ಬೆಂಗಳೂರು; ವಂಚನೆ ಪ್ರಕರಣದಲ್ಲಿ ಕ್ರಷರ್ ಉದ್ಯಮಿಯೊಬ್ಬರಿಗೆ ಸಹಾಯ ಮಾಡುವುದಾಗಿ ಹೇಳಿ ನಂಬಿಸಿ 5 ಲಕ್ಷ ರು. ಹಣ ಪಡೆದಿರುವ ಪ್ರಕರಣದಲ್ಲಿ ಮೂವರು ಕೆಳಹಂತದ ಪೊಲೀಸ್ ಅಧಿಕಾರಿಗಳನ್ನು ಅಮಾನತುಗೊಳಿಸಿರುವ ಸರ್ಕಾರವು ಆರೋಪಿತರ ವಿರುದ್ಧ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ ಅಡಿಯಲ್ಲಿ ಇದುವರೆಗೂ ಪ್ರಕರಣ ದಾಖಲಿಸದಿರುವುದು ಹಲವು ಅನುಮಾನಗಳಿಗೆ ದಾರಿಮಾಡಿಕೊಟ್ಟಿದೆ.
ಇದೇ ಪ್ರಕರಣದಲ್ಲಿ ಐಪಿಎಸ್ ಅಧಿಕಾರಿಯೊಬ್ಬರು ಭಾಗಿಯಾಗಿದ್ದಾರೆ ಎಂಬ ಆರೋಪದ ಕುರಿತು ತನಿಖೆ ನಡೆಸಲಾಗುವುದು ಎಂದು ಹೇಳಿಕೆ ನೀಡಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಮತ್ತು ಇಡೀ ಪ್ರಕರಣದ ಕುರಿತು ಐಜಿಪಿ ಚಂದ್ರಶೇಖರ್ ಅವರು ವರದಿ ನೀಡಿದ್ದರೂ ಪೊಲೀಸ್ ಮಹಾನಿರ್ದೇಶಕರು ಸಹ ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆಯಡಿಯಲ್ಲಿ ಮೊಕದ್ದಮೆ ದಾಖಲಿಸಲು ಸೂಚನೆ ನೀಡಿಲ್ಲ ಎಂದು ಗೊತ್ತಾಗಿದೆ.
ಅದೇ ರೀತಿ ಪ್ರಕರಣ ಕುರಿತು ಭ್ರಷ್ಟಾಚಾರ ನಿಗ್ರಹ ದಳದ ಎಡಿಜಿಪಿ ಸೀಮಂತ್‌ಕುಮಾರ್ ಸಿಂಗ್ ಅವರಿಗೂ ಮಾಹಿತಿ ಇದ್ದರೂ ಭ್ರಷ್ಟಾಚಾರ ನಿಗ್ರಹ ಕಾಯ್ದೆಯಡಿಯಲ್ಲಿ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಳ್ಳುವಲ್ಲಿ ನಿರ್ಲಕ್ಷ್ಯ ವಹಿಸಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಭ್ರಷ್ಟಾಚಾರ ನಿಗ್ರಹ ಕಾಯ್ದೆ 2018 (ತಿದ್ದುಪಡಿ ವಿಧೇಯಕ)ರ ಕಲಂ 7ರ ಪ್ರಕಾರ ಲಂಚದ ಪ್ರಕರಣವನ್ನು ದಾಖಲಿಸಬೇಕು. ಆರೋಪಿತ ಪೊಲೀಸ್ ಅಧಿಕಾರಿಗಳ ವಿರುದ್ಧ ಅಪರಾಧವು ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ಐಜಿಪಿ ಚಂದ್ರಶೇಖರ್ ಅವರು ನೀಡಿರುವ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಹೀಗಾಗಿ ಆರೋಪಿತ ಸಿಪಿಐ ಮತ್ತು ಇಬ್ಬರು ಎಎಸ್‌ಐಗಳನ್ನು ವಿಚಾರಣೆ ನಡೆಸಲು ಸಕ್ಷಮ ಪ್ರಾಧಿಕಾರದ ಅಭಿಯೋಜನಾ ಮಂಜೂರಾತಿಯೂ ದೊರೆತಂತಾಗಿದೆ.
ಈ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲು ಯಾವುದೇ ಕಾನೂನಿನ ತೊಡಕಿಲ್ಲ. ಆದರೂ ಇವರ ವಿರುದ್ಧ ಇದುವರೆಗೂ ಎಫ್‌ಐಆರ್ ದಾಖಲಿಸದೆಯೇ ಕೇವಲ ಕರ್ತವ್ಯಲೋಪದಡಿಯಲ್ಲಿ ಅಮಾನತುಗೊಳಿಸಿರುವ ಸರ್ಕಾರವು ಭ್ರಷ್ಟಾಚಾರವನ್ನು ಬೆಂಬಲಿಸಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಈ ಕುರಿತು ‘ದಿ ಫೈಲ್’ಗೆ ಪ್ರತಿಕ್ರಿಯೆ ನೀಡಿರುವ ಕರ್ನಾಟಕ ರಾಷ್ಟ್ರಸಮಿತಿಯ ರಾಜ್ಯಾಧ್ಯಕ್ಷ ರವಿ ಕೃಷ್ಣಾರೆಡ್ಡಿ ಅವರು ‘ರಾಜ್ಯ ಪೊಲೀಸ್ ಇಲಾಖೆಯು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮಲ್ಲಿರುವ ಎಲ್ಲಾ ಮಾಹಿತಿಯನ್ನು ಎಸಿಬಿಗೆ ವರ್ಗಾಯಿಸಬೇಕು ಮತ್ತು ಭ್ರಷ್ಟಾಚಾರ ಪ್ರತಿಬಂಧಕ ಕಾಯ್ದೆ ಅಡಿಯಲ್ಲಿ ದೂರು ದಾಖಲಿಸಬೇಕು. ಅಮಾನತು ಶಿಕ್ಷೆಯೂ ಅಲ್ಲ, ನ್ಯಾಯವೂ ಅಲ್ಲ. ಸೂಕ್ತ ಸಂಸ್ಥೆಯಿಂದ ತನಿಖೆಯಾಗಿ, ನ್ಯಾಯಾಲಯದಲ್ಲಿ ದೋಷಾರೋಪಣೆ ಪಟ್ಟಿ ದಾಖಲಿಸಬೇಕು. ನ್ಯಾಯಾಲಯದಲ್ಲಿ ವಿಚಾರಣೆ ನಡೆಸಿ ಶಿಕ್ಷೆಯಾದಲ್ಲಿ ಮಾತ್ರ ಅದು ಸರಿಯಾದ ಕ್ರಮ,’ ಎಂದು ಪ್ರತಿಪಾದಿಸಿದ್ದಾರೆ.
ಅಮಾನತು ಆದೇಶದಲ್ಲೇನಿದೆ?
ವಿಚಾರಣೆ ವರದಿಯಲ್ಲಿನ ಸಾಕ್ಷಿದಾರರ ಹೇಳಿಕೆಗಳು, ದಾಖಲಾತಿಗಳು ಹಾಗೂ ಅರ್ಜಿದಾರರು ಸಲ್ಲಿಸಿದ್ದ ಕಾಲ್ ರೆಕಾರ್ಡ್‌ಗಳ ಪರಿಶೀಲನೆಯಿಂದ ಟಿ ಶ್ರೀನಿವಾಸ್ ಅವರು ಮತ್ತು ಅರ್ಜಿದಾರರು ತಮ್ಮ ಅರ್ಜಿಯಲ್ಲಿ ಆರೋಪಿಸಿ ತಿಳಿಸಿರುವ ಅವಧಿಯಲ್ಲಿ ಪರಸ್ಪರ ನಿಕಟ ಸಂಪರ್ಕದಲ್ಲಿರುವುದು, ಬೆಂಗಳೂರು ಪೊಲೀಸ್ ಅಧೀಕ್ಷಕರಿಗೆ ನೀಡಿದ ದೂರು ಅರ್ಜಿಯನ್ನು ಸೂಕ್ತ ಕ್ರಮಕ್ಕಾಗಿ ಡಿಸಿಬಿಐ ಅವರಿಗೆ ರವಾನಿಸಲಾಗಿತ್ತು. ಆದರೆ ಪೊಲೀಸ್ ಇನ್ಸ್‌ಪೆಕ್ಟರ್ ಟಿ ಶ್ರೀನಿವಾಸ್ ಅವರು ಎಸ್ ಪಿ ಕಚೇರಿಯಿಂದ ತನಗೆ ಯಾವುದೇ ಅರ್ಜಿ ಸ್ವೀಕೃತವಾಗಿರುವುದಿಲ್ಲ ಅಂತ ಸುಳ್ಳು ಹೇಳುತ್ತಿರುವುದು, ಅರ್ಜಿದಾರರು ಅರ್ಜಿ ವಿಚಾರವಾಗಿ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ದಾಖಲಿಸಿರುವ ದೂರಿನ ವಿಚಾರವಾಗಿ ಅರ್ಜಿದಾರರಿಗೆ ಸಹಾಯ ಮಾಡುವ ನಿಟ್ಟಿನಲ್ಲಿ ಮಾತುಕತೆ ನಡೆಸಿರುವುದು ಕಂಡು ಬರುತ್ತದೆ,’ ಎಂದು ಅಮಾನತು ಆದೇಶದಲ್ಲಿ ವಿವರಿಸಲಾಗಿತ್ತು.
ಅಲ್ಲದೆ ‘ ಪಿ ಐ ಶ್ರೀನಿವಾಸ್ ಅವರ ಸೂಚನೆಯಂತೆ ಎ ಎಸ್ ಐ ಶುಭ ಮತ್ತು ಕೆ ಜಿ ಅನಿತಾ ಅವರಿಗೆ ಹಣ ನೀಡಿದ್ದಾಗಿ ನಿರ್ದಿಷ್ಟವಾಗಿ ಹೆಸರನ್ನೇ ಪ್ರಸ್ತಾಪಿಸಿರುತ್ತಾರೆ. ಅರ್ಜಿದಾರರು ತಮ್ಮ ಅರ್ಜಿಯಲ್ಲಿ ಆರೋಪಿಸಿರುವಂತೆ ಟಿ ಶ್ರೀನಿವಾಸ್, ಶುಭ, ಅನಿತಾ ಅವರ ಮುಖೇನ 5,00,000 ಲಕ್ಷ ರು.ಹಣವನ್ನು ಪಡೆದು ಅರ್ಜಿ ವಿಚಾರದಲ್ಲಿ ಅರ್ಜಿದಾರರಿಗೆ ಸಹಾಯ ಮಾಡುವುದಾಗಿ ಹೇಳಿ ನಂಬಿಸಿ ಹಣ ಪಡೆದಿರುವಂತೆ ಮೇಲ್ನೋಟಕ್ಕೆ ಕಂಡು ಬಂದಿರುತ್ತದೆ, ‘ ಎಂದೂ ಅಮಾನತು ಆದೇಶದಲ್ಲಿ ಹೇಳಲಾಗಿತ್ತು.
ಅದೇ ರೀತಿ ‘ ಪೊಲೀಸ್ ಇಲಾಖೆಯಲ್ಲಿ ಒಂದು ಜವಾಬ್ದಾರಿಯುತ ಹುದ್ದೆಯಲ್ಲಿದ್ದುಕೊಂಡು ಕರ್ತವ್ಯದಲ್ಲಿ ಲೋಪವೆಸಗುವ ಮೂಲಕ ನೀವು ನಿಮ್ಮ ಕರ್ತವ್ಯದಲ್ಲಿ ಅತೀವ ನಿರ್ಲಕ್ಷ್ಯತೆ, ಬೇಜವಾಬ್ದಾರಿತನ ಹಾಗೂ ದುರ್ನಡತೆಯನ್ನು ಪ್ರದರ್ಶಿಸಿರುತ್ತೀರಿ. ಆದ್ದರಿಂದ ಕರ್ನಾಟಕ ರಾಜ್ಯ ಪೊಲೀಸ್ (ಶಿಸ್ತು ನಡವಳಿ) ನಿಯಮಗಳು 1965/89ರ ನಿಯಮ 5 ರ ಅಡಿಯಲ್ಲಿ ಈ ತಕ್ಷಣದಿಂದಲೇ ಜಾರಿಗೆ ಬರುವಂತೆ ಕರ್ತವ್ಯದಿಂದ ಅಮಾನತಿನಲ್ಲಿರಿಸಲಾಗಿದೆ,’ ಎಂದು ವಿವರಿಸಿತ್ತು.
‘ಹಿರಿಯ ಅಧಿಕಾರಿಗಳು, ರಾಜಕಾರಣಿಗಳು, ಪಟ್ಟಭದ್ರರು ಭಾಗಿಯಾಗಿರುವ ಪ್ರಕರಣಗಳಲ್ಲಿ, ಅಂತಹ ಬಲಿಷ್ಟರನ್ನು ರಕ್ಷಿಸಲು ಕೆಳಹಂತದ ನೌಕರರನ್ನು ಮತ್ತು ದುರ್ಬಲರನ್ನು ಬಲಿ ಕೊಡುವುದು ಸರ್ವೇಸಾಮಾನ್ಯ. ಈ ಪ್ರಕರಣದಲ್ಲಿಯೂ ಅದೇ ಆಗಿದೆ. ಉನ್ನತ ಮಟ್ಟದ ತನಿಖೆ ಆಗಬೇಕಾದ ಪ್ರಕರಣದಲ್ಲಿ ಪೊಲೀಸ್ ಇಲಾಖೆಯು ತಿಪ್ಪೆ ಸಾರಿಸುವ ರೀತಿಯಲ್ಲಿ ಕ್ರಮ ಕೈಗೊಂಡಿರುವುದು ನಾಚಿಕೆಗೇಡು,’ ಎನ್ನುತ್ತಾರೆ ಕರ್ನಾಟಕ ರಾಷ್ಟ್ರಸಮಿತಿ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ.