ಬೆಂಗಳೂರು; ಕೋವಿಡ್ ಮೊದಲ ಮತ್ತು ಎರಡನೇ ಅಲೆ ತಡೆಗಟ್ಟಲು ಜಾರಿಗೊಳಿಸಿದ್ದ ಲಾಕ್‌ಡೌನ್ ಮತ್ತಿತರ ಕ್ರಮಗಳು ರೈತರ ಆದಾಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿರುವ ಕಾರಣ ಸುಸ್ತಿ ಅಸಲನ್ನು ಪಾವತಿಸುವ ಬಡ್ಡಿ ಮನ್ನಾ ಯೋಜನೆಯು ರೈತರಿಗೆ ಪೂರ್ಣ ಪ್ರಮಾಣದಲ್ಲಿ ಉಪಯೋಗವಾಗಿಲ್ಲ ಎಂದು ಸರ್ಕಾರವೇ ಇದೀಗ ಒಪ್ಪಿಕೊಂಡಿದೆ.
ಬೆಳೆ ಸಾಲಕ್ಕಾಗಿ ಬಡ್ಡಿ ಸಹಾಯಧನ ಯೋಜನೆಯಡಿ ಆಯವ್ಯಯದಲ್ಲಿ ಅವಕಾಶ ಕಲ್ಪಿಸಿದ್ದ ಒಟ್ಟು ಮೊತ್ತದ ಪೈಕಿ ಇನ್ನೂ 254.79 ಕೋಟಿ ರು. ಬಿಡುಗಡೆಗೆ ಬಾಕಿ ಉಳಿಸಿಕೊಂಡಿರುವುದೂ ಬಹಿರಂಗವಾಗಿದೆ.
ಅದೇ ರೀತಿ ಕೋವಿಡ್ ನಂತರ ಕೃಷಿ ವಲಯದ ಮೇಲಿನ ವ್ಯತಿರಿಕ್ತ ಬೆಳವಣಿಗೆಗಳಿಂದಾಗಿ 2020ರ ಜುಲೈ 31ರ ಅಂತ್ಯಕ್ಕೆ 20,310 ರೈತರು ಬ್ಯಾಂಕ್‌ಗೆ ಸುಸ್ತಿದಾರರಾಗಿದ್ದಾರೆ. ಈ ರೈತರಿಂದ 128.44 ಕೋಟಿ ರು. ಸುಸ್ತಿ ಬಡ್ಡಿ ಪಾವತಿಸಲು ಬಾಕಿ ಇದೆ. ಹೀಗಾಗಿ 2022-23ನೇ ಸಾಲಿಗೆ 400.52 ಕೋಟಿ ರು.ಗಳನ್ನು ಈ ಯೋಜನೆಯಡಿಯಲ್ಲಿ ಕಲ್ಪಿಸಿಕೊಡಬೇಕು ಎಂದು ಸಹಕಾರ ಸಂಘಗಳ ನಿಬಂಧಕರು ಪ್ರಸ್ತಾಪ ಸಲ್ಲಿಸಿದ್ದಾರೆ.
2022-23ನೇ ಸಾಲಿನ ಆಯವ್ಯಯ ಭಾಷಣಕ್ಕೆ ಸಹಕಾರ ಸಂಘಗಳ ನಿಬಂಧಕರು ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಾಲ ವಿತರಣೆ, ಬಡ್ಡಿ ಮನ್ನಾ ಯೋಜನೆಯ ಮಾಹಿತಿ ಒದಗಿಸಿದ್ದಾರೆ. ಆಯವ್ಯಯ ಭಾಷಣಕ್ಕೆ ಇಲಾಖೆಯು ಒದಗಿಸಿರುವ ಮಾಹಿತಿಯ ಪ್ರತಿಯು ‘ದಿ ಫೈಲ್’ಗೆ ಲಭ್ಯವಾಗಿದೆ.
ರಾಜ್ಯದ ಪಿಕಾರ್ಡ್ ಬ್ಯಾಂಕ್ ಮತ್ತು ಡಿಸಿಸಿ ಬ್ಯಾಂಕ್‌ಗಳ ಮೂಲಕ ಮಧ್ಯಮಾವಧಿ ಮತ್ತು ದೀರ್ಘಾವಧಿ ಕೃಷಿ ಮತ್ತು ಕೃಷಿ ಪೂರಕ ಸಾಲಗಳ ಸುಸ್ತಿ ಅಸಲನ್ನು ರೈತರು ಮರುಪಾವತಿಸಿದಲ್ಲಿ ಸಂಪೂರ್ಣ ಬಡ್ಡಿ ಮನ್ನಾ ಯೋಜನೆಯನ್ನು ವಿಸ್ತರಿಸುವ ಸಂಬಂಧ ಮಾಹಿತಿ ಒದಗಿಸಿರುವ ಸಹಕಾರ ಸಂಘಗಳ ನಿಬಂಧಕರು ಈ ಯೋಜನೆ ಮೇಲೆ ಕೋವಿಡ್ ಬೀರಿರುವ ಪರಿಣಾಮವನ್ನು ವಿವರಿಸಿದ್ದಾರೆ. ಈ ಮಾಹಿತಿಯನ್ನು ಸಹಕಾರ ಸಚಿವ ಎಸ್ ಟಿ ಸೋಮಶೇಖರ್ ಅವರು ಮುಖ್ಯಮಂತ್ರಿಗೆ ರವಾನಿಸಿದ್ದಾರೆ ಎಂದು ಗೊತ್ತಾಗಿದೆ.
‘ಈ ಹಿಂದೆ ಸರ್ಕಾರ ಜಾರಿ ಮಾಡಿದ್ದ ಸುಸ್ತಿ ಅಸಲನ್ನು ಪಾವತಿಸುವ ರೈತರಿಗೆ ಬಡ್ಡಿ ಮನ್ನಾ ಯೋಜನೆ 2020ರ ಜೂನ್ 30ಕ್ಕೆ ಮುಕ್ತಾಯಗೊಂಡಿದ್ದು ಕೋವಿಡ್ 19 ಪರಿಣಾಮದಿಂದಾಗಿ ರೈತರು ಈ ಯೋಜನೆಯ ಪೂರ್ಣ ಉಪಯೋಗವನ್ನು ಪಡೆದುಕೊಳ್ಳಲು ಸಾಧ್ಯವಾಗದೇ ಬ್ಯಾಂಕ್‌ಗೆ ಸುಸ್ತಿದಾರರಾಗಿ ಮುಂದುವರೆದಿರುತ್ತಾರೆ. ಈ ಯೋಜನೆಯನ್ನು ವಿಸ್ತರಿಸಿದಲ್ಲಿ ರಾಜ್ಯದ ರೈತರು ಸಾಲದಿಂದ ಋಣಮುಕ್ತರಾಗಲು ಸಹಕಾರಿಯಾಗುತ್ತದೆ. ಈ ಯೋಜನೆಯನ್ನು 2020ರ ಜುಲೈ 31ರವರೆಗೆ ವಿಸ್ತರಿಸಿಕೊಡಬೇಕು,’ ಎಂದು ಸಹಕಾರ ಸಂಘಗಳ ನಿಬಂಧಕರು ಪ್ರಸ್ತಾಪಿಸಿರುವುದು ಮುಖ್ಯಮಂತ್ರಿಗೆ ನೀಡಿರುವ ಮಾಹಿತಿಯಿಂದ ತಿಳಿದು ಬಂದಿದೆ.
ಪೀಕಾರ್ಡ್ ಬ್ಯಾಂಕ್‌ಗಳು ಮತ್ತು ಡಿಸಿಸಿ ಬ್ಯಾಂಕ್‌ಗಳ ಮೂಲಕ 2021ರ ಡಿಸೆಂಬರ್ ಅಂತ್ಯಕ್ಕೆ 20,310 ರೈತರು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗಳಿಂದ ಬಡ್ಡಿ ಮನ್ನಾ ಯೋಜನೆಯಡಿಯಲ್ಲಿ 317.61 ಕೋಟಿ ರು. ಸಾಲ ಪಡೆದಿದ್ದರು. 2022ರ ಜುಲೈ 31ರ ಅಂತ್ಯಕ್ಕೆ 20,310 ರೈತರಿಂದ ಪಾವತಿಸಲು ಬಾಕಿ ಇರುವ ಸುಸ್ತಿ ಬಡ್ಡಿ 128.84 ಕೋಟಿ ರು.ಗಳಾಗಿದೆ ಎಂಬುದು ಗೊತ್ತಾಗಿದೆ.
‘ಕೋವಿಡ್ ಪರಿಣಾಮದಿಂದಾಗಿ ರೈತರು ಪೂರ್ಣ ಲಾಭ ಪಡೆಯದ ಕಾರಣ ಈ ಯೋಜನೆಯನ್ನು ವಿಸ್ತರಿಸಬೇಕು. ಇದಕ್ಕಾಗಿ 2022-23ನೇ ಸಾಲಿಗೆ 400.52 ಕೋಟಿ ರು.ಗಳನ್ನು ಆಯವ್ಯಯದಲ್ಲಿ ಅವಕಾಶ ಕಲ್ಪಿಸಿಕೊಡಬೇಕು,’ ಎಂದು ಸಹಕಾರ ಸಂಘಗಳ ನಿಬಂಧಕರು ಪ್ರಸ್ತಾಪಿಸಿದ್ದಾರೆ.
ಅದೇ ರೀತಿ 2021-22ನೇ ಸಾಲಿಗೆ 30.86 ಲಕ್ಷ ರೈತರಿಗೆ 20,810 ಕೋಟಿ ಸಾಲ ವಿತರಣೆ ಗುರಿ ನಿಗದಿಗೊಳಿಸಿತ್ತಾದರೂ ಈ ಪೈಕಿ 2021ರ ಡಿಸೆಂಬರ್ 31ರ ಅಂತ್ಯಕ್ಕೆ 19.58 ಲಕ್ಷ ರೈತರಿಗೆ 14,188 ಕೋಟಿ ರು. ಸಾಲ ವಿತರಿಸಿದೆ. ಇನ್ನು 11.28 ಲಕ್ಷ ರೈತರಿಗೆ 6,622 ಕೋಟಿ ರು. ಸಾಲ ವಿತರಣೆಗೆ ಬಾಕಿ ಉಳಿಸಿಕೊಂಡಿರುವುದು ತಿಳಿದು ಬಂದಿದೆ.
ಬೆಳೆ ಸಾಲಕ್ಕಾಗಿ ಬಡ್ಡಿ ಸಹಾಯಧನ ಯೋಜನೆಯಡಿ ಆಯವ್ಯಯದಲ್ಲಿ ಅವಕಾಶ ಕಲ್ಪಿಸಿದ್ದ 1,012 ಕೋಟಿ ರು. ಪೈಕಿ ಇದುವರೆಗೆ 757.21 ಕೋಟಿ ರು. ಬಿಡುಗಡೆ ಮಾಡಿದೆ. ಇನ್ನೂ 254.79 ಕೋಟಿ ರು. ಬಿಡುಗಡೆಗೆ ಬಾಕಿ ಇರುವುದು ಗೊತ್ತಾಗಿದೆ.
ಹಾಗೆಯೇ 19,916 ಸ್ವಸಹಾಯ ಗುಂಪುಗಳಿಗೆ 689 ಕೋಟಿ ರು.ಗಳ ಸಾಲವನ್ನು 2021ರ ಡಿಸೆಂಬರ್ ಅಂತ್ಯದವರೆಗೆ ವಿತರಿಸಲಾಗಿದೆ. ಈ ಸಾಲಿನಲ್ಲಿ ವಸೂಲಾಗುವ ಸಾಲಗಳಿಗೆ ಬಡ್ಡಿ ಸಹಾಯಧನಕ್ಕಾಗಿ ಆಯವ್ಯಯದಲ್ಲಿ ಒದಗಿಸಿದ್ದ 90.41 ರು. ಕೋಟಿ ರು ಪೈಕಿ 36.01 ಕೋಟಿ ರು.ಗಳನ್ನು ಡಿಸಿಸಿ ಬ್ಯಾಂಕ್‌ಗಳಿಗೆ ಬಿಡುಗಡೆ ಮಾಡಿರುವುದು ತಿಳಿದು ಬಂದಿದೆ.
ಸಹಕಾರ ಸಂಘಗಳಲ್ಲಿ ರೈತರ ಕೃಷಿ ಉತ್ಪನ್ನ ಸಂಗ್ರಹಣೆ ಮಾಡಿ ಶೆ. 11ರ ಬಡ್ಡಿ ದರದಲ್ಲಿ ಕೃಷಿ ಅಡಮಾನ ಸಾಲ ವಿತರಣೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ಶೇ. 4ರ ಬಡ್ಡಿ ದರದಲ್ಲಿ ನೀಡುವ ಸಹಾಯಧನಕ್ಕೆ 5 ಕೋಟಿ ರು. ಒದಗಿಸಲಾಗಿತ್ತು. 2021ರ ಡಿಸೆಂಬರ್ ಅಂತ್ಯಕ್ಕೆ 18,958 ರೈತರಿಗೆ 306 ಕೋಟಿ ರು.ಗಳ ಸಾಲ ವಿತರಿಸಿದೆ. ನಬಾರ್ಡ್ 873 ಸಂಘಗಳಿಗೆ ಮಂಜೂರು ಮಾಡಿರುವ 302 ಕೋಟಿ ರು. ರು. ಸಾಲದ ಪೈಕಿ 581 ಸಂಘಗಳಿಗೆ 72.73 ಕೋಟಿ ರು.ಗಳನ್ನು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗಳು ಬಿಡುಗಡೆ ಮಾಡಿದೆ.