ಬೆಂಗಳೂರು; ಗೋಮಾಳ, ಗಾಯರಾಣ, ಹುಲ್ಲುಬನ್ನಿ, ಸೊಪ್ಪಿನ ಬೆಟ್ಟ ಇತ್ಯಾದಿ ಗ್ರಾಮೀಣ ಪ್ರದೇಶದ ಸರ್ಕಾರಿ ಜಮೀನುಗಳನ್ನು ಖಾಸಗಿ ಸಂಘ, ಸಂಸ್ಥೆಗಳಿಗೆ ಮಂಜೂರು ಮಾಡುವ ಕುರಿತು ನೀತಿ ರೂಪಿಸಲು ಹೊರಟಿರುವುದರ ಹಿಂದೆ ಸಂಘ ಪರಿವಾರದ ಆಶ್ರಯದಲ್ಲಿರುವ ರಾಷ್ಟ್ರೋತ್ಥಾನ ಪರಿಷತ್ ಸೇರಿದಂತೆ ಶೈಕ್ಷಣಿಕ ಸಂಸ್ಥೆಗಳಿಗೆ ಅತ್ಯಂತ ಕಡಿಮೆ ದರದಲ್ಲಿ ಜಮೀನು ಮಂಜೂರು ಮಾಡುವ ಉದ್ದೇಶವಿದೆ ಎಂಬ ಅನುಮಾನಗಳು ವ್ಯಕ್ತವಾಗಿವೆ.
ಕಂದಾಯ ಸಚಿವ ಆರ್ ಅಶೋಕ್ ಅಧ್ಯಕ್ಷತೆಯಲ್ಲಿ ಸಚಿವ ಸಂಪುಟದ ಉಪ ಸಮಿತಿ ರಚಿಸಿರುವ ಸರ್ಕಾರವು ಕಳೆದ ಮೂರು ತಿಂಗಳಿಂದಲೂ ಪರಿಶೀಲನೆ ಹಂತದಲ್ಲಿರುವ ರಾಷ್ಟ್ರೋತ್ಥಾನ ಪರಿಷತ್‌ಗೆ ಗೋಮಾಳ ಹಂಚಿಕೆ ಮಾಡುವ ಪ್ರಸ್ತಾವನೆಯ ಕಡತವನ್ನು ವಿಲೇವಾರಿ ಮಾಡುವ ಉದ್ದೇಶದಿಂದಲೇ ನೀತಿ ರೂಪಿಸಲು ಹೊರಟಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.
ಬೆಂಗಳೂರು ನಗರ ಜಿಲ್ಲೆಯ ಯಲಹಂಕ ತಾಲೂಕು ವ್ಯಾಪ್ತಿಯಲ್ಲಿರುವ ಹೆಸರಘಟ್ಟ ಬಳಿ 24.8 ಎಕರೆ ವಿಸ್ತೀರ್ಣದ ಗೋಮಾಳ ಜಮೀನಿನ ಪೈಕಿ ರಾಷ್ಟ್ರೋತ್ಥಾನ ಪರಿಷತ್‌ಗೆ ಬಹುಕೋಟಿ ಮೌಲ್ಯದ 9.32 ಎಕರೆ ವಿಸ್ತೀರ್ಣದ ಜಾಗವನ್ನು ಮಂಜೂರು ಮಾಡುವ ಸಂಬಂಧದ ಕಡತ ಸಚಿವ ಸಂಪುಟದ ಮುಂದೆ ಮಂಡನೆಯಾಗಿತ್ತಾದರೂ ಮಂಜೂರಾತಿ ಸಂಬಂಧ ಅಂತಿಮ ನಿರ್ಧಾರ ಕೈಗೊಳ್ಳಲು ಮುಖ್ಯಮಂತ್ರಿ ಮತ್ತು ಕಂದಾಯ ಸಚಿವರ ವಿವೇಚನೆಗೆ ಬಿಡಲಾಗಿತ್ತು.
ಈ ಕಡತವನ್ನು ಆರ್‌ಟಿಐನಲ್ಲಿ ‘ದಿ ಫೈಲ್’ ಕೋರಿತ್ತಾದರೂ ‘ಕಡತ ಇನ್ನೂ ಶಾಖೆಗೆ ಹಿಂದಿರುಗಿಲ್ಲ. ಶಾಖೆಗೆ ಹಿಂದಿರುಗಿದ ನಂತರ ನೀಡಲು ಕ್ರಮ ಕೈಗೊಳ್ಳಲಾಗುವುದು,’ ಎಂದು ಕಂದಾಯ ಇಲಾಖೆಯು ಲಿಖಿತ ಉತ್ತರ ನೀಡಿತ್ತು. ಈ ಎಲ್ಲ ಬೆಳವಣಿಗೆಗಳ ನಡುವೆಯೇ ಸರ್ಕಾರವು ಗೋಮಾಳ, ಗಾಯರಾಣ, ಹುಲ್ಲುಬನ್ನಿ, ಸೊಪ್ಪಿನ ಬೆಟ್ಟ ಇತ್ಯಾದಿ ಗ್ರಾಮೀಣ ಪ್ರದೇಶದ ಸರ್ಕಾರಿ ಜಮೀನುಗಳನ್ನು ಖಾಸಗಿ ಸಂಘ, ಸಂಸ್ಥೆಗಳಿಗೆ ಮಂಜೂರು ಮಾಡಲು ಸಚಿವ ಸಂಪುಟದ ಉಪ ಸಮಿತಿ ರಚಿಸಿದೆ.
ಸಂಪುಟ ಉಪ ಸಮಿತಿಯಲ್ಲಿ ಸಣ್ಣ ನೀರಾವರಿ, ಕಾನೂನು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ, ಗೃಹ ಸಚಿವ ಆರಗ ಜ್ಞಾನೇಂದ್ರ, ಪ್ರಭು ಚೌಹಾಣ್, ಕೃಷಿ ಸಚಿವ ಬಿ ಸಿ ಪಾಟೀಲ್, ನಗರಾಭಿವೃದ್ದಿ ಸಚಿವ ಬೈರತಿ ಬಸವರಾಜ ಅವರು ಸದಸ್ಯರಾಗಿದ್ದಾರೆ.
ಬೆಂಗಳೂರು ನಗರ ಜಿಲ್ಲೆ ಯಲಹಂಕ ತಾಲೂಕು ಹೆಸರಘಟ್ಟ ಹೋಬಳಿಯ ಹುರುಳಿಚಿಕ್ಕನಹಳ್ಳಿ ಗ್ರಾಮದ ಸರ್ವೆ ನಂಬರ್ 69ರಲ್ಲಿ 9-32 ಎಕರೆ ಜಮೀನನ್ನು ಶೈಕ್ಷಣಿಕ ಉದ್ದೇಶಕ್ಕಾಗಿ ರಾಷ್ಟ್ರೋತ್ಥಾನ ಪರಿಷತ್‌ಗೆ ಮಂಜೂರು ಮಾಡುವ ಸಂಬಂಧ 2021ರ ನವೆಂಬರ್ 25ರಂದು ನಡೆದಿದ್ದ ಸಚಿವ ಸಂಪುಟದ ಸಭೆಯಲ್ಲಿ ಕಡತ ಮಂಡನೆಯಾಗಿತ್ತು. ಆದರೆ ಈ ಕುರಿತು ಸಚಿವ ಸಂಪುಟವು ಯಾವುದೇ ನಿರ್ಧಾರ ಕೈಗೊಳ್ಳಲಿಲ್ಲ. ಬದಲಿಗೆ ಮಂಜೂರಾತಿ ವಿಚಾರವನ್ನು ಕಂದಾಯ ಇಲಾಖೆಯೇ ನೇರವಾಗಿ ಮುಖ್ಯಮಂತ್ರಿಯೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲು ಸೂಚಿಸಲಾಯಿತು ಎಂದು ವಿಶ್ವಸನೀಯ ಮೂಲಗಳು ತಿಳಿಸಿವೆ.
ಯಲಹಂಕ ತಾಲೂಕು ಹೆಸರಘಟ್ಟ ಹೋಬಳಿಯ ಹುರುಳಿಚಿಕ್ಕನಹಳ್ಳಿ ಗ್ರಾಮದ ಸರ್ವೆ ನಂಬರ್‌ನಲ್ಲಿ ಒಟ್ಟು 24.8 ವಿಸ್ತೀರ್ಣದ ಗೋಮಾಳ ಇದೆ. 2012ರಿಂದ 2021-22ರವರೆಗೂ ಈ ಜಮೀನು ಗೋಮಾಳ ಎಂದೇ ನಮೂದಾಗಿರುವುದು ಭೂಮಿ ತಂತ್ರಾಂಶದಿಂದ ತಿಳಿದು ಬಂದಿದೆ.
ಹುರುಳಿಚಿಕ್ಕನಹಳ್ಳಿಯಲ್ಲಿ ಖುಷ್ಕಿ ಜಮೀನಿಗೆ ತಲಾ ಎಕರೆಯೊಂದಕ್ಕೆ 61.00 ಲಕ್ಷ ರು. ಸರ್ಕಾರಿ ಮಾರ್ಗಸೂಚಿ ದರವಿದೆ. ಇದರ ಪ್ರಕಾರ 9.32 ಎಕರೆಗೆ 5.49 ಕೋಟಿಗೂ ಹೆಚ್ಚು ಬೆಲೆಬಾಳಲಿದೆ. ಮುಕ್ತ ಮಾರುಕಟ್ಟೆಯಲ್ಲಿನ ಲೆಕ್ಕಚಾರದ ಪ್ರಕಾರ (ಸರ್ಕಾರಿ ಮಾರ್ಗಸೂಚಿ ದರಕ್ಕಿಂತ ಗರಿಷ್ಠ 3 ಪಟ್ಟು) ತಲಾ ಎಕರೆಗೆ 1.81 ಕೋಟಿ ರು. ಆಗಲಿದೆ. ಇದರ ಪ್ರಕಾರ 9.32 ಎಕರೆಗೆ ಅಂದಾಜು 16.86 ಕೋಟಿ ರು. ಆಗಲಿದೆ.
ಇದೇ ರಾಷ್ಟ್ರೋತ್ಥಾನ ಪರಿಷತ್‌ಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಈ ಹಿಂದೆ 76 ಎಕರೆ ಜಮೀನು ಮಂಜೂರು ಮಾಡಿದ್ದನ್ನು ಸಿಎಜಿ ವರದಿಯಲ್ಲಿ ಆಕ್ಷೇಪಿಸಲಾಗಿತ್ತು. ಈ ವರದಿಯನ್ನು ಹಿರಿಯ ಶಾಸಕ ರಾಮಲಿಂಗಾರೆಡ್ಡಿ ಅಧ್ಯಕ್ಷತೆಯ ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಚರ್ಚೆಗೆ ಕೈಗೆತ್ತಿಕೊಂಡಿತ್ತು. ಈ ಸಮಿತಿಗೆ ಯಾವುದೇ ವರದಿಯನ್ನೂ ಸಲ್ಲಿಸದ ಕಂದಾಯ ಇಲಾಖೆಯು ಬೆಂಗಳೂರು ನಗರ ಜಿಲ್ಲೆಯ ಹೆಸರಘಟ್ಟದಲ್ಲಿ 9.32 ಎಕರೆ ಜಮೀನು ಮಂಜೂರು ಮಾಡಲು ಮುಂದಾಗಿರುವುದು ಮತ್ತೊಮ್ಮೆ ಸಿಎಜಿ ಆಕ್ಷೇಪಣೆಗೆ ದಾರಿಮಾಡಿಕೊಡಲಿದೆ.
ಈಗಾಗಲೇ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 2009 ಮತ್ತು 2011ರಲ್ಲಿ ಒಟ್ಟು 76 ಎಕರೆ 03 ಗುಂಟೆ ಜಮೀನನ್ನು ರಾಷ್ಟ್ರೋತ್ಥಾನ ಪರಿಷತ್‌ಗೆ ಮಂಜೂರು ಮಾಡಿದ್ದರೂ ಪ್ರಸಕ್ತ 2021ನೇ ಸಾಲಿನಲ್ಲಿಯೂ 9 ಎಕರೆ 32 ಗುಂಟೆ ಜಮೀನನ್ನು ಶೈಕ್ಷಣಿಕ ಉದ್ದೇಶಕ್ಕೆ ಮಂಜೂರು ಮಾಡಲು ಕಂದಾಯ ಇಲಾಖೆ ಸಚಿವ ಆರ್ ಅಶೋಕ್ ಸಹ ಆಸಕ್ತಿ ವಹಿಸಿದ್ದಾರೆ ಎಂದು ಗೊತ್ತಾಗಿದೆ.
2009ರ ಅಕ್ಟೋಬರ್ ಮತ್ತು 2011ರಲ್ಲಿಯೂ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ 76 ಎಕರೆ 03 ಗುಂಟೆ ವಿಸ್ತೀರ್ಣದ ಜಾಗವನ್ನು ರಾಷ್ಟ್ರೋತ್ಥಾನ ಪರಿಷತ್‌ಗೆ ಮಂಜೂರು ಮಾಡಲಾಗಿತ್ತು. ಫಲಾನುಭವಿಗಳು ಯಾವುದೇ ಅರ್ಜಿಯನ್ನು ಸಲ್ಲಿಸದಿದ್ದರೂ ಕೂಡ ರಿಯಾಯಿತಿಗಳನ್ನು ನೀಡಲು ಯಾವುದೇ ಕಾರಣಗಳನ್ನೂ ದಾಖಲಿಸದೆಯೇ ಸರ್ಕಾರವು ಸ್ವಯಂ ಪ್ರೇರಿತವಾಗಿ ರಿಯಾಯಿತಿ ನೀಡಿತ್ತು. ಕರ್ನಾಟಕ ಭೂ ಮಂಜೂರಾತಿ ನಿಯಮಗಳ ನಿಯಮ 27ರ ಅಡಿಯಲ್ಲಿ ಅಗತ್ಯವಿರುವ ಯಾವುದೇ ಕಾರಣಗಳನ್ನು ದಾಖಲಿಸಿರಲಿಲ್ಲ. ಇದನ್ನು ಸಿಎಜಿ ವರದಿಯಲ್ಲಿ ಆಕ್ಷೇಪಿಸಲಾಗಿತ್ತು.
ಅದೇ ರೀತಿ ಬೆಂಗಳೂರು ದಕ್ಷಿಣ ತಾಲೂಕಿನ ಚನ್ನೇನಹಳ್ಳಿಯಲ್ಲಿ 2009ರಲ್ಲಿ ಜನಸೇವಾ ವಿಶ್ವಸ್ಥ ಮಂಡಳಿಗೆ 6 ಎಕರೆ ಭೂಮಿಯನ್ನು ಮಂಜೂರು ಮಾಡಲಾಗಿತ್ತು. ಶೇ.50ರ ರಿಯಾಯಿತಿಯನ್ನು ನೀಡಲಾಗಿದ್ದ ಮೂಲ ಆದೇಶವನ್ನು ತದನಂತರ ಶೇ.75ರ ರಿಯಾಯಿತಿಗೆ ಮಾರ್ಪಾಡು ಮಾಡಲಾಗಿತ್ತು. ಅಲ್ಲದೆ ಹಂಚಿಕೆಯನ್ನು ಪಡೆದವರ ಕೋರಿಕೆ ಮೇರೆಗೆ ಎಂದು ಹೇಳಲಾಗಿತ್ತು. ಆದರೂ ಅಂತಹ ಕೋರಿಕೆಯ ಪತ್ರವು ದಾಖಲೆಗಳಲ್ಲಿ ಇರಲಿಲ್ಲ. ಭೂಮಿಯ ಮಾರ್ಗಸೂಚಿ ಮೌಲ್ಯವು ಎಕರೆಗೆ 45 ಲಕ್ಷ ಆಗಿತ್ತು. ಹಾಗೂ ಹೆಚ್ಚುವರಿಯಾಗಿ ನೀಡಿದ್ದ ರಿಯಾಯಿತಿಯು 67.50 ಲಕ್ಷ ಆಗಿತ್ತು.
ಸರ್ಕಾರವು ಯಾವುದೇ ಕಾರಣಗಳನ್ನು ದಾಖಲಿಸದೆಯೇ ಸ್ವಯಂ ಪ್ರೇರಿತವಾಗಿ ಶೇ. 20ರಿಂದ 100ರಷ್ಟು ರಿಯಾಯಿತಿಗಳನ್ನು ನೀಡಿತ್ತು. ಒಟ್ಟಾರೆಯಾಗಿ ಭೂಮಿಯ ಬೆಲೆಯನ್ನು 18.93 ಕೋಟಿ ಮೊತ್ತದಷ್ಟು ಕಡಿಮೆ ಪ್ರಮಾಣದಲ್ಲಿ ವಸೂಲಾತಿ ಮಾಡುವಲ್ಲಿ ಪರಿಣಿಮಿಸಿತ್ತು ಎಂದು ಸಿಎಜಿ ( ಅನುಬಂಧ-5) ವರದಿಯಲ್ಲಿ ವಿವರಿಸಲಾಗಿತ್ತು.