ಬೆಂಗಳೂರು; ಕಾಮಗಾರಿ ಬಾಕಿ ಮೊತ್ತ ಬಿಡುಗಡೆಗೆ ಶೇ.40ರಷ್ಟು ಕಮಿಷನ್‌ಗೆ ಬೇಡಿಕೆ ಇರಿಸಲಾಗುತ್ತಿದೆ ಎಂದು ಸಚಿವ ಕೆ ಎಸ್ ಈಶ್ವರಪ್ಪ ಅವರ ವಿರುದ್ಧ ಗುರುತರವಾದ ಆರೋಪ ಕೇಳಿ ಬಂದ ಬೆನ್ನಲ್ಲೇ ಇದೀಗ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಿಭಾಯಿಸುತ್ತಿರುವ ನಗರಾಭಿವೃದ್ಧಿ ಇಲಾಖೆಯಲ್ಲಿ ಅಧಿಕಾರಿಗಳ ಮುಂಬಡ್ತಿಗೂ ಕೋಟ್ಯಂತರ ರುಪಾಯಿ ಲಂಚಕ್ಕೆ ಬೇಡಿಕೆ ಇರಿಸಲಾಗಿದೆ ಎಂಬ ಬಲವಾದ ಆರೋಪ ಕೇಳಿ ಬಂದಿದೆ.
ಈ ಕುರಿತು ಕರ್ನಾಟಕ ರಾಷ್ಟ್ರಸಮಿತಿಯು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಲಿಖಿತ ದೂರು ಸಲ್ಲಿಸಿದೆ. ಇದರ ಪ್ರತಿ ‘ದಿ ಫೈಲ್’ಗೆ ಲಭ್ಯವಾಗಿದೆ.
ರಾಜ್ಯ ಸರ್ಕಾರದ ಜಲ ಸಂಪನ್ಮೂಲ, ಲೋಕೋಪಯೋಗಿ (ಪಿಡ್ಬ್ಲೂಡಿ) ಮತ್ತು ನಗರಾಭಿವೃದ್ಧಿ ಇಲಾಖೆಗಳ ಕಾಮಗಾರಿಗಳಲ್ಲಿ 40% ಕಮೀಷನ್ ಪಡೆಯಲಾಗುತ್ತಿದೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷರು ಮಾಡಿರುವ ಆರೋಪಕ್ಕೆ ಸಂಬಂಧಿಸಿದಂತೆ ವಿಚಾರಣೆ ಮಾಡಿ ವರದಿ ನೀಡಲು ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್‌ಸಿಂಗ್ ಅವರಿಗೆ ಸೂಚಿಸಲಾಗಿತ್ತು. ಆದರೀಗ ಅವರೇ ಮುಖ್ಯಸ್ಥರಾಗಿರುವ ಇಲಾಖೆಯಲ್ಲಿನ ಉಪ ಕಾರ್ಯದರ್ಶಿ ಶ್ರೇಣಿಯ ಅಧಿಕಾರಿಯೊಬ್ಬರು ಇಂಜನಿಯರ್‌ಗಳ ಮುಂಬಡ್ತಿಗೆ ಲಂಚಕ್ಕೆ ಬೇಡಿಕೆ ಇರಿಸಿರುವುದು ಮುನ್ನೆಲೆಗೆ ಬಂದಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ 65 ಇಂಜಿನಿಯರುಗಳಿಗೆ ಮುಂಬಡ್ತಿ ನೀಡಲು ನಗರಾಭಿವೃದ್ಧಿ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ಲಂಚಕ್ಕೆ ಬೇಡಿಕೆ ಇರಿಸಿದ್ದಾರೆ. ಹಣ ನೀಡಿದ ನಂತರವಷ್ಟೇ ಈ ಸಂಬಂಧದ ಕಡತಕ್ಕೆ ಅನುಮೋದನೆ ನೀಡಲಾಗುವುದು ಎಂದು ನಗರಾಭಿವೃದ್ಧಿ ಇಲಾಖೆಯ ಉನ್ನತ ಅಧಿಕಾರಿಯೊಬ್ಬರು ಸಂಬಂಧಿಸಿದ ಇಂಜನಿಯರ್‌ಗಳಿಗೆ ಸಂದೇಶ ರವಾನಿಸಿದ್ದಾರೆ ಎಂದು ಹೇಳಲಾಗಿದೆ.
ಸದ್ಯ ಈ ಕಡತವು ನಗರಾಭಿವೃದ್ಧಿ ಇಲಾಖೆಯಲ್ಲಿ ಅನುಮೋದನೆಗೆ ಬಾಕಿ ಇದೆ. ಇದರಲ್ಲಿ 40 ಸಹಾಯಕ ಇಂಜಿನಿಯರ್ ಹುದ್ದೆ ಸಹಾಯಕ ಕಾರ್ಯನಿರ್ವಾಹಕ ಇಂಜನಿಯರ್ (ಎಇಇ)ಗೆ, 7 ಸಹಾಯಕ ಕಾರ್ಯನಿರ್ವಾಹಕ (ಎಇಇ) ಹುದ್ದೆಯಿಂದ ಕಾರ್ಯನಿರ್ವಾಹಕ ಇಂಜನಿಯರ್ (ಇಇ) ಹುದ್ದೆಗೆ ಮತ್ತು 5 ಕಾರ್ಯನಿರ್ವಾಹಕ ಇಂಜಿನಿಯರ್ ಹುದ್ದೆಯಿಂದ ಸೂಪರಿಂಡೆಂಟ್ ಇಂಜನಿಯರ್ (ಎಸ್‌ಇ) ಹುದ್ದೆಗೆ ಮುಂಬಡ್ತಿ ನೀಡಬೇಕಿದೆ.
ಮುಂಬಡ್ತಿ ನೀಡುವ ಪ್ರಕ್ರಿಯೆಗೆ ಇಲಾಖೆಯಲ್ಲಿ ಚಾಲನೆ ನೀಡಿದ್ದ ಉನ್ನತ ಅಧಿಕಾರಿಯೊಬ್ಬರು ಅನುಮೋದನೆಗೆ ಬಾಕಿ ಇರಿಸಿಕೊಂಡಿದ್ದಾರೆ ಎಂಬುದು ಗೊತ್ತಾಗಿದೆ. ‘ ಈ ಕಡತವನ್ನು ಅನುಮೋದಿಸಬೇಕಾದರೆ ಲಂಚ ನೀಡಬೇಕೆಂದು, ನಿಮ್ಮ ಹೆಸರೇಳಿ ನಾಲ್ಕುವರೆ ಕೋಟಿ ಲಂಚಕ್ಕೆ ಬೇಡಿಕೆ ಇಟ್ಟು ಹಣ ಪಡೆದಿರುತ್ತಾರೆ (AE ಯಿಂದ AEE ಗೆ ಎರಡು ಕೋಟಿ, AEE ಯಿಂದ EE ಗೆ 1 ಕೋಟಿ ಮತ್ತು EE ಯಿಂದ SE ಗೆ 1.5 ಕೋಟಿ). ಈ ಅಪಾರ ಪ್ರಮಾಣದ ಲಂಚದ ಹಣ ಪಾವತಿಸಲು ಭ್ರಷ್ಟ ಬಿಬಿಎಂಪಿ ಎಂಜಿನಿಯರುಗಳು ಈಗಾಗಲೇ ಗುತ್ತಿಗೆದಾರರಿಂದ ಹಣ ವಸೂಲಿ ಮಾಡಿರುತ್ತಾರೆ,’ ಎಂದು ಕರ್ನಾಟಕ ರಾಷ್ಟ್ರಸಮಿತಿಯು ದೂರಿನಲ್ಲಿ ಪ್ರಸ್ತಾಪಿಸಿದೆ.
‘ಕೆಲವು ಅಲ್ಪ ಸ್ವಲ್ಪ ಪ್ರಾಮಾಣಿಕತೆಯನ್ನು ಉಳಿಸಿಕೊಂಡಿರುವವರು ಕೂಡ ವಿಧಿಯಿಲ್ಲದೆ, ತಮ್ಮ ದುಡಿಮೆಯ ಹಣ ಮತ್ತು ಸಾಲ ಮಾಡಿ ಹಣ ನೀಡಿರುತ್ತಾರೆ. ಇಲ್ಲಿ ಮಹತ್ವದ ವಿಚಾರವೆಂದರೆ, ಮುಖ್ಯಮಂತ್ರಿಯವರ ಹೆಸರು ಹೇಳಿ ಹಣ ವಸೂಲಿ ಮಾಡುತ್ತಿರುವುದು. ಪದೇ ಪದೇ ಮುಖ್ಯಮಂತ್ರಿಯವರ ಮತ್ತು ಅವರ ಕಛೇರಿಯ ಹೆಸರು ಹೇಳಿ ಹಣ ವಸೂಲಿ ಮಾಡುತ್ತಿರುವುದು ನಡೆಯುತ್ತಲೇ ಇದೆ, ಆದರೂ ಈ ಬಗ್ಗೆ ಯಾವುದೇ ಕ್ರಮ ಅಗದಿರುವುದರಿಂದ ಇಲ್ಲಿ ಮುಖ್ಯಮಂತ್ರಿಯವರ ಕಛೇರಿಯ ಮೇಲೆಯೆ ಅನುಮಾನ ಮೂಡುವಂತೆ ಮಾಡಿದೆ,’ ಎಂದು ಕರ್ನಾಟಕ ರಾಷ್ಟ್ರಸಮಿತಿಯು ದೂರಿನಲ್ಲಿ ತಿಳಿಸಿದೆ.
ರಾಜ್ಯ ಸರ್ಕಾರದ ಜಲ ಸಂಪನ್ಮೂಲ, ಲೋಕೋಪಯೋಗಿ (ಪಿಡ್ಬ್ಲೂಡಿ) ಮತ್ತು ನಗರಾಭಿವೃದ್ಧಿ ಇಲಾಖೆಗಳ ಕಾಮಗಾರಿಗಳಲ್ಲಿ 40% ಕಮೀಷನ್ ಪಡೆಯಲಾಗುತ್ತಿದೆ ಎಂದು ಗುತ್ತಿಗೆದಾರರ ಸಂಘದ ಅಧ್ಯಕ್ಷರು ಮಾಡಿರುವ ಆರೋಪವು ನೇರವಾಗಿ ಆರೋಪ ಮಾಡಿದ್ದಾರೆ. ಈ ಬಗ್ಗೆ ರಾಜ್ಯ ಸರ್ಕಾರವು ತನಿಖೆಗೆ ಆದೇಶ ಮಾಡಿ, ಈ ತನಿಖೆಯನ್ನು ನಗರಾಭಿವೃದ್ಧಿ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ವಹಿಸಿತ್ತು.ಆದರೆ ಅವರು ಇದುವರೆಗೂ ಯಾವುದೇ ವರದಿಯನ್ನು ನೀಡಿಲ್ಲ ಎಂದು ಗೊತ್ತಾಗಿದೆ.
ಇದರ ಮಧ್ಯೆಯೇ ‘ಇದೇ ಅಪರ ಮುಖ್ಯ ಕಾರ್ಯದರ್ಶಿಯವರ ಅಧೀನದಲ್ಲಿರುವ ಉಪ ಕಾರ್ಯದರ್ಶಿಯೊಬ್ಬರು ಈ ಲಂಚದ ಹಣವನ್ನು ಮುಖ್ಯಮಂತ್ರಿಯವರ ಹೆಸರು ಹೇಳಿ ಪಡೆದುಕೊಂಡಿದ್ದಾರೆ. ಪ್ರಸ್ತುತ ಈಗ ಈ ಉಪ ಕಾರ್ಯದರ್ಶಿಯವರನ್ನು ವರ್ಗಾವಣೆ ಮಾಡಲಾಗಿದ್ದು, ಯಾವ ಕಾರಣಕ್ಕೆ ಮಾಡಲಾಗಿದೆ ಎಂದು ತಿಳಿದುಬಂದಿಲ್ಲ. ಈ ವಿಚಾರದ ಬಗ್ಗೆ ತನಿಖೆಯಾಗಬೇಕು ಮತ್ತು ಲಂಚ ಪಡೆದಿರುವವರು ಮತ್ತು ಲಂಚ ನೀಡಿರುವವರಿಬ್ಬರ ಮೇಲೂ ಕ್ರಮವಾಗಬೇಕು,’ ಎಂದು ಕರ್ನಾಟಕ ರಾಷ್ಟ್ರಸಮಿತಿಯು ದೂರಿನಲ್ಲಿ ಒತ್ತಾಯಿಸಿದೆ.
ಅಲ್ಲದೆ ಇಂತಹ ವಿಚಾರಗಳ ಬಗ್ಗೆ ಕೆ. ಆರ್. ಎಸ್. ಪಕ್ಷವು ಹಲವಾರು ಪತ್ರಗಳನ್ನು ಮತ್ತು ಸಕ್ಷಮ ಪ್ರಾಧಿಕಾರಗಳಿಗೆ ದೂರುಗಳನ್ನು ನೀಡಿದೆ. ಬಹುತೇಕ ಪ್ರಕರಣಗಳಲ್ಲಿ ಈ ಯಾವುದರ ಬಗ್ಗೆಯೂ ಕ್ರಮ ಕೈಗೊಳ್ಳದೇ ಇರುವುದರಿಂದ ಇಂತಹ ಅಕ್ರಮಗಳು ಮತ್ತು ಭ್ರಷ್ಟಾಚಾರ ಮತ್ತಷ್ಟು ಹೆಚ್ಚುತ್ತಿವೆ ಎಂದು ದೂರಿನಲ್ಲಿ ಹೇಳಿದೆ.
‘ಇಲ್ಲಿ ನ್ಯಾಯಯುತವಾಗಿ ಸಿಗಬೇಕಾದ ಮುಂಬಡ್ತಿಗೆ ಸರ್ಕಾರಿ ಅಧಿಕಾರಿಗಳೇ ಲಂಚ ನೀಡಬೇಕಾದ ಪರಿಸ್ಥಿತಿ ರಾಜ್ಯದಲ್ಲಿರುವುದು ಶೋಚನೀಯ. ಇದರಿಂದ ಕೆಳ ಹಂತದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿ ಹರಡಲು ಕಾರಣವಾಗಿದೆ. ಇದರ ಫಲಶೃತಿಯೆ ಬೆಂಗಳೂರಿನ ರಸ್ತೆಗಳು ಗುಂಡಿ ಬಿದ್ದಿರುವುದು ಮತ್ತು ಆಡಳಿತವು ಅಧೋಗತಿಗೆ ಹೋಗಿ ಪದೇ ಪದೇ ಮಾನ್ಯ ಉಚ್ಚ ನ್ಯಾಯಾಲಯದಿಂದ ಛೀಮಾರಿ ಹಾಕಿಸಿಕೊಳ್ಳುತ್ತಿರುವುದು. ಇಲ್ಲಿ ಲಂಚ ಪಡೆದಿರುವುದು ಮತ್ತು ಲಂಚ ನೀಡಿರುವುದು ಅಕ್ಷಮ್ಯ ಅಪರಾಧವಾಗಿರುತ್ತದೆ. ಈ ಬಗ್ಗೆ ಸಮಗ್ರ ತನಿಖೆಯಾಗಬೇಕು,’ ಎನ್ನುತ್ತಾರೆ ಕರ್ನಾಟಕ ರಾಷ್ಟ್ರಸಮಿತಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ ಎನ್ ದೀಪಕ್