿಗೆ ದೂರು ಸಲ್ಲಿಸಿದ್ದರು.
‘ನಮ್ಮ ತಂದೆಗೆ ಇಬ್ಬರು ಪುತ್ರಿಯರಿದ್ದು, ಒಬ್ಬರು ಇಂಜಿನಿಯರಿಂಗ್ ಮತ್ತೊಬ್ಬರು ಪಿಯುಸಿ ವ್ಯಾಸಂಗ ಮಾಡುತ್ತಿದ್ದೇವೆ. 5 ಜಂಟಿ ಆಯುಕ್ತರ ಹುದ್ದೆ ಖಾಲಿ ಇವೆ. ಈ ಹುದ್ದೆಗೆ ಅರ್ಹ ಅಭ್ಯರ್ಥಿಗಳಿಲ್ಲ. ನಮ್ಮ ತಂದೆ ಸದ್ಯ ಹೊಸಪೇಟೆ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಅನಾರೋಗ್ಯ ಮತ್ತು ನಿವೃತ್ತಿ ಅಂಚಿನಲ್ಲಿರುವ ಕಾರಣ ಖಾಲಿ ಇದ್ದ ಹುದ್ದೆಗೆ ವರ್ಗಾವಣೆ ಮಾಡಲು ಕೋರಿದ್ದೆವು. ಆದರೆ ಸಚಿವ ಎಚ್ ನಾಗೇಶ್ ಅವರು 1 ಕೋಟಿ ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದಾರೆ, ‘ ಎಂದು ಆರೋಪಿಸಿದ್ದರು. ಅಲ್ಲದೆ, 1 ಕೋಟಿಗೆ ಬೇಡಿಕೆ ಇಟ್ಟಿದ್ದ ಸಂಗತಿಯೂ ಉಪ ಮುಖ್ಯಮಂತ್ರಿ ಡಾ ಸಿ ಎನ್ ಅಶ್ವಥ್‌ನಾರಾಯಣ್ ಅವರಿಗೆ ಗೊತ್ತಿದ್ದರೂ ಮೌನವಾಗಿದ್ದರು. ಅಧಿಕಾರಿ ಪುತ್ರಿ ಪ್ರಧಾನಿಗೆ ಸಲ್ಲಿಸಿರುವ ಮನವಿಯಲ್ಲಿ ಉಪ ಮುಖ್ಯಮಂತ್ರಿ ಅಶ್ವಥ್‌ನಾರಾಯಣ್ ಅವರ ಹೆಸರು ಪ್ರಸ್ತಾಪಿಸಿದ್ದನ್ನು ಸ್ಮರಿಸಬಹುದು.
ಈ ಕುರಿತಾದ ಪ್ರಕರಣವನ್ನು ‘ದಿ ಫೈಲ್’ ದಾಖಲೆ ಸಮೇತ ಹೊರಗೆಡವಿತ್ತು. ಇದರಿಂದ ಬಿಜೆಪಿ ಸರ್ಕಾರ ತೀವ್ರ ಮುಜುಗರಕ್ಕೆ ಸಿಲುಕಿತ್ತು. ವರದಿ ಪ್ರಕಟವಾಗುತ್ತಿದ್ದಂತೆ ಖುದ್ದು ಸಚಿವ ನಾಗೇಶ್ ಅವರು ‘ದಿ ಫೈಲ್’ ವರದಿಯನ್ನು ಉಲ್ಲೇಖಿಸಿ ಸುದ್ದಿಗೋಷ್ಠಿ ನಡೆಸಿ ಆರೋಪವನ್ನು ನಿರಾಕರಿಸಿದ್ದರಲ್ಲದೆ ಪ್ರಕರಣವನ್ನು ತನಿಖೆ ನಡೆಸಲಾಗುವುದು ಎಂದು ಹೇಳಿದ್ದರು. ಆದರೆ ಇದುವರೆಗೂ ಈ ಪ್ರಕರಣದ ಕುರಿತು ಯಾವುದೇ ತನಿಖೆ ನಡೆದಿಲ್ಲ ಎಂದು ತಿಳಿದು ಬಂದಿದೆ.
ಬಿ ಸಿ ಪಾಟೀಲ್ ವಿರುದ್ಧದ ಆರೋಪ
ಕೃಷಿ ಸಚಿವ ಬಿ ಸಿ ಪಾಟೀಲ್ ಅವರ ಹೆಸರಿನಲ್ಲಿ ಅವರ ಅಪ್ತ ಕಾರ್ಯದರ್ಶಿ ಶಿವಕುಮಾರ್ ಮತ್ತಿತರ ಖಾಸಗಿ ವ್ಯಕ್ತಿಗಳು ಕೃಷಿ ಇಲಾಖೆಯ ನೌಕರರಿಂದ ಸುಲಿಗೆ ಮಾಡುತ್ತಿದ್ದಾರೆ ಎಂಬ ದೂರು ಮುಖ್ಯ ಕಾರ್ಯದರ್ಶಿಗಳ ಕಚೇರಿಗೆ ಸಲ್ಲಿಕೆಯಾಗಿತ್ತು. ದಯಾನಂದ್, ಮಂಜುನಾಥ್ ಎ ಸಿ, ಇಲಾಖೆಯ ನಿರ್ದೇಶಕ ಬಿ ವೈ ಶ್ರೀನಿವಾಸ್ ಅವರ ಹೆಸರನ್ನು ಪತ್ರದಲ್ಲಿ ಹೆಸರಿಸಿರುವ ಕೃಷಿ ಇಲಾಖೆಯ ಅಧಿಕಾರಿಗಳು, ಪಂಚಾಯ್ತಿಮಟ್ಟದ ಸಹಾಯಕ ಕೃಷಿ ಆಧಿಕಾರಿಗಳಿಂದ ಜಿಲ್ಲೆಯಲ್ಲಿನ ಜಂಟಿ ಕೃಷಿ ನಿರ್ದೇಶಕರಿಂದ ಲಕ್ಷಾಂತರ ರು.ವಸೂಲಿ ಮಾಡುತ್ತಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು.
ಪಂಚಾಯ್ತಿಮಟ್ಟದ ಸಹಾಯಕ ಕೃಷಿ ಅಧಿಕಾರಿಗಳಿಗೆ 50 ಸಾವಿರದಿಂದದ 1.00 ಲಕ್ಷ, ಹೋಬಳಿ ಮಟ್ಟದ ಕೃಷಿ ಅಧಿಕಾರಿಗಳಿಗೆ 50 ಸಾವಿರದಿಂದ 1.50 ಲಕ್ಷ, ತಾಲೂಕು ಮಟ್ಟದ ಸಹಾಯಕ ಕೃಷಿ ನಿರ್ದೇಶಕರುಗಳಿಗೆ 5 ಲಕ್ಷದಿಂದ 10 ಲಕ್ಷ, ಉಪ ಕೃಷಿ ನಿರ್ದೇಶಕರುಗಳಿಗೆ 10 ಲಕ್ಷದಿಂದ 15 ಲಕ್ಷ, ಜಿಲ್ಲೆಗಳಲ್ಲಿನ ಜಂಟಿ ಕೃಷಿ ನಿರ್ದೇಶಕರುಗಳಿಗೆ 30 ಲಕ್ಷದಿಂದ 100.00 ಲಕ್ಷದವರಗೆ ಸೇರಿದಂತೆ ಒಂದು ಜಿಲ್ಲೆಯಿಂದ 50 ಲಕ್ಷದಿಂದ 1.5 ಕೋಟಿಯವರೆಗೆ ವಸೂಲಿ ಮಾಡಲಾಗಿದೆ ಎಂದು ಅಧಿಕಾರಿ, ನೌಕರರು ಗಂಭೀರವಾಗಿ ದೂರಿನಲ್ಲಿ ಪ್ರಸ್ತಾಪಿಸಿದ್ದರು.
2020-21ನೇ ಸಾಲಿನ ಗ್ರೂಪ್ ಎ, ಗ್ರೂಪ್ ಮತ್ತು ಗ್ರೂಪ್ ಸಿ ವರ್ಗದ ಅಧಿಕಾರಿ/ನೌಕರರಿಗೆ ಮಾತ್ರ ಅನ್ವಯವಾಗುವಂತೆ 2020ರ ಜುಲೈ 10ರವರೆಗೆ ಸಾರ್ವತ್ರಿಕ ವರ್ಗಾವಣೆ ಕೈಗೊಳ್ಳಲು ಆಯಾ ಇಲಾಖೆ ಸಚಿವರುಗಳಿಗೆ ಅಧಿಕಾರಿ ಪ್ರತ್ಯಾಯೋಜಿಸಲಾಗಿದೆ. ಈ ಆದೇಶದ ಹಿನ್ನೆಲೆಯಲ್ಲಿ ಕೃಷಿ ಸಚಿವರಿಗೆ ಹಣ ಸಂದಾಯ ಮಾಡಬೇಕು ಎಂಬ ಸಬೂಬು ಹೇಳಿ ಕೃಷಿ ಇಲಾಖೆಯ ಹಿರಿಯ ಅಧಿಕಾರಿಗಳು ತಮ್ಮ ಅಧೀನದಲ್ಲಿರುವ ಅಧಿಕಾರಿ/ನೌಕರರು ವರ್ಗಾವಣೆ ಪಡೆಯಬೇಕಾದರೆ ಅಥವಾ ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಕಚೇರಿಗಳಲ್ಲಿಯೇ ಮುಂದುವರೆಯಬೇಕಾದರೆ ಲಕ್ಷ ರು.ಗಳನ್ನು ಕಡ್ಡಾಯವಾಗಿ ನೀಡಬೇಕು,’ ಎಂದು ಆದೇಶ ನೀಡಿರುತ್ತಾರೆ ಎಂದು ಪತ್ರದಲ್ಲಿ ವಿವರಿಸಿದ್ದರು. ಅಧಿಕಾರಿಗಳೇ ದೂರು ಸಲ್ಲಿಸಿದ್ದರೂ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಈ ಕುರಿತು ‘ದಿ ಫೈಲ್’ ವರದಿ ಪ್ರಕಟಿಸಿದ್ದನ್ನು ಸ್ಮರಿಸಬಹುದು.
ಆರ್ ಅಶೋಕ್ ವಿರುದ್ಧದ ಪ್ರಕರಣ
ಕಂದಾಯ ಸಚಿವ ಆರ್ ಅಶೋಕ್ ಅವರು ಸಬ್ ರಿಜಿಸ್ಟ್ರಾರ್‌ಗಳಿಂದ ಹಣ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪವೂ ಕೇಳಿ ಬಂದಿತ್ತು. ಕಂದಾಯ ಸಚಿವ ಅಶೋಕ್ ಅವರ ಆಪ್ತ ಸಹಾಯಕ ಗಂಗಾಧರ್ ಎಂಬುವರು ಹಣಕ್ಕೆ ಬೇಡಿಕೆ ಇರಿಸಿದ್ದರು ಎಂದು ಶೃಂಗೇರಿ ಸಬ್ ರಿಜಿಸ್ಟ್ರಾರ್ ಚೆಲುವರಾಜು ಅವರು ಎಸಿಬಿಗೆ ದೂರು ದಾಖಲಿಸಿದ್ದರು.
ಈ ಸಂಬಂಧ ಆಪ್ತ ಸಹಾಯಕ ಗಂಗಾಧರ್ ಅವರು ಕಳಿಸಿದ್ದ ವಾಟ್ಸಾಪ್ ಸಂದೇಶವನ್ನು ದೂರಿನಲ್ಲಿ ಪ್ರಸ್ತಾಪಿಸಿದ್ದರು. ಎಸಿಬಿ ಪೊಲೀಸರು ಅಶೋಕ್ ಅವರ ಆಪ್ತ ಸಹಾಯಕ ಗಂಗಾಧರ್ ಅವರ ವಿರುದ್ದ ಎಫ್‌ಐಆರ್ ದಾಖಲಿಸಿದ್ದರು. ಪ್ರಕರಣದ ತನಿಖೆ ನಡೆಯುತ್ತಿದೆ.
ಗೋಪಾಲಯ್ಯ ವಿರುದ್ಧದ ಪ್ರಕರಣ
ಅಬಕಾರಿ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಇನ್ಸ್‌ಪೆಕ್ಟರ್‌ಗಳಿಂದ ಹಣ ವಸೂಲಿ ಮಾಡಲು ಸಚಿವ ಗೋಪಾಲಯ್ಯ ಅವರು ನಿರ್ದೇಶಿಸಿದ್ದಾರೆ ಎಂದು ಅಬಕಾರಿ ಇಲಾಖೆಯ ಅಧಿಕಾರಿಗಳಿಬ್ಬರ ಮಧ್ಯೆ ಸಂಭಾಷಣೆ ನಡೆದಿತ್ತು.
ಅಬಕಾರಿ ಇಲಾಖೆಯ ಅಧಿಕಾರಿಗಳಿಬ್ಬರ ಮಧ್ಯೆ ನಡೆದಿದೆ ಎನ್ನಲಾಗಿರುವ 10 ನಿಮಿಷದ ಸಂಭಾಷಣೆಯ ತುಣುಕಿನಲ್ಲಿ ಕೊಪ್ಪಳ ಜಿಲ್ಲೆಯಿಂದ 5 ಲಕ್ಷ ಸಂಗ್ರಹಿಸಿ ಕೊಡಲು ಸೂಚಿಸಿದ್ದಾರೆ ಎಂಬ ಅಂಶ ಪ್ರಸ್ತಾಪವಾಗಿದೆ. ಅಲ್ಲದೆ ಮಂಜುನಾಥ್, ನಾಗರಾಜಪ್ಪ, ರಮೇಶ್, ಶಿವಪ್ರಸಾದ್ ಸೇರಿದಂತೆ ಹಲವು ಜಿಲ್ಲೆಗಳ ಅಧಿಕಾರಿಗಳ ಹೆಸರು ಪ್ರಸ್ತಾಪವಾಗಿದೆಯಲ್ಲದೆ ಕೊಪ್ಪಳ ಜಿಲ್ಲೆಯ ಇಕ್ಬಾಲ್ ಅನ್ಸಾರಿ ಎಂಬುವರ ಹೆಸರು ಪ್ರಸ್ತಾಪವಾಗಿರುವುದು ಚರ್ಚೆಗೆ ಗ್ರಾಸವಾಗಿತ್ತು.
ಸಚಿವರ ಮನೆಯಲ್ಲೇ ನಡೆದಿತ್ತು ಸಭೆ?
ಅಬಕಾರಿ ಸಚಿವ ಕೆ ಗೋಪಾಲಯ್ಯ ಅವರ ಮನೆಯಲ್ಲಿ ಅಬಕಾರಿ ಜಿಲ್ಲಾ ಅಧಿಕಾರಿಗಳು, ಜಂಟಿ ಆಯುಕ್ತರುಗಳ ಸಭೆ ನಡೆದಿತ್ತು ಎಂಬುದು ಮಹಿಳಾ ಅಧಿಕಾರಿಯೊಬ್ಬರ ಆಡಿಯೋ ತುಣುಕಿನಿಂದ ಗೊತ್ತಾಗಿದೆ. ಸಚಿವರ ಮನೆಯಲ್ಲಿ ಸಭೆ ನಡೆಯುವ ಮುನ್ನ ವಿಕಾಸಸೌಧದಲ್ಲಿ ಅಬಕಾರಿ ಇಲಾಖೆಯ ಜಂಟಿ ಆಯುಕ್ತರು, ಅಬಕಾರಿ ನಿರೀಕ್ಷಕರ ಸಭೆ ನಡೆದಿತ್ತು. ಈ ಸಭೆಯಲ್ಲಿ ಸಚಿವ ಗೋಪಾಲಯ್ಯ ಅವರು ಕೆಲ ಜಿಲ್ಲೆಗಳ ಅಬಕಾರಿ ನಿರೀಕ್ಷಕರ ಕಾರ್ಯವೈಖರಿಯನ್ನು ಮೆಚ್ಚಿ ಪ್ರಶಂಸಿದ್ದರು.
ಅದೇ ದಿನ ಸಂಜೆ ಸಚಿವರ ಮನೆಯಲ್ಲಿ ಆಯ್ದ ಜಂಟಿ ಆಯುಕ್ತರು ಮತ್ತು ಅಬಕಾರಿ ನಿರೀಕ್ಷಕರ ಸಭೆ ನಡೆದಿತ್ತು. ಈ ಸಭೆಯಲ್ಲಿ ಮಂಜುನಾಥ್, ಕುಮಾರ್, ನಾಗರಾಜಪ್ಪ ಎಂಬ ಅಧಿಕಾರಿಗಳು ಹಾಜರಾಗಿದ್ದರು ಎಂಬುದು ಆಡಿಯೋ ತುಣುಕಿನಿಂದ ತಿಳಿದು ಬಂದಿತ್ತು.
ಆಡಿಯೋ ಬಹಿರಂಗಪಡಿಸಿದ್ದರು ಎನ್ನಲಾದ ನಾಲ್ವರು ಅಬಕಾರಿ ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ. ಸದ್ಯ ಈ ಪ್ರಕರಣ ಕುರಿತು ಕರ್ನಾಟಕ ರಾಷ್ಟ್ರಸಮಿತಿಯು ಎಸಿಬಿಯಲ್ಲಿ ದೂರು ದಾಖಲಿಸಿದೆ. ಈ ಸಂಬಂಧ ಎಸಿಬಿಯು ತನಿಖೆಯನ್ನು ಚುರುಕುಗೊಳಿಸಿಲ್ಲ.
ಇದಷ್ಟೇ ಅಲ್ಲ, ಮದ್ಯದಂಗಡಿಗಳ ಪರವಾನಿಗೆ ನವೀಕರಣ ಮತ್ತು ಹೊಸದಾಗಿ ಪರವಾನಿಗೆ ಮಂಜೂರು ಮಾಡುವುದರಲ್ಲಿಯೂ ಲಂಚ ಮತ್ತು ಕಮಿಷನ್‌ಗೆ ಬೇಡಿಕೆ ಇರಿಸಲಾಗುತ್ತಿದೆ ಎಂಬ ದೂರನ್ನು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೂ ಗುತ್ತಿಗೆದಾರರು, ಕೆಲ ಅಧಿಕಾರಿ ನೌಕರರು ಸಲ್ಲಿಸಿದ್ದರು. ಆದರೆ ಈ ದೂರನ್ನಾಧರಿಸಿಯೂ ಯಾವುದೇ ಕ್ರಮ ವಹಿಸಿಲ್ಲ.
ಡಾ ಸಿ ಎನ್ ಅಶ್ವಥ್‌ನಾರಾಯಣ್ ವಿರುದ್ಧ ಪ್ರಕರಣ
ಉಪ ಮುಖ್ಯಮಂತ್ರಿಗಳು ಮತ್ತು ಶಿಕ್ಷಣ ಇಲಾಖೆ ಕಾರ್ಯದರ್ಶಿಗೆ 5 ಕೋಟಿ ಹಣ ಸಂಗ್ರಹ ಮಾಡಲು ತಮ್ಮ ಕೈ ಕೆಳಗಿನ ಅಧಿಕಾರಿಗಳಿಗೆ ಸಾರ್ವಜನಿಕ ಗ್ರಂಥಾಲಯ ಇಲಾಖೆ ನಿರ್ದೇಶಕ ಡಾ ಸತೀಶ್‌ಕುಮಾರ್ ಎಸ್ ಹೊಸಮನಿ ಅವರು ತಾಕೀತು ಮಾಡಿದ್ದಾರೆ ಎಂದು ಶಿವಾನಂದ ದೊಡ್ಡಮನಿ ಎಂಬುವರು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ದೂರನ್ನು ಸಲ್ಲಿಸಿದ್ದರು. ಇದನ್ನಾಧರಿಸಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಶಿಕ್ಷಣ ಇಲಾಖೆಯ ಅಭಿಪ್ರಾಯವನ್ನು ಕೋರಿತ್ತು.
‘ದೂರಿನ ಪತ್ರವು ಸರ್ಕಾರದ ಮುಖ್ಯ ಕಾರ್ಯದರ್ಶಿ ಮೂಲಕ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವೆಗಳು-3) ಸ್ವೀಕೃತವಾಗಿದೆ. ಈ ದೂರಿನ ಕುರಿತು ಇಲಾಖೆಯು ಶಿಕ್ಷಣ ಇಲಾಖೆಯ ಅಭಿಪ್ರಾಯವನ್ನು ಕೋರಿದೆ. ದೂರಿನ ಪತ್ರದಲ್ಲಿನ ಅಂಶಗಳ ಬಗ್ಗೆ ಸತ್ಯಾಸತ್ಯತೆ ತಿಳಿಯದೇ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಗೆ ಅಭಿಪ್ರಾಯ ನೀಡುವುದು ಕಷ್ಟಸಾಧ್ಯವಾಗುತ್ತದೆ,’ ಎಂದು ಶಿಕ್ಷಣ ಇಲಾಖೆ ಅಭಿಪ್ರಾಯಿಸಿರುವುದು ಟಿಪ್ಪಣಿ ಹಾಳೆಯಿಂದ ತಿಳಿದು ಬಂದಿದೆ.
ನಗರಾಭಿವೃದ್ಧಿ ಇಲಾಖೆಯು 50 ಕೋಟಿ ರು.ಅನುದಾನ ಬಿಡುಗಡೆ ಮಾಡಿದ್ದು, ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಮತ್ತು ಉಪ ಮುಖ್ಯಮಂತ್ರಿಗಳಿಗೆ 5 ಕೋಟಿ ಹಣ ಸಂಗ್ರಹ ಮಾಡಬೇಕು ಎಂದು ಕೈ ಕೆಳಗಿನ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ ಎಂದು ಶಿವಾನಂದ ದೊಡ್ಡಮನಿ ಎಂಬುವರು ದೂರಿನಲ್ಲಿ ಆರೋಪಿಸಿದ್ದಾರೆ. ಆದರೆ ಉಪ ಮುಖ್ಯಮಂತ್ರಿಗಳ ಹೆಸರುಗಳನ್ನು ಟಿಪ್ಪಣಿ ಹಾಳೆಯಲ್ಲಿ ನಮೂದಿಸಿರಲಿಲ್ಲ.
ಶಶಿಕಲಾ ಜೊಲ್ಲೆ ವಿರುದ್ಧ ಪ್ರಕರಣ
ಅಂಗನವಾಡಿ ಕೇಂದ್ರಗಳಿಗೆ ಮೊಟ್ಟೆ ಖರೀದಿಗೆ ಸಂಬಂಧಿಸಿದಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವರಾಗಿದ್ದ ಶಶಿಕಲಾ ಜೊಲ್ಲೆ ಅವರ ವಿರುದ್ಧವೂ ಕಮಿಷನ್‌ಗೆ ಬೇಡಿಕೆ ಇರಿಸಿದ್ದರು ಎಂಬ ದೂರು ಕೇಳಿ ಬಂದಿತ್ತು. ಈ ಸಂಬಂಧ ಕುಟುಕು ಕಾರ್ಯಾಚರಣೆ ನಡೆದಿತ್ತು. ಆದರೂ ಅವರನ್ನು ಸಂಪುಟದಿಂದ ಕೈ ಬಿಟ್ಟಿರಲಿಲ್ಲ. ಬದಲಿಗೆ ಸಂಪುಟ ಪುನರ್ ರಚನೆ ವೇಳೆ ಜೊಲ್ಲೆ ಅವರಿಗೆ ಖಾತೆ ಬದಲಿಸಿ ಸಚಿವರನ್ನಾಗಿ ಮುಂದುವರೆಸಿದೆ.