5 ವರ್ಷದಲ್ಲಿ 763 ಮಾನವ ಕಳ್ಳಸಾಗಾಣಿಕೆ ಪ್ರಕರಣ ದಾಖಲು;ಬಾಲಮಂದಿರಗಳಿಂದ 485 ಮಕ್ಕಳು ನಾಪತ್ತೆ

Photo Credit; dnaindia

ಬೆಂಗಳೂರು; ರಾಜ್ಯದಲ್ಲಿ ಕಳೆದ 5 ವರ್ಷಗಳಲ್ಲಿ 763 ಮಾನವ ಕಳ್ಳ ಸಾಗಾಣಿಕೆ ಪ್ರಕರಣಗಳು ದಾಖಲಾಗಿವೆ. ಅದೇ ರೀತಿ ರಾಜ್ಯದ ಬಾಲಮಂದಿರಗಳಿಂದ ಒಟ್ಟು 485 ಮಕ್ಕಳು ನಾಪತ್ತೆಯಾಗಿದ್ದಾರೆ. ಕಳ್ಳ ಸಾಗಾಣಿಕೆ ಪ್ರಕರಣಗಳನ್ನು ತಡೆಗಟ್ಟಲು ಹಲವು ವರ್ಷಗಳಿಂದಲೂ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸ್‌ ಅಧಿಕಾರಿಗಳು ಹೇಳುತ್ತಿದ್ದಾರಾದರೂ ವರ್ಷದಿಂದ ವರ್ಷಕ್ಕೆ ಪ್ರಕರಣಗಳ ಸಂಖ್ಯೆ ಹೆಚ್ಚಳವಾಗುತ್ತಲೇ ಇದೆ.

 

ಅದೇ ರೀತಿ ಬಾಲ ಮಂದಿರಗಳಿಂದ ಮಕ್ಕಳು ತಪ್ಪಿಸಿಕೊಳ್ಳದಂತೆ ಸಂಸ್ಥೆಗಳಲ್ಲಿ ಸಿಸಿಟಿವಿ ಮೂಲಕ ತೀವ್ರ ನಿಗಾ ಇರಿಸಿದ್ದರೂ 485 ಮಕ್ಕಳು ನಾಪತ್ತೆಯಾಗಿದ್ದಾರೆ. ನಾಪತ್ತೆಯಾಗಿರುವ ಮಕ್ಕಳನ್ನು ಪತ್ತೆ ಹಚ್ಚುವಲ್ಲಿಯೂ ಪೊಲೀಸ್‌ ಇಲಾಖೆಯು ಹಿಂದೆ ಬಿದ್ದಿದೆ.

 

ಮಾನವ ಕಳ್ಳ ಸಾಗಾಣಿಕೆ ತಡೆಗಟ್ಟಬೇಕಿದ್ದ ಪೊಲೀಸ್‌ ಅಧಿಕಾರಿಗಳು ಆರೋಪಿಗಳೊಂದಿಗೇ ಶಾಮೀಲಾಗುತ್ತಿದ್ದಾರೆ ಎಂದು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಆಯೋಗವು ಇತ್ತೀಚೆಗಷ್ಟೇ ವರದಿ ನೀಡಿತ್ತು. ಇದರ ಬೆನ್ನಲ್ಲೇ ಮಾನವ ಕಳ್ಳ ಸಾಗಾಣಿಕೆ ಪ್ರಕರಣಗಳಿಗೆ ಕಡಿವಾಣ ಬಿದ್ದಿಲ್ಲ ಎಂಬ ಸಂಗತಿಯು ಮುನ್ನೆಲೆಗೆ ಬಂದಿದೆ.

 

ಮಾನವ ಕಳ್ಳ ಸಾಗಾಣಿಕೆ ಕುರಿತು ವಿಧಾನಪರಿಷತ್‌ ಸದಸ್ಯ ಕೆ ಟಿ ಶ್ರೀಕಂಠೇಗೌಡ ಅವರು ಕೇಳಿದ್ದ ಪ್ರಶ್ನೆಗೆ ಉತ್ತರಿಸಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು 5 ವರ್ಷಗಳ ಅಂಕಿ ಸಂಖ್ಯೆಯನ್ನು ಒದಗಿಸಿದ್ದಾರೆ.

 

2017ರಲ್ಲಿ 178, 2018ರಲ್ಲಿ 146, 2019ರಲ್ಲಿ 155, 2020ರಲ್ಲಿ 119, 2021ರಲ್ಲಿ 134 ಮತ್ತು 2022ರ ಫೆಬ್ರುವರಿವರೆಗೆ 31 ಪ್ರಕರಣಗಳು ದಾಖಲಾಗಿವೆ. ಈ ಐದು ವರ್ಷಗಳಲ್ಲಿ ಒಟ್ಟು 972 ಆರೋಪಿಗಳನ್ನು ಬಂಧಿಸಲಾಗಿದೆ. 2017ರಲ್ಲಿ ಒಟ್ಟು 10 ಆರೋಪಿಗಳಿಗೆ ಶಿಕ್ಷೆಯಾಗಿರುವುದು ಹೊರತುಪಡಿಸಿದರೆ 2018ರಿಂದ 2022ರ ಫೆಬ್ರುವರಿವರೆಗೆ ಒಬ್ಬೇ ಒಬ್ಬ ಅರೋಪಿಗೆ ಶಿಕ್ಷೆಯಾಗಿಲ್ಲ ಎಂಬುದು ಆರಗ ಜ್ಞಾನೇಂದ್ರ ಅವರು ನೀಡಿರುವ ಉತ್ತರದಿಂದ ತಿಳಿದು ಬಂದಿದೆ.

 

ಮಾನವ ಕಳ್ಳಸಾಗಣೆ ತಡೆ ಮತ್ತು ನಿಷೇಧ ಕಾಯ್ದೆಯಡಿ ಶಿಕ್ಷೆ ನೀಡಲು ಕಾನೂನಿನಲ್ಲಿ ಅವಕಾಶಗಳಿದ್ದರೂ ಒಟ್ಟು 763 ಪ್ರಕರಣಗಳಲ್ಲಿ ಕೇವಲ 10 ಮಂದಿಗಷ್ಟೇ ಶಿಕ್ಷೆ ವಿಧಿಸಿರುವುದು ಪೊಲೀಸರ ಕಾರ್ಯವೈಖರಿಗೆ ಕೈಗನ್ನಡಿ ಹಿಡಿದಂತಾಗಿದೆ.

 

ಗೃಹ ಸಚಿವ ಆರಗ ಜ್ಞಾನೇಂದ್ರ ನೀಡಿರುವ ಉತ್ತರದ ಪ್ರತಿ

 

ಬಲವಂತದ ಮದುವೆ, ಕೆಲಸ ಮತ್ತು ಲೈಂಗಿಕ ದಾಸ್ಯದ ವಿಚಾರಕ್ಕೆ ಮಹಿಳೆಯರು ಮತ್ತು ಮಕ್ಕಳನ್ನು ಸಾಗಿಸಲಾಗುತ್ತಿದೆ. ಅದರಲ್ಲಿ 18 ವರ್ಷದ ಕೆಳಗಿನ ಹೆಣ್ಣು ಮಕ್ಕಳೇ ಹೆಚ್ಚು. ವಿಮಾನ ನಿಲ್ದಾಣದ ಮೂಲಕವೂ ಈ ಕಾರ್ಯ ಸಕ್ರಿಯವಾಗಿದೆ. ಇಲ್ಲೆಲ್ಲ ಬಿಗಿಪಹರೆ ಮತ್ತು ತಪಾಸಣೆ ಇದ್ದರೂ ಮಾನವ ಕಳ್ಳಸಾಗಾಣಿಕೆ ಪ್ರಕರಣಗಳು ಪೊಲೀಸರ ಅರಿವಿಗೇ ಬರುವುದಿಲ್ಲ. ಇನ್ನು ಗ್ರಾಮಾಂತರ ಪ್ರದೇಶದ ಕೆಲ ಶಾಲೆಗಳಿಂದ ಮಕ್ಕಳನ್ನು ಸಾಗಿಸಲಾಗುತ್ತಿದೆ ಎಂಬ ಬಲವಾದ ಆರೋಪಗಳು ಕೇಳಿ ಬಂದಿವೆ. ಇಂತಹ ಪ್ರಕರಣಗಳಲ್ಲೂ ಪೊಲೀಸ್ ಇಲಾಖೆ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿಲ್ಲ ಎಂದು ತಿಳಿದು ಬಂದಿದೆ.

 

2020ರಲ್ಲಿ 65 ಪ್ರಕರಣ ದಾಖಲಾಗಿದ್ದವು. ಈ ಪೈಕಿ 100 ಪುರುಷರು, 196 ಮಹಿಳೆಯರು, 21 ಅಪ್ರಾಪ್ತ ಬಾಲಕರು, 34 ಅಪ್ರಾಪ್ತ ಬಾಲಕಿಯರು ಸೇರಿ 345 ಮಂದಿಯನ್ನು ರಕ್ಷಿಸಲಾಗಿತ್ತು. ಇಂತಹ ಪ್ರಕರಣಗಳಲ್ಲಿ 147 ಜನರನ್ನು (111 ಪುರುಷರು, 36 ಮಹಿಳೆಯರು) ಬಂಧಿಸಲಾಗಿತ್ತು.

 

ಮಾನವ ಸಾಗಾಟ ಮಾರಾಟ ಎಲ್ಲೆಡೆ ಸರಪಳಿಯಾಗಿದೆ. ಬಡತನ, ಅಮಾಯಕ, ಅಸಯಾಕತೆ, ಮಕ್ಕಳನ್ನು ಈ ಜಾಲಕ್ಕೆ ಬಳಸುತ್ತಾರೆ. ಶೇ.95 ಮಂದಿ ವೇಶ್ಯಾವಾಟಿಕೆಗೆ ಬಳಕೆ, ಭಿಕ್ಷಾಟನೆ ಹೀಗೆ ಬೇರೆ ಬೇರೆ ಕಾರಣಕ್ಕೆ ಈ ಸಾಗಾಟ ನಡೆಯುತ್ತದೆ. ಅದರ ಕಡಿವಾಣಕ್ಕೆ ದೇಶದಲ್ಲಿ ಕಾನೂನು ಇದ್ದರೂ ಪ್ರಯೋಜನ ಇಲ್ಲವಾಗಿದೆ ಎನ್ನುತ್ತಾರೆ ಸಾಮಾಜಿಕ ಕಾರ್ಯಕರ್ತರು.

the fil favicon

SUPPORT THE FILE

Latest News

Related Posts